ಭಟ್ಟರ ತಲೆಬರಹ ಪತ್ರಿಕೆ ಹಣೆಬರಹ

Posted: ಜುಲೈ 9, 2009 in ಪುಸ್ತಕಗಳು
ಟ್ಯಾಗ್ ಗಳು:, ,

ಪತ್ರಿಕೆಯೊಂದು ಆಕರ್ಷಕವಾಗಿ ಮೂಡಿ ಬರಬೇಕಾದರೆ ಏನು ಮಾಡಬಹುದು? ನಯವಾದ ಹಾಳೆಯಲ್ಲಿ ಮುದ್ರಿತವಾಗಿ ಪತ್ರಿಕೆಯ ವಿನ್ಯಾಸ, ಬಣ್ಣ, ಅಕ್ಷರಗಳು ಗಮನ ಸೆಳೆಯುವಂತೆ ಇದ್ದರಷ್ಟೇ ಸಾಕೆ? ಅಥವಾ ಯಾರಿಗೂ ಸಿಗದ ಅಪರೂಪದ ಸುದ್ದಿಗಳನ್ನು ಹೆಕ್ಕಿ ತಂದರೆ ಪತ್ರಿಕೆ ಕಳೆಗಟ್ಟುವುದೆ? ಸುದ್ದಿಯ ನಿರೂಪಣಾ ಶೈಲಿ, ಜನಪ್ರಿಯ ಲೇಖಕರ ಅಂಕಣಗಳು ಹಾಕಿ ಬಿಟ್ಟರೆ ಪತ್ರಿಕೆ ರುಚಿಸುತ್ತದೆಯೆ? ಇದು ಸುದ್ದಿಮನೆಯಲ್ಲಿ ನಿತ್ಯನೂತನವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. ನಿತ್ಯನೂತನ ಏಕೆಂದರೆ ನಿನ್ನೆಯ ಪತ್ರಿಕೆ ಎಷ್ಟು ಸೊಗಸಾಗಿದ್ದರೇನು ಬಂತು, ಇವತ್ತಿಗದು ರದ್ದಿಯೇ. ಇವತ್ತಿನ ಪತ್ರಿಕೆ ಮತ್ತೆ ಪತ್ರಿಕಾಲಯದ ಬಾಣಲೆಯಲ್ಲಿ ಪಕ್ವಗೊಂಡು ಪಕ್ವಾನ್ನವಾಗಿ ಬಂದರಷ್ಟೇ ಪತ್ರಿಕೆ ತನ್ನ ಓದುಗರಿಗೆ ಹಿಡಿಸುತ್ತದೆ. ಪುಸ್ತಕ ಬರೆಯುವುದರ ಕಷ್ಟವನ್ನು ವಿವರಿಸಲು ತಮಾಶೆಯಾಗಿ ಅದನ್ನು ಪ್ರಸವಕ್ಕೆ ಹೋಲಿಸಲಾಗುತ್ತದೆ. ಆ ಅರ್ಥದಲ್ಲಿ ಸುದ್ದಿಗೂಡಿನಲ್ಲಿ ಸುದ್ದಿಗೆ ಗುದ್ದು ಕೊಡುವ ಮಂದಿಯ ಪಾಲಿಗೆ ನಿತ್ಯವೂ ಹೆರಿಗೆ ಬೇನೆ… ಸಂಪಾದಕರು ಸದಾ ಸೂಲಗಿತ್ತಿಯರೇ! ಎಲ್ಲ ಪತ್ರಿಕೆಗಳಲ್ಲಿ ಬರುವ ಸುದ್ದಿ ಅದೇ ಆದರೂ ಅದು ಓದುಗರ ಗಮನ ಸೆಳೆಯುವಂತೆ ಮಾಡುವಲ್ಲಿ ಸುದ್ದಿಯ ಬರವಣಿಗೆಗಿಂತ ಸುದ್ದಿಯ ತಲೆಬರಹವೇ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಒಳಗಡೆ ಎಷ್ಟೇ ಸ್ವಾರಸ್ಯಕರವಾದ ಸುದ್ದಿಯ ಹೂರಣವಿದ್ದರೂ ಗಮನಸೆಳೆವಂತಹ ತಲೆಬರಹದ ಪ್ಯಾಕಿಂಗ್ ಇಲ್ಲದೇ ಹೋದರೆ ಓದುಗರು ಸುದ್ದಿಯನ್ನು ಓದುವ ಸಾಧ್ಯತೆ ಕಮ್ಮಿಯಾಗಿ ಸುದ್ದಿ ಬರೆದವನ ಶ್ರಮ ವ್ಯರ್ಥವಾಗುತ್ತದೆ. ಎಂತಹಾ ನೀರಸವೆನಿಸುವ ಸುದ್ದಿಗೂ ಕೂಡಾ ಪಂಚಿಂಗ್ ಎನ್ನಿಸುವ ತಲೆಬರಹದ ಒಗ್ಗರಣೆ ಹಾಕಿದರೆ ಓದುಗ ಸುದ್ದಿಯತ್ತ ಒಮ್ಮೆ ಕಣ್ಣಾಡಿಸದೇ ಹೋಗಲಾರ.

 ಈಗಿನ ಧಾವಂತದ ಬದುಕಿನಲ್ಲಿ ಮುಖಪುಟದ ಪತ್ರಿಕೆಯ ಹೆಸರು ಸಂಪುಟ-23 ಸಂಚಿಕೆ 123 ರಿಂದ ಹಿಡಿದು ಕೊನೆಯ ಪುಟದ ತಳಭಾಗದಲ್ಲಿರುವ ಪ್ರಿಂಟೆಡ್ ಆಂಡ್ ಪಬ್ಲಿಷ್‌ಡ್ ಬೈ ತನಕ ಓದುವ ಪುರುಸೊತ್ತೂ ತಾಳ್ಮೆ ಯಾರಿಗೂ ಇರುವುದಿಲ್ಲ. ಟಿ.ವಿ.ಯ ಫ್ಲಾಷ್ ನ್ಯುಸಿನಲ್ಲೇ ಸುದ್ದಿ ತಿಳಿಯುವ ಮಂದಿಯೇ ಹೆಚ್ಚು. ಬೆಳಗಿನ ಗಡಿಬಿಡಿಯಲ್ಲಿ ಟಾಯ್ಲೆಟ್ಟಿನಲ್ಲಿ ಕೂತೋ ಇಲ್ಲಾ ತಿಂಡಿ ತಿನ್ನುತ್ತಲೋ ಒಮ್ಮೆ ಪತ್ರಿಕೆಯ ಮೇಲೆ ಕಣ್ಣಾಡಿಸಿಬಿಟ್ಟರೆ ಪತ್ರಿಕಾವಾಚನದ ಕಾರ್ಯ ಮುಗಿದಂತೆಯೆ. ತೀರಾ ಪ್ರಮುಖ ಸುದ್ದಿ ಇರದ ಹೊರತು ಸುದ್ದಿಯನ್ನು ಸಂಪೂರ್ಣವಾಗಿ ಓದುವವರು ಬಹಳ ಕಮ್ಮಿ. ಹಾಗಾಗಿ ಪತ್ರಿಕೆ ಓದುವುದು ಅಂದರೆ ತಲೆಬರಹಗಳ ಮೇಲೆ ಕಣ್ಣಾಡಿಸಿ ಸುದ್ದಿಯನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇ. ಈ ಕಾರಣದಿಂದ ಸುದ್ದಿಯ ತಲೆಬರಹಗಳು ಇಡೀ ಸುದ್ದಿಯ ಹೂರಣವನ್ನು ಬಿಂಬಿಸುವುದರ ಜೊತೆಗೆ ಗಮನ ಸೆಳೆಯುವಂತೆ ಇದ್ದರೆ ಮಾತ್ರ ಓದುಗ ಮಹಾಶಯ ಸುದ್ದಿಯನ್ನು ಓದುವ ಆಸಕ್ತಿ ತೋರಿಸುತ್ತಾನೆ. ಹಾಗಿರುವಾಗ ಸುದ್ದಿಯ ತಲೆಬರಹಗಳಿಗೆ ಇಂದು ಸುದ್ದಿ ಮನೆಯಲ್ಲಿ ಎಷ್ಟು ಪ್ರಾಶಸ್ತ್ಯವಿದೆ ಅನ್ನುವುದು ಇತ್ತೀಚಿನ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ಅರ್ಥವಾಗುತ್ತದೆ. ತಲೆಬರಹ ಪತ್ರಿಕೆ ಹಣೆಬರಹ ಅನ್ನುವ ಪಂಚಿಂಗ್ ತಲೆಬರಹವಿರುವ  ‘ಹೆಡ್‌ಲೈನ್ಸ್ ಸಕ್’ ಅನ್ನುವ  ಬೋಲ್ಡ್ ಎಂಡ್ ಬ್ಯೂಟಿಫುಲ್ ಎದೆಬರಹದ ಚಿತ್ರವಿರುವ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ಟರು ತಲೆಬರಹದ ಹಿಂದಿನ ಕಸರತ್ತನ್ನು ಸುಂದರವಾಗಿ ವಿವರಿಸಿದ್ದಾರೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪತ್ರಿಕಾರಂಗದ ಕುರಿತು ಆಸಕ್ತಿ ಕುತೂಹಲವಿರುವ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ಉದಾಹರಣೆಗಳ ಸಹಿತ ಸ್ವಾರಸ್ಯಕರವಾಗಿ ಮಂಡಿತವಾಗಿದೆ ಹೆಡ್‌ಲೈನ್ ಪುರಾಣ.

 ಆಕರ್ಷಕ ತಲೆಬರಹಗಳನ್ನು ರೂಪಿಸುವುದರಲ್ಲಿ ಭಟ್ಟರದು ಎತ್ತಿದ ಕೈ. ವೈಎನ್‌ಕೆಯವರಂತೆ ಪನ್ನು ಮತ್ತು ಪೆನ್ನು ಬಳಸಿ ತಲೆಬರಹವನ್ನು ಕೆತ್ತಿ ಅದಕ್ಕೊಂದು ಸುಂದರ ರೂಪ ಕೊಡುವಲ್ಲಿ ಭಟ್ಟರಿಗಿರುವ ಹಿಡಿತ ಈ ಪುಸ್ತಕ ಓದಿದರೆ ಅರ್ಥವಾಗುತ್ತದೆ. ಶೀರ್ಷಿಕೆ ನೀಡುವಲ್ಲಿ ಇರಬೇಕಾದ ಸ್ಪಷ್ಟತೆ, ಜಾಣತನ, ಅದು ನೀರಸವಾಗದಂತೆ, ಕ್ಲೀಷೆಗಳಿಂದ ಮುಕ್ತವಾಗಿರುವಂತೆ, ಸುದ್ದಿಯನ್ನು ವೈಭವೀಕರಿಸದಂತೆ, ಪತ್ರಿಕೆಯ ಧೋರಣೆಗೆ ವಿರುದ್ಧವಾಗದಂತೆ, ವಿರೋಧಾಭಾಸ ಮೂಡಿಸದಂತೆ ವಹಿಸಬೇಕಾದ ಎಚ್ಚರಿಕೆ … ಹೀಗೆ ಎಲ್ಲ ಮಗ್ಗುಲುಗಳಿಂದಲೂ ತಲೆಬರಹ ರಚನೆಯ ಕೌಶಲ್ಯವನ್ನು ವಿಶ್ಲೇಷಿಸುತ್ತಾ ಹೋಗುತ್ತಾರೆ. ನಿಧನದ ಸುದ್ದಿಗೆ ತಲೆಬರಹ ನೀಡುವಾಗ ಇರಬೇಕಾದ ಎಚ್ಚರ, ನುಡಿಚಿತ್ರಗಳ ಶೀರ್ಷಿಕೆಗೆ ಇರುವ ಸ್ವಾತಂತ್ರ್ಯ, ಶೀರ್ಷಿಕೆ ರಂಜನೀಯವಾಗಲು ಏನೆಲ್ಲಾ ಮಾಡಬಹುದು.. ಇವೆಲ್ಲದರ ಜೊತೆಗೆ ಹೆಡ್‌ಲೈನ್‌ಗಿಂತ ಡೆಡ್ಲೈನ್ ಮುಖ್ಯ ಅನ್ನುವ ಎಚ್ಚರದ ಪಾಠವನ್ನು ರಸವತ್ತಾದ ಉದಾಹರಣೆಗಳ ಜೊತೆಗೆ ನೀಡಿರುವುದರಿಂದ ಪುಸ್ತಕ ಎಲ್ಲೂ ಬೋರ್ ಹೊಡೆಸುವುದಿಲ್ಲ. ಟ್ಯಾಬೊಲಾಯ್ಡ್ ಪತ್ರಿಕೆಯ ಶೀರ್ಷಿಕೆ ದಿನಪತ್ರಿಕೆಗಳಿಂದ ಹೇಗೆ ಭಿನ್ನ, ಚಿಕ್ಕ ಟೈಟಲ್‌ಗಳು ಹೇಗೆ ಪರಿಣಾಮಕಾರಿಯಾಗಬಲ್ಲವು ಅನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. (ಕ್ಯಾಚಿಯಾಗಿರುತ್ತೆ ಅನ್ನೋ ಕಾರಣಕ್ಕೆ ಎಲ್ಲದರಲ್ಲೂ ಪನ್ನು ಫನ್ನು ಅನ್ನೋ ವೆಪನ್ನು ಬಳಸದೇ ಅಪರೂಪಕ್ಕೆ ಬಳಸಿದರೆ ಚೆನ್ನು ಅನ್ನುವುದು ನನ್ನ ಸ್ವಂತ ಅಭಿಪ್ರಾಯ ಮಾತ್ರ) ಒಂದೇ ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಬಹುದಾದ ಈ ಪುಸ್ತಕ ನಿಮ್ಮ ಪುಸ್ತಕದ ಸಂಗ್ರಹದಲ್ಲಿ ಇರಲೇಬೇಕಾದಂತಹ ಪುಸ್ತಕ

 ತಲೆಬರಹದ ಪುರಾಣಕ್ಕಿಂತ ನನ್ನ ಪ್ರವಚನವೇ ಜಾಸ್ತಿ ಆಯ್ತು ಅನ್ಸುತ್ತೆ. ಇರಲಿ ಬಿಡಿ. ಸಂಜೆ ಪತ್ರಿಕೆಗಳ ತಲೆಬರಹದ ಸುದ್ದಿ ಬಂದಾಗ ನನ್ನ ಸ್ನೇಹಿತರ ವಲಯದಲ್ಲಿ ಪ್ರಚಲಿತದಲ್ಲಿರುವ ಒಂದು ಜೋಕು ಹೇಳಿ ಈ ತಲೆಬರಹ ಪುರಾಣಕ್ಕೆ ಮಂಗಳ ಹಾಡುತ್ತೇನೆ. ಸಂಜೆ ಪತ್ರಿಕೆಗಳಿಗೆ ನಿಗದಿತ ಓದುಗರು ಅಂತ ಇರುವುದು ಸ್ವಲ್ಪ ಕಡಿಮೆಯೆ. ಅದರ ಕಣ್ಣಿಗೆ ರಾಚುವಂತಹ ಹೆಡ್ಡಿಂಗುಗಳನು ನೋಡಿಯೇ ಪತ್ರಿಕೆ ಕೊಳ್ಳುವವರು ಜಾಸ್ತಿ. ಹಾಗಾಗಿ ತಲೆಗಿಂತ ಮುಂಡಾಸು ಭಾರ ಅನ್ನುವ ಹಾಗೆ ಸುದ್ದಿಗಿಂತ ಹೆಡ್ಡಿಂಗ್ ದೊಡ್ಡದಾಗಿ ಹೆಡ್‌ಲೈಟ್‌ನಂತೆ ಕಣ್ಣು ಕೋರೈಸುತ್ತದೆ. ಮಂಗಳೂರಿನ ಅಂತಹ ಪತ್ರಿಕೆಯೊಂದರಲ್ಲಿ ಒಂದಿನ ತಲೆಬರಹವೊಂದಿತ್ತಂತೆ. ಮಂಗಳೂರಿನ ಯುವಕ ಕುಂದಾಪುರದಲ್ಲಿ ಪತ್ತೆ ಅಂತ ದಪ್ಪಕ್ಷರಗಳಲ್ಲಿ ಮುಖಪುಟದ ಕಾಲುಭಾಗ ಹೆಡ್ಡಿಂಗ್ ನೋಡಿ ಪತ್ರಿಕೆ ಕೊಂಡು ಓದಿದಾಗ ಅದರಲ್ಲಿದ್ದ ಸುದ್ದಿ ಹೀಗಿತ್ತಂತೆ – ಇಂದು ಮುಂಜಾನೆ ಮಂಗಳೂರಿನ ಗಣೇಶ್ ಅನ್ನುವ ೨೬ರ ವಯಸ್ಸಿನ ಯುವಕನು ಮಂಗಳೂರು-ಕುಂದಾಪುರ ಎಕ್ಸ್‌ಪ್ರೆಸ್ ಬಸ್ಸಿನಲ್ಲಿ ಪ್ರಯಾಣಿಸಿ ಉಡುಪಿ ಮಾರ್ಗವಾಗಿ ಕುಂದಾಪುರಕ್ಕೆ ಬಂದಿಳಿದನು. ಹೆಚ್ಚಿನ ವಿವರಗಳು ಲಭ್ಯವಿಲ್ಲ. ಇದು ಜೋಕೇ ಆದರೂ ಉಡುಪಿ ಮಂಗಳೂರು ಕಡೆಯವರನ್ನು ಕೇಳಿದರೆ ಸತ್ಯಕ್ಕೆ ಬಹಳ ದೂರವಾದುದೇನಲ್ಲ ಅನ್ನೋ ಉತ್ತರ ನಿಮಗೆ ಸಿಕ್ಕುವುದರಲ್ಲಿ ಅನುಮಾನವಿಲ್ಲ!!

 ಪುಸ್ತಕ                             – ತಲೆಬರಹ ಪತ್ರಿಕೆ ಹಣೆಬರಹ

ಲೇಖಕರು                         – ವಿಶ್ವೇಶ್ವರ ಭಟ್

ಪ್ರಕಾಶಕರು                       – ಅಂಕಿತ ಪುಸ್ತಕ ಗಾಂಧಿಬಜಾರ್

ಪುಟಗಳು                          – 88

ಬೆಲೆ                               – 60 ರೂ.

ಟಿಪ್ಪಣಿಗಳು
  1. ರಂಜಿತ್ ಹೇಳುತ್ತಾರೆ:

    ಭಟ್ಟರ ಪುಸ್ತಕದಂತೆಯೇ ನಿಮ್ ಈ ಲೇಖನ ವಿಭಿನ್ನ ಮತ್ತು ಸೊಗಸಾಗಿದೆ.

  2. ಯೋಗೀಶ ಅಡಿಗ ಹೇಳುತ್ತಾರೆ:

    ಪತ್ರಿಕೆ ಹಣೆ ಬರಹದ ಜೊತೆ ಭಟ್ಟರ ತಲೆಬರಹ ಸೇರಿಸಿ ಅಂಕಣದ ತಲೆಬರಹ ಚೆನ್ನಾಗಿ ಬಂದಿದೆ ಮಾರಾಯ

Leave a reply to ಯೋಗೀಶ ಅಡಿಗ ಪ್ರತ್ಯುತ್ತರವನ್ನು ರದ್ದುಮಾಡಿ