Archive for ಜುಲೈ 26, 2010

ಡೇಟಾಬೇಸ್ ಕ್ಷೇತ್ರದಲ್ಲಿ ಸರಿಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ದಿನಚರಿಯ ಸಹಜ ಭಾಗವಾಗಿರುವ ಡೇಟಾಬೇಸ್ ಕುರಿತು ಒಂದಿಷ್ಟು ಪರಿಚಯ ಮಾಡಿಕೊಡೋಣ ಅನ್ನುವ ನನ್ನ ಬಹುದಿನದ ಬಯಕೆಯನ್ನು ಇವತ್ತು ಬರಹ ರೂಪಕ್ಕಿಳಿಸುತ್ತಿದ್ದೇನೆ. ಸಾಕಷ್ಟು ಉದಾಹರಣೆಗಳೊಂದಿಗೆ ವಿಷಯವನ್ನು ಸಾಧ್ಯವಾದಷ್ಟು ಸರಳವಾಗಿ ವಿವರಿಸಲು ಯತ್ನಿಸುತ್ತೇನೆ. ಆಸಕ್ತಿ ಇರುವವರಿಗೆ ಒಂದಿಷ್ಟು ಮಾಹಿತಿ ಸಿಕ್ಕಿದರೆ ನನ್ನ ಪ್ರಯತ್ನ ಸಾರ್ಥಕ

ಮೊತ್ತ ಮೊದಲನೆಯದಾಗಿ   ’ಡೇಟಾ’ ಅಂದರೆ ಏನೆಂದು ತಿಳಿದುಕೊಳ್ಳೋಣ. ಯಾವುದೇ ವಸ್ತು-ಯಾ ವಿಷಯದ ಕುರಿತು ಲಭ್ಯವಿರುವ ಅಂಕಿ-ಅಂಶ, ವಿವರಣೆ ಅಥವಾ ಮಾಹಿತಿಯನ್ನು ’ಡೇಟಾ’ ಎಂದು ಕರೆಯಬಹುದು. ಕನ್ನಡದಲ್ಲಿ ಇದಕ್ಕೆ ’ದತ್ತಾಂಶ’ ಅನ್ನುವ ಪದವನ್ನು ಕೆಲವರು ಬಳಸುತ್ತಾರಾದರೂ ನಾನಿಲ್ಲಿ ವಿವರಣೆಯ ಅನುಕೂಲಕ್ಕಾಗಿ  ’ಮಾಹಿತಿ’ ಅನ್ನುವ ಪದವನ್ನೇ ಬಳಸುತ್ತೇನೆ. ಹೀಗೆ ಲಭ್ಯವಿರುವ ಮಾಹಿತಿಯನ್ನು ಒಂದು ವ್ಯವಸ್ಥಿತ ಕ್ರಮದಲ್ಲಿ ಸಂಗ್ರಹಿಸಿ, ಅದನ್ನು ಸುಲಭವಾಗಿ ಬಳಸಲು ಅನುಕೂಲವಾಗುವಂತೆ ಶೇಖರಿಸಿಟ್ಟಾಗ ಅದನ್ನು ’ಡೇಟಾಬೇಸ್’ಎಂದು ಕರೆಯಬಹುದು. ಒಂದು ಔಷಧದ ಅಂಗಡಿಯ ಉದಾಹರಣೆಯನ್ನು ಗಮನಿಸೋಣ.ಅವರಲ್ಲಿ ವಿವಿಧ ಖಾಯಿಲೆಗಳಿಗೆ ನೀಡುವ, ಅನೇಕ ಕಂಪೆನಿಗಳು ತಯಾರಿಸಿದ ಬಗೆಬಗೆಯ ಮಾತ್ರೆ, ಟಾನಿಕ್ಕು, ಮುಲಾಮು… ಹೀಗೆ ಔಷಧಿಗಳ ಸಂಗ್ರಹವಿರುತ್ತದೆ. ಈ ಔಷಧಿಗಳ ಕುರಿತಾದ ಮಾಹಿತಿಯನ್ನು ವ್ಯವಸ್ಥಿತವಾಗಿ ಪುಸ್ತಕವೊಂದರಲ್ಲಿ ಬರೆದಿರಿಸಲಾಗಿದೆ ಅಂದುಕೊಳ್ಳೋಣ. ಕಂಪೆನಿಯ ಹೆಸರು, ಔಷಧಿಯ ಬೆಲೆ, ಬ್ಯಾಚ್ ನಂಬರ್, ಎಕ್ಸ್ಪೈರಿ ದಿನಾಂಕ.. ಇವೇ ಮೊದಲಾದ ವಿವರಗಳನ್ನು, ಔಷಧಿಯ ಹೆಸರಿನ ಜೊತೆಗೆ ಅಂತಹ ಎಷ್ಟು ಸಂಖ್ಯೆಯ ಮಾತ್ರೆ/ಔಷಧಿ ಅವರ ಬಳಿ ಇದೆ ಎನ್ನುವ ವಿವರಗಳನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ದಾಖಲಿಸಿಡಲಾಗಿದೆ. ಇದರ ಜೊತೆಗೆ ಅವರ ದಿನನಿತ್ಯದ ಮಾರಾಟದ ವಿವರಗಳನ್ನು ಕೂಡ ಅದೇ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಿಡಲಾಗುತ್ತದೆ ಅಂದುಕೊಳ್ಳಿ. ಇಂತಹ ಮಾಹಿತಿಯ ಪುಸ್ತಕವು ಆ ಔಷಧಿ ಅಂಗಡಿಯ ’ಡೇಟಾಬೇಸ್’ ಎಂದೆನಿಸಿಕೊಳ್ಳುತ್ತದೆ.

ಆದರೆ ಈ ರೀತಿಯಾಗಿ ಸಂಗ್ರಹಿಸಿದ ಮಾಹಿತಿಯು ಎಷ್ಟೇ ವ್ಯವಸ್ಥಿತವಾಗಿದ್ದರೂ, ಮಾಹಿತಿಯನ್ನು ತಿದ್ದುಪಡಿ ಮಾಡಬೇಕಾದರೆ ಇಲ್ಲವೆ ಬೇಕಾದ ಮಾಹಿತಿಯನ್ನು ಹುಡುಕಬೇಕಾದರೆ ಸುಲಭವಾಗಿ ಅದನ್ನು ಮಾಡಲಾಗುವುದಿಲ್ಲ. ಅಂಗಡಿಯ ವಾರ್ಷಿಕ ವಹಿವಾಟಿನ ಲೆಕ್ಕಾಚಾರ ಮಾಡಲು ಅನೇಕ ದಿನಗಳೇ ಬೇಕಾಗಬಹುದು. ಗಣಕಯಂತ್ರ(ಕಂಪ್ಯೂಟರ್)ಗಳ ಆವಿಷ್ಕಾರವಾದ ಬಳಿಕ ಈ ಸಮಸ್ಯೆಗಳಿಗೆಲ್ಲಾ ಪರಿಹಾರ ಲಭ್ಯವಾಯ್ತು. ಮಾಹಿತಿಯ ವ್ಯವಸ್ಥಿತ ಶೇಖರಣೆ,ಸುಲಭ ಬದಲಾವಣೆ, ಶೀಘ್ರ ಶೋಧಿಸುವಿಕೆ ಹಾಗು ಮಾಹಿತಿಯ ಸಾರಾಂಶವನ್ನು ಸಲೀಸಾಗಿ ವರದಿಯ ರೂಪದಲ್ಲಿ ಸಿದ್ಧಪಡಿಸುವ ಅನುಕೂಲಕ್ಕಾಗಿ ಅದನ್ನು ಕಂಪ್ಯೂಟರಿನಲ್ಲಿ ಶೇಖರಿಸಿಡುವ ಕ್ರಮ ಮೊದಲಾಯ್ತು. ಇಂತಹ ಉದ್ಧೇಶಗಳಿಗೆಂದೇ ಬಳಸಲಾಗುವ ವಿಶೇಷ ತಂತ್ರಾಂಶಗಳು(ಸಾಫ್ಟ್ವೇರ್) ಸಿದ್ಧವಾದವು. ಈ ತಂತ್ರಾಂಶಗಳೇ ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್ ಅಥವಾ ಸಂಕ್ಷಿಪ್ತವಾಗಿ DBMS. ಮೈಕ್ರೋಸಾಫ್ಟ್ SQL ಸರ್ವರ್, ಒರಾಕಲ್, DB2, sybase, My SQL ಮೊದಲಾದುವುಗಳನ್ನು ಇಂತಹ ತಂತ್ರಾಂಶಗಳಿಗೆ ಉದಾಹರಣೆಯಾಗಿ ಹೆಸರಿಸಬಹುದು.

ಡೇಟಾಬೇಸ್ ಕುರಿತು ಇನ್ನಷ್ಟು ತಿಳಿದುಕೊಳ್ಳುವ ಸಲುವಾಗಿ ಡೇಟಾಬೇಸಿಗೆ ಸಂಬಂಧಿಸಿದ ಕೆಲವು ಪದಗಳ ಪರಿಚಯ ಮಾಡಿಕೊಳ್ಳೋಣ. ಡೇಟಾಬೇಸಿನಲ್ಲಿ ಮಾಹಿತಿಯ ವ್ಯವಸ್ಥಿತ ಶೇಖರಣೆಯ ಅನುಕೂಲಕ್ಕಾಗಿ ಅದನ್ನು ಟೇಬಲ್, ರೋ, ಕಾಲಮ್ ಹೀಗೆ ವಿವಿಧ ಸಣ್ಣ ಘಟಕಗಳಾಗಿ ವಿಭಜಿಸಿ ಸಂಗ್ರಹಿಸಿಡಲಾಗುತ್ತದೆ.ಇವುಗಳ ಕುರಿತು ವ್ಯಾಖ್ಯೆ ಅಥವಾ ವಿವರಣೆಗಿಂತ ಸಣ್ಣ ಉದಾಹರಣೆಯೊಂದರ ಮೂಲಕ ಅರ್ಥೈಸಿಕೊಳ್ಳಲು ಯತ್ನಿಸೋಣ. ಒಂದು ಕಂಪೆನಿಯಲ್ಲಿ 1000 ಜನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಅಂದುಕೊಳ್ಳೋಣ. ಆ ಕಂಪೆನಿಯು ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಪ್ರತಿ ಶಾಖೆಯಲ್ಲೂ 4 ವಿಭಾಗಗಳಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಆ ಕಂಪೆನಿಯ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಮಾನವ ಸಂಪನ್ಮೂಲ (ಎಚ್.ಆರ್) ವಿಭಾಗದವರು ಈ ಎಲ್ಲಾ ಮಾಹಿತಿಗಳನ್ನು ಡೇಟಾಬೇಸ್ ಒಂದರಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಡೇಟಾಬೇಸಿನೊಳಗೆ ’ಟೇಬಲ್’ ಅನ್ನುವ ಪುಟ್ಟ ಘಟಕ ಅಥವಾ ರಚನೆ(Structure)ಯನ್ನು ನಿರ್ಮಿಸಲಾಗುತ್ತದೆ. ಅದರೊಳಗೆ ಈ ಎಲ್ಲಾ ಮಾಹಿತಿಯನ್ನು ತುಂಬಿಸಿಡಲಾಗುತ್ತದೆ. ಡೇಟಾಬೇಸನ್ನು ರೈಲು ಬಂಡಿಯೊಂದಕ್ಕೆ ಹೋಲಿಸಿದರೆ ಟೇಬಲ್ಲುಗಳು ಅದಕ್ಕೆ ಜೋಡಿಸಲ್ಪಟ್ಟ ಬೋಗಿಗಳೆನ್ನುವ ಉಪಮೆ ಸೂಕ್ತವಾದೀತು. ಹೇಗೆ ಎಲ್ಲಾ ಜನರನ್ನು ಒಂದೇ ಬೋಗಿಯೊಳಕ್ಕೆ ತುಂಬಿಸಲಾಗದೋ ಹಾಗೆಯೇ ಎಲ್ಲಾ ಮಾಹಿತಿಯನ್ನು ಒಂದೇ ಟೇಬಲ್ಲಿನೊಳಗೆ ತುರುಕಿಸಿದರೆ ಅದು ಸುವ್ಯವಸ್ಥಿತ ಜೋಡಣೆ ಅನ್ನಿಸದು. ಅದಕ್ಕಾಗಿ ಮಾಹಿತಿಯ ಪ್ರಕಾರ, ಲಕ್ಷಣಗಳನ್ನು ಆಧರಿಸಿ, ಅವನ್ನು ಅನೇಕ ಟೇಬಲ್ಲುಗಳಾಗಿ ವರ್ಗೀಕರಿಸಿ ಶೇಖರಿಸಿಡಬೇಕು. ಮೇಲಿನ ಉದಾಹರಣೆಯಲ್ಲಿ ತೀರಾ ಸರಳವಾಗಿ ಮಾಹಿತಿಯನ್ನು 3 ಟೇಬಲ್ಲುಗಳಾಗಿ ವಿಂಗಡಿಸೋಣ. ’ಉದ್ಯೋಗಿ’, ’ಶಾಖೆ’ ಮತ್ತು ’ವಿಭಾಗ’ – ಇವೇ ಆ 3 ಟೇಬಲ್ಲುಗಳು. ’ಉದ್ಯೋಗಿ’ ಟೇಬಲ್ಲಿನಲ್ಲಿ ಉದ್ಯೋಗಿಯ ಹೆಸರು, ವಯಸ್ಸು, ವಿಳಾಸ, ಹುದ್ದೆ, ಲಿಂಗ, ವಿದ್ಯಾರ್ಹತೆ…ಇವೇ ಮೊದಲಾದ ವಿವರಗಳಿದ್ದರೆ, ’ಶಾಖೆ’ ಟೇಬಲ್ಲಿನಲ್ಲಿ ’ಶಾಖೆ ಇರುವ ಸ್ಥಳ,ವಿಳಾಸ, ಮುಖ್ಯಾಧಿಕಾರಿ,ಒಟ್ಟು ಉದ್ಯೋಗಿಗಳ ಸಂಖ್ಯೆ ಮುಂತಾದ ವಿವರಗಳಿರುತ್ತವೆ. ’ವಿಭಾಗ’ ಟೇಬಲ್ಲಿನಲ್ಲಿ ವಿಭಾಗದ ಹೆಸರು, ಮುಖ್ಯಸ್ಥ, ಒಟ್ಟು ಉದ್ಯೋಗಿಗಳು, ವಿಭಾಗದ ಕುರಿತು ವಿವರಣೆಗಳನ್ನು ಸಂಗ್ರಹಿಸಲಾಗುತ್ತದೆ.

ಈಗ ’ಉದ್ಯೋಗಿ’ ಟೇಬಲ್ಲನ್ನು ಗಮನಿಸೋಣ. ಕಂಪೆನಿಯಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಉದ್ಯೋಗಿಯ ಮಾಹಿತಿಯೂ ಈ ಟೇಬಲ್ಲಿನಲ್ಲಿ ಅಡಕವಾಗಿದೆ. ಒಬ್ಬ ಪ್ರತ್ಯೇಕ ವ್ಯಕ್ತಿಯ ವಿವರಗಳನ್ನೊಳಗೊಂಡ ಮಾಹಿತಿಯ ಸಾಲೊಂದನ್ನು ’ರೋ’ ಅಥವಾ ’ಟಪಲ್’ಎಂದು ಕರೆಯಲಾಗುತ್ತದೆ. ಇಂತಹ 1000 ’ರೋ’ಗಳು ಸೇರಿ ’ಉದ್ಯೋಗಿ’ ಟೇಬಲ್ ನಿಮಿತವಾಗಿದೆ. ಈಗ ಸುಹಾಸಿನಿ ಎನ್ನುವ ಉದ್ಯೋಗಿಯ ಕುರಿತು ಮಾಹಿತಿಯಿರುವ ಒಂದು ’ರೋ’ವನ್ನು ಗಮನಿಸಿದರೆ ಅದರಲ್ಲಿ ಉದ್ಯೋಗಿಯ ಹೆಸರು, ಪ್ರಾಯ, ಲಿಂಗ, ವಿದ್ಯಾರ್ಹತೆ, ಹುದ್ದೆ…ಹೀಗೆ ಚಿಕ್ಕ ಚಿಕ್ಕ ಮಾಹಿತಿಯ ಘಟಕಗಳು ಸೇರಿ ಆ ಸಾಲು ನಿರ್ಮಿತವಾಗಿದೆ. ಇಂತಹ ಘಟಕಗಳೇ ’ಕಾಲಂ’ಗಳು ಅಥವಾ ’ಎಟ್ರಿಬ್ಯೂಟ್’ಗಳು. ಟೇಬಲ್ಲೊಂದನ್ನು ರಚಿಸುವಾಗ ಅದರಲ್ಲಿ ಸೇರಿಸಬೇಕಾದ ಮಾಹಿತಿಗೆ ಅನುಗುಣವಾಗಿ ಅದರ ಕಾಲಂಗಳನ್ನು ನಿರ್ಧರಿಸಲಾಗುತ್ತದೆ.ಟೇಬಲ್ ಗೆ ಹೇಗೆ ’ಉದ್ಯೊಗಿ ಎಂದು ಹೆಸರನ್ನು ಸೂಚಿಸಲಾಗುತ್ತದೆಯೋ ಹಾಗೆ ಪ್ರತಿ ಕಾಲಂನಲ್ಲಿ ತುಂಬಿಸುವ ಮಾಹಿತಿಗೆ ಅನುಗುಣವಾಗಿ ಆ ಕಾಲಂಗಳನ್ನು ಹೆಸರಿಸಲಾಗುತ್ತದೆ.

ಮೇಲೆ ಸೂಚಿಸಿದ 3 ಟೇಬಲ್ಲುಗಳಲ್ಲಿ ಕಾಲ್ಪನಿಕ ಮಾಹಿತಿಯನ್ನು ತುಂಬಿಸಿ ಉದಾಹರಣೆಯಾಗಿ ಕೆಳಗೆ ಕೊಡಲಾಗಿದೆ.  ಮುಂದೆ ಟೇಬಲ್ ಕುರಿತು ಅನೇಕ ವಿವರಣೆಯನ್ನು ಈ ಕೆಳಗಿನ ಉದಾಹರಣೆಯ ಮೂಲಕ ವಿವರಿಸುತ್ತೇನೆ.

ಉದ್ಯೋಗಿ

ಐಡಿ ಹೆಸರು ಪ್ರಾಯ ಲಿಂಗ ವಿದ್ಯಾರ್ಹತೆ ಅನುಭವ ಹುದ್ದೆ ಸಂಬಳ ಮೇಲಧಿಕಾರಿ ಶಾಖೆ ವಿಭಾಗ
1 ಸುಹಾಸಿನಿ 32 ಹೆಣ್ಣು ಎಂಬಿಎ 8 ವರ್ಷ ಮುಖ್ಯಸ್ಥ 50000 2 5
2 ಕಿರಣ್ 32 ಗಂಡು ಎಂಬಿಎ 7 ವರ್ಷ ಮುಖ್ಯಸ್ಥ 45000 1 1
3 ವಿಕಾಸ 28 ಗಂಡು ಬಿಇ 4 ವರ್ಷ ಡಿಸೈನರ್ 30000 2 1 2
4 ನಿಹಾರಿಕ 24 ಹೆಣ್ಣು ಬಿಇ 2 ವರ್ಷ ಡೆವಲಪರ್ 20000 1 2 6
5 ಸುನಯನ 25 ಹೆಣ್ಣು ಎಂಕಾಂ 4 ವರ್ಷ ಮುಖ್ಯಸ್ಥ 35000 1 3

ಶಾಖೆ

ಶಾಖೆ ಐಡಿ ಶಾಖೆಯ ಹೆಸರು ಮುಖ್ಯಸ್ಥ ವಿಳಾಸ ಒಟ್ಟು ಉದ್ಯೋಗಿಗಳು
1 ಬೆಂಗಳೂರು ತರುಣ್ 1/15, ಐಟಿಪಿಎಲ್, ಬೆಂಗಳೂರು 500
2 ಚೆನ್ನೈ ಮಾಳವಿಕ 12/2, ನುಂಗಂಬಾಕ್ಕಂ, ಚೆನ್ನೈ 300
3 ಮುಂಬೈ ಕಾವ್ಯ 1/18 ವರ್ಲಿ, ಮುಂಬೈ 100
4 ಮಂಗಳೂರು ಶಿಶಿರ್ 20/20, ಹಂಪನಕಟ್ಟೆ, ಮಂಗಳೂರು 100

ವಿಭಾಗ

ವಿಭಾಗ ಐಡಿ ವಿಭಾಗದ ಹೆಸರು ಮುಖ್ಯಸ್ಥ ಒಟ್ಟು ಉದ್ಯೋಗಿಗಳು ವಿವರಣೆ ಶಾಖೆ
1 ಮಾನವ ಸಂಪನ್ಮೂಲ ಕಿರಣ್ 20 ಮಾನವ ಸಂಪನ್ಮೂಲ ನಿರ್ವಹಣೆ 1
2 ಸರ್ವಿಸಸ್ ತೇಜಸ್ 440 ಸಾಫ್ಟ್ವೇರ್ ನಿರ್ವಹಣಾ ವಿಭಾಗ 1
3 ಹಣಕಾಸು ಸುನಯನ 10 ಹಣಕಾಸು ನಿರ್ವಹಣೆ 1
4 ಕ್ವಾಲಿಟಿ ಪರಿಣಿತಾ 30 ಸಾಫ್ಟ್ವೇರ್ ಕ್ವಾಲಿಟಿ ನಿರ್ವಹಣೆ 1
5 ಮಾನವ ಸಂಪನ್ಮೂಲ ಸುಹಾಸಿನಿ 10 ಮಾನವ ಸಂಪನ್ಮೂಲ ನಿರ್ವಹಣೆ 2
6 ಸರ್ವಿಸಸ್ ಅರ್ಪಿತ 275 ಸಾಫ್ಟ್ವೇರ್ ನಿರ್ವಹಣಾ ವಿಭಾಗ 2
7 ಹಣಕಾಸು ಪ್ರೇರಣಾ 5 ಹಣಕಾಸು ನಿರ್ವಹಣೆ 2
8 ಕ್ವಾಲಿಟಿ ಶಶಾಂಕ್ 10 ಸಾಫ್ಟ್ವೇರ್ ಕ್ವಾಲಿಟಿ ನಿರ್ವಹಣೆ 2

(ಮುಂದಿನ ಭಾಗದಲ್ಲಿ ಡೇಟಾಟೈಪ್,ಪ್ರೈಮರಿ ಕೀ ಕಾಲಂ, ಐಡೆಂಟಿಟಿ ಕಾಲಂ, ಕಾಲಂ ನಲ್ಲೆಬಿಲಿಟಿ, ಯುನಿಕ್ ಕೀ, ಡಿಫಾಲ್ಟ್ ವಾಲ್ಯೂ, ರಿಲೇಶನ್ ಶಿಪ್, ಫಾರಿನ್ ಕೀ ಮತ್ತು ಕಾರ್ಡಿನಾಲಿಟಿ ಕುರಿತು ತಿಳಿದುಕೊಳ್ಳೋಣ)