ಹಿಂದಿನ ಭಾಗ (https://vijaykannantha.wordpress.com/2010/07/26/database/)

ಡೇಟಾಟೈಪ್

ಟೇಬಲ್ಲಿನ ರಚನೆಯನ್ನು ಮಾಡುವಾಗ ಅದರಲ್ಲಿರುವ ಕಾಲಂಗಳನ್ನು ನಿರ್ಧರಿಸಿ, ಅವಗಳಿಗೆ ಹೆಸರನ್ನಿಡುವಂತೆಯೇ ಅದರಲ್ಲಿ ತುಂಬಿಸಿಡುವ ಮಾಹಿತಿಗೆ ಅನುಗುಣವಾಗಿ ಕಾಲಂನ ವಿವಿಧ ಗುಣಲಕ್ಷಣಗಳನ್ನೂ ಸೂಚಿಸಬೇಕಾಗುತ್ತದೆ. ಅಂತಹ ಪ್ರಮುಖ ಲಕ್ಷಣವೆಂದರೆ ಕಾಲಂನ ಡೇಟಾಟೈಪ್. ಹೆಸರೇ ಸೂಚಿಸುವಂತೆ ಅದು ಕಾಲಂನಲ್ಲಿ ಯಾವ ವಿಧದ ಮಾಹಿತಿಯನ್ನು ತುಂಬಿಸಬಹುದು ಅನ್ನುವುದನ್ನು ನಿರ್ಧರಿಸುವ ಅಂಶ. ಉದಾಹರಣೆಗೆ ಉದ್ಯೋಗಿಯ ಹೆಸರನ್ನು ತುಂಬಿಸುವ ಕಾಲಂನಲ್ಲಿ ಬರೀ ಅಕ್ಷರಗಳನ್ನು ಮಾತ್ರ ಶೇಖರಿಸುತ್ತೇವೆ. ಹಾಗೆಯೇ ’ಪ್ರಾಯ’ ಅಥವಾ ವಯಸ್ಸನ್ನು ಸೂಚಿಸುವ ಕಾಲಂ ಬರಿ ಸಂಖ್ಯೆಯನ್ನು ಒಳಗೊಂಡಿದ್ದರೆ ಜನ್ಮದಿನಾಂಕದ ಕಾಲಂನಲ್ಲಿ ತಾರೀಕನ್ನು ಸೂಚಿಸುತ್ತೇವೆ. ಹಾಗಾಗಿ ಕಾಲಂನಲ್ಲಿ ತುಂಬಿಸುವ ಮಾಹಿತಿಯನ್ವಯ ಅದರ ಡೇಟಾಟೈಪನ್ನು ನಿರ್ಧರಿಸಬೇಕಾಗುತ್ತದೆ. Integer (int), char, datetime, varchar, numeric ಮೊದಲಾದುವುಗಳನ್ನು ಡೇಟಾಟೈಪಿಗೆ ಉದಾಹರಣೆಯಾಗಿ ನೀಡಬಹುದು. ಉದ್ಯೋಗಿಯ ಹೆಸರು ಕಾಲಂಗೆ char ಅಥವ varchar ಡೇಟಾಟೈಪ್ ಆದರೆ ಜನ್ಮದಿನಾಂಕಕ್ಕೆ datetime ಡೇಟಾಟೈಪ್ ಸೂಕ್ತವೆನಿಸುತ್ತದೆ.

ಕಾಲಂ ನಲ್ಲೆಬಿಲಿಟಿ, ಡಿಫಾಲ್ಟ್ ವಾಲ್ಯೂ

ಕಾಲಂನ ಇನ್ನೊಂದು ಪ್ರಮುಖ ಲಕ್ಷಣ ಅದರ ನಲ್ಲೆಬಿಲಿಟಿ. ಒಂದು ರೋನಲ್ಲಿ ಉದ್ಯೋಗಿಯ ಮಾಹಿತಿಯನ್ನು ತುಂಬಿಸುವಾಗ ಆ ಕಾಲಂನ್ನು ತುಂಬಿಸುವುದು ಕಡ್ಡಾಯವೇ ಅಲ್ಲವೇ ಅನ್ನುವುದನ್ನು ಇದು ಸೂಚಿಸುತ್ತದೆ. ಕೆಲವೊಮ್ಮೆ ಉದ್ಯೋಗಿಯ ಕುರಿತು ಎಲ್ಲಾ ಮಾಹಿತಿಗಳು ಲಭ್ಯವಿರುವುದಿಲ್ಲ, ಅಥವಾ ಆ ಮಾಹಿತಿಯು ಉದ್ಯೋಗಿಗೆ ಅನ್ವಯವಾಗುವುದಿಲ್ಲ. ಉದಾಹರಣೆಗೆ ಉದ್ಯೋಗಿಯು ಅವಿವಾಹಿತನಾಗಿದ್ದ ಪಕ್ಷದಲ್ಲಿ ’ಮಕ್ಕಳ ಸಂಖ್ಯೆ’ ಅನ್ನುವ ಕಾಲಂ ಆ ಉದ್ಯೋಗಿಗೆ ಅನ್ವಯವಾಗದು!! ಹಾಗಾಗಿ ಅಂತಹ ಕಾಲಂ ನಲ್ಲೆಬಲ್ ಕಾಲಂ ಅಥವಾ ಕಡ್ಡಾಯವಲ್ಲದ ಕಾಲಂ ಅಂದೆನಿಸಿಕೊಳ್ಳುತ್ತದೆ. ಇಂತಹ ನಲ್ಲೆಬಲ್ ಕಾಲಂಗಳಲ್ಲಿ ನೀವು ಮಾಹಿತಿಯನ್ನು ತುಂಬದಿದ್ದರೂ ಡೇಟಾಬೇಸಿನಲ್ಲಿ ಅಂತಹ ಕಾಲಂಗಳ ಮಾಹಿತಿಯ ಸ್ಥಾನದಲ್ಲಿ ‘NULL’ ಅನ್ನುವ ಖಾಲಿಸ್ಥಾನ ಸೂಚಕವನ್ನು ತುಂಬಲಾಗುತ್ತದೆ. ಉದ್ಯೋಗಿಯ ಹೆಸರು ಕಡ್ಡಾಯವಾದ ಕಾಲಂ ಆದ್ದರಿಂದ ಆ ಕಾಲಂ ನಲ್ಲೆಬಲ್ ಎಂದು ಗುರುತಿಸಲಾಗದು

ಕೆಲವೊಂದು ಮಾಹಿತಿಗಳು ಬಹುತೇಕ ಉದ್ಯೇಗಿಗಳಿಗೆ ಸಮಾನವಾಗಿ ಇರುವುದುಂಟು. ಉದಾಹರಣೆಗೆ ಕಂಪೆನಿಯ ೧೦೦೦ ಉದ್ಯೋಗಿಗಳಲ್ಲಿ ೯೦೦ಕ್ಕೂ ಹೆಚ್ಚು ಜನರ ವಿದ್ಯಾರ್ಹತೆ ಬಿ.ಇ. ಅಂತಂದುಕೊಳ್ಳಿ. ಅಂತಹ ಸಂದರ್ಭದಲ್ಲಿ ಮಾಹಿತಿಯನ್ನು ದಾಖಲಿಸುವಾಗ ಪ್ರತಿಬಾರಿಯೂ ವಿದ್ಯಾರ್ಹತೆ ಕಾಲನಲ್ಲಿ ಬಿ.ಇ ಎಂದು ಬರೆಯುವ ಶ್ರಮವನ್ನು ತಪ್ಪಿಸುವ ಸಲುವಾಗಿ, ವಿದ್ಯಾರ್ಹತೆ ಕಾಲಂಗೆ ’ಡಿಫಾಲ್ಟ್’ ವಾಲ್ಯೂವಾಗಿ ’ಬಿ.ಇ’ಯನ್ನು ಸೂಚಿಸಲಾಗುತ್ತದೆ. ಮಾಹಿತಿಯನ್ನು ದಾಖಲಿಸುವಾಗ ಅದನ್ನು ಖಾಲಿ ಬಿಟ್ಟರೆ, ಆ ಜಾಗದಲ್ಲಿ ’ಡಿಫಾಲ್ಟ್’ ಎಂದು ಸೂಚಿಸಿದ ವಾಲ್ಯೂ ತುಂಬಿಕೊಳ್ಳುತ್ತದೆ. ಬೇರೆ ವಿದ್ಯಾರ್ಹತೆ ಇದ್ದ ಉದ್ಯೋಗಿಗಳ ಮಾಹಿತಿ ತುಂಬಿಸುವಾಗಷ್ಟೇ ಈ ಕಾಲಂನಲ್ಲಿ ಮಾಹಿತಿ ತುಂಬಿಸಿದರಾಯ್ತು, ಮಿಕ್ಕಂತೆ ಅದನ್ನು ಖಾಲಿ ಬಿಟ್ಟರೂ ಆ ಜಾಗದಲ್ಲಿ ’ಬಿ.ಇ’ ಎಂಬ ಮಾಹಿತಿ ತಾನೇತಾನಾಗಿ ತುಂಬಿಸಲ್ಪಡುತ್ತದೆ.

ಪ್ರೈಮರಿ ಕೀ ಕಾಲಂ, ಐಡೆಂಟಿಟಿ ಮತ್ತು ಯುನಿಕ್ ಕೀ ಕಾಲಂ

ನೀವು ಪಬ್ಲಿಕ್ ಪರೀಕ್ಷೆಗಳನ್ನು ಬರೆಯುವಾಗ ನಿಮಗೊಂದು ರಿಜಿಸ್ಟ್ರೇಷನ್ ನಂಬರನ್ನು ಕೊಡುತ್ತಾರಲ್ಲವೆ? ಅದರ ಉದ್ದೇಶ ಅದು ನಿಮ್ಮನ್ನು ಅನನ್ಯವಾಗಿ ಗುರುತಿಸಲು ಸಾಧ್ಯವಾಗುತ್ತದೆ ಎಂದು. ಪರೀಕ್ಷೆಗೆ ಕುಳಿತ ಪ್ರತಿಯೊಬ್ಬರನ್ನೂ ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗುವಂತೆ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲಾಗುವ ರೀತಿಯಲ್ಲೇ, ಟೇಬಲ್ಲಿನಲ್ಲಿರುವ ಪ್ರತಿ ’ರೋ’ವನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗಲಿ ಎಂದು ಆ ಟೇಬಲ್ಲಿನ ಕಾಲಂವೊಂದನ್ನು ’ಪ್ರೈಮರಿ ಕೀ ಕಾಲಂ’ ಎಂದು ಆರಿಸಲಾಗುತ್ತದೆ.ಈ ರೀತಿ ಆರಿಸಲ್ಪಡುವ ಕಾಲಂಗೆ ಒಂದು ವಿಶೇಷ ಅರ್ಹತೆ ಇರಬೇಕಾಗುತ್ತದೆ. ಅದೇನೆಂದರೆ ಒಂದು ರೋವಿನಲ್ಲಿರ ಆ ಕಾಲಂನ ಬೆಲೆ ಅಥವಾ ವಾಲ್ಯೂ ಇನ್ಯಾವ ರೋನಲ್ಲಿಯೂ ಮರುಕಳಿಸಬಾರದು. ಅಂತಹ ಅನನ್ಯ ಬೆಲೆಯಿರುವ ಕಾಲಂ ಮಾತ್ರ ಪ್ರೈಮರಿ ಕೀ ಆಗುವ ಯೋಗ್ಯತೆ ಗಳಿಸಿರುತ್ತದೆ. ಉದ್ಯೋಗಿ ಟೇಬಲ್ಲಿನಲ್ಲಿ ’ಉದ್ಯೋಗಿಯ ಗುತು ಸಂಖ್ಯೆ ಅರ್ಥಾತ್ ’ಎಂಪ್ಲಾಯಿ ಐಡಿ’ಅಂತಹ ಯೋಗ್ಯತೆಯಿರುವ ಕಾಲಂ. ಡೇಟಾಬೇಸಿನಲ್ಲಿ ಪ್ರೈಮೆರಿ ಕೀ ಎಂದು ಗುರುತಿಸಿದ ಕಾಲಂನಲ್ಲಿ ಒಂದು ರೋನಲ್ಲಿ ಈಗಾಗಲೇ ದಾಖಲಿಸಿದ ಬೆಲೆಯನ್ನೇ ಪುನಹ ದಾಖಲಿಸಲು ಹೋದರೆ ಪ್ರೈಮರಿ ಕೀ ನಿರ್ಬಂಧವಿರುವ ಕಾರಣ ಅದು ಅಂತಹ ಮಾಹಿತಿಯನ್ನು ತಿರಸ್ಕರಿಸುತ್ತದೆ.ಕೆಲವೊಂದು ಸಂದರ್ಭದಲ್ಲಿ ಒಂದೇ ಕಾಲಂ ಪ್ರೈಮೆರಿ ಕೀ ಅಗುವ ಅರ್ಹತೆಯನ್ನು ಗಳಸದೇ ಇರಬಹುದು. ಅಂತಹ ಸಂದ್ರ್ಭದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಕಾಲಂಗಳನ್ನು ಜಂಟಿಯಾಗಿ ಪ್ರೈಮೆರಿ ಕೀ ಎಂದು ಸೂಚಿಸಬಹುದು.

ಬಹುತೇಕ ಸಾಮಾನ್ಯವಾಗಿ ಪ್ರೈಮೆರಿ ಕೀ ಎಂದು ಗುರುತಿಸಲ್ಪಟ್ಟ ಕಾಲಂಗೆ ಇನ್ನೊಂದು ಲಕ್ಷಣವನ್ನೂ ಸೂಚಿಸಲಾಗುತ್ತದೆ. ಅದು ’ಐಡೆಂಟಿಟಿ’. ಇಂತಹ ಕಾಲಂಗಳಿಗೆ ಪ್ರಾರಂಭಿಕ ಬೆಲೆಯೊಂದನ್ನು ಸೂಚಿಸಿ ಜೊತೆಗೆ ಇನ್ಕ್ರಿಮೆಂಟ್ ಬೆಲೆಯನ್ನು ಸೂಚಿಸಲಾಗುತ್ತದೆ. ಉದಾಹರಣೆಗೆ, ಉದ್ಯೋಗಿ ಸಂಖ್ಯೆ ಅನ್ನುವ ಕಾಲಂಗೆ ಪ್ರಾರಂಭಿಕ ಬೆಲೆ ಎಂದು ೧೦೦೦ವನ್ನು ಸೂಚಿಸಿ, ಇನ್ಕ್ರಿಮೆಂಟ್ ಬೆಲೆ ೧ ಎಂದು ನಿರ್ಧರಿಸಿದರೆ, ಮಾಹಿತಿಯನ್ನು ದಾಖಲಿಸುವಾಗಿ ಆ ಕಾಲಂನ ಬೆಲೆಯು ೧೦೦೦ದಿಂದ ಆರಂಭವಾಗಿ ೧೦೦೧, ೧೦೦೨ ಎಂದು ತಾನೇ ತಾನಾಗಿ ತುಂಬಿಸಲ್ಪಡುತ್ತದೆ.

ಒಂಡು ಟೇಬಲ್ಲಿನಲ್ಲಿ ಪ್ರೈಮೆರಿ ಕೀ ಅರ್ಹತೆಯನ್ನು ಹೊಂದಿರುವ ಒಂದಕ್ಕಿಂತ ಹೆಚ್ಚು ಕಾಲಂಗಳು ಇರಬಹುದು. ಅಥವಾ ಕೆಲವೊಂದು ಸಂದರ್ಭದಲ್ಲಿ ಪ್ರೈಮರಿ ಕೀಯಂತೆಯೇ ಇನ್ನುಳಿದ ಕೆಲವು ಕಾಲಂಗಳು ಕೂಡಾ ಅನನ್ಯ ಬೆಲೆಯನ್ನು ಹೊಂದಿರುವ ಅವಶ್ಯಕತೆ ಇರಬಹುದು. ಉದಾಹರಣೆಗೆ ಉದ್ಯೋಗಿಯ ಪಾಸ್ಪೋರ್ಟ್ ಸಂಖ್ಯೆ ಅಂತಹ ಒಂದು ಕಾಲಂ. ಆ ಸಂದರ್ಭದಲ್ಲಿ ಅಂತಹ ಕಾಲಂಗಳ ಬೆಲೆಗಳು ಅನನ್ಯವಾಗಿರಬೇಕೆಂಬ ನಿರ್ಬಂಧವನ್ನು ವಿಧಿಸಬೇಕಾಗುತ್ತದೆ. ಇಲ್ಲವಾದ ಪಕ್ಷದಲ್ಲಿ ತಪ್ಪಾಗಿ ಇಬ್ಬರು ಉದ್ಯೋಗಿಗಳ ಪಾಸ್ಪೋರ್ಟ್ ಸಂಖ್ಯೆ ಒಂದೇ ಎಂದು ದಾಖಲಿಸಲ್ಪಟ್ಟು ಗೊಂದಲ ಉಂಟಾಗಬಹುದು. ಅದನ್ನು ತಪ್ಪಿಸಲು ಅಂತಹ ಕಾಲಂಗಳನ್ನು ಯುನಿಕ್ ಕೀ ಕಾಲಂಗಳೆಂದು ನಿರ್ಬಂಧವನ್ನು ಸೂಚಿಸಲಾಗುತ್ತದೆ. ಪ್ರೈಮೆರಿ ಕೀ ಕಾಲಂಗಳಂತೆಯೇ ಒಂದು ರೋನಲ್ಲಿ ಈಗಾಗಲೇ ದಾಖಲಿಸಿದ ಬೆಲೆಯನ್ನೇ ಪುನಹ ದಾಖಲಿಸಲು ಹೋದರೆ ಯುನಿಕ್ ಕೀ ನಿರ್ಬಂಧವಿರುವ ಕಾರಣ ಅದು ಅಂತಹ ಮಾಹಿತಿಯನ್ನು ತಿರಸ್ಕರಿಸುತ್ತದೆ

ಈ ಬಂಧ ಅನುಬಂಧ ರಿಲೇಶನ್ ಶಿಪ್ ಮತ್ತು ಫಾರಿನ್ ಕೀ

ಮಾಹಿತಿಯನ್ನು ೩ ಟೇಬಲ್ಲುಗಳಾಗಿ ವಿಭಜಿಸಿಯಾಯ್ತು. ಹಾಗೇ ಅವು ಪ್ರತ್ಯೇಕವಾಗಿದ್ದರೆ ಅವು ಮಾಹಿತಿಯ ದ್ವೀಪಗಂತಾಗುತ್ತವೆ. ಉದ್ಯೋಗಿಯು ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಾನೆ, ಯಾವ ಶಾಖೆಯ ಉದ್ಯೋಗಿ ಅನ್ನುವ ಮಾಹಿತಿಯ ಕೊಂಡಿಗಳಿಲ್ಲದೆ ವಿವರ ಅಪೂರ್ಣವಾಗುತ್ತದೆ. ಅದಕ್ಕಾಗಿ ಈ ಪ್ರತ್ಯೇಕ ದ್ವೀಪಗಳನ್ನು ಜೋಡಿಸುವ ಸೇತುಗಳನ್ನು ರಚಿಸಬೇಕಾಗುತ್ತದೆ.ಇಂತಹ ಸೇತು ಬಂಧವೇ ರಿಲೇಶನ್ ಶಿಪ್. ಟೇಬಲ್ಲುಗಳನ್ನು ಡೇಟಾಬೇಸ್ ಡಿಸೈನಿನ ಪರಿಭಾಷೆಯಲ್ಲಿ ’ಎಂಟಿಟಿ’ ಎಂದು ಕರೆಯುತ್ತಾರೆ. ಅಂತಹ ಎಂಟಿಟಿಗಳು ಹಾಗು ಎಂಟಿಟಿಗಳ ನಡುವಿನ ಸಂಬಂಧಗಳನ್ನು ವ್ಯಾಖ್ಯಾನಿಸುವ ನಕ್ಷೆಯನ್ನು ಎಂಟಿಟಿ-ರಿಲೇಶನ್ ಶಿಪ್ ಡಯಗ್ರಾಮ್ ಅಥವಾ ಸಂಕ್ಷಿಪ್ತವಾಗಿ ಈ-ಆರ್ ಡಯಗ್ರಾಮ್ ಎಂದು ಕರೆಯಲಾಗುತ್ತದೆ. ನಾನಿಲ್ಲಿ ಈ-ಆರ್ ನಕ್ಷೆ ರಚನೆಯ ಸೂತ್ರಗಳನ್ನು ಪಕ್ಕಕ್ಕಿರಿಸಿ, ಸರಳವಾಗಿ ಅರ್ಥೈಸಲು ಅನುಕೂಲವಾಗುವಂತೆ ಸಂಬಂಧವನ್ನು ಸೂಚಿಸುವ ಚಿತ್ರವೊಂದನ್ನು ಈ ಕೆಳಗೆ ರಚಿಸಿದ್ದೇನೆ.

ಈ ಚಿತ್ರದಲ್ಲಿ ನೀವು ಗಮನಿಸುವಂತೆ, ಉದ್ಯೋಗಿ ಟೇಬಲ್ಲಿನಲ್ಲಿ ಶಾಗೆ ಹಾಗು ವಿಭಾಗಗಳ ಸಂಖ್ಯೆಯನ್ನು ಹೊಂದಿರುವ ಕಾಲಂಗಳಿವೆ. ಅಂತೆಯೇ ವಿಭಾಗ ಟೇಬಲ್ಲಿನಲ್ಲಿ ಶಾಖೆಯ ಸಂಖ್ಯೆ ಹೊಂದಿರುವ ಕಾಲಂ ಒಂದಿದೆ.ಎಂಟಿಟಿ ಅಥವಾ ಟೇಬಲ್ಲುಗಳ ಮಧ್ಯದ ಸಂಬಂಧವನ್ನೇ ’ರಿಲೇಶನ್ ಶಿಪ್’ ಎಂದು ಕರೆಯಲಾಗುತ್ತದೆ. ಇಂತಹ ಸಂಬಂಧವನ್ನು ನಿರ್ಧರಿಸುವ ಕಾಲಂಗಳು ’ಫಾರಿನ್ ಕೀ’ ಕಾಲಂಗಳು. ಉದಾಹರಣೆಗೆ ಉದ್ಯೋಗಿ ಟೇಬಲ್ಲಿನಲ್ಲಿರುವ ಶಾಖೆ ಐಡಿ ಕಾಲಂ ಒಂದು ಫಾರಿನ್ ಕೀ ಕಾಲಂ. ಹೀಗೆ ಫಾರಿನ್ ಕೀಗಳೆಂದು ಗುರುತಿಸಲ್ಪಡುವ ಕಾಲಂಗಳು ಅವಗಳ ಮೂಲದ ಟೇಬಲ್ಲಿನಲ್ಲಿ ಒಂದೋ ಪ್ರೈಮರಿ ಕೀ ಆಗಿರಬೇಕು ಇಲ್ಲವೇ ಯುನಿಕ್ ಕೀ ಕಾಲಂ ಆಗಿರುತ್ತವೆ.

ಫಾರಿನ್ ಕೀ ಕಾಲಂನಲ್ಲಿ ಮೂಲ ಟೇಬಲ್ಲಿನಲ್ಲಿರುವ ಬೆಲೆಗಳನ್ನು ಮಾತ್ರ ನಮೂದಿಸಬಹುದು. ಉದಾಹರಣೆಗೆ ಉದ್ಯೋಗಿ ಟೇಬಲ್ಲಿನ ಶಾಖೆ ಐಡಿ ಕಾಲಂನಲ್ಲಿ ೫ ಎಂದು ನಮೂದಿಸಲಾಗದು. ಯಾಕೆಂದರೆ ಶಾಖೆ ಟೇಬಲ್ಲಿನಲ್ಲಿ ಬರಿ ೧,೨,೩,೪ ಮಾತ್ರ ಇದೆ. ಹಾಗೊಂದು ವೇಳೆ ಯಾವ ಬೆಲೆಯು ಅನ್ವಯವಾಗದ ಪಕ್ಶದಲ್ಲಿ, ಆ ಕಾಲಂ ಕಡ್ಡಾಯವಾಗಿರದೆ ಇದ್ದಲ್ಲಿ ಅದನ್ನು ಹಾಗೆಯೇ ಖಾಲಿ ( NULL)  ಬಿಡಬಹುಡೇ ಹೊರತು, ಮೂಲ ಟೇಬಲ್ಲಿನಲ್ಲಿಲ್ಲದ ಇನ್ಯಾವುದೋ ಬೆಲೆಯನ್ನು ದಾಖಲಿಸಲು ಹೊರಟರೆ, ಫಾರಿನ್ ಕೀ ನಿರ್ಬಂಧವಿರುವ ಕಾರಣ ಆ ದಾಖಲೆಯನ್ನು ಡೇಟಾಬೇಸ್ ತಿರಸ್ಕರಿಸುತ್ತದೆ.

ಈ ಮೇಲಿನ ಚಿತ್ರದಲ್ಲಿ ನೀವು ಇನ್ನೊಂದು ಅಂಶವನ್ನು ಗಮನಿಸಿರಬಹುದು. ಅದೆಂದರೆ ಉದ್ಯೋಗಿ ಟೇಬಲ್ಲಿನ ಒಳಗೇ ಒಂದು ಸಂಬಂಧ ಸೂಚಕ ಕೊಂಡಿಯಿದೆ. ಒಬ್ಬ ಉದ್ಯ್ಗಿಯ ಮೇಲದಿಕಾರಿಯೂ ಕೂಡಾ ಅದೇ ಉದ್ಯೋಗಿ ಟೇಬಲ್ಲಿನ ಭಾಗವಾಗಿರುವ ಕಾರಣ ಮೇಲಧಿಕಾರಿ ಅನ್ನುವ ಕಾಲಂನಲ್ಲಿ, ಮೇಲಧಿಕಾರಿಯ ಉದ್ಯೋಗಿ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಇಂತಹ ಸಂಬಂಧಗಳನ್ನು ’ ಸೆಲ್ಫ್ ರೆಲೇಶನ್’ ಎಂದು ಕರೆಯಲಾಗುತ್ತದೆ.

ದೇಟಾಬೇಸನ್ನು ರೈಲು ಬಂಡಿಯೊಂದಕ್ಕೆ ಹೋಲಿಸಿ ಅದರ ಡಬ್ಬಿಗಳೆಂಬ ಟೇಬಲ್ಲುಗಳ ಬಗ್ಗೆ ಸಂಕ್ಶಿಪ್ತವಾಗಿ ತಿಳಿದುಕೊಂಡೆವು. ಅವುಗಳನ್ನು ಜೋಡಿಸುವ ಸಂಬಂಧದ ಕೊಂಡಿಗಳನ್ನು ಕುರಿತು ಅರಿತುಕೊಂಡಿದ್ದಾಯ್ತು. ಆದರೆ ಈ ರೈಲಿಗೊಂದು ಇಂಜಿನ್ ಇರಬೇಕಲ್ವೇ? ಹಾಗೇಯೇ ನಮ್ಮ ಡೇಟಾಏಸಿಗೂ ಒಂದು ಇಂಜಿನ್ ಇರುತ್ತದೆ. ಆ ಇಂಜಿನ್ನಿನ ಸಹಾಯದಿಂದಲೇ ಡೇಟಾಬೇಸ್ ತನ್ನೆಲ್ಲ ಕಾರ್ಯಗಳನ್ನು ನಿರ್ವಹಿಸುತ್ತದೆ.ವಿವಿಧ ಕಮಾಂಡುಗಳ ಮೂಲಕವೋ ಅಥವಾ ಡಿಬಿಎಮ್ಮೆಸ್ ಸಾಫ್ಟ್ವೇರಿನ ’ಜಿಯುಐ’ ಅಥವಾ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಮೂಲಕವೋ ಅದು ಪಡೆಯುವ ಸಂಕೇತಗಳಿಗೆ ಅನುಗುಣವಾಗಿ ಅದು ತನ್ನ ಕೆಲಸ ನಿರ್ವಹಿಸುತ್ತದೆ.

(ವಿಧವಿಧದ ಕಮಾಂಡ್ ಬಗ್ಗೆ ಮುಂದಿನ ಭಾಗದಲ್ಲಿ ನೋಡೋಣ)

ನಿಮ್ಮ ಅನಿಸಿಕೆ ಹೇಳಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s