ಸಚಿನ್ ತೆಂಡುಲ್ಕರ್….
ಈ ಹೆಸ್ರು ಕೇಳಿದ್ದೆ ಸಾಕು ಆಗುವ ರೋಮಾಂಚನಕ್ಕೆ ಬದಲಿ ಏನಿದೆ ಹೇಳಿ ನೋಡೋಣ
ಕ್ರಿಕೆಟ್ ಬರೀ ಒಂದು ಆಟ…. ಹನ್ನೊಂದು ಜನ ಮೂರ್ಖರು ಆಡುವ..ಹನ್ನೊಂದು ಸಾವಿರ ಮೂರ್ಖರು
ನೋಡುವ ಆಟ ಅಂತ ಅದ್ಯಾರೋ ಮಹಾನುಭಾವ ಹೇಳಿದ್ದ ಅಂತೆ. ಆದ್ರೆ ನನ್ ಬದುಕಲ್ಲಿ ಈ ಮೂರ್ಖರ ಆಟ
ಕೊಟ್ಟ ಖುಷಿ…. ಯಾವ ಮೂರ್ಖರೂ ಬೆಲೆ ಕಟ್ಟಲಾಗದ್ದು…
ನಾನು ಕ್ರಿಕೇಟ್ ನೋಡಿದ್ದು ನಂಗೆ ಜ್ಞಾಪಕ ಇರೋ ಮಟ್ಟಿಗೆ 1988 ಇರ್ಬೇಕು.. ಯಾಕಂದ್ರೆ ಆ ಮ್ಯಾಚು ನಂಗೆ
ನೆನ್ಪು ಸರಿಯಾಗಿ ಇರ್ದಿದ್ರೂ… ಅರ್ಶದ್ ಅಯೂಬ್ ಐದು ವಿಕೇಟ್ ಕಿತ್ತಿದ್ದ ಮ್ಯಾಚು ನೋಡಿದ್ದ ನೆನ್ಪು…
ಬಹುಶಃ ಅದು ನಾ ನೋಡಿದ ಮೊದಲ ಒಂಡೇ ಮ್ಯಾಚ್ ಇರ್ಬೇಕು… ಆಮೇಲೆ ನೋಡಿದ ಮ್ಯಾಚಿಗೆ ಲೆಕ್ಕ
ಇಟ್ಟವರ್ಯಾರು? ಅದ್ರಲ್ಲೂ ಯಾರು ಏನೇ ಹೇಳಿದ್ರೂ ನನ್ನ ಪಾಲಿಗೆ ದೇವರಂತೆ ಈ ಇಪ್ಪತ್ತೆರ್ಡು ವರ್ಷ ಪ್ರತೀ
ಬಾರಿಯೂ ಇನ್ನಿಲ್ಲದ ನಿರೀಕ್ಷೆಯಿಂದ ನೋಡಿದ ಸಚಿನ್ ತೆಂಡುಲ್ಕರ್ ಆಟಕ್ಕೆ ಒಂದು ಅಕ್ಷರ ನಮನ
ಹೇಳದಿದ್ರೆ…ಇಷ್ಟೇಲ್ಲಾ ಕೊಟ್ಟ ಖುಷಿ ಸುಳ್ಳೇ ಆಗೋಲ್ಲವಾ? ನಂಗೆ ಅವನ ಮೊದಲ ಪಾಕಿಸ್ತಾನ ಸರಣಿ
ನೋಡಿದ್ದು ಅಷ್ಟು ನೆನ್ಪಿಲ್ಲಾ. ಆದ್ರೆ ಅದರ ನಂತರದ ಪ್ರತಿ ಸರಣಿಯಲ್ಲೂ ಸಚಿನ್ ಸಚಿನ್ ಸಚಿನ್… ಅವ್ನು ಔಟ್
ಆದ ಅಂದ್ರೆ ಮ್ಯಾಚು ನೋಡೋದೆ ಬಿಟ್ಟು ಎದ್ದು ಹೋದ ಘಳಿಗೆಗಳೆಷ್ಟು? ಇವತ್ತಿಗೂ ಕಲ್ಕತ್ತಾದ ಹೀರೋ ಕಪ್
ಸೆಮಿಫೈನಲಿನಲ್ಲಿ ಸಚಿನ್ ಎಸೆದ ಕೊನೆಯ ಮಾಂತ್ರಿಕ ಓವರಿನ ನೆನಪು ಎಷ್ಟು ಜನರಿಗಿದೆಯೋ ಗೊತ್ತಿಲ್ಲ.
ಮೆಕ್ಮಿಲನ್ ಅಂತ ದೈತ್ಯ ದಾಂಡಿಗನನ್ನೆ ಕಟ್ಟಿ ಹಾಕಿ ಭಾರತಕ್ಕೆ ವಿಜಯಲಕ್ಷ್ಮಿ ಒಲಿಯುವಂತೆ ಮಾಡಿದ
ತೆಂಡುಲ್ಕರನ ಫೋಟೋ ಉದಯವಾಣಿಯಲ್ಲಿ ಬಂದಿದ್ದು ಇವತ್ತಿಗೂ ನೆನಪಿದೆ.
ಅಷ್ಟು ಚಿಕ್ಕ ವಯಸ್ಸಲ್ಲೇ ಅಷ್ಟೆಲ್ಲಾ ಹೆಸರು ಮಾಡಿದ್ರೂ ಸಚಿನ್ ತೆಂಡುಲ್ಕರನಂತ ದೈತ್ಯ ಪ್ರತಿಭೆಗೆ ಒಂದು
ಏಕದಿನ ಸೆಂಚುರಿ ಹೊಡೆಯೋಕೆ ಬರೋಬ್ಬರಿ ಐದು ವರ್ಷ ಯಾಕೆ ಹಿಡೀತು ಅಂತ ಇವತ್ತಿಗೂ ಎಣಿಸಿಕೊಂಡ್ರೆ
ಆಶ್ಚರ್ಯ ಆಗುತ್ತೆ. ಅವನ ಮೊದಲ ಏಕದಿನ ಸೆಂಚುರಿ ಬಂದಿದ್ದು 1994ರಲ್ಲಿ. ಆ ಮ್ಯಾಚು ಪೂರ್ತಿ
ನಿಂತುಕೊಂಡೇ ನೋಡಿದ್ದು ಇವತ್ತಿಗೂ ನೆನ್ಪಿದೆ. ಅದನ್ನ ನೋಡಿದ್ದು ಮಣಿಪಾಲದ ಕೆ.ಎಂ.ಸಿ.ಯಲ್ಲಿ.ಆವಾಗ ನಂಗೆ
ಹುಶಾರಿಲ್ಲದೇ ಮಣಿಪಾಲ ಆಸ್ಪತ್ರೆಯಲ್ಲಿದ್ದೆ. ಅವತ್ತು ನೋಡಿದ ಸೆಂಚುರಿಯ ಖುಷಿ…ಈಗ ಈಗ ಎಣಿಸಿಕೊಂಡರೂ
ಖುಷಿ ಆಗುತ್ತೆ… ಓ ಸಚಿನ್ ಯಾಕಪ್ಪಾ ಮರಾಯ ಇಷ್ತ್ ಖುಷಿ ಕೊಡ್ತೆ???
1994, 27 ಮಾರ್ಚ್…ಯಾವತ್ತಾರು ಆ ದಿನ ನೆನ್ಪ್ ಬಿಡ್ತನಾ… ನಮ್ಮ ಇಂಡಿಯನ್ ಟೈಮಿಂಗ್ಸಗೆ ಬೆಳಿಗ್ಗೆ ನಾಕ್
ಗಂಟೆಗೆ ಮ್ಯಾಚ್ ಶುರು ಆತ್ತ್ ಅಂತ, ಫ್ರೆಂಡ್ ಮನೆಗೆ ಹೋಯಿ ರಾತ್ರಿಯೇ ಮನ್ಕಂಡಿದ್ದೆ… ಬೆಳಿಗ್ಗೆ ಎದ್ದ್ ಮ್ಯಾಚ್
ನೋಡ್ಬೇಕು ಅಂತ. ಅಂತೆಯೇ ಎದ್ದು ಮ್ಯಾಚೂ ನೋಡಿದೆ… ಬರಿ ನೂರಾ ನಲವತ್ತೆರ್ಡು ರನ್ನಿಗೆ ಗಂಟು ಮೂಟೆ
ಕಟ್ಟಿತ್ತು ನ್ಯೂಜೀಲ್ಯಾಂಡ್. ಹಿಂದಿನ ಮ್ಯಾಚು ಸೋತಿದ್ದಕ್ಕೆ ಅಜರುದ್ದಿನ್ ನಾವು ಇಲ್ಲಿ ಪಿಕ್ನಿಕ್ಕಿಗೆ ಬಂದಿಲ್ಲ ಅಂತ
ಸ್ಟೇಟ್ಮೆಂಟ್ ಕೊಟ್ಟಿದ್ದ… ಆ ಸಿಟ್ಟೀಗೋ ಎಂಬಂತೆ ಕುತ್ತಿಗೆ ನೋವಿಂದ ಬಳಲುತ್ತಿದ್ದ ಸಿದ್ಧು ಬದಲಿಗೆ
ಆರಂಭಕಾರನಾಗಿ ಬಂದು ರುದ್ರ ತಾಂಡವವಾಡಿದ ಸಚಿನ್ ಆವತ್ತು 49 ಬಾಲಿನಲ್ಲಿ 82 ರನ್ ಚಚ್ಚಿ ಬಿಸಾಡಿದ್ದು
ಮರೆಯಬೇಕೆಂದರೂ ಮರೆಯಲಾಗೊಲ್ಲಾ… ಆಮೇಲೆ ಸಚಿನ್ ಎಷ್ಟೇ ಭಯಂಕರ ಆಟ ಆಡಿರಲಿ… ಏಕದಿನ
ದ್ವಿಶತಕ ಬಾರಿಸಿದ್ದೇ ಇರಲಿ… ಆವತ್ತಿನ ಸಚಿನ್…ದಿ ಬೆಸ್ಟ್… ಸಚಿನ್ ಕೊಟ್ಟ ಖುಷಿಯ ಪರಮಾವಧಿ 1998.
ಆದ್ರೆ ದುರದೃಷ್ಟವಶಾತ್ ಅದನ್ನು ಲೈವ್ ನೋಡೋ ಸೌಭಾಗ್ಯ ನಂಗಿರಲಿಲ್ಲ..ಕ್ರೆಗ್ ಮೆಕ್-ಡರ್ಮಾಟ್ ಆವತ್ತು
ಅಷ್ಟು ಹತಾಶನಾಗಿದ್ದು ನೋಡೋ ಅದೃಷ್ಟ ನಂಗಿರಲಿಲ್ಲ.. ಮಾರನೆ ದಿನ ದ್ವಿತೀಯ ಪಿಯೂಸಿ ಗಣಿತ ಪರೀಕ್ಷೆ…
ಸಾರಿ ಸಚಿನ್ ಕ್ಷಮಿಸು….
ಪಾಕಿಸ್ತಾನದ ಮೇಲೆ ಹೊಡೆದ 98 ರನ್ನಿನ ಆ ಇನ್ನಿಂಗ್ಸನ್ನು ಹ್ಯಾಗೆ ವಿವರಿಸಿ ಹೇಳೋದು….
ಯಾರು ಎಷ್ಟೇ ಹೇಳಲಿ… ಏನೇ ಅನ್ನಲಿ…. ಅವ್ರು ಇವ್ರಿಗಿಂತ ಮೇಲೆ..ಇವ್ರು ಅವ್ರಿಗಿಂತ ಮೇಲೆ ಅನ್ನೋದನ್ನು
ಅಂಕಿ ಅಂಶ ಲೆಕ್ಕ ಹಾಕಿ ತೋರಿಸಲಿ…. ಲೀಸ್ಟ್ ಬಾದರಡ್… ಯಾಕಂದ್ರೆ ಸಚಿನ್ ಇಸ್ ಸಚಿನ್….!!
ಆವತ್ತಿಗೂ ಇವತ್ತಿಗೂ ಅವ್ನು ಏಕಾಂಗಿಯಾಗಿ ಹೋರಾಡಿದ ಮ್ಯಾಚು ಎಷ್ಟು…..
ಎಲ್ಲಾ ಕೈಕೊಟ್ಟಾಗ ಒಬ್ನೇ ಏಕಾಂಗಿ ವೀರನಂತೆ ಸೋತರೂ ಆ ಸೋಲಿಗೂ ಘನತೆ ತಂದು ಕೊಟ್ಟ ಎಷ್ಟು
ನಿದರ್ಶನ ಇಲ್ಲ? ಸಾವ್ರ ಜನ ಸಾವ್ರ ಹೇಳಬಹುದು… ಸಚಿನ್ನೇ ವೈಫಲ್ಯದ ಸುಳಿಗೆ ಸಿಕ್ಕ ಎರ್ಡು ವರ್ಷದ
ಉದಾಹರಣೆನ ಎತ್ತಿ ತೋರ್ಸಿ ಅವ್ನು ಸೆಲ್ಫಿಷ್ಹು ಮಣ್ಣು ಮಸಿ ಅಂತ ಹೇಳಬಹುದು…
ಸಚಿನ್ ಲೈಫ್ ಟೈಮಿಗೆ ಒಬ್ನೆ….!!
ಯಾಕಂದ್ರೆ ದೇವನೊಬ್ಬ ನಾಮ ಹಲವು ಅನ್ನೋ ಹಾಗೆ ಕ್ರಿಕೇಟ್ ಅನ್ನೋ ರಿಲಿಜನ್ನಿಗೆ ಒಬ್ನೇ ದೇವ್ರು ಸಚಿನ್
ರಮೇಶ್ ತೆಂಡುಲ್ಕರ್… ನೀ ಕೊಟ್ಟ ಅಪರಿಮಿತ ಕುಷಿಗೆ ನಂದೊಂದು ಅಕ್ಷರ ನಮನ… ಇದು ಬರಿ ಮುನ್ನುಡಿ
ಮಾತ್ರ… ಬರೆಯೋಕೆ ತುಂಬಾ ಇದೆ…!!