Archive for ಜೂನ್, 2013

ಹೊಸದೇನೂ ಹುಟ್ಟುತ್ತಿಲ್ಲವೆನ್ನೋ
ಹಳಹಳಿಕೆಯಲ್ಲಿ
ಹಾದುಬಂದ ಹಾದಿಯುದ್ದದ
ಹಳವಂಡದಲ್ಲಿ

ಹೊಮ್ಮೀತಾದರೂ ಹೇಗೆ
ಹೊಸ ಹೂಗಂಧ
ಹೊಸೆಯುವುದಾದರೂ ಹೇಗೆ
ಹೊಸ ಹಾಡೊಂದ
ಹುರುಪಾದರೂ ಹುಟ್ಟೀತು ಹೇಗೆ
ಹುಡಿಹುಡಿಯಾಗಿರೆ ಹುಮ್ಮಸ್ಸು

ಹವಿಸ್ಸಾಗಿ ಹೋದ ಹಳತೆಲ್ಲದರ
ಹೋಮದ ಹೊಗೆಕವಿದ ಹಂದರದಿ
ಹನಿಗಣ್ಣಾಗಿ ಹಂಬಲಿಸುತ
ಹೊಸ ಹಾದಿ ಹುಡುಕುತ್ತಿಹೆ

ಹೊಳೆದಂಡೆಯ ಹಾದಿ ಕಾಯುತ್ತಾ
ಹರಹು ಹರಿವಿನಲಿ ಹೊಳೆದಾಟಲು
ಹರಿಗೋಲೊಂದ ಹುಡುಕುತ್ತಾ
ಹುಟ್ಟು ಹಾಕಲು-ಹೊಸ ಹುಟ್ಟಾಗಲು

Advertisements