Archive for the ‘ಕಲಾವೇದಿಕೆ’ Category

ನೀಲ ಗಗನದೊಳು… ಮೇಘಗಳ” ಅದೆಷ್ಟನೇ ಬಾರಿ ಕೇಳಿ ಭಾವಪರವಶನಾಗಿದ್ದೇನೋ ನನಗೇ ಗೊತ್ತಿಲ್ಲ. ಕೇಳಿದಷ್ಟೂ ಮತ್ತೂ ಕೇಳಬೇಕೆಂಬ ಆಸೆ ಹುಟ್ಟಿಸುವ, ಪ್ರತಿ ಬಾರಿ ಕೇಳಿದಾಗಲೂ ಧನ್ಯತೆಯ ಭಾವವುಕ್ಕಿಸುವ ಆ ಸ್ವರದ ಗತ್ತು-ತಾಕತ್ತು, ಗಾರುಡಿಗೆ ಮರುಳಾಗಿ ತಲೆದೂಗಿದ್ದೇನೆ. ಇದು ನನ್ನೊಬ್ಬನ ಅನುಭವವಲ್ಲ. ಯಕ್ಷಗಾನದ ಕುರಿತು ಆಸಕ್ತಿಯಿರುವ ಪ್ರತಿಯೊಬ್ಬರದೂ ಇದೇ ಮಾತು. ಎಪ್ಪತ್ತರ ದಶಕದ ಉತ್ತರಾರ್ಧ ಹಾಗು ಎಂಬತ್ತರ ದಶಕದಾದ್ಯಂತ ಕರ್ನಾಟಕ ಕರಾವಳಿಯ ಮೂಲೆಮೂಲೆಯಲ್ಲೊ ಅನುರಣಿಸಿದ ಈ ಕಂಚಿನ ಕಂಠ ಯಕ್ಷಪ್ರೇಮಿಗಳ ಪಾಲಿಗೆ ಕರ್ಣರಸಾಯನವೇ ಆಗಿತ್ತು. ಹೌದು, ನಿಮ್ಮ ಊಹೆ ಸರಿ. ನಾನೀಗ ಹೇಳಹೊರಟಿರುವುದು ಕರಾವಳಿಯ ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವುಡರ ಕುರಿತು.

(ಚಿತ್ರ ಕೃಪೆ – ಆಗ್ನೇಯ ನಾವುಡ)

ಕರಾವಳಿ ಕರ್ನಾಟಕವು ಯಕ್ಷಗಾನದ ತವರೂರು. ಯಕ್ಷಗಾನ ಹುಟ್ಟಿ ಬೆಳೆದು ವಿಜೃಂಭಿಸಿದ-ಮೆರೆಯುತ್ತಿರುವ ಮಣ್ಣಿದು. ಯಕ್ಷಗಾನದ ಹುಟ್ಟಿನಿಂದಾರಂಭಿಸಿ ಇಂದಿನ ತನಕವೂ ಅದೆಷ್ಟೋ ಅಪ್ರತಿಮ ಕಲಾಕುಸುಮಗಳು ಅರಳುವುದನ್ನು, ಅದ್ಭುತ ಕಲಾವಿದರು ಆಗಿ ಹೋದ ವೈಭವವನ್ನು ಕಂಡು ಧನ್ಯರಾದವರು ಕರಾವಳಿಯ ಜನ. ಯಕ್ಷಗಾನ ರಂಗದ ತುಂಬೆಲ್ಲಾ ಅತಿರಥ-ಮಹಾರಥರಂತಹ ಘಟಾನುಘಟಿಗಳು ವಿಜೃಂಭಿಸುತ್ತಿದ್ದ ಉತ್ತುಂಗದ ಕಾಲದಲ್ಲಿ, ಎಳೆಯ ವಯಸ್ಸಿನಲ್ಲಿಯೇ ತನ್ನ ಜನ್ಮಜಾತ ಪ್ರತಿಭೆಯ ಬಲದಿಂದ ಬಹುಬೇಗನೆ ಕೀರ್ತಿಯ ಉತ್ತುಂಗ ಶಿಖರವನ್ನೇರುವ ಸೌಭಾಗ್ಯ ಪಡೆದು ಬಂದವರು ಕಾಳಿಂಗ ನಾವುಡರು. ಯಕ್ಷಗಾನದ ಬಗ್ಗೆ ಆಸಕ್ತಿಕಳೆದುಕೊಂಡು ದೂರಸರಿಯುತ್ತಿದ್ದ ಜನಮಾನಸದ ಚಿತ್ತವನ್ನಾಕರ್ಷಿಸಿ ಮತ್ತೆ ಯಕ್ಷಗಾನದತ್ತ ಎಳೆದು ತರುವ ಶಕ್ತಿ ಇತ್ತು ಆ ಮಾಂತ್ರಿಕ ಕಂಠಕ್ಕೆ. ಒಮ್ಮೆ ಇವರ ಗಾನ ವೈಭವದ ಸವಿಯನ್ನುಂಡವರು ಶಾಶ್ವತವಾಗಿ ಇವರ ಅಭಿಮಾನಿಗಳೇ ಆದರು. ಅವರಿದ್ದ ಮೇಳದ ಆಟ ನಡೆಯುತ್ತಿರುವಲ್ಲಿ ಸೇರುತ್ತಿದ್ದ ಜನರ ಸಮೂಹದಲ್ಲಿ ಅರ್ಧಕ್ಕೂ ಮಿಕ್ಕಿದಷ್ಟು ಮಂದಿ ಅವರ ಗಾನಸುಧೆಯನ್ನು ಸವಿಯಲೆಂದೇ ಬಂದಿರುವರಾಗಿರುತ್ತಿದ್ದರು ಅನ್ನುವುದು ಅತಿಶಯೋಕ್ತಿಯೇನಲ್ಲ. ತಮ್ಮ ವಿಶಿಷ್ಟ ಧ್ವನಿಯ ಛಾಪಿನಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಬಲು ಅಪರೂಪದ ಕಂಠಸಿರಿಯಿಂದಾಗಿ ಕಾಳಿಂಗ ನಾವುಡರು ತಮ್ಮದೇ ಆದ ಹೊಸತೊಂದು ಪರಂಪರೆಯನ್ನು ಹುಟ್ಟುಹಾಕಿದರು. ಒಂದರ್ಥದಲ್ಲಿ ಭಾಗವತಿಕೆ ಅನ್ನುವ ಪದಕ್ಕೆ ಪರ್ಯಾಯ ಅನ್ನುವಂತೆ ಇದ್ದವರು ನಾವುಡರು.

ನಾವುಡರು ಹುಟ್ಟಿದ್ದು ಜೂನ್ 6 1958ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ, ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಕೂಸು. ತಂದೆ ರಾಮಚಂದ್ರ ನಾವುಡರು ಕೂಡಾ ಆ ಕಾಲದ ಹೆಸರಾಂತ ಭಾಗವತರು. ಹಾಗಾಗಿ ಸಹಜವಾಗಿಯೇ ನಾವುಡರಿಗೆ ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಪೂರಕ ರಂಗಸ್ಥಳವು ಅವರ ಮನೆಯಲ್ಲಿಯೇ ಸಿದ್ಧಿಸಿತ್ತು. ತಂದೆ ರಾಮಚಂದ್ರ ನಾವುಡರಿಂದ ಎಳೆಯ ವಯಸ್ಸಿನಲ್ಲಿಯೇ ಭಾಗವತಿಕೆಯ ಪಟ್ಟುಗಳನು ಕರತಲಾಮಲಕ ಮಾಡಿಕೊಂಡ ನಾವುಡರಿಗೆ ಮನೆಯೇ ಮೊದಲ ಪಾಠಶಾಲೆ ತಂದೆಯೇ ಮೊದಲ ಗುರು. ಜನ್ಮಜಾತವಾಗಿ ಬಂದ ಪ್ರತಿಭೆಗೆ ಹಾಗು ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಬಿಟ್ಟರು. ಈ ಎಳೆಯ ತರುಣ ತಮ್ಮ ಪರಂಪರಾಗತ ಭಾಗವತಿಕೆಯನ್ನು ಮುಂದುವರಿಸಲು ಸಮರ್ಥನೆಂದು ಬಹುಬೇಗನೆ ಮನಗಂಡ ಉಪ್ಪೂರರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದು ನಾವುಡರ ಕಲಾಪ್ರೌಢಿಮೆಗೆ ಮೆರುಗನ್ನಿತ್ತರು.ತಮ್ಮ ಹದಿಹರೆಯದಲ್ಲೇ ಉಪ್ಪೂರರ ತಂಡವನ್ನು ಸೇರಿದ ನಾವುಡರು ಸರಿಸುಮಾರು 5-6 ವರ್ಷಗಳ ಕಾಲ ಅವರ ಜೊತೆಯಲ್ಲಿಯೇ ತಿರುಗಾಟವನ್ನು ಮುಂದುವರೆಸಿದರು. 1977ರಲ್ಲಿ ಪೆರ್ಡೂರಿನ ವಿಜಯಶ್ರೀ ಮೇಳಕ್ಕೆ ಭಾಗವತರಾಗಿ ಸೇರ್ಪಡೆಗೊಂಡ ನಾವುಡರು ಬಹುಬೇಗನೆ ಜನಮನವನ್ನು ಸೂರೆಗೊಂಡರು, ನಾವುಡರ ಭಾಗವತಿಕೆ ಜನಜನಿತವಾಯ್ತು. ಅಲ್ಲಿಂದ ಮುಂದೆ ಸಾಲಿಗ್ರಾಮ ಮೇಳಕ್ಕೆ ಪದಾರ್ಪಣೆ ಮಾಡಿದ ನಾವುಡರು ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಹೋದಹೋದೆಡೆಯೆಲ್ಲ ಅಭಿಮಾನಿಗಳು ಸೃಷ್ಟಿಯಾದರು, ಯಕ್ಷಪ್ರೇಮಿಗಳು ಹುಚ್ಚೆದ್ದುಹೋದರು, ನೋಡನೋಡುತ್ತಿರುವಂತೆಯೇ ಕಾಳಿಂಗ ನಾವುಡರ ಕೀರ್ತಿ ಪತಾಕೆ ಎಲ್ಲೆಡೆಯೂ ರಾರಾಜಿಸತೊಡಗಿತು, ಕರಾವಳಿ ಕರ್ನಾಟಕದ ತುಂಬೆಲ್ಲಾ ಕಾಳಿಂಗ ನಾವುಡರ ಕಂಚಿನ ಕಂಠದ ಘಂಟಾನಿನಾದವು ಕೇಳಿಬರತೊಡಗಿತು. ತಮ್ಮ ಸಮಕಾಲೀನ ಭಾಗವತರ್ಯಾರೂ ತಲುಪಲಾಗದ ಎತ್ತರದ ಪೀಠದಲ್ಲಿ ನಾವುಡರು ವಿರಾಜಮಾನರಾದರು.

ನಾವುಡರ ಕಂಠಸಿರಿಯನ್ನು ಕೇಳಿ ಆನಂದಿಸಲು ಕನ್ನಡ ಆಡಿಯೋ.ಕಾಂ ನಲ್ಲಿ ಕೆಲವು ಅಪರೂಪದ ಯಕ್ಷಗಾನ ಪ್ರಸಂಗಗಳಿವೆ ಕೇಳಿ..

http://www.kannadaaudio.com/Songs/Yakshagana/home/

ಭೀಷ್ಮ ವಿಜಯ, ಗದಾಯುದ್ಧ, ಚಂದ್ರಹಾಸ, ಮಾಗದ ವಧೆ, ಕೀಚಕ ವಧೆ, ಬಬ್ರುವಾಹನ, ಶನಿ ಮಹಾತ್ಮೆ, ರಾಣಿ ಶಶಿಪ್ರಭೆ.. ಹೀಗೆ ಅಸಂಖ್ಯಾತ ಪೌರಾಣಿಕ ಪ್ರಸಂಗಗಳ ಪದ್ಯಗಳು ಕಾಳಿಂಗನಾವುಡರ ಕಂಠಸಿರಿಯಲ್ಲಿ ಇನ್ನಷ್ಟು ಮೆರುಗನ್ನು ಪಡೆದುಕೊಂಡಿವೆ. ಸ್ವತಹ ನಾವುಡರೇ ಅನೇಕ ಪ್ರಸಂಗಗಳನ್ನು ಯಕ್ಷಲೋಕದ ಮಡಿಲಿಗೆ ಸಮರ್ಪಿಸಿದ್ದಾರೆ. ಅವರೇ ರಚಿಸಿದ ‘ನಾಗಶ್ರೀ’ ಪ್ರಸಂಗವಂತೂ ಹೋದೆಡೆಯಲ್ಲೆಲ್ಲ ಪ್ರಚಂಡ ದಿಗ್ವಿಜಯವನ್ನು ಸಾಧಿಸಿ, ಅಪಾರ ಜನಮೆಚ್ಚುಗೆ ಗಳಿಸಿತ್ತು. ಈಗಲೂ ಕೂಡಾ ನಾಗಶ್ರೀ ಪ್ರಸಂಗದ ಪ್ರದರ್ಶನವಿದ್ದರೆ ಕಿಕ್ಕಿರಿವ ಪ್ರೇಕ್ಷಕ ಸಂದೋಹವೇ ಆ ಪ್ರಸಂಗದ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಹಳೆಯ ರಾಗಗಳ ಜಾಡಿನಲ್ಲಿ ಹೊಸ ಹೊಸ ಸಂಯೋಜನೆಗಳನ್ನು ಮಾಡಿದ ನಾವುಡರ ಪ್ರಯೋಗಶೀಲತೆಯಿಂದಾಗಿ ತಮ್ಮದೇ ಆದ ವಿಶಿಷ್ಟ ಶೈಲಿಯೊಂದನ್ನು ಹುಟ್ಟುಹಾಕಿ ತಮ್ಮ ರಂಗದಲ್ಲಿ ಏಕಮೇವಾದ್ವಿತೀಯರೆನಿಸಿಕೊಂಡಿದ್ದರು. ನಾವುಡರು ಭಾಗವತರಾಗಿದ್ದ ಸಂದರ್ಭದಲ್ಲಿ ಸಾಲಿಗ್ರಾಮ ಮೇಳ ಯಶಸ್ಸಿನ ಉತ್ತುಂಗದಲ್ಲಿ ವಿರಾಜಮಾನವಾಗಿದ್ದುದೇ ಇದಕ್ಕೆ ಸಾಕ್ಷಿ.

ವೃತ್ತಿ ಬದುಕಿನಲ್ಲಿ ಅಗ್ರಮಾನ್ಯ ಪಟ್ಟವನ್ನಲಂಕರಿಸಿ, ಸಾಂಸಾರಿಕ ಬದುಕಿನಲ್ಲಿ ಅನುರೂಪರಾದ ಪತ್ನಿ ವಿಜಯಶ್ರೀ ನಾವುಡ, ವಂಶದ ಕುಡಿ ಮಗ ಆಗ್ನೇಯ ನಾವುಡರೊಂದಿಗೆ ಸಂತೃಪ್ತರಾಗಿದ್ದರು ಕಾಳಿಂಗ ನಾವುಡರು. ಯಕ್ಷರಂಗದ ಸೇವೆಗೆ ಬದುಕನ್ನು ಮುಡಿಪು ಕಟ್ಟಿ, ಹೊಸ ಎತ್ತರವನ್ನು ಸಾಧಿಸಲು ಕಂಕಣಬದ್ಧರಾಗಿದ್ದರು. ಅವರ ಈ ಸಂತೃಪ್ತ ಬದುಕನ್ನು, ಕೀರ್ತಿಯ ಕಲಶವನ್ನು ಕಂಡು ವಿಧಿಗೇ ಕಣ್ಣುಕುಕ್ಕಿದಂತಾಯಿತೇನೋ. ಅಥವಾ ಈ ಕಂಚಿನ ಕಂಠದ ನಿನಾದಕ್ಕೆ ಜನ ಮೈಮರೆತು ತಲೆದೂಗಿ ಸುಖಿಸುವುದನ್ನು ಕಂಡು ಅಸೂಯೆಯಾಯಿತೇನೋ. ಇಲ್ಲವೇ ಈ ಯಕ್ಷಕಿನ್ನರನು ಸುರಲೋಕದಲ್ಲಿರಲು ಯೋಗ್ಯನಾದ ಅನರ್ಘ್ಯ ರತ್ನ, ನಿತ್ಯವೂ ಈ ಗಾನಾಮೃತವನ್ನು ಕೇಳಿ ಸವಿಯಬಹುದೆಂಬ ಆಸೆ ಹುಟ್ಟಿರಬೇಕು. ಅಂತೂ ವಿಧಿಯು ಈ ಗಾನಗಾರುಡಿಯ ಇಹದ ಬಾಳಿನ ಅಂತ್ಯಕ್ಕೆ ಮುನ್ನುಡಿ ಬರೆದಿತ್ತು. 1990ನೇ ಇಸವಿಯಲ್ಲಿ 32ರ ಹರೆಯದ ತರುಣ ಗಾನ ಕೋಗಿಲೆಯ ಹಾಡು ಸ್ತಬ್ಧವಾಯಿತು. ರಸ್ತೆ ಅಪಘಾತವೊಂದರಲ್ಲಿ ನಾವುಡರು ವಿಧಿವಶರಾದಾಗ ಯಕ್ಷಗಾನಲೋಕದ ಸುವರ್ಣಯುಗವೊಂದು ಅಂತ್ಯವಾಯಿತು. ಯಕ್ಷರಸಿಕರ ಪಾಲಿಗೆ ಬರಸಿಡಿಲೆರಗಿದಂತೆ ಬಂದಪ್ಪಳಿಸಿದ ಈ ದುರಂತವಾರ್ತೆಯನ್ನು ಕೇಳಿ ಕ್ಷಣಾರ್ಧದಲ್ಲಿ ಇಡೀ ಕರಾವಳಿಯ ಕಡಲತೀರವು ಶೋಕಸಾಗರದಲ್ಲಿ ಮುಳುಗಿತು. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿ ತೆರಳಿದ ಆ ಅಪರೂಪದ ಸಾಧಕನಿಗಾಗಿ ಅಭಿಮಾನಿಗಳ ಕಣ್ಣಂಚು ತೇವವಾಗಿತ್ತು. ಕಣ್ಣಿಂದ ಮರೆಯಾದರೇನಂತೆ, ಅವರ ಕಂಠಸಿರಿಯು ಸದಾ ಕಿವಿತುಂಬಿಕೊಂಡಿರುವುದಲ್ಲ ಅನ್ನುವ ಸಮಾಧಾನವೊಂದೇ ಉಳಿದಿತ್ತು. ಅಗಲಿದ ಈ ದಿವ್ಯಚೇತನಕ್ಕೆ ರಾಜ್ಯಸರ್ಕಾರದಿಂದ ಕೂಡಾ ಗೌರವ ಸಂದಿತ್ತು. ಆಗ ಪುಟ್ಟ ಬಾಲಕನಾಗಿದ್ದ ಅವರ ಮಗ ಆಗ್ನೇಯ ನಾವುಡ ಪ್ರಶಸ್ತಿ ಫಲಕ ಸ್ವೀಕರಿಸುವಾಗ ನೆರೆದವರ ಕಣ್ಣು ಅರಿವಿಲ್ಲದಂತೆಯೇ ಒದ್ದೆಯಾಗಿತ್ತು.

ಕಾಲಚಕ್ರ ಉರುಳುತ್ತಿದೆ, ಯಕ್ಷರಂಗವೂ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಹೊಸತನದ ಹೆಸರಲ್ಲಿ ಹೊಲಸೂ ಹುಲುಸಾಗಿ ಬೆಳೆಯುತ್ತಿದೆ. ಇದನ್ನೆಲ್ಲಾ ಕಂಡಾಗ ಒಮ್ಮೊಮ್ಮೆ ಛೆ, ನಾವುಡರಿರಬೇಕಿತ್ತು ಆಗ ಕಥೆಯೇ ಬೇರೆ ಇತ್ತು ಅಂತ ಯಕ್ಷಗಾನದ ಕುರಿತು ಕಳಕಳಿಯಿರುವ ಯಕ್ಷರಸಿಕರಿಗೆ ಅನ್ನಿಸುತ್ತದೆ. ನಾವುಡರೇ, ನಶಿಸುತ್ತಿರುವ ಭವ್ಯಪರಂಪರೆಯೊಂದರ ಉಳಿವಿಗಾಗಿಯಾದರೂ ನೀವು ಮತ್ತೊಮ್ಮೆ ಹುಟ್ಟಿಬರಬಾರದೇ ಅನ್ನುವ ಯಕ್ಷಪ್ರೇಮಿಗಳ ಮೂಕಪ್ರಶ್ನೆಯಲ್ಲೇ ನಾವುಡರಿಲ್ಲದ ಕೊರತೆ ಕಾಣುತ್ತದೆ. ನಾವುಡರು ಮರೆಯಾಗಿ ಹೋಗಿ ಎರಡು ದಶಕಗಳೇ ಉರುಳಿವೆ. ಆದರೆ ಅವರ ಅಭಿಮಾನಿಗಳ ಪಾಲಿಗೆ ಅವರ ನೆನಪೂ ಇಂದಿಗೂ ಜೀವಂತ. ಅವರ ಪದಗಳನ್ನು ಕೇಳುವಾಗ ಅದೇ ಧನ್ಯತೆಯ ಭಾವ, ಅದೇ ಭಾವಪರವಶತೆ. ದಿವ್ಯ ಚೇತನವೊಂದರ ಬದುಕು ಸಾರ್ಥಕವೆನಿಸಲು ಇಷ್ಟು ಸಾಕಲ್ಲವೇ..? ನಾವುಡರೇ ನಮ್ಮ ನೆನಪುಗಳಲ್ಲಿ ನೀವಿದ್ದೀರಿ…

(ವಿಡಿಯೋ ಕೃಪೆ – ಯು ಟ್ಯೂಬ್)

ಇದೇನು ಮಲೆನಾಡು-ಕರಾವಳಿಗಳ ಹವಾಮಾನ ಮುನ್ಸೂಚನೆಯಂತಿದೆಯಲ್ಲ ಅಂತ ತಲೆ ತುರಿಸಿಕೊಳ್ತಾ ಇದ್ದೀರಾ? ಇದು ಸ್ವಾತಂತ್ರ್ಯೋತ್ಸವದ ಮುನ್ನಾದಿನ ಸೋನೆ ಮಳೆಯಲ್ಲಿ ಮಿಂದು ತಂಪಾದ ಬೆಂಗಳೂರಿನ ಯಕ್ಷಗಾನಪ್ರಿಯರ ಮನಕ್ಕೆ ರಾತ್ರಿ ಪೂರಾ ತಂಪೆರೆದ ಯಕ್ಷರಸ ಧಾರೆಯ ಒಂದೆರಡು ಹುಂಡುಗಳು. ಎರಡು ಪ್ರಚಂಡ ಯಕ್ಷಗಾನ ಮೇಳಗಳ ಸಮ್ಮಿಲನದಲ್ಲಿ ನಡೆದ ಕೂಡಾಟದ ಮಳೆಯಲ್ಲಿ ಮಿಂದ ಮನಸ್ಸಿನಿಂದ ಆಟ ಮುಗಿದ ಮೇಲೂ ನೆನಪಾಗಿ ತೊಟ್ಟಿಕ್ಕಿದ ರಸ ಬಿಂದುಗಳು. ಯಕ್ಷರಂಗದ ಸಿಡಿಲಮರಿ ಎಂದೇ ಖ್ಯಾತಿವೆತ್ತ ತೀರ್ಥಳ್ಳಿ ಗೋಪಾಲಾಚಾರಿಯವರ ಸುಧನ್ವ, ಅಬ್ಬರದ ಪಾತ್ರಗಳಲ್ಲಿ ಆರ್ಭಟಿಸುವ ಮದನಾರಿಯಾಗುವ ಕಾರ್ಕಳ ಶಶಿಕಾಂತ ಶೆಟ್ಟಿಯವರ ಅಂಬೆ, ತಮ್ಮ ಮನಮೋಹಕ ಕುಣಿತದಿಂದ ರಂಗದಲ್ಲಿ ಸುಳಿಮಿಂಚಿನಂತೆ ಪ್ರಜ್ವಲಿಸಿದ ತೊಂಬಟ್ಟು ವಿಶ್ವನಾಥ ಆಚಾರಿ ಹಾಗೂ ಕೊಳಲಿ ಕೃಷ್ಣ ಶೆಟ್ಟಿಯವರ ಕುಶ-ಲವ ಪಾತ್ರ ಇಡೀ ಪ್ರದರ್ಶನದಲ್ಲಿ ಎದ್ದು ತೋರಿದ ಅಂಶಗಳಾಗಿವೆ. ಹಾಗೆಯೇ ರವೀಂದ್ರ ಶೆಟ್ಟಿಯವರ ಸುಶ್ರಾವ್ಯ ಭಾಗವತಿಕೆ ಕೂಡಾ ಇನ್ನೂ ಕಿವಿಯಲ್ಲಿ ಅನುರಣನಗೊಳ್ಳುತ್ತಿದೆ.

 

ಯಕ್ಷಗಾನವೆಂದರೆ ಹಾಡು, ನೃತ್ಯ, ಅರ್ಥಗಾರಿಕೆ, ಗತ್ತು-ಗಾಂಭೀರ್ಯಗಳ ಜೊತೆಗೆ ಕಣ್ಮನ ಸೆಳೆಯುವ ವೇಷ-ಭೂಷಣಗಳ ಮಿಲನ. ಭಾವ-ಭಂಗಿ-ಕುಣಿತ-ಮಾತುಗಾರಿಕೆ-ಹಾಡುಗಳಲ್ಲಿ ನವರಸಗಳೂ ಮೇಳೈಸಿದ ದೃಕ್-ಶ್ರಾವ್ಯ ರಸಾಯನ. ಇಂದು ಇಲ್ಲಿ ನಡೆದಿದ್ದು ಯಕ್ಷರಂಗದ ಎರಡು ದಿಗ್ಗಜ ಮೇಳಗಳಾದ ಪೆರ್ಡೂರು-ಸಾಲಿಗ್ರಾಮಗಳ ಸಮ್ಮಿಲನ. ಸ್ಪರ್ಧೆಯೆಂದಾಕ್ಷಣ ಯಕ್ಷಗಾನದಲ್ಲಿ ವೀರರಸವೇ ಪ್ರಧಾನ. ಅದಕ್ಕೆಂದೇ ಪ್ರದರ್ಶನಕ್ಕೆ ಆರಿಸಲಾಗಿದ್ದು ಸುಧನ್ವಾರ್ಜುನ, ಭೀಷ್ಮ ವಿಜಯ ಮತ್ತು ಕುಶ-ಲವ ಎಂಬ ಮೂರು ಪೌರಾಣಿಕ ಆಖ್ಯಾನ.

 

ಮೊದಲು ರಂಗವೈಭವವನ್ನು ಸಾಕ್ಷಾತ್ಕರಿಸಲು ಬಂದ ಕಥಾನಕ ಪೆರ್ಡೂರು ಮೇಳದವರ ಸುಧನ್ವಾರ್ಜುನ. ರವೀಂದ್ರ ಶೆಟ್ಟಿಯವರ ಅಮೋಘ ಕಂಠಸಿರಿಯನ್ನು ಮೆಚ್ಚಿ, ಇಡೀ ಸಭಾಂಗಣವೇ ನಾದವೈಭವಕ್ಕೆ ತಲೆದೂಗುತ್ತಿತ್ತು. ಅಷ್ಟರಲ್ಲಾಗಲೇ ರಂಗಸ್ಥಳದಲ್ಲಿ ಮಿಂಚಿನ ಸಂಚಾರ. ಸುಧನ್ವನಾಗಿ ರಂಗಕ್ಕಿಳಿದ ತೀರ್ಥಳ್ಳಿ ಗೋಪಾಲಾಚಾರಿಯವರನ್ನು ಸ್ವಾಗತಿಸಿದ್ದು ಕರತಾಡನದ ಜೊತೆಗೆ ಪ್ರೇಕ್ಷಕರ ಹರ್ಷೋದ್ಗಾರ. ತಮ್ಮ ನಯನಮನೋಹರ ನೃತ್ಯ, ವಿದ್ವತ್‌ಪೂರ್ಣ ಮಾತಿನಿಂದ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿದ ತೀರ್ಥಳ್ಳಿ, ಏಕಮೇವಾದ್ವಿತೀಯರಾಗಿ ರಂಗದಲ್ಲಿ ಮೆರೆದರು. ತೀರ್ಥಳ್ಳಿಯವರ ಜೊತೆಗೆ ರಂಗಕ್ಕೆ ಬಂದು ಹಿಮ್ಮೇಳಕ್ಕೆ ಸಾಥಿಯಾದ ಕರಾವಳಿ ಗಾನಕೋಗಿಲೆ ಬಿರುದಾಂಕಿತ ಧಾರೇಶ್ವರರ ಕಂಠಸಿರಿಯಿಂದ ಆಟ ಇನ್ನಷ್ಟು ಕಳೆಕಟ್ಟಿತು. ಇಷ್ಟೆಲ್ಲಾ ಇದ್ದರೂ ಕೂಡಾ ಪೆರ್ಡೂರು ಮೇಳದ ಪ್ರದರ್ಶನದಲ್ಲಿ ಹಲವಾರು ನ್ಯೂನ್ಯತೆಗಳಿದ್ದವು. ಸುಧನ್ವನಿಗೆ ಸರಿಮಿಗಿಲಾಗಿ ಆರ್ಭಟಿಸಬೇಕಿದ್ದ ಥಂಡಿಮನೆಯವರ ಅರ್ಜುನ, ಹೊರೆಗೆ ಸುರಿಯುತ್ತಿದ್ದ ಮಳೆಗೆ ಥಂಡಿಹೊಡೆದವರಂತೆ ಮಂಕಾಗಿದ್ದರು. ಸುಧನ್ವನ ಕುಣಿತ-ಮಾತುಗಳ ಎಡೆಯಲ್ಲಿ ಆಕಳಿಸುತ್ತಿದ್ದ ಸಪ್ಪೆ ಅರ್ಜುನ, ತಮ್ಮ ಸವ್ಯಸಾಚಿ ಬಿರುದಿಗೆ ನ್ಯಾಯಸಲ್ಲಿಸಲಿಲ್ಲ ಅನ್ನುವುದು ಕಣ್ಣೆದುರಿಗೇ ಹೊಡೆದು ಕಾಣಿಸುತ್ತಿತ್ತು. ಇನ್ನು ಶಂಕರ ಹೆಗಡೆಯವರ ಪ್ರಭಾವತಿ ಆರಕ್ಕೇರದಿದ್ದರೂ ಮೂರಕ್ಕಿಳಿಯಲಿಲ್ಲ ಅನ್ನುವುದೇ ಸಮಾಧಾನ. ಪ್ರದರ್ಶನದ ಹೈಲೈಟ್ ಅಂದರೆ ಒಂದು ನರ್ತನದಲ್ಲಿ ಸುಮಾರು ಕಾಲು ಗಂಟೆ ಹೊತ್ತು ಚಿಗರೆಮರಿಯಂತೆ ರಂಗದ ಮೇಲೆಲ್ಲಾ ಸುಳಿದಾಡಿ ಗೋಪಾಲಾಚಾರಿ ವಿಜೃಂಭಿಸಿದ್ದು. ಅವರಿಗೆ ತಕ್ಕ ಜೊತೆ ನೀಡಿದ ರವೀಂದ್ರ ಶೆಟ್ಟಿಯವರ ಭಾಗವತಿಕೆಗೂ ಪೂರ್ಣಾಂಕ ಸಲ್ಲಲೇ ಬೇಕು.

 

ಆರಂಭದಲ್ಲಿ ಕಥಾ ನಿರೂಪಣೆಯಲ್ಲಾದ ವೃಥಾ ಎಳೆತದ ಫಲಶ್ರುತಿಯಾಗಿ, ಕೊನೆಯಲ್ಲಿ ಎಷ್ಟೇ ತ್ವರಿತವಾಗಿ ಓಡಿಸಿದರೂ ಕೃಷ್ಣನ ರಂಗ ಪ್ರವೇಶವಾಗುವಾಗಲೇ ನಿಗದಿ ಪಡಿಸಿದ ಮೂರು ಗಂಟೆಯ ಹೊತ್ತು ಮೀರಿ ಹೋಗಿತ್ತು. ಹಾಗಾಗಿ ಅಂತೂ ಇಂತೂ ಮುಗಿಸಿದರೆ ಸಾಕಪ್ಪಾ ಅನ್ನುವ ಹಾಗೆ ಓಡಿಸಿದ ಪರಿಣಾಮವಾಗಿ ಆಟದ ಒಟ್ಟಂದಕ್ಕೆ ಚ್ಯುತಿ ಬಂದಿದ್ದು ಸುಳ್ಳಲ್ಲ. ಅಲ್ಲದೇ ಹಾಸ್ಯಪಾತ್ರ ಇರದೇ ಇದ್ದುದು ಕೂಡಾ ಪ್ರದರ್ಶನದ ಒಟ್ಟು ಪರಿಣಾಮಕ್ಕೆ ಹಿನ್ನಡೆ ಉಂಟುಮಾಡಿದ್ದು ಸುಳ್ಳಲ್ಲ. ಒಟ್ಟಿನಲ್ಲಿ ತೀರ್ಥಳ್ಳಿ, ರವೀಂದ್ರ ಶೆಟ್ಟಿಯವರ ಅಮೋಘ ಪ್ರದರ್ಶನದಿಂದಾಗಿ ಪೆರ್ಡೂರು ಮೇಳದ ಆಟಕ್ಕೆ ಒಂದು ತೂಕ ಬಂದಿತ್ತು.

 

ಇದಕ್ಕೆ ತದ್ವಿರುದ್ಧವಾಗಿ ಸಾಲಿಗ್ರಾಮ ಮೇಳದವರು ಸಾಕಷ್ಟು ಪೂರ್ವಸಿದ್ಧತೆ ನಡೆಸಿದ್ದು ಅವರ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು. ಅವರಾರಿಸಿದ ಪ್ರಸಂಗ ಕೂಡಾ ಅದಕ್ಕೆ ತಕ್ಕುದಾಗಿತ್ತು. ದೂತನಾಗಿ ರಂಗಸ್ಥಳಕ್ಕೆ ಬಂದ ಮಹಾಬಲೇಶ್ವರ್ ಭಟ್ ಕ್ಯಾದಗಿ ತಮ್ಮ ಚಿನಕುರುಳಿ ಮಾತುಗಳಿಂದ ಪ್ರೇಕ್ಷಕರಲ್ಲಿ ನಗೆಯಲೆಯುಕ್ಕಿಸುವಲ್ಲಿ ಸಫಲರಾದರು. ನಂತರ ಅಭಿಮಾನಿಗಳ ಚಪ್ಪಾಳೆಯ ಸ್ವಾಗತದೊಂದಿಗೆ ಸಾಳ್ವನಾಗಿ ರಂಗಪ್ರವೇಶಿಸಿದ ಕಣ್ಣಿಮನೆ, ತಮ್ಮ ಖ್ಯಾತಿಗೆ ತಕ್ಕ ಪ್ರದರ್ಶನ ನೀಡುವಲ್ಲಿ ಯಶಕಾಣಲಿಲ್ಲ. ಆದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ನ್ಯಾಯ ಒದಗಿಸಿದ್ದಂತೂ ಸತ್ಯ. ನಂತರ ಎಲ್ಲೆಲ್ಲೂ ಸೊಬಗಿದೆ…ಎಲ್ಲೆಲ್ಲೂ ಸೊಗಸಿದೆ… ಮಾಮರವು ಹೂತಿದೆ… ಪದ್ಯಕ್ಕೆ ಹೆಜ್ಜೆ ಹಾಕಿ ಕುಣಿದ ಕಾಶೀರಾಜನ ಕನ್ಯೆಯರ ನೃತ್ಯ, ಬೆಳಕಿನ ಚಿತ್ತಾರದೊಂದಿಗೆ ಕಣ್ಮನ ಸೆಳೆಯಿತು. ರಾಗವೇಂದ್ರ ಮಯ್ಯರ ಭಾಗವತಿಕೆ ಅವರು ತಮ್ಮ ಹಳೇ ವೈಭವವನ್ನು ಕಳೆದುಕೊಂಡಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿ ಮಧ್ಯ ಮಧ್ಯದಲ್ಲಿ ಸ್ವರ ಕರ್ಕಶವಾಗಿ ಕೇಳಿ ಬರುತ್ತಿತ್ತು. ಆದರೆ ಹೆರಂಜಾಲು ಬಂದ ಮೇಲೆ ಹಿಮ್ಮೇಳದ ದನಿ ಕಿವಿಗಿಂಪಾಗಿ ಕೇಳಿಸುತ್ತಿತ್ತು. ಕಾಶೀರಾಜನ ಸುಪುತ್ರಿಯರ ವಿವಾಹಕ್ಕಾಗಿ ಇಟ್ಟ ವಿಕ್ರಮ ಪಣದ ಪ್ರದರ್ಶನದ ವೇಳೆ ಕೋಟ ಶಿವಾನಂದರು ನಾಲ್ಕು ಚಂಡೆವಾದನಗೈದು ಮೆಚ್ಚುಗೆಗೆ ಪಾತ್ರರಾದರು. ಆದರೂ ಚಂಡೆಯ ದನಿಯ ಏರಿಳಿತಗಳಲ್ಲಿ ಒಂದು ರೀತಿ ಅಸಹಜತೆ ಇದ್ದಂತೆ ಭಾಸವಾಗುತ್ತಿತ್ತು.

 

ಆಗ ರಂಗ ಪ್ರವೇಶಿಸಿದ ಭೀಷ್ಮನ ಪಾತ್ರಧಾರಿ ಯಾಜಿಯನ್ನು ಸ್ವಾಗತಿಸುವಾಗ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು. ತಮ್ಮ ಎಂದಿನ ಗತ್ತು, ಗಾಂಭೀರ್ಯಗಳಿಂದ, ತೂಕದ ಮಾತುಗಳಿಂದ ಪಾತ್ರದ ಘನತೆಯನ್ನು ಎತ್ತಿ ಹಿಡಿದು ನಿರೀಕ್ಷೆ ಹುಸಿಹೋಗದಂತೆ ನೋಡಿಕೊಂಡರು. ಅಮೇಲೆ ಇಡೀ ಸಭಾಂಗಣದ ಮೂಲೆ ಮೂಲೆಯನ್ನು ಮುಟ್ಟಿದ್ದು ಕಾರ್ಕಳ ಶಶಿಕಾಂತ ಶೆಟ್ಟಿಯವರ ಅಂಬೆಯ ಅಬ್ಬರ. ಧ್ವನಿಯ ಏರಿಳಿತ, ಮುಖದಲ್ಲೇ ಭಾವದ ಅಭಿವ್ಯಕ್ತಿ ಮತ್ತು ಪಾತ್ರಕ್ಕೆ ತಕ್ಕುದಾದ ಅಬ್ಬರ ಇವೆಲ್ಲದರ ಸಮಪಾಕದೊಂದಿಗೆ ಅಂಬೆಯೇ ಇಳಿದುಬಂದಂತಿದ್ದರು. ಅದರಲ್ಲೂ ಶಿಖಂಡಿಯಾಗಿ ಹುಟ್ಟುವ ಪ್ರತಿಜ್ಞೆಗೈಯುವ ಸಂದರ್ಭದಲ್ಲಿ ಅವರ ಆರ್ಭಟ, ಆಕ್ರೋಶ, ಸಿಡಿಗುಂಡಿನಂತಹ ಮಾತುಗಳು… ನಿಜಕ್ಕೂ ಮೈನವಿರೇಳಿಸುವಂತಿತ್ತು. ಇಂತಹ ಉತ್ಕೃಷ್ಟ ಪ್ರದರ್ಶನದ ನೆರವಿನಿಂದ ಪೆರ್ಡೂರು ಮೇಳದ ಪ್ರದರ್ಶನವನ್ನು ಸಾಲಿಗ್ರಾಮದವರು ಮೀರಿನಿಂತರೆಂಬುದನ್ನು ಪೆರ್ಡೂರು ಮೇಳದ ಕಟ್ಟಾ ಅಭಿಮಾನಿಯಾದ ನಾನೂ ಅನುಮೋದಿಸಲೇಬೇಕು.

 

ಬೆಳಗಿನ ಜಾವದ ಕುಶ-ಲವ ಪ್ರಸಂಗವನ್ನು ಪೆರ್ಡೂರು ಸಾಲಿಗ್ರಾಮ ಮೇಳದ ಕಲಾವಿದರು ಹಿಮ್ಮೇಳ ಮುಮ್ಮೇಳಗಳಲ್ಲಿ ಜೊತೆಯಾಗಿ ಆಡಿದ ಕಾರಣ ಇದು ನಿಜಾರ್ಥದಲ್ಲಿ ಕೂಡಾಟ. ಇಲ್ಲೇನಿದ್ದರೂ ಕುಶ-ಲವರದ್ದೇ ಮೆರೆದಾಟ. ಕುಶ-ಲವ ಜೋಡಿಯಾಗಿ ಚಪ್ಪಾಳೆಯ ಮೇಲೆ ಚಪ್ಪಾಳೆ ಗಿಟ್ಟಿಸಿಕೊಂಡ ತೊಂಬಟ್ಟು ವಿಶ್ವನಾಥ್ ಆಚಾರಿ ಹಾಗೂ ಕೊಳಲಿ ಕೃಷ್ಣ ಶೆಟ್ಟಿ, ಒಬ್ಬರ ಪ್ರದರ್ಶನದಿಂದ ಇನ್ನೊಬ್ಬರು ಸ್ಫೂರ್ತಿ ಪಡೆವವರಂತೆ ಸುಮಾರು ಒಂದು ಗಂಟೆ ಹೊತ್ತು ರಂಗಸ್ಥಳದಲ್ಲಿ ಆಟ ಹುಡಿ ಹಾರಿಸಿ ಕೊಟ್ಟರು. ಇಲ್ಲಿ ತಮ್ಮ ಸುಶ್ರಾವ್ಯ ಹಾಡುಗಳಿಂದ ಪ್ರಸಂಗಕ್ಕೆ ಕಳೆಯೇರಿಸಿದ ಸುರೇಶ್ ಶೆಟ್ಟಿಯವರನ್ನೂ ಕಡೆಗಣಿಸುವಂತಿಲ್ಲ.

 

ಒಟ್ಟಾರೆಯಾಗಿ ಹೇಳುವುದಾದರೆ ಕೂಡಾಟದಲ್ಲಿ ಶ್ರೇಷ್ಟ ಪ್ರದರ್ಶನವಾಗಿ ಸಾಲಿಗ್ರಾಮದವರ ಭೀಷ್ಮ ವಿಜಯ ಹೊರಹೊಮ್ಮಿದರೆ, ಈ ಕೂಡಾಟದ ಸರಣಿ ಶ್ರೇಷ್ಟ ನಿಸ್ಸಂಶಯವಾಗಿ ಶಶಿಕಾಂತ್ ಶೆಟ್ಟಿ. ಇನ್ನು ಆಯಾ ಪ್ರಸಂಗದಲ್ಲಿ ಉತ್ಕೃಷ್ಟ ಅಭಿನಯಕ್ಕೆ ಕ್ರಮವಾಗಿ ಗೋಪಾಲಾಚಾರಿ, ಶಶಿಕಾಂತ ಶೆಟ್ಟಿ ಮತ್ತು ವಿಶ್ವನಾಥ್ ಆಚಾರಿ- ಕೊಳಲಿ ಜೋಡಿಯನ್ನಲ್ಲದೆ ಬೇರೆ ಆಯ್ಕೆಯೇ ಇಲ್ಲ. ಪ್ರಸಂಗ ನೋಡಿ ಹೊರಬಂದ ಬಹುಕಾಲದ ನಂತರವೂ ಇವರೆಲ್ಲರ ಅಭಿನಯ ನೆನಪಾಗಿ ಉಳಿಯುತ್ತದೆ. ಅಂತೆಯೇ ರವೀಂದ್ರ ಶೆಟ್ಟಿ ಹೊಸಂಗಡಿಯವರ ಗಾನ ಮಾಧುರ್ಯ ಕೂಡಾ. ಪೌರಾಣಿಕ ಪ್ರಸಂಗಗಳು ತಮ್ಮ ಜನಪ್ರಿಯತೆಯನ್ನು ಕಳಕೊಂಡಿಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿತ್ತು ವರುಣನ ಮುನಿಸಿನ ನಡುವೆಯೂ ಅಲ್ಲಿ ಸೇರಿದ್ದ ಯಕ್ಷಾಭಿಮಾನಿಗಳ ಸಂದೋಹ. ಚಲಚಿತ್ರಗಳನ್ನು ಯಕ್ಷಗಾನವನ್ನಾಗಿಸಿ ಇಲ್ಲದ ಗಿಮಿಕ್‌ಗಳ ಮೂಲಕ ತಾವು ಯಕ್ಷಗಾನದ ಕ್ರಾಂತಿಪುರುಷ ಅನ್ನುವ ಭ್ರಮೆಯಲ್ಲಿರುವ ದೇವದಾಸ್ ಈಶ್ವರಮಂಗಲರಂತವರಿಗೆ ಇದು ಅರ್ಥವಾದೀತೇ…? ಸಂದೇಹ !!

 

                        …… ಯಕ್ಷಗಾನಂ ಗೆಲ್ಗೆ……

ಮೊನ್ನೆ ಪತ್ರಿಕೆಯಲ್ಲಿ ಒಂದು ಸುದ್ದಿ ಇತ್ತು. ಯಾರೋ ಕಿಡಿಗೇಡಿಗಳು ರಾಜ್ ಕುಮಾರ್ ಪ್ರತಿಮೆಯನ್ನು ಭಗ್ನಗೊಳಿಸೋಕೆ ಯತ್ನಿಸಿದರು ಅಂತ. ಈ ಕೃತ್ಯದಿಂದ ಅಸಲು ಯಾರಿಗೆ ಏನು ಲಾಭ ಸಿಕ್ಕಿತೋ ಗೊತ್ತಿಲ್ಲ. ಯಾವುದೋ ಅನಾರೋಗ್ಯಕರ ಮನಸ್ಸಿನ ವಿಕೃತಾನಂದಕ್ಕಾಗೇ ನಡೆಸುವ ಇಂತಹ ಕ್ಷುಲ್ಲಕ ಕೆಲಸಗಳಿಂದ ರಾಜ್ ಕುಮಾರ್ ಅವರಂತಹ ಮಹಾನ್ ಚೇತನಕ್ಕೆ , ಅವರ ವ್ಯಕ್ತಿತ್ವದ ಘನತೆಗೆ ಮಸಿಬಳಿಯಲೆತ್ನಿಸುತ್ತೇವೆ ಅನ್ನುವ ಅವರ ಬಾಲಿಶ ತರ್ಕಕ್ಕೆ ಪಕ್ಕೆ ಹಿಡಿದು ನಗುವಂತಾಗುತ್ತದೆ.

 

ಕನ್ನಡದ ಪಾಲಿಗೆ ಡಾ| ರಾಜ್ ಒಂದು ಚೈತನ್ಯದ ಚಿಲುಮೆಯಂತಿದ್ದರು. ಅಪರೂಪದ ಶಕ್ತಿಯಾಗಿದ್ರು. ರಾಜಣ್ಣ, ಅಣ್ಣಾವ್ರು ಎಂದೆಲ್ಲಾ ಅಭಿಮಾನಿಗಳ ಗೌರವಾದರ ಪ್ರೀತಿ ಸಂಪಾದಿಸಿದ ರಾಜ್ ಕುಮಾರ್ ಭಾರತೀಯ ಚಿತ್ರರಂಗ ಕಂಡ ಬಹು ಅಪರೂಪದ ಪ್ರತಿಭೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಅಭಿನಯ , ಹಾಡುಗಳು ಅವರಿಗೆ ಎಷ್ಟು ಅಭಿಮಾನಿಗಳನ್ನು ತಂದು ಕೊಟ್ಟಿದೆಯೋ ಅದಕ್ಕಿಂತ ಒಂದು ಕೈ ಮೇಲು ಅವರ ವಿನಯ, ಸರಳತೆ ಮತ್ತು ಅವರ ಮಗುವಿನಂತಹ ಮುಗ್ಧತೆಯಿಂದ ಅವರ ಅಭಿಮಾನಿಗಳಾದವರ ಸಂಖ್ಯೆ. ಕನ್ನಡ ಜನತೆಯ ಪ್ರೀತಿ, ವಿಶ್ವಾಸಗಳು ಅದಕ್ಕಾಗಿಯೇ ಅವರನ್ನು ಆ ಎತ್ತರದ ಸ್ಥಾನದಲ್ಲಿರಿಸಿದೆ. ನಮ್ಮಿಂದ ಮರೆಯಾಗಿ ಹೋದರೂ ಸದಾ ಜನಮಾನಸದಲ್ಲಿ ರಾಜ್ ನೆನಪಾಗಿ ಬಹುಕಾಲ ಕಾಡಲಿದ್ದಾರೆ ; ಕಾಡುತ್ತಿದ್ದಾರೆ. ಅವರಲ್ಲಿದ್ದ ಶೃದ್ಧೆ, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ನಿಷ್ಪಕ್ಷಪಾತ ನಡೆ-ನುಡಿ, ಸಮಯ ಪಾಲನೆ ಕುರಿತು ಅವರಿಗಿದ್ದ ಕಟ್ಟುನಿಟ್ಟು, ಪಾತ್ರದಲ್ಲಿ ತಲ್ಲೀನವಾಗಿ ಪಾತ್ರವೇ ತಾವಾಗುತ್ತಿದ್ದ ಪರಿ, ಹಾಡಿನ ಮೂಲಕ ಮನಸ್ಸನ್ನು ತಟ್ಟುತ್ತಿದ್ದ ಪರಿ…. ರಾಜಣ್ಣಗೆ ರಾಜಣ್ಣನೇ ಸಾಟಿ. ಮುತ್ತುರಾಜ್ ಎಂಬ ಚಿಕ್ಕ ಬಾಲಕನು ರಾಜಕುಮಾರ್ ಆಗಿ ಬಂದು ಕನ್ನಡ ಜನರ ಹೃದಯ ಸಿಂಹಾಸನದ ಅನಭಿಷಿಕ್ತ ಸಾರ್ವಭೌಮನಾಗಿ ಬೆಳೆದ ಪರಿಯೇ ಅನನ್ಯ. ಕನ್ನಡದ ಬಗೆಗಿದ್ದ ಅವರ ಪ್ರೀತಿ, ಭಾಷಾ ಶುದ್ಧಿಗೆ ಅವರು ನೀಡುತ್ತಿದ್ದ ಮಹತ್ವ, ಭಾವಾಭಿವ್ಯಕ್ತಿಯಲ್ಲಿ ಅವರ ಮುಖದ ಕದಲಿಕೆಗಳು…ಇವೆಲ್ಲವನ್ನು ಯಾವತ್ತಿಗಾದರೂ ಮರೆಯಲಾದೀತೇ? ಇಂತಹ ಅನರ್ಘ್ಯ ರತ್ನ ನಮ್ಮ ಕಾಲದಲ್ಲಿ ನಮಗೆ ಸಿಕ್ಕಿದ್ದೇ ನಮ್ಮ ಅದೃಷ್ಟ. ಇಷ್ಟೆಲ್ಲಾ ಹೇಳಿದರೂ ಅವರ ಮೇರು ಸದೃಶ ವ್ಯಕ್ತಿತ್ವದ ಒಂದು ಕಣವನ್ನಷ್ಟೇ ಹೇಳಿದಂತಾಗುತ್ತದೆ.

 

ಇಂತಹ ವ್ಯಕ್ತಿತ್ವವನ್ನು ಪ್ರತಿಮೆಯೊಂದನ್ನು ಭಗ್ನಗೊಳಿಸುವ ಮೂಲಕ ಅವಮಾನಿಸಲೆತ್ನಿಸುವವರು ಯಾವ ಸೀಮೆಯ ಮೂರ್ಖರೋ ಅರ್ಥವಾಗುತ್ತಿಲ್ಲ. ಈ ರೀತಿಯ ಕ್ರಿಮಿಗಳೇ ಇಂದು ಭಾಷೆ, ಜಾತಿಯ ಮೂಲಕ ಜನರನ್ನು ಒಡೆಯಲು ಯತ್ನಿಸುತ್ತಿರುವುದು. ರಾಜಣ್ಣನ ವ್ಯಕ್ತಿತ್ವದ ಪರಿಧಿ ಇಂತಹ ಎಲ್ಲಾ ಗಡಿಗಳ ಪರಿಧಿಯನ್ನು ಮೀರಿ ಬೆಳೆದಿದೆ. ಆ ಮಹತ್ತನ್ನು ಅವಮಾನಿಸಿದರೆ ನಮ್ಮನ್ನು ನಾವೇ ಅವಮಾನಿಸಿಕೊಂಡಂತೆ ಅನ್ನುವುದು ಇವರಿಗ್ಯಾಕೆ ಅರ್ಥವಾಗೋಲ್ಲವೋ? 

ಇಂಥಾ ನೂರಲ್ಲ ಸಾವಿರ ಪ್ರಯತ್ನ ಮಾಡಿದರೂ ರಾಜ್ ಘನತೆಯ ಕೂದಲು ಕೊಂಕಿಸಲೂ ಇವರಿಗಾಗದು. ಇದಕ್ಕೆ ಪ್ರತಿಕ್ರಿಯೆ ನೀಡುವುದು , ಪ್ರತಿಭಟನೆ ಮಾಡುವುದು ಕೂಡಾ ಇಂತಹ ಅವಿವೇಕಿಗಳಿಗೆ ಮತ್ತೆ ಮತ್ತೆ ಈ ರೀತಿಯ ಕೃತ್ಯಕ್ಕೆ ಪ್ರಚೋದಿಸಬಹುದು. ರಾಜ್ ಎಂಬ ಚೈತನ್ಯದ ನವಿರಾದ ನೆನಪುಗಳು ನಮ್ಮೆಲ್ಲರ ಮನದಲ್ಲಿ ಪುತ್ಠಳಿಯಾಗಿ ಭದ್ರವಾಗಿ ನೆಲೆಯೂರಿರುವಾಗ, ಕಲ್ಲು ಪ್ರತಿಮೆಗೆ ಹಾನಿ ಮಾಡಿ ಅವರಿಗೆ ವಿಕೃತಾನಂದ ಸಿಗೋದಾದ್ರೆ ಹಾಗೇ ಮಾಡಿಕೊಂಡು ಹಾಳಾಗಿಹೋಗಲಿ ಬಿಡಿ. ನಮ್ಮ ಮನಸ್ಸಿನಲ್ಲಿನ ರಾಜ್ ಪ್ರತಿಮೆ … ಅಯ್ಯೋ..ಹುಚ್ಚಪ್ಪಾ.. ನಾನು ಅಲ್ಲಿಲ್ಲ ಕಣೋ.. ಇಲ್ಲಿದಿನಿ.. ಅಭಿಮಾನಿ ದೇವರುಗಳ ಹೃದಯಸಿಂಹಾಸನದಲ್ಲಿ ನೀವೆಂದೂ ಹಾನಿ ಮಾಡದಷ್ಟು ಸುರಕ್ಷಿತವಾಗಿ.. ಎಂದು ಸದಾ ನಗುತ್ತಿರಲಿ.

ಬಾಲಿವುಡ್ಡಲ್ಲಿ ಕರಣ್ ಜೋಹರ್ ಮತ್ತು ಏಕ್ತಾ ಕಪೂರ್‌ಗೆ ಅನ್ನೋ ಅಕ್ಷರದ ಮೇಲೆ ಅದೇನೋ ಪ್ರೀತಿ. ಜೊತೆಗೆ ಅದು ಅದೃಷ್ಟ ತರುತ್ತೆ ಅನ್ನೋ ನಂಬಿಕೆ. ಹಾಗೇನೆ ನಮ್ಮ ಮಮತೆಯ ನಿರ್ದೇಶಕ ಟಿ.ಎನ್.ಎಸ್ ಅರ್ಥಾತ್ ಟಿ.ಎನ್.ಸೀತಾರಾಂ ಅವರಿಗೆ ಅಕ್ಷರದ ಮೇಲೆ ಇನ್ನಿಲ್ಲದ ಮೋಹ, ಮಮತೆ, ಮಮಕಾರ, ಮೆಚ್ಚುಗೆ, ಮುದ್ದು, ಮೋಕೆ(ತುಳು ಶಬ್ದ). ಇದೀಗ ಈ ಟಿ.ವಿ ಕನ್ನಡ ವಾಹಿನಿಯ ಮುಖಾಂತರ ಕನ್ನಡದ ಮನೆ-ಮನೆಗಳ ಮಹಿಳೆಯರು-ಮಹನೀಯರು-ಮಕ್ಕಳು-ಮುದುಕರು ಎಲ್ಲರ ಮೇಲೂ ತಮ್ಮ ಮೋಡಿ ಮಾಡಲು, ಮನಸೂರೆಗೊಳ್ಳಲು ಮನರಂಜಿಸಲು ಮತ್ತೊಂದು ಮೆಗಾ ಧಾರಾವಾಹಿಯೊಂದಿಗೆ ಕಿರುತೆರೆಗೆ ಮತ್ತೆ ಮರಳುತ್ತಿದ್ದಾರೆ. ಹಿಂದಿನ ಯಶಸ್ವೀ ಧಾರಾವಾಹಿಯಾದ ಮುಕ್ತದ ಜನಪ್ರಿಯ ಹೆಸರಿನ ದ್ವಿರುಕ್ತಿಯನ್ನೇ ತನ್ನ ಶೀರ್ಷಿಕೆಯಾಗಿಸಿಕೊಂಡಿರುವ ಈ ಧಾರಾವಾಹಿ ಶೀಘ್ರದಲ್ಲೇ ಬರಲಿದೆ ಅಂತ ಈ ಟಿ.ವಿ.ಯವರು ಈಗಾಗಲೇ ಪ್ರಕಟಿಸಿದ್ದಾರೆ.

 

ಈ ಧಾರಾವಾಹಿಯಲ್ಲಿ ಸೀತಾರಾಂ ಬಳಗದಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳುವ ಮಾಳವಿಕ ಅವಿನಾಶ್ ಇದ್ದಾರಂತೆ. ಜೊತೆಗೆ ಕಿರುತೆರೆಯಲ್ಲಿ ಮೊತ್ತ ಮೊದಲನೆ ಬಾರಿಗೆ ಖ್ಯಾತ ಬರಹಗಾರ ಬರಗೂರು ರಾಮಚಂದ್ರಪ್ಪ ಕಾಣಿಸಿಕೊಳ್ಳಲಿದ್ದಾರಂತೆ. ಎಂದಿನಂತೆ ಟಿ.ಎನ್.ಎಸ್. ನ್ಯಾಯವಾದಿಗಳಾಗಿ ತಮ್ಮ ವಿಶಿಷ್ಟ ವಾಗ್ಝರಿಯಲ್ಲಿ ಎಲ್ಲರನ್ನೂ ಮುಳುಗೇಳಿಸುವುದಂತೂ ಖಂಡಿತ.

 

ಆದರೆ ಒಂದು ಅಚ್ಚರಿಯ ಸಂಗತಿಯೆಂದರೆ ಕಿರುತೆರೆಯಲ್ಲಿ ಗೆಲುವು ತಂದು ಕೊಟ್ಟ ಕಾರದ ಮೋಡಿ ಸಿನೆಮಾದಲ್ಲಿ ಸೀತಾರಾಂ ಕೈ ಹಿಡಿಯಲಿಲ್ಲ ಅನ್ನುವುದು. ಮತದಾನ ಅತ್ಯುತ್ತಮ ಚಿತ್ರವಾಗಿದ್ದರೂ ಕೂಡಾ ಜನರ ಮನಸೆಳೆಯುವಲ್ಲಿ ವಿಫಲವಾಯ್ತು. ಇತ್ತೀಚೆಗೆ ಬಂದ ಮೀರಾ ಮಾಧವ ರಾಘವ ಕೂಡಾ ಚೆನಾಗಿದ್ರೂ ಕೂಡಾ ಕಾಸು ಹುಟ್ಟಿಸಲಿಲ್ಲ ಅನ್ನುವುದು ಅಷ್ಟೇ ವಾಸ್ತವ. ಧಾರಾವಾಹಿಗಳನ್ನು ನೋಡಿ ಮೆಚ್ಚಿಕೊಂಡವರೆಲ್ಲ ಕನಿಷ್ಟ ಒಂದು ಬಾರಿ ನೋಡಿದರೂ ಕೂಡಾ ಅವರಿಗೆ ಚಿತ್ರಕ್ಕೆ ಹಾಕಿದ ಕಾಸು ಹುಟ್ಟಿ ಮೇಲಿಷ್ಟು ಕೊಸರೂ ಬರುವುದರಲ್ಲಿ ಅನುಮಾನವಿರಲಿಲ್ಲ. ಆದ್ರೆ ಹಾಗಾಗಲಿಲ್ಲ. ಸೀತಾರಾಂ ಧಾರವಾಹಿಯ ಅಭಿಮಾನಿಗಳು ಚಿತ್ರ ನೋಡೋಲ್ವ? ಹಾಗಿರಲಾರದು. ಬಹುಶಃ ಕಿರುತೆರೆಯ ವ್ಯಾಕರಣಕ್ಕೆ ಒಗ್ಗಿದ ಸೀತಾರಾಂಗೆ ಹಿರಿತೆರೆಯ ಸೂತ್ರಗಳು ಅಷ್ಟಾಗಿ ಸಿದ್ಧಿಸಿಲ್ಲ ಇರಬಹುದೇನೋ.

 

ತಮ್ಮ ಪ್ರತೀ ಧಾರಾವಾಹಿಯಲ್ಲೂ ಮಧ್ಯಮ ವರ್ಗದ ಮನೆಗಳ ಸಮಸ್ಯೆ, ಸಮಾಧಾನ, ಸಿಡುಕು, ಸಿಟ್ಟು, ಸರಸ-ವಿರಸ, ಹೋರಾಟ, ಆಸೆ-ನಿರಾಸೆ, ಮೌಲ್ಯಗಳ ಜೊತೆಗೆ ಸಾಮಾಜಿಕ ಸಮಸ್ಯೆಯೊಂದನ್ನು ಕೂಡಾ ಬಿಂಬಿಸುವ ಸೀತಾರಾಂ ಈ ಬಾರಿ ಯಾವ ವಿಷಯ ಆರಿಸಿಕೊಂಡಿದ್ದಾರೆ ಅನ್ನೋದು ಸಧ್ಯಕ್ಕೆ ಕುತೂಹಲ. ಮುಕ್ತ-ಮುಕ್ತ ಯಶಸ್ವಿಯಾಗಲಿ ಅನ್ನೋದು ಹಾರೈಕೆ....ವಿಭಿನ್ನವಾಗಿರಲಿ ಅನ್ನೋದು ನಿರೀಕ್ಷೆ.

 CAPÀUÀ¼ÀÄ 3

( 5 – CvÀÄåvÀÛªÀÄ , 4 – GvÀÛªÀÄ , 3 – ¸ÁzsÁgÀt, 2 PÀ¼À¥É , 1 wÃgÁ PÀ¼À¥É )

ನಾಗಶೇಖರ್ ನಿರ್ದೇಶನದ ಅರಮನೆ ಚಿತ್ರ ನೋಡಿ ಹೊರಬಂದ ಮೇಲೆ ಅನ್ನಿಸಿದ್ದಿದು. ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರದ ಕುರಿತು ಕೇಳಿ ಬಂದ ಅಪಾರ ಮೆಚ್ಚುಗೆಯ ಮಾತುಗಳು ಮತ್ತು ನಾಗಶೇಖರ್‌ರ ಅಪಾರ ಪರಿಶ್ರಮದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದ ವಿವರಣೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅಪಾರ ನಿರೀಕ್ಷೆ ಇಟ್ಟುಕೊಂಡು ಚಿತ್ರ ನೋಡಲು ಹೋದರೆ ಚಿತ್ರ ನೋಡಿ ಬಂದ ಮೇಲೆ ಅದರಲ್ಲಿ ಅರ್ಧದಷ್ಟು ಮಾತ್ರ ತೃಪ್ತಿ ಸಿಕ್ಕ ಸಮಾಧಾನ ಇನ್ನರ್ಧ ಅಸಮಾಧಾನ. ಹಾಗಂತ ಚಿತ್ರ ತೀರಾ ಕಳಪೆಯಾಗೇನೂ ಇಲ್ಲ. ಆದರೆ ಪ್ರಥಮಾರ್ಧ ನೋಡಿದ ಮೇಲೆ ಮನಸ್ಸಿನಲ್ಲಿರುವ ಖುಷಿ ಚಿತ್ರ ಮುಗಿದ ಮೇಲೆ ಉಳಿಯೋದಿಲ್ಲ ಅನ್ನೋದು ಅಷ್ಟೇ ಸತ್ಯ. ಮಧ್ಯಂತರದ ನಂತರದ ಎಳೆತವನ್ನು ಸಹಿಸುವ ತಾಳ್ಮೆ ಇದ್ದರೆ ಒಮ್ಮೆ ನೋಡಲು ಅಡ್ಡಿಯಿಲ್ಲ.

 

ಚಿತ್ರದ ಹೆಸರೇ ಹೇಳುವಂತೆ ಅದೊಂದು ಅರಮನೆಯಂತಹ ಮನೆಯ ಸುತ್ತ ಹೆಣೆದ ಕಥೆ. ಇಡೀ ಅರಮನೆಯಲ್ಲಿ ಇರೋದು ಅರಮನೆಯ ರಾಜ  ರಾಜಶೇಖರ್ ಅರಸ್(ಅನಂತ್ ನಾಗ್) ಮತ್ತು ಅವರ ಸೇವಕ ಬಸಯ್ಯ(ಕರಿಬಸವಯ್ಯ). ಗತಿಸಿ ಹೋದ ಹೆಂಡತಿಯ ನೆನಪಲ್ಲೇ ಕೊರಗುತ್ತಾ, ಮೂರು ಹೊತ್ತೂ ಮದಿರೆಯ ಮತ್ತಲ್ಲೇ ತೇಲುತ್ತಾ ಇರುವ ಅರಸ. ಅಲ್ಲಿಗೆ ಫೋಟೋ ತೆಗೆಯೋಕೆ ಬರೋದು ಅರುಣ ಅನ್ನೋ ಹೆಸರಿನ ಗಣೇಶ. ತಾತ.. ತಾತ.. ಅಂತ ಕರೆಯುವ, ಚಿನುಕುರುಳಿಯಂತೆ ಮಾತಾಡುತ್ತ ಕತ್ತಲೆ ತುಂಬಿದ ಅರಮನೆಗೆ ಅರುಣನಿಂದ ನವ ಅರುಣೋದಯ. ತಮ್ಮ ಎಂದಿನ ಲವಲವಿಕೆಯಿಂದ ಪಂಚಿಂಗ್ ಮಾತುಗಳಿಂದ ಅರಸ್‌ಗೆ ಮಾತ್ರವಲ್ಲದೆ ವೀಕ್ಷಕರಿಗೂ ಅರುಣ ಇಷ್ಟವಾಗುತ್ತಾನೆ. ತಾತನ ನೋವಿಗೆ ಕಿವಿಯಾಗುತ್ತಾನೆ. ನಗು ನಗು ಅಂತ ನಗೆಯ ಮಂತ್ರ ಹೇಳುತ್ತಾ ಚಾರ್ಲಿ ಚಾಪ್ಲಿನ್ , ರಾಜ್ ಕಪೂರ್ ಏನೆಲ್ಲಾ ಆಗಿ ಬಿಡುತ್ತಾನೆ.

 

ಮರಣಶಯ್ಯೆಯಲ್ಲಿದ್ದ ಪತ್ನಿಯ ಮಾತಿನಂತೆ ಮದುವೆಯಾಗಲು ಹೊರಟ ಅರಸ್ ಮಕ್ಕಳೆಲ್ಲಾ ಇದೇ ಕಾರಣಕ್ಕೆ ದೂರಾಗಿ…ಅರಮನೆಯಲ್ಲಿ ಅರಸ್ ಏಕಾಂಗಿ. ಅವರನ್ನೆಲ್ಲಾ ಅರಮನೆಯಲ್ಲಿ ಒಂದಾಗಿಸಿ ಫ್ಯಾಮಿಲಿ ಫೋಟೋ ತೆಗೆಯಬೇಕೆನ್ನೋ ತಾತನ ಆಸೆಗೆ ಅರುಣ ಒತ್ತಾಸೆಯಾಗುತ್ತಾನೆ..ಭರವಸೆ ತುಂಬುತ್ತಾನೆ. ಈ ಭರವಸೆ ಈಡೇರಿಸಲು ಅರುಣನ ಹುಡುಕಾಟ, ನಡು-ನಡುವಲ್ಲಿ ಸ್ವಲ್ಪ ಹುಡುಗಾಟ, ಅರಸ್ ಹಿರೀ ಮಗಳು ಭಾವೀ ಡಾಕ್ಟರ್ ಜೊತೆ ಅಲೆದಾಟ-ಚೆಲ್ಲಾಟ, ಆಕೆ ಬೇರೆಯವನ ಪ್ರೇಮದಲ್ಲಿ ಮುಳುಗಿದವಳೆಂದು ತಿಳಿದಾಗ ಪರದಾಟ, ಆಮೇಲೆಲ್ಲಾ ಬರೀ ದೊಂಬರಾಟ !! ಇದಿಷ್ಟು ಚಿತ್ರದಲ್ಲಿರೋ ಕಥೆಯ ಇಣುಕು ನೋಟ. ಮುಂದೆ……??

 

ಅಭಿನಯದ ವಿಷಯಕ್ಕೆ ಬಂದ್ರೆ ಗಣೇಶ್, ಅನಂತ್ ನಾಗ್‌ಗೆ ಪರಸ್ಪರ ಜಿದ್ದಾಜಿದ್ದಿ ಸ್ಪರ್ಧೆಗೆ ಬಿದ್ದವರಂತೆ ಅಭಿನಯಿಸಿ ಸೈ ಅನ್ನಿಸಿಕೊಂಡರೆ, ರೋಮಾ ಅಭಿನಯ ಅಷ್ಟೇನೂ ರೋಮಾಂಚಕಾರಿಯಾಗಿಲ್ಲ. ಕರಿಬಸವಯ್ಯ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದರೆ, ತಾರಾ, ಅವಿನಾಶ್‌ಗೆ ಹೆಚ್ಚು ಸ್ಕೋಪ್ ಇರ್ಲಿಲ್ಲ. ಚಿತ್ರದ ಮೊದಲಾರ್ಧದ ಯಶಸ್ಸಿನ ಸಿಂಹಪಾಲು ತುಷಾರ್ ರಂಗನಾಥ್ ಸಂಭಾಷಣೆಗೆ ಸಲ್ಲುತ್ತದೆ; ಕೆಲವು ಡೈಲಾಗುಗಳು ಪಂಚ್‌ನಿಂದಾಗಿ ಮನಸ್ಸಲ್ಲಿ ನಿಲ್ಲುತ್ತವೆ. ಕವಿರಾಜ್ ಬರೆದ ಕವಿತೆಯಂತಹ ಹಾಡು ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ…ಚಿತ್ರ ಮುಗಿಸಿ ಬಂದ ಮೇಲೂ ಮನಸ್ಸಿನಲ್ಲಿ ಉಳಿಯುತ್ತದೆ. ನಗೆ ನಗೆ ಹಾಡು ಕೂಡಾ ಪರವಾಗಿಲ್ಲ. ಕೊಲ್ಲೇ ನನ್ನನ್ನು.. ಹಾಡಲ್ಲಿ ಹಾಡುಗಾರ-ಸಂಗೀತಗಾರ ಗುರುಕಿರಣ್ ಇಷ್ಟವಾಗುತ್ತಾರೆ. ಹಾಗಾದರೆ ಚಿತ್ರ ಎಡವಿದ್ದೆಲ್ಲಿ ಅಂತೀರಾ? ಮೊದಲನೆಯದಾಗಿ ಗಟ್ಟಿ ಚಿತ್ರ ಕಥೆ ಆಯ್ಕೆ ಮಾಡದೆ ಇರುವಲ್ಲಿ. ಎರಡನೆಯದಾಗಿ ಭಾವನಾತ್ಮಕ ಸನ್ನಿವೇಶಗಳು ತೀರಾ ಪ್ರೇಕ್ಷಕರ ಸಹನೆ ಮೀರುವಷ್ಟು ಎಳೆದಾಡಿರುವಲ್ಲಿ. ಅಲ್ಲದೆ ದ್ವಿತೀಯಾರ್ಧದ ಕಥೆಯ ಜಾಡು ಮಾಮೂಲಿಯಾಗಿದ್ದು ಎಲ್ಲರೂ ಊಹಿಸಿದಂತೆ ನಡೆಯುವುದು ಕೂಡಾ ಚಿತ್ರವನ್ನು ಸಾಮಾನ್ಯವಾಗಿಸಿದೆ ಅಂತ ನನ್ನ ಅನಿಸಿಕೆ. ಡೈಲಾಗು, ಹಾಡು ಎಷ್ಟೇ ಚೆನ್ನಾಗಿದ್ರೂ ಕೂಡಾ ಗಟ್ಟಿ ಕಥೆಯ ತಳಪಾಯ ಇದ್ದರೆ ಮಾತ್ರ ಅರಮನೆ ಕಟ್ಟಬಹುದೇ ಹೊರತು ಮಾತಿನಲ್ಲೇ ಮನೆ ಕಟ್ಟೋಕಾಗುತ್ತಾ ಹೇಳಿ?

 

ಒಟ್ಟಾರೆಯಾಗಿ ನಾಗಶೇಖರ್ ಪ್ರಥಮ ನಿರ್ದೇಶನದ ಚಿತ್ರ ಸಾಕಷ್ಟು ನ್ಯೂನ್ಯತೆಯ ಹೊರತಾಗಿಯೂ ಉತ್ತಮ ಪ್ರಯತ್ನ ಅಂತ ಹೇಳಲಡ್ಡಿಯಿಲ್ಲ. ಗಣೇಶ್, ಅನಂತ್ ಅಭಿನಯ ನೋಡೋಕೆ, ಗುರುಕಿರಣ್ ಸಂಗೀತ, ಕವಿರಾಜ್, ಕಾಯ್ಕಿಣಿ ಪದಗಳ ಮಾಧುರ್ಯ ಸವಿಯೋಕೆ ಅಂತ ಟೈಂಪಾಸ್ಗಾಗಿ ಒಂದ್ಸಲ ನೋಡಬಹುದು. ಆದ್ರೆ ಫಸ್ಟ್ ಹಾಫ್ ನೋಡಿ ಸೆಕೆಂಡ್ ಹಾಫ್ ಬಗ್ಗೆ ಇಲ್ಲದ ನಿರೀಕ್ಷೆ ಮಾತ್ರ ಇಟ್ಕೋಬೇಡಿ ಅನ್ನೋ ಎಚ್ಚರಿಕೆಯನ್ನು ಮಾತ್ರ ಮರೆಯಬೇಡಿ.

                                                           ವಿಜಯ್ ರಾಜ್ ಕನ್ನಂತ್