Archive for the ‘ಕವನ’ Category

ಹೊಸದೇನೂ ಹುಟ್ಟುತ್ತಿಲ್ಲವೆನ್ನೋ
ಹಳಹಳಿಕೆಯಲ್ಲಿ
ಹಾದುಬಂದ ಹಾದಿಯುದ್ದದ
ಹಳವಂಡದಲ್ಲಿ

ಹೊಮ್ಮೀತಾದರೂ ಹೇಗೆ
ಹೊಸ ಹೂಗಂಧ
ಹೊಸೆಯುವುದಾದರೂ ಹೇಗೆ
ಹೊಸ ಹಾಡೊಂದ
ಹುರುಪಾದರೂ ಹುಟ್ಟೀತು ಹೇಗೆ
ಹುಡಿಹುಡಿಯಾಗಿರೆ ಹುಮ್ಮಸ್ಸು

ಹವಿಸ್ಸಾಗಿ ಹೋದ ಹಳತೆಲ್ಲದರ
ಹೋಮದ ಹೊಗೆಕವಿದ ಹಂದರದಿ
ಹನಿಗಣ್ಣಾಗಿ ಹಂಬಲಿಸುತ
ಹೊಸ ಹಾದಿ ಹುಡುಕುತ್ತಿಹೆ

ಹೊಳೆದಂಡೆಯ ಹಾದಿಕಾಯುತ್ತಾ
ಹರಹು ಹರಿವಿನಲಿ ಹೊಳೆದಾಟಲು
ಹರಿಗೋಲೊಂದ ಹುಡುಕುತ್ತಾ
ಹುಟ್ಟು ಹಾಕಲು-ಹೊಸ ಹುಟ್ಟಾಗಲು!!

ಕವಲೊಡೆದ ಹಾದಿಯಲಿ
ಬೇರಾಯಿತು ಹೆಜ್ಜೆ
ಭರಿಸಲಾಗದೇ ಹೋಯ್ತು
ಸಂಬಂಧದ ವಜ್ಜೆ

ಬೇರಾದ ಮೇಲೂ ಹಾಳು
ಮನಸಿಗಿಲ್ಲ ಲಜ್ಜೆ
ಆಲಿಸುತಿದೆ ಕಿವಿಗೊಟ್ಟು
ನಿನ್ನಡಿ ಸಪ್ಪಳದ ಗೆಜ್ಜೆ

Romantic_and_Atmospheric_Graveyard_(World’s_Best_Music,_1900)

ಚರಿತ್ರೆಗೇನಾದರೂ ಬಾಯಿ ಬಂದು
ತನ್ನ ಪದರುಗಳಡಿಯಲ್ಲಿ ಹುದುಗಿ ಹೋದ
ಅದೆಷ್ಟೋ ಘಟನೆಗಳನ್ನೆಲ್ಲಾ ಬಿಡಿಸಿಡುವಂತಿದ್ದರೆ

ಪದ-ಸಾಲು-ಅಕ್ಷರ-ಮಾತುಗಳಲ್ಲಿ ಬಣ್ಣಿಸಲಾಗದೇ ಹೋದ
ಮನದ ಮೂಕ ಮರ್ಮರಗಳನ್ನೆಲ್ಲಾ ಬಿತ್ತರಿಸುವಂತಿದ್ದರೆ

ಹಾಡಾಗುವ ಮೊದಲೇ ಉಸಿರೇ ಕಳಕೊಂಡು
ಮೌನ ತಳೆದು ಹೋದ ರಾಗ-ವಿರಾಗಗಳು ಮೈದಳೆಯುವಂತಿದ್ದರೆ

ಬಾಯಿ ಸತ್ತು ಹೋದ ಭೂತದ ಗೋರಿಯ ಮೇಲೆ
ಎರಡು ಹುಂಡು ನೀರು ಸುರಿಸುವಷ್ಟಾದರೂ
ವರ್ತಮಾನವು ಕರುಣಾಮಯಿಯಾಗಿದ್ದರೆ
ಅಂತರಾತ್ಮವು ಭವಿಷ್ಯದಲ್ಲಾದರೂ ಮಗ್ಗುಲು ಬದಲಿಸಿ ನಿಡುಸುಯ್ಯುವುದು ತಪ್ಪುತ್ತಿತ್ತು

ಎದೆಯ ಶರಧಿಯೊಳಗೆ ನಿರಂತರವಾಗಿ
ಅಲೆ ಅಲೆಯಾಗಿ ಅಪ್ಪಳಿಸುವ
ಭಾವ ತರಂಗಗಳನೆಲ್ಲಾ ಜೋಡಿಸಿ
ಲೆಕ್ಕ ಹಾಕಲು ಹವಣಿಸಿ ಕುಳಿತಿದ್ದೆ ಮೊನ್ನೆ

ಸಂಚಲನಗಳ ಸಂಕಲನ ಮಾಡಿ
ಸುಸ್ತಾದ ನಿರರ್ಥಕ ನಿಟ್ಟುಸಿರು ಸಾರುತ್ತಿತ್ತು
ಮೊದಲಿಗಿದ್ದ ನೀ-“ಒಂದು” ಇರದ ಮೇಲೆ
ಭಾವ ಬರಿದೇ ನೆನಪಿನ ಸಾಲಾಗಿ
ಅಣಕಿಸುವ ಬೆಲೆಯಿರದ ‘ಸೊನ್ನೆ’!!

ಭಾವಗಳ ತೂರಿಬಿಟ್ಟೆ ಸ್ವಚ್ಛಂದವಾಗಿ
ಆಕಾಶದ ಎಲ್ಲೆ ಮೀರಿ ವಿಹರಿಸಲೆಂದು

ತೋರಿಕೆಯ ಬಿಂಕ-ಬಿಗುಮಾನಗಳ
ಹೊಸ್ತಿಲು ದಾಟಿ ಮುನ್ನುಗ್ಗಲೆಂದು

ಚೌಕಟ್ಟಿನ ಪಂಜರಗಳ ಸರಳ ಬಂಧಿಯಾಗದೆ
ಗರಿಬಿಚ್ಚಿ ಹಾರಿ ಹಾಯಾಗಿರಲೆಂದು

ಕಟ್ಟುಪಾಡುಗಳ ಕಬ್ಬಿಣದ ಕೋಟೆಯ
ಕಂದಾಚಾರಗಳ ಶೃಂಖಲೆಯಲಿ ಸಿಲುಕದಿರಲೆಂದು

ಮುಕ್ತವಾಗಿಸಿಬಿಟ್ಟೆ ಸಕಲ ಪಾಶ-ಅಂಕುಶಗಳಿಂದ
ಬರಿದೇ ಇರಿವವರ ಶೂಲಕೆ ಘಾಸಿಯಾಗದಿರಲೆಂದು

ಸ್ವಾತಂತ್ರ್ಯ ಸ್ವೇಚ್ಛೆಯಾಯಿತೋ… ಅನುಮಾನ!
ನನ್ನೇ ಸುತ್ತುವರಿದು ಕಾಡುತಿವೆಯಲ್ಲಾ…

ಗಾಯವೇ ಇಲ್ಲದೆ ನೋಯುವ ಮನಸಿಗೆ
ಯಾತನೆಯು ಮಧುರ ಎಂದ ಕವಿ ಕಲ್ಪನೆ
ನೀಡಬಲ್ಲುದೇ ಸಾಂತ್ವನ… ಹುಸಿಯಾದರೂ ರವಷ್ಟು…?