ಬಲ್ಲವರ ಮಾತೊಂದಿದೆ ನೊಡಿ… ನದಿ ಮೂಲ, ಋಷಿ ಮೂಲ ಸ್ತ್ರೀ ಮೂಲ ಹುಡುಕಲು ಹೋಗುವ ‘ಮೂಲ’ವ್ಯಾಧಿ ಒಳ್ಳೇದಲ್ಲ ಅಂತ. ಆದ್ರೆ ಪದ ಮೂಲ ಹುಡುಕಲು ಹೋಗೋದ್ರಲ್ಲಿ ತಪ್ಪೇನಿಲ್ಲ ಬಿಡಿ. ಅದರಲ್ಲೂ ಅನ್ಯಭಾಷೆ-ದೇಶ-ಸಂಸ್ಕೃತಿಯಿಂದ ಬಂದ ಪದಗಳ ಮೂಲ ಹುಡುಕುತ್ತಾ ಹೋದಂತೆಲ್ಲಾ, ಸಿಗುವ ಕತೆಗಳು ತುಂಬಾ ಸ್ವಾರಸ್ಯಕರವಾಗಿರುತ್ತೆ. ಅರೆ! ಹೌದಲ್ಲ.. ನಮ್ಮ ನಿತ್ಯ ಬಳಕೆಯಲ್ಲಿ ಹಾಸುಹೊಕ್ಕಾಗಿರುವ ಈ ವಿಶಿಷ್ಟ ಪದಗಳ ಹಿಂದೆ ಇಷ್ಟೆಲ್ಲಾ ಕತೆ ಇದೆಯಾ, ಈ ಕತೆಗಳ ಅಸಲಿಯತ್ತಾದರೂ ಏನು ಎಂದು ಹುಡುಕುತ್ತಾ, ಈ ಪದ ಪ್ರಪಂಚದ ರೋಚಕ ಪಯಣದಲ್ಲಿ ಸಾಗುತ್ತಿರುವಂತೆಯೇ ನಿಮ್ಮ ಮನದಲ್ಲಿ ಮೂಡುವ ಪ್ರಶ್ನೆ ಒಂದೇ … ಹೀಗೂ ಉಂಟೆ!!
ಅನ್ಯಭಾಷೆಯಿಂದ ಬಂದ ಪದಗಳ ಪದತಲದ ಜಾಡನ್ನರಸುತ್ತಾ ಪದಯಾತ್ರೆ ಹೊರಟು, ಕುತೂಹಲಕಾರಿ ಅನ್ನಿಸುವ some ಪದಗಳನ್ನು ಸಂಪಾದಿಸಿ, ಆ ಪದಗಳ ಹಿಂದಿನ ಪರದೆಯ ಪದರಪದರವಾಗಿ ಬಿಡಿಸುತ್ತಾ ಹೊರಟವರು ಪಾರ್ವತೀಶ. ಈ ಪದ ಸಂಪದಕ್ಕೆ ಅನ್ವರ್ಥವಾಗುವಂತೆ ಇಟ್ಟ ಹೆಸರು Someಪದ. ಅನ್ಯಭಾಷೆಯಿಂದ ಬಂದು, ಕನ್ನಡದ್ದೇ ಪದಗಳೋ ಅನ್ನುವ ಮಟ್ಟಿಗೆ ನಮ್ಮ ಆಡುನುಡಿಯಲ್ಲಿ, ಬರವಣಿಗೆಗಳಲ್ಲಿ ಸೇರಿಹೋದ 75 ಪದಗಳ ಜನ್ಮಕುಂಡಲಿಯನ್ನು ಈ ಪುಸ್ತಕದಲ್ಲಿ ತುಂಬಾ ಸ್ವಾರಸ್ಯಕರವಾಗಿ ಜಾಲಾಡಿದ್ದಾರೆ. ರಿಕ್ಷಾ, ಕಿಯೋಸ್ಕ್, ಜಾಕ್ಪಾಟ್, ಮಾಫಿಯಾ, ಬೊಂಬಾಟ್,ಅಟ್ಲಾಸ್, ಬನಿಯನ್, ಖಾಕಿ, ಕಮ್ಯಾಂಡೋ, ಹಾಸ್ಪಿಟಲ್, ಸೋಡ,ಬಾಟಾ, ಟಿಫಿನ್, ಡಕೋಟಾ, ಓ.ಕೆ.,ಚೌಚೌ, ಕಾಂಗ್ರೆಸ್ ಗಿಡ, ಕೆಚಪ್,ಟ್ಯಾಕ್ಸಿ, ಆಯಾ, ಮಟನ್,ಸಂಪ್, ಬಾಕ್ಸ್ ಆಫಿಸ್, ಕ್ಯೂ, ಟಿಕೆಟ್, ಶಾಂಪೂ,ಪ್ಯೂನ್, ಬಿಕಿನಿ, ರೋಲ್ಕಾಲ್, ಲಾಟರಿ,ಬಂಗಲೆ, ರಂ,ಸಫಾರಿ, ಕರ್ಫ್ಯೂ, ಬೋನಸ್, ಬಿಸ್ಕತ್, ಕೇಡಿ…. ಹೀಗೆ ನಾವೆಲ್ಲರೂ ಪ್ರತಿದಿನ ಬಳಸುವ ಪದಗಳ ‘ಜನ್ಮಾಂತರ’ದ ಪಯಣದ ಬಗ್ಗೆ ಬೊಂಬಾಟಾದ ವಿವರಣೆ ಸಿಗುತ್ತದೆ. Juggernaut ಪದದ ಹಿಂದೆ ಪುರಿಯ ಜಗನ್ನಾಥ ರಥಯಾತ್ರೆಯ ಕೊಂಡಿಯಿರುವ ಬಗ್ಗೆ ಓದಿದಾಗ ನಿಜಕ್ಕೂ ಆಶ್ಚರ್ಯವೆನಿಸದೇ ಇರದು.
ಪಾರ್ಥೇನಿಯಂ ಗಿಡ ಅಂದ್ರೆ ತಟ್ಟನೆ ಯಾವುದು ಅಂತ ಗೊತ್ತಾಗದೇ ಇರಬಹುದು, ಆದರೆ ಕಾಂಗ್ರೆಸ್ ಗಿಡ ಅಂದಾಕ್ಷಣ ಓ ಅದಾ.. ಅನ್ನುವ ಪರಿಚಯದ ಉದ್ಘಾರ ಹೊರಬರುತ್ತದಷ್ಟೆ? ಈ ಕಳೆ ಗಿಡಕ್ಕೆ ಈ ನಾಮಕರಣ ಆಗಿದ್ದು ಹೇಗೆ ಗೊತ್ತಾ? ನೆಹರೂ ಕಾಲದಲ್ಲಿ ಆಫ್ರಿಕಾದ ಮಡ್ಗಾಸ್ಕರ್ನಿಂದ ಟನ್ಗಟ್ಟಲೆ ಕಲ್ಲಿದ್ದಲನ್ನು ಆಮದು ಮಾದಿಕೊಳ್ಳಲಾಗಿತ್ತಂತೆ. ಆಗ ಹೇಗೋ ಏನೋ, ಈ ಕಳೆಯ ಗಿಡದ ವಿಷಬೀಜ ಹಡಗಿನಲ್ಲಿ ಜಾಲಿಟ್ರಿಪ್ ಬಂದು, ಇಂಡಿಯಾದ ಬೆಡಗಿಗೆ ಮನಸೋತು ಇಲ್ಲೇ ಝಂಡಾ ಊರಿದವು, ಮಾತ್ರವಲ್ಲ ಆಗಿನ್ನೂ ಕುಟುಬ ಯೋಜನೆ ಜಾರಿಯಲ್ಲಿ ಇರದಿದ್ದ ಕಾರಣ, ಮನಸೋ ಇಚ್ಛೆ ತಮ್ಮ ಸಂತಾನ ಬೆಳೆಸಿ, ದೇಶದ ತುಂಬೆಲ್ಲಾ ತಮ್ಮ ವಂಶವೃಕ್ಷ(ಸಸ್ಯ)ದ ಬೇರನ್ನೂರಿದವು. ಮುರಿದರೂ ಕಿತ್ತೆಸೆದರೂ ನಾಶವಾಗದ ಈ ಗಿಡದ ಕುರಿತು ಪಾರ್ಲಿಮೆಂಟಿನಲ್ಲಿ ಒಮ್ಮೆ ಸದಸ್ಯರೊಬ್ಬರು ಪ್ರಸ್ತಾಪಿಸಿದಾಗ, ನೆಹರೂ ತಮಾಷೆಯಾಗಿ “ಹಾಗಾದ್ರೆ ಈ ಗಿಡ ಕಾಂಗ್ರೆಸ್ ಪಾರ್ಟಿ ತರಹ ಅನ್ನಿ, ವಿರೋಧಪಕ್ಷಗಳು ಎಷ್ಟೇ ಪ್ರಯತ್ನಿಸಿದರೂ ನಾಶವಾಗದೆ ಹುಲುಸಾಗಿ ಬೆಳೆದು ನಿಂತಿದೆ” ಅಂದರಂತೆ. ಅಂದಿನಿಂದ ಈ ಕಳೆಯ ಗಿಡಕ್ಕೆ ಖಾಯಂ ಆಗಿ ಈ ಅಡ್ಡ ಹೆಸರು ಬಿತ್ತಂತೆ. ಇಂತಹ ಹಲವಾರು ರುಚಿಕಟ್ಟಾದ ವಿವರಣೆಯ ಸಹಿತ ಪದಗಳನ್ನು ಪದಾರ್ಥದಂತೆ ಚಪ್ಪರಿಸಬೇಕಿದ್ರೆ ಸಂ-ಪದ ಲೋಕದಲ್ಲೊಂದು ಸುತ್ತು ಹೊಡೆದು ಬನ್ನಿ.
ಭಾಷಾ ವಿದ್ವಂಸರ ಹಿರಿತನ ಹಾಗೂ ವಿದ್ವತ್ತಿನ ಎದುರು ಈ ಬರಹ ಸಣ್ಣ ಸಾಂಸ್ಕೃತಿಕ ಚೇಷ್ಟೆ ಅಂತ ಬೆನ್ನುಡಿಯಲ್ಲಿ ಸ್ವತಹ ಪಾರ್ವತೀಶ ಹೇಳಿಕೊಂಡಿರುವರಾದರೂ, ಪದಗಳ ಆಸಕ್ತಿ ಕುತೂಹಲವನ್ನಿಟ್ಟುಕೊಂಡು ಚಿಂತಿಸುವ ಪದಾರ್ಥ ಚಿಂತಾಮಣಿಗಳಿಗೆ ಸುಗ್ರಾಸ ಭೋಜನ ಈ ಪುಸ್ತಕ ಅನ್ನುವುದರಲ್ಲಿ ಎರಡು ಮಾತಿಲ್ಲ.
ಪುಸ್ತಕ : some-ಪದ
ಲೇಖಕರು : ಪಾರ್ವತೀಶ
ಪುಟಗಳು : 172+12
ಬೆಲೆ : 80