Archive for the ‘ಭಾಷೆ’ Category

ಮುಂದೊಂದು ದಿನ ಕನ್ನಡ ಕವಿತೆ ಹೀಗಿರಬಹುದೇನೋ..

ನಾನೆಷ್ಟು ಪೋಸ್ಟಿದರು ನೀ ಕಮೆಂಟಲೇ ಇಲ್ಲ

ನಾನೆಷ್ಟು ಬ್ಲಾಗಿದರೂ ನೀ ಬಾಗ್ಲು ತೆಗಿಲಿಲ್ಲ

ನಾನೆಷ್ಟು ಪಿಂಗಿದರೂ ನೀ ಪಿಂಗ್-ಬ್ಯಾಕಲೆ ಇಲ್ಲ

ನಾನೆಷ್ಟು ಪೋಕಿದರೂ ನೀ ನೀಕಲೆ ಇಲ್ಲ

ನಾನೆಷ್ಟು ಟ್ವೀಟಿದರೂ ನೀ ಚಾಟಲೆ ಇಲ್ಲ

ನಾನೆಷ್ಟು ಮೆಯ್ಲಿದರೂ ನೀ ರಿಪ್ಲೈಸಲೇ ಇಲ್ಲ

ನಾನೆಷ್ಟು ಕಾಲಿದರೂ ನೀ ಪಿಕ್ಕಲೆ ಇಲ್ಲ

ನಾನೆಷ್ಟು ಎಸ್ಸೇಮೆಸ್ಸಿದರೂ ನಿನ್ನ ಮೆಸ್ಸೇಜೆ ಇಲ್ಲ

ಹುಡುಗಿ ನಿನ್ನ ಹುಡುಕಿ(ಸರ್ಚಿ) ನಾ ಅಲೆಯದ ಸೈಟುಗಳೇ ಇಲ್ಲ

ಆರ್ಕುಟ್, ಫೇಸ್ಬುಕ್,ಟ್ವೀಟರ್,ಗೂಗಲ್ ಪ್ಲಸ್ಸಿನಲಿ ನೀ ಸಿಗಲಿಲ್ಲ

ಅಕೌಂಟ್ ಓಪನ್ ಆಗ್ಲೇ ಒಂದ್ ವೀಕೂ ಆಗಲಿಲ್ಲ

ನನ್ನ ಹಾರ್ಟಿನ ನೆಟ್ವರ್ಕ್ನನಿಂದ ಆಗ್ಲೇ ಲಾಗೌಟ್ ಆದೆಯಲ್ಲ  🙂

ಬಲ್ಲವರ ಮಾತೊಂದಿದೆ ನೊಡಿ… ನದಿ ಮೂಲ, ಋಷಿ ಮೂಲ ಸ್ತ್ರೀ ಮೂಲ ಹುಡುಕಲು ಹೋಗುವ ‘ಮೂಲ’ವ್ಯಾಧಿ ಒಳ್ಳೇದಲ್ಲ ಅಂತ. ಆದ್ರೆ ಪದ ಮೂಲ ಹುಡುಕಲು ಹೋಗೋದ್ರಲ್ಲಿ ತಪ್ಪೇನಿಲ್ಲ ಬಿಡಿ. ಅದರಲ್ಲೂ ಅನ್ಯಭಾಷೆ-ದೇಶ-ಸಂಸ್ಕೃತಿಯಿಂದ ಬಂದ ಪದಗಳ ಮೂಲ ಹುಡುಕುತ್ತಾ ಹೋದಂತೆಲ್ಲಾ, ಸಿಗುವ ಕತೆಗಳು ತುಂಬಾ ಸ್ವಾರಸ್ಯಕರವಾಗಿರುತ್ತೆ. ಅರೆ! ಹೌದಲ್ಲ.. ನಮ್ಮ ನಿತ್ಯ ಬಳಕೆಯಲ್ಲಿ ಹಾಸುಹೊಕ್ಕಾಗಿರುವ ಈ ವಿಶಿಷ್ಟ ಪದಗಳ ಹಿಂದೆ ಇಷ್ಟೆಲ್ಲಾ ಕತೆ ಇದೆಯಾ, ಈ ಕತೆಗಳ ಅಸಲಿಯತ್ತಾದರೂ ಏನು ಎಂದು ಹುಡುಕುತ್ತಾ, ಈ ಪದ ಪ್ರಪಂಚದ ರೋಚಕ ಪಯಣದಲ್ಲಿ ಸಾಗುತ್ತಿರುವಂತೆಯೇ ನಿಮ್ಮ ಮನದಲ್ಲಿ ಮೂಡುವ ಪ್ರಶ್ನೆ ಒಂದೇ … ಹೀಗೂ ಉಂಟೆ!!

ಅನ್ಯಭಾಷೆಯಿಂದ ಬಂದ ಪದಗಳ ಪದತಲದ ಜಾಡನ್ನರಸುತ್ತಾ ಪದಯಾತ್ರೆ ಹೊರಟು, ಕುತೂಹಲಕಾರಿ ಅನ್ನಿಸುವ some ಪದಗಳನ್ನು ಸಂಪಾದಿಸಿ, ಆ ಪದಗಳ ಹಿಂದಿನ ಪರದೆಯ ಪದರಪದರವಾಗಿ ಬಿಡಿಸುತ್ತಾ ಹೊರಟವರು ಪಾರ್ವತೀಶ. ಈ ಪದ ಸಂಪದಕ್ಕೆ ಅನ್ವರ್ಥವಾಗುವಂತೆ ಇಟ್ಟ ಹೆಸರು Someಪದ. ಅನ್ಯಭಾಷೆಯಿಂದ ಬಂದು, ಕನ್ನಡದ್ದೇ ಪದಗಳೋ ಅನ್ನುವ ಮಟ್ಟಿಗೆ ನಮ್ಮ ಆಡುನುಡಿಯಲ್ಲಿ, ಬರವಣಿಗೆಗಳಲ್ಲಿ ಸೇರಿಹೋದ 75 ಪದಗಳ ಜನ್ಮಕುಂಡಲಿಯನ್ನು ಈ ಪುಸ್ತಕದಲ್ಲಿ ತುಂಬಾ ಸ್ವಾರಸ್ಯಕರವಾಗಿ ಜಾಲಾಡಿದ್ದಾರೆ. ರಿಕ್ಷಾ, ಕಿಯೋಸ್ಕ್, ಜಾಕ್‌ಪಾಟ್, ಮಾಫಿಯಾ, ಬೊಂಬಾಟ್,ಅಟ್ಲಾಸ್, ಬನಿಯನ್, ಖಾಕಿ, ಕಮ್ಯಾಂಡೋ, ಹಾಸ್ಪಿಟಲ್, ಸೋಡ,ಬಾಟಾ, ಟಿಫಿನ್, ಡಕೋಟಾ, ಓ.ಕೆ.,ಚೌಚೌ, ಕಾಂಗ್ರೆಸ್ ಗಿಡ, ಕೆಚಪ್,ಟ್ಯಾಕ್ಸಿ, ಆಯಾ, ಮಟನ್,ಸಂಪ್, ಬಾಕ್ಸ್ ಆಫಿಸ್, ಕ್ಯೂ, ಟಿಕೆಟ್, ಶಾಂಪೂ,ಪ್ಯೂನ್, ಬಿಕಿನಿ, ರೋಲ್‌ಕಾಲ್, ಲಾಟರಿ,ಬಂಗಲೆ, ರಂ,ಸಫಾರಿ, ಕರ್ಫ್ಯೂ, ಬೋನಸ್, ಬಿಸ್ಕತ್, ಕೇಡಿ…. ಹೀಗೆ ನಾವೆಲ್ಲರೂ ಪ್ರತಿದಿನ ಬಳಸುವ ಪದಗಳ ‘ಜನ್ಮಾಂತರ’ದ ಪಯಣದ ಬಗ್ಗೆ ಬೊಂಬಾಟಾದ ವಿವರಣೆ ಸಿಗುತ್ತದೆ. Juggernaut ಪದದ ಹಿಂದೆ ಪುರಿಯ ಜಗನ್ನಾಥ ರಥಯಾತ್ರೆಯ ಕೊಂಡಿಯಿರುವ ಬಗ್ಗೆ ಓದಿದಾಗ ನಿಜಕ್ಕೂ ಆಶ್ಚರ್ಯವೆನಿಸದೇ ಇರದು.

ಪಾರ್ಥೇನಿಯಂ ಗಿಡ ಅಂದ್ರೆ ತಟ್ಟನೆ ಯಾವುದು ಅಂತ ಗೊತ್ತಾಗದೇ ಇರಬಹುದು, ಆದರೆ ಕಾಂಗ್ರೆಸ್ ಗಿಡ ಅಂದಾಕ್ಷಣ ಓ ಅದಾ.. ಅನ್ನುವ ಪರಿಚಯದ ಉದ್ಘಾರ ಹೊರಬರುತ್ತದಷ್ಟೆ? ಈ ಕಳೆ ಗಿಡಕ್ಕೆ ಈ ನಾಮಕರಣ ಆಗಿದ್ದು ಹೇಗೆ ಗೊತ್ತಾ? ನೆಹರೂ ಕಾಲದಲ್ಲಿ ಆಫ್ರಿಕಾದ ಮಡ್‌ಗಾಸ್ಕರ್‌ನಿಂದ ಟನ್‌ಗಟ್ಟಲೆ ಕಲ್ಲಿದ್ದಲನ್ನು ಆಮದು ಮಾದಿಕೊಳ್ಳಲಾಗಿತ್ತಂತೆ. ಆಗ ಹೇಗೋ ಏನೋ, ಈ ಕಳೆಯ ಗಿಡದ ವಿಷಬೀಜ ಹಡಗಿನಲ್ಲಿ ಜಾಲಿಟ್ರಿಪ್ ಬಂದು, ಇಂಡಿಯಾದ ಬೆಡಗಿಗೆ ಮನಸೋತು ಇಲ್ಲೇ ಝಂಡಾ ಊರಿದವು, ಮಾತ್ರವಲ್ಲ ಆಗಿನ್ನೂ ಕುಟುಬ ಯೋಜನೆ ಜಾರಿಯಲ್ಲಿ ಇರದಿದ್ದ ಕಾರಣ, ಮನಸೋ ಇಚ್ಛೆ ತಮ್ಮ ಸಂತಾನ ಬೆಳೆಸಿ, ದೇಶದ ತುಂಬೆಲ್ಲಾ ತಮ್ಮ ವಂಶವೃಕ್ಷ(ಸಸ್ಯ)ದ ಬೇರನ್ನೂರಿದವು. ಮುರಿದರೂ ಕಿತ್ತೆಸೆದರೂ ನಾಶವಾಗದ ಈ ಗಿಡದ ಕುರಿತು ಪಾರ್ಲಿಮೆಂಟಿನಲ್ಲಿ ಒಮ್ಮೆ ಸದಸ್ಯರೊಬ್ಬರು ಪ್ರಸ್ತಾಪಿಸಿದಾಗ, ನೆಹರೂ ತಮಾಷೆಯಾಗಿ “ಹಾಗಾದ್ರೆ ಈ ಗಿಡ ಕಾಂಗ್ರೆಸ್ ಪಾರ್ಟಿ ತರಹ ಅನ್ನಿ, ವಿರೋಧಪಕ್ಷಗಳು ಎಷ್ಟೇ ಪ್ರಯತ್ನಿಸಿದರೂ ನಾಶವಾಗದೆ ಹುಲುಸಾಗಿ ಬೆಳೆದು ನಿಂತಿದೆ” ಅಂದರಂತೆ. ಅಂದಿನಿಂದ ಈ ಕಳೆಯ ಗಿಡಕ್ಕೆ ಖಾಯಂ ಆಗಿ ಈ ಅಡ್ಡ ಹೆಸರು ಬಿತ್ತಂತೆ. ಇಂತಹ ಹಲವಾರು ರುಚಿಕಟ್ಟಾದ ವಿವರಣೆಯ ಸಹಿತ ಪದಗಳನ್ನು ಪದಾರ್ಥದಂತೆ ಚಪ್ಪರಿಸಬೇಕಿದ್ರೆ ಸಂ-ಪದ ಲೋಕದಲ್ಲೊಂದು ಸುತ್ತು ಹೊಡೆದು ಬನ್ನಿ.

ಭಾಷಾ ವಿದ್ವಂಸರ ಹಿರಿತನ ಹಾಗೂ ವಿದ್ವತ್ತಿನ ಎದುರು ಈ ಬರಹ ಸಣ್ಣ ಸಾಂಸ್ಕೃತಿಕ ಚೇಷ್ಟೆ ಅಂತ ಬೆನ್ನುಡಿಯಲ್ಲಿ ಸ್ವತಹ ಪಾರ್ವತೀಶ ಹೇಳಿಕೊಂಡಿರುವರಾದರೂ, ಪದಗಳ ಆಸಕ್ತಿ ಕುತೂಹಲವನ್ನಿಟ್ಟುಕೊಂಡು ಚಿಂತಿಸುವ ಪದಾರ್ಥ ಚಿಂತಾಮಣಿಗಳಿಗೆ ಸುಗ್ರಾಸ ಭೋಜನ ಈ ಪುಸ್ತಕ ಅನ್ನುವುದರಲ್ಲಿ ಎರಡು ಮಾತಿಲ್ಲ.

ಪುಸ್ತಕ                 :           some-ಪದ

ಲೇಖಕರು             :           ಪಾರ್ವತೀಶ

ಪುಟಗಳು              :           172+12

ಬೆಲೆ                   :           80

ಇತ್ತೀಚೆಗೆ ಒಂದು ಒಳ್ಳೆಯ ಪುಸ್ತಕ ಓದಲು ಸಿಕ್ಕಿತ್ತು. ಪೇರೂರು ಜಾರು ಅವರು ಬರೆದಿರುವ ನಿಜಗನ್ನಡ ಅನ್ನುವ ಕೃತಿ. ನಮ್ಮ ಬರಹಗಳಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಎಷ್ಟು ತಪ್ಪುಗಳು ನುಸುಳಿರುತ್ತವೆ (ಬೆರಳಚ್ಚು ದೋಷಗಳನ್ನು ಹೊರತುಪಡಿಸಿ) ಅನ್ನುವುದು ಇದನ್ನು ಓದಿದ ಮೇಲೆ ಗೊತ್ತಾಯ್ತು. ಯಾವ ಶಬ್ದ ಸರಿ, ಅದು ಯಾಕೆ ಸರಿ, ಯಾವ ಪ್ರಭಾವದಿಂದ ಅಥವ ಕಾರಣದಿಂದ ತಪ್ಪಾದ ರೂಪ ಹುಟ್ಟಿಕೊಂಡಿದೆ… ಇವೆಲ್ಲವನ್ನು ಸೂಕ್ತ ಉದಾಹರಣೆಗಳೊಂದಿಗೆ ಸೊಗಸಾಗಿ ತಿಳಿಸಿದ್ದಾರೆ. ಕನ್ನಡದಲ್ಲಿ ಬರೆಯುವವರೆಲ್ಲರೂ ಅಗತ್ಯವಾಗಿ ಓದಲೇಬೇಕಾದ ಪುಸ್ತಕ. ಆದರೆ ಇದು ಪ್ರಕಟವಾಗಿ ಬಹಳ ಕಾಲ ಆಗಿರುವುದರಿಂದ ಪುಸ್ತಕ ಮಳಿಗೆಗಳಲ್ಲಿ ಇನ್ನೂ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಸಿಕ್ಕಿದರೆ ಖಂಡಿತ ಕೊಂಡು ಓದಿ.

 

ಕೆಲವು ಸರಿ-ತಪ್ಪು ಪ್ರಯೋಗಗಳ ಬಗ್ಗೆ ಮಾಹಿತಿಯನ್ನು ಆ ಪುಸ್ತಕದಿಂದ ಹೆಕ್ಕಿ ನಿಮ್ಮ ಮುಂದೆ ಇರಿಸುತ್ತಿದ್ದೇನೆ….ನಿಮಗಾಗಿ…ಮತ್ತು ನನಗಾಗಿ ಕೂಡ! ಇನ್ನು ಮುಂದೆ ನನ್ನ ಬರಹಗಳಲ್ಲಿ ಈ ತಪ್ಪುಗಳು ಆದಷ್ಟು ಕಡಿಮೆ ಆಗಲಿವೆ ಅನ್ನುವ ಭರವಸೆಯೊಂದಿಗೆ….

 

ತಪ್ಪು ಪ್ರಯೋಗ                                          ಸರಿಯಾದ ರೂಪ

 

ನೆನೆಗುದಿಗೆ ಬಿದ್ದಿದೆ                                        ನನೆಗುದಿಗೆ ಬಿದ್ದಿದೆ

 

ಉಚ್ಛ                                                      ಉಚ್ಚ

 

ಅಂತಾರಾಷ್ಟ್ರೀಯ                                         ಅಂತರರಾಷ್ಟ್ರೀಯ

 

ಅಂತರ್ಜಾಲ                                              ಅಂತರಜಾಲ

 

ಜನರು                                                     ಜನ

 

ಮೆಟ್ಟಲು                                                   ಮೆಟ್ಟಿಲು

 

ಗಿಡಗಂಟೆ                                                  ಗಿಡಗಂಟಿ  ( ಗಿಡ + ಕಂಟಿ )

 

ಬಂದ್ಲು                                                     ಬಂದ್ಳು / ಬಂದಳು

 

ಹಠ                                                        ಹಟ

 

ಭತ್ತ                                                        ಬತ್ತ

 

ಗಾಭರಿ                                                    ಗಾಬರಿ

 

ಒಂಭತ್ತು                                                   ಒಂಬತ್ತು

 

ನೋಡುತ್ತಾ *                                             ನೋಡುತ್ತ

 

ಎಲ್ಲಾ *                                                    ಎಲ್ಲ

 

ಕೂಡಾ *                                                  ಕೂಡ

 

ಮೊಟ್ಟ ಮೊದಲು *                                      ಮೊತ್ತ ಮೊದಲು

 

ವಿನಃ , ವಿನಹ *                                           ವಿನಾ

 

ಜತೆ                                                       ಜೊತೆ

 

ಉಡಿಗೆ                                                    ಉಡುಗೆ  

 

ಅಡಿಗೆ                                                     ಅಡುಗೆ

 

ಯೌವ್ವನ                                                  ಯವ್ವನ / ಯೌವನ

 

ಬರ್ತಾಯಿದೆ                                               ಬರ್ತಿದೆ / ಬರುತ್ತಿದೆ

 

ಘಂಟೆ                                                     ಗಂಟೆ

 

ನಡುಗೆ                                                    ನಡಿಗೆ

 

ಒಂಥರ *                                                  ಒಂತರ   

 

ನಿಶ್ಯಬ್ಧ                                                     ನಿಶ್ಶಬ್ಧ / ನಿಶಬ್ಧ                              

 

ನಿಶ್ಯಕ್ತಿ                                                     ನಿಶ್ಶಕ್ತಿ / ನಿಶಕ್ತಿ

 

ಧಾಳಿ                                                      ದಾಳಿ

 

ಬ್ರಹ್ಮಾಚಾರಿ                                               ಬ್ರಹ್ಮಚಾರಿ

 

ನೆನ್ನೆ                                                       ನಿನ್ನೆ

 

ಹಿಂದೂಸ್ಥಾನ                                              ಹಿಂದೂಸ್ತಾನ

 

ಆಶೆ                                                       ಆಸೆ

 

ಇಂಥಾ *                                                  ಇಂಥ

 

(* – ಈ ತಪ್ಪು ನಾನು ಅನೇಕ ಬಾರಿ ಮಾಡಿದ್ದೇನೆ L)

 

ಇದರ ಜೊತೆಯಲ್ಲಿ ನನ್ನದೊಂದು ಸಂಶಯವಿದೆ. ಪೂರ್ವಗ್ರಹ ಪದ ಸರಿಯೆ ಅಥವ ಪೂರ್ವಾಗ್ರಹ ಸರಿಯೆ? ಗೊತ್ತಿರುವವರು ಸಮರ್ಪಕ ವಿವರಣೆ ಸಹಿತ ತಿಳಿಸುವಿರಾ?

 

 

 

 

 

ರೈ = ಐಶ್ವರ್ಯ !!!

Posted: ಜುಲೈ 22, 2008 in ಭಾಷೆ
ಟ್ಯಾಗ್ ಗಳು:, ,

ರೈ = ಐಶ್ವರ್ಯ !!!

 

ಮೊನ್ನೆ ಯಾವುದೋ ಪದವೊಂದರ ಅರ್ಥ ಹುಡುಕುತ್ತಾ ಶಬ್ದಕೋಶವನ್ನು ಜಾಲಾಡುತ್ತಾ ಇದ್ದೆ. ಆಗ ಆಕಸ್ಮಿಕವಾಗಿ ಒಂದು ಪದ ಕಣ್ಣಿಗೆ ಬಿತ್ತು. ಅದರ ಅರ್ಥ ನೋಡಿದಾಗ ಆಶ್ಚರ್ಯ ಆಯ್ತು. ಹೀಗೆ ನನ್ನನ್ನು ಅಚ್ಚರಿಗೆ ಕೆಡವಿದ ಪದವೇ ರೈ. ಈ ಪದಕ್ಕೆ ಶಬ್ದಕೋಶದಲ್ಲಿ ಕೊಟ್ಟಿದ್ದ ಅರ್ಥ ಐಶ್ವರ್ಯ ಅಂತ. ಹಾಗಾಗಿ ಐಶ್ವರ್ಯ ರೈ ಹೆಸರನ್ನು ಕನ್ನಡದಲ್ಲಿ ಬರೆಯೋದಾದ್ರೆ ಐಶ್ವರ್ಯ ಐಶ್ವರ್ಯ ಅಂತ ಬರೀಬಹುದು!! ಈಗ ಆಕೆ ಐಶ್ವರ್ಯ ಬಚ್ಚನ್ ಆಗಿರೋದ್ರಿಂದ ಆಕೆಯ ಹೆಸರನ್ನು ರೈ ಬಚ್ಚನ್ ಅಂತಾನೂ ಬರೀಬಹುದು. ಹೇಗಿದೆ ಈ ಪದದಾಟದ ಚಮಕ್.

 

ಹಾಗೇ ಕಣ್ಣಿಗೆ ಬಿದ್ದ ಇನ್ನೊಂದು ಪದ ಐಸುಫೈಸು.  ಇದಕ್ಕಿರುವ ಅರ್ಥ ಪ್ರಶಸ್ತವಾದುದು, ವಿಸ್ತಾರವಾದದ್ದು ಅಂತ. ನಾವೆಲ್ಲ ಚಿಕ್ಕವರಿದ್ದಾಗ ಆಡುತ್ತಿದ್ದ ಐಸ್‌ಪೈಸ್ ಅನ್ನೋ ಆಟಕ್ಕೂ ಈ ಶಬ್ದಕ್ಕೂ ಯಾವ ಸಂಬಂಧವಿದೆಯೋ ನಂಗಂತೂ ಗೊತ್ತಿಲ್ಲ. ನಿಮ್ಗೆ ಗೊತ್ತಿದ್ರೆ ಹೇಳ್ತೀರಾ…?

 

 

 

ನಾಗರಾಜ್ ವಸ್ತಾರೆಯವರದ್ದೊಂದು ಕಥಾ ಸಂಕಲನದ ಹೆಸರು ಹಕೂನ ಮಟಾಟ. ಇದೇನಿದು ವಿಚಿತ್ರ ಹೆಸರು ಅಂತ ತಲೆಕೆಡಿಸಿಕೊಳ್ಳುವಷ್ಟರಲ್ಲಿ ಗೊತ್ತಯ್ತು ಅದೊಂದು ಆಫ್ರಿಕನ್ ಪದ ಅಂತ. ಅದರರ್ಥ ನೋ ಪ್ರಾಬ್ಲಂ ಅಂತ. ಭಾಷೆಗಳ ಬಗ್ಗೆ ನನಗಿರುವ ಹುಚ್ಚು ಆಕರ್ಷಣೆಯಿಂದಾಗಿ ಈ ಬಾರಿ ಟಾಂಜಾನಿಯಾದಿಂದ ರಜೆಯ ಮೇಲೆ ಊರಿಗೆ ಬಂದ ಅತ್ತೆ, ಮಾವನನ್ನು ಕೇಳಿ ಟಾಂಜಾನಿಯಾದ ಭಾಷೆ ಸ್ವಹಿಲಿಯ ( ಅಥವಾ ಅವರದೇ ಭಾಷೆಯಲ್ಲಿ ಹೇಳುವಂತೆ ಕಿಸ್ವಹಿಲಿ) ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡೆ. ಹಿಂದಿ/ಉರ್ದು/ಅರೇಬಿಯಬ್ ಭಾಷೆಗಳಿಂದ ಸ್ವಹಿಲಿಯು ಎರವಲು ಪಡೆದ ಅನೇಕ ಪದಗಳ ಬಗ್ಗೆ ಕೇಳಿದಾಗ ನನ್ನ ಕುತೂಹಲ ಇನ್ನೂ ಹೆಚ್ಚಾಯ್ತು. ನಿಮಗೂ ಈ ಭಾಷೆಯ ಬಗ್ಗೆ ಆಸಕ್ತಿ ಇದ್ರೆ ಅದರ ಒಂದಿಷ್ಟು ಪದಗಳ ಮೇಲೆ ಕಣ್ಣು ಹಾಯಿಸೋಣ ಬನ್ನಿ.

 

ಮೊದಲಿಗೆ ಹಿಂದಿ/ಉರ್ದು ಅಥವಾ ಅರಬ್ಬೀ ಭಾಷೆಯಿಂದ ಪ್ರಭಾವಿತವಾಗಿರುವ ಪದಗಳನ್ನು ನೋಡೋಣ

 

ಕಿಸ್ವಹಿಲಿ ಪದ                                ಪದದ ಅರ್ಥ                 ಮೂಲ ಹಿಂದೀ/ಅರಬ್ಬಿ ಪದ

ಗಾಡಿ                                          ವೆಹಿಕಲ್                           ಗಾಡಿ

ಕಿತಾಬು                                       ಬುಕ್                              ಕಿತಾಬ್

ದುಕಾ                                          ಶಾಪ್                             ದುಕಾನ್

ಕಲಾಮು                                      ಪೆನ್                               ಕಲಮ್

ದವಾ                                          ಮೆಡಿಸಿನ್                         ಧವಾ(ಧವಾಯಿ)

ದಫ್ತರ್                                         ಅಕೌಂಟ್ ಬುಕ್                   ದಫ್ತರ್

ಚೀಟಿ                                          ಟಿಕೇಟ್                            ಚೀಟಿ

ಆಂಬೆ                                          ಮ್ಯಾಂಗೋ                       ಆಮ್

ಅಚಾರಿ                                        ಪಿಕಲ್                             ಅಚಾರ್

ಚಾಪಾ                                         ಸ್ಟ್ಯಾಂಪ್                          ಛಾಪಾ

ನೇಲಿ                                          ಪೈಪ್                             ನಲ್

ರಂಗೀ                                         ಕಲರ್                             ರಂಗ್

ಲಾಕಿ                                           ಲ್ಯಾಕ್                             ಲಾಕ್

ಯಾಯಾ                                      ನರ್ಸ್                             ಆಯಾ

ಕಾನುನಿ                                       ರೂಲ್ಸ್                             ಕಾನೂನ್

ಸಾಮಾನಿ                                     ವುಡನ್ ಫರ್ನಿಚರ್                ಸಾಮಾನ್

ಪೊರ್‌ತಂಗ್                                   ಕೈಟ್                              ಪತಂಗ್

ಇಲಿಕಿ                                          ಕಾರ್ಡಮಮ್                      ಇಲೈಚಿ ( ಏಲಕ್ಕಿ ನೆನಪಿಸಿಕೊಳ್ಳಿ)

ಹಂಡೋ                                      ಕಾಪರ್ ವೆಸ್ಸೆಲ್                  ನಮ್ಮ ಹಂಡೆ ನೆನಪಾಯ್ತಾ !!

 

ಅಲ್ಲದೇ ಕೆಲವೊಂದು ಇಂಗ್ಲೀಷ್ ಪದಗಳಿಗೆ ಕೊನೆಗೊಂದು ‘i’ ಸೇರಿಸಿಬಿಟ್ರೆ ಕಿಸ್ವಹಿಲಿ ಪದ ತಯಾರು

 

ಉದಾ

ಕಿಸ್ವಹಿಲಿ                     ಮೂಲ

ಆಫಿಸಿ                                        ಆಫಿಸ್                                        

ಹಾಸ್ಪಿಟಲಿ                                    ಹಾಸ್ಪಿಟಲ್                                   

 

ಇದಲ್ಲದೆ ಕೆಲವು ಆಸಕ್ತಿ ಮೂಡಿಸಿದ , ಉಚ್ಚರಿಸಲು ಮಜವಾಗಿರುವ ಪದಗಳು ಕೆಲವು ಇಲ್ಲಿವೆ ನೋಡಿ

ಕಿಸ್ವಹಿಲಿ ಪದ                                ಪದದ ಅರ್ಥ

ಪಿಕಿಪಿಕಿ                                        ಬೈಕ್/ಸ್ಕೂಟರ್

ಡಲಾಡಲಾ                                    ಬಸ್

ಸುಲೆ                                          ಸ್ಕೂಲ್

ಬರಬರಾನಿ                                    ರೋಡ್

ಚಕುಲ                                         ಫುಡ್

ಮಿಮಿ                                          ಐ (ನಾನು)

ಸಿಸಿ                                            ವಿ (ನಾವು)

ವೆವೆ                                           ಯು

ಕ್ವಾಹೆರಿ                                        ಗುಡ್ ಬ್ಯೆ

ಕರಿಬು                                         ವೆಲ್ಕಮ್

ಅಸಾಂಟೆ                                      ಥ್ಯಾಂಕ್ಸ್

ತ(ದ)ಫಧಾಲಿ                                  ಪ್ಲೀಸ್

ಪೋಲೆ                                        ಸಾರಿ

ಚೇಕಾ                                         ಸ್ಮೈಲ್

ಚೇಜೋ                                       ಪ್ಲೇ (ಆಟಆಡು)

ಹರಾಕ                                         ಫಾಸ್ಟ್

 

ಒಟ್ಟಿನಲ್ಲಿ ನಂಗಂತೂ ಈ ಆಫ್ರಿಕನ್ ಭಾಷೆ ಸಕ್ಕತ್ ಇಂಟರೆಸ್ಟಿಂಗ್ ಅನ್ನಿಸ್ತು. ನಿಮಗೆ ಹೇಗನ್ನಿಸಿತು? ಕಿಸ್ವಲಿಯ ಬಗ್ಗೆ ಮುಂದೆಂದಾದರೂ ಇನ್ನಷ್ಟು ಬರೆದೇನು.