Archive for the ‘ಹರಟೆ’ Category

KPL 20-20ಗೆ ಕ್ಷಣಗಣನೆ ಶುರು..!?

 

ದೇಶದೆಲ್ಲೆಡೆಯಲ್ಲಿ ಏರುತ್ತಿರುವ ಬಿಸಿಲಿನ ಕಾವಿನಂತೆ IPL ಜ್ವರ ಹಬ್ಬಿದ್ರೆ ಕರ್ನಾಟಕದ ರಾಯಲ್ಸ್‌ಗಳ ಟೆಸ್ಟ್ ತಂಡ ಕಂಟೆಸ್ಟ್ ಮಾಡಲೂ ತ್ರಾಣವಿಲ್ಲದೆ ನೆಲಕಚ್ಚಿದ್ದು ಕಂಡು ನಮ್ಮವರ IPL ಜ್ವರ ಎಲ್ಲಾ ತಣ್ಣಗಾಗಿ ಬಿಸಿಯಾಗಿದ್ದ ಟಿ.ವಿ. ಕೂಡಾ ಥಂಡಾ ಹೊಡಿತಿರಬೇಕಾದ್ರೆ ಇಲ್ಲೊಂದು ಬಿಸಿಬಿಸಿ ಸುದ್ದಿ ನಿಧಾನಕ್ಕೆ ಕಾವೇರಿಸತೊಡಗಿದೆ. ಕರ್ನಾಟಕದಲ್ಲಿ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಕಣದ ಬೆಂಕಿಗೆ ತುಪ್ಪ ಸುರಿಯುವಂತೆ ಎರಡು ಹಂತದ ಮತದಾನದ ನಂತರದ ನಿರ್ಗಮನ ಚುನಾವಣಾ ಫಲಿತಾಂಶಗಳು ಯಾರಿಗೂ ಬಹುಮತ ಬರುವುದು ಕಷ್ಟವೇನೋ ಅನ್ನುವಂತೆ ಬಿಂಬಿಸುತ್ತಿದ್ದರೆ, ಜನ ಸಮ್ಮಿಶ್ರ ಸರಕಾರದ ಊಹೆಗೇ ಹೆದರಿ ಹಾವು ಕಂಡವರಂತೆ ಬೆಚ್ಚಿಬೀಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇವೇಗೌಡರು KPL 20-20 ಟೂರ್ನಿಯ ನೀಲನಕ್ಷೆ ತಯಾರಿಸುತ್ತಿರುವುದು ಮಾತ್ರ ರಾಜಕೀಯ ವಲಯಗಳಲ್ಲಿ ಬಹುಚರ್ಚಿತ ವಿಷಯವಾಗಿದೆ. ಇದರ ನೇರ ಪ್ರಸಾರದ ಹಕ್ಕು ಕಸ್ತೂರಿ ವಾಹಿನಿಯಲ್ಲಿ ಬರುತ್ತೆ ಅನ್ನೋದು ಮಾತ್ರ ಶುದ್ಧ ಗಾಳಿಸುದ್ದಿ J

 

ಮೊದಲ ಎರಡು ಹಂತದ ಸುಮಾರು 155 ಕ್ಷೇತ್ರಗಳ ಮತದಾನ ಮುಗಿದಿದ್ದು ಬಹುತೇಕ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಸಮತೋಲನದ ಸ್ಥಿತಿಯಲ್ಲಿ ಇರುವಂತೆ ಕಂಡು ಬರುತ್ತಿದ್ದು ಸಧ್ಯದ ಸ್ಥಿತಿಯಲ್ಲಿ ಎರಡೂ ಪಕ್ಷಗಳು ನೂರರ ಆಸುಪಾಸಿನಲ್ಲಿ ನಿಲ್ಲುವುದರಲ್ಲೇ ಏದುಸಿರು ಬಿಡುವ ಲಕ್ಷಣಗಳು ಕಾಣಿಸುತ್ತಿದೆ. ಕಾಂಗ್ರೆಸ್ ಮತ್ತು ಬಿ.ಜೆ.ಪಿ ಅಲ್ಲದೆ ಜೆ.ಡಿ.ಎಸ್, ಬಿ.ಎಸ್.ಪಿ ಕೂಡಾ ನಾವೇ ಅಧಿಕಾರಕ್ಕೆ ಬರ್ತೀವಿ ಅನ್ನೋ ತರಹ ಮಾತನ್ನಾಡುತ್ತಿದ್ದರೂ ಕೂಡಾ ವಾಸ್ತವದಲ್ಲಿ ಯಾರಿಗೂ ಬಹುಮತ ಬರದಿದ್ರೇನಪ್ಪಾ ಮಾಡೋದು ಅನ್ನೋ ಚಡಪಡಿಕೆ ಈಗಲೇ ಶುರುವಾದಂತಿದೆ. ಆದರೆ ಒಂದು ವೇಳೆ ಆ ಪರಿಸ್ಥಿತಿಯೇನಾದ್ರೂ ಉದ್ಭವವಾದಲ್ಲಿ ಯಾರಿಗೆ ಬೇಕಿರಲಿ ಬೇಡದಿರಲಿ ಅನಿವಾರ್ಯವಾಗಿ ದೇವೇಗೌಡರೇ ಕಿಂಗ್ ಮೇಕರ್ ಆಗುವ ಸ್ಥಿತಿ ಉಂಟಾಗಬಹುದು. ಆ ಮೂಲಕ ಈಗಷ್ಟೇ ಮುಗಿದ 20-20 ಟೂರ್ನಿಯ ಪುನಶ್ಚೇತನದ ಸಾಧ್ಯತೆಗಳು ದಟ್ಟವಾಗತೊಡಗಿದಂತೆ ಕಾಣುವ ಸಧ್ಯದ ಪರಿಸ್ಥಿತಿಯಲ್ಲಿ, ಸ್ಥಿರ ಸರ್ಕಾರದ ಕನಸು ಗಗನಕುಸುಮವಾದೀತೆ ಅನ್ನುವ ಚಿಂತೆಯಲ್ಲಿ ಪ್ರೇಕ್ಷಕ ಮಹಾಶಯ ಇದ್ದಾನೆ.

 

ಈ ಸಮೀಕ್ಷೆಗಳಿಂದ ಖುಶಿಯಾದಂತೆ ಕಂಡು ಬರುತ್ತಿರುವ ಬಂಗಾರಪ್ಪನವರ ಪತ್ರಿಕಾ ಹೇಳಿಕೆಗಳು ಈ ಊಹಾಪೋಹಗಳಿಗೆ ಮತ್ತಷ್ಟು ಇಂಬುಕೊಟ್ಟಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ರಂಗು-ರಂಗಿನ ಉದ್ಘಾಟನೆ ಕಂಡ IPL ಟೂರ್ನಿಯ ಕಣ ವಿಧಾನಸಭೆಯ ಪಡಸಾಲೆಗೆ ಸ್ಥಳಾಂತರಗೊಳ್ಳುವ ಸೂಚನೆಗಳು ಸಿಗುತ್ತಿವೆ. ಬಂಗಾರಪ್ಪ ಹೇಗಾದ್ರೂ ಮಾಡಿ ನಾಲ್ಕಾರು ಸ್ಥಾನ ಗಿಟ್ಟಿಸಿದ್ರೆ ಐಕನ್ ಆಟಗಾರನಾಗುವ ಭರವಸೆಯಲ್ಲಿದ್ದಾರೆ. 20-20 ಯುವಕರ ಆಟ ಅನ್ನುವುದರ ಹಿನ್ನೆಲೆಯಲ್ಲಿ, ಹಿರಿಯ ಆಟಗಾರ ದೇವಣ್ಣ ಕೋಚ್ ಆಗಿ ಕುಮಾರಣ್ನ ರೇವಣ್ಣರಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡುವ ಎಲ್ಲ ಸಾಧ್ಯತೆಗಳು ಮೇಲ್ನೋಟಕ್ಕೆ ಕಾಣಿಸುತ್ತಿವೆ. ಆಟಗಾರರ ಖರೀದಿಗೆ ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದರೂ ಕೂಡಾ, ಎಲ್ಲಾ ತೆರೆ ಮರೆಯಲ್ಲೇ ನಡೆಯುವ ಕಾರಣದಿಂದಾಗಿ ಬಹಿರಂಗ ಹರಾಜಿನ ಸುದ್ದಿ ಪತ್ರಿಕೆಗಳಿಗೆ ಸಿಗೋದಿಲ್ಲ. ಹೀಗಾಗಿ ಗೌಡರ ಬೌನ್ಸರ್‌ಗೆ ತತ್ತರಿಸಿ ಹಿಟ್‌ವಿಕೇಟ್ ಆದ ಯಡ್ಯೂರಪ್ಪನವರ ಧೀರ್ಘ ಇನ್ನಿಂಗ್ಸ್ ಆಡುವ ಕನಸು ಮರೀಚಿಕೆಯಾಗಲಿದೆಯೇ ಅನ್ನುವುದು 25ರ ದಿನವಷ್ಟೇ ಗೊತ್ತಾಗಬೇಕಿದೆ.

 

ಕ್ಷಿಪ್ರ ಮನೋರಂಜನೆಯ ೨೦-೨೦ ಮಾದರಿಯ ಗೊಂದಲಗಳಿಗೆ ಬೇಸತ್ತು ಉತ್ತಮ ಟೆಸ್ಟ್ ಪಂದ್ಯದ ನಿರೀಕ್ಷೆಯಲ್ಲಿರುವ  ಪ್ರೇಕ್ಷಕ ಮೂಕಪ್ರೇಕ್ಷಕನಾಗಬೇಕಾಗುತ್ತದಾ ಅನ್ನುವ ಪ್ರಶ್ನೆಗೆ ಉತ್ತರ ಇನ್ನೊಂದು ವಾರದಲ್ಲಿ ಸಿಗಲಿದೆ. KPLಗೆ ವಿರೋಧ ವ್ಯಕ್ತಪಡಿಸಿರುವ ಬಿ.ಜೆ.ಪಿ.ಯವರು ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚ್ಯಾಲೆಂಜರ್ಸ್ ಪ್ರದರ್ಶನದಿಂದ ಬೇಸತ್ತು ಈ ರೀತಿ ಹೆಳಿಕೆ ನೀಡುತ್ತಿದ್ದಾರೆ ಅಂತ ಮಲ್ಯ ಹೇಳಿಕೆ ಕೊಟ್ಟಿದ್ದಾರೆ ಅನ್ನೋದು ಶುದ್ಧ ತರ್ಲೆ ಕುಹಕ ಬಿಡಿ. ಒಬ್ಬ ಮೋದಿಯಿಂದಾಗಿ (ಲಲಿತ್ ಮೋದಿ) IPL ಟೂರ್ನಿ ಯಶಸ್ವಿಯಾಗಿ ನಡೆಯುತ್ತಿರುವ ಹೊತ್ತಿನ್ನಲ್ಲಿ ಇನ್ನೊಬ್ಬ ಮೋದಿ (ನರೇಂದ್ರ ಮೋದಿ)ಯನ್ನು ಮುಂದಿಟ್ಟುಕೊಂಡು ಬಿ.ಜೆ.ಪಿ.ಯವರು . KPLಗೆ ತಡೆಯೊಡ್ಡುತ್ತಿದ್ದಾರೆ ಅನ್ನುವ ದೇವೇಗೌಡರ ಹೇಳಿಕೆಯನ್ನು ೨೫ರ ನಂತರವಷ್ಟೇ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ವಕೀಲರೊಬ್ಬರು ಹೇಳಿಕೆ ಕೊಟ್ಟಿದ್ದಾರೆ J

ನೆನಪಿನ ಸುರುಳಿಯೆಂದರೆ ಹಾಗೇ ಅಲ್ಲವೇ? ಅಕಾರಣವಾಗಿಯೋ ಸಕಾರಣವಾಗಿಯೋ ಒಮ್ಮೆ ಬಿಚ್ಚಿಕೊಂಡಿತೆಂದರೆ ತನ್ನ ಸುಳಿಯೊಳಗೆಳೆದುಕೊಂಡು ನಮ್ಮನ್ನು ಸುತ್ತಿಸಿ, ಗಿರಗಿಟ್ಲೆಯಾಡಿಸಿ ಒಂದು ಘಳಿಗೆ ಈ ಲೋಕದ ಕೊಂಡಿಯೇ ಕಳಚಿದಂತಾಗಿ ನಾವು ಕಳೆದುಹೋಗುವಂತೆ ಮಾಡುತ್ತದೆ. ಅಂತೆಯೇ ಎಪ್ರಿಲ್ ತಿಂಗಳು ಬಂತೆಂದರೆ ಸಾಕು… ನೆನಪಿನ ಕೋಶದೊಳಗೊಂದು ಪುಟ್ಟ ಕದಲಿಕೆ. ಅದಕ್ಕೆ ಕಾರಣ ಈ ತಿಂಗಳ ಅಖೈರಿಗೆ ಬರುವ ಕಮಲಶಿಲೆ ಜಾತ್ರೆ… ಮೊಗೆದಷ್ಟೂ ಸವಿನೆನಪುಗಳು ಉಕ್ಕಿ ಬರುವ ಅಕ್ಷಯ ಪಾತ್ರೆ. ಪಶ್ಚಿಮಘಟ್ಟದ ಸೆರಗಿನಲ್ಲಿರುವ ಮಲೆನಾಡಿನ ಮಡಿಲಿನಲ್ಲಿ ನಿದ್ರಿಸಿದಂತೆ ಕಾಣುವ ನಮ್ಮೂರು ಹಳ್ಳಿಹೊಳೆ(ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು). ಸುತ್ತಮುತ್ತಲಿನ ಊರುಗಳಾದ ಹಳ್ಳಿಹೊಳೆ, ಎಡಮೊಗೆ, ಸಿದ್ಧಾಪುರ, ಚಕ್ರಮೈದಾನ…ಹೀಗೆ ಈ ಎಲ್ಲ ಊರುಗಳ ನಡುವೆ ತೊಟ್ಟಿಲಿನಂತಿರುವ ಊರೇ ಕಮಲಶಿಲೆ. ಎಲ್ಲರ ಆರಾಧ್ಯದೈವವಾಗಿ ಕುಬ್ಜಾ ನದಿಯ ತಟದಲ್ಲಿ ನೆಲೆಯಾದವಳು ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ. ಎಪ್ರಿಲ್ ತಿಂಗಳ ಕೊನೆಯಲ್ಲಿ ಬರುವುದೇ ಈಕೆಯ ಜಾತ್ರಾ ಮಹೋತ್ಸವ…ಯಾನೆ ಕಮಲಶಿಲೆ ಹಬ್ಬ.

 

ಕಮಲಶಿಲೆಈ ಹೆಸರೇ ಒಂದು ಬೆರಗು..ಪುಳಕ. ಊರಿಗೆ ಈ ಹೆಸರು ಬಂದಿದ್ದಾದರೂ ಹೇಗೆಂದು ಹುಡುಕಹೊರಟರೆ ಭಿನ್ನವಾದ ಅಭಿಪ್ರಾಯಗಳು ಸಿಗುತ್ತವೆ. ಅಲ್ಲಿರುವ ಕಮ್ಮಾರ ಸಾಲೆಯಿಂದಾಗಿ ಬಂದ ಹೆಸರೇ ಕಾಲಾಂತರದಲ್ಲಿ ಹಲವರ ನಾಲಿಗೆಯ ಮೇಲಾಡಿ ಬದಲಾವಣೆಗೊಂಡು ಕಮಲಶಿಲೆ ಆಯಿತೆಂದು ಒಂದು ಐತಿಹ್ಯವಾದರೆ, ಕಮಲದಲ್ಲಿ ಉದ್ಭವವಾದ ಶಿಲೆಯೇ ಕಮಲಶಿಲೆಎಂಬುದು ಸ್ಥಳಪುರಾಣದಲ್ಲಿರುವ ಪ್ರತೀತಿ. ಹೆಸರಿನ ಕಥೆ ಏನೇ ಇದ್ರೂ ಇಲ್ಲಿನ ಜಾತ್ರಾ ಮಹೋತ್ಸವ ಅರ್ಥಾತ್ ಊರವರ ಬಾಯಲ್ಲಿ ಹಬ್ಬಎಂದು ಕರೆಸಿಕೊಳ್ಳುವ ಆ ಸಂಭ್ರಮ ಸಡಗರಗಳಿಗೆ ಶಬ್ದರೂಪ ಕೊಡೋಕೆ ನನ್ನ ಬರವಣಿಗೆಯ ತಾಕತ್ತು ಕಮ್ಮಿಯೆಂದೇ ನನ್ನ ಅನಿಸಿಕೆ. ಆದರೂ ಬಾಲ್ಯಕಾಲದಲ್ಲಿ ಕಂಡು ಭಾಗಿಯಾದ ಆ ಖುಷಿಯ ಒಂದು ಝಲಕ್ ಇಲ್ಲಿದೆ.

 

ಮಾರ್ಚ್ ತಿಂಗಳು ಬಂತೆಂದರೆ ಸಾಕು ವಾರ್ಷಿಕ ಪರೀಕ್ಷೆಯ ಗಡಿಬಿಡಿ. ಪರೀಕ್ಷೆಯ ರಗಳೆ ಏನೇ ಇದ್ರೂ ಮನಸ್ಸು ಆಗಲೇ ಮುಂದೆ ಬರುವ ಬೇಸಿಗೆ ರಜೆಯ ನೆನಪಿನಲ್ಲಿ ಮಂಡಿಗೆ ತಿನ್ನಲು ಶುರುವಿಟ್ಟಿರುತ್ತದೆ. ಪರೀಕ್ಷೆ ಮುಗಿದು ಎಪ್ರಿಲ್ ೧೦ರ ಪಾಸ್-ಫೈಲ್ನಾಮಾಂಕಿತ ಫಲಿತಾಂಶ ಪ್ರಕಟಣೆ ಮುಗಿಯುವಷ್ಟರಲ್ಲಿ ಊರಿನಲ್ಲಿರುವ ಅಷ್ಟೂ ಗೇರುಮರ, ಕಾಟುಮಾವಿನಮರಗಳು ನಮ್ಮ ಕೈಲಿರುವ ಕಲ್ಲಿಗೆ ಕಾದು ಕುಳಿತಿರುತ್ತವೆ. ಯಾವ ಮರದ ಹಣ್ಣು ಸಿಹಿ, ಯಾವುದು ಹುಳಿ, ಯಾವುದರಲ್ಲಿ ಸೊನೆ ಜಾಸ್ತಿ ಎಂಬೆಲ್ಲಾ ಲೆಕ್ಕಾಚಾರ ಗಣಿತದ ಸೂತ್ರಗಳಂತೆ ಬಾಯಿಪಾಠವಾಗಿರೋದ್ರಿಂದ ನಮ್ಮ ಪ್ಲಾನ್ ಆಫ್ ಆಕ್ಷನ್ಎಲ್ಲಾ ಪೂರ್ವನಿರ್ಧಾರಿತ. ಅಷ್ಟರಲ್ಲೇ ಬಂದಾಗಿರುತ್ತೆ ಕಮಲಶಿಲೆ ಹಬ್ಬ. ಮಕ್ಕಳಾದ ನಮಗೆಲ್ಲಾ ಹಬ್ಬಕ್ಕೆ ಯಾರು ಜಾಸ್ತಿ ದುಡ್ಡು ಒಟ್ಟುಮಾಡುತ್ತಾರೆಂಬ ಸ್ಪರ್ಧಾತ್ಮಕ ಪೈಪೋಟಿ. ನಂದು ಹೆಚ್ಚೋ ನಿಂದು ಹೆಚ್ಚೋ ಎಂದು ಗಳಿಗೆಗೊಮ್ಮೆ ಲೆಕ್ಕ ಮಾಡಿ, ಚಡ್ಡಿಕಿಸೆಯಲ್ಲಿರುವ ರೂಪಾಯಿ ಪಾವಲಿ, ಮಡಿಸಿದ ನೋಟು ಮುಟ್ಟಿನೋಡಿಕೊಳ್ಳುವುದರಲ್ಲೇ ಅವ್ಯಕ್ತ ಆನಂದ. ಮನೆಯವರು, ಮನೆಗೆ ಬಂದವರು ಎಂದು ಎಲ್ಲರ ಬಳಿ ಬೇಡಿಕೆ ಪಟ್ಟಿ ಸಲ್ಲಿಸಿ ಹಬ್ಬಕ್ಕೆ ಮುಂಚೆ ಹೇಗಾದರೂ ಮಾಡಿ ಎಲ್ಲರಿಗಿಂತ ಜಾಸ್ತಿ ದುಡ್ಡು ಸೇರಿಸಬೇಕೆಂಬುದೇ ಆಗಿನ ಒನ್ ಲೈನ್ ಅಜೆಂಡಾ. ಇವೆಲ್ಲದರ ನಡುವೆ ಈ ಸಲ ಹಬ್ಬದಲ್ಲಿ ಏನೆಲ್ಲಾ ತಗೋಬೇಕು… ಎಷ್ಟು ಐಸ್‌ಕ್ಯಾಂಡಿ ತಿನ್ನಬೇಕು..ಎಷ್ಟು ಸಲ ತೊಟ್ಟಿಲು (ಜೈಂಟ್ ವೀಲ್‌ನ ಮಿನಿಯೇಚರ್) ಹತ್ತಿ ಇಳಿಬೇಕು ಅದಕ್ಕೆಷ್ಟು ದುಡ್ಡು..ಇದಕ್ಕೆಷ್ಟು ಅಂತ ಚಾಣಕ್ಯನ ಅರ್ಥಶಾಸ್ತ್ರಕ್ಕಿಂತಲೂ ಒಂದು ಕೈ ಮೇಲು ನಮ್ಮ ಈ ಲೆಕ್ಕಾಚಾರ.

ಇದೆಲ್ಲಾ ಆಗಿ ಹಬ್ಬದ ದಿನ ಬಂತೆಂದರೆ ಅಲ್ಲಿಗೆ ಹೋಗೋದು ಹೇಗಪ್ಪಾ ಅನ್ನೋದು ಇನ್ನೊಂದು ತಲೆನೋವು. ಬಸ್ಸಿನಲ್ಲಿ ಹೋಗೋಣವೆಂದರೆ ಈಗಾಗಲೆ ೧೫೦ ಜನರನ್ನು ತುಂಬಿಸಿಕೊಂಡು ಆಮೇಲೆ ಕೊಸರಿಗೆಂಬಂತೆ ಟಾಪ್ನಲ್ಲೂ ೨೫ ಜನರನ್ನು ತುಂಬಿಸಿಕೊಂಡ ಬಸ್ಸು ಅನ್ನೋ ಆ ಟೈಟಾನಿಕ್ಏರೋಕೆ ಯಮ ಧೈರ್ಯವೇ ಬೇಕು. ನಡೆದುಕೊಂಡೋ ಇಲ್ಲಾ ಯಾವ್ದಾದ್ರೂ ವ್ಯಾನು, ಲಾರಿ, ಜೀಪು ಹತ್ತಿ ಅಂತೂ ಹಬ್ಬದಗುಡಿ ಮುಟ್ಟೋ ಹೊತ್ತಿಗೆ ಸೂರ್ಯ ನೆತ್ತಿ ಸುಡುತ್ತಿರುತ್ತಾನೆ. ಆದ್ರೆ ಆ ಹುರುಪಿನಲ್ಲಿ ಬಿಸಿಲು-ಮಳೆ ಇದೆಲ್ಲಾ ಯಾರಿಗೆ ಗೋಚರವಾಗುತ್ತೆ. ಮೊದಲು ದೇವಸ್ಥಾನದ ಒಳಗೆ ಹೋಗಿ ಆಮೇಲೆ ಬಜಾರ್ (ಎಲ್ಲಾ ಮಾರಾಟ ನಡೆಯೋ ಸ್ಥಳ) ಸುತ್ತಿದ್ರಾಯ್ತು ಎಂದು ಕೈಹಿಡಿದುಕೊಂಡ ಮನೆಯವರ ಕಣ್ಣುತಪ್ಪಿಸಿ ಅದ್ಯಾವ ಮಾಯಕದಲ್ಲೋ ಪರಾರಿ. ಕೈಬೀಸಿ ಕರೆಯುತ್ತಿರುತ್ತೆ ಬಜಾರ್ಎಂಬ ಮಾಯಾಬಜಾರ್.

 

ಮೊಟ್ಟಮೊದಲು ಐಸ್‌ಕ್ಯಾಂಡಿ ಸಮಾರಾಧನೆ. ಈ ಐಸ್‌ಕ್ಯಾಂಡಿಯಲ್ಲಿ ಇರುತ್ತಿದ್ದ ಆಯ್ಕೆಗಳಾದ್ರೂ ಎಷ್ಟು? ಬೆಲ್ಲದಕ್ಯಾಂಡಿ, ಕ್ರೀಮ್, ಬಣ್ಣದಕ್ಯಾಂಡಿ. ಅದರಲ್ಲೇ ಸ್ವಲ್ಪ ವೆರೈಟಿಯದ್ದಂದ್ರೆ ಪ್ಲಾಸ್ಟಿಕ್ ಕೊಳವೆಯೊಳಗೆ ಬರುತ್ತಿದ್ದ ಉದ್ದನೆಯ ಪೆಪ್ಸಿ ( ಕೋಕ್-ಪೆಪ್ಸಿ ಅಲ್ಲ!). ಅಲ್ಲದೆ ಹಬ್ಬದ ಪ್ರಯುಕ್ತ ಎಲ್ಲದ್ದಕ್ಕೂ ಡಬ್ಬಲ್ ರೇಟು ಬೇರೆ. ಹಾಗಂತ ಐಸ್‌ಕ್ಯಾಂಡಿ ಬಿಟ್ಟವರುಂಟೇ? ಆಮೇಲೆ ಮನೆಗೆ ಹೋಗಿ ನಾನೆಷ್ಟು ಪೆಪ್ಸಿ ತಿಂದೆ, ನಿಂದೆಷ್ಟು ಅಂತ ಮಕ್ಕಳೊಳಗೆ ಸ್ಪರ್ಧೆ ಬೇರೆ ಇರುವಾಗ. ಈಗೆಲ್ಲಾ ಬಗೆಬಗೆಯ ಮಾಲ್‌ಗಳಲ್ಲಿ, ‘ಪಾರ್ಲರ್’ಗಳಲ್ಲಿ ಕೂತು, ಇರುವ ನೂರಾರು ತರದ ಸ್ಪೆಷಲ್ ಐಸ್‌ಕ್ರೀಮ್ ತಿಂದ್ರೂ ಹಬ್ಬದ ಗರದಲ್ಲಿ ನಾಲಿಗೆಯ ಮೇಲೆ ಕುಳಿತ ಬೆಲ್ಲದಕ್ಯಾಂಡಿ, ಪೆಪ್ಸಿಯ ಸವಿಯನ್ನು ಓಡಿಸೋಕೆ ಯಾವುದರಿಂದಲೂ ಸಾಧ್ಯವಿಲ್ಲ. ಇದೆಲ್ಲಾ ಮುಗಿದು ಮುಂದೆ ಬಂದ್ರೆ ಬಣ್ಣಬಣ್ಣದ ಆಟಿಕೆಗಳು, ಬೈನಾಕ್ಯುಲರ್, ರೀಲ್ ಹಾಕಿ ಚಿತ್ರ ನೋಡುವ ಕೆಮರಾ, ಕನ್ನಡಕ , ಪುಗ್ಗ, ಪೀಪಿ, ರಬ್ಬರ್‌ಹಾವು…ಹೆಸರೇ ಗೊತ್ತಿಲ್ಲದ ಹಬ್ಬದಗುಡಿಯ ತರಹೇವಾರಿ ಆಟಿಕೆಗಳ ಆಕರ್ಷಣೆ. ಅಷ್ಟರಲ್ಲಿ ಹುಡುಕಿಕೊಂಡು ಬಂದ ಹಿರಿಯರ ಒತ್ತಾಯಕ್ಕೋ ಎಂಬಂತೆ ಜನಜಂಗುಳಿಯ ನಡುವೆಯೇ ದೇವರಿಗೆ ಒಂದು ಸುತ್ತು ಬಂದ ಶಾಸ್ತ್ರ ಮುಗಿಸಿ ನಮಸ್ಕಾರ ಮಾಡಿ, ಘಮ್ಮೆನ್ನುವ ಗಂಧ ಹಣೆಗೆ ಹಚ್ಚಿಕೊಂಡು ಹೊರಬಂದರೆ ಇನ್ನೊಂದು ಸುತ್ತಿನ ತಿರುಗಾಟಕ್ಕೆ ತಯಾರಾದಂತೆ. ಎಲ್ಲರಿಗೂ ಪ್ರಸಾದ ರೂಪದಲ್ಲಿ ಊಟದ ವ್ಯವಸ್ಥೆ ಇರುತ್ತದಾದ್ರೂ ಹೊರಗಿನ ಸೆಳೆತದ ಮುಂದೆ ಊಟ-ತಿಂಡಿಯ ಗೊಡವೆ-ರಗಳೆ ಯಾರಿಗೆ ಬೇಕು ಅಲ್ವಾ?

 

ದೊಡ್ಡ ವ್ಯಾಪಾರಸ್ಥರ ಶೈಲಿಯಲ್ಲಿ ಆಟಿಕೆಗಳ ಅಂಗಡಿಯಲ್ಲಿ ಅದಕ್ಕೆಷ್ಟು, ಇದಕ್ಕೆಷ್ಟು ಅಂತ ವಿಚಾರಿಸುತ್ತಾ, ಕಿಸೆಯಲ್ಲಿ ಉಳಿದ ಕಾಸನ್ನು ಮನಸ್ಸಲ್ಲೇ ಲೆಕ್ಕ ಹಾಕಿ, ಆಮೇಲೆ ತೊಟ್ಟಿಲು-ಕುದುರೆ ಮೇಲೆ ಕುಳಿತುಕೊಳ್ಳಲು ಸಾಕಷ್ಟು ಮಿಗಿಸಿಕೊಂಡು, ಚೌಕಾಸಿಮಾಡಿ ಒಂದಿಷ್ಟು ಆಟಿಕೆಕೊಂಡುಕೊಂಡು ಹಬ್ಬದ ಗರದಲ್ಲಿ ಗಿರಗಿರನೆ ಸುತ್ತಿದ್ದಾಯ್ತು. ಹೆಣ್ಣು ಮಕ್ಕಳಿಗೇ ಮೀಸಲಾದ ಬಳೆ-ಕ್ಲಿಪ್ಪು-ರಿಬ್ಬನ್ ಅಂಗಡಿಗಳನ್ನು ಬಿಟ್ಟು, ಮಿಠಾಯಿ ಹೇಗೂ ಮನೆಯವರು ಕೊಂಡುಕೊಳ್ತಾರೆ ಎನ್ನುವ ಧೈರ್ಯದಲ್ಲಿ ಆ ಅಂಗಡಿಗಳನ್ನೂ ಬದಿಗೆ ಹಾಕಿ ಮುಂದೆ ಸಾಗಿದ್ರೆ ತೆರೆದುಕೊಳ್ಳುತ್ತೆ ಇನ್ನೊಂದೇ ಮಾಯಾಲೋಕ. ತೊಟ್ಟಿಲು ಅನ್ನೋ ಮಿನಿ ಜೈಂಟ್ ವ್ಹೀಲ್ ಹತ್ತಿ ಕುಳಿತರೆ ಅದು ಸುತ್ತುವ ಭರದಲ್ಲಿ ಅರ್ಧ ಭಯ, ಅರ್ಧ ಖುಷಿ, ಜೊತೆಗೊಂದಿಷ್ಟು ಉದ್ವೇಗ-ಥ್ರಿಲ್. ಜಗತ್ತಿನ ತುತ್ತತುದಿಯಲ್ಲಿದ್ದೇವೋ ಅನ್ನುವ ಅನುಭವ. ೨೫ ಸುತ್ತು ಅಂತ ಹೇಳಿ ಬರೀ ೨೦ ಸುತ್ತಿಗೆ ಸುತ್ತಿಸುವವನು ನಿಲ್ಲಿಸಿದಾಗ ಬೇಜಾರಾದ್ರೂ, ಕೆಳಗಿಳಿದು ಮತ್ತೊಮ್ಮೆ ಕಿಸೆಮುಟ್ಟಿನೋಡಿಕೊಂಡು ಇನ್ನೊಂದು ಸುತ್ತು ಸುತ್ತುವ ಆಸೆಯಲ್ಲಿ ಮೀನಮೇಷ ಎಣಿಸುತ್ತಿರುವಾಗಲೇ ಕೇಳಿಸುತ್ತೆ ಮೈಕಿನಲ್ಲಿ ಕೂಗಿ ಕರೆವ ಜಾದೂ ಪ್ರದರ್ಶನದ ಪ್ರಚಾರ. ಸಣ್ಣಪುಟ್ಟ ಟ್ರಿಕ್ಗಳನ್ನೇ ಬಾಯಿಬಿಟ್ಟುಕೊಂಡು ನೋಡಿ ಹೊರಬಂದಾಗ ಮುಕ್ಕಾಲು ಪಾಲು ಹಬ್ಬ ಮುಗಿದಂತೆ! ತೊಟ್ಟಿಲು ಏರೋಕೆ ಹೆದರಿಕೆ ಇರೋರಿಗೆ ಬೇಕಿದ್ರೆ ಗೋಲಾಕಾರದಲ್ಲಿ ಸುತ್ತುವ ಕುದುರೆ ಸವಾರಿನೂ ಇದೆ.

 

ಈ ಮಾಯಾಬಜಾರಿನ ಸುತ್ತಾಟ ಮುಗಿಸಿ ಬರುವಷ್ಟರಲ್ಲಿ ದಣಿದ ಹೊಟ್ಟೆ ತಾಳಹಾಕುತ್ತಿರುತ್ತದೆ. ಬಣ್ಣಹಾಕಿದ ಶರಬತ್ತೊಂದನ್ನು ಕುಡಿದು, ಮನೆಯವರು ಹಣ್ಣು-ಕಾಯಿ ಮಾಡಿಸಿ ತಂದ ಬಾಳೆಹಣ್ಣುಗಳೆರಡು ಹೊಟ್ಟೆ ಸೇರಿದ ಮೇಲೆ ಬೇಕಾದ್ರೆ ಮನೆಯವರ ಜೊತೆ ಇನ್ನೊಂದು ರೌಂಡ್ ಹೋಗೋಕೆ ಸಿದ್ಧ. ಜೊತೆಗೆ ಅವರೇ ಕಾಸುಕೊಟ್ಟು ಏನನ್ನಾದ್ರೂ ಕೊಡಿಸಲಿ ಎಂಬ ಗುಪ್ತ ನಿರೀಕ್ಷೆ ಬೇರೆ. ಇಷ್ಟೆಲ್ಲಾ ಮುಗಿಯೋ ಹೊತ್ತಿಗೆ ಬಯ್ಯಿನ ತೇರು(ಸಂಜೆ ಹೊತ್ತಿಗೆ ಎಳೆಯುವ ರಥ) ಎಳೆಯುವ ಹೊತ್ತಾಗಿರುತ್ತೆ. ಬೃಹದಾಕಾರದ ತೇರನ್ನು ಕಟ್ಟಿದ ಹಗ್ಗದ ಸಹಾಯದಿಂದ ಎಳೆಯುತ್ತಾ ಭಕ್ತಿ-ಆವೇಶಗಳಿಂದ ಜಯಕಾರಗೈಯ್ಯುವ ಜನರ ಘೋಷದ ನಡುವೆ ಮಂದಗಮನೆಯಂತೆ ಸರಿದುಬರುವ ತೇರೆಂಬೋ ತೇರನ್ನೇ ಬಿಟ್ಟಗಣ್ಣುಗಳಿಂದ ನೋಡುತ್ತಾ ಮನೆಕಡೆ ಹೊರಟರೆ ದಣಿದ ಕಾಲುಗಳೇಕೋ ಮುಷ್ಕರ ಹೂಡುತ್ತವೆ. ಆದರೆ ಈ ಸಂಭ್ರಮದಿ ಭಾಗಿಯಾಗಿ ನಲಿದಾಡಿದ ಮನಸ್ಸು ಅರ್ಧ ಖುಷಿಯಿಂದಿದ್ರೆ-ಹಬ್ಬ ಮುಗಿದೇ ಹೋಗಿದ್ದಕ್ಕೆ ಅರ್ಧ ಬೇಜಾರು. ಮುಂದಿನ ಹಬ್ಬಕ್ಕೆ ಇನ್ನೂ ಒಂದು ವರ್ಷ ಕಾಯಬೇಕಲ್ಲಾ ಅಂತ ಸಂಕಟ.

ಹಬ್ಬ ಮುಗಿದ ಮೇಲೆ ಆ ಜಾತ್ರೆ ನಡೆದ ಬಯಲಿಗೆ ಹೋಗಿ ನೋಡಿದ್ರೆ ಅಲ್ಲೇನಿದೆ…ಜಾತ್ರೆ ಮುಗಿದ ಮೇಲೆ ನಡೆದ ಸಂಭ್ರಮಕ್ಕೆ ಸಾಕ್ಷಿ ಹೇಳುವ ಅಳಿದುಳಿದ ಕಸಕಡ್ಡಿ-ಶೇಷವನ್ನು ಬಿಟ್ಟು. ಬದುಕಿನ ಜಾತ್ರೆಯೂ ಹೀಗೆಯೇ ಅಲ್ಲವೆ? ನಿಮ್ಮ ಬಾಲ್ಯಕಾಲದ ಹಬ್ಬದ ನೆನಪು ಕೂಡಾ ಹೀಗೆ ಇದೆಯೇ?

                               -ವಿಜಯ್ ರಾಜ್ ಕನ್ನಂತ್