Archive for the ‘ಹೀಗೊಂದು ಕತೆ…’ Category

ಈರುಳ್ಳಿ ಬೆಲೆ ಜಾಸ್ತಿ ಆದಾಗಲೆಲ್ಲ ಸಾಂಬರು ಪಲ್ಯಗಳಲ್ಲಿ… ಅಷ್ಟೇ ಯಾಕೆ, ಹೋಟೆಲಿನ ಮಸಾಲೆ ದೋಸೆಯ ‘ಬಾಜಿ’ಯಲ್ಲಿ ಕೂಡಾ ಈರುಳ್ಳಿ ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ ಅಂತ ಬೇಕಿದ್ರೆ ನೀವು ‘ಬಾಜಿ’ ಕಟ್ಟಿ ಗೆಲ್ಲಬಹುದು. ಆದರೆ ಕೆಲವರಿಗೆ ಮಾತ್ರ ಬೆಲೆಯ ಏರಿಳಿತಗಳಿಗೆ ಅತೀತವಾಗಿ ಜೀವಮಾನ ಪರ್ಯಂತ ಈರುಳ್ಳಿ ಜೊತೆಗೆ ಅದರ ತಮ್ಮನಂತಿರುವ ಬೆಳ್ಳುಳ್ಳಿ ಕೂಡಾ ವರ್ಜ್ಯ ಅನ್ನುವುದು ನಿಮಗೆ ಗೊತ್ತಿರಲಿಕ್ಕೂ ಸಾಕು. ಏನಿರಬಹುದು ಇದಕ್ಕೆ ಕಾರಣ? ಕೆಲವರ ಪ್ರಕಾರ ಇವೆರಡೂ ತಾಮಸಿಕ ಗುಣಗಳನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ ಜೊತೆಗೆ ಇವುಗಳನ್ನು ಸೇವಿಸಿದಾಗ ಬಾಯಿಯ ಶ್ವಾಸದ ‘ದುರ್ವಾಸ’ನೆಗೆ ಎದುರಿನವರು ‘ಮುನಿ’ದಾರು ಎಂಬ ಕಾರಣವನ್ನು ನೀಡಿ ಇವೆರಡಕ್ಕೆ ಬಹಿಷ್ಕಾರದ ‘ಶಾಪ’ ಕೊಡಲಾಗಿದೆ.

ಸುಮ್ಮನೇ ಕುತೂಹಲಕ್ಕೆಂದು ನೆಟ್ಟಿನಲ್ಲಿ ನೆಟ್ಟಗೆ ಹುಡುಕಿದಾಗ ಇವೆರಡು ವರ್ಜ್ಯವಾಗಲು ಕಾರಣವೇನು ಎಂಬುದರ ಕುರಿತು ‘ದಂತ’ಕತೆಯೊಂದು ಸಿಕ್ಕಿತು. ಇದು ಯಾವ ಪುರಾಣದಲ್ಲಿ ಉಲ್ಲೇಖವಿದೆ ಅನ್ನುವ ಕುರಿತು ಈ ಕತೆ ಹೇಳಿದವರಿಗೂ ಗೊತ್ತಿಲ್ಲವಾದ ಕಾರಣ ಇದರ ಮೂಲದ ಕುರಿತು ನಾನೂ ಅಷ್ಟೇ ಅಜ್ಞಾನಿ. ಈ ಕತೆ ಅಸಂಬದ್ಧ ಅನ್ನಿಸಿದ್ರೆ ನನ್ನ ಮಾತ್ರ ಬಯ್ಕೋಬೇಡಿ… ಮೂಲದ ಕತೆಗಾರರಿಗೆ ಬಯ್ದು ಬಿಡಿ ಸಾಕು… 🙂 ಕತೆ ಏನಪ್ಪಾ ಅಂದ್ರೆ……

ಈ ಈರುಳ್ಳಿ ಬೆಳ್ಳುಳ್ಳಿ ಎರಡೂ ನಾನ್-ವೆಜಿಟೇರಿಯನ್ ಅಂತೆ ಮಾರಾಯ್ರೆ! ಸತ್ಯಯುಗದಲ್ಲಿ ಋಷಿಗಳು ಲೋಕ ಕಲ್ಯಾಣಾರ್ಥವಾಗಿ ಅಶ್ವಮೇಧ ಹಾಗೂ ಗೋಮೇಧ ಯಜ್ಞಗಳನ್ನು ಮಾಡುತ್ತಿದ್ದರಂತೆ. ಆ ಯಜ್ಞದಲ್ಲಿ ಜೀವಂತ ಕುದುರೆ ಹಾಗೂ ಹಸುಗಳನ್ನು ತುಂಡುಗಳಾಗಿ ಕತ್ತರಿಸಿ, ಯಜ್ಞಕ್ಕೆ ಆಹುತಿ ಕೊಡಲಾಗುತ್ತಿತ್ತಂತೆ. ಆ ಬಳಿಕ ಋಷಿಗಳು ಮಂತ್ರಗಳನ್ನು ಪಠಿಸಿದಾಗ, ಅವು ಜೀವ ತಳೆದು ನವ ತಾರುಣ್ಯದಿಂದ ನಳನಳಿಸುತ್ತಿದ್ದುವಂತೆ. ಎಷ್ಟಾದರೂ ಸತ್ಯಯುಗವಲ್ಲವೇ! ಹೀಗೆ ಒಬ್ಬ ಋಷಿ ಒಮ್ಮೆ ಗೋಮೇಧ ಯಜ್ಞವನ್ನು ಹಮ್ಮಿಕೊಂಡಿದ್ದನಂತೆ. ಆಗವನ ಪತ್ನಿ ತುಂಬು ಗರ್ಭಿಣಿಯಂತೆ. ಅವಳಿಗೆ ಮಾಂಸ ತಿನ್ನಬೇಕೆಂದು ಬಲವಾದ ಆಶೆಯಾಯಿತಂತೆ (ನೆನಪಿಡಿ ಇದು ಬಹು ಹಿಂದಿನ ಕಾಲದ ಪುರಾಣದ ಮಾತು. ಆಗ ಮಾಂಸಾಹಾರ ವರ್ಜ್ಯವಾಗಿರಲಿಲ್ಲ!) ಹೀಗೆ ಆಶೆಪಟ್ಟುದು ನೆರವೇರದೇ ಹೋದರೆ ಹುಟ್ಟುವ ಶಿಶು ಸದಾ ಬಾಯಲ್ಲಿ ಜೊಲ್ಲು ಸುರಿಸಿಕೊಂಡೇ ಇರುವುದು ಎನ್ನುವ ಪ್ರತೀತಿಯಿತ್ತಂತೆ. ಹಾಗಾಗಿ ಆಕೆ ಯಜ್ಞಕ್ಕೆಂದು ಮೀಸಲಾಗಿರಿಸಿದ ಕತ್ತರಿಸಿದ ಮಾಂಸದ ತುಂಡೊಂದನ್ನು ಋಷಿಯ ಗಮನಕ್ಕೆ ಬರದಂತೆ ತೆಗೆದು ಬಚ್ಚಿಟ್ಟಳಂತೆ. ಇದ್ಯಾವುದರ ಅರಿವೇ ಇಲ್ಲದ ಋಷಿ, ತನ್ನ ಯಜ್ಞದ ಕಾರ್ಯವನ್ನು ಸಾಂಗಗೊಳಿಸಿ, ಮಾಂಸವನ್ನು ಅಗ್ನಿಗೆ ಆಹುತಿಯಾಗಿ ಕೊಟ್ಟು, ಮಂತ್ರಗಳನ್ನು ಉಚ್ಚರಿಸಿದನು. ಎಂದಿನಂತೆ ಯವ್ವನದಿಂದ ನಳನಳಿಸುವ ಹಸುವೊಂದು ಯಜ್ಞಕುಂಡದಿಂದ ಜಿಗಿದೆದ್ದು ಹೊರಬಂದಿತು. ಅದನ್ನು ಗಮನಿಸಿ ನೋಡಿದಾಗ ಅದರ ಎಡಪಾರ್ಶ್ವದ ಅಂಗದಲ್ಲಿ ಊನತೆಯೊಂದು ಕಂಡು ಬಂದಿತಂತೆ. ಇದಕ್ಕೆ ಕಾರಣ ಋಷಿಪತ್ನಿ ಎತ್ತಿಟ್ಟಿದ್ದ ಮಾಂಸದ ತುಂಡೇ ಆಗಿತ್ತು. ಋಷಿ ಸ್ವಲ್ಪ ಹೊತ್ತು ಧ್ಯಾನಮಗ್ನನಾಗಿ ಅವಲೋಕಿಸಿದಾಗ ಅವನಿಗೆ ನಡೆದ ವೃತ್ತಾಂತವೆಲ್ಲಾ ಕಣ್ಮುಂದೆ ಚಿತ್ರದಂತೆ ಗೋಚರಿಸಿ ಆದ ಅನರ್ಥದ ಅರಿವಾಯಿತು. ಗಂಡನಿಗೆ ವಿಷಯ ತಿಳಿಯಿತೆನ್ನುವುದನ್ನು ಅವನ ವದನವನ್ನು ನಿರುಕಿಸಿಯೇ ಗ್ರಹಿಸಿದ ಋಷಿಪತ್ನಿ, ಆ ಕೂಡಲೇ ಬಚ್ಚಿಟ್ಟಿದ್ದ ಮಾಂಸದ ತುಂಡನ್ನು ತೆಗೆದು ಹೊರಗೆಸೆದಳಂತೆ. ಋಷಿಯು ಮಂತ್ರಗಳನ್ನು ಪಠಿಸಿದ ಕ್ಷಣಮಾತ್ರದಲ್ಲೇ ಆ ಮಾಂಸದ ತುಂಡಿನಲ್ಲಿ ಜೀವಸಂಚಾರವಾಯಿತಂತೆ. ಆ ತುಂಡಿನಲ್ಲಿದ್ದ ರಕ್ತವೆಲ್ಲ ಕೆಂಪು ವರ್ಣದ ತೊಗರಿಬೇಳೆ(ಹೆಚ್ಚಾಗಿ ಉತ್ತರಭಾರತದ ಕಡೆ ಸಿಗುತ್ತಂತೆ) ಆಯಿತು. ಅದರಲ್ಲಿದ್ದ ಮೂಳೆಯೆಲ್ಲಾ ಬೆಳ್ಳುಳ್ಳಿ ಆಯಿತು. ಅದರ ಮಾಂಸವೆಲ್ಲಾ ಈರುಳ್ಳಿ ಆಯಿತಂತೆ. ಈ ಕಾರಣಕ್ಕೇ ಕೆಲವು ಜನರಿಗೆ ಇದು ವರ್ಜ್ಯ ಅಂತ ಹೇಳುತ್ತೆ ಈ ಕಥೆ!!

ಬೆಳ್ಳುಳ್ಳಿ ಕೆಂಪು ತೊಗರಿಗಳ ಕತೆ ಅತ್ಲಾಗಿರಲಿ… ಈರುಳ್ಳಿ ಬೆಲೆ ನೋಡಿದ್ರೆ ಮಾಂಸವೇ ಈರುಳ್ಳಿ ಆಗಿದ್ದಿರಲೂಬಹುದು ಅಂತ ಈ ಕಲಿಯುಗದಲ್ಲೂ ಅನುಮಾನ ಬರದೇ ಇರುತ್ತಾ ಹೇಳಿ :-)!!

ನಿನ್ನೆಯ ನವಿರು ನೆನವಿರಿಕೆ
ಕಾಣದ ಕನಸಿನ ಕನವರಿಕೆ
ಬತ್ತದ ಭಾವಗಳ ಬಾಯಾರಿಕೆ
ಮನಸಿನ ಮರದೆಲೆಗಳ ಮರ್ಮರಕೆ

ಕಂಗಳ ಕೊಳದೊಳಗೆ…
ಹನಿಗಳ ಹಳಹಳಿಕೆ…
ಪದಗಳಾಗಿವೆ …ಪಾಪ ಪಳೆಯುಳಿಕೆ… !!

————————————

ನೀ ಬರದೆ ಹೋದ ಹಾದಿಯಲಿ
ನಿನ್ನ ಹೆಜ್ಜೆ ಗುರುತು ಅರಸುತ್ತಾ
ಗೆಜ್ಜೆ ದನಿಗೆ ಕಿವಿಯಾಗುವಾಸೆ

ನೀ ಬರೆಯದೇ ಹೋದ ಸಾಲಿನಲ್ಲಿ
ನಿನ್ನ ಎದೆಯ ಮಿಡಿತ ಹುಡುಕುತ್ತಾ
ಕಣ್ಣ ಹನಿಗೆ ಕವಿಯಾಗುವಾಸೆ !!

ತಣ್ಣಗಿದ್ದರೂ ಒಳಗೊಳಗೇ ದಹಿಸಿ
ಕೊರೆವ ಮಂಜಿನಂತೆ…
ನಿನ್ನ ತಂಪು ನೆನಪೂ
ನನ್ನ ಸುಡುತಿದೆ ಬೆಂಕಿಯಂತೆ
———————————–
ಕವಿತೆ ಅನ್ನುವರೇನು ಸಖಿ
ಪೋಣಿಸಿದ ಪದಗಳ ಸಾಲಿಗೆ?
ಕವಿತೆಯ ಅರ್ಥವೇ ಬೇರೆ ಇದೆ
ಗೆಳತಿ ನನ್ನ ಪಾಲಿಗೆ
ಅದು…
ಮುರಿದು ಹೋದ ಕನಸೊಂದರ ತುಣುಕು
ಮುಗಿದು ಹೋದ ಕ್ಷಣವೊಂದರ ಮೆಲುಕು
ಮರೆಯಲಾಗದ ನಿನ್ನೊಂದು ಮಧುರ ನೆನಪು
—————————————-
ಕನಸಿನ ಕನ್ನಡಿಯ ಬಿಂಬಗಳೆಲ್ಲಾ
ಮನಸಿನೊಳಗೆಯೇ ಬೆತ್ತಲಾಯ್ತು
ನಿನ್ನ ಕಣ್-ಬೆಳಕಿಗೆ ಬೀಳುವ ಮೊದಲೇ
ಮರೆಯಾಗಿ ಕತ್ತಲಾಯ್ತು
————————————
ನನ್ನ ಯಾತನೆಗಳನೆಲ್ಲ
ನಿನ್ನ ಬಳಿ ಹೇಳಿಕೊಂಡು
ಹಗುರಾಗೋಣವೆಂದಿದ್ದೆ..
ಹ್ಮ್.. ಹಗುರಾಗಲು ಹೋಗಿ…
ಹಗುರವಾಗಿಬಿಟ್ಟೆ  ನೋಡು !!
————————————

ನನಗೀಕೆಯ ಪರಿಚಯವಾಗಿದ್ದು ಸುಮಾರು ಹದಿನಾರು ವರ್ಷಗಳಷ್ಟು ಹಿಂದೆ. ಅವಳ ಬದುಕಿನ ದುರಂತ ಕಥೆಯನ್ನು ಕೇಳಿ ಕಣ್ಣೀರು ಮಿಡಿದದ್ದೂ ಆಗಲೇ. ಅಲ್ಲಿಂದ ಮುಂದೆ ಆಗೊಮ್ಮೆ ಈಗೊಮ್ಮೆ ಮನಸಿನ ಮೂಲೆಯಿಂದೆದ್ದು ಬರುತ್ತಿದ್ದಳು. ನೂರಾರು ಪ್ರಶ್ನೆಗಳ ಕೇಳಿ ಕಾಡುತ್ತಿದ್ದಳು. ಮತ್ತೆ ಸದ್ದಿಲ್ಲದೆ ತಟಕ್ಕನೆದ್ದು ಮನಸಿನ ಮೂಲೆ ಸೇರಿ ಬಿಡುತ್ತಿದ್ದಳು. ಮೊನ್ನೆ ಟಿ.ವಿ.ಯಲ್ಲಿ ಅವಿನಾಶ್-ಮಾಳವಿಕ ದಂಪತಿಗಳ ಸಂದರ್ಶನ ನೋಡುತ್ತಿದ್ದಾಗ ಮತ್ತೆ ಮನಸಿನ ಮಹಡಿಯಿಂದ ಇಣುಕಿದಳು ಅದೇ ಉತ್ತರವಿಲ್ಲದ ನೂರಾರು ಪ್ರಶ್ನೆಗಳನ್ನು ಹೊತ್ತ ಮುಖಭಾವದೊಂದಿಗೆ. ಈಕೆ ಹೀಗೆ ನೆನಪಾಗಲು ಕಾರಣ ಅವಿನಾಶ್-ಮಾಳವಿಕ ದಂಪತಿಗಳ ಮಗ! ಅವನ ಹೆಸರು ಗಾಲವ !!

 

ಅನುಮಾನವೇ ಬೇಡ. ಈಕೆ ಬೇರಿನ್ಯಾರೂ ಅಲ್ಲ. ವಿಶ್ವಾಮಿತ್ರರ ಶಿಷ್ಯ ಗಾಲವನ ಗುರುದಕ್ಷಿಣೆಯ ಯಜ್ಞಕ್ಕೆ ಸಮಿತ್ತಾಗಿ ಉರಿದು ಹೋದವಳೇ ಈ ಮಾಧವಿ. ವರವೊಂದು ಶಾಪವಾಗಿ ಪರಿಣಮಿಸಿದ ಕಥೆಯ ದುರಂತ ನಾಯಕಿಯೇ ಇವಳು. ಈಕೆಯ ಕಥೆಯನ್ನು ನಾನು ಕೇಳಿದ್ದು ವಧು ಮಾಧವಿ ಅನ್ನುವ ಯಕ್ಷಗಾನದ ಕ್ಯಾಸೆಟ್‌ನಲ್ಲಿ

 

ರಾಜಾ ಯಯಾತಿಯ ಮಗಳೀಕೆ. ಸುಂದರ ಬದುಕಿನ ಸ್ವಪ್ನಗಳನ್ನು ಕಂಗಳಲ್ಲಿ ತುಂಬಿಕೊಂಡು ತನ್ನನ್ನು ವರಿಸುವ ರಾಜಕುವರನ ನಿರೀಕ್ಷೆಯೊಳಿದ್ದಾಕೆ. ರಾಜಕುವರನ ಕನಸಿನಲ್ಲಿ ಕನವರಿಸುತ್ತಿದ್ದ ಈ ಬಾಲೆಯ ಬದುಕಲಿ ದುಃಸ್ವಪ್ನದಂತೆ ಬಂದವನೇ ಗಾಲವ. ಮಹಾಮುನಿ ವಿಶ್ವಾಮಿತ್ರರಲ್ಲಿ ಅಧ್ಯಯನ ಮುಗಿಸಿದವನಿವನು. ಗುರುವಿಗೇನಾದರೂ ದಕ್ಷಿಣೆ ಸಲ್ಲಿಸುವುದು ತನ್ನ ಕರ್ತವ್ಯವೆಂದು ತಿಳಿದು, ಗುರುಗಳೇ ನಿಮಗೇನು ಕೊಡಲಿ ಎಂದು ಕೇಳಿದವನು. ಏನೂ ಬೇಡವೆಂದರೂ ಕೇಳದೆ ಗುರುಗಳನ್ನು ಒತ್ತಾಯಿಸಲು ಹೋಗಿ ಅವರ ಸಿಟ್ಟಿಗೆ ಗುರಿಯಾದವನು. ವಿಶ್ವಾಮಿತ್ರರು ಸಿಟ್ಟಿನ ಭರದಲ್ಲಿ ಕೇಳಿದ್ದಿಷ್ಟು- ಗುರುದಕ್ಷಿಣೆ ನೀನು ಸಲ್ಲಿಸುವುದೇ ಆದರೆ ಎಂಟುನೂರು ಶ್ವೇತಾಶ್ವಗಳನ್ನು ತಂದುಕೊಡು. ಮಾತ್ರವಲ್ಲ ಅದರ ಒಂದು ಕಿವಿ ಮಾತ್ರ ಕಪ್ಪಾಗಿರಬೇಕು. ಮಿಕ್ಕಂತೆ ಅಶ್ವದ ಮೈಮೆಲೆ ಹುಡುಕಿದರೂ ಒಂದು ಚುಕ್ಕಿಯಷ್ಟೂ ಬೇರೆ ವರ್ಣಗಳಿರಕೂಡದು. ತಂದು ಕೊಡುತ್ತೀಯಾ? ಕೋಲುಕೊಟ್ಟು ಪೆಟ್ಟುತಿಂದ ಅವಸ್ಥೆಯಾಯ್ತು ಗಾಲವನದು. ಅಂತಹ ಅಶ್ವಗಳನ್ನು ಹುಡುಕುತ್ತಾ ಊರೂರು ಅಲೆದ. ಎಲ್ಲ ಕಡೆಗಳಲ್ಲೂ ನಿರಾಶೆಯೇ ಕಾದಿತ್ತವನಿಗೆ. ಆಗ ಸಿಕ್ಕಿದವನೇ ಅವನ ಬಾಲ್ಯಕಾಲದ ಮಿತ್ರ ಗರುಡ. ಅವನೇ ಗಾಲವನನ್ನು ಯಯಾತಿಯ ಬಳಿಗೆ ಕರೆತಂದಿದ್ದು. ಮಾಧವಿಯ ದುರಂತ ಕಥಾನಕಕ್ಕೆ ಮುನ್ನುಡಿ ಬರೆದಿದ್ದು.

 

ಗಾಲವನ ಬೇಡಿಕೆ ಏನೆಂದು ತಿಳಿದುಕೊಳ್ಳುವ ಮುನ್ನವೇ ಯಯಾತಿ ಅದನ್ನು ಈಡೇರಿಸುವ ಭರವಸೆಕೊಟ್ಟ. ಆ ಮೂಲಕ ಅರಿವಿಲ್ಲದೆಯೇ ತನ್ನ ಕಂದನ ಬದುಕಿಗೇ ಕೊಳ್ಳಿಯಿಟ್ಟ. ಶ್ವೇತಾಶ್ವಗಳು ತನ್ನಲ್ಲಿಲ್ಲದ ಕಾರಣ ಕೊಟ್ಟ ಮಾತಿಗೆ ಕಟ್ಟುಬಿದ್ದು ತನ್ನ ಮಗಳನ್ನೇ ಗಾಲವನಿಗೆ ಕೊಟ್ಟ. ಯಾವ ದೊರೆಯ ಬಳಿ ಅಂತಹ ಶ್ವೇತಾಶ್ವಗಳಿವೆಯೋ ಅವನಿಗೆ ನನ್ನ ಮಗಳನ್ನು ಕೊಟ್ಟು ನಿಮಗೆ ಬೇಕಾದ ಕುದುರೆಗಳನ್ನು ಪಡೆದುಕೊಳ್ಳಿ ಎಂದ. ಹೀಗೆ ತನ್ನ ಕನಸುಗಳನ್ನೆಲ್ಲಾ ಮೂಟೆ ಕಟ್ಟಿಟ್ಟು, ತನ್ನ ಪಾಲಿಗೊದಗಿದ ಸ್ಥಿತಿಗೆ ಕಣ್ಣೀರಿಟ್ಟು, ಯಯಾತಿಯ ಮುದ್ದುಕುವರಿ ತನ್ನ ದುರ್ವಿಧಿಯ ಹಳಿಯುತ್ತಾ ವಿಧಿಯಿಲ್ಲದೆ ಗಾಲವನೊಂದಿಗೆ ಹೊರಟಳು.

 

ಪೆತ್ತಿಹ ಪಿತನ ವಾಕ್ಯವನುಳುಹಲು

ಸತ್ಯದ ಪಥವಿಂದು…

ಬತ್ತಿದ ಆಸೆ..ಪ್ರೇಮ, ಮೋಹವು

ಸತ್ತಿತು ತನಗೆಂದು

ಮಾಧವಿ… ಕಂಬನಿ ತುಂಬಿದಳು….

 

ಸರಿ, ಶುರುವಾಯಿತು ಗಾಲವನ ಅಶ್ವಗಳ ಬೇಟೆ. ಸುಕೋಮಲೆಯಾದ ರಾಜಕುವರಿ ಮಾಧವಿ ತುಟಿ ಪಿಟ್ಟೆನ್ನದೆ ಮೌನವಾಗಿ ಹಿಂಬಾಲಿಸಿದಳು…ಎದೆಯೊಳಗೆ ಸುಡುವ ಅಗ್ನಿಪರ್ವತವನ್ನು ಅಡಗಿಸಿಡುತ್ತಾ. ಕುದುರೆಯ ಬದಲಾಗಿ ತನ್ನಪ್ಪನು ತನ್ನನ್ನು ವಸ್ತುವನ್ನು ಕೊಡುವಂತೆ ಈ ಗಾಲವನ ಕೈಗೊಪ್ಪಿಸಿದನಲ್ಲ ಎಂದು ಮನದೊಳಗೇ ರೋಧಿಸಿದಳು. ಅಪ್ಪನ ಮಾತಿಗೆ ಕಟ್ಟುಬಿದ್ದು ಹೀಗೆ ಅನ್ಯರ ತೊತ್ತಿನಂತೆ ಸಾಗುವ ತನ್ನ ಬದುಕಿನ ಕುರಿತು ಬೇಸರವಾಯ್ತು. ಹೀಗೆ ವಿಚಾರಗಳ ಸುಳಿಯೊಳಗೆ ಸಿಲುಕಿದ್ದ ಮಾಧವಿಯ ಜೊತೆಗೆ ಗಾಲವ ಅಯೋಧ್ಯೆಯನ್ನು ಬಂದು ತಲುಪಿದ. ಅಯೋಧ್ಯೆಯ ರಾಜನ ಬಳಿ ಅಂತಹ ಕುದುರೆಗಳಿವೆಯೆಂಬ ಖಚಿತ ವರ್ತಮಾನ ಸಿಕ್ಕಿತ್ತು. ಆದರೆ ಬಂದು ನೋಡಿದಾಗ ಅಲ್ಲಿಯೂ ನಿರಾಶೆಯೇ ಕಾದಿತ್ತು. ರಾಜನ ಬಳಿ ಕೇವಲ ಇನ್ನೂರು ಅಶ್ವಗಳಿದ್ದವು. ಬೇಕಾಗಿದ್ದುದು ಎಂಟು ನೂರು. ಏನು ಮಾಡಲಿ ಎಂದು ಗರುಡನೊಡನೆ ಸಮಾಲೋಚನೆ ನಡೆಸಿದ. ಆಗ ಹೊಳೆಯಿತು ಮಿತ್ರದ್ವಯರಿಗೊಂದು ಕುಟಿಲೋಪಾಯ. ಮಾಧವಿಗೊಂದು ವಿಶೇಷ ವರವಿದ್ದಿತ್ತು. ಮಗುವನ್ನು ಪಡೆದ ಬಳಿಕ ಪುನಃ ಕನ್ಯತ್ವ ಸಿದ್ಧಿಸುವ ವರ. ಈ ವರವೇ ಅವಳ ಪಾಲಿಗೆ ಶಾಪವಾಯಿತು. ಒಂದು ವರ್ಷಕ್ಕೆಂದು ಮಾಧವಿಯನ್ನು ರಾಜನಿಗೊಪ್ಪಿಸಿ, ಅವಳಿಂದ ಒಂದು ಮಗುವನ್ನು ಪಡೆದ ಮೇಲೆ ಪುನಃ ಮಾಧವಿಯನ್ನು ಕರೆದೊಯ್ಯುವ ಹಂಚಿಕೆ ಹಾಕಿದರು. ಹೇಗಿದ್ದರೂ ಅವಳು ಕನ್ಯೆಯಾಗಿರುವಳಲ್ಲ. ಅವಳನ್ನು ಇನ್ಯಾವ ರಾಜನ ಬಳಿ ಕುದುರೆ ಸಿಗುತ್ತದೋ ಅವನಿಗೊಪ್ಪಿಸಿದರಾಯ್ತು ಅಂದುಕೊಂಡರು. ಇನ್ನೂರು ಅಶ್ವಗಳನ್ನು ಪಡೆದು, ಒಂದು ವರ್ಷದ ಒಡಂಬಡಿಕೆಗೆ ಒಪ್ಪಿ, ಮಾಧವಿಯನ್ನು ಅರಸನಿಗೊಪ್ಪಿಸಿ ನಡೆದೇ ಬಿಟ್ಟ ಗಾಲವ….ಸುರಿದು ಮಾಧವಿಯ ಬದುಕಿನ ಬಟ್ಟಲಿಗೆ ಹಾಲಾಹಲವ.

 

ಪಾಪ ಮುಗ್ಧೆ ಬಾಲೆಗೇನು ಗೊತ್ತು ಇವರ ಕುಟಿಲೋಪಾಯ. ಅಂತೂ ತನಗೆ ಕೊನೆಗೂ ನೆಲೆಯೊಂದು ಸಿಕ್ಕಿತಲ್ಲ ಎಂದು ಹರ್ಷಚಿತ್ತಳಾದಳು. ವರುಷವೊಂದು ಸಂದಿತು. ಮಾಧವಿ ಮಗುವೊಂದಕ್ಕೆ ಜನ್ಮವಿತ್ತಳು. ಎಲ್ಲವೂ ಸರಿಯಾಯ್ತೆಂದು ಮಾಧವಿ ಖುಷಿಯಲ್ಲಿರಲು ಆಗ ಅಲ್ಲಿಗೆ ಬಂದ ಗಾಲವ. ಮಾಧವಿಯ ಮರಳಿ ಕೊಂಡೊಯ್ಯಲು. ಮಾಧವಿಗೆ ಸಿಡಿಲೆರಗಿದಂತಾಯ್ತು. ಈಗ ಅವಳಿಗೆ ಎಲ್ಲವೂ ಅರ್ಥವಾಗಿತ್ತು. ಎಷ್ಟು ರೋಧಿಸಿದರೂ ಎಲ್ಲಾ ವ್ಯರ್ಥವಾಗಿತ್ತು. ಮಾಧವಿಯ ಮನಸು ಅಂದಿನಿಂದ ಕಲ್ಲಾಗಿಹೋಯ್ತು.

 

            ಶಿಲೆಯಾದಳು ಕೈಗೊಂಬೆ ಗಾಲವನ

            ಜಲಧಿಯೊಳಾಡಿದರೂ….

            ಮಾಧವಿ ಸದಮಳಳಾಗಿಹಳು                                                    ( ಸದಮಳ = ಪವಿತ್ರ)

           

ಪಡೆದ ವರದ ಫಲದಿಂದ ಅವಳೀಗ ಮತ್ತೆ ಕನ್ಯೆಯಾಗಿದ್ದಳು. ಮತ್ತೆ ಶುರುವಾಯಿತು ಕುದುರೆಗಳ ಹುಡುಕಾಟ. ನಡೆದೇ ಇತ್ತು ಮಾಧವಿಯ ಬಾಳಲ್ಲಿ ವಿಧಿಯ ಕ್ರೂರ ಚೆಲ್ಲಾಟ. ಕಾಶೀರಾಜ ಮತ್ತು ಭೋಜಪುರದ ರಾಜನ ಬಳಿ ಇದ್ದ ತಲಾ ಇನ್ನೂರು ಅಶ್ವಗಳಿಗಾಗಿ ಮತ್ತೆ ನಡೆಯಿತು ಮಾಧವಿಯ ಮಾರಾಟ. ತಂದೆಯ ಮಾತನ್ನುಳಿಸಲು ಮಾಧವಿ ಬಿಕರಿಯ ಸೊತ್ತಾದಳು. ಗಾಲವನ ಹಟಕೆ ಬಲಿಯಾಗಿ ತೊತ್ತಾದಳು.

 

ವರುಷಗಳೆರಡು ಉರುಳಿದವು. ಆರುನೂರು ಅಶ್ವಗಳೇನೋ ಸಿಕ್ಕಿದವು. ಮಿಕ್ಕ ಇನ್ನೂರು ಅಶ್ವಗಳಿಗಾಗಿ ಎಷ್ಟು ಸುತ್ತಿದರೂ ಸಿಗಲೇ ಇಲ್ಲ. ಸರಿ ಇನ್ನೇನು ಮಾಡೋದು. ವಿಶ್ವಾಮಿತ್ರರ ಬಳಿ ಹೋಗಿ ಇದ್ದ ವಿಷಯವನ್ನು ಇದ್ದಂತೆಯೇ ಅರುಹಿದರಾಯ್ತೆಂದು ನಿರ್ಧರಿಸಿ, ಮಾಧವಿಯೊಡಗೂಡಿ ಗಾಲವ ಹೊರಟ. ಆಶ್ರಮ ತಲುಪುವ ಮುನ್ನವೇ ಹೊಳೆಯಿತು ಅವನಿಗೊಂದು ಕಪಟ. ಮೂರು ಮಕ್ಕಳ ಹೆತ್ತರೂ ಇವಳಿನ್ನೂ ಅಕ್ಷತ ಕನ್ಯೆಯಾಗಿಯೇ ಇರುವಳು. ಮಿಕ್ಕ ಇನ್ನೂರು ಕುದುರೆಗಳ ಬದಲಾಗಿ ಇವಳನ್ನೇ ಒಂದು ವರ್ಷದ ಮಟ್ಟಿಗೆ ವಿಶ್ವಾಮಿತ್ರರಿಗೆ ಒಪ್ಪಿಸಿದರೆ ಹೇಗೆ ಎಂದು ಯೋಚಿಸಿದ. ಮುನಿವರ್ಯರ ಬಳಿ ಬಂದು ಅಂತೆಯೇ ಸೂಚಿಸಿದ. ಅಸ್ತು ಎಂದ ಮುನಿ ಮಾಧವಿಯ ಸ್ವೀಕರಿಸಿದರು. ಆಕೆಯ ಬದುಕಲಿ ಬಂದ ನಾಲ್ಕನೆಯ ಪತಿ ಅವರಾದರು.

ಮಾಧವಿ ಅವರ ಬಳಿಯೂ ಒಂದು ವರ್ಷ ಸಂಸಾರ ನಡೆಸಿದಳು. ಅಷ್ಟಕನೆಂಬ ಪುತ್ರನೊಬ್ಬನ ಹಡೆದಳು. ಮರಳಿ ಕನ್ಯೆಯಾಗಿಯೇ ಪಿತಗೃಹವ ಸೇರಿದಳು.

 

            ಸತಿಯಾಗುತ ಪತಿ ಸದನವ ಸೇರಿ …

ಮುದ್ದು ಸುತನ ಪಡೆವೆ…

 

ಅನ್ನುವ ಮಾಧವಿಯ ಆಸೆಯೊಂದು ಹೀಗೆ ಕಮರಿಹೋಯ್ತು. ಗಾಲವನ ಗುರುದಕ್ಷಿಣೆ ಸಲ್ಲಿಸುವ ಹಟ ಮತ್ತು ಪಿತನು ನೀಡಿದ ಭಾಷೆಯ ಉಳಿಸಲು ಮಾಧವಿಯ ಬದುಕು ಹರಿದು ಹಂಚಿಹೋಯ್ತು.

 

ಇಷ್ಟೆಲ್ಲಾ ನಡೆದ ಮೇಲೆ ಯಯಾತಿಗೆ ನಡೆದ ತಪ್ಪಿನ ಅರಿವಾಯ್ತು. ಮಿಂಚಿಹೋಗಿದ್ದಕ್ಕೆ ಚಿಂತಿಸಿ ಏನು ಫಲವಿತ್ತು? ಆದರೂ ಅವನಲ್ಲಿ ದೂರದ ಆಸೆಯೊಂದು ಇನ್ನೂ ಉಳಿದಿತ್ತು. ನಾಲ್ಕು ಮಕ್ಕಳನ್ನು ಹಡೆದರೂ ಈಕೆಯಿನ್ನೂ ಕನ್ಯೆಯಾಗಿಯೇ ಉಳಿದಿಹಳು. ತಾನು ಕಣ್ಮುಚ್ಚುವುದರೊಳಗೆ ಇವಳಿಗೊಂದು ಸ್ವಯಂವರವನ್ನೇರ್ಪಡಿಸಿ, ಮದುವೆ ಮಾಡಿಸುವುದೇ ತನ್ನ ಪಾಪಕ್ಕೆ ಪ್ರಾಯಶ್ಚಿತ್ತವೆಂದು ನಂಬಿದ್ದ. ಅಂತೆಯೇ ದೇಶ-ವಿದೇಶಗಳ ರಾಜ ಮಹಾರಾಜರುಗಳು, ಯಕ್ಷರು-ಗಂಧರ್ವರು-ಕಿನ್ನರರಾದಿಯಾಗಿ ಎಲ್ಲರೂ ನೆರೆದಿದ್ದರು. ಮಾಧವಿ ತನ್ನನೇ ವರಿಸುವಳೆಂದು ಕಾದಿದ್ದರು.

 

ಒಮ್ಮೆ ಯೋಚಿಸಿದಳು ಮಾಧವಿ. ನನಗೆ ಸಿಕ್ಕಿದ ವರದಾನದ ಫಲವಾಗಿ ನಾನಿನ್ನೂ ಕನ್ಯೆಯಾಗಿಯೇ ಉಳಿದಿರುವೆ. ಆದರೆ ಈ ನಡುವೆ ಯಾರೂ ಯೋಚಿಸಲೇ ಇಲ್ಲ. ನನಗೂ ಮನಸ್ಸು ಅನ್ನುವುದೊಂದಿದೆ. ಮತ್ತೆ ಹಸೆಮಣೆಯೇರಲು ನಾನೀಗ ಸಿದ್ಧಳಿಲ್ಲ. ಬಯಸಿದಾಕ್ಷಣ ಬದಲಾಯಿಸಲು ಮನಸೇನು ಬಟ್ಟೆಯಲ್ಲವಲ್ಲ. ನಾಲ್ಕು ವರುಷಗಳ ಪಡಿಪಾಟಲು ಅವಳನ್ನು ಹುರಿದು ಮುಕ್ಕಿ ಹಾಕಿತ್ತು. ಮದುವೆಯ ಆಸೆಯು ಅವಳ ಮನದಲ್ಲಿ ಎಂದೋ ನಶಿಸಿತ್ತು. ಸೂತ್ರದ ಗೊಂಬೆಯಂತೆ ಕುಣಿಸುವ ಈ ಮನುಷ್ಯರ ಕಂಡು ಅವಳ ಮನಸು ರೋಸಿತ್ತು. ಈ ಮನುಷ್ಯರ ನಡುವೆ ಬದುಕುವುದಕ್ಕಿಂತ ಕಾಡೇ ಲೇಸೆನಿಸಿತ್ತು. ಹೆತ್ತ ತಂದೆಯೇ ಮಗಳನ್ನು ಗಾಲವನ ತೊತ್ತನ್ನಾಗಿಸಿ ಕಳಿಸಿದ ಮೇಲೆ ಇನ್ನು ಈ ಜಗತ್ತಿನಲ್ಲಿ ಯಾವ ವಿಶ್ವಾಸದ ಮೇಲೆ ಬದುಕಿರಬೇಕು ಅಂದುಕೊಂಡು, ಎಲ್ಲರೂ ಬಿಡುಗಣ್ಣಾಗಿ ನೋಡುತ್ತಿರುವಂತೆಯೇ ಮಾಧವಿ ಕೈಲಿದ್ದ ಮಾಲೆ ಬಿಸುಟಳು. ಓಡುತ್ತಾ ಹೋಗಿ ಕಾನನದೊಳಗೆ ಸೇರಿಕೊಂಡಳು…

            ಪೆತ್ತಿಹ ಪಿತನ ವಾಕ್ಯವನುಳುಹಲು

            ಸತ್ಯದ ಪಥವಿಂದು,

ಬತ್ತಿದ ಆಸೆ, ಪ್ರೇಮ ಮೋಹವು

ಸತ್ತಿತು ತನಗೆಂದು…

ಮಾಧವಿ ಹೊರಟಳು ಕಾನನಕೆ…..

 

( ಇಲ್ಲಿ ಉಪಯೋಗಿಸಿರುವ ಯಕ್ಷಗಾನದ ಪದಗಳನ್ನು ಹದಿನಾರು ವರ್ಷದ ಹಿಂದೆ ಕೇಳಿದ ನೆನಪಿನ ಅಧಾರದ ಮೇಲೆ ಬರೆದಿದ್ದೇನೆ. ಅದರಲ್ಲಿ ತಪ್ಪಿರಲೂ ಬಹುದು. ತಪ್ಪಿದ್ದರೆ…ನಿಮಗೆ ಗೊತ್ತಿದ್ದರೆ.. ತಿದ್ದಿ ಓದಿ )