Posts Tagged ‘ಅಫ್ರಿಕಾ’

untitled

ಹಾಗೆ ಶುರುವಾಗಿ ಹೋಗಿತ್ತು ಈದಿ ಅಮಿನ್ ಎಂಬ ವಿಲಕ್ಷಣ ಸರ್ವಾಧಿಕಾರಿಯ ಅಧಿಕಾರ ಪರ್ವ. ಅಧಿಕಾರಕ್ಕೆ ಬಂದವನೇ ಅಮಿನ್ ಪಾದರಸ ಕುಡಿದವನಂತೆ ಚುರುಕಾಗಿಬಿಟ್ಟ. ದೇಶದ ಎಲ್ಲಾ ನಾಗರಿಕ ಕಾಯ್ದೆಗಳನ್ನು ಕಿತ್ತೊಗೆದು ಮಿಲಿಟರಿ ಕಾನೂನುಗಳನ್ನು ಜಾರಿಗೆ ತಂದ. ಅಧ್ಯಕ್ಷನ ಅಧಿಕೃತ ಭವನವೀಗ ಕಮಾಂಡ್ ಪೋಸ್ಟ್ ಅನ್ನಿಸಿಕೊಂಡಿತು. ಎಲ್ಲಾ ಆಯಕಟ್ಟಿನ ಜಾಗಗಳಲ್ಲಿ ಅವನ ಪರಮಾಪ್ತರೇ ಬಂದು ಕುಳಿತುಬಿಟ್ಟರು. ಜನರಲ್ ಸರ್ವಿಸ್ ಯುನಿಟ್ ಅನ್ನೋ ಹೆಸರಿನಗುಪ್ತಚರ ಇಲಾಖೆಯನ್ನು ಬದಲಿಸಿ ಸ್ಟೇಟ್ ರಿಸರ್ಚ್ ಬ್ಯೂರೋವನ್ನು ಹುಟ್ಟುಹಾಕಿದ. ಕಂಪಾಲದಲ್ಲಿದ್ದ ಬ್ಯುರೋದ ಪ್ರಧಾನ ಕಚೇರಿ ಯಾಕೋ ಮೌನ ಹೊದ್ದು ಮಲಗಿಬಿಟ್ಟಿತ್ತು… ಮುಂದೆ ಅಲ್ಲಿ ಕೇಳಲಿರುವ ಸಾವಿನ ಕೇಕೆಗಳಿಗೆ ನೋವಿನ ಆಕ್ರಂಧನಗಳಿಗೆ ತಾನು ಮೂಕಸಾಕ್ಷಿಯಾಗಬೇಕೆಂದು ಮೊದಲೇ ಗೊತ್ತಿದ್ದಂತೆ!!

 

ಈ ನಡುವೆ ಪದಚ್ಯುತ ಅಧ್ಯಕ್ಷ ಒಬೋಟೆ ತಾಂಜಾನಿಯಾದಲ್ಲಿ ಆಶ್ರಯ ಪಡೆದುಕೊಂಡ. ಉಗಾಂಡಾದಿಂದ ಹೊರದಬ್ಬಲ್ಪಟ್ಟ ಇಪ್ಪತ್ತು ಸಾವಿರಕ್ಕೂ ಮಿಕ್ಕಿದ ಜನರನ್ನೆಲ್ಲಾ ತನ್ನ ತೆಕ್ಕೆಗೆಳೆದುಕೊಂಡು ಉಗಾಂಡಾವನ್ನು ವಶಪಡಿಸಿಕೊಳ್ಳಲು ಹೊರಟೇಬಿಟ್ಟ. ಆದರೆ ಸಮರ ತಂತ್ರ ಹಾಗು ಅದಕ್ಕೆ ಬೇಕಾದ ಸಿದ್ಧತೆಯ ಲವಲೇಶವೂ ಇಲ್ಲದ ಅವನ ಬೆಂಬಲಿಗರ ದೆಸೆಯಿಂದಾಗಿ ಅವನು ಹೀನಾಯವಾಗಿ ಸೋತುಹೋದ. ಆದರೆ ಒಬೋಟೆಯ ಈ ಪ್ರಯತ್ನದಿಂದ ಅಮಿನ್ ಕನಲಿ ಕೆಂಡವಾಗಿಬಿಟ್ಟ.. ಮತ್ತು ಒಬೋಟೆ ಬೆಂಬಲಿಗರಾದ ಅಕೋಲಿ ಮತ್ತು ಲಾಂಗೋ ಬುಡಕಟ್ಟಿನವರನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಲಾರಂಭಿಸಿದ. 1972ರ ಆರಂಭದಲ್ಲಿ ಹೀಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ ಹದಿನೈದು ಸಾವಿರವನ್ನು ಮುಟ್ಟಿತ್ತು ಎಂದರೆ ಅವನು ಅದಿನ್ಯಾವಪರಿ ಅವರ ಮೇಲೆ ಮುರಕೊಂಡು ಬಿದ್ದಿದ್ದಾನೋ ನೀವೆ ಲೆಕ್ಕ ಹಾಕಿ. ಮೊದಮೊದಲು ಒಬೋಟೆ ಬೆಂಬಲಿಗ ಸೈನಿಕರ ವಿರುದ್ಧವಷ್ಟೇ ಪ್ರಹಾರ ಮಾಡಿದ ಅಮಿನ್ ಕ್ರಮೇಣ ಧಾರ್ಮಿಕ ನಾಯಕರು, ಪತ್ರಕರ್ತರು, ಹಿಂದಿನ ಸರ್ಕಾರದ ಮಂತ್ರಿಗಳು, ವಕೀಲರು, ನ್ಯಾಯಾಧೀಶರು, ವಿದ್ಯಾರ್ಥಿಗಳು, ವಿದೇಶಿಯರು, ಜನಸಾಮಾನ್ಯರು…ಕೊನೆಗೆ ತನ್ನ ವಿರುದ್ಧ ಇದ್ದಾರೆಂದು ಭಾವಿಸಿದ ಅವನದೇ ಸರ್ಕಾರದ ಮಂತ್ರಿಗಳು… ಹೀಗೆ ತನ್ನ ಕುರಿತು ದನಿಯೆತ್ತಿದವರ ಸದ್ದಡಗಿಸಲು ಮುಂದಾಗಿಬಿಟ್ಟ.

 

ಸ್ವಭಾವತಃ ಸಂಶಯಪಿಶಾಚಿಯಾಗಿದ್ದ ಅಮಿನ್‌ಗೆ ಯಾರ ಮೇಲಾದರೂ ಕೊಂಚ ಅನುಮಾನ ಬಂದರೂ ಅವರು ನಿಗೂಢ ರೀತಿಯಲ್ಲಿ ಕಣ್ಮರೆಯಾಗತೊಡಗಿದರು. ಅವನ ಕ್ರೌರ್ಯ ಎಲ್ಲಿಗೆ ಬಂದು ಮುಟ್ಟಿತೆಂದರೆ… ತನಗೆ ಎದುರಾಡಿದವರು, ತನಗೆ ಗೌರವ ಕೊಡದವರನ್ನೂ ಹಿಡಿದು ಕೊಲ್ಲಲಾರಂಭಿಸಿದ. ಅವನ ಉರಿ ಹಸ್ತದ ಬೆಂಕಿಗೆ ಅನೇಕ ಹಳ್ಳಿಗಳು ನಿರ್ಮಾನುಷ್ಯವಾಗಿ ಹೋದವು. ಪವಿತ್ರ ನೈಲ್ ನದಿ ಅಮಾಯಕರ ರಕ್ತ ಕುಡಿದು ಕೆಂಪಾಗತೊಡಗಿತ್ತು. ಅವನು ಕೊಲ್ಲಿಸಿದ್ದ ವ್ಯಕ್ತಿಗಳ ಶವಗಳನ್ನು ನೈಲ್ ನದಿಯಲ್ಲಿ ತೇಲಿ ಬಿಡಲಾಗುತ್ತಿತ್ತು ಮತ್ತು ಆ ಶವಗಳನ್ನು ಹಿಡಿದು ದಡಕ್ಕೆಸೆಯಲು ಕೆಲಸಗಾರರನ್ನು ನೇಮಿಸಲಾಗಿತ್ತು. ಓವನ್ ಫಾಲ್ಸ್ ಬಳಿಯಿದ್ದ ಜಲವಿದ್ಯುತ್ ಉತ್ಪಾದನೆಗೆ ಕಟ್ಟಲಾಗಿದ್ದ ಅಣೆಕಟ್ಟಿನ ತೂಬುಗಳಲ್ಲಿ ಈ ಶವಗಳು ಸಿಕ್ಕಿಹಾಕಿಕೊಂಡು ಒಮ್ಮೆ ತೊಂದರೆಯಾದ ಬಳಿಕ ಈ ವ್ಯವಸ್ಥೆ ಮಾಡಲಾಗಿತ್ತಂತೆ. ಈತನ ಬರ್ಬರ ಕೃತ್ಯಗಳ ಪರಮಾವಧಿಯೋ ಎಂಬಂತಹ ಈ ಘಟನೆಯ ವಿವರಣೆಯನ್ನು ಓದಿದಾಗ ಅಬ್ಬಾ ಮನುಷ್ಯ ಮೃಗವೇ ಅನ್ನಿಸಿದ್ದು ಸುಳ್ಳಲ್ಲ. ಎಲ್ಲೆಂದರಲ್ಲಿ ತೇಲಿ ಬರುವ ಕೊಳೆತ ಹೆಣಗಳ ವಾಸನೆಗೆ ಇಡೀ ಉಗಾಂಡವೇ ಸ್ಮಶಾನವಾಗಿಬಿಟ್ಟಿತ್ತು… ಹೀಗೆ ನಿರಂತರ ಎಂಟು ವರ್ಷಗಳ ಕಾಲ ಅವ್ಯಾಹತವಾಗಿ ಮುಂದುವರಿದ ಈ ಮಾರಣಹೋಮಕ್ಕೆ ಆಹುತಿಯಾದವರ ನಿರ್ದಿಷ್ಟ ಲೆಕ್ಕ ಸಿಕ್ಕಿಲ್ಲವಾದರೂ, ಈ ಕುರಿತು ಮಾಹಿತಿ ಕಲೆಹಾಕಿ ವಿಚಾರಣೆ ನಡೆಸಿದ ಅಂತರರಾಷ್ಟ್ರೀಯ ಜ್ಯೂರಿಗಳ ಸಮಿತಿ ನೀಡುವ ಮಾಹಿತಿಯ ಪ್ರಕಾರ ಏನಿಲ್ಲವೆಂದರೂ ಮೂರು ಲಕ್ಷ ಜನ ಈ ಅವಧಿಯಲ್ಲಿ ಅಸುನೀಗಿದ್ದರು! ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳುವ ಪ್ರಕಾರ ಕನಿಷ್ಟ ಐದು ಲಕ್ಷ ಜನರು ಈ ಮಾರಣಹೋಮದಲ್ಲಿ ಸಮಿಧೆಯಾಗಿ ಉರಿದು ಹೋಗಿದ್ದರು…!!

 

ಅಮಿನ್‌ಗೆ ಆಗಾಗ್ಗೆ ತನಗೆ ಬೀಳುತ್ತಿದ್ದ ಕನಸುಗಳ ಬಗ್ಗೆ ಹೇಳಿಕೊಳ್ಳುತ್ತಿದ್ದ. ಅವನ ಪ್ರಕಾರ ಕನಸಿನ ಮೂಲಕ ಅವನಿಗೆ ತಾನು ಹೇಗೆ ಸಾಯುತ್ತೇನೆ ಅನ್ನೋದು ತಿಳಿದುಬಿಟ್ಟಿದೆ. ದೇವರೇ ಕನಸಿನಲ್ಲಿ ಬಂದು ಈ ಕುರಿತು ಹೇಳಿರುವುದರಿಂದ ಒಬೋಟೆ ಬೆಂಬಲಿಗರು ಏನೇ ತಿಪ್ಪರಲಾಗ ಹಾಕಿದರೂ ತನ್ನನ್ನೇನೂ ಮಾಡಲಾರರು ಅನ್ನುತ್ತಿದ್ದ. ನಿಜವಾಗಿ ಹಾಗೊಂದು ಕನಸು ಅವನಿಗೆ ಬಿದ್ದಿತ್ತಾ ಅಥವಾ ತನ್ನೊಳಗಿನ ಭೀತಿಯನ್ನು ಮೆಟ್ಟಿನಿಲ್ಲಲು ಅವನು ಕಂಡುಹಿಡಿಕೊಂಡ ಒಂದು ಪರಿಹಾರವೋ ಗೊತ್ತಿಲ್ಲ. ಆದರೆ ಅವನಿಗೆ ಬಿದ್ದ ಇನ್ನೊಂದು ಕನಸು ನೂರಾರು ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದ ಏಷ್ಯನ್ನರ ಪಾಲಿಗೆ ಮರೆಯಲಾಗದಂತಹ ದು:ಸ್ವಪ್ನವಾಗಿದ್ದು ಮಾತ್ರ ದುರಂತ. 1972ರ ಒಂದು ದಿನ ಅಮಿನ್… ತನಗೆ ಕನಸಿನಲ್ಲಿ ದೇವರ ಅಪ್ಪಣೆಯಾಗಿದೆ. ಉಗಾಂಡಾವು ಇನ್ನು ಮುಂದೆ ಕಪ್ಪುಜನರ ರಾಷ್ಟ್ರವಾಗಬೇಕೆಂದು ದೇವರು ಆದೇಶ ಮಾಡಿಬಿಟ್ಟಿದ್ದಾನೆ. ಕಪ್ಪು ಜನರಲ್ಲದವರು ಗಂಟು ಮೂಟೆ ಕಟ್ಟಿ…ಈ ದೇಶ ಕರಿಯರದ್ದು.. ಅಂತ ಹುಕುಂ ಹೊರಡಿಸಿಬಿಟ್ಟ. ಉಗಾಂಡದಲ್ಲಿ ನೆಲೆಗೊಂಡಿದ್ದ ಸುಮಾರು 80,000 ಕ್ಕೂ ಮಿಕ್ಕಿದ ಏಷ್ಯನ್ನರನ್ನು ಉಟ್ಟಬಟ್ಟೆಯಲ್ಲೇ ಹೊರದಬ್ಬುವ ಪರಮ ಅನಾಹುತಕಾರಿ ನಿರ್ಧಾರಕ್ಕೆ ಅವನಾಗಲೇ ಬಂದು ಬಿಟ್ಟಿದ್ದ. ಅವರೆಲ್ಲರೂ ಸುಮಾರು ಮೂರು ತಲೆಮಾರುಗಳ ಹಿಂದೆ ತಮ್ಮ ವಸಾಹತುಗಳಲ್ಲಿ ಕೆಲಸ ಮಾಡಲು ಬ್ರಿಟಿಷರು ಭಾರತ, ಪಾಕಿಸ್ಥಾನಗಳಿಂದ ಕರೆತಂದಿದ್ದ ಕೂಲಿಯಾಳುಗಳ ವಂಶದವರು. ತಮ್ಮ ಸ್ಥಿರ-ಚರಾಸ್ತಿಗಳನ್ನೆಲ್ಲಾ ಬಿಟ್ಟು ತೊಂಬತ್ತು ದಿನಗಳಲ್ಲಿ ಉಗಾಂಡಾ ಬಿಟ್ಟು ತೊಲಗಬೇಕು… ಇಲ್ಲವಾದಲ್ಲಿ ಈ ಭೂಮಿಯ ಮೇಲೆ ನೀವಿರುವುದಿಲ್ಲ ಅಂತ ಧಮಕಿ ಹಾಕಿದ. ಅಲ್ಲೇ ಹುಟ್ಟಿ ಬೆಳೆದು, ಉಗಂಡಾದವರೇ ಆಗಿ ಹೋಗಿದ್ದ ಸಾವಿರಾರು ಜನ ವೈದ್ಯರು, ವಕೀಲರು, ಶಿಕ್ಷಕರು, ಉದ್ಯಮಿಗಳು… ಇವರೆಲ್ಲ ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಭಾರತ, ಸ್ವೀಡನ್‌ಗಳಿಗೆ ಗುಳೇ ಹೊರಟರು. ಅವರ ಆಸ್ತಿ-ಪಾಸ್ತಿ-ನೌಕರಿ ಎಲ್ಲವನ್ನೂ ಈದಿ ಅಮಿನ್ ಬೆಂಬಲಿಗರು ಕಬಳಿಸಿದರು. ಏಷ್ಯನ್ನರ ಕಂದು ಮೈಚರ್ಮದ ಬಣ್ಣವೇ ಅವರ ಬದುಕಿಗೆ ಮುಳುವಾಯ್ತು.

 

ಆದರೆ ಈ ಕೃತ್ಯದಿಂದಾಗಿ ತಾನೆಂತಹ ಅನಾಹುತಕಾರಿ ಪರಿಸ್ಥಿತಿಯೊಂದಕ್ಕೆ ಎಡೆಮಾಡಿಕೊಡುತ್ತಿದ್ದೇನೆ ಅನ್ನೋದು ಅಮಿನ್ ಅನ್ನೋ ಹುಂಬನಿಗೆ ಗೊತ್ತೇ ಇರಲಿಲ್ಲ… ಪಾಪ!! ತಾನು ಕಂಡ ಕನಸಿನ ಆಫ್ರಿಕಾದ ಚಿತ್ರ ಚದುರಿಹೋಗಲಿದೆ ಅನ್ನೋದು ಅವನರಿವಿಗೆ ನಿಧಾನವಾಗಿ ಬರಲಾರಂಭಿಸಿತ್ತು. ಸಸೂತ್ರವಾಗಿದ್ದ ಉದ್ಯಮಗಳು ಸೂತ್ರ ಹರಿದ ಪಟದಂತಾಗಿಬಿಟ್ಟವು. ದೇಶದ ಹಣಕಾಸಿನ ಪರಿಸ್ಥಿತಿ ದೇವರಿಗೇ ಪ್ರೀತಿ ಅನ್ನುವಂತಾಗಿಬಿಟ್ಟಿತು. ಶಾಲೆ, ಆಸ್ಪತ್ರೆಗಳು ಹಾಳುಸುರಿವ ಮುರುಕು ಛತ್ರದಂತಾಗಿಬಿಟ್ಟವು. ಇಡೀ ದೇಶದ ಆರ್ಥಿಕತೆ ಕಡಿದುರುಳಿಸಿದ ಬಾಳೆ ಮರದಂತೆ ಕುಸಿದುಬಿದ್ದಿತ್ತು. ವಾಸ್ತವದಲ್ಲಿ ಅವನ ಉದ್ಧೇಶ ಕಪ್ಪು ಜನರಿಗೆ ಒಳಿತನ್ನು ಮಾಡಬೇಕೆಂಬುದೇ ಆಗಿತ್ತು. ಹೇಗಾದರೂ ಮಾಡಿ ತನ್ನ ದೇಶಕ್ಕೆ-ಜನಕ್ಕೆ ಒಳ್ಳೆಯದು ಮಾಡಬೇಕೆಂದು ಅವನು ಪಣತೊಟ್ಟಿದ್ದನೇ ಹೊರತು… ಅದನ್ನು ಹೇಗೆ ಸಾಧಿಸಬೇಕೆಂಬ ಬಗ್ಗೆ ಅವನಿಗೇ ಸ್ಪಷ್ಟವಿರಲಿಲ್ಲ. ಅವನು ತನ್ನ ಸುತ್ತ ಕಟ್ಟಿಕೊಂಡಿದ್ದ ಆಡಳಿತಗಾರರ- ಆಧಿಕಾರಿಗಳ ಬೆಂಬಲ ಪಡೆಗೆ ಮೊದಲೇ ಏನೂ ಗೊತ್ತಿರಲಿಲ್ಲ. ಏನನ್ನಾದರೂ ಮಾಡುವುದಕ್ಕೆ ನೆರವಾಗಬಲ್ಲ ಸಾಮರ್ಥ್ಯವಿದ್ದ ಏಷ್ಯನ್ನರನ್ನು ತಾನೇ ಖುದ್ದಾಗಿ ನಿಂತು ಹೊರಹಾಕಿಸಿದ್ದ. ಆದರೆ ಅವನ ಈ ಮೂರ್ಖ ತೀರ್ಮಾನಗಳಿಗೆ ಬೆಲೆ ತೆತ್ತಿದ್ದು ಮಾತ್ರ… ಅವನು ಅಧಿಕಾರಕ್ಕೆ ಬಂದಾಗ ಅವನತ್ತ ಆಸೆಕಂಗಳಿಂದ ದಿಟ್ಟಿಸಿದ್ದ ಮುಗ್ಧ ಉಗಾಂಡಾದ ಜನರು… ತಮ್ಮ ಉದ್ಧಾರಕ್ಕೆ ಬಂದ ಅವಧೂತನಂತೆ ಕಂಡಿದ್ದ ಅದೇ ಅಮಿನ್ ಈಗ ಸೈತಾನನಾಗಿ ಗೋಚರಿಸಲಾರಂಭಿಸಿದ್ದ…. ಅವನ ದುರಾಡಳಿತ-ದೌರ್ಜನ್ಯದಿಂದ ಜನತೆ ಎಷ್ಟು ಬೇಸತ್ತಿದ್ದರು ಅನ್ನುವುದಕ್ಕೆ ಸಾಕ್ಷಿ ಬೇಕಿದ್ದರೆ ಅಮಿನ್ 1979ಲ್ಲಿ ಪದಚ್ಯುತನಾದಾಗ ಜನರ ಸಂಭ್ರಮಾಚರಣೆಯ ದೃಶ್ಯಗಳನ್ನು, ಚಿತ್ರಗಳನ್ನು ನೋಡಬೇಕು.

 

ದೇಶದ ಆದಾಯದ ಬೆನ್ನೆಲುಬಿನಂತಿದ್ದ ಏಷಿಯನ್ನರನ್ನು ಹೊರಗಟ್ಟಿದ ಅಮಿನ್, ಕುಸಿದ ಆರ್ಥಿಕತೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಜಡಿಯಲಾರಂಭಿಸಿದ, ತನ್ನ ವಿರೋಧಿಗಳನ್ನು ಹಣಿಯುವ ಸಲುವಾಗಿ ದೇಶದ ಅಳಿದುಳಿದ ಆದಾಯದ ಮೂಲಗಳನ್ನು ಮಿಲಿಟರಿ ವ್ಯವಸ್ಥೆಗೆ ಸುರಿಯಲಾರಂಭಿಸಿದ. ಸುಮಾರು 18,000 ಜನರನ್ನು ಪಬ್ಲಿಕ್ ಸೇಫ್ಟಿ ಯುನಿಟ್, ಸ್ಟೇಟ್ ರೀಸರ್ಚ್ ಬ್ಯೂರೋ ಮತ್ತು ಮಿಲಿಟರಿ ಪೊಲಿಸ್ಗಳಿಗೆ ನೇಮಿಸಿಕೊಂಡು ತನ್ನ ಶತ್ರುನಾಶದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮುಂದುವರಿಸಿದ. ಆರಂಭದಲ್ಲಿ ಅಮಿನ್‌ಗೆ ಬೆಂಬಲವಾಗಿದ್ದ ಇಸ್ರೆಲ್,ಬ್ರಿಟನ್‌ಗಳ ಮೇಲೆ ಕೂಡಾ ಹಗೆ ಕಾರಲಾರಂಭಿಸಿದ. ಇಸ್ರೇಲ್ ಜೊತೆ ಸಂಬಂಧ ಮುರಿದುಕೊಂಡು ಪ್ಯಾಲಸ್ತೀನ್ ವಿಮೋಚನಾ ಚಳುವಳಿಗೆ ಬೆಂಬಲ ಸೂಚಿಸಿದ. ಉಗಾಂಡಾದಲ್ಲಿದ್ದ ಬ್ರಿಟನ್ ಉದ್ಯಮಗಳನ್ನು ರಾಷ್ಟ್ರೀಕರಣ ಮಾಡಿದ. ಹೀಗೆ ತನಗೆ ನೆರವಾದವರನ್ನೇ ಹಣಿಯಲು ಮುಂದಾದ ಅಮಿನ್ ನವ ಭಸ್ಮಾಸುರನೆನಿಸಿಕೊಂಡ…. ತನ್ನ ಉರಿಹಸ್ತದ ದೆಸೆಯಿಂದಾಗಿ ಉಗಾಂಡಾದ ಜನರ ಬದುಕಿಗೇ ಕೊಳ್ಳಿಯಿಟ್ಟುಬಿಟ್ಟ.

 

( ಮುಂದಿನ ಭಾಗಗಳಲ್ಲಿ…

ಭಾಗ ಮೂರು– ನರಹಂತಕನ ನರಭಕ್ಷಣೆಯ ಕಥೆ… ಟಾಂಜಾನಿಯಾ ಯುದ್ಧದಲ್ಲಿ ಮುಗಿಯಿತು ದರ್ಬಾರಿ ದಿನಗಳು…

ಭಾಗ ನಾಲ್ಕು – ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲೆಂಡ್ ಚಿತ್ರದ ಕಥೆ…

ಭಾಗ ಐದು – ದೊರೆತನ ಅಳಿದ ಮೇಲೆ

)

amin_dada_lg

೧೯೭೧ರ ಜನವರಿ ೨೫, ಉಗಾಂಡಾದ ಇತಿಹಾಸದಲ್ಲೊಂದು ವಿಲಕ್ಷಣ ತಿರುವು. ಅಪೋಲೋ ಮಿಲ್ಟನ್ ಒಬೋಟೆಯನ್ನು ಪದಚ್ಯುತಗೊಳಿಸಿ ಉಗಾಂಡಾದ ಚುಕ್ಕಾಣಿಯನ್ನು ಕೈಗೆತ್ತಿಕೊಂಡ ಈದಿ ಅಮಿನ್ ಅನ್ನೋ ಸೇನಾನಾಯಕನಿಗೆ ಭವಿಷ್ಯತ್ತಿನಲ್ಲಿ ತನ್ನ ಅವಸಾನದ ಬಳಿಕವೂ ಬಹುಚರ್ಚಿತ ವ್ಯಕ್ತಿ ತಾನಾಗಬಹುದೆಂಬ ಸಣ್ಣ ಸುಳಿವೂ ಇದ್ದಿರಲಿಕ್ಕಿಲ್ಲ. ಅವನ ಧ್ಯೇಯ ಸ್ಪಷ್ಟವಾಗಿತ್ತು. ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಷ್ಟು ಸುದೃಢವಾಗಿ-ಬಲಿಷ್ಟವಾಗಿ ಬೆಳೆದು ನಿಂತ ಅಫ್ರಿಕಾದ ಚಿತ್ರ ಅವನ ಕಣ್ಮುಂದೆ ಕುಣಿಯುತ್ತಿತ್ತು ಮತ್ತು ಅದನ್ನು ಶತಾಯಗತಾಯ ನನಸಾಗಿಸುತ್ತೇನೆಂಬ ತುಂಬು ವಿಶ್ವಾಸವೂ ಇತ್ತು. ಅದಕ್ಕೆ ಬೇಕಾದ ಹುಂಬ ಧೈರ್ಯ, ಪಟ್ಟುಬಿಡದ ಛಲ, ಆಸೀಮ ಎದೆಗಾರಿಕೆ ಅವನಲ್ಲಿ ತುಂಬಿ ತುಳುಕುತ್ತಿತ್ತು. ಅವೆಲ್ಲಕ್ಕಿಂತಲೂ ಮಿಗಿಲಾಗಿ ಅವನ ನರನಾಡಿಗಳಲ್ಲಿ ನಿರ್ದಯತೆ ಬೆರೆತ ತಣ್ಣನೆಯ ಕ್ರೌರ್ಯ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿತ್ತು….ಮತ್ತದು ಆಫ್ರಿಕಾದ ಇತಿಹಾಸದಲ್ಲಿ ರಕ್ತಸಿಕ್ತ ಅಧ್ಯಾಯವೊಂದಕ್ಕೆ ಬರೆದ ಮುನ್ನುಡಿಯಂತಿತ್ತು!! ಈ ಘಟನೆಯ ಮೂಲಕ ಹಿಟ್ಲರ್‌ನ ನಂತರ ಜಗತ್ತು ಕಂಡ ಭೀಕರ ನರಮೇಧವೊಂದರ ರೂವಾರಿ ಹುಟ್ಟಿಬಿಟ್ಟಿದ್ದ… ಮೇಲಾಗಿ ಕ್ರೌರ್ಯದಲ್ಲಿ ಅವನನ್ನೂ ಮೀರಿಸೋವಷ್ಟು ಕಟುಕನೊಬ್ಬ ತಯಾರಾಗಿ ಬಿಟ್ಟಿದ್ದ !!

 

ಈದಿ ಅಮಿನ್ ಹುಟ್ಟಿದ್ದು ಇಪ್ಪತ್ತರ ದಶಕದ ಮಧ್ಯಭಾಗದಲ್ಲಿ. ಹುಟ್ಟಿದ ಇಸವಿಯ ಬಗ್ಗೆ ಸಾಕಷ್ಟು ಗೊಂದಲಗಳಿವೆಯಾದರೂ ಅವನ ಮಗ ಜಾಫರ್ ಅಮಿನ್ ಹೇಳೋ ಪ್ರಕಾರ ಈದಿ ಅಮಿನ್ ಹುಟ್ಟಿದ್ದು ಉಗಾಂಡಾದ ಈಶಾನ್ಯ ಗಡಿ ಭಾಗದ ಅರುವಾದಲ್ಲಿ; 1927ನೇ ಇಸವಿಯಲ್ಲಿ. ಈ ಪ್ರದೇಶ ಕಾಂಗೋ ಮತ್ತು ಸೂಡಾನ್‌ನ ಗಡಿಭಾಗದಲ್ಲಿದೆ. ಇನ್ನೊಂದು ಮೂಲದ ಪ್ರಕಾರ ಅವನ ಹುಟ್ಟು 1925ರಲ್ಲಿ ಕಂಪಾಲದಲ್ಲಾಯ್ತು. ಕಾಕ್ವಾ(ಕಕ್ವಾ ಅಂತಲೂ ಉಚ್ಚರಿಸಬಹುದು) ಬುಡಕಟ್ಟಿಗೆ ಸೇರಿದ ಅವನಪ್ಪ ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದ. ಜೀವನೋಪಾಯಕ್ಕಾಗಿ ವ್ಯವಸಾಯ ಮಾಡುತ್ತಿದ್ದ ರೈತ. ಲುಗ್‌ಬರಾ ಬುಡಕಟ್ಟಿಗೆ ಸೇರಿದ ಅವನಮ್ಮನಿಗೆ ನಾಟಿವೈದ್ಯ ಗೊತ್ತಿತ್ತು. ಹಾಗೆಯೇ ಮಾಟ ಮಂತ್ರ ಕೂಡಾ ಮಾಡುತ್ತಿದ್ದಳು ಎನ್ನಲಾಗಿದೆ. ಮುಸ್ಲಿಂ ಸಮುದಾಯದವರ ಹಜ್ ಆಚರಣೆಯ ಈದ್-ಅಲ್-ಅಧಾದ ದಿನವೇ ಹುಟ್ಟಿದ ಕಾರಣಕ್ಕೆ ಈದ್ ಅಂತ ನಾಮಕರಣಗೊಂಡ ಅಮಿನ್‌ನ ಹೆಸರು ಕಾಕ್ವಾ ಬುಡಕಟ್ಟಿನವರ ಬಾಯಲ್ಲಿ ಈದಿ ಅನ್ನಿಸಿಕೊಂಡಿತು.

 

ಈದಿ ಅಮಿನ್ ಹುಟ್ಟು-ಬಾಲ್ಯದ ಸುತ್ತಮುತ್ತ ಕೆಲವು ವರ್ಣರಂಜಿತ ಕತೆಗಳಿವೆ. ಈದಿ ಅಮಿನ್‌ನ ಅಮ್ಮ ಅಕ್ರಮವಾಗಿ ಗರ್ಭ ಧರಿಸಿದ್ದಳು ಎನ್ನುವ ಪುಕಾರು ಕುಟುಂಬ ವಲಯದಲ್ಲಿ ಪಿಸುಮಾತಾಗಿ ಹಬ್ಬಿತ್ತಂತೆ. ಅವರ ಬುಡಕಟ್ಟಿನ ಸಂಪ್ರದಾಯದಲ್ಲಿ ಈ ರೀತಿಯ ಅನುಮಾನಗಳು ಹುಟ್ಟಿಕೊಂಡಾಗ ಅದನ್ನು ಬಗೆಹರಿಸಿಕೊಳ್ಳುವ ವಿಚಿತ್ರ ರೂಢಿಯೊಂದಿತ್ತು. ಆ ಪ್ರಕಾರವಾಗಿ ಹುಟ್ಟಿದ ಮಗುವನ್ನು ದುರ್ಗಮವಾದ ಕಾಡಿನಲ್ಲಿ ಬಿಟ್ಟುಬಂದು, ಮೂರು ದಿನಗಳ ಬಳಿಕವೂ ಮಗು ಬದುಕುಳಿದರೆ ಅದು ಅಕ್ರಮಸಂತಾನವಲ್ಲ ಅಂತ ಸಾಬೀತಾದ ಹಾಗೆ. ಅಂತೆಯೇ ಹಸುಗೂಸು ಅಮಿನ್‌ನನ್ನು ಅವನಜ್ಜ ಕೊಂಡೊಯ್ದು ಕಾಡಿನಲ್ಲಿ ಬಿಟ್ಟು ಬಂದಿದ್ದನಂತೆ. ನಾಲ್ಕನೇ ದಿನ ಹೋಗಿ ನೋಡಿದರೆ ಕೂದಲು ಕೂಡಾ ಕೊಂಕದಂತೆ ಮಗು ಸುರಕ್ಷಿತವಾಗಿತ್ತಂತೆ. ಹಾಗೆ ಜೀವಂತವಾಗುಳಿದ ಮಗುವೇ ಮುಂದೆ ಅದೆಷ್ಟೋ ಜೀವಗಳಿಗೆ ಕಂಟಕವಾಗುತ್ತದೆನ್ನುವ ಮುನ್ಸೂಚನೆ ಅವರ್ಯಾರಿಗೂ ಇರಲಿಲ್ಲವಾದ ಕಾರಣ ದೊಡ್ಡ ಸಂಭ್ರಮದೊಂದಿಗೆ ಮಗುವನ್ನು ಮನೆಗೆ ಕರೆತಂದರು. ಇನ್ನೊಂದು ಕತೆಯ ಪ್ರಕಾರ ಮಗುವಾಗಿದ್ದ ಅಮಿನ್‌ನ ಸುತ್ತ ಬುಡಕಟ್ಟಿನ ಜನರು ಪವಿತ್ರವೆಂದು ಪೂಜಿಸುವ ಘಟಸರ್ಪವೊಂದು ಸುರುಳಿಸುತ್ತಿಕೊಂಡಿತ್ತಂತೆ. ತನ್ನ ಮೊಟ್ಟೆಯನ್ನು ರಕ್ಷಿಸುವ ಹಾವಿನೋಪಾದಿಯಲ್ಲಿ ಸಿಂಬೆ ಸುತ್ತಿಕೊಂಡು ಮಗುವಿನ ತಲೆಯ ಮೇಲೆ ತನ್ನ ಹೆಡೆಯನ್ನಿರಿಸಿ ಸದ್ದಿಲ್ಲದೆ ಹೊರಟು ಹೋಗಿತ್ತಂತೆ. ಬಹುಶ: ಈದಿ ಅಮಿನ್ ಮನಸ್ಸಿನಲ್ಲಿ ಕ್ರೌರ್ಯದ ವಿಷಬೀಜ ಆಗಲೇ ಬಿದ್ದಿರಬೇಕು !! ಇದರಲ್ಲಿ ಕಲ್ಪನೆ ಯಾವುದು ಸತ್ಯ ಯಾವುದು ಅನ್ನೋದು ಗೊತ್ತಿಲ್ಲವಾದರೂ, ಈದಿ ಅಮಿನ್‌ನ ಬಾಲ್ಯದ ಸುತ್ತ ಅತಿರಂಜಕ ಪವಾಡದ ಎಳೆಯೊಂದು ಸೃಷ್ಟಿಸುವಲ್ಲಿ ಈ ಕತೆಗಳು ಯಶಸ್ವಿಯಾಗಿವೆ.

 

ಕಾಕ್ವಾ ಬುಡಕಟ್ಟಿನವರ ಸಂಪ್ರದಾಯಕ್ಕನುಗುಣವಾಗಿ ಈದಿ ಅಮಿನ್‌ಗೆ ಅವೋಂಗೋ ಅಂತ ಹೆಸರಿಡಲಾಗಿತ್ತು. ಆ ಎಳೆ ವಯಸ್ಸಿನ ಕೂಸು ಒದೆಯುವ, ಕಿರುಚುವ ಪರಿಯನ್ನು ಕಂಡೇ ಅವನಿಗೆ ಆ ನಾಮಕರಣವಾಗಿತ್ತಂತೆ. ಅವರ ಭಾಷೆಯಲ್ಲಿ ಅವೋಂಗೋ ಅಂದ್ರೆ ಕಿರುಚುವವನು ಅಥವಾ ಬೊಬ್ಬೆ ಹೊಡೆಯುವವನು ಎಂದರ್ಥ. ಮುಂದೆ ಅವನು ಉಗಾಂಡಾದ ಸರ್ವಾಧಿಕಾರಿಯಾಗಿದ್ದಾಗ ಎಂಟು ವರ್ಷಗಳಲ್ಲಿ ಉಂಟಾದ ಕೋಲಾಹಲಗಳನ್ನು ಗಮನಿಸಿದರೆ ಒಂದರ್ಥದಲ್ಲಿ ಅವನಿಗದು ಅನ್ವರ್ಥನಾಮವೇ ಸರಿ !

 

ಈದಿ ಅಮಿನ್‌ನ ಬಾಲ್ಯ ಸುಖದ ಸುಪ್ಪತ್ತಿಗೆಯೇನಾಗಿರಲಿಲ್ಲ. ಅವನು ಹುಟ್ಟಿದ ಕೆಲಸಮಯದಲ್ಲೇ ವಿರಸದ ಕಾರಣಕ್ಕೆ ಅವನ ಅಪ್ಪ-ಅಮ್ಮ ಬೇರೆಯಾದರು. ಅಮಿನ್ ಬರೀ ಮೂಲ ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಪೂರೈಸಿದ್ದ. ಆದರೆ ಅಟೋಟಗಳ ವಿಷಯಕ್ಕೆ ಬಂದರೆ ಅವನನ್ನು ಸರಿಗಟ್ಟುವವರೂ ಯಾರೂ ಇರಲಿಲ್ಲ. ಅವನು ಹುಟ್ಟುವ ಪೂರ್ವದಲ್ಲೇ ಅಂದರೆ 1894ರಲ್ಲೇ ಉಗಾಂಡಾವು ಬ್ರಿಟಿಷ್ ಸೈನ್ಯದ ವಸಾಹತಾಗಿತ್ತು. ಬ್ರಿಟಿಷ್ ವಸಾಹತು ಸೈನ್ಯ ಕಿಂಗ್ಸ್ ಆಫ್ರಿಕನ್ ರೈಫಲ್ಸ್ನಲ್ಲಿ ಸಹಾಯಕ ಅಡುಗೆ ಭಟ್ಟನಾಗಿ ಅಮಿನ್ ಸೇರುವಾಗ ಅವನಿಗಿನ್ನೂ ಇಪ್ಪತ್ತು ತುಂಬಿರಲಿಲ್ಲ. ಮುಂದೆ ಎರಡು ವರ್ಷಗಳಲ್ಲೇ ಅವನು ಸೈನ್ಯದ ಯೋಧನಾಗಿ ಬಡ್ತಿ ಪಡೆದ. ಅಲ್ಲಿಂದ ಹಂತಹಂತವಾಗಿ ಪದೋನ್ನತಿಯನ್ನು ಸಾಧಿಸಿ ಮೇಜರ್ ಸರ್ಜೆಂಟ್ ಹಾಗೂ ಪ್ಲಟೂನ್ ಕಮಾಂಡರ್ ಆಗುವಷ್ಟರಲ್ಲಿ ಅಮಿನ್ 30ರ ಯುವಕನಾಗಿದ್ದ. ಅವನ ಮೇಲಧಿಕಾರಿಗಳಿಂದ ಹುಟ್ಟು ನಾಯಕ, ಉತ್ತಮ ಸೈನಿಕ ಹಾಗೂ ತಂತ್ರಗಾರಿಕೆಯಲ್ಲಿ ಎಲ್ಲರನ್ನೂ ಮೀರಿಸಬಲ್ಲ ಚಾಣಾಕ್ಷ ಅನ್ನುವ ಶಹಭಾಶ್‌ಗಿರಿಯನ್ನಾಗಲೇ ಪಡೆದುಬಿಟ್ಟಿದ್ದ.

 

ಈ ಮಧ್ಯೆ 1951ರಲ್ಲಿ ಹೆವಿವೇಟ್ ಬಾಕ್ಸಿಂಗ್‌ನಲ್ಲಿ ಉಗಾಂಡಾದ ಚಾಂಪಿಯನ್ ಅನ್ನಿಸಿಕೊಂಡಿದ್ದ ಅಮಿನ್ ಆ ಪಟ್ಟವನ್ನು ನಿರಂತರ ಹತ್ತು ವರ್ಷಗಳ ಕಾಲ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೇ ಅವನೊಬ್ಬ ಉತ್ತಮ ಸ್ವಿಮ್ಮರ್ ಹಾಗೂ ರಗ್ಬಿ ಆಟಗಾರ ಕೂಡ ಆಗಿದ್ದ. ಮುಂದೆ 1962ರಲ್ಲಿ ಉಗಾಂಡಾ ಸ್ವತಂತ್ರ ರಾಷ್ಟ್ರವೆನ್ನಿಸಿಕೋಂಡಿತು. ಸರ್ ಎಡ್ವರ್ಡ್ ಮುಟೇಸಾ ರಾಷ್ಟ್ರಾಧ್ಯಕ್ಷ(ರಾಜ)ನಾದನು, ಮಿಲ್ಟನ್ ಒಬೋಟೆ ಪ್ರಧಾನಮಂತ್ರಿಯ ಸ್ಥಾನಕ್ಕೆ ಬಂದ. ಇತ್ತ ಅಮಿನ್ ಸೈನ್ಯದಲ್ಲಿ ಪದವಿಯಿಂದ ಪದವಿಗೆ ಜಿಗಿಯುತ್ತಾ ಬಂದು ಭೂಸೇನೆ ಮತ್ತು ವಾಯುಸೇನೆಗಳ ಡೆಪ್ಯುಟಿ ಕಮಾಂಡರ್ ಹುದ್ದೆಗೇರಿದ. 1966ರಲ್ಲಿ ನಡೆದ ಚಿನ್ನ ಕಳ್ಳಸಾಗಾಣಿಕೆಯ ಹಗರಣವೊಂದು ಒಬೋಟೆ ಮತ್ತು ಅಮಿನ್ ಕೊರಳಿಗೆ ಉರುಳಾಗುವ ಸಾಧ್ಯತೆ ಇತ್ತು. ಆ ಬಗ್ಗೆ ವಿಚಾರಣೆ ನಡೆಸುವಂತೆ ಒತ್ತಾಯಗಳು ಬಂದಾಗ ಸಂಸತ್ತನ್ನೇ ಅಮಾನತ್ತಿನಲ್ಲಿರಿಸಿ ಒಬೋಟೆ ತಾನೇ ರಾಷ್ಟ್ರಾಧ್ಯಕ್ಷನ ಸ್ಥಾನಕ್ಕೆ ಬಂದು ಕುಳಿತು ಬಿಟ್ಟ. ಹೆಚ್ಚೂಕಡಿಮೆ ಅನಕ್ಷರಸ್ಥನಾಗಿದ್ದ ಅಮಿನ್ ಈಗ ಸೈನ್ಯದ ಕಮಾಂಡರ್ ಹುದ್ದೆಗೆ ಬಂದು ಕುಳಿತಿದ್ದ. ತನ್ನ ಬುಡಕಟ್ಟಿನ ಜನರನ್ನೇ ಸೈನ್ಯದ ಆಯಕಟ್ಟಿನ ಜಾಗಕ್ಕೆ ನೇಮಿಸಿಕೊಂಡು ತನ್ನ ಬೆಂಬಲಿಗರ ಪಡೆಯೊಂದನ್ನು ಸದ್ದಿಲ್ಲದೆ ಕಟ್ಟತೊಡಗಿದ್ದ. ಮುಂದೆ 1969ರಿಂದ ಒಬೋಟೆ ಮತ್ತು ಅಮಿನ್ ನಡುವೆ ಮನಸ್ತಾಪಗಳು, ತಿಕ್ಕಾಟ-ಮುಸುಕಿನ ಗುದ್ದಾಟ ಶುರುವಾಯ್ತು. ಈದಿ ಅಮಿನ್ ರಂಗಪ್ರವೇಶಕ್ಕೆ ವೇದಿಕೆ ಸಜ್ಜುಗೊಳ್ಳಲು ಆರಂಭವಾಯ್ತು.

 

ಈ ಹಗ್ಗ ಜಗ್ಗಾಟಕ್ಕೊಂದು ಅಂತಿಮ ತಿರುವು ಸಿಕ್ಕಿದ್ದು 1971ರಲ್ಲಿ. ಸೈನ್ಯದ ಹಣವನ್ನು ದುರುಪಯೋಗ ಮಾಡಿಕೊಂಡ ಕಾರಣಕ್ಕೆ ಒಬೋಟೆ ಅಮಿನ್ ಮೇಲೆ ಕ್ರಮಕೈಗೊಳ್ಳಲು ಮುಂದಾದಾಗ ಅಮಿನ್ ಸಿಡಿದು ನಿಂತ. ಸಿಂಗಾಪುರಕ್ಕೆ ಕಾಮನ್‌ವೆಲ್ತ್ ಸಮ್ಮೇಳನೆಕ್ಕೆಂದು ಒಬೋಟೆ ತೆರಳಿದ್ದ ಸಂದರ್ಭದಲ್ಲಿ ಕ್ಷಿಪ್ರ ಸೈನ್ಯ ಕ್ರಾಂತಿಯೊಂದನ್ನು ನಡೆಸಿ, ಕಂಪಾಲವನ್ನು ಮುತ್ತಿಗೆ ಹಾಕಿ ತನ್ನ ಕೈವಶ ಮಾಡಿಕೊಂಡ. ಎಂಟೆಬೆ ಅಂತಾರಾಷ್ಟ್ರೀಯ ನಿಲ್ದಾಣ ಅವನ ಅಧೀನಕ್ಕೆ ಬಂತು. ಹದಗೆಟ್ಟ ಶಾಂತಿ ಸುವ್ಯವಸ್ಥೆ, ಆರ್ಥಿಕ ದುಸ್ಥಿತಿ, ಭ್ರಷ್ಟಾಚಾರದ ಆರೋಪ ಹೊರಿಸಿ ಒಬೋಟೆಯನ್ನು ಪದಚ್ಯುತಗೊಳಿಸಿ ಸೈನ್ಯಾಡಳಿತದ ಘೋಷಣೆ ಮಾಡಿದ. ಅಧಿಕಾರವಹಿಸಿಕೊಂಡ ಅಮಿನ್ ಹೇಳಿದ್ದು ಇಷ್ಟೇ… ನನಗೆ ಅಧಿಕಾರದ ಮಹತ್ವಾಕಾಂಕ್ಷೆ ಇಲ್ಲ. ನಾನೊಬ್ಬ ಸೈನಿಕ ಮಾತ್ರ. ಇದೊಂದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ನನ್ನ ಕಾಳಜಿ ಏನಿದ್ದರೂ ನಿಮ್ಮೆಲ್ಲರ ಒಳಿತು ಮತ್ತು ಈ ದೇಶವನ್ನು ಬಲಿಷ್ಟಗೊಳಿಸುವುದು…. ಜನ ಖುಶಿಯಿಂದ ಹುಚ್ಚೆದ್ದು ಬೀದಿಗಿಳಿದು ಬಂದು ಅವನನ್ನು ಬೆಂಬಲಿಸಿದರು… ಹರ್ಷೋದ್ಗಾರ ಮಾಡಿದರು. ಅಂತರರಾಷ್ಟ್ರೀಯ ಸಮುದಾಯ ಕೂಡಾ ಅವನ ಕ್ರಮವನ್ನು ಸ್ವಾಗತಿಸಿತು. ಇದಾದ ಒಂದು ವಾರದಲ್ಲೇ ಫೆಬ್ರವರಿ ಎರಡರಂದು ಅಮಿನ್ ಮುಕುಟವಿಲ್ಲದ ಮಹಾರಾಜನಂತೆ ಸಿಂಹಾಸನವನ್ನೇರಿದ. ಹೀಗೆ ತಾತ್ಕಾಲಿಕವೆಂದು ಹೇಳಿಕೊಂಡು ಅಧಿಕಾರದ ರುಚಿ ಕಂಡ ಅಮಿನ್ ಸರಿ ಸುಮಾರು ಎಂಟು ವರ್ಷಗಳ ಕಾಲ ಮೆರೆದಾಡಿಬಿಟ್ಟ. ಯಾವ ಚುನಾವಣೆಯನ್ನು ನಡೆಸುವ ಗೋಜಿಗೂ ಹೋಗಲಿಲ್ಲ…. ಹೀಗೆ ಶುರುವಾಗಿತ್ತು ಈದಿ ಅಮಿನ್ ಎಂಬ ವಿಲಕ್ಷಣ ಆಡಳಿತಗಾರನೊಬ್ಬನ ಸರ್ವಾಧಿಕಾರಿ ದರ್ಬಾರು… ಎಂಟು ವರ್ಷಗಳ ನಿರಂಕುಶ ಪ್ರಭುತ್ವದ ಕಾರ್ಬಾರು… ಅದೆಷ್ಟೋ ಜನರ ಪ್ರಾಣಕ್ಕೆರವಾದ ನರಮೇಧದದ ಅಧ್ಯಾಯ ಇನ್ನು ಶುರು.

 

( ಮುಂದಿನ ಭಾಗದಲ್ಲಿ…. ಈದಿ ಅಮಿನ್ ದರ್ಬಾರಿನ ಆ ದಿನಗಳು…..!!)