Posts Tagged ‘ಎಚ್.ನಾಗವೇಣಿ’

ನಾವು ಹುಟ್ಟಿ ಬೆಳೆದ ನೆಲದ ಬಗೆಗಿನ ಪ್ರೀತಿ-ಸೆಳೆತ-ಆಕರ್ಷಣೆಯು ನಾವು ಎಲ್ಲೇ ಇದ್ದರೂ ಕೂಡಾ ಸದಾ ನಮ್ಮ ನೆರಳಿನಂತೆ ಹಿಂಬಾಲಿಸುವುದು ಸಹಜ. ನಾವು ಆಡಿ ಬೆಳೆದ ಪರಿಸರ, ಅಲ್ಲಿನ ಆಚರಣೆ-ಹಬ್ಬ-ಹರಿದಿನ, ಅಲ್ಲಿನ ಜನ-ಜೀವನ ನಮಗೆಲ್ಲರಿಗೂ ಆಪ್ಯಾಯಮಾನ. ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್.ನಾಗವೇಣಿಯವರ ಕತೆಗಳಲ್ಲಿ ಕೂಡಾ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಅ ಮಣ್ಣಿನ ಸಾರದಲ್ಲಿನ ಜೀವಂತಿಕೆಯನ್ನು ತುಂಬಿಕೊಂಡು ನಳನಳಿಸುತ್ತಿರುವಂತೆ ಭಾಸವಾಗುತ್ತದೆ. ನಾಗವೇಣಿಯವರ ಕಥಾಸಂಕಲನಗಳಾದ ‘ವಸುಂಧರೆಯ ಗ್ಯಾನ’, ‘ನಾಕನೇ ನೀರು’, ‘ಮೀಯುವ ಆಟ,’ಗಳಲ್ಲಿ ನಮಗೆ ಕಾಣಸಿಗುವುದು ತೌಳವ ನಾಡಿನ ಸಾಮಾಜಿಕ, ಸಾಂಸ್ಕೃತಿಕ, ಜಾನಪದ ಲೋಕಗಳ ಯಥಾವತ್ ಚಿತ್ರಣ. ಇವೆಲ್ಲಕ್ಕೂ ಕಳಸವಿಟ್ಟಂತೆ, ಅವರು ತಮ್ಮ ‘ಗಾಂಧಿ ಬಂದ’, ಕಾದಂಬರಿಯಲ್ಲಿ ಗಾಂಧಿಯನ್ನು ರೂಪಕವನ್ನಾಗಿರಿಸಿಕೊಂಡು, ತುಳುನಾಡ ಪರಿಸರದಲ್ಲಾದ ಸ್ಥಿತ್ಯಂತರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ತುಳುನಾಡಿನ ವೈಶಿಷ್ಟ್ಯಗಳಾದ ಕಂಬಳ, ಕೋಲ, ಕೋಳಿಕಟ್ಟ, ಆಟಿ ಕಳಂಜ, ಕೆಡ್ಡಸ, ಕಂಗಿಲ ಹಬ್ಬಗಳ ಲೋಕದಲ್ಲಿ ವಿಹಾರ ಕೊಂಡೊಯ್ದು, ತುಳುನಾಡಿನ ಮಣ್ಣಿ-ಮೂಡೆಗಳ ಸವಿಯುಣ್ಣಿಸಿ, ಅಲ್ಲಿನ ಅಳಿಯಕಟ್ಟು ಸಂತಾನದ ಕಟ್ಟು ಕಟ್ಟಳೆ, ರೀತಿ-ರಿವಾಜುಗಳನ್ನು ಬಣ್ಣಿಸಿ ತುಳುನಾಡ ಜಗತ್ತನ್ನು ಕಣ್ಣೆದುರು ತಂದು ನಿಲ್ಲಿಸುತ್ತಾರೆ. ತುಳುನಾಡಿನ ಕುರಿತು ಇಷ್ಟು ವರ್ಣನಾತ್ಮಕವಾದ, ತೌಳವ ನಾಡಿನ ಸಾಂಸ್ಕೃತಿಕ ಪರಂಪರೆಯೆ ಬಗೆಗೆ ಇಷ್ಟು ವಿವರಣಾತ್ಮಕವಾದ ಬೇರೆ ಯಾವುದೇ ಪುಸ್ತಕ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ನಾನಂತೂ ಓದಿಲ್ಲ.

ಪುಸ್ತಕದ ಶೀರ್ಷಿಕೆ ‘ಗಾಂಧಿ ಬಂದ’ ಅಂತಿದ್ದರೂ ಕೂಡಾ, ಇದೇನು ಸ್ವಾತಂತ್ರ್ಯ ಸಂಗ್ರಾಮದ ಕಥಾನಕವೇನಲ್ಲ. ಬದಲಾಗಿ ಗಾಂಧೀಜಿ ಮೂರು ಬಾರಿ ಮಂಗಳೂರಿಗೆ ಬಂದು ಹೋದ ಸಂದರ್ಭದಲ್ಲಿ, ಕಾರ್ನಾಡು ಸದಾಶಿವರಾಯರಂತವರ ಕ್ರಾಂತಿಕಾರಕ ವಿಚಾರಧಾರೆಯಿಂದಾಗಿ ತುಳುನಾಡಿನಲ್ಲಿ ತುಳಿತಕ್ಕೊಳಗಾದವರಲ್ಲಿಮೂಡಿಬಂದ ಜಾಗ್ರತಿಯು, ಹೇಗೆ ಬದಲಾವಣೆಯ ಗಾಳಿ ಬೀಸುವಂತೆ ಮಾಡಿತು ಅನ್ನುವುದು ಇದರ ಕಥಾಹಂದರ. ದ್ರೌಪತಿ ಅನ್ನುವ ಬಾಲವಿಧವೆ ಮತ್ತು ಅದ್ರಾಮ ಅನ್ನುವ ಜಟಕಾ ಓಡಿಸುವ ಮುಸ್ಲಿಂ ಯುವಕನ ನಡುವೆ ಅರಳುವ ಪ್ರೀತಿಯ ಹಿನ್ನೆಲೆಯಲ್ಲಿ ಆ ಕಾಲದ ತುಳುನಾಡಿನ ಸಾಮಾಜಿಕ ಜೀವನದ ಚಿತ್ರಣವೇ ಇಲ್ಲಿ ಮೈದೆರೆದು ನಿಂತಿದೆ. ಅಂತಪ್ಪ, ಅದ್ರಾಮ, ಹೆಬ್ಬಾರರು, ದ್ರೌಪತಿ, ದಾರು, ಸೂರಕ್ಕೆ, ಗುತ್ತಿನ ಶೆಟ್ರು… ಇವರ ನಡುವೆಯೇ ಸುತ್ತಿ ಸುಳಿದಾಡುವ ಈ ಕಾದಂಬರಿಲ್ಲಿ ಕಥನ ಕುತೂಹಲಕ್ಕಿಂತಲೂ ಓದಿನ ಸುಖವು ಈ ಪರಿಸರದಲ್ಲಿ ಸುತ್ತಿ ಸುಳಿದಾಡಿದಂತಹ ಅನುಭವದಲ್ಲಿ ಸಿಗುತ್ತದೆ. ತುಳುನಾಡಿನ ಪರಂಪರೆಯ ಜೊತೆಯಲ್ಲಿ ಸಾಮಾಜಿಕ ಬದುಕಿನ ಮೇಲು-ಕೀಳು, ಅಸ್ಪೃಶ್ಯತೆ, ಜಗಳಗಳು, ಅಳಿಯಕಟ್ಟು ಸಂಪ್ರದಾಯದ ಆಚರಣೆಗಳು, ಅದರ ಒಳಿತು-ಕೆಡಕು, ಗುತ್ತಿನವರ ಗತ್ತು-ದೌಲತ್ತು, ಮೇಲ್ಜಾತಿಯವರ ಮೇಲಾಟಿಕೆ.. ಇವೆಲ್ಲವೂ ಕಾಣಸಿಗುತ್ತದೆ. ತುಳುನಾಡಿನ ಕಥಾನಕವಾದ್ದರಿಂದ ವಿಶೇಷವಾಗಿ ಆಚರಣೆ ಪದ್ಧತಿಗಳನ್ನು ಬಣ್ಣಿಸುವಾಗ ಅಲ್ಲಲ್ಲಿ ತುಳು ಶಬ್ದ ಕಾಣಸಿಗುತ್ತದಾದರೂ ಅದು ಪಾಯಸದಲ್ಲಿ ಗೇರುಬೀಜ ಸಿಕ್ಕಂತೆ ಮಧುರವಾಗಿದೆ. ತುಳುನಾಡಿನ ಮಂದಿಯಂತೂ ಆ ಕಾದಂಬರಿಯನ್ನು ಚಪ್ಪರಿಸಿಕೊಂಡು ಓದುವುದಕ್ಕೆ ಅಡ್ಡಿಯಿಲ್ಲ. ತುಳುನಾಡ ಸಂಸ್ಕೃತಿ-ಜನಜೀವನ-ಆಚರಣೆಗಳ ಕುರಿತು ಕುತೂಹಲವಿರುವ ತುಳುನಾಡ ಹೊರಗಿನವರಿಗೂ ಇದೊಂದು ಅಕ್ಷರ ದಾಸೋಹ ಅಂತ ಧಾರಾಳವಾಗಿ ಹೇಳಬಹುದು

ಪುಸ್ತಕ            : ಗಾಂಧಿ ಬಂದ

ಲೇಖಕಿ           : ಎಚ್.ನಾಗವೇಣಿ

ಪುಟಗಳು                   : 368 + 12

ಬೆಲೆ              : 175