Posts Tagged ‘ಚಿಟ್ಟಾಣಿ’

ಕರಾವಳಿಯ ಗಾನಕೋಗಿಲೆ ಎಂದೇ ಖ್ಯಾತರಾಗಿರುವ ಸುಬ್ರಹ್ಮಣ್ಯ ಧಾರೇಶ್ವರ-50 ಆಚರಣೆಯ ನಿಮಿತ್ತ ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಬ್ಬದ ಸಡಗರ ಸಂಭ್ರಮ. ಯಕ್ಷಕಲಾ ರಂಜಿನಿ ವತಿಯಿಂದ ದಿನಪೂರ್ತಿ ಯಕ್ಷಗಾನ ಪ್ರೇಮಿಗಳಿಗೆ ರಸದೌತಣ ಬಡಿಸಿದಂತಾಗಿತ್ತು. ಯಕ್ಷಗಾನದ ಗೀತೆಗಳ ಗಾಯನದ ಕಾರ್ಯಕ್ರಮದ ಮೊದಲಿಗೆ ಇದ್ದುದರಿಂದ ಹೋಗಲಾಗಿರಲಿಲ್ಲ. ನಾ ಹೋಗುವ ವೇಳೆಗೆ ಸರಿಯಾಗಿ ಕೃಷ್ಣ ಸಂಧಾನ ತಾಳಮದ್ದಳೆ ಇನ್ನೇನು ಶುರುವಾಗಿತ್ತಷ್ಟೇ.

ಕೌರವನಾಗಿ ಪ್ರಭಾಕರ ಜೋಶಿಯವರ ಮಾತು ಕೇಳ್ತಾ ಇದ್ರೆ ಈ ತಾಳಮದ್ದಲೆ ಮುಗಿಯುವುದೇ ಬೇಡ ಅನಿಸುತ್ತಿತ್ತು. ಅವರಿಗೆದುರಾಗಿ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ರು ಕೃಷ್ಣನಾಗಿ ಜೋಶಿಯವರಿಗಿಂತ ತಾವೇನು ಕಡಿಮೆ ಇಲ್ಲ ಅನ್ನುವುದನ್ನು ನಿರೂಪಿಸುತ್ತಿದ್ದರು. ಶುದ್ಧ ರೂಪದ ಕನ್ನಡವನ್ನು ಮಾತನಾಡುವವರು ಈಗೀಗ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸುವವರು ಇಂತಹ ಯಕ್ಷಗಾನ, ತಾಳಮದ್ದಲೆಗಳ ಅರ್ಥಗಾರಿಕೆಯಲ್ಲಿ ಬಳಕೆಯಾಗುವ ಕನ್ನಡ ಕೇಳಿಲ್ಲವೆಂದೇ ಹೇಳಬೇಕು. ಅದರಲ್ಲೂ ಜೋಶಿ ಮತ್ತು ಸಿದ್ಧಕಟ್ಟೆ ಇಬ್ಬರೂ ಕೂಡಾ ಸುಸ್ಪಷ್ಟ ಉಚ್ಛಾರಣೆಯೊಂದಿಗೆ ತಮ್ಮ ಪಾಂಡಿತ್ಯಪೂರ್ಣ ವಾಕ್ಯಗಳನ್ನು ಮಂಡಿಸುತ್ತ ಇದ್ದರೆ..ವಿಜಕ್ಕೂ ಕರ್ಣರಸಾಯನ.

 

ತಾಳಮದ್ದಲೆ ಮುಗಿಯುವಷ್ಟರಲ್ಲಿ ಮೂರೂವರೆಯಾಗಿತ್ತು. ಅದಕ್ಕೆ ಸರಿಯಾಗಿ ಹೊಟ್ಟೆಯೂ ತಾಳ ಹಾಕ್ತಾ ಇತ್ತು. ನಿನ್ನ ಪೂಜೆಗೆ ಬಂದೇ ಮಹದೇಶ್ವರ ಅನ್ನುತ್ತ ಕಲಾಕ್ಷೇತ್ರದ ಪಕ್ಕದ ಕ್ಯಾಂಟೀನಿನಲ್ಲಿ ಹೊಟ್ಟೆಗೆ ನೈವೇದ್ಯ ಮಾಡಿದ್ದಾಯಿತು. ಮತ್ತೆ ಕಲಾಕ್ಷೇತ್ರದೊಳಗೆ ಬರುವಷ್ಟರಲ್ಲಿ ಬಡಗಿನ ಅತಿಥಿ ಕಲಾವಿದರ ಸಮ್ಮಿಲನದೊಂದಿಗೆ ಬ್ರಹ್ಮ ಕಪಾಲಇನ್ನೇನು ಶುರುವಾಗಲಿತ್ತು. ಬ್ರಹ್ಮನಾಗಿ ತೀರ್ಥಳ್ಳಿ, ಈಶ್ವರನಾಗಿ ಯಾಜಿ, ಶಾರದೆಯಾಗಿ ನೀಲ್ಕೋಡು, ಮನ್ಮಥನಾಗಿ ಕಣ್ಣಿಮನೆ…. ಹೀಗೆ ಘಟಾನುಘಟಿಗಳೆಲ್ಲ ಒಟ್ಟಾಗಿದ್ದರು. ಹಿಮ್ಮೇಳದಲ್ಲಂತೂ ಆವತ್ತಿನ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಧಾರೇಶ್ವರರು….

ಒಟ್ಟಿನಲ್ಲಿ ಯಕ್ಷರಸಿಕರಿಗೆ ಹಬ್ಬದೂಟ. ಸಮಯದ ಅಭಾವದ ಕಾರಣ ಸ್ವಲ್ಪ ಓಡಿಸಿದಂತೆ ಭಾಸವಾಯ್ತಾದರೂ ಒಟ್ಟಾರೆಯಾಗಿ ಪ್ರದರ್ಶನ ತೃಪ್ತಿಕರವಾಗಿತ್ತು.

 

ಆಮೇಲೆ ಶುರುವಾಗಿದ್ದು ತೆಂಕುತಿಟ್ಟಿನವರ ಮಾಯಶೂರ್ಪನಕಿ-ಇಂದ್ರಜಿತು ಕಾಳಗ. ಈ ಪ್ರದರ್ಶನ ನಡೆಯುತ್ತಿರುವಾಗ ಮಧ್ಯದಲ್ಲಿ ಪ್ರದರ್ಶನ ನಿಂತು ಸಭಾ ಕಾರ್ಯಕ್ರಮಗಳು ಮೊದಲ್ಗೊಂಡವು. ರಾಮಚಂದ್ರಾಪುರ ಮಠದ ರಾಘವೇಶ್ವರರ ಉಪಸ್ಥಿತಿಯಲ್ಲಿ, ಹಿರಣ್ಣಯ್ಯ, ಚಿಟ್ಟಾಣಿ, ಜೋಶಿ, ಹೊಸ್ತೋಟ ಮಂಜುನಾಥ ಭಾಗವತರು ಮೊದಲಾದವರ ಸಮ್ಮುಖದಲ್ಲಿ ಧಾರೇಶ್ವರರು, ಕೊಳಗಿಯವರು ಮತ್ತು ದಿನೇಶ್ ಅಮ್ಮಣ್ಣಾಯರಿಗೆ ಬಿರುದು-ಸನ್ಮಾನ, ಅಭಿಮಾನ ಧನ ಸಮರ್ಪಣೆ. ರಾಘವೇಶ್ವರಿಂದ ನುಡಿ ಅರ್ಚನೆ. ಜೋಶಿ, ಚಿಟ್ಟಾಣಿ, ಹಿರಣ್ಣಯ್ಯ, ಹೊಸ್ತೋಟರಿಂದ ಯಕ್ಷಗಾನ ಕಲೆ, ಇತ್ತೀಚಿನ ಬದಲಾವಣೆಗಳು, ಪೌರಾಣಿಕ-ಸಾಮಾಜಿಕ ಯಕ್ಷಗಾನಗಳು, ಧಾರೇಶ್ವರರ ಸಾಧನೆ, ಬೆಳೆದು ಬಂದ ದಾರಿ ಹೀಗೆ ಕಲಾರಾಧಕರ-ಸಾಧಕರ ಸಮ್ಮೇಳನ. ಆಮೇಲೆ ಮಾತನಾಡಿದ ಧಾರೇಶ್ವರರು ಸುಮಾರು ಇಪ್ಪತ್ತು ನಿಮಿಷಗಳ ಕಾಲ ತಮ್ಮ ಗುರುಗಳು, ತಮ್ಮನ್ನು ಪ್ರೋತ್ಸಾಹಿಸಿದವರು, ಕಾಳಿಂಗ ನಾವುಡರು, ಯಖ್ಷಗಾನದ ಪ್ರಸ್ತುತ ಸ್ಥಿತಿ-ಗತಿ… ಹೀಗೆ ನಿರರ್ಗಳವಾಗಿ ಮಾತನಾಡಿದರು.

 

ಸಭಾ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ರಾತ್ರಿ ಒಂಬತ್ತೂವರೆ. ಇನ್ನೂ ಇಂದ್ರಜಿತು ಕಾಳಗವೇ ಮುಗಿದಿಲ್ಲ. ಇನ್ನೂ ಒಂದು ಪ್ರಸಂಗ ಆಡಲು ಬಾಕಿ. ಆದರೆ ಸಮಯದ ಅಭಾವದ ಕಾರಣದಿಂದ ಅದನ್ನು ಎಲ್ಲಿ ರದ್ದು ಮಾಡುತ್ತಾರೋ ಅನ್ನುವ ದಿಗಿಲು ಎಲ್ಲರ ಮುಖದಲ್ಲೂ. ಕಾರಣ ಎಲ್ಲರೂ ಬಹು ಹೊತ್ತಿನಿಂದ ಕಾದು ಕುಳಿತಿದ್ದು ಗದಾಯುದ್ಧದ ಚಿಟ್ಟಾಣಿಯವರ ಕೌರವನನ್ನು ನೋಡಲು. ನಮ್ಮ ಆತಂಕವನ್ನೆಲ್ಲ ಪರಿಹರಿಸುವಂತೆ ಗದಾಯುದ್ಧ ಆಟ ಸಂಕ್ಷಿಪ್ತವಾಗಿ ಆಡುವಾರೆಂದು ಪ್ರಕಟನೆ ಹೊರಬಿತ್ತು.ಅಂತೂ ಕಾದು ಕುಳಿತದ್ದೂ ವ್ಯರ್ಥವಾಗಲಿಲ್ಲ. ತ್ವರಿತವಾಗಿ ಇಂದ್ರಜಿತು ಕಾಳಗ ಮುಗಿಸಿದರು. ಅಂತೂ ಹತ್ತು ಗಂಟೆ ಹತ್ತು ನಿಮಿಷಕ್ಕೆ ಗದಾಯುದ್ಧ ಶುರುವಾಯಿತು. ಸುಮಾರು ಹತ್ತೂವರೆಯ ಹೊತ್ತಿಗೆ ಚಿಟ್ಟಾಣಿಯವರ ರಂಗಪ್ರವೇಶವಾಯ್ತು ಇಡೀ ಸಭಾಂಗಣದಲ್ಲಿ ಉತ್ಸಾಹ ಕೇಕೆ, ಚಪ್ಪಾಳೆ, ಶಿಳ್ಳೆ.ತುಂಬಿ ಹೋಗಿತ್ತು. 70 ವರ್ಷಕ್ಕೂ ಮಿಕ್ಕಿದ ಪ್ರಾಯದ ಚಿಟ್ಟಾಣಿಯವರ ಕೌರವನನ್ನು ಕಂಡ ಮೇಲೆ ಅಬ್ಭಾ ಅನ್ನಿಸಿದ್ದು ಸುಳ್ಳಲ್ಲ. ಈ ವಯಸ್ಸಿನಲ್ಲೇ ಇಂತಹ ಕುಣಿತ ನರ್ತನ ಮಾಡುತ್ತಾರಾದರೆ ಅವರ ಪ್ರಾಯದ ಕಾಲದ ಅಬ್ಬರ ಹೇಗಿದ್ದಿರಬಹುದು ಅಂತ ಕಲ್ಪನೆ ಮಾಡಿಕೊಂಡು, ಆ ಕಲಾ ಸ್ವರ್ಗಲೋಕದಿಂದ ಧರೆಗಿಳಿದು ಬಂದು ಇನ್ನು ತಡ ಮಾಡಿದ್ರೆ ಮನೆಗೆ ಹೋಗೋಕೆ ಆಟೋ ಸಿಕ್ಕೋಲ್ಲ ಅನ್ನುವ ವಿಷಯ ನೆನಪಾಗಿ ಹೊರಟು ಬಂದೆ. ಮನಸಿನ ತುಂಬ ಮನೆ ತಲುಪಿದ ಮೇಲೂ ಸಾರ್ಥಕವಾಗಿ ಕಳೆದ ದಿನವೊಂದರ ಯಕ್ಷರಸಾಸ್ವಾದದ ರುಚಿ ಸದಾ ನೆನಪಾಗಿ ಉಳಿದುಬಿಟ್ಟಿತ್ತು. ಧಾರೇಶ್ವರ ಸುವರ್ಣ ಸಂಭ್ರಮ ಸಾರ್ಥಕವೆನಿಸಿತ್ತು