Posts Tagged ‘ತೋಚಿದ್ದು ಗೀಚು’

ಕನಸಿನರಮನೆ ಬ್ಲಾಗಿನಲ್ಲಿ ನಟೇಶ್ ಬಾಬುರವರು ತೋಚಿದಂತೆ ಗೀಚಲು ಬ್ಲಾಗ್ ಏನು ಪರ್ಸನಲ್ ಡೈರಿಯಾ ಅಂತ ಪ್ರಶ್ನೆ ಕೇಳಿದ್ದಾರೆ. ಈ ಕುರಿತು ನನಗೆ ತೋಚಿದ ಒಂದಿಷ್ಟು ಇಲ್ಲಿ ಗೀಚಿದ್ದೇನೆ. ಒಪ್ಪಿಸಿಕೊಳ್ಳಿ.

 

ನಾನಂತೂ ಹೆಚ್ಚು ಕಡಿಮೆ ಹಾಗೇ ಬರೆಯುವವನು. ತೋಚಿದ್ದು ಗೀಚಿದ್ದೇ ಹೆಚ್ಚು. ನನಗೆ ಆಸಕ್ತಿ ಹುಟ್ಟಿಸಿದ ಪ್ರತಿಯೊಂದರ ಬಗ್ಗೆ.. ನನಗೆ ತಿಳಿದಿದ್ದನ್ನು ಹಂಚಿಕೊಳ್ಳುವಂತೆ ಬರೆದಿದ್ದೇನೆ. ನಿಮ್ಮ ಪ್ರಕಾರ ತುಂಬಾ ಗಂಭೀರವಾಗಿ ಸಾಮಾನ್ಯರಿಗೆ ಅರ್ಥವೇ ಆಗದ ಹಾಗೆ ( ಕೆಲವೊಮ್ಮೆ ಬರೆದ ಅವರಿಗೂ ಅರ್ಥ ಆಗಿರೋದು ಅಷ್ಟರಲ್ಲೆ ಇದೆ ಬಿಡಿ) ಬರೆಯೋರಷ್ಟೇ… ಬ್ಲಾಗ್‌ನಲ್ಲಿ ಬರೆಯಬೇಕಾ? ವಿಷಯ ವೈವಿಧ್ಯ ಇರಬೇಕು. ಒಪ್ಪಿಕೊಳ್ಳೋಣ. ಆದ್ರೆ ಭಾವನೆಗಳು, ನೆನಪುಗಳು, ಕನಸು, ಕನವರಿಕೆಗಳು ಇವುಗಳಲ್ಲಿ ವೈವಿಧ್ಯ, ಮಾಹಿತಿ, ಅನುಭವ , ಜ್ಞಾನ ಇಲ್ಲ ಅಂತ ನಿಮ್ಮ ಅಭಿಪ್ರಾಯಾನಾ?

 

ಈಗ ನೀವು ಹೇಳಿರುವ ವಿಷಯಗಳನ್ನೇ ನೋಡೋಣ. ಬ್ಲಾಗು ಅಪ್‌ಡೇಟ್ ಮಾಡಲು ಸಮಯವಿಲ್ಲದವರು ಬ್ಲಾಗಿಗೆ ಬೀಗ ಹಾಕಬೇಕೆನ್ನುತ್ತೀರಿ. ಎಲ್ಲರಿಗೂ ದಿನಾ ಅಥವ ವಾರಕ್ಕೊಂದು ಸಲ ಬ್ಲಾಗ್ ಬರೆಯಲು ಪುರುಸೊತ್ತು ಸಿಗಬೇಕೆಂದೇನಿಲ್ಲವಲ್ಲ. ಸಮಯ ಸಿಕ್ಕಾಗ ಬರೆಯುವ ಉತ್ಸಾಹ ಬಂದಾಗ ಬರೆಯುವುದು ಯಾವ ರೀತಿಯಲ್ಲಿ ತಪ್ಪು? ಇಂತಾ ದಿನವೇ ಇಂತಿಷ್ಟು ದಿನಕ್ಕೇ ಬ್ಲಾಗ್ ಉಪ್‌ಡೇಟ್ ಆಗಲು ಅವೇನು ನಿಯತಕಾಲಿಕಗಳಲ್ಲಿ ಬರುವ ಅಂಕಣಗಳೆನಲ್ಲ.

 

ಅಷ್ಟಕ್ಕೂ ಕನ್ನಡದಲ್ಲಿ ವಿಷಯ ವೈವಿಧ್ಯವಿರುವ ಅನೇಕ ಒಳ್ಳೆಯ ಬ್ಲಾಗುಗಳಿವೆ. ಸ್ವಲ್ಪ ಹುಡುಕಿ ನೋಡಿ. ಒಂದೆರಡು ಉದಾಹರಣೆ ಹೇಳಬೇಕಂದ್ರೆ ಚೇತನ ತೀರ್ಥಹಳ್ಳಿ , ಸಂದೀಪ್ ಕಾಮತ್ ಅವರ ಕಡಲತೀರ, ನಾವುಡರ ಚೆಂಡೆಮದ್ದಳೆ, ಸುಧನ್ವ ಬ್ಲಾಗ್ – ಚಂಪಕಾವತಿ, ನಗೆ ಬರಹಗಳ ನಗೆನಗಾರಿ, ರಾಜೇಶ್ ನಾಯ್ಕ್ ಅವರ ಅಲೆಮಾರಿ, ವೇಣುವಿನೋದ್ ಅವರ ಮಂಜು ಮುಸುಕಿದ ದಾರಿಯಲ್ಲಿ, ವಿಕಾಸವಾದ, ಪ್ರಮೋದ್ ಅವರ ಕುಂಚ ಪ್ರಪಂಚ… ಹೀಗೆ ಪಟ್ಟಿ ಮಾಡುತ್ತಾ ಹೋದ್ರೆ ಬಹಳ ಬಹಳ ವೈವಿಧ್ಯ ಇರುವ ಕನಿಷ್ಟ ನೂರಾದರೂ ಬ್ಲಾಗ್ ನಿಮಗೆ ಸಿಕ್ಕೇ ಸಿಗುತ್ತೆ. ಹುಡುಕುವ ತಾಳ್ಮೆ ಬೇಕಷ್ಟೇ. ಇಲ್ಲಿ ಕೊಟ್ಟಿರೋದು ನಾನು ಓದುವ ನಾನಿಷ್ಟದ ಬ್ಲಾಗ್‌ಗಳಲ್ಲಿ ಕೆಲವು ಬ್ಲಾಗ್‌ಗಳ ಉದಾಹರಣೆ ಮಾತ್ರ… ಇನ್ನು ನನ್ನ ಕಣ್ಣಿಗೆ ಬೀಳದ ಅದೆಷ್ಟೋ ಒಳ್ಳೆಯ ಬ್ಲಾಗ್‌ಗಳು ಇರಬಹುದು ಅಲ್ವೆ?

 

ನನಗನ್ನಿಸುವ ಪ್ರಕಾರ ಬರೆಯುವ ಆಸಕ್ತಿ ಇದ್ದೂ ಅವಕಾಶ ಸಿಗದೆಯೋ ಇನ್ಯಾವ ಕಾರಣಕ್ಕೋ ಬರವಣಿಗೆ ಮುಂದುವರಿಸಲು ಸಾಧ್ಯವಾಗದ ಅನೇಕರಿಗೆ ತಮ್ಮ ಅನಿಸಿಕೆ, ವಿಚಾರ, ಚಿಂತನೆ, ಭಾವನೆಗಳ ಅಭಿವ್ಯಕ್ತಿಗೆ ಬ್ಲಾಗ್‌ಪ್ರಪಂಚ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಇನ್ನೊಬ್ಬರ ಮನಸ್ಸಿಗೆ ವಿನಾಕಾರಣ ನೋವಾಗುವಂತಹ ಬರಹಗಳನ್ನು ಬರೆಯಬಾರದು. ಅದು ಬಿಟ್ಟರೆ ಮಾಹಿತಿ, ಕನಸು, ನೆನಪು, ಕತೆ, ವಿಚಾರ, ಹನಿ, ಚರ್ಚೆ… ಹೀಗೆ ಏನು ಬೇಕಾದ್ರೂ ಬರೆಯಬಹುದು ಅನ್ನೋದು ನನ್ನ ಅನಿಸಿಕೆ. ಚೆನ್ನಾಗಿದ್ರೆ ಓದ್ತಾರೆ. ಆದ್ರೆ ಚೆನ್ನಾಗಿರೋದೆ ಬರೆಯುವ ಪ್ರಯತ್ನ, ಹುಮ್ಮಸ್ಸು ಇದ್ದರೆ ಸಾಕು. ನನ್ನ ಅಭಿಪ್ರಾಯ ಸರಿ ಅಂತ ನಾನು ವಾದ ಮಾಡ್ತಾ ಇಲ್ಲ. ಯಾಕೆಂದ್ರೆ ಎಷ್ಟೇ ಆದ್ರೂ ನಾನೂ ಒಬ್ಬ ತೋಚಿದ್ದು ಗೀಚುವವನು…ಇಲ್ಲಿ ಮಾಡಿದ್ದೂ ಅದನ್ನೇ. ಇದನ್ನು ಬ್ಲಾಗ್ ಬರಹವೆಂದು ಒಪ್ಪಿಕೊಳ್ಳಲೇಬೇಕೆಂಬ ಯಾವ ಒತ್ತಾಯವೂ ಇಲ್ಲ ಬಿಡಿ.