Posts Tagged ‘ದೇವರು’

ಯಾಕೆ ಬೇಕಿತ್ತು ಈ ಅವತಾರಗಳೆಲ್ಲಾ

ದುಷ್ಟರು-ದುರುಳರು ಹುಟ್ಟಿ ಬೆಳೆದು,

ಅಮಾಯಕ ಜನಗಳ ಮೆಟ್ಟಿ ತುಳಿದು,

ಅಟ್ಟಹಾಸಗೈದು ಮೆರೆದಾಡಿದ ಮೇಲೆ

 

ಅವತಾರಗಳ ಹೆಸರಲಿ ಜನ್ಮಪಡೆದು,

ಅದೆಷ್ಟೋ ಕಾಲಗಳ ತನಕ ತಡೆದು,

ದುಷ್ಟರೊಡನೆ ಕಾದಾಟವು ನಡೆದು

ಯುದ್ಧದಲಿ ಅಮಾಯಕರ ನೆತ್ತರು ಹರಿದು

 

ಬೇಕಿತ್ತೆ ಈ ಅವತಾರಗಳ ರಗಳೆಯೆಲ್ಲಾ..?

ಸರ್ವಶಕ್ತ ಅವನು ಅನ್ನುವರಲ್ಲ

ದುಷ್ಟರೇ ಹುಟ್ಟದಂತೆ ಮಾಡಿಬಿಡಬಹುದಲ್ಲ

ಆಗ ಕಾಯುವ ಕೊಲ್ಲುವ ರಗಳೆಯೇ ಇಲ್ಲ.

 

ಹಾಗೆನಾದರೂ ಆದರೆ ಅವನ ನೆನೆಯುವವರೇ ಇಲ್ಲವಾಗಿ

ಭಗವಂತನ ಕುರಿತು ಜನಕೆ ಆದರ ಕಮ್ಮಿಯಾಗಿ

ಅವನ ಅಸ್ತಿತ್ವ ಜಗದಿಂದಲೇ ಅಳಿದುಹೋಗಿ

ಬಿಡುವ ಅಪಾಯದ ಕುರಿತಾದ ಭೀತಿಯೇ?

ಅಬ್ಬಾ!.. ದೇವರೂ ಕೂಡಾ ಇಷ್ಟು ಸ್ವಾರ್ಥಿಯೇ?

 

( ಪ್ರೇರಣೆ: ಕಾರಂತರ ಮೂಕಜ್ಜಿಯು ಆಡುವ ದೇವರ ಅವತಾರಗಳ ಬಗೆಗಿನ ಮಾತುಗಳು)

 

 

 

 

ದೇವರು ಮನುಷ್ಯನನ್ನು ಸೃಷ್ಟಿಸಿದನಾ ಇಲ್ಲಾ ಮನುಷ್ಯನೇ ದೇವರನ್ನು ಸೃಷ್ಟಿಸಿದನಾ? ಈ ಕುರಿತು ನಡೆಯುವ ವಾದ-ಪ್ರತಿವಾದ, ಚರ್ಚೆ, ಜಿಜ್ಞಾಸೆಗಳಿಗೆ ಕೊನೆ ಮೊದಲೆಂಬುದಿಲ್ಲ. ನಾವು ನಂಬಿದ್ದೇ ಸರಿ ಅನ್ನುವ ಎರಡೂ ಪಂಗಡದವರ ಸಂಖ್ಯೆಗಿಂತಲೂ ಯಾವುದು ಸರಿ ಅನ್ನೋ ಗೊಂದಲದಲ್ಲಿರುವವರೇ ಜಾಸ್ತಿ. ನಾವು ಹುಟ್ಟಿ ಬೆಳೆದ ಪರಿಸರ, ನಮ್ಮ ಹಿರಿಯರ ನಂಬಿಕೆಗಳ ಫಲವಾಗಿ ಮೂಡಿದ ದೇವರ ಕುರಿತು ನಮ್ಮ ಅಭಿಪ್ರಾಯ, ನಂಬಿಕೆಗಳು ಕಾಲಕಳೆದಂತೆಲ್ಲಾ ನಮ್ಮ ಅರಿವು, ಚಿಂತನೆಯು ವ್ಯಾಪ್ತಿ ವಿಸ್ತರಿಸಿದೆಂತೆಲ್ಲಾ ಬದಲಾಗಬಹುದು. ದೇವರ ಕುರಿತು ನನ್ನ ಚಿಂತನೆಗೆ ಒಂದು ರೂಪು ಕೊಟ್ಟ ಪುಸ್ತಕ ಮೂರ್ತಿರಾಯರು ಬರೆದ ದೇವರು. ದೇವರ ಕುರಿತಾದ ಈ ಜಿಜ್ಞಾಸೆಗಳ ಸಾಲಿಗೆ ಹೊಸದಾಗಿ ಒಂದು ಪುಸ್ತಕ ಸೇರ್ಪಡೆಯಾಗಿದೆ. ಅದುವೇ ಶಾಂತಾರಾಮ ಸೋಮಯಾಜಿಯವರು ಬರೆದ ದೇವರೆಂಬ ಸುಳ್ಳು ಮತ್ತು ಧರ್ಮವೆಂಬ ದ್ವೇಷ.

 

ದೇವರಿದ್ದಾನಾ, ಇದ್ದರೆ ಎಲ್ಲಿದ್ದಾನೆ, ಅವನ ಗುಣಲಕ್ಷಣಗಳೇನು, ಆತನ ಆಕಾರ ರೂಪ ಹೇಗೆ, ಆತ ಏನು ಮಾಡುತ್ತಿದ್ದಾನೆ, ಆತನೆಲ್ಲಿಂದ ಬಂದ, ಹೇಗೆ ಬಂದ, ಅವನಿರುವ ಸ್ಥಳ ಸೃಷ್ಟಿ ಆದದ್ದು ಹೇಗೆ, ಆತನನ್ನು ಪರಿಗಣಿಸದಿದ್ದರೆ ಏನಾಗುತ್ತದೆ, ಆತನನ್ನು ಕಾಣುವುದು ಹೇಗೆ, ಆತ ನಮಗೇನು ಮಾಡುತ್ತಾನೆ…ಹೀಗೆ ದೇವರ ಕುರಿತಾದ ಪ್ರಶ್ನೆಗಳನ್ನೆಲ್ಲಾ ಒಂದೊಂದಾಗಿ ಎತ್ತಿಕೊಂಡು ತರ್ಕಬದ್ಧವಾಗಿ ವಿಶ್ಲೇಷಿಸುತ್ತಾ ಹೋಗುತ್ತದೆ ಈ ಕೃತಿ. ಅನೇಕ ಕಥೆ, ಉಪಕಥೆ, ಝೆನ್ ಕಥೆ, ಉದಾಹರಣೆಗಳ ಸಹಿತ ಇವರು ಮಂಡಿಸುವ ತರ್ಕ ನಮ್ಮನ್ನು ಈ ಕುರಿತು ಚಿಂತನೆಗೆ ಹಚ್ಚುತ್ತದೆ.

 

ನಮ್ಮಿಂದಲೇ ಸೃಷ್ಟಿಯಾದ ದೇವರು ಅನ್ನೋ ಕಲ್ಪನೆ ಹೇಗೆ ಬೆಳೆದುಬಂದು ತನ್ನ ಸುತ್ತ ಮುತ್ತ ಸೃಷ್ಟಿಸಿಕೊಂಡ ನಿಗೂಢತೆಯ, ಜೊತೆಗೆ ಭೀತಿ ಹುಟ್ಟಿಸುವ ಪರಿಕಲ್ಪನೆಯಾಯ್ತು ಅನ್ನುವುದನ್ನು ಶಾಂತಾರಾಮ ಸೋಮಯಾಜಿಗಳು ತಮ್ಮ ವಿಚಾರಸರಣಿಯ ಮೂಲಕ ತೆರೆದಿಡುತ್ತಾ ಹೋಗುತ್ತಾರೆ. ಜೊತೆಗೆ ದೇವರ ಕುರಿತು ಇರುವ ಬಿರುದು ಬಾವಲಿಗಳಾದ ಸರ್ವಶಕ್ತ,ಅಮರ.. ಇವುಗಳನ್ನೆಲ್ಲಾ ಒಂದೊಂದಾಗಿ ಹೇಗೆ ಸುಳ್ಳು ಅನ್ನುವುದನ್ನು ಪದರಪದರವಾಗಿ ಬಿಡಿಸಿಡುತ್ತಾ ಕೊನೆಗೆ ಈ ಎಲ್ಲಾ ಸುಳ್ಳುಗಳ ಮೊತ್ತವಾದ ದೇವರು ಅನ್ನುವ ಕಲ್ಪನೆ ಹೇಗೆ ಸುಳ್ಳು ಅನ್ನುವುದನ್ನು ಪ್ರೂವ್ ಮಾಡುವ ಪರಿ ಸೊಗಸಾಗಿದೆ. ಅಲ್ಲದೆ ಮಾನವನ ಬದುಕಿನಲ್ಲಿ ಪ್ರೀತಿ ಕರುಣೆ ತುಂಬಬೇಕಾದ ಧರ್ಮವೆನ್ನುವುದು ಹೇಗೆ ದ್ವೇಷದ ಬೀಜ ಬಿತ್ತುತ್ತದೆ ಅನ್ನುವುದನ್ನೂ ನಿರೂಪಿಸುವ ಈ ಪುಸ್ತಕವನ್ನು ತೆರೆದ ಮನಸ್ಸಿನಿಂದ, ಯಾವ ಪೂರ್ವಾಗ್ರಹಗಳೂ ಇಲ್ಲದೆ ಒಮ್ಮೆ ಓದಿ ನೋಡಿ.

 

ಪುಸ್ತಕ                 : ದೇವರೆಂಬ ಸುಳ್ಳು, ಧರ್ಮವೆಂಬ ದ್ವೇಷ

ಲೇಖಕರು             : ಶಾಂತಾರಾಮ ಸೋಮಯಾಜಿ

ಪ್ರಕಾಶಕರು           : ನವ ಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆದ್

ಪುಟಗಳು              : 120

ಬೆಲೆ                   : 65 ರೂಪಾಯಿಗಳು

ಇದೇನಪ್ಪಾ… ಒಂದಕ್ಕೊಂದು ಅರ್ಥಾರ್ಥ ಸಂಬಂಧವಿಲ್ಲದ ತಲೆಬರಹ; ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನಯ್ಯಾ ಸಂಬಂಧ ಅಂದ್ಕೋತಿದ್ದೀರಾ? ಈಗ ಟಿ.ವಿ. ಸೀರಿಯಲ್ಲುಗಳು ಒಂದೊಂದಾಗಿ ದೇವರಿಗೆ ಇರುವ ಬಿರುದು, ಬಾವಲಿ, ಮಾನ್ಯತೆಗಳನ್ನೆಲ್ಲಾ ಕಿತ್ತುಕೊಂಡು ದೇವರ ಸ್ಥಾನಕ್ಕೇ ಸಂಚಕಾರ ತಂದಿರುವ ವಿಷಯ ನಿಮಗೆ ಗೊತ್ತಿಲ್ವಾ? ಹಾಗಿದ್ರೆ ಓದಿ ನೋಡಿ.

 

ಮೊಟ್ಟ ಮೊದಲನೆಯದಾಗಿ ದೇವನೊಬ್ಬ ನಾಮ ಹಲವು ಅನ್ನುವ ಮಾತಿದೆಯಷ್ಟೇ? ಈಗಿನ ಧಾರಾವಾಹಿಗಳನ್ನು ಗಮನಿಸಿ ನೋಡಿ. ಇರುವ ಹತ್ತಾರು-ನೂರಾರು ವಾಹಿನಿಗಳು ತಮ್ಮ ಪ್ರೈಮ್ ಟೈಮ್‌ನಲ್ಲಿ ವಿವಿಧ ಆಕರ್ಷಕ ಹೆಸರುಗಳ ಧಾರಾವಾಹಿಗಳನ್ನು ಬಿತ್ತರಿಸುತ್ತಿದ್ದರೂ ಕೂಡಾ, ಅದೇ ಮಧ್ಯಮ ವರ್ಗದ ಕನಸು-ಆಸೆ-ನಿರಾಸೆಗಳು, ಅತ್ತೆ-ಸೊಸೆ ಜಗಳಗಳು, ವಿವಾಹೇತರ ಸಂಬಂಧಗಳ ಸುಳಿಯಲ್ಲಿ ಮಿಂದು ಮುಳುಗಿ ಹೋಗಿರುವಾಗ ಕಥೆ ಒಂದು, ಶೀರ್ಷಿಕೆಚ್ಯಾನೆಲ್ ಹಲವು ಅಂತನ್ನುವುದರಲ್ಲಿ ಯಾವ ತಪ್ಪೂ ಇಲ್ಲ ಅಲ್ಲವೇ? ಅದೂ ಅಲ್ಲದೆ ಆ ಧಾರಾವಾಹಿಯಲ್ಲಿ ಗೀತಾ ಆದವಳು ಇಲ್ಲಿ ಸೀತಾ; ಅಲ್ಲಿ ಶ್ಯಾಮನಾದವನು ಇಲ್ಲಿ ರಾಮನಾಗಿ ಅವತಾರವೆತ್ತಿರುವಾಗ, ಅದೇ ಅದೇ ಮುಖಗಳು ಕಾಣಿಸಿಕೊಂಡು ಪಾತ್ರಧಾರಿ ಒಬ್ಬನೇ ಪಾತ್ರ ಬೇರೆ ಅನ್ನೋದು ಕೂಡಾ ಸರಿ ಅಂದ ಹಾಗಾಯ್ತು.

 

ಅದೂ ಅಲ್ಲದೆ ದೇವರು ಎಷ್ಟೇ ಕಷ್ಟ ಕೊಟ್ಟರೂ ಸಮಚಿತ್ತದಿಂದ ನಗುನಗುತ್ತಾ ಸ್ವೀಕರಿಸುವ ಹೆಣ್ಣು ಮಕ್ಕಳನ್ನೆಲ್ಲಾ ಸಾಮೂಹಿಕವಾಗಿ ಕಣ್ಣೀರು ಸುರಿಸುವಂತೆ ಮಾಡುವ ಧಾರಾವಾಹಿಯ ನಿರ್ದೇಶಕ ಅನ್ನುವ ಸೂತ್ರಧಾರನಿಗೆ ಆ ಪಟ್ಟವನ್ನು ದೇವರೇ ಹತಾಶೆಯಿಂದ ನೀಡಿದ್ದಾನೆ ಅನ್ನುವುದು ಒಂದು ವದಂತಿ. ಜೊತೆಗೆ ಟಿ.ಆರ್.ಪಿ.ಗೆ ಅನುಗುಣವಾಗಿ ಪಾತ್ರಗಳ ಬದುಕಿನ ಆಟಗಳನ್ನು ಹಿಗ್ಗಿಸುವ ಕುಗ್ಗಿಸುವ ಶಕ್ತಿ, ಕಿರಿಕ್ ಪಾರ್ಟಿಗಳನ್ನು ತಟಕ್ಕನೆ ಸಾಯಿಸಿ ಹೂಹಾರ ಹಾಕಿ ಕೈತೊಳೆದುಕೊಳ್ಳುವ ನಿರ್ದೇಶಕನ ಸಾಮರ್ಥ್ಯದಿಂದ ದೇವರು ತನ್ನ ಸರ್ವಶಕ್ತ ಪದ ತ್ಯಾಗ ಮಾಡಿರುವುದು ಇದೀಗ ಬಂದ ಫ್ಲಾಶ್ ನ್ಯೂಸ್.

 

ಇಷ್ಟೇ ಆಗಿದ್ರೆ ಪರ್ವಾಗಿರ್ಲಿಲ್ಲವೇನೋ. ಆದ್ರೆ ನೀವೆ ನೋಡಿರುವಂತೆ ಬೆಂಗಳೂರಿನ ಚಾಮರಾಜ ಪೇಟೆಯಿಂದ ಮಡಿಕೇರಿಯ ವಿರಾಜಪೇಟೆಯವರೆಗೆ, ಶಿವಮೊಗ್ಗದ ಶಿಕಾರಿಪುರದಿಂದ ಹಿಡಿದು ಗುಲ್ಬರ್ಗದ ಅಫ್ಜಲ್‌ಪುರದವರೆಗೂ ಸಂಜೆ 6ರಿಂದ ರಾತ್ರಿ 1೦ರವರೆಗೆ ನೀವು ಯಾರ ಮನೆ ಹೊಗ್ಗಿ ಹೊರಟರೂ ಎಲ್ಲೆಲ್ಲೂ ಮಿಂಚು, ಮುಗಿಲು, ಮಾಂಗಲ್ಯಗಳೇ. ಇದನ್ನು ಕಂಡ ಮೇಲೆ ಧಾರಾವಾಹಿ ಸರ್ವಾಂತರ್ಯಾಮಿ ಅನ್ನೋದನ್ನು ಒಪ್ಕೋತೀರ? ಇಷ್ಟೆಲ್ಲಾ ಆದ ಮೇಲೆ ದೇವರಿಗೆ ತನ್ನ ಪಟ್ಟದ ಬಗ್ಗೆ ಹೆದರಿಕೆ ಹುಟ್ಟುವುದು ಸಹಜ ತಾನೆ?

 

ಅಸಲಿ ಟ್ರಬಲ್ಲು ಇರುವುದು ಬೇರೆಯದೇ ಆದ ಒಂದು ಕಾರಣಕ್ಕೆ. ಹಿಂದೆಲ್ಲಾ ವಯಸ್ಸಾದವರು ನೇರವಾಗಿ ಸ್ವರ್ಗಕ್ಕೆ ಹೋಗೋ ಆಸೆಯಿಂದ ಉತ್ತರಾಯಣ ಕಾಲದವರೆಗೆ ನನ್ನನ್ನು ಬದುಕಿಸಪ್ಪಾ, ಆಮೇಲೆ ಬೇಕಾದ್ರೆ ಕೊಂಡುಹೋಗುವಿಯಂತೆ ಅಂತ ಬೇಡ್ಕೊಳ್ತಾ ಇದ್ದದ್ದು ನಿಜವಷ್ಟೇ? ದೇವ್ರೂ ಕೂಡಾ ಹೋಗ್ಲಿ ಬಿಡಿ ಪಾಪ ಅಂತ ಆಗೀಗ ಅಸ್ತು ಅಂದಿರಲೂ ಸಾಕು. ಆದ್ರೆ ಈಗ ಏನಾಗಿದೆ ನೋಡಿ. ಈ ಧಾರಾವಾಹಿ ಮುಗಿಯೋವರೆಗಾದ್ರೂ ನನ್ನನ್ನು ಕರ್ಕೋಬೇಡಪ್ಪಾ ಅಂತ ಬೇಡ್ಕೊಳ್ಳೋರು ಜಾಸ್ತಿ ಆಗಿದಾರೆ. ದೇವರೂ ಕರಗಿ ತಥಾಸ್ತು ಅಂದಿದ್ದೇ ಈಗ ಫಚೀತಿಗಿಟ್ಟುಕೊಂಡಿದೆ. ಅತ್ಲಾಗೆ ಧಾರಾವಾಹಿ ಮುಗ್ಯೋದೂ ಇಲ್ಲಾ, ಇತ್ಲಾಗೆ ಡೆಡ್‌ಲೈನ್ ಮೀರಿದ್ರೂ ಟಾರ್ಗೆಟ್ ಮುಟ್ಲಿಲ್ಲ ಅಂತ ಅವನ ಬಾಸ್ ಬೇರೆ ರಗಳೆ ಮಾಡ್ತಾ ಇದ್ದಾನೆ. ಒಟ್ರಾಶಿಯಾಗಿ ದೇವರ ಸ್ಥಿತಿ ಅವನ ಶತ್ರುವಿಗೂ ಬೇಡ ಅನ್ನೋಹಾಗಾಗಿ ಬಿಟ್ಟಿದೆ. ಅದನ್ನು ಅವ್ನು ಕಳ್ಳಬಟ್ಟಿ, ಅಪಘಾತಗಳ ಲೆಕ್ಕದಲ್ಲಿ ಹೇಗೋ ಸರಿದೂಗಿಸಿ ಅಯ್ಯಬ್ಬಾ ಅಂತ ಉಸಿರುಬಿಡ್ತಾ ಇದ್ದಾನಂತೆ.

 

ಇದೆಲ್ಲದರಿಂದ ಬೇಸತ್ತು ಹೋಗಿ ದೇವ್ರು ಈಗ ನಂಗೆ ಈ ಕೆಲ್ಸಾನೇ ಬೇಡ. ಈ ಪಟ್ಟ, ಬಿರುದು, ಬಾವಲಿಗಳೆಲ್ಲಾ ಧಾರಾವಾಹಿಗೇ ಇರಲಿ ಅಂದ್ಕೊಂಡು, ರಾಜೀನಾಮೆ ಕೊಟ್ಟು ನೋಟೀಸ್ ಪಿರಿಯಡ್ನಲ್ಲಿ ಇದ್ದಾನಂತೆ. ಈಗ ಅವನದ್ದು ಒಂದೇ ಹಾಡು… ಎಂದು ಆದೇನು ನಾನು….. ಮುಕ್ತ…ಮುಕ್ತ…ಮುಕ್ತ

 

( ಎಲ್ಲಾ ಆಸ್ತಿಕ ಮಹಾಶಯರ ಕ್ಷಮೆ ಕೋರಿ )

ವಿಜಯ್‌ರಾಜ್ ಕನ್ನಂತ್