Posts Tagged ‘ನೆನಪುಗಳ ಮಾತು ಮಧುರ..’

aboutworkingmemory

 

 

 

 

 

 

 

 

 

 

 

ಕವಿತೆ ಕುಡಿಯೊಡಯಬೇಕು
ಕಾನನದಿ ಕವಿದ ಕತ್ತಲೆಯೊಳಗೆ
ಕಣ್ದೆರೆದು

ರಾತ್ರಿ ಮೊಗ್ಗಾಗಿದ್ದ ಮಲ್ಲಿಗೆ
ಮುಂಜಾವದ ಮಂಜಲಿ
ಮೆಲ್ಲನೆ ಮುಗುಳ್ನಕ್ಕಂತೆ…

ನಟ್ಟಿರುಳ ನಿದ್ದೆಯಲ್ಲಿಯೂ
ನೆಪವಿಲ್ಲದೆ ನಿನ್ನ
ನಗೆಯ ನೆನಪಾದಂತೆ…

ಬಲವಂತಕೆ ಬಸಿರ ಬಗೆದರೆ
ಬಿಡುಗಡೆಯಲ್ಲವದು…
ಭ್ರೂಣ ಹತ್ಯೆ

ವ್ಯತ್ಯಾಸ ಇಷ್ಟೇ…
ಒಲುಮೆಯ ತುದಿಬೆರಳ
ಸ್ಪರ್ಶದ ನವಿರು ಪುಳಕ
ತೆವಲು-ತೀಟೆಗೆ ತಡಕಾಡುವ
ಕರಗಳ ಚಳಕ

ಮನಸ್ಸಿಗೆ ತುಂಬ ಬೇಜಾರಾದಾಗ ಹಳೆಯ ಫೋಟೋ ಆಲ್ಬಮ್ ಇಲ್ಲವೇ ಕಾಲೇಜ್ ಮ್ಯಾಗಜೀನ್ ಅಥವಾ ಸ್ಕೂಲು- ಕಾಲೇಜಿನ ಆಟೋಗ್ರಾಫ್ ಎಂಬ ನೆನಪಿನ ಸಂಪುಟವನ್ನೊಮ್ಮೆ ಬಿಚ್ಚಿನೋಡಿ. ನಿಮಗೇ ಗೊತ್ತಾಗದಂತೆ ಯಾವುದೋ ಲೋಕದೊಳಗೆ ಕಳೆದುಹೋದಂತೆ ಅನ್ನಿಸದಿದ್ರೆ ಮತ್ತೆ ಹೇಳಿ. ನೆನಪಿನ ಪದರುಗಳ ನಡುವೆ ಎಲ್ಲೋ ಪುಟ್ಟ ಕದಲಿಕೆ. ಕಾಡುವ ಬೇಸರವನ್ನು ಹೊಡೆದೋಡಿಸಿ, ನೆನಪುಗಳ ಜಡಿಮಳೆಯಲ್ಲಿ ಮಿಂದಂತಹ ಆಹ್ಲಾದ ನಿಮ್ಮನ್ನು ಆವರಿಸುತ್ತದೆ. ಯಾವುದೋ ಕಾಲದ ಕೋಳಿ ಜಗಳ ನೆನಪಾಗಿ ತುಟಿಯಂಚಿನಲ್ಲಿ ಕಿರುನಗು ಮೂಡುತ್ತದೆ. ಇನ್ಯಾವುದೋ ಪೋಲಿ ಗೆಳೆಯರ ನೆನಪಾಗಿ ಮುಸಿ ಮುಸಿ ನಗು ತುಟಿ ಮೀರಿ ಹೊರಬರುತ್ತದೆ.

 ನೆನಪುಗಳ ಶಕ್ತಿಯೇ ಅಂಥದ್ದು. ಕಾಲ-ದೇಶ-ವರ್ತಮಾನವನ್ನೆಲ್ಲ ಒಂದರೆಕ್ಷಣ ಮರೆಮಾಡಿ ಗತಬದುಕಿನ ಬೀದಿಯ ಸಂದಿಗೊಂದುಗಳಲ್ಲಿ ಸುತ್ತಾಡಿಸುತ್ತದೆ. ಅದರಲ್ಲೂ ಬಾಲ್ಯಕಾಲದ ಆಟ-ಹುಡುಗಾಟ, ಕಾಲೇಜಿನ ದಿನಗಳ ಜೋಶ್, ತರಲೆ , ಕಿಡಿಗೇಡಿತನವೆಲ್ಲ ಮತ್ತೆ ನೆನಪಾದಾಗ ದೈನಂದಿನ ಜಂಜಡ – ದುಗುಡಗಳಿಂದ ಅರೆಗಳಿಗೆ ಮುಕ್ತಿ ಸಿಗುತ್ತದೆ. ಯಾವ ವಯೋಮಾನವರನ್ನೇ ಕೇಳಿದರೂ ಬಾಲ್ಯ-ಯೌವ್ವನ ಕಾಲದ ಸ್ಮರಣೆಯಿಂದ ಮನಸ್ಸಿಗೆ ಸಿಗುವ ಆಪ್ಯಾಯ ಇನ್ನ್ಯಾವುದರಲ್ಲೂ ಇಲ್ಲ ಎಂದೇ ಹೇಳುತ್ತಾರೆ. 

ಆ ದಿನಗಳ ನೆನಪು ಅಷ್ಟು ಆಪ್ತವಾಗಲು ಕಾರಣವೇನು? ಬದುಕಿನ ಕ್ರೂರವಾಸ್ತವದ ಅರಿವಿರದ, ಎಲ್ಲವನ್ನೂ ಬೆರಗಿನಿಂದ ನೋಡುವ ಉತ್ಸಾಹದ, ಕೃತ್ರಿಮತೆಯ ಲೇಪವಿರದ, ಸಹಜ ಜೀವನೋತ್ಸಾಹದ ಗುಂಗಿನಲ್ಲಿ ಎಲ್ಲವೂ ಆಪ್ತವೆನಿಸಿ ಚಿತ್ತಭಿತ್ತಿಯಲ್ಲಿ ಅಚ್ಚಳಿಯದಂತೆ ಉಳಿದುಬಿಡುವುದೇ ಇದಕ್ಕೆ ಕಾರಣ. ಮುಂದೆ ಯಾವಾಗಲಾದರೂ ಮತ್ತೆ ನೆನಪಿನ ತಿಜೋರಿಯ ಕೀಲಿಕೈ ತಿರುವಿದಾಗ ನೆನಪುಗಳು ಇಂಪಾದ ಜೋಗುಳ ಹಾಡಿ, ನಮ್ಮನ್ನು ಮತ್ತೆ ಆ ಮುಗ್ಧತೆಯ ಮಡಿಲಲ್ಲಿ ಮಲಗಿಸುತ್ತವೆ. ಆ ಬೆಚ್ಚನೆಯ ಭಾವದ ತಂತು ಮನಸ್ಸಿನ ಮೂಲೆಯಲ್ಲಿ ನಿದ್ರಿಸುವ ಭಾವನೆಗಳ ಬಡಿದೆಬ್ಬಿಸುತ್ತದೆ. ನಾವು ನಾಸ್ಟಾಲ್ಜಿಯಾದಲ್ಲಿ ಕಳೆದು ಹೋಗುತ್ತೇವೆ. 

ನೆನಪುಗಳೆಂದ ಮೇಲೆ ಸಿಹಿಯ ಜೊತೆಗೆ ಕಹಿಯೂ ಇರುವುದು ಸಹಜ. ಆದರೆ, ಸಿಹಿ ನೆನಪುಗಳು ಕಾಡಿದಷ್ಟು ತೀವ್ರವಾಗಿ ಕಹಿನೆನಪುಗಳು ನಮ್ಮನ್ನು ತಟ್ಟುವುದಿಲ್ಲ, ಕಾಡುವುದಿಲ್ಲ. ಕಾರಣ, ಕಹಿನೆನಪುಗಳು ಚರಿತ್ರೆಯ ಭಾಗವಾಗಿರುತ್ತವೆ ಅಥವಾ ಕಾಲದ ಜರಡಿ ಯೊಳಗೆ ಹಾದು ಬಂದ ಬದುಕಿನ ಪ್ರಬುದ್ಧತೆ ಯಿಂದಾಗಿ, ಹಿಂದೊಮ್ಮೆ ಕಹಿ ಅನಿಸಿದ ಘಟನೆಗಳೇ ಪ್ರಸ್ತುತದಲ್ಲಿ ಸಿಲ್ಲಿ ಅನ್ನಿಸಬಹುದು. ಈ ಕಾರಣದಿಂದಲೇ ಅಂಥ ನೆನಪುಗಳು ತೀವ್ರತೆಯನ್ನು ಕಳೆದು ಕೊಂಡು ಬರೀ ಒಂದು ಮುಗುಳ್ನಗು ಮೂಡಿಸಿ ಮನಸ್ಸಿನಿಂದ ಮರೆಯಾಗಿಬಿಡುತ್ತವೆ. ಆದರೆ ಸವಿನೆನಪುಗಳು ಹಾಗಲ್ಲ. ಮಳೆ ನಿಂತ ಮೇಲೂ ಉದುರುವ ಹನಿಯಂತೆ ಮತ್ತೆ ಮತ್ತೆ ನಮ್ಮನ್ನು ಮುತ್ತಿಕ್ಕಿ ನವಚೈತನ್ಯ ತುಂಬುತ್ತವೆ ಅದಕ್ಕೇ ಹೇಳಿರೋದು… ಸವಿನೆನಪುಗಳು ಬೇಕು… ಸವಿಯಲೀ ಬದುಕು