Posts Tagged ‘ಪದ್ಯ’

ಇದನ್ನು ಕವನ ಅಥವ ಪದ್ಯ ಅನ್ನೋ ಎದೆಗಾರಿಕೆ ನನ್ನಲ್ಲಿಲ್ಲ…ಅದ್ರೂ ಮನಸಿನ ಮರ್ಮರಗಳೆಲ್ಲ ಕವಿತೆಗಳಾಗಬೇಕೆಂಬ ನಿಯಮವೇನಿಲ್ಲವಲ್ಲ. ಹಾಗಾಗಿ ಕೆಲವು ಸಾಲುಗಳು ಹಾಗೇ ಸುಮ್ಮನೆ…

 

 

ಸುಮ್ ಸುಮ್ನೆ ನೆನಪಾಗಿ ಕಾಡಬೇಡ್ವೇ..

ಯಾವಾಗ್ಲೂ ಕಣ್ಣಿಗೆ ಕಸ ಬಿತ್ತಂದ್ರೆ

ಯಾರೂ ನಂಬಲ್ವೇ !

 

-.-.-.-.-.-.-.-.-.-.-.-.-.–.-.-.-.-.-.-.-.-

 

ಈ ಜಗತ್ತಲ್ಲಿ ಬದಲಾವಣೆ ನಿರಂತರ ಅನ್ನುತ್ತೆ ವೇದಾಂತ

ಆದರೆ ನೀನೂ ಬದಲಾಗಿ ಬಿಟ್ಟೆ ನೋಡು… ಅದೇ ದುರಂತ

 

-.-.-.-.-.-.-.-.-.-.-.-.-.–.-.-.-.-.-.-.-.-

 

ಬಹಳ ದೂರ ನೀ ಹೋಗಿಬಿಟ್ಟೆ

ಹಿಂದಿರುಗಿ ಬರಲಾಗದಷ್ಟು…

ಬೇಸರವಾಗಿದ್ದು ಅದಕ್ಕಲ್ಲ

ಬದಲಾಗಿ ಬಿಟ್ಟೆಯಲ್ಲ ನೀ

ಹಿಂದಿರುಗಿ ನೋಡಲೂ ಆಗದಷ್ಟು..!

 

-.-.-.-.-.-.-.-.-.-.-.-.-.–.-.-.-.-.-.-.-.-

 

ಚರಿತ್ರೆ ಮರುಕಳಿಸುತ್ತೆ ಅನ್ನೋ ಮಾತನ್ನು ನಂಬಿ

ಖುಶಿಯಿಂದ ಕಾಯುತ್ತ ಕುಳಿತಿದ್ದೆ

ನೀ ಮತ್ತೆ ಸಿಗಬಹುದೆಂದು…

ಆದರೀಗ ಯಾಕೋ ದಿಗಿಲಾಗುತ್ತಿದೆ ನೆನಪಾಗಿ

ನೀ ಕಳೆದು ಹೋಗಿದ್ದು ಕೂಡಾ

ಅದೇ ಚರಿತ್ರೆಯ ಭಾಗವೆಂದು !

 

-.-.-.-.-.-.-.-.-.-.-.-.-.–.-.-.-.-.-.-.-.-

 

ಮೌನದ ನುಡಿ ನಿನಗೆ ಕೇಳಿಸಲೇ ಇಲ್ಲ,

ಮಾತಡೋಕೆ ನಂಗೂ ಧೈರ್ಯ ಇರಲಿಲ್ಲ

ಈಗ ಧೈರ್ಯವೇನೋ ಬಂದಿದೆ…

ಆದ್ರೆ ಮಾತಾಡೋಕೆ ಏನೂ ಉಳಿದೇ ಇಲ್ಲ!

 

-.-.-.-.-.-.-.-.-.-.-.-.-.–.-.-.-.-.-.-.-.-

 

ಸದಾ ನೀ ಜೊತೆಯಾಗಿರು ಅಂತ ಪ್ರಾರ್ಥಿಸಿದ್ದೆ

ಯಾವುದೋ ದೇವತೆ ಅಸ್ತು ಅಂದಿರಬೇಕು

ಈಗ ಮರೆಯಬೇಕೆಂದುಕೊಂಡರೂ ಸದಾ

ನಿನ್ನ ನೆನಪಾಗೋದು ಅದಕ್ಕೇ ಇರಬೇಕು

ಇದು ಲಾರ್ಡ್ ಟೆನಿಸನ್‌ನ ಹೋಮ್ ದೆ ಬ್ರಾಟ್ ಹರ್ ವಾರಿಯರ್ ಡೆಡ್‌ನ ಭಾವಾನುವಾದ. ಈ ಪದ್ಯ ನಮಗೆ 10ನೇ ಕ್ಲಾಸಿನ ಇಂಗ್ಲೀಷ್ ಪಠ್ಯದ ಭಾಗವಾಗಿತ್ತು. ಈ ಪದ್ಯ ಅದರ ಭಾವ ತೀವ್ರತೆಯಿಂದಾಗಿ ನನ್ನನ್ನು ಗಾಢವಾಗಿ ತಟ್ಟಿತ್ತು. ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ನನ್ನದು. ಅದರ ಮೂಲದ ತೀವ್ರತೆಯ ನೂರರಲ್ಲೊಂದು ಭಾಗ ಇಲ್ಲಿ ಬಂದಿದ್ದರೂ ನನ್ನ ಪ್ರಯತ್ನ ಸಾರ್ಥಕ

 

ಹೆಮ್ಮೆಯ ವೀರಯೋಧ ಆಕೆಯ ಪತಿ,

ಯುದ್ಧದಲಿ ಮಡಿದ ಅವನೀಗ ಬರೀ ಸ್ಮೃತಿ,

ಯೋಧನ ಶವವೀಗ ಮನೆಯ ಮುಂದಿದೆ,

ಅವಳ ಬಾಳ ಜ್ಯೋತಿಯೀಗ ನಂದಿದೆ.

 

ಅಳುವುದನೂ ಮರೆತಂತೆ ಕುಸಿದು ಕುಳಿತಿಹಳು,

ನಿರ್ಜೀವ ಭಾವ ಹೊರಸೂಸುವ ಕಂಗಳು,

ಶೋಕಭಾರಕೆ ಮೂಕಳಾಗಿಹ ಇವಳು,

ಅಳದಿದ್ದರೆ ಖಂಡಿತ ಬದುಕಿ ಉಳಿಯಳು.

 

ಣ್ಣೀರ ಬರಿಸಲೆಂದೇ ಅವನ ಹಾಡಿ ಹೊಗಳಿದರು,

ಬಣ್ನಿಸುತಾ ಅವನ ಶೌರ್ಯ ಸಾಹಸದ ಕತೆಗಳು,

ಕೇಳುತಾ ಕುಳಿತಳು ಅವಳು ಶಿಲೆಯಂತೆ,

ಈ ಲೋಕದಾ ಪರಿವೆಯೇ ಇಲ್ಲದವಳಂತೆ.

 

ಸ್ನೇಹಿತೆಯೊಬ್ಬಳು ಅವಳ ಕೈಹಿಡಿದು ಕರೆತಂದು,

ಯೋಧನ ಶವದ ಬಳಿಸಾರಿ ನಿಂದು,

ಮುಖವ ತೋರಿಸಿದಳು ಸರಿಸಿ ಬಿಳಿಬಟ್ಟೆ,

ಆದರೂ ಒಡೆಯಲಿಲ್ಲ ಅವಳ ದುಃಖದ ಕಟ್ಟೆ.

 

ಅಷ್ಟರಲಿ ಅಲ್ಲಿದ್ದ ವೃದ್ಧೆಯೊಬ್ಬಳು,

ಅಳುವ ಮಗುವ ತಂದು ಮಡಿಲಲಿಟ್ಟಳು,

ಉಕ್ಕಿ ಹರಿಯಿತು ಕಣ್ಣೀರು ಜಲಪಾತವಾಗಿ,

ಮುದ್ದು ಕಂದಾ ನಾ ಬದುಕಬೇಕು ಖಂಡಿತಾ ನಿನಗಾಗಿ

 

 

ಈ ವಿಜ್ಞಾನಿಗಳು ಎಲ್ಲಾ ಹಾಳು ಮಾಡಿಬಿಟ್ರು…

ಚಂದಮಾಮನ ತೋರಿಸಿ ಮೊಲದ ಕಥೆ ಹೇಳಿದ್ರೆ

ಚಂದ್ರಕಂದಕಗಳ ಬಗ್ಗೆ ಮಗು ಕೇಳುತ್ತೆ,

ಪುಷ್ಪಕವಿಮಾನದ ಸೊಗಸು ಹೇಳೋಕೆ ಹೋದ್ರೆ

ಆಗ ಪೆಟ್ರೋಲ್ ಎಲ್ಲಿತ್ತು ಅಂತ ಕೆಣಕುತ್ತೆ

ರಕ್ತಬೀಜಾಸುರರ ಕಥೆ ಹೇಳೋಣ ಅಂದ್ರೆ

ಆಗ ಕ್ಲೋನಿಂಗ್ ಎಲ್ಲಿತ್ತು ಅಂತ್ ಸವಾಲೆಸೆಯುತ್ತೆ

ಈ ವಿಜ್ಞಾನಿಗಳು ಎಲ್ಲಾ ಕಲ್ಪನೆಗಳ ಕಥೆ ಕೆಡಿಸಿಬಿಟ್ಟಿದ್ದಾರೆ..

ನೂರಿನ್ನೂರು ವರ್ಷಗಳ ಮುಂಚೆ ಹುಟ್ಬೇಕಿತ್ತು ಅಂತ ಒಮ್ಮೊಮ್ಮೆ ಅನ್ಸುತ್ತೆ

ನಾನು ಚಿಕ್ಕವನಿದ್ದಾಗ ಕೇಳಿದ ಒಂದು ಪದ್ಯ ಇದು. ಇದು ಬಾಯಿಂದ ಬಾಯಿಗೆ ಹರಿದು ಬರುವಾಗ ಇದರ ರೂಪದಲ್ಲಿ ಅನೇಕ ಬದಲಾವಣೆಗಳಾಗಿರಬಹುದು. ಚಿಕ್ಕ ಮಕ್ಕಳಲ್ಲಿ ಕುತೂಹಲ, ಆಸಕ್ತಿ ಕೆರಳಿಸುವ, ನೆನಪಿನ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಲು ನೆರವಾಗುವ ಈ ಪದ್ಯ ಯಾರು ಸೃಷ್ಟಿಸಿದ್ದೋ ಗೊತ್ತಿಲ್ಲ. ನನಗೆ ಚಿಕ್ಕಂದಿನಲ್ಲಿ ಕೇಳಿದ್ದು ಇನ್ನೂ ಬಾಯಿಪಾಠ ಇದೆ.

 

ಈ ಪದ್ಯದಲ್ಲಿ ಸಿಂಡಿಕೇಟ್ ಬ್ಯಾಂಕು ಬರುತ್ತೆ. ಅದ್ಯಾವುದೋ ಕಮಲಾ ಸರ್ಕಸ್ ಅನ್ನೋ ಸರ್ಕಸ್ ಬರುತ್ತೆ. ಹಾಗೆಯೇ ಬಡ್ಡಿ ಕಮಲ ಅನ್ನೋ ಹೆಂಗಸಿನ ಪ್ರಸ್ತಾಪವೂ ಬರುತ್ತೆ. ಯಾರೀಕೆ ಕಮಲ? ಆಕೆ ಬಡ್ಡಿ ವ್ಯವಹಾರ ಮಾಡ್ತಾ ಇದ್ದಳಾ? ಯಾವೂರಿನವಳು? ಅದ್ಯಾವುದು ಕಮಲಾ ಸರ್ಕಸ್? ಅದು ಈಗಲೂ ಇದ್ಯಾ? ಈ ಹಾಡು ರಚಿತವಾದ ಕಾಲ ಯಾವುದಿರಬಹುದು? ಯಾರಿದನ್ನು ಬರೆದಿರಬಹುದು..ಇದು ಜನರ ಬಾಯಿಂದ ಬಾಯಿಗೆ ಹೀಗೆ ಹರಿದು ಬಂತೆ..? ಹೀಗೆ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಬಹುಶಃ ನಮ್ಮೂರು ಕುಂದಾಪ್ರ-ಉಡುಪಿ ಕಡೆಯ ಪದ್ಯ ಇರಬೇಕು ಅನ್ನೋದು ನನ್ನ ಊಹೆ. ಕೊನೆಯಲ್ಲಿ ದೇಶಪ್ರೇಮದ ಒಂದು ಝಲಕ್ ಕೂಡಾ ಇದೆ. ನಿಮಗೇನಾದ್ರೂ ಈ ಕುರಿತು ಗೊತ್ತಿದ್ರೆ ಹೇಳಿ…ಇಲ್ಲವಾದ್ರೂ ಹಾಡನ್ನಂತೂ ಓದಿ ಖುಶಿ ಪಡಲು ಅಡ್ಡಿಯಿಲ್ಲ.

 

ಮಗು ಮಗು ಪಾಠ ಕಲಿ..

ಯಾವ ಪಾಠ?

ಕೃಷ್ಣ ಪಾಠ

ಯಾವ ಕೃಷ್ಣ?

ಬಾಲ ಕೃಷ್ಣ

ಯಾವ ಬಾಲ?

ಕುದುರೆ ಬಾಲ

ಯಾವ ಕುದುರೆ?

ಸರ್ಕಸ್ ಕುದುರೆ

ಯಾವ ಸರ್ಕಸ್?

ಕಮಲಾ ಸರ್ಕಸ್

ಯಾವ ಕಮಲಾ?

ಬಡ್ಡಿ ಕಮಲ

ಯಾವ ಬಡ್ಡಿ?

ಬ್ಯಾಂಕಿನ ಬಡ್ಡಿ

ಯಾವ ಬ್ಯಾಂಕು?

ಸಿಂಡಿಕೇಟ್ ಬ್ಯಾಂಕು

ಯಾವ ಸಿಂಡಿ?

ಭಟ್ಟರ ಸಿಂಡಿ

ಯಾವ ಭಟ್ಟರು?

ಪೂಜೆ ಭಟ್ಟರು

ಯಾವ ಪೂಜೆ?

ಗಣಪನ ಪೂಜೆ

ಯಾವ ಗಣಪ?

ಸೊಂಡಿಲ ಗಣಪ

ಯಾವ ಸೊಂಡಿಲು?

ಆನೆ ಸೊಂಡಿಲು

ಯಾವ ಆನೆ?

ಕಾಡು ಆನೆ

ಯಾವ ಕಾಡು?

ನಮ್ಮ ಕಾಡು

ಯಾವ ನಮ್ಮ?

ನಮ್ಮ ದೇಶ ನಮ್ಮ

ಯಾವ ದೇಶ?

ಭಾರತ ದೇಶ

ಯಾವ ಭಾರತ?

ನಮ್ಮ ಭಾರತ

 

 

 

ಅವನೊಬ್ಬ ಅನಿವಾಸಿ ಅವಳ್ಹೆಸರು ಅವಿನಾಶಿ

ಭೇಟಿಯಾದರು ಅಂತರ್ಜಾಲದಿ ಚಾಟಿಸಿ

ಅರಳಿದ ಪ್ರೇಮವು ಶುದ್ಧ ಫ್ಯಾಂಟಸಿ

ಅಂತರ್ಜಾಲದ ಅಂತರ್‌ಪಟವ ಸೇರಿಸಿ

ದಂಪತಿ ಅವರೀಗ ನೆಟ್ ಅಲ್ಲೇ ವರಿಸಿ

ಬಂಧುಗಳು ಇವರ ಮೇಲ್ ಅಲ್ಲೇ ಹರಸಿ

ವೆಬಕ್ಯಾಮ್‌ನೊಳಗೆ ಕಣ್ಣೀರು ಸುರಿಸಿ

ಮನೆತುಂಬಿಸಿಕೊಂಡರು ಮೌಸ್ ಕ್ಲಿಕ್ಕಿಸಿ

ತಾಳಿ (ಟ್ಯಾಲಿ) ಇಲ್ಲದ ಇ-ಮದುವೆ ಕತೆ ಆಲಿಸಿ

ನಿಮ್ಮ ಅನಿಸಿಕೆಗಳನು ಬ್ಲಾಗ್ ಅಲ್ಲಿ ಬ್ಲಾಗಿಸಿ