Posts Tagged ‘ಪುಸ್ತಕ’

ನಾವು ಹುಟ್ಟಿ ಬೆಳೆದ ನೆಲದ ಬಗೆಗಿನ ಪ್ರೀತಿ-ಸೆಳೆತ-ಆಕರ್ಷಣೆಯು ನಾವು ಎಲ್ಲೇ ಇದ್ದರೂ ಕೂಡಾ ಸದಾ ನಮ್ಮ ನೆರಳಿನಂತೆ ಹಿಂಬಾಲಿಸುವುದು ಸಹಜ. ನಾವು ಆಡಿ ಬೆಳೆದ ಪರಿಸರ, ಅಲ್ಲಿನ ಆಚರಣೆ-ಹಬ್ಬ-ಹರಿದಿನ, ಅಲ್ಲಿನ ಜನ-ಜೀವನ ನಮಗೆಲ್ಲರಿಗೂ ಆಪ್ಯಾಯಮಾನ. ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್.ನಾಗವೇಣಿಯವರ ಕತೆಗಳಲ್ಲಿ ಕೂಡಾ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಅ ಮಣ್ಣಿನ ಸಾರದಲ್ಲಿನ ಜೀವಂತಿಕೆಯನ್ನು ತುಂಬಿಕೊಂಡು ನಳನಳಿಸುತ್ತಿರುವಂತೆ ಭಾಸವಾಗುತ್ತದೆ. ನಾಗವೇಣಿಯವರ ಕಥಾಸಂಕಲನಗಳಾದ ‘ವಸುಂಧರೆಯ ಗ್ಯಾನ’, ‘ನಾಕನೇ ನೀರು’, ‘ಮೀಯುವ ಆಟ,’ಗಳಲ್ಲಿ ನಮಗೆ ಕಾಣಸಿಗುವುದು ತೌಳವ ನಾಡಿನ ಸಾಮಾಜಿಕ, ಸಾಂಸ್ಕೃತಿಕ, ಜಾನಪದ ಲೋಕಗಳ ಯಥಾವತ್ ಚಿತ್ರಣ. ಇವೆಲ್ಲಕ್ಕೂ ಕಳಸವಿಟ್ಟಂತೆ, ಅವರು ತಮ್ಮ ‘ಗಾಂಧಿ ಬಂದ’, ಕಾದಂಬರಿಯಲ್ಲಿ ಗಾಂಧಿಯನ್ನು ರೂಪಕವನ್ನಾಗಿರಿಸಿಕೊಂಡು, ತುಳುನಾಡ ಪರಿಸರದಲ್ಲಾದ ಸ್ಥಿತ್ಯಂತರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ತುಳುನಾಡಿನ ವೈಶಿಷ್ಟ್ಯಗಳಾದ ಕಂಬಳ, ಕೋಲ, ಕೋಳಿಕಟ್ಟ, ಆಟಿ ಕಳಂಜ, ಕೆಡ್ಡಸ, ಕಂಗಿಲ ಹಬ್ಬಗಳ ಲೋಕದಲ್ಲಿ ವಿಹಾರ ಕೊಂಡೊಯ್ದು, ತುಳುನಾಡಿನ ಮಣ್ಣಿ-ಮೂಡೆಗಳ ಸವಿಯುಣ್ಣಿಸಿ, ಅಲ್ಲಿನ ಅಳಿಯಕಟ್ಟು ಸಂತಾನದ ಕಟ್ಟು ಕಟ್ಟಳೆ, ರೀತಿ-ರಿವಾಜುಗಳನ್ನು ಬಣ್ಣಿಸಿ ತುಳುನಾಡ ಜಗತ್ತನ್ನು ಕಣ್ಣೆದುರು ತಂದು ನಿಲ್ಲಿಸುತ್ತಾರೆ. ತುಳುನಾಡಿನ ಕುರಿತು ಇಷ್ಟು ವರ್ಣನಾತ್ಮಕವಾದ, ತೌಳವ ನಾಡಿನ ಸಾಂಸ್ಕೃತಿಕ ಪರಂಪರೆಯೆ ಬಗೆಗೆ ಇಷ್ಟು ವಿವರಣಾತ್ಮಕವಾದ ಬೇರೆ ಯಾವುದೇ ಪುಸ್ತಕ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ನಾನಂತೂ ಓದಿಲ್ಲ.

ಪುಸ್ತಕದ ಶೀರ್ಷಿಕೆ ‘ಗಾಂಧಿ ಬಂದ’ ಅಂತಿದ್ದರೂ ಕೂಡಾ, ಇದೇನು ಸ್ವಾತಂತ್ರ್ಯ ಸಂಗ್ರಾಮದ ಕಥಾನಕವೇನಲ್ಲ. ಬದಲಾಗಿ ಗಾಂಧೀಜಿ ಮೂರು ಬಾರಿ ಮಂಗಳೂರಿಗೆ ಬಂದು ಹೋದ ಸಂದರ್ಭದಲ್ಲಿ, ಕಾರ್ನಾಡು ಸದಾಶಿವರಾಯರಂತವರ ಕ್ರಾಂತಿಕಾರಕ ವಿಚಾರಧಾರೆಯಿಂದಾಗಿ ತುಳುನಾಡಿನಲ್ಲಿ ತುಳಿತಕ್ಕೊಳಗಾದವರಲ್ಲಿಮೂಡಿಬಂದ ಜಾಗ್ರತಿಯು, ಹೇಗೆ ಬದಲಾವಣೆಯ ಗಾಳಿ ಬೀಸುವಂತೆ ಮಾಡಿತು ಅನ್ನುವುದು ಇದರ ಕಥಾಹಂದರ. ದ್ರೌಪತಿ ಅನ್ನುವ ಬಾಲವಿಧವೆ ಮತ್ತು ಅದ್ರಾಮ ಅನ್ನುವ ಜಟಕಾ ಓಡಿಸುವ ಮುಸ್ಲಿಂ ಯುವಕನ ನಡುವೆ ಅರಳುವ ಪ್ರೀತಿಯ ಹಿನ್ನೆಲೆಯಲ್ಲಿ ಆ ಕಾಲದ ತುಳುನಾಡಿನ ಸಾಮಾಜಿಕ ಜೀವನದ ಚಿತ್ರಣವೇ ಇಲ್ಲಿ ಮೈದೆರೆದು ನಿಂತಿದೆ. ಅಂತಪ್ಪ, ಅದ್ರಾಮ, ಹೆಬ್ಬಾರರು, ದ್ರೌಪತಿ, ದಾರು, ಸೂರಕ್ಕೆ, ಗುತ್ತಿನ ಶೆಟ್ರು… ಇವರ ನಡುವೆಯೇ ಸುತ್ತಿ ಸುಳಿದಾಡುವ ಈ ಕಾದಂಬರಿಲ್ಲಿ ಕಥನ ಕುತೂಹಲಕ್ಕಿಂತಲೂ ಓದಿನ ಸುಖವು ಈ ಪರಿಸರದಲ್ಲಿ ಸುತ್ತಿ ಸುಳಿದಾಡಿದಂತಹ ಅನುಭವದಲ್ಲಿ ಸಿಗುತ್ತದೆ. ತುಳುನಾಡಿನ ಪರಂಪರೆಯ ಜೊತೆಯಲ್ಲಿ ಸಾಮಾಜಿಕ ಬದುಕಿನ ಮೇಲು-ಕೀಳು, ಅಸ್ಪೃಶ್ಯತೆ, ಜಗಳಗಳು, ಅಳಿಯಕಟ್ಟು ಸಂಪ್ರದಾಯದ ಆಚರಣೆಗಳು, ಅದರ ಒಳಿತು-ಕೆಡಕು, ಗುತ್ತಿನವರ ಗತ್ತು-ದೌಲತ್ತು, ಮೇಲ್ಜಾತಿಯವರ ಮೇಲಾಟಿಕೆ.. ಇವೆಲ್ಲವೂ ಕಾಣಸಿಗುತ್ತದೆ. ತುಳುನಾಡಿನ ಕಥಾನಕವಾದ್ದರಿಂದ ವಿಶೇಷವಾಗಿ ಆಚರಣೆ ಪದ್ಧತಿಗಳನ್ನು ಬಣ್ಣಿಸುವಾಗ ಅಲ್ಲಲ್ಲಿ ತುಳು ಶಬ್ದ ಕಾಣಸಿಗುತ್ತದಾದರೂ ಅದು ಪಾಯಸದಲ್ಲಿ ಗೇರುಬೀಜ ಸಿಕ್ಕಂತೆ ಮಧುರವಾಗಿದೆ. ತುಳುನಾಡಿನ ಮಂದಿಯಂತೂ ಆ ಕಾದಂಬರಿಯನ್ನು ಚಪ್ಪರಿಸಿಕೊಂಡು ಓದುವುದಕ್ಕೆ ಅಡ್ಡಿಯಿಲ್ಲ. ತುಳುನಾಡ ಸಂಸ್ಕೃತಿ-ಜನಜೀವನ-ಆಚರಣೆಗಳ ಕುರಿತು ಕುತೂಹಲವಿರುವ ತುಳುನಾಡ ಹೊರಗಿನವರಿಗೂ ಇದೊಂದು ಅಕ್ಷರ ದಾಸೋಹ ಅಂತ ಧಾರಾಳವಾಗಿ ಹೇಳಬಹುದು

ಪುಸ್ತಕ            : ಗಾಂಧಿ ಬಂದ

ಲೇಖಕಿ           : ಎಚ್.ನಾಗವೇಣಿ

ಪುಟಗಳು                   : 368 + 12

ಬೆಲೆ              : 175

ಹಾಡುಗಳ ಹುಟ್ಟು.. ಹುಟ್ಟಿನ ಹಿಂದಿರುವ ಗುಟ್ಟು…

ಹಾಡಿನೋಳಗಡಗಿಹ ಭಾವ… ನಗೆ ಸಾಲಿನ ಹಿಂದಿರುವ ನೋವ..

ಹೀಗೆ ಪ್ರತಿಯೊಂದು ಕಾಡುವ ಹಾಡಿನ ಹುಟ್ಟಿನ ಜಾಡು ಹುಡುಕುತ್ತಾ ಹೊರಟ ಮಣಿಕಾಂತ್ ಬರೆದ ಪದ್ಯಗಳ ಕುರಿತಾದ ಹೃದ್ಯ ಗದ್ಯ ಸಂಕಲನ.. ಸಧ್ಯದಲ್ಲೇ ನಿಮ್ಮ ಕೈ ಸೇರಲಿದೆ…

ಹೊತ್ತಗೆ ಬಿಡುಗಡೆಯಾಗುವ ಹೊತ್ತಿನಲ್ಲಿ ಚಿತ್ರನಟ ರಮೇಶ್ ನಿಮ್ಮೊಟ್ಟಿಗೆ ಇರ್ತಾರೆ…ಪುಸ್ತಕ ಬಿಡುಗಡೆಯನ್ನು ಕೂಡ ಅವ್ರೆ ಮಾಡ್ತಾರೆ…

ಪುಸ್ತಕದ ಬಗ್ಗೆ ಅನಂತ್ ಚಿನಿವಾರರ ಮಾತಿನ ಚಿನಕುರಳಿಯಿದೆ….

ಮಣಿಯ ಬರಹಗಳಿಗೆ ಸದಾ ಪ್ರೋತ್ಸಾಹ ನೀಡುವ ವಿಶ್ವೇಶ್ವರ್ ಭಟ್ ಈ ಸಂಭ್ರಮದಲ್ಲಿ ಜೊತೆಗಿರ್ತಾರೆ…

ಮತ್ತೇನಿದೆ ಅಂತೀರಾ? ಏನಿಲ್ಲ ಅಂತ ಕೇಳಿ…ಹಾಡಿನ ಮತ್ತಿನಲಿ ಮುಳುಗಿ ಏಳಿ… ಅಷ್ಟೇ…!!

ಇಡೀ ಸಮಾರಂಭ ಹಾಡುಗಳ ಹಬ್ಬ…!!!

ಹಾಡಿನ ರಥಬೀದಿಯಲ್ಲಿ ಹಾಡು ಹಬ್ಬದ ತೇರು ಎಳೆಯೋರು ಯಾರ್ಯಾರು?

ಕಸ್ತೂರಿ ಶಂಕರ್ , ಅರ್ಚನ ಉಡುಪ, ಸುನಿತಾ, ಮಂಗಳ, ಪಂಚಮ ಹಳಿಬಂಡಿ, ಸುಂದರ್, ಜಯಪಾಲ್… ಮುಂತಾದ ನಾದೋಪಾಸಕರು

ಎಲ್ಲಾ ಸರಿ… ಹಬ್ಬ ಯಾವಾಗ ಗೊತ್ತೆ?  ಜನವರಿ ತಿಂಗಳ ಹತ್ತನೇ ತಾರೀಕು ಭಾನುವಾರ ಬರುತ್ತೆ…

ಇಂತಾ ಹಾಡು ಹಬ್ಬ ತಪ್ಪಿಸಿಕೊಂಡರೆ ಮತ್ತೆ ಬೇಕಂದ್ರೆ ಸಿಗುತ್ತೆ?

ಮತ್ಯಾಕೆ ತಡ.. ನಿಮ್ಮ ಡೈರಿಯಲ್ಲಿ ( ಈಗ ಡೈರಿ ಎಲ್ಲಿ ಬಿಡಿ ಅಂತೀರಾ… ನಿಮ್ಮ ಮೊಬೈಲಿನಲ್ಲಿ ಅಂತಾನೆ ಇಟ್ಕೊಳ್ಳಿ ) ಗುರುತು ಹಾಕ್ಕೊಳ್ಳಿ ಇವತ್ತೇ..

ಜಾತ್ರೆ ನಡೆಯೋ ಪ್ರಾಂಗಣ  …. ರವೀಂದ್ರ ಕಲಾಕ್ಷೇತ್ರದ ಸಭಾಂಗಣ…

ಹಾಡಿನ ಜಾತ್ರೆ ಶುರುವಾಗೋ ಹೊತ್ತು… ಬೆಳಿಗ್ಗೆ ಹತ್ತೂ ಮೂವತ್ತು….

ಪುಸ್ತಕ ಬಿಡುಗಡೆಯ ನೆಪದಲ್ಲಿ ಸುಮಧುರ ಹಾಡುಗಳ ಕೇಳೋಣ ಅಂತ… ಕರೆಯುತ್ತಿದ್ದಾರೆ ನನ್ನ ಗೆಳೆಯ ಮಣಿಕಾಂತ

ಮೊದಲಿಗೆ ಕಾಡಿಗೊಂದು ಥ್ಯಾಂಕ್ಸ್ ಹೇಳಲೇಬೇಕು. ಬಾಲ್ಯಕಾಲದಲ್ಲಿ ಭಾವಕೋಶದೊಳಕ್ಕಿಳಿದು… ನೆನಪಿನಾಳದಲ್ಲಿ ಬೆಚ್ಚಗೆ ಕುಳಿತು… ತನ್ನೆಲ್ಲಾ ನಿಗೂಡತೆ, ಬೆರಗು-ಬೆಡಗು-ಸೊಬಗುಗಳ ಬೀಜಗರ್ಭದಿಂದ ಕತೆಯಾಗಿ ಮೊಳೆತು… ಈಗ ನಮ್ಮನ್ನೂ ಆ ನಿಗೂಢ ಜಗತ್ತಿನ ಅಲೆದಾಟಕ್ಕೆ ಕೊಂಡೊಯ್ಯುವಂತೆ ಜೋಗಿಯನ್ನು ಕಾಡಿದ ಕಾಡಿಗೊಂದು ಕೃತಜ್ಞತೆ ಹೇಳದಿದ್ರೆ ಪುಸ್ತಕ ನೀಡಿದ ಸಂತೋಷಕ್ಕೆ ಮೋಸ ಮಾಡಿದ ಹಾಗೆ. ಜೋಗಿ ಬಾಲ್ಯಕಾಲದಲ್ಲಿ ಕಂಡು ಸಂಭ್ರಮಿಸಿದ, ಅಗಾಧತೆಯಿಂದ ಬೆರಗಿಗೀಡಾದ, ನಿಗೂಢತೆಯಿಂದ ದಿಗಿಲುಗೊಂಡ, ಪ್ರಕೃತಿ ಮಾತೆಯ ಮಡಿಲಲ್ಲಿ ಆರಾಮದಿಂದ ವಿಹರಿಸಿದ ವಿರಮಿಸಿದ ಆ ಕಾಡಿನ ಜಾಡಿನಲ್ಲಿ ಹೆಜ್ಜೆ ಹಾಕುತ್ತಾ ಸಾಗಿದಂತೆಲ್ಲ ಕತೆ ಮರೆಯುತ್ತದೆ; ಕಾಡು ನಮ್ಮನ್ನಾವರಿಸುತ್ತದೆ; ಮನಸ್ಸು ಚಿಟ್ಟೆಯಾಗುತ್ತದೆ. ಹಿಂದೆ ದ್ವೀಪ ಚಿತ್ರ ನೋಡುತ್ತಿದ್ದಷ್ಟು ಹೊತ್ತು ಹೊರಗೆ ಮಳೆ ಸುರಿಯುತ್ತಿದೆಯೇನೋ ಎಂಬ ಭ್ರಮೆಗೆ ನಾನು ಈಡಾಗಿದ್ದೆ.. ಇಂದು ಜೋಗಿಯ ಕಾದಂಬರಿ ಓದುತ್ತಿದ್ದಷ್ಟು ಹೊತ್ತೂ; ಓದಿ ಮುಗಿಸಿದ ಮೇಲೂ ಕಾಡಿನ ನೀರವತೆಗೆ ಸವಾಲೊಡ್ಡುವ ಜೀರುಂಡೆಯ ಗಾನ ಕಿವಿಯಲ್ಲಿ ಮೊರೆದಂತಾಗುತ್ತಿತ್ತು.

 ಕಾಡಿನ ಕತೆಗಳು ಅಂದಾಗ ಥಟ್ಟನೆ ನೆನಪಾಗುವವರು ತೇಜಸ್ವಿಯವರು. ಕಾಡಿನ ಕಥೆಗಳನ್ನು ಬರೆಯುವವರಿಗೆ ತೇಜಸ್ವಿಯ ಪ್ರಭಾವದಿಂದ ಹೊರಬಂದು ತಮ್ಮದೇ ಶೈಲಿಯಲ್ಲಿ ಕತೆ ಕಟ್ಟುವುದು ನಿಜಕ್ಕೂ ಸವಾಲೇ ಸೈ. ಅದನ್ನು ಮೀರಿಯೂ ಮೀರದಂತೆ ತಮ್ಮದೇ ಜಾಡಿನಲ್ಲಿ ಹೆಜ್ಜೆ ಹಾಕುವುದು ತುಂಬಾ ಕಷ್ಟ ಅನ್ನುವುದನ್ನು ಜೋಗಿ ಮೊದಲಲ್ಲೇ ಒಪ್ಪಿಕೊಂಡಿದ್ದಾರೆ. ಕಾಲಕಾಲಕ್ಕೆ ಬದಲಾಗುತ್ತಾ ಬರುತ್ತಿರುವ ಕಾಡಿನ ಕತೆ ಹೇಳುತ್ತಾ ಕತೆಯ ನಡುವೆಯೇ ಕಾಡಿನಲ್ಲಿ ಗೊತ್ತು ಗುರಿ ಇಲ್ಲದಂತೆ ಅಲೆಯುವ ಅನುಭವ ಕಟ್ಟಿಕೊಡುವ ಚಿಟ್ಟೆ ಹೆಜ್ಜೆಯ ಜಾಡಿನಲ್ಲಿ ಕಾಡಿನ ನಡುವೆ ಈಗ ಬೀಸುತ್ತಿರುವ ಬದಲಾವಣೆಯ ವಿಷಗಾಳಿಯ ಅನುಭವವೂ ಆಗುತ್ತದೆ. ಕತೆಯ ಹಿಂದಿರುವ ಕಳಕಳಿ ನಮ್ಮನ್ನು ತಟ್ಟುತ್ತದೆ.

 ಕಾಡಿನಲ್ಲಿ ನಿಗೂಢವಾಗಿ ಕಣ್ಮರೆಯಾದ ಮೂವರನ್ನು ಹುಡುಕಿಕೊಂಡು ಬೆಂಗಳೂರಿನ ಗೆಳಯರಿಬ್ಬರು ಕಾಡಿನಲ್ಲಿ ನಡೆಸುವ ಹುಡುಕಾಟದ ಸುತ್ತಲೂ ಸುತ್ತುವ, ಅನೇಕ ಪಾತ್ರಗಳು ಸುಳಿದಾಡುವ ಈ ಕತೆಯಲ್ಲಿ ಕಾಡೇ ಪ್ರಮುಖ ಪಾತ್ರಧಾರಿ. ಕಾಡಿನ ಸಮಸ್ತ ವ್ಯಾಪಾರಗಳೂ ಒಂದರೊಳಗೊಂದು ಹೇಗೆ ತಳುಕು ಹಾಕಿಕೊಂಡಿವೆ ಎನ್ನುವದನ್ನು ಮನದಟ್ಟು ಮಾಡಿಸಲು ಅನೇಕ ಉಪಕತೆಗಳನ್ನು ಸೃಜಿಸುತ್ತಾ ಹೋಗುವ ಜೋಗಿ ಇಲ್ಲೂ ಕೂಡಾ ಕತೆಯೊಳಗೊಂದು ಕತೆ ಕಟ್ಟುವ ತಮ್ಮ ಕುಶಲತೆಯನ್ನು ಮೆರೆಯುತ್ತಾರೆ. ಜೊತೆಗೆ ಯಾಮಿನಿಯಲ್ಲಿ ಮಾಡಿದಂತೆ ಪ್ರತೀ ಅಧ್ಯಾಯಕ್ಕೂ ಮುದ್ದಾದ ಸಾಲುಗಳನ್ನು ಶೀರ್ಷಿಕೆಯಾಗಿ ಕೊಟ್ಟು ಓದುವ ಖುಶಿ ಇನ್ನಷ್ಟು ಹೆಚ್ಚಿಸುತ್ತಾರೆ.

 ಗಾರ್ಡ್ ಕೃಷ್ಣಪ್ಪ ತನ್ನ ರಾಜಕಿಯ ಬೆಂಬಲದಿಂದ ಲಾರ್ಡ್ ಅಂತ ಕರೆಸಿಕೊಂಡು ಕಾಡಿನ ಮೇಲೆ ಎಸಗುವ ದೌರ್ಜನ್ಯ, ಪುಂಡಿ ಗಸಿ ಹೋಟೆಲಿನ ಮಮ್ಮದೆ, ಘಟ್ಟದ ತಪ್ಪಲಲ್ಲಿ ಮಿನಿ ಕೊಟ್ಟಾಯಂ ನಿರ್ಮಿಸಿರುವ ಮಲೆಯಾಳಿಗಳು, ಸಾಂತುವಿನ ಮುಗ್ಧತೆ-ಅವನ ಪ್ರೇಮ ಪ್ರಕರಣ, ಕತೆಗಾರನ ಜೊತೆಗಾರ ಶಿವು, ಮಲೆಯಾಳಿ ಜೀಪ್ ಡ್ರೈವರ್ ಜೊಸೆಫ್, ಮಲೆ ಕುಡಿಯರು ಇವರೆಲ್ಲರ ಜೊತೆಯಲ್ಲೇ ಅನುಮಾನಾಸ್ಪದ ವ್ಯಕ್ತಿ ಭೋಜರಾಜ ಹೀಗೆ ಕಾಡಿನ ಲೋಕದೊಳಗೆ ಒಂದೊಂದು ಹಳ್ಳ ತೋಡುಗಳೂ ಸೇರಿ ಹೊಳೆಯಾಗುವಂತೆ, ಪಾತ್ರಗಳ ಕಾಡಿನ ಕತೆ ಬಿಚ್ಚಿಕೊಳ್ಳುತ್ತಾ, ಬಿಚ್ಚಿಕೊಂಡಷ್ಟೂ ಮತ್ತಷು  ಗೌಪ್ಯವಾಗುತ್ತಾ ಸಾಗುತ್ತದೆ. ಕಾಡಿನ ಕತ್ತಲಲ್ಲಿ ಮೂಡಿ ಮರೆಯಾಗುವ ಬೆಳಕಿನ ರೇಖೆ, ಮನುಷ್ಯರನ್ನೇ ಕಬಳಿಸುವ ಕಂಬಳಿ ಹುಳುಗಳು ಹೀಗೆ ಕಾಡಿನ ಅನೂಹ್ಯ ಲೋಕದ ಬಗ್ಗೆ ಮೂಡುವ ಬೆರಗಿನಲ್ಲಿ ಮೈ ಮರೆಯುವಷ್ಟರಲ್ಲಿ ಕಾಡಿನೊಳಗಿನ ಕ್ಷುದ್ರ ವ್ಯಾಪಾರಗಳ ಒಳಸುಳಿಗಳನ್ನು ಬಿಚ್ಚಿಡುವ ತನ್ವಿ ಭಟ್ ಕಥನದ ಮೂಲಕ ಕಾಡಿನ ಮತ್ತೊಂದು ಮಗ್ಗುಲಿಗೆ ಕತೆ ಹೊರಳುತ್ತದೆ. ಕಾಡಿನ ಜೀವ ವ್ಯಾಪಾರದ ಗೌಪ್ಯತೆಯನ್ನೂ ಮೀರಿ ಅಭಿವೃದ್ಧಿಯ ಹೆಸರಲ್ಲಿ ಕಾಡಿನೊಳಗಿನ ಅಗೋಚರ ವ್ಯಾಪಾರದ ಲೋಕ ಅನಾವರಣಗೊಳ್ಳುತ್ತದೆ. ಹುಡುಕಿಕೊಂಡು ಬಂದವರು ಏನಾದರು, ತನ್ವಿ ಭಟ್ ಕತೆ ಏನಾಯ್ತು ಅನ್ನುವ ಕಥನ ಕುತೂಹಲವನ್ನೂ ಮೀರಿ ಕಾಡು ನಮ್ಮನಾವರಿಸಿಕೊಳ್ಳುತ್ತದೆ, ಬದಲಾಗುತ್ತಿರುವ ಕಾಡಿನ ಅಂತರಂಗ ಬೆತ್ತಲಾದಷ್ಟೂ ಕಾಡು ಮತ್ತಿನ್ನೇನನ್ನೋ ಮುಚ್ಚಿಟ್ಟುಕೊಂಡು ಕತ್ತಲೆಯ ಸೆರಗು ಹೊದ್ದು ತಣ್ಣಗೆ ಮಲಗುತ್ತದೆ… ಒಮ್ಮೆ ಮಾತೆಯ ಮಮತೆಯ ಮಡಿಲಂತೆ ಆಪ್ತವಾಗುತ್ತಾ ಮಗದೊಮ್ಮೆ ಮುನಿದು ಮುಸುಕೆಳುದು ಮಲಗಿದ ಮಾನಿನಿಯ ಮನೋವ್ಯಾಪಾರದಂತೆ ಗುಪ್ತವಾಗುತ್ತಾ…

ಕಾಡಿನ ಕತೆಗಳ ಸರಣಿಯಲ್ಲಿ ಇದು ಕೊನೆಯದು ಅಂತ ಜೋಗಿ ಹೇಳಿಕೊಂಡಿದ್ದಾರೆ. ಆದರೆ ಹಾಗಾಗದಿರಲಿ ಅಂತ ಪುಸ್ತಕ ಓದಿದ ಮೇಲೆ ನಿಮಗನ್ನಿಸದಿದ್ದರೆ ಹೇಳಿ.

ಪುಸ್ತಕ                             – ಚಿಟ್ಟೆ ಹೆಜ್ಜೆ ಜಾಡು

ಲೇಖಕರು                         – ಜೋಗಿ

ಪ್ರಕಾಶಕರು                       – ಅಂಕಿತ ಪುಸ್ತಕ ಗಾಂಧಿಬಜಾರ್

ಪುಟಗಳು                          – 120

ಬೆಲೆ                               – 80 ರೂ.

ಉತ್ತರಕನ್ನಡ ಜಿಲ್ಲೆಗೂ ಸಣ್ಣಕತೆಗಳಿಗೂ ಅದೆಂತಹ ಅನ್ಯೋನ್ಯವೋ ಗೊತ್ತಿಲ್ಲ. ಆ ಜಿಲ್ಲೆಯ ಸೌಂದರ್ಯ, ಕಡಲು, ಘಟ್ಟ, ಮಲೆನಾಡಿನ ಮಾಧುರ್ಯವನ್ನೆಲ್ಲಾ ಹೀರಿಕೊಂಡುಬಿಟ್ಟವರಂತೆ ಇಲ್ಲಿನ ಕತೆಗಾರರು ಕತೆಗಳ ಅದ್ಭುತಲೋಕವನ್ನೇ ಕಟ್ಟಿಕೊಟ್ಟಿದ್ದಾರೆ; ಕೊಡುತ್ತಲೇ ಇದ್ದಾರೆ. ಆ ನೆಲದ ಮಣ್ಣಿನ ಸಾರದಲ್ಲಿ ಹುಲುಸಾಗಿ ಬೆಳೆದು ತೆನೆಗಟ್ಟುವ ಕತೆಗಳಿಂದಾಗಿ, ಅಲ್ಲಿನ ಪರಿಸರದಲ್ಲಿ ಮೊಗೆದಷ್ಟೂ ಬರಿದಾಗದ ಕತೆಗಳ ಕಣಜವೇ ಇರಬೇಕು. ಈ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲವೆಂದು ನಿಮಗೆ ಮನವರಿಕೆಯಾಗಬೇಕಿದ್ದರೆ ಯಶವಂತ ಚಿತ್ತಾಲರ – ಕುಮಟೆಗೆ ಬಂದಾ ಕಿಂದರ ಜೋಗಿ, ಪುಟ್ಟನ ಹೆಜ್ಜೆ ಕಾಣೋದಿಲ್ಲ, ಜಯಂತ ಕಾಯ್ಕಿಣಿ ಬರೆದ – ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ಬಣ್ಣದ ಕಾಲು, ತೂಫಾನ್ ಮೇಲ್, ವಿವೇಕ್ ಶಾನುಬಾಗ್‌ರವರ – ಮತ್ತೊಬ್ಬನ ಸಂಸಾರ, ಹುಲಿಸವಾರಿ, ಲಂಗರು, ಅಶೋಕ ಹೆಗಡೆಯವರ – ಒಂದು ತಗಡಿನ ಚೂರು, ಒಳ್ಳೆಯವನು, ವಾಸನೆ ಬಣ್ಣ ಶಬ್ದ ಇತ್ಯಾದಿ, ಭಾಗೀರಥಿ ಹೆಗಡೆ ಬರೆದ ಗಿಳಿಪದ್ಮ, ಚಿಂತಾಮಣಿ ಕೊಡ್ಲೆಕೆರೆಯವರ – ಬಬ್ರುವಾಹನ ಎಂಬ ಇರುವೆ, ಮಹಾಬಲಮೂರ್ತಿ ಕೊಡ್ಲೆಕೆರೆ ಬರೆದ – ಯಕ್ಷಸೃಷ್ಟಿ, ಇತಿಹಾಸದ ನಂತರ, ಉಲ್ಲಾಸ ಹೆಗಡೆಯವರ – ಹಲವಾರು ಕಲರವಗಳ ಊರಗಾಥೆ… ಅಬ್ಬಾ… ಹೀಗೆ ತುದಿಮೊದಲಿಲ್ಲದಷ್ಟು ಉದ್ದಕ್ಕೆ ಬೆಳೆಯುವ ಈ ಪಟ್ಟಿಯಲ್ಲಿನ ಕತೆಗಾರರ ಕಥಾಸಂಕಲನಗಳನ್ನು ಒಮ್ಮೆ ಓದಿ ನೋಡಿ. ಆ ಕತೆಗಳು ಸೃಷ್ಟಿಸುವ ಮಾಯಲೋಕದಲ್ಲಿ ಎಲ್ಲೋ ಕಳೆದುಹೋಗಿಬಿಡುತ್ತೀರಿ. ಈ ಸಾಲಿಗೆ ಇತ್ತೀಚೆಗೆ ಸೇರ್ಪಡೆಯಾದ ಸುನಂದಾ ಪ್ರಕಾಶ್ ಕಡಮೆ ತಮ್ಮ ಪುಟ್ಟ ಪಾದದ ಗುರುತು ಕಥಾಸಂಕಲದ ಮೂಲಕ ಬಹುದೊಡ್ಡ ಹೆಜ್ಜೆಯನ್ನೇ ಇಟ್ಟಿದ್ದರು. ಇದೀಗ ಅವರ ಎರಡನೇ ಕಥಾಸಂಕಲನ ಗಾಂಧಿ ಚಿತ್ರದ ನೋಟು ಹೊರಬಂದಿದ್ದು, ಸೊಗಸಾಗಿ ಕತೆ ಹೇಳುವ ತಮ್ಮ ಬರಹದ ಸೊಗಸನ್ನು ಇಲ್ಲಿಯೂ ಜಾರಿಯಲ್ಲಿಟ್ಟಿದ್ದಾರೆ.

 

ದಿನನಿತ್ಯದ ಬದುಕಿನೊಳಗೆ ಇಣುಕಿ ನೋಡುತ್ತ, ಅಲ್ಲಿನ ಘಟನೆಗಳಲ್ಲಿ ಸ್ವಾರಸ್ಯ ಹುಡುಕಿ ಅವುಗಳ ಸುತ್ತ ಕತೆ ಹೆಣೆಯುವ ಸುನಂದಾರವರ ಕತೆಗಳಲ್ಲಿ ಸರಳತೆಯಿದೆ. ಸಿಕ್ಕಾಪಟ್ಟೆ ಪ್ರತಿಮೆ, ರೂಪಕಗಳ ಭಾರಕ್ಕೆ ನಲುಗದೆ ಹೇಳಬೇಕಾದ್ದನ್ನು ಜಿಡುಕಾಗದಂತೆ ಹೇಳುವ ಅವರ ಕತೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಈ ಕಾರಣಕ್ಕೇ ಹೆಚ್ಚು ಜನಕ್ಕೆ ಇಷ್ಟವಾಗುತ್ತವೆ. ನಮ್ಮ ಸುತ್ತಮುತ್ತಲಿಂದೆದ್ದು ಬರುವ ಕತೆಗಳು ನಮ್ಮದೇ ಅನ್ನಿಸುತ್ತವೆ ಆಪ್ತವಾಗುತ್ತವೆ.  ಪತ್ರೊಡೆ, ಗಾಂಧಿ ಚಿತ್ರದ ನೋಟು, ನಿನ್ನದೊಂದು ನೋಟ ಬೇಕು… ಮುಂತಾದ ಸೊಗಸಾದ ಕತೆಗಳನ್ನು ಒಳಗೊಂಡಿರುವ ಈ ಸಂಕಲನದಲ್ಲಿ ಕೋಲು ಸಂಪಿಗೆ ಮರ, ಚೌಕ ಮತ್ತು ಗೋಲ, ಅಪ್ಪಿ, ತಂಕಿ ಮೊದಲಾದ ತಮ್ಮ ಎಂದಿನ ಶೈಲಿಗಿಂತ ವಿಭಿನ್ನವಾಗಿ ಬರೆದ ಕತೆಗಳೂ ಇವೆ. ಕತೆಗಳ ವಿಮರ್ಶೆಯನ್ನು ಮಾಡಲು ನಂಗೆ ಬರೋಲ್ಲ. ಆದರೂ ಇಷ್ಟು ಮಾತ್ರ ಹೇಳಬಲ್ಲೆ.. ಮತ್ತೆ ಮತ್ತೆ ಓದಿ ಚಪ್ಪರಿಸಬಹುದಾದಂತಹ ಕೆಲವು ಸೊಗಸಾದ ಕತೆಗಳನ್ನು ಒಳಗೊಂಡ ಈ ಸಂಕಲನ ನಿಮ್ಮ ಸಂಗ್ರಹದಲ್ಲಿ ತಪ್ಪದೇ ಇರಬೇಕಾದಂತದ್ದು. ಪುಸ್ತಕದ ಬೆಲೆ ಸ್ವಲ್ಪ ಜಾಸ್ತಿನೇ ಅನ್ನಿಸಿದ್ರೂ ಕತೆಗಳು ಕೊಡೋ ಕುಶಿಯ ಮುಂದೆ ಅದ್ಯಾವ ಮಹಾ ಬಿಡಿ.

 

ಪುಸ್ತಕ      : ಗಾಂಧಿ ಚಿತ್ರದ ನೋಟು

ಲೇಖಕಿ     : ಸುನಂದಾ ಪ್ರಕಾಶ ಕಡಮೆ

ಪ್ರಕಾಶನ    : ಅಕ್ಷರ ಪ್ರಕಾಶನ , ಹೆಗ್ಗೋಡು

ಪುಟಗಳು    : ೯೬

ಬೆಲೆ        : ಎಪ್ಪತ್ತು ರೂಪಾಯಿಗಳು