Posts Tagged ‘ಪ್ರೋಗ್ರಾಮ್’

ಈ ಪ್ರಶ್ನೆಯನ್ನು ಇಲ್ಲಿಯವರೆಗೆ ಕಡಿಮೆಯೆಂದರೂ ನೂರು ಜನರಾದರೂ ನನ್ನ ಬಳಿ ಕೇಳಿದ್ದಾರೆ. ಅದೆಂತದೋ ಪ್ರಾಜೆಕ್ಟ್ ಅಂತಾರಲ್ಲ, ಕೋಡ್ ಬರೆಯೋದು ಹಾಗಂದ್ರೇನು, ಪ್ರೋಗ್ರಾಮ್ ಅಂದ್ರೆ ಏನು… ಹೀಗೆ ಸಾಫ್ಟ್‌ವೇರ್ ಜಗತ್ತಿನ ಬಗ್ಗೆ ಕುತೂಹಲದಿಂದ ಪ್ರಶ್ನೆ ಕೇಳಿದವರು ಅನೇಕ ಮಂದಿ ಇದ್ದಾರೆ. ಅಸಲಿಗೆ ಹಗಲು-ರಾತ್ರಿ ಕೆಲಸ ಕೆಲಸ ಅಂತ ಸಾಫ್ಟ್‌ವೇರ್ ಮಂದಿ ಮಾಡುವ ಕೆಲಸ ಯಾವ ಸ್ವರೂಪದ್ದು ಅನ್ನುವ ಕುರಿತಾದ ಬಹುತೇಕರ ಪ್ರಶ್ನೆಗೆ ಸರಳವಾಗಿ ವಿವರಿಸಲು ಯಾಕೆ ಪ್ರಯತ್ನಿಸಬಾರದೆಂದು ಇದನ್ನು ಬರೆಯಲು ಹೊರಟಿದ್ದೇನೆ. ಆದಷ್ಟು ಕಡಿಮೆ ತಾಂತ್ರಿಕ ಪದಗಳನ್ನು ಬಳಸಲು ಯತ್ನಿಸಿದ್ದೇನೆ.

ಇದನ್ನು ಬರೀ ವಾಕ್ಯಗಳಲ್ಲಿ ವಿವರಿಸುವುದಕ್ಕಿಂತ, ಒಂದು ಸರಳ ಉದಾಹರಣೆಯೊಂದಿಗೆ ನೋಡಿದರೆ ಅರ್ಥೈಸಿಕೊಳ್ಳಲು ಸುಲಭ. ಒಂದು ಇನ್ಶೂರೆನ್ಸ್ ಕಂಪೆನಿಯ ಉದಾಹರಣೆ ಗಮನಿಸೋಣ. ಇಲ್ಲಿಯ ತನಕ ಅವರ ವಿವಿಧ ಯೋಜನೆಗಳು, ಅದರ ಪ್ರೀಮಿಯಂ ನಿರ್ಧಾರ… ಮೊದಲಾದ ಕಾರ್ಯಗಳೆಲ್ಲಾ ಲೆಡ್ಜರ್‌ಗಳಲ್ಲಿ ಮಾಹಿತಿ ಸಂಗ್ರಹಿಸುವುದರ ಮೂಲಕ ಹಾಗೂ ಪೆನ್ನು, ಪೇಪರ್, ಕ್ಯಾಲ್ಕುಲೇಟರ್ ಬಳಸಿ ಲೆಕ್ಕ ಹಾಕುವುದರ ಮೂಲಕ ನಿರ್ವಹಿಸುತ್ತಿದ್ದರು. ಈಗ ತನ್ನ ವ್ಯವಹಾರಗಳನ್ನೆಲ್ಲ ಸುಗಮವಾಗಿ ನಿರ್ವಹಿಸಲು ಒಂದು ಕಂಪ್ಯೂಟರ್ ಸಾಫ್ಟ್‌ವೇರ್ ಬೇಕೆಂದು ನಿರ್ಧರಿಸಿತು ಅಂತಿಟ್ಟುಕೊಳ್ಳೋಣ. ಅದಕ್ಕಾಗಿ ಅನೇಕ ಸಾಫ್ಟ್‌ವೇರ್‌ ಕಂಪೆನಿಗಳನ್ನು ಸಂಪರ್ಕಿಸಿ, ಯಾರು ಅತೀ ಕಡಿಮೆ ಅವಧಿಯಲ್ಲಿ, ಅತೀ ಕಡಿಮೆ ಖರ್ಚಿನಲ್ಲಿ ಅಂತಹ ಸಾಫ್ಟ್‌ವೇರ್ ನಿರ್ಮಿಸಿಕೊಡಲು ಒಪ್ಪುತ್ತಾರೋ ಅವರಿಗೆ ಈ ಕೆಲಸ ವಹಿಸಿಕೊಡಲಾಗುತ್ತದೆ.    (ಕೆಲವೊಮ್ಮೆ ನಿರ್ಮಾಣ ವೆಚ್ಚ ಹೆಚ್ಚಾಗಿದ್ದರೂ ಕೂಡಾ ಕಂಪೆನಿಯ ‘ಬ್ರ್ಯಾಂಡ್ ನೇಮ್’ ನೋಡಿ ನಿರ್ಧಾರವಾಗುವುದೂ ಇದೆ). ಹೀಗೆ ಕಸ್ಟಮರ್ ಒಬ್ಬರಿಂದ ಸಾಫ್ಟ್‌ವೇರ್ ಕಂಪೆನಿ ಪಡೆಯುವ ಈ ಕೆಲಸದ ಆರ್ಡರೇ ‘ಪ್ರಾಜೆಕ್ಟ್’. ಈ ಪ್ರಾಜೆಕ್ಟ್ ಮುಗಿಸಿಕೊಡುವ ಕೊನೆಯ ದಿನಾಂಕದ ಕುರಿತು ಮೊದಲೇ ಕರಾರು ನಡೆದಿರುತ್ತದೆ. ಹಾಗಾಗಿಯೇ ಸಾಫ್ಟ್‌ವೇರ್ ಮಂದಿ ಸದಾ ಈ ‘ಡೆಡ್‌ಲೈನ್‌’ನ ಬಿಸಿಗೆ ‘ಕುಂಡೆಸುಟ್ಟ ಬೆಕ್ಕಿನಂತೆ ಆಡುವುದು.

ಈಗ ಪ್ರಾಜೆಕ್ಟ್ ಏನೋ ಬಂತು. ಅದನ್ನು ಯಶಸ್ವಿಯಾಗಿ ಪೂರೈಸುವುದು ಹೇಗೆ? ಮೊಟ್ಟ ಮೊದಲನೆಯದಾಗಿ ಇನ್ಶೂರೆನ್ಸ್ ಕಂಪೆನಿಯು ತನ್ನ ಸಾಫ್ಟ್‌ವೇರ್‌ನಲ್ಲಿ ಯಾವ ಯಾವ ಅಂಶಗಳು ಇರಲು ಬಯಸುತ್ತದೆ ಅನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಬೇಕಲ್ಲ. ಹಾಗಾಗಿ ಅವರ ಬೇಡಿಕೆ ಯಾ ಅಗತ್ಯಗಳ (ರಿಕ್ವಾಯರ್‌ಮೆಂಟ್) ಕುರಿತು ಮಾಹಿತಿ ಸಂಗ್ರಹಿಸುವುದು ಪ್ರಾಜೆಕ್ಟ್‌ನ ಮೊದಲ ಹಂತ. ಈ ಪ್ರಕ್ರಿಯೆಯಲ್ಲಿಯೇ ಪರಿಣಿತರಾಗಿರುವ ‘ರಿಕ್ವಾಯರ್‌ಮೆಂಟ್ ಅನಲಿಸ್ಟ್’ ಅಥವಾ ‘ಬ್ಯುಸಿನೆಸ್ ಅನಲಿಸ್ಟ್’ಗಳು ಈ ಕಾರ್ಯಕ್ಕೆ ನಿಯೋಜಿಸಲ್ಪಡುತ್ತಾರೆ. ಇನ್ಶೂರೆನ್ಸ್ ಕಂಪೆನಿಯ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿ, ಅವರು ನೀಡುವ ಮಾಹಿತಿಗಳನ್ನು, ಅವರ ಬೇಡಿಕೆಗಳನ್ನೆಲ್ಲಾ ವ್ಯವಸ್ಥಿತವಾಗಿ ದಾಖಲಿಸಲಾಗುತ್ತದೆ. ಒಂದು ಪ್ರಾಜೆಕ್ಟ್‌ನ ಯಶಸ್ಸಿನಲ್ಲಿ ಈ ಹಂತ ತುಂಬಾ ಪ್ರಮುಖವಾಗಿದ್ದು, ಇಲ್ಲೇನಾದರೂ ತಪ್ಪು ನುಸುಳಿಕೊಂಡರೆ ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದಂತಾಗುತ್ತದೆ. ಹಾಗಾಗಿ ಇಡೀ ಪ್ರಾಜೆಕ್ಟ್‌ನ ಒಟ್ಟು ಅವಧಿಯಲ್ಲಿ ಕಾಲು ಭಾಗ ಈ ಪ್ರಕ್ರಿಯೆಗೇ ಮೀಸಲಾಗಿರುತ್ತದೆ.

ಕೆಲವೊಮ್ಮೆ ಈ ಪ್ರಕ್ರಿಯೆಗೆ ಪೂರಕವಾಗಿ ಅಂತಿಮ ಹಂತದಲ್ಲಿ ಆ ತಂತ್ರಾಂಶವು ಹೇಗೆ ಕಾಣಿಸುತ್ತದೆ ಅನ್ನೋದನ್ನು ತೋರಿಸಲು ‘ಪ್ರೊಟೋಟೈಪ್’ ಒಂದನ್ನು ಸಿದ್ಧಪಡಿಸಿ ಕಸ್ಟಮರ್‌ಗೆ ತೋರಿಸಲಾಗುತ್ತದೆ. ಇದಕ್ಕೊಂದು ಸಾದೃಶ್ಯ ಕೊಡುವುದಾದರೆ, ಮನೆ ಕಟ್ಟುವ ಮುನ್ನ ಅದು ಹೇಗೆ ಕಾಣಿಸಬಹುದೆಂದು ಅದರ ಪುಟ್ಟ ಪ್ರತಿಕೃತಿ ಅಥವಾ ಡ್ರಾಯಿಂಗ್ ಅನ್ನು ಇಂಜಿನಿಯರ್ ತೋರಿಸ್ತಾರಲ್ಲ ಹಾಗೆ.

ಹೀಗೆ ಮಾಹಿತಿ/ಬೇಡಿಕೆ/ಅಗತ್ಯಗಳನ್ನೆಲ್ಲಾ ಕಲೆಹಾಕಿ ದಾಖಲಿಸಿಟ್ಟ ಬಳಿಕ ಅನಾಲಿಸಿಸ್ ಮತ್ತು ಡಿಸೈನ್ ಶುರುವಾಗುತ್ತೆ. ಮೊದಲ ಈ ಕ್ರಿಯೆಯಲ್ಲಿ ವಿಶೇಷ ಪರಿಣತಿಯುಳ್ಳ ತಂಡವೊಂದು ಈ ಕೆಲಸಕ್ಕಾಗಿ ನಿಯೋಜಿಸಲ್ಪಡುತ್ತದೆ. ಸಿದ್ಧಪಡಿಸಬೇಕಾದ ಸಾಫ್ಟ್‌ವೇರ್‌ನಲ್ಲಿರಬೇಕಾದ ಅಂಶಗಳು, ಲಕ್ಷಣಗಳಿಗೆ ಅನುಗುಣವಾಗಿ ಅದನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿ, ಪ್ರತೀ ವಿಭಾಗವೂ ಮಾಡುವ ಕೆಲಸ, ಅದನ್ನು ರಚಿಸುವುದು ಹೇಗೆ ಅನ್ನುವುದನ್ನು ಈ ಹಂತದಲ್ಲಿ ನಿರ್ಧರಿಸಲಾಗುತ್ತದೆ. ಇನ್ಶೂರೆನ್ಸ್ ಕಂಪೆನಿಯ ಉದಾಹರಣೆಯನ್ನು ಗಮನಿಸುವುದಾದರೆ ಅದರಲ್ಲಿ ಗ್ರಾಹಕರನ್ನು ಸೇರಿಸಲು/ತೆಗೆದು ಹಾಕಲು ಒಂದು ವಿಭಾಗ, ಪ್ರಿಮಿಯಂ ಲೆಕ್ಕ ಹಾಕಲು ಒಂದು ವಿಭಾಗ, ಕಟ್ಟಿದ ಪ್ರಿಮಿಯಂಗಳ ದಾಖಲಾತಿಗೆ ಒಂದು… ಹೀಗೆ ಅನೇಕ ವಿಭಾಗಗಳನ್ನಾಗಿ ವಿಂಗಡಿಸಿ, ಪ್ರತೀ ವಿಭಾಗವು ಮಾಡುವ ಕೆಲಸ, ಆ ವಿಭಾಗವನ್ನು ಹೇಗೆ ರಚಿಸಬೇಕು ಅನ್ನುವುದನ್ನು ನಿರ್ಧರಿಸಲಾಗುತ್ತದೆ. ಈ ಕಾರ್ಯದಲ್ಲಿ ಇದಕ್ಕೆಂದೇ ರಚಿತವಾದ ಅನೇಕ ವಿಶೇಷ ತಂತ್ರಾಶ(ಸಾಫ್ಟ್‌ವೇರ್)ಗಳನ್ನು ಬಳಸಲಾಗುತ್ತದೆ. ಡೆಸೈನ್ ಪ್ರಕ್ರಿಯೆಯನ್ನು ಸ್ಥೂಲವಾಗಿ ಕಟ್ಟಡದ ನೀಲನಕ್ಷೆ ಹಾಗು ಅದಕ್ಕೆ ಸಂಬಂಧಿಸಿದ ಡ್ರಾಯಿಂಗ್‌ಗಳಿಗೆ ಹೋಲಿಸಬಹುದು. ಈ ಹಂತಕ್ಕೂ ಕೂಡಾ ಹೆಚ್ಚು ಕಡಿಮೆ ಕಾಲು ಭಾಗದಷ್ಟು ಸಮಯ ಮೀಸಲಾಗಿರುತ್ತದೆ.

ಡಿಸೈನ್ ಹಂತ ಮುಗಿಯುವಷ್ಟರಲ್ಲಿ (ಕೆಲವೊಮ್ಮೆ ಮೊದಲೇ) ಈ ಸಾಫ್ಟ್‌ವೇರ್ ನಿರ್ಮಾಣದಲ್ಲಿ ಬಳಸಬೇಕಾದ ತಂತ್ರಜ್ಞಾನ, ತಂತ್ರಾಂಶಗಳನ್ನು ನಿರ್ಧರಿಸಲಾಗುತ್ತದೆ. ಇದರಲ್ಲಿ ಸ್ಥೂಲವಾಗಿ ಎರಡು ವಿಭಾಗಗಳಿರುತ್ತವೆ. ಮಾಹಿತಿ ಸಂಗ್ರಹಣೆಗೆ ಬಳಸುವ ಡೇಟಾಬೇಸ್ ಮತ್ತು ಕಾರ್ಯನಿರ್ವಹಿಸಲು ಕಂಪ್ಯೂಟರ್‌ಗೆ ಆದೇಶ ನೀಡಲು ಬಳಸುವ ಭಾಷೆ. (ವಾಸ್ತವವಾಗಿ ಇದು ಇಲ್ಲಿ ಹೇಳಿದಷ್ಟು ನೇರ ಮತ್ತು ಸರಳವಾಗಿಲ್ಲ. ಸುಮ್ಮನೆ ಸ್ಥೂಲವಾಗಿ ವಿವರಿಸಿದ್ದೇನೆ ಅಷ್ಟೆ)

ಈ ಭಾಷೆಯನ್ನು ‘ಪ್ರೊಗ್ರಾಮಿಂಗ್ ಲಾಂಗ್ವೇಜ್’ ಎಂದೂ, ಇದನ್ನು ಬಳಸಿ ಬರೆಯುವ ಸಂಕೇತ/ಆದೇಶಗಳ ಸಮೂಹವನ್ನು ‘ಪ್ರೋಗ್ರಾಮ್’ / ಕೋಡ್’ ಎಂದೂ ಕರೆಯಲಾಗುತ್ತದೆ.

ಈ ಕೆಲಸವನ್ನು ನಿರ್ವಹಿಸಲು ಪ್ರೋಗ್ರಾಮಿಂಗ್ ಭಾಷೆಯಲ್ಲಿ ಪರಿಣತಿಯನ್ನು ಪಡೆದ ತಂಡವನ್ನು ಕಟ್ಟಲಾಗುತ್ತದೆ. ತಂಡದ ವಿವಿಧ ಸದಸ್ಯರಿಗೆ ಡಿಸೈನ್‌ನಲ್ಲಿ ಸೂಚಿಸಿದ ಪ್ರಕಾರ ವಿವಿಧ ವಿಭಾಗಗಳನ್ನು ನಿರ್ಮಿಸಲು ಕೊಡಲಾಗುತ್ತದೆ. ಈ ಪ್ರಕ್ರಿಯೆಗೆ ‘ಕೋಡಿಂಗ್’ ಅಂತ ಹೆಸರು. ತಮಗೆ ನಿಗದಿಪಡಿಸಿದ ಅವಧಿಯೊಳಗೆ, ಡಿಸೈನ್‌ಗೆ ಅನುಗುಣವಾಗಿ ಮಾಡ್ಯುಲ್‌(ಘಟಕ)ಗಳನ್ನು ಮುಗಿಸಬೇಕಾಗುತ್ತದೆ. ಪ್ರತಿಯೊಬ್ಬನೂ ತಾನು ನಿರ್ಮಿಸಿದ ಪ್ರೋಗ್ರಾಂ/ಘಟಕವನ್ನು ಬಿಡಿ ಬಿಡಿಯಾಗಿ ಟೆಸ್ಟ್ ಮಾಡುತ್ತಾನೆ. ಉದಾಹರಣೆಗೆ ಇನ್ಶೂರೆನ್ಸ್ ಕಂಪೆನಿಯ ಪ್ರಿಮಿಯಂ ಲೆಕ್ಕ ಹಾಕುವ ಮಾಡ್ಯೂಲನ್ನು ಗಮನಿಸಿದರೆ, ಅದು ಕೊಟ್ಟ ಮಾಹಿತಿಗಳನ್ನೆಲ್ಲಾ ಬಳಸಿ, ಸರಿಯಾದ ಪ್ರಿಮಿಯಂ ಲೆಕ್ಕ ಹಾಕಿ ಕೊಡಬೇಕು. ಅದನ್ನು ಇನ್ಶೂರೆನ್ಸ್ ಕಂಪೆನಿ ನೀಡಿದ ಮಾಹಿತಿಯೊಂದಿಗೆ ತಾಳೆ ಹಾಕಿ ತಪ್ಪಿದ್ದಲ್ಲಿ ಅದನ್ನು ಹುಡುಕಿ ಸರಿಪಡಿಸಬೇಕು.

ಹೀಗೆ ಬಿಡಿಬಿಡಿಯಾಗಿ ರಚಿತವಾದ ಮಾಡ್ಯೂಲ್‌ಗಳನ್ನೆಲ್ಲಾ ಒಟ್ಟಾಗಿಸಿ ಒಂದೇ ಸಾಫ್ಟ್‌ವೇರ್ ಘಟಕವನ್ನಾಗಿಸಲಾಗುತ್ತದೆ. ಇದಕ್ಕೆ ಇಂಟಿಗ್ರೇಶನ್ ಅನ್ನುತ್ತಾರೆ. ಹೀಗೆ ತಯಾರಾದ ಸಾಫ್ಟ್‌ವೇರ್ ಇನ್ನೆರಡು ಹಂತದ ಟೆಸ್ಟಿಂಗ್‌ಗೆ ಒಳಗಾಗುತ್ತದೆ. ಅದೆಂದರೆ ‘ಇಂಟಿಗ್ರೇಶನ್ ಟೆಸ್ಟಿಂಗ್’ಹಾಗೂ ‘ಸಿಸ್ಟಮ್ ಟೆಸ್ಟಿಂಗ್’. ‘ಸಿಸ್ಟಮ್ ಟೆಸ್ಟಿಂಗ್’ ಹಂತದಲ್ಲಿ ಕಸ್ಟಮರ್ ಸಲ್ಲಿಸಿದ ಬೇಡಿಕೆಗನುಗುಣವಾಗಿ ತಂತ್ರಾಂಶವು ಕಾರ್ಯ ನಿರ್ವಹಿಸುತ್ತಿದೆಯೇ ಅನ್ನುವುದನ್ನು ಪರೀಕ್ಷಿಸಲಾಗುತ್ತದೆ. ಈ ಯಾವುದೇ ಹಂತದಲ್ಲಿ ದೋಷಗಳೇನಾದರೂ ಬಂದಲ್ಲಿ ಅದನ್ನು ಸರಿಪಡಿಸಿ ಮತ್ತೆ ಪರೀಕ್ಷೆಗೊಳಪಡಿಸಲಾಗುತ್ತದೆ.

ಇಷ್ಟೆಲ್ಲಾ ಮುಗಿದ ಬಳಿಕ ಸಾಫ್ಟ್‌ವೇರ್ ಬಳಕೆಗೆ ನೆರವಾಗುವ ಕೈಪಿಡಿಯೊಂದನ್ನು ಸಿದ್ಧಪಡಿಸಿ, ಅದನ್ನು ಕಸ್ಟಮರ್‌ಗೆ ರವಾನಿಸಲಾಗುತ್ತದೆ. ಈ ಪ್ರಕ್ರಿಯೆಗೆ ‘ಡೆಲಿವರಿ’ ಅನ್ನಲಾಗುತ್ತದೆ. ಹೀಗೆ ರಚಿತವಾದ ಸಾಫ್ಟ್‌ವೇರ್‌ನ ಕಾರ್ಯವಿಧಾನವನ್ನು ಇನ್ಶೂರೆನ್ಸ್ ಕಂಪೆನಿಯವರು ಪರೀಕ್ಷೆಗೆ ಒಳಪಡಿಸಿ ದೋಷವಿದ್ದರೆ, ಅಥವಾ ಬದಲಾವಣೆ ಬೇಕಿದ್ದರೆ ಅದನ್ನು ಸೂಚಿಸುತ್ತಾರೆ. ಅವರು ಸೂಚಿಸಿದ ಬದಲಾವಣೆಗಳನ್ನು, ಗುರುತಿಸಿದ ದೋಷಗಳಿಗೆ ಅನುಗುಣವಾಗಿ ಸೂಕ್ತವಾದ ಬದಲಾವಣೆ ಮಾಡಿ ಪುನಃ ಕಸ್ಟಮರ್ ಬಳಿ ಸಾಫ್ಟ್-ವೇರನ್ನು ಕಳಿಸಲಾಗುತ್ತದೆ. ಈ ಪ್ರಕ್ರಿಯೆಯು ಕಸ್ಟಮರ್‌ಗೆ ಅದರ ಕಾರ್ಯವಿಧಾನದ ಕುರಿತು ತೃಪ್ತಿಯಾಗುವವರೆಗೆ ಪುನರಾವರ್ತನೆಯಾಗುತ್ತಲಿರುತ್ತದೆ.

ಅಂತೂ ಕೊನೆಗೂ ಸಾಫ್ಟ್‌ವೇರ್ ಬಳಕೆಗೆ ಸಿದ್ಧವಾಗುತ್ತದೆ. ಬಳಕೆ ಶುರುವಾದ 3-6 ತಿಂಗಳವರೆಗೆ ಕರಾರಿನಂತೆ ಅದರ ನಿರ್ವಹಣೆ (ಮೇಂಟೆನೆನ್ಸ್) ಜವಾಬ್ದಾರಿಯಿರುತ್ತದೆ. ಬಳಕೆಯ ವೇಳೆ ಯಾವುದಾದರೂ ದೋಷ ಬಂದಲ್ಲಿ ಅದನ್ನು ಸರಿಪಡಿಸಿ ಅಂತೂ ಕೊನೆಗೂ ಸಾಫ್ಟ್‌ವೇರ್ ರಚನೆಯ ಪ್ರಕ್ರಿಯೆ ಮುಕ್ತಾಯವಾಗುತ್ತದೆ.

ಇದು ನೋಡಿ ಸ್ವಾಮಿ ನಾವು ಮಾಡೋ ಕೆಲಸದ ಒಂದು ಕಿರು ಪರಿಚಯ. ಇಲ್ಲಿ ಮಾಹಿತಿಯನ್ನು ಸರಳಗೊಳಿಸುವ ಸಲುವಾಗಿ ಮುಖ್ಯವಾದ ಅಂಶಗಳನ್ನಸ್ಟೇ ಇಲ್ಲಿ ಹೇಳಿದ್ದೇನೆ. ಇದು ಪೂರ್ಣವಾದ ಪರಿಚಯ ಅಲ್ಲವಾದರೂ ಸಾಫ್ಟ್‌ವೇರ್ ಜಗತ್ತಿನ ಬಗ್ಗೆ ಒಂದು ಇಣುಕು ನೋಟ ನಿಮಗೆ ಸಿಕ್ಕಿದಲ್ಲಿ ನಾನು ಬರೆದಿದ್ದೂ ಸಾರ್ಥಕ.

ಕೊನೆಯಲ್ಲೊಂದು ವ್ಯಂಗ್ಯ ಸಾಫ್ಟ್-ವೇರ್ ಕುರಿತು. ಕೃಪೆ: ಇಂಟರ್ನೆಟ್

SDLC_(P2)