Posts Tagged ‘ಭಾಷೆ’

ಬಲ್ಲವರ ಮಾತೊಂದಿದೆ ನೊಡಿ… ನದಿ ಮೂಲ, ಋಷಿ ಮೂಲ ಸ್ತ್ರೀ ಮೂಲ ಹುಡುಕಲು ಹೋಗುವ ‘ಮೂಲ’ವ್ಯಾಧಿ ಒಳ್ಳೇದಲ್ಲ ಅಂತ. ಆದ್ರೆ ಪದ ಮೂಲ ಹುಡುಕಲು ಹೋಗೋದ್ರಲ್ಲಿ ತಪ್ಪೇನಿಲ್ಲ ಬಿಡಿ. ಅದರಲ್ಲೂ ಅನ್ಯಭಾಷೆ-ದೇಶ-ಸಂಸ್ಕೃತಿಯಿಂದ ಬಂದ ಪದಗಳ ಮೂಲ ಹುಡುಕುತ್ತಾ ಹೋದಂತೆಲ್ಲಾ, ಸಿಗುವ ಕತೆಗಳು ತುಂಬಾ ಸ್ವಾರಸ್ಯಕರವಾಗಿರುತ್ತೆ. ಅರೆ! ಹೌದಲ್ಲ.. ನಮ್ಮ ನಿತ್ಯ ಬಳಕೆಯಲ್ಲಿ ಹಾಸುಹೊಕ್ಕಾಗಿರುವ ಈ ವಿಶಿಷ್ಟ ಪದಗಳ ಹಿಂದೆ ಇಷ್ಟೆಲ್ಲಾ ಕತೆ ಇದೆಯಾ, ಈ ಕತೆಗಳ ಅಸಲಿಯತ್ತಾದರೂ ಏನು ಎಂದು ಹುಡುಕುತ್ತಾ, ಈ ಪದ ಪ್ರಪಂಚದ ರೋಚಕ ಪಯಣದಲ್ಲಿ ಸಾಗುತ್ತಿರುವಂತೆಯೇ ನಿಮ್ಮ ಮನದಲ್ಲಿ ಮೂಡುವ ಪ್ರಶ್ನೆ ಒಂದೇ … ಹೀಗೂ ಉಂಟೆ!!

ಅನ್ಯಭಾಷೆಯಿಂದ ಬಂದ ಪದಗಳ ಪದತಲದ ಜಾಡನ್ನರಸುತ್ತಾ ಪದಯಾತ್ರೆ ಹೊರಟು, ಕುತೂಹಲಕಾರಿ ಅನ್ನಿಸುವ some ಪದಗಳನ್ನು ಸಂಪಾದಿಸಿ, ಆ ಪದಗಳ ಹಿಂದಿನ ಪರದೆಯ ಪದರಪದರವಾಗಿ ಬಿಡಿಸುತ್ತಾ ಹೊರಟವರು ಪಾರ್ವತೀಶ. ಈ ಪದ ಸಂಪದಕ್ಕೆ ಅನ್ವರ್ಥವಾಗುವಂತೆ ಇಟ್ಟ ಹೆಸರು Someಪದ. ಅನ್ಯಭಾಷೆಯಿಂದ ಬಂದು, ಕನ್ನಡದ್ದೇ ಪದಗಳೋ ಅನ್ನುವ ಮಟ್ಟಿಗೆ ನಮ್ಮ ಆಡುನುಡಿಯಲ್ಲಿ, ಬರವಣಿಗೆಗಳಲ್ಲಿ ಸೇರಿಹೋದ 75 ಪದಗಳ ಜನ್ಮಕುಂಡಲಿಯನ್ನು ಈ ಪುಸ್ತಕದಲ್ಲಿ ತುಂಬಾ ಸ್ವಾರಸ್ಯಕರವಾಗಿ ಜಾಲಾಡಿದ್ದಾರೆ. ರಿಕ್ಷಾ, ಕಿಯೋಸ್ಕ್, ಜಾಕ್‌ಪಾಟ್, ಮಾಫಿಯಾ, ಬೊಂಬಾಟ್,ಅಟ್ಲಾಸ್, ಬನಿಯನ್, ಖಾಕಿ, ಕಮ್ಯಾಂಡೋ, ಹಾಸ್ಪಿಟಲ್, ಸೋಡ,ಬಾಟಾ, ಟಿಫಿನ್, ಡಕೋಟಾ, ಓ.ಕೆ.,ಚೌಚೌ, ಕಾಂಗ್ರೆಸ್ ಗಿಡ, ಕೆಚಪ್,ಟ್ಯಾಕ್ಸಿ, ಆಯಾ, ಮಟನ್,ಸಂಪ್, ಬಾಕ್ಸ್ ಆಫಿಸ್, ಕ್ಯೂ, ಟಿಕೆಟ್, ಶಾಂಪೂ,ಪ್ಯೂನ್, ಬಿಕಿನಿ, ರೋಲ್‌ಕಾಲ್, ಲಾಟರಿ,ಬಂಗಲೆ, ರಂ,ಸಫಾರಿ, ಕರ್ಫ್ಯೂ, ಬೋನಸ್, ಬಿಸ್ಕತ್, ಕೇಡಿ…. ಹೀಗೆ ನಾವೆಲ್ಲರೂ ಪ್ರತಿದಿನ ಬಳಸುವ ಪದಗಳ ‘ಜನ್ಮಾಂತರ’ದ ಪಯಣದ ಬಗ್ಗೆ ಬೊಂಬಾಟಾದ ವಿವರಣೆ ಸಿಗುತ್ತದೆ. Juggernaut ಪದದ ಹಿಂದೆ ಪುರಿಯ ಜಗನ್ನಾಥ ರಥಯಾತ್ರೆಯ ಕೊಂಡಿಯಿರುವ ಬಗ್ಗೆ ಓದಿದಾಗ ನಿಜಕ್ಕೂ ಆಶ್ಚರ್ಯವೆನಿಸದೇ ಇರದು.

ಪಾರ್ಥೇನಿಯಂ ಗಿಡ ಅಂದ್ರೆ ತಟ್ಟನೆ ಯಾವುದು ಅಂತ ಗೊತ್ತಾಗದೇ ಇರಬಹುದು, ಆದರೆ ಕಾಂಗ್ರೆಸ್ ಗಿಡ ಅಂದಾಕ್ಷಣ ಓ ಅದಾ.. ಅನ್ನುವ ಪರಿಚಯದ ಉದ್ಘಾರ ಹೊರಬರುತ್ತದಷ್ಟೆ? ಈ ಕಳೆ ಗಿಡಕ್ಕೆ ಈ ನಾಮಕರಣ ಆಗಿದ್ದು ಹೇಗೆ ಗೊತ್ತಾ? ನೆಹರೂ ಕಾಲದಲ್ಲಿ ಆಫ್ರಿಕಾದ ಮಡ್‌ಗಾಸ್ಕರ್‌ನಿಂದ ಟನ್‌ಗಟ್ಟಲೆ ಕಲ್ಲಿದ್ದಲನ್ನು ಆಮದು ಮಾದಿಕೊಳ್ಳಲಾಗಿತ್ತಂತೆ. ಆಗ ಹೇಗೋ ಏನೋ, ಈ ಕಳೆಯ ಗಿಡದ ವಿಷಬೀಜ ಹಡಗಿನಲ್ಲಿ ಜಾಲಿಟ್ರಿಪ್ ಬಂದು, ಇಂಡಿಯಾದ ಬೆಡಗಿಗೆ ಮನಸೋತು ಇಲ್ಲೇ ಝಂಡಾ ಊರಿದವು, ಮಾತ್ರವಲ್ಲ ಆಗಿನ್ನೂ ಕುಟುಬ ಯೋಜನೆ ಜಾರಿಯಲ್ಲಿ ಇರದಿದ್ದ ಕಾರಣ, ಮನಸೋ ಇಚ್ಛೆ ತಮ್ಮ ಸಂತಾನ ಬೆಳೆಸಿ, ದೇಶದ ತುಂಬೆಲ್ಲಾ ತಮ್ಮ ವಂಶವೃಕ್ಷ(ಸಸ್ಯ)ದ ಬೇರನ್ನೂರಿದವು. ಮುರಿದರೂ ಕಿತ್ತೆಸೆದರೂ ನಾಶವಾಗದ ಈ ಗಿಡದ ಕುರಿತು ಪಾರ್ಲಿಮೆಂಟಿನಲ್ಲಿ ಒಮ್ಮೆ ಸದಸ್ಯರೊಬ್ಬರು ಪ್ರಸ್ತಾಪಿಸಿದಾಗ, ನೆಹರೂ ತಮಾಷೆಯಾಗಿ “ಹಾಗಾದ್ರೆ ಈ ಗಿಡ ಕಾಂಗ್ರೆಸ್ ಪಾರ್ಟಿ ತರಹ ಅನ್ನಿ, ವಿರೋಧಪಕ್ಷಗಳು ಎಷ್ಟೇ ಪ್ರಯತ್ನಿಸಿದರೂ ನಾಶವಾಗದೆ ಹುಲುಸಾಗಿ ಬೆಳೆದು ನಿಂತಿದೆ” ಅಂದರಂತೆ. ಅಂದಿನಿಂದ ಈ ಕಳೆಯ ಗಿಡಕ್ಕೆ ಖಾಯಂ ಆಗಿ ಈ ಅಡ್ಡ ಹೆಸರು ಬಿತ್ತಂತೆ. ಇಂತಹ ಹಲವಾರು ರುಚಿಕಟ್ಟಾದ ವಿವರಣೆಯ ಸಹಿತ ಪದಗಳನ್ನು ಪದಾರ್ಥದಂತೆ ಚಪ್ಪರಿಸಬೇಕಿದ್ರೆ ಸಂ-ಪದ ಲೋಕದಲ್ಲೊಂದು ಸುತ್ತು ಹೊಡೆದು ಬನ್ನಿ.

ಭಾಷಾ ವಿದ್ವಂಸರ ಹಿರಿತನ ಹಾಗೂ ವಿದ್ವತ್ತಿನ ಎದುರು ಈ ಬರಹ ಸಣ್ಣ ಸಾಂಸ್ಕೃತಿಕ ಚೇಷ್ಟೆ ಅಂತ ಬೆನ್ನುಡಿಯಲ್ಲಿ ಸ್ವತಹ ಪಾರ್ವತೀಶ ಹೇಳಿಕೊಂಡಿರುವರಾದರೂ, ಪದಗಳ ಆಸಕ್ತಿ ಕುತೂಹಲವನ್ನಿಟ್ಟುಕೊಂಡು ಚಿಂತಿಸುವ ಪದಾರ್ಥ ಚಿಂತಾಮಣಿಗಳಿಗೆ ಸುಗ್ರಾಸ ಭೋಜನ ಈ ಪುಸ್ತಕ ಅನ್ನುವುದರಲ್ಲಿ ಎರಡು ಮಾತಿಲ್ಲ.

ಪುಸ್ತಕ                 :           some-ಪದ

ಲೇಖಕರು             :           ಪಾರ್ವತೀಶ

ಪುಟಗಳು              :           172+12

ಬೆಲೆ                   :           80

ನಾಗರಾಜ್ ವಸ್ತಾರೆಯವರದ್ದೊಂದು ಕಥಾ ಸಂಕಲನದ ಹೆಸರು ಹಕೂನ ಮಟಾಟ. ಇದೇನಿದು ವಿಚಿತ್ರ ಹೆಸರು ಅಂತ ತಲೆಕೆಡಿಸಿಕೊಳ್ಳುವಷ್ಟರಲ್ಲಿ ಗೊತ್ತಯ್ತು ಅದೊಂದು ಆಫ್ರಿಕನ್ ಪದ ಅಂತ. ಅದರರ್ಥ ನೋ ಪ್ರಾಬ್ಲಂ ಅಂತ. ಭಾಷೆಗಳ ಬಗ್ಗೆ ನನಗಿರುವ ಹುಚ್ಚು ಆಕರ್ಷಣೆಯಿಂದಾಗಿ ಈ ಬಾರಿ ಟಾಂಜಾನಿಯಾದಿಂದ ರಜೆಯ ಮೇಲೆ ಊರಿಗೆ ಬಂದ ಅತ್ತೆ, ಮಾವನನ್ನು ಕೇಳಿ ಟಾಂಜಾನಿಯಾದ ಭಾಷೆ ಸ್ವಹಿಲಿಯ ( ಅಥವಾ ಅವರದೇ ಭಾಷೆಯಲ್ಲಿ ಹೇಳುವಂತೆ ಕಿಸ್ವಹಿಲಿ) ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡೆ. ಹಿಂದಿ/ಉರ್ದು/ಅರೇಬಿಯಬ್ ಭಾಷೆಗಳಿಂದ ಸ್ವಹಿಲಿಯು ಎರವಲು ಪಡೆದ ಅನೇಕ ಪದಗಳ ಬಗ್ಗೆ ಕೇಳಿದಾಗ ನನ್ನ ಕುತೂಹಲ ಇನ್ನೂ ಹೆಚ್ಚಾಯ್ತು. ನಿಮಗೂ ಈ ಭಾಷೆಯ ಬಗ್ಗೆ ಆಸಕ್ತಿ ಇದ್ರೆ ಅದರ ಒಂದಿಷ್ಟು ಪದಗಳ ಮೇಲೆ ಕಣ್ಣು ಹಾಯಿಸೋಣ ಬನ್ನಿ.

 

ಮೊದಲಿಗೆ ಹಿಂದಿ/ಉರ್ದು ಅಥವಾ ಅರಬ್ಬೀ ಭಾಷೆಯಿಂದ ಪ್ರಭಾವಿತವಾಗಿರುವ ಪದಗಳನ್ನು ನೋಡೋಣ

 

ಕಿಸ್ವಹಿಲಿ ಪದ                                ಪದದ ಅರ್ಥ                 ಮೂಲ ಹಿಂದೀ/ಅರಬ್ಬಿ ಪದ

ಗಾಡಿ                                          ವೆಹಿಕಲ್                           ಗಾಡಿ

ಕಿತಾಬು                                       ಬುಕ್                              ಕಿತಾಬ್

ದುಕಾ                                          ಶಾಪ್                             ದುಕಾನ್

ಕಲಾಮು                                      ಪೆನ್                               ಕಲಮ್

ದವಾ                                          ಮೆಡಿಸಿನ್                         ಧವಾ(ಧವಾಯಿ)

ದಫ್ತರ್                                         ಅಕೌಂಟ್ ಬುಕ್                   ದಫ್ತರ್

ಚೀಟಿ                                          ಟಿಕೇಟ್                            ಚೀಟಿ

ಆಂಬೆ                                          ಮ್ಯಾಂಗೋ                       ಆಮ್

ಅಚಾರಿ                                        ಪಿಕಲ್                             ಅಚಾರ್

ಚಾಪಾ                                         ಸ್ಟ್ಯಾಂಪ್                          ಛಾಪಾ

ನೇಲಿ                                          ಪೈಪ್                             ನಲ್

ರಂಗೀ                                         ಕಲರ್                             ರಂಗ್

ಲಾಕಿ                                           ಲ್ಯಾಕ್                             ಲಾಕ್

ಯಾಯಾ                                      ನರ್ಸ್                             ಆಯಾ

ಕಾನುನಿ                                       ರೂಲ್ಸ್                             ಕಾನೂನ್

ಸಾಮಾನಿ                                     ವುಡನ್ ಫರ್ನಿಚರ್                ಸಾಮಾನ್

ಪೊರ್‌ತಂಗ್                                   ಕೈಟ್                              ಪತಂಗ್

ಇಲಿಕಿ                                          ಕಾರ್ಡಮಮ್                      ಇಲೈಚಿ ( ಏಲಕ್ಕಿ ನೆನಪಿಸಿಕೊಳ್ಳಿ)

ಹಂಡೋ                                      ಕಾಪರ್ ವೆಸ್ಸೆಲ್                  ನಮ್ಮ ಹಂಡೆ ನೆನಪಾಯ್ತಾ !!

 

ಅಲ್ಲದೇ ಕೆಲವೊಂದು ಇಂಗ್ಲೀಷ್ ಪದಗಳಿಗೆ ಕೊನೆಗೊಂದು ‘i’ ಸೇರಿಸಿಬಿಟ್ರೆ ಕಿಸ್ವಹಿಲಿ ಪದ ತಯಾರು

 

ಉದಾ

ಕಿಸ್ವಹಿಲಿ                     ಮೂಲ

ಆಫಿಸಿ                                        ಆಫಿಸ್                                        

ಹಾಸ್ಪಿಟಲಿ                                    ಹಾಸ್ಪಿಟಲ್                                   

 

ಇದಲ್ಲದೆ ಕೆಲವು ಆಸಕ್ತಿ ಮೂಡಿಸಿದ , ಉಚ್ಚರಿಸಲು ಮಜವಾಗಿರುವ ಪದಗಳು ಕೆಲವು ಇಲ್ಲಿವೆ ನೋಡಿ

ಕಿಸ್ವಹಿಲಿ ಪದ                                ಪದದ ಅರ್ಥ

ಪಿಕಿಪಿಕಿ                                        ಬೈಕ್/ಸ್ಕೂಟರ್

ಡಲಾಡಲಾ                                    ಬಸ್

ಸುಲೆ                                          ಸ್ಕೂಲ್

ಬರಬರಾನಿ                                    ರೋಡ್

ಚಕುಲ                                         ಫುಡ್

ಮಿಮಿ                                          ಐ (ನಾನು)

ಸಿಸಿ                                            ವಿ (ನಾವು)

ವೆವೆ                                           ಯು

ಕ್ವಾಹೆರಿ                                        ಗುಡ್ ಬ್ಯೆ

ಕರಿಬು                                         ವೆಲ್ಕಮ್

ಅಸಾಂಟೆ                                      ಥ್ಯಾಂಕ್ಸ್

ತ(ದ)ಫಧಾಲಿ                                  ಪ್ಲೀಸ್

ಪೋಲೆ                                        ಸಾರಿ

ಚೇಕಾ                                         ಸ್ಮೈಲ್

ಚೇಜೋ                                       ಪ್ಲೇ (ಆಟಆಡು)

ಹರಾಕ                                         ಫಾಸ್ಟ್

 

ಒಟ್ಟಿನಲ್ಲಿ ನಂಗಂತೂ ಈ ಆಫ್ರಿಕನ್ ಭಾಷೆ ಸಕ್ಕತ್ ಇಂಟರೆಸ್ಟಿಂಗ್ ಅನ್ನಿಸ್ತು. ನಿಮಗೆ ಹೇಗನ್ನಿಸಿತು? ಕಿಸ್ವಲಿಯ ಬಗ್ಗೆ ಮುಂದೆಂದಾದರೂ ಇನ್ನಷ್ಟು ಬರೆದೇನು.

 

ತೊಂಬತ್ತರ ದಶಕದ ಆದಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಈ ಹಾಡು ಇಂದಿಗೂ ನನ್ನ ಅಚ್ಚುಮೆಚ್ಚಿನದು. ರಾಷ್ಟ್ರೀಯ ಭಾವೈಕ್ಯವನ್ನು ಸಾರುವ ಈ ಗೀತೆಯ ಹಿಂದಿರುವ ಭಾವ, ಅದನ್ನು ಮನಮುಟ್ಟುವಂತೆ ನಿರೂಪಿಸಿದ ರೀತಿಯಿಂದಾಗಿ ಅದು ಮನಸ್ಸನ್ನು ತಟ್ಟಿ ಅಲ್ಲೇ ಗಟ್ಟಿಯಾಗಿ ನಿಂತುಬಿಟ್ಟಿದೆ. ಇತ್ತೀಚೆಗೆ ಜಾತಿ, ಭಾಷೆ, ಗಡಿಗಳ ವಿಷಯದಲ್ಲಿ ಜನರಲ್ಲಿ ಮನೆ ಮಾಡುತ್ತಿರುವ ಒಂದು ರೀತಿಯ ಅಸಹನೆಯ ಹಿನ್ನೆಲೆಯಲ್ಲಿ ಈ ಹಾಡು ಮತ್ತೊಮ್ಮೆ ನೆನಪಾಗಿ ನನ್ನಲ್ಲಿ ಪ್ರಶ್ನೆಗಳ ಸರಮಾಲೆಯನ್ನೇ ಹುಟ್ಟುಹಾಕಿದೆ. ಅದರಲ್ಲಿ ಕೆಲವನ್ನು ಮುಂದಿಡುವ ಪ್ರಯತ್ನವೇ ಈ ಲೇಖನ.

 

ಪ್ರೀತಿ ಅಕಾರಣವಾಗಿರಲಿ.. ದ್ವೇಷ ಸಕಾರಣವಾಗಿರಲಿ ಎಂಬುದೊಂದು ಉಕ್ತಿ. ನಾವು ಯಾರನ್ನಾದರೂ ದ್ವೇಷಿಸಲು ಕಾರಣವೇನು? ಕಾರಣವಿಲ್ಲದ ದ್ವೇಷ ಅರ್ಥಹೀನ ( ಕಾರಣವಿರುವ ದ್ವೇಷ ಕೂಡಾ ಸಮರ್ಥನೀಯವೇನಲ್ಲ) ಅಂಥಹುದರಲ್ಲಿ ರಾಜ್ಯ-ರಾಜ್ಯಗಳ ನಡುವಿನ ಭಾಷೆ, ಸಂಸ್ಕೃತಿಯ ನಡುವಿನ ಭಿನ್ನತೆ-ವೈವಿಧ್ಯತೆಗಳ ಕಾರಣಕ್ಕಾಗಿ ಯಾಕಾದರೂ ದ್ವೇಷ ಹುಟ್ಟಬೇಕು? ರಾಜ್ಯ, ಜಿಲ್ಲೆ, ತಾಲ್ಲೂಕು ಇವೆಲ್ಲವೂ ಆಡಳಿತದ ವಿಕೇಂದ್ರೀಕರಣ ಹಾಗು ಭಾಷೆ-ಸಂಸ್ಕೃತಿಯ ವ್ಯತ್ಯಾಸಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸುಗಮ ನಿರ್ವಹಣೆಗಾಗಿ ನಾವೇ ಮಾಡಿಕೊಂಡ ವ್ಯವಸ್ಥೆ. ಇಷ್ಟು ಸರಳ ಸತ್ಯದ ಅರಿವು ಇಲ್ಲದೆ, ನಮ್ಮ-ನಮ್ಮಲ್ಲಿನ ವೈವಿಧ್ಯತೆಗಳನ್ನೇ ಬೊಟ್ಟುಮಾಡಿ ಪರಸ್ಪರ ಕೆಸರೆರಚಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಅನ್ನೋದು ನನ್ನ ದೃಢ ನಂಬಿಕೆ. ವ್ಯಕ್ತಿಯೊಬ್ಬನನ್ನು ಆತನ ಧರ್ಮ, ಜಾತಿ, ಭಾಷೆಯ ಹಿನ್ನೆಲೆಯಲ್ಲಿ ಪ್ರತ್ಯೇಕಿಸಿ ನೋಡುವುದಾದರೆ, ಈ ಭಿನ್ನತೆಯ ಮುಂದೆ ಆತನ ವ್ಯಕ್ತಿತ್ವ, ಸಾಧನೆಗಳನ್ನು ಅಲಕ್ಷಿಸುವುದಾದರೆ, ನಮ್ಮ ದೃಷ್ಟಿಕೋನಕ್ಕೆ ಚಿಕಿತ್ಸೆ ಆಗಬೇಕೇನೋ ಅಲ್ಲವೇ?

 

ಭಾಷೆ ಎಂಬುದು ಒಂದು ಸಂವಹನ ಮಾಧ್ಯಮ. ನಾಗರೀಕತೆಯ ಹುಟ್ಟಿನ ಆದಿಯಲ್ಲಿ ನಮ್ಮ ಪೂರ್ವಜರೆಲ್ಲರೂ ಬಹುಶಃ ಉಪಯೋಗಿಸುತ್ತಿದ್ದ ಭಾಷೆ ಒಂದೇ ಒಂದು. ಅದುವೇ ಸಂಜ್ಞಾಭಾಷೆ. ಕ್ರಮೇಣ ಆಯಾ ಪ್ರದೇಶಗಳಲ್ಲಿ ಬೀಡುಬಿಟ್ಟ ಜನರು ತಮ್ಮ ನಡುವಿನ ಸುಗಮ ಸಂವಹನಕ್ಕಾಗಿ ರೂಪಿಸಿಕೊಂಡ ಮಾಧ್ಯಮ – ಭಾಷೆ. ಇದು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದು, ಇಂದು ನಾವಾಡುವ ಭಾಷೆಯ ಮಟ್ಟಕ್ಕೆ ಬಂದು ಮುಟ್ಟುವ ಹಾದಿಯಲ್ಲಿ ಜನರ ವಲಸೆ, ನಮ್ಮನ್ನು ಆಳಿದವರು, ಇವರೆಲ್ಲರ ಪ್ರಭಾವದಿಂದಾಗಿ ಪರಸ್ಪರ ಕೊಡು-ಕೊಳ್ಳುವಿಕೆಯಿಂದಾಗಿ ಸಂಪದ್ಭರಿತವಾಗುತ್ತಾ ಬಂದಿದೆ. ನಿಖರವಾಗಿ ಅಭ್ಯಸಿಸಿದರೆ ಭಾರತೀಯ ಭಾಷೆಗಳೆಲ್ಲಾ ಬಹುತೇಕ ಒಂದೇ ಮೂಲದಿಂದ ಬಂದಂತೆ ಭಾಸವಾಗುತ್ತದೆ. ಕನ್ನಡ, ತಮಿಳು, ಮಲೆಯಾಳಂ, ತುಳು, ತೆಲುಗು ಭಾಷೆಗಳಲ್ಲಿರುವ ಅನೇಕ ಸಾಮ್ಯತೆಗಳು ಇದಕ್ಕೆ ಸ್ಪಷ್ಟ ನಿದರ್ಶನ. ಅಷ್ಟೇಕೆ ಬೆಂಗಾಲಿ, ಒರಿಯಾ ಭಾಷೆಗಳಲ್ಲೂ ಕೂಡಾ ದಕ್ಷಿಣದ ಭಾಷೆಗಳೊಂದಿಗೆ ಅನೇಕ ಹೋಲಿಕೆಗಳಿವೆ. ಹೀಗಿರುವಾಗ ಭಾಷೆಯನ್ನು ಕಾರಣವಾಗಿರಿಸಿಕೊಂಡು ನಾವೇಕೆ ಪರಸ್ಪರರಲ್ಲಿ ನಮ್ಮದು ಮೇಲು-ನಿಮ್ಮದು ಕೀಳು ಎಂದು ಜಗಳವಾಡಬೇಕು? ನಮ್ಮ ನಮ್ಮ ಭಾಷೆಯನ್ನು ಪ್ರೀತಿಸಿ, ಬೇರೆಯವರದನ್ನು ಗೌರವಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಸಾಕಲ್ಲವೇ?

 

ಜಾತಿ, ಧರ್ಮ, ಭಾಷೆಯ ವಿಷಯವನ್ನೇ ಕೇಂದ್ರವಾಗಿರಿಸಿಕೊಂಡು ದ್ವೇಷಿಸುವುದಾದರೆ, ಶಾಂತಿ, ನೆಮ್ಮದಿಯಿಂದ ಬಾಳುವುದು ಎಂದಿಗಾದರೂ ಸಾಧ್ಯವೇ? ಅಬ್ದುಲ್ ಕಲಾಂ, ತೆಂಡೂಲ್ಕರ್, ಲತಾ ಮಂಗೇಶ್ಕರ್, ಸಾನಿಯಾ ಮಿರ್ಜಾ, ವಾಜಪೇಯಿ, ಶಾರುಕ್ ಖಾನ್, ರಾಹುಲ್ ದ್ರಾವಿಡ್, ಲಿಯಾಂಡರ್ ಪೇಸ್ ಇವರೆಲ್ಲರನ್ನು ಪ್ರೀತಿಸಲು ನಮಗೆ ಅಡ್ಡಿಯಾಗದ ಪ್ರಾದೇಶಿಕತೆ, ಜಾತಿ ಧರ್ಮಗಳ ಭಿನ್ನತೆಯು, ಬೇರೆ ವಿಷಯಗಳಲ್ಲಿ ಏಕೆ ಅಡ್ಡಿಯಾಗಬೇಕು? ತಮ್ಮ ಬೇಳೆ ಬೇಯಿಸಿಕೊಳ್ಳಲು ಸ್ಥಾಪಿತ ಹಿತಾಸಕ್ತಿಗಳ ಪ್ರಚೋದಕ ಕ್ರಿಯೆಗಳಿಗೆ ನಾವ್ಯಾಕೆ ಪ್ರತಿಕ್ರಿಯೆ ನೀಡಬೇಕು? ನಮ್ಮ ಭಿನ್ನತೆಗಳನ್ನು ಪರಸ್ಪರು ಗೌರವಿಸುವಷ್ಟು ವಿವೇಕ ನಮ್ಮಲ್ಲಿದ್ದರೆ ಮಾತ್ರ ಭಾರತ ಒಂದು ಶಕ್ತಿಯಾಗಿ ಮುನ್ನಡೆಯಬಹುದೇನೋ. ಇಲ್ಲವಾದಲ್ಲಿ ಪ್ರಾದೇಶಿಕ ಭಿನ್ನತೆಯ ಕಚ್ಚಾಟಗಳಲ್ಲೇ ದೇಶ ಅಸಹನೆಯ ಗೂಡಾಗಿಹೋಗುತ್ತದೆ. ಹಾಗಾಗದು ಅನ್ನುವುದು ಭರವಸೆ. ನನ್ನ ದನಿಗೆ ನಿನ್ನ ದನಿಯು…ಸೇರಿದರೆ ನಮ್ಮ ದ್ವನಿಯು…