Posts Tagged ‘ಲೋಕಸಭೆ ಚುನಾವಣೆ’

ಲೋಕಸಭೆ ಚುನಾವಣೆ ಹತ್ತಿರವಾಗಿದೆ. ಎಲ್ಲಿನೋಡಿದರಲ್ಲಿ ಚುನಾವಣೆಯದ್ದೇ ಮಾತು. ಪ್ರಸಾರ ಮಾಧ್ಯಮಗಳು ಸಮೀಕ್ಷೆ, ಕ್ಷೇತ್ರ ಪರಿಚಯ, ಚುನಾವಣಾ ಅಕ್ರಮಗಳ ಕುರಿತು ಗಂಟೆಗಟ್ಟಲೆ ಕೊರೆಯಲಾರಂಭಿಸಿವೆ. ರೀಮುಗಟ್ಟಲೆ ಕಾಗದದ ತುಂಬೆಲ್ಲಾ ಇಲೆಕ್ಷನ್ನ ರಂಗು ರಂಗಿನ ಸುದ್ದಿ ಪ್ರಕಟಿಸಿ ಸುದ್ದಿ ಮಾಧ್ಯಮಗಳು ಕೃತಾರ್ಥವಾಗುತ್ತಿವೆ. ಬಸ್ಸುಗಳಲ್ಲಿ, ಕಛೇರಿಗಳಲ್ಲಿ, ಹೋಟೆಲುಗಳಲ್ಲಿ ಕೊನೆಗೆ ಇಂಟರ್ನೆಟ್ನಲ್ಲೂ ಚುನಾವಣೆಯದ್ದೇ ಬಿಸಿಬಿಸಿ ಚರ್ಚೆಯಾರು ಗೆಲ್ಲುವ ಕುದುರೆ ಅನ್ನೋ ಬಗ್ಗೆ ಬೆಟ್ಟಿಂಗ್ ಆಯಾ ಕ್ಷೇತ್ರಗಳಲ್ಲಿ ಬಿರುಸುಗೊಡಿದೆ. ಅಭ್ಯರ್ಥಿಗಳು ಪರಸ್ಪರ ಕೆಸರೆರಚಾಟ, ತಮ್ಮತಮ್ಮ ಪಕ್ಷದ ಸಾಧನೆಗಳ ತುತ್ತೂರಿ ಊದುತ್ತಾ ಬಿರುಸಿನ ಪ್ರಚಾರ ಕಾರ್ಯಗಳಲ್ಲಿ, ಜನರ ಮನವೊಲಿಸುವ ಸಲುವಾಗಿ ಭರವಸೆಗಳ ಮಹಾಪೂರ ಹರಿಸುವುದರಲ್ಲಿ, ಹಣಹೆಂಡಸೀರೆಯ ಆಮಿಷಗಳ ಬಲೆ ಬೀಸುವುದರಲ್ಲಿ ಮಗ್ನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಉಡುಪಿ ಕ್ಷೇತ್ರದಲ್ಲಿ ಈ ಬಾರಿ ವಿಜಯಲಕ್ಷ್ಮಿ ಯಾರಿಗೆ ಮಾಲೆ ಹಾಕ್ತಾಳೆ ಅನ್ನುವ ಕುರಿತು ಒಂದಿಷ್ಟು ಅವಲೋಕನ ನಡೆಸಿದರೆ ಹೇಗೆ?

 

ಉಡುಪಿ ಕ್ಷೇತ್ರದ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ ಸ್ಪಷ್ಟವಾಗಿ ಅರ್ಥವಾಗುವುವ ಸಂಗತಿಯೆಂದರೆ ಇಲ್ಲಿ ಗೆಲುವು ಯಾವಾಗಲೂ ಅತ್ತಿಂದಿತ್ತ ತೂಗೂಯ್ಯಾಲೆ ಆಡುತ್ತಲೇ ಬಂದಿದೆ. ಆಸ್ಕರ್ ಫೆರ್ನಾಂಡೀಸ್ರ ಗೆಲುವಿನ ಸರಮಾಲೆಯನ್ನು ಮೊಟ್ಟ ಮೊದಲ ಬಾರಿಗೆ ಮುರಿದ ಶ್ರೇಯಸ್ಸು ಆಗ ಬಿ.ಜೆ.ಪಿ. ಯಲ್ಲಿದ್ದ ಐ.ಎಂ.ಜಯರಾಮ ಶೆಟ್ಟರಿಗೆ ಸಲ್ಲುತ್ತದೆ (ಈಗ ಅವರು ಯಾವ ಪಕ್ಷದಲ್ಲಿ ಇದ್ದಾರೆಂಬುದು ನನಗೆ ಗೊತ್ತಿಲ್ಲ ಅಂತ ಆಣೆ ಮಾಡಿ ಹೇಳ್ತೇನೆ ಬೇಕಿದ್ರೆ). ಆ ಬಳಿಕ ಮತ್ತೊಮ್ಮೆ ಕಾಂಗ್ರೆಸ್ ಮಡಿಲಿಗೆ ಈ ಕ್ಷೇತ್ರ ಬಿದ್ದಿದ್ದು ವಿನಯ ಕುಮಾರ್ ಸೊರಕೆಯಿಂದಾಗಿ.  ಕಳೆದ ಚುನಾವಣೆಯಲ್ಲಿ ಇಲ್ಲಿಂದ ಆಯ್ಕೆಯಾಗಿ ಬಂದ ಬಿ.ಜೆ.ಪಿಯ ಮನೋರಮಾ ಮಧ್ವರಾಜ್ ಈಗ ಮತ್ತೆ ತಮ್ಮ ಮಾತೃ ಪಕ್ಷ ಕಾಂಗ್ರೆಸ್ನ ಗೂಡಿಗೆ ಮರಳಿದ್ದಾರೆ. ಮೇಲಾಗಿ ಈ ಬಾರಿ ಕ್ಷೇತ್ರ ಪುನರ್ವಿಂಗಡನೆಯ ಪರಿಣಾಮವಾಗಿ ಚಿಕ್ಕಮಗಳೂರು ಕ್ಷೇತ್ರ ಮಾಯವಾಗಿ ಆ ಕ್ಷೇತ್ರದ ಬಹುಭಾಗ ಉಡುಪಿ ಕ್ಷೇತ್ರದಲ್ಲಿ ವಿಲೀನವಾಗಿದೆ. ಉಡುಪಿಯ ತೆಕ್ಕೆಯಲ್ಲಿದ್ದ ಬೈಂದೂರು ಕ್ಷೇತ್ರದ ಬಹುಭಾಗ ಶಿವಮೊಗ್ಗದ ಪಾಲಾಗಿದೆ. (ನಮ್ಮ ಊರು ಹಳ್ಳಿಹೊಳೆ ಕೂಡಾ ಈಗ ಶಿವಮೊಗ್ಗ ಕ್ಷೇತ್ರದಲ್ಲಿದೆ. ಶಿವಮೊಗ್ಗ ಕ್ಷೇತ್ರದ ಸಮೀಕರಣಗಳುಲೆಕ್ಕಾಚಾರಗಳು ನನ್ನ ಪಾಲಿಗೆ ಅಪರಿಚಿತವಾದ ಕಾರಣ ಆ ಕುರಿತು ವಿಷ್ಲೇಷಿಸುವ ಸಾಮರ್ಥ್ಯ ನನಗಿಲ್ಲ). ಅಲ್ಲದೆ ಇತ್ತೀಚಿನ ಕೆಲದಿನಗಳಲ್ಲಿ ಅವಿಭಜಿತ ದ.ಕ ಜಿಲ್ಲೆಯು ಒಂದಿಲ್ಲೊಂದು ಸಮಸ್ಯೆಯ ಸುಳಿಗೆ ಸಿಲುಕಿದ್ದು ಕ್ಷೇತ್ರದ ರಾಜಕೀಯದಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಉಡುಪಿಯ ಶಾಸಕರ ವರ್ಚಸ್ಸು ಪದ್ಮಪ್ರಿಯಾ ಪ್ರಕರಣದ ನಂತರ ಕುಸಿದಿದೆ ಅಂತ ಹೇಳಲಾಗುತ್ತಿದೆಯಾದರೂ ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ಬಳಿಕವಷ್ಟೇ ಇದರ ಸ್ಪಷ್ಟ ಚಿತ್ರಣ ಸಿಗಲಿದೆ. ಕಾಂಗ್ರೆಸ್ನಿಂದ ಈ ಬಾರಿ ನಿಂತಿರುವುದು ಮಾಜಿ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿರುವ ಜಯಪ್ರಕಾಶ್ ಹೆಗ್ಡೆಯವರು. ಬಿ.ಜೆ.ಪಿಯು ತನ್ನ ರಾಜ್ಯಾಧ್ಯಕ್ಷರಾದ ಸದಾನಂದ ಗೌಡರನ್ನು ಕಣಕ್ಕಿಳಿಸುವುದರ ಮೂಲಕ ತನ್ನ ಪ್ರತಿಷ್ಟೆಯನ್ನು ಪಣಕ್ಕಿಟ್ಟಿದೆ.

 

ಅಭ್ಯರ್ಥಿಗಳ ಬಲಾಬಲ, ಜಾತಿವರ್ಗಗಳ ಲೆಕ್ಕಾಚಾರ ( ಎಲ್ಲಾ ಪಕ್ಷಗಳು ಎಷ್ಟೇ ನಿರಾಕರಿಸಿದರೂ ಅಂತಿಮವಾಗಿ ಚುನಾವಣೆಯಲ್ಲಿ ಜಾತಿ ವರ್ಗಗಳೇ ಪ್ರಮುಖ ವಿಷಯವಾಗುವುದು ದುರಂತವಾದರೂ ಸತ್ಯ), ಕ್ಷೇತ್ರ ಪುನರ್ ವಿಂಗಡನೆಯ ಪರಿಣಾಮಗಳನ್ನು ಒಂದಿಷ್ಟು ಗಮನಿಸೋಣ ಬನ್ನಿ. ಬಿ.ಜೆ.ಪಿ.ಯ ಮಾತಿನ ಮಲ್ಲ ಸದಾನಂದ ಗೌಡರು ಈ ಬಾರಿ ಉಡುಪಿಯಲ್ಲಿ ಸ್ಪರ್ಧಿಸುವುದರ ಮೂಲಕ ಉಡುಪಿ ಕ್ಷೇತ್ರದ ರಾಜಕೀಯಕ್ಕೆ ರಂಗು ತುಂಬಿದ್ದಾರೆ. ತಮ್ಮ ಚಿತ್ರವಿಚಿತ್ರ ಹೇಳಿಕೆಗಳ ಮೂಲಕ ಸದಾ ಮಾಧ್ಯಮಗಳಲ್ಲಿ ಸುದ್ದಿ ಮಾಡುವ ಮೂಲಕ ಬಿ.ಜೆ.ಪಿ.ಯ ಜನಾರ್ಧನ ಪೂಜಾರಿ ಎನ್ನುವ ಖ್ಯಾತಿ(?)ಗೆ ಭಾಜನರಾಗಿರುವ ಈ ಖಡಕ್ ಮಾತುಗಾರನ ವರ್ಚಸ್ಸು ಎಷ್ಟು ಖಡಕ್ಕಾಗಿದೆ ಅನ್ನೋದು ಫಲಿತಾಂಶ ಬಂದ ಬಳಿಕವಷ್ಟೇ ಗೊತ್ತಾಗಲಿದೆ. ಕಳೆದ ಬಾರಿ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಮನೋರಮಾ ಮಧ್ವರಾಜ್ ಈ ಬಾರಿ ಮರಳಿ ಗೂಡಿಗೆ ಸೇರಿರುವುದರಿಂದ ಬಿ.ಜೆ.ಪಿ ಈ ಬಾರಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿತ್ತು. ಕೊನೆಗೂ ಆ ಅದೃಷ್ಟ ಸಿಕ್ಕಿದ್ದು ಸದಾನಂದ ಗೌಡರಿಗೆ. ಗೌಡರು ಉಡುಪಿ ಕ್ಷೇತ್ರಕ್ಕೆ ಹೊರಗಿನವರೇ ಅನ್ನಿಸಿದರೂ ಕೂಡಾ ಬಿ.ಜೆ.ಪಿ.ಯ ರಾಜ್ಯಾಧ್ಯಕ್ಷರು ಅನ್ನುವ ವರ್ಚಸ್ಸು ಮತ್ತು ಈ ಭಾಗದಲ್ಲಿ ಕಳೆದ ಕೆಲ ವರ್ಷಗಳಿಂದ ಬಿ.ಜೆ.ಪಿ.ಯತ್ತ ಒಲವು ತೋರಿರುವ ಜನರ ಬೆಂಬಲ ಸಿಕ್ಕಿದ್ರೆ ಮಂತ್ರಿಯಾಗೋದು ಗ್ಯಾರಂಟಿ ಅನ್ನುವ ಲೆಕ್ಕಾಚಾರದಲ್ಲಿ ಮನಸ್ಸಲ್ಲೇ ಮಂಡಿಗೆ ತಿನ್ನುತ್ತಿದ್ದಾರೆ. ಕಳೆದ ಬಾರಿ ಮನೋರಮಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮೊಗವೀರರ ಒಲವು ಯಾವ ಕಡೆಗಿದೆ ಅನ್ನುವ ವಿಚಾರ ನಿರ್ಣಾಯಕವಾಗಲಿದೆ ಅನ್ನುವ ಮಾತುಗಳು ಉಡುಪಿ ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಚಿಕ್ಕ ಮಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬಿ.ಜೆ.ಪಿಯ ಪ್ರಾಬಲ್ಯವಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆಯಾದರೂ ವಿಧಾನ ಸಭೆಯ ಚುನಾವಣೆಯಲ್ಲಿ ಕಾರ್ಕಳದಲ್ಲಿ ಬಿಜೆಪಿಯ ಸುನಿಲ್ಕುಮಾರ್ ಕಾಂಗ್ರೆಸ್ನ ಗೋಪಾಲ ಭಂಡಾರಿಯೆದುರು ಸೋಲು ಕಂಡಿರುವ ಸಂಗತಿ ಗೌಡರಿಗೆ ಒಳಗೊಳಗೇ ಆತಂಕಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಅಲ್ಲದೆ ಬಿಜೆಪಿ ಶಾಸಕರಿರುವ ಬೈಂದೂರು ಕ್ಷೇತ್ರ ಈಗ ಶಿವಮೊಗ್ಗಾ ಪಾಲಾಗಿರುವುದು ಕೂಡಾ ಇನ್ನೊಂದು ಮಹತ್ವದ ಅಂಶವಾಗಲಿದೆ. ಉಡುಪಿಯ ವಿಧಾನ ಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್ ಹಾಗೂ ಗೃಹಸಚಿವರಾಗಿರುವ ವಿ.ಎಸ್.ಆಚಾರ್ಯರ ವರ್ಚಸ್ಸು ಗೌಡರ ಪಾಲಿಗೆ ಮತ ತಂದುಕೊಡುವ ನಿರೀಕ್ಷೆ ಇಟ್ಟುಕೊಳ್ಳೋದು ತುಂಬಾ ರಿಸ್ಕಿ. ಗೌಡರ ಪಾಲಿಗೆ ಸಮಾಧಾನ ತಂದುಕೊಡುವ ಅಂಶ ಅಂದ್ರೆ ಅವರ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರನ್ನು ಕುಂದಾಪುರದ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ವಿಧಾನ ಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿರುವುದು.

 

ಇನ್ನು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ಬಲಾಬಲಗಳತ್ತ ಕಣ್ಣು ಹಾಯಿಸಿದರೆ ಎದ್ದು ಕಾಣುವುದು ಅವರು ಮೀನುಗಾರಿಕಾ ಸಚಿವರಾಗಿದ್ದಾಗ ಅವರು ಗಳಿಸಿದ್ದ ಒಳ್ಳೆಯ ಹೆಸರು. ಜೆಡಿಎಸ್ ತೊರೆದ ಬಳಿಕವೂ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಸ್ವಂತ ಬಲದ ಮೇಲೆಯೇ ಪಕ್ಷೇತರರಾಗಿ ಆಯ್ಕೆಯಾದ ಖ್ಯಾತಿ ಅವರಿಗಿದೆ. ಮೀನುಗಾರಿಕಾ ಸಚಿವರಾಗಿದ್ದಾಗ ನಡೆಸಿದ ಕಾಮಗಾರಿಗಳ ಕುರಿತು ಅವರ ವಿರೋಧಿಗಳೂ ಒಳ್ಳೆಯ ಮಾತನ್ನಾಡುತ್ತಾರೆ. ಕಳೆದ ಬಾರಿ ಬಿ.ಜೆ.ಪಿ.ಯತ್ತ ಮುಖ ಮಾಡಿದ್ದ ಬಂಟರ ವೋಟುಗಳಲ್ಲಿ ಎಷ್ಟನ್ನು ಹೆಗ್ಡೆಯವರು ಸೆಳೆಯಬಲ್ಲರು ಅನ್ನುವುದರ ಮೇಲೆ ಹೆಗ್ಡೆಯವರ ಯಶಸ್ಸು ನಿರ್ಧಾರವಾಗಲಿದೆ. ಮನೋರಮಾ ಕಾಂಗ್ರೆಸ್ಗೆ ಮರಳಿದ್ದರೂ ಅವರಿಗಾಗಲಿ ಅವರ ಮಗ ಪ್ರಮೋದ್ ಮಧ್ವರಾಜ್ಗಾಗಲಿ ಕಾಂಗ್ರೆಸ್ ಮಣೆ ಹಾಕಲಿಲ್ಲ ಅನ್ನುವ ಸಿಟ್ಟು ಮೋಗವೀರರಲ್ಲಿದ್ದರೆ ಹೆಗ್ಡೆಯವರಿಗೆ ಕಷ್ಟವಾಗಲಿದೆ. ಹೆಗ್ಡೆಯವರ ಪ್ರತಿಸ್ಪರ್ಧಿ ಸದಾನಂದ ಗೌಡರು ಎಷ್ಟೇ ಪ್ರಭಾವಿಯಾದರೂ ವೈಯುಕ್ತಿಕ ವರ್ಚಸ್ಸನ್ನು ಗಮನಿಸಿದರೆ ಹೆಗ್ಡೆಯವರದ್ದೇ ಒಂದಿಂಚಿನಷ್ಟು ಮುಂದಿದ್ದಾರೆ. ಮೇಲಾಗಿ ಕಾಂಗ್ರೆಸ್ನ ಮತಬ್ಯಾಂಕ್ನ ಮತಗಳು ಹೆಗ್ಡೆಯವರ ಪಾಲಿಗೆ ಬೋನಸ್ ಎನಿಸಲಿವೆ.  ಆದರೂ ಉಡುಪಿಯ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಚಿಕ್ಕಮಗಳೂರು ಕ್ಷೇತ್ರದ ಪ್ರದೇಶಗಳಲ್ಲಿ ವ್ಯಕ್ತಿಗಿಂತ ಪಕ್ಷದ ಮತಗಳೇ ನಿರ್ಣಾಯಕವೆನಿಸಲಿದೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ತಮಗೆ ನೀರು ಕುಡಿಸಿದ ಹಾಲಾಡಿ ಶೆಟ್ಟರ ವರ್ಚಸ್ಸು ಕುಂದಾಪುರ ಭಾಗದಲ್ಲಿ ಜೋರಾಗಿರುವುದು ಹೆಗ್ಡೆಯವರ ನಿದ್ದೆ ಕೆಡಿಸಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿ.ಜೆ.ಪಿ ಸೇರಿದ ಶಂಕರ ಪೂಜಾರಿಯವರು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆನ್ನಿಗಿರುವ ಬಿಲ್ಲವರ ಎಷ್ಟು ಮತಗಳನ್ನು ತಮ್ಮೊಂದಿಗೆ ಕೊಂಡೊಯ್ಯಲು ಶಕ್ಯರಾಗಬಹುದು ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.

 

ಉಡುಪಿ ಕ್ಷೇತ್ರದ ಒಟ್ಟಾರೆ ಚಿತ್ರಣ ಸಾಕಷ್ಟು ಗೊಂದಲಗಳಿಂದ ಕೂಡಿದ್ದರೂ, ಮೇಲ್ನೊಟಕ್ಕೆ ಬಿ.ಜೆ.ಪಿ ಕೂದಲೆಳೆಯಷ್ಟು ಮುಂದಿರುವಂತೆ ಕಂಡುಬಂದರೂ ಕಳೆದ ಚುನಾವಣೆಯ ಬಳಿಕ ಸಾಕಷ್ಟು ನೀರು ಹೊಳೆಯಲ್ಲಿ ಹರಿದು ಹೋಗಿ ಕಡಲು ಸೇರಿರುವುದು ಎಷ್ಟು ಸತ್ಯವೋ ಉಡುಪಿಯ ರಾಜಕೀಯ ಚಿತ್ರಣದಲಿ ಅನೇಕ ಸ್ಥಿತ್ಯಂತರಗಳಾಗಿರುವುದು ಅಷ್ಟೇ ಸತ್ಯ. ಹಾಗಾಗಿ ಹೆಗ್ಡೆಯವರಿಗೆ ಈ ಬಾರಿ ಅದೃಷ್ಟ ಕುದುರಿದರೂ ಕುದುರಬಹುದು ಅನ್ನುವ ಪಿಸು ಮಾತು ಅಲ್ಲಲ್ಲಿ ಕೇಳಿ ಬರುತ್ತಿರುವುದರಿಂದ, ಒಟ್ಟಾರೆಯಾಗಿ ಹೇಳುವುದಿದ್ದರೆ ಉಡುಪಿಯಲ್ಲಿ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.