Posts Tagged ‘ವಿಚಾರ’

images

ಬಹಳ ಬಹಳ ವರ್ಷಗಳ ಹಿಂದೆ… ಸರಿಸುಮಾರು 15 ವರ್ಷಗಳ ಕೆಳಗೆ,ಇದೇ ಶೀರ್ಷಿಕೆಯ ಬರಹವೊಂದನ್ನು ಬರೆದಿದ್ದೆ. ‘ಕ್ಷಿತಿಜ’ ಪಾಕ್ಷಿಕ ಪತ್ರಿಕೆಗೆ ಕ್ರಿಕೆಟ್, ಸಿನಿಮಾ, ಪದಬಂಧ, ವಿಚಾರ, ಅನುವಾದ… ಹೀಗೆ ನಾಲ್ಕು ತಿಂಗಳ ಅವಧಿಯಲ್ಲಿ ಅನೇಕ ಲೇಖನಗಳನ್ನು ಬರೆದಿದ್ದೆ. ಬರೆದಿದ್ದೆ ಅನ್ನುವುದಕ್ಕಿಂತಲೂ ಬರೆಯುವ ಪ್ರಯತ್ನ ಮಾಡಿದ್ದೆ ಅನ್ನುವುದೇ ಹೆಚ್ಚು ಸೂಕ್ತ ಅನಿಸುತ್ತದೆ. ಆಗಷ್ಟೇ ಪೀಯೂಸಿ ಮುಗಿಸಿ ‘ಎಂಗೋ ಮೊನ್ನೆ ತಾನೇ ಪೀಯೂಸಿ ಮುಗ್ಸವ್ರೆ… ಊರ್ ಹಾಳು ಮಾಡೋದಕ್ಕೆ ರೀಸರ್ಚು ನೆಡ್ಸವ್ರೆ’ ಅನ್ನಿಸಿಕೊಳ್ಳೋ ಬದಲು ಇಂಜಿನಿಯರಿಂಗ್ ಸೇರುವ ಮುನ್ನಿನ ನಾಲ್ಕು ತಿಂಗಳ ಕಾಲ ನನ್ನೀ ಅಕ್ಷರಾಭ್ಯಾಸಕ್ಕೆ ಆ ಪತ್ರಿಕೆ ಒಂದು ವೇದಿಕೆ ಒದಗಿಸಿಕೊಟ್ಟಿತ್ತು. ಬರಹಗಾರ ಆಗಬೇಕು, ಏನೆಲ್ಲಾ ಬರೆಯಬೇಕು ಅನ್ನುವ ಹುಮ್ಮಸ್ಸು. ಆ ವಯಸ್ಸೇ ಹಾಗೆ ಬಿಡಿ ಅಂತ ಷರಾ ಹಾಕಿ ಬಿಡಬಹುದಾದರೂ, ನನ್ನ ಕನಸಿದ್ದಿದ್ದು ಬರಹದ ಕುರಿತೇ. ಆಮೇಲೆ ಬದುಕಿನ ಅನಿಶ್ಚಿತ ಪಯಣ ನನ್ನನ್ನು ಸಾಫ್ಟವೇರ್ ಪ್ರಪಂಚಕ್ಕೆ ನೂಕಿಬಿಟ್ಟಿತು. ಆದರೂ ಬರೆಯಬೇಕೆನ್ನೋ ನನ್ನ ಹುಚ್ಚು ಮನಸಿನ ಅದ್ಯಾವುದೋ ಮೂಲೆಯಲ್ಲಿ ಮರ್ಮರಿಸುತ್ತಲೇ ಇತ್ತು. ಅದರ ಫಲವಾಗೇ ‘ಮನಸಿನ ಮರ್ಮರ’ ಬ್ಲಾಗ್ ಜನ್ಮ ತಳೆಯಿತು. ಬ್ಲಾಗೆನೋ ಶುರು ಆಯ್ತು ಅದರಲ್ಲಿ ಏನು ಬರೆಯಲಿ? ಕಥೆ-ಕಾದಂಬರಿ ನನ್ನ ಈ ಜನ್ಮದ ವ್ಯಾಪ್ತಿ ಪ್ರದೇಶದಿಂದ ಹೊರಗೇ ಅನ್ನುವುದು ನನಗೇ ಮನವರಿಕೆಯಾಗಿದೆ. ಹಾಗಾಗಿ ಆಸಕ್ತಿಕರ ಅನ್ನಿಸುವ ಯಾವ ವಿಷಯದ ಬಗ್ಗೆಯಾದರೂ ಬರೆಯಲು ಶುರುವಿಟ್ಟೆ. ಹನಿಗವಿತೆ, ಸಿನಿಮಾ, ಕ್ರಿಕೆಟ್, ಯಕ್ಷಗಾನ, ವಿಚಾರ, ಈದಿ ಅಮಿನ್, ಪುಸ್ತಕ ಪರಿಚಯ ಹೀಗೆ ಭಿನ್ನ-ವಿಭಿನ್ನ ಬರಹಗಳ ಬರೆದು ನನ್ನ ಕನಸಿನ ಕೂಸಿಗೆ ಬಣ್ಣದ ಅಂಗಿ ತೊಡಿಸಿ ಕಂಡು ಸಂಭ್ರಮಿಸುವ ತಾಯಿಯಂತೆ ಬರೆದುಕೊಂಡಿದ್ದೆ. ಆಗ ಶುರುವಾಯಿತು ಅಣಕ ಬರೆಯುವ ಗೀಳು. ಸರಿಸುಮಾರು 50 ಅಣಕಗಳನ್ನೂ ಬರೆದೆ. ಆದರೆ ಈಗ ಒಮ್ಮೆ ಹಿಂದಿರುಗಿ ನೋಡಿದರೆ ಬ್ಲಾಗಿನ ತುಂಬೆಲ್ಲಾ ಅಣಕಗಳೇ ತುಂಬಿ ತುಳುಕಾಡುತ್ತಿವೆ. ಅದಕ್ಕೇ ಬೇರೇನಾದರೂ ಬರೆಯೋಣ ಅಂತ ದಶಕಗಳ ಹಿಂದಿನ ಹುಮ್ಮಸ್ಸನ್ನು ಆವಾಹಿಸಿಕೊಂಡು ಬರೆಯಲು ಕುಳಿತಿದ್ದೇನೆ. ಸಧ್ಯದ ನನ್ನ ಖಿನ್ನ ಮನೋಸ್ಥಿತಿಗೆ ಇದಾದರೂ ಒಂದು ಚೇತೋಹಾರಿ ಬದಲಾವಣೆ ತಂದೀತೇನೋ ಅನ್ನುವ ದೂರದ ಆಶೆಯೊಂದಿಗೆ. ವರ್ತಮಾನದ ಭೂತಕ್ಕೆ ಭೂತದ ವರ್ತಮಾನ ಮದ್ದೆರೆದರೆ ಸಾಕು ಅನ್ನುವ ಸ್ವಾರ್ಥದೊಂದಿಗೆ 🙂

ಗೆಲುವು ಯಾರಿಗೆ ತಾನೇ ಇಷ್ಟ ಆಗೋಲ್ಲ ಹೇಳಿ? ತಮ್ಮೆಲ್ಲಾ ಪ್ರತಿಭೆ, ಶ್ರಮ, ಕೃಷಿ ಸಾರ್ಥಕ ಅನ್ನಿಸಬೇಕಾದರೆ ಗೆಲುವಿನ ಶಿಖರದ ಮೇಲೆ ಪತಾಕೆ ಪಟಪಟಿಸಲೇ ಬೇಕು. ತಮ್ಮತಮ್ಮ ಕ್ಷೇತ್ರದಲ್ಲಿ ಯಶಸ್ವಿ ಆದವರ ಕಥೆಗಳನ್ನು ಕೇಳಿದರೆ ಅದಕ್ಕಾಗಿ ಅವರು ಸಾಗಿ ಬಂದ ಕಲ್ಲು ಮುಳ್ಳುಗಳ ಹಾದಿ, ಒಂದು ಹಿಡಿಯಷ್ಟು ಭರವಸೆಯನ್ನೇ ಬಂಡವಾಳವಾಗಿಸಿಕೊಂಡು ಧೈರ್ಯದಿಂದ ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ, ಗೆಲುವಿನ ದಡ ಸೇರಿದಾಗ ಆಗುವ ಹಿತಾನುಭವ ಇವನ್ನೆಲ್ಲಾ ಅನುಭವಿಸಿಯೇ ಅರಿಯಬೇಕು. ರಾಜಕಾರಣಿಗಳಿಂದ ಹಿಡಿದು ಚಿತ್ರನಟರವರೆಗೆ, ಕ್ರೀಡೆಯಿಂದ ಹಿಡಿದು ಪರ್ವತಾರೋಹಿಗಳ ತನಕ, ಉದ್ಯಮಿಯಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಎಲ್ಲರೂ ಜಪಿಸುವುದು ಯಶಸ್ಸು-ಗೆಲುವಿನ ಮಂತ್ರವನ್ನೇ. ನಿಜವಾದ ಪರಿಶ್ರಮವಿದ್ದರೆ ಗೆಲುವು ಇಂದಲ್ಲಾ ನಾಳೆ ಕೈ ಹಿಡಿಯುತ್ತದೆ ಅನ್ನುವುದು ಹಲವರ ಅಂಬೋಣ. ಕೆಲವರು ತಮ್ಮ ಗೆಲುವಿನ ಶ್ರೆಯವನ್ನೆಲ್ಲಾ ತಮ್ಮ ಅದೃಷ್ಟ, ಇಷ್ಟ ದೈವದ ಕೃಪೆಗೆ ಸಮೀಕರಿಸುತ್ತಾರೆ. ಏನೇ ಇರಲಿ ಗೆಲ್ಲುವವನಿಗೆ ಸಾಧನೆಯ ನಂತರದ ಸಿಗುವ ತೃಪ್ತಿ, ಮಾನಸಿಕಾನಂದ ಇವುಗಳನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟಸಾಧ್ಯ

ಆದರೆ ಗೆದ್ದೆತ್ತಿನ ಬಾಲ ಹಿಡಿಯೋ ಚಾಳಿ ನಮ್ಮಲ್ಲಿ ಎಷ್ಟು ಆಳವಾಗಿ ಬೇರೂರಿದೆ ಅಂದ್ರೆ, ಸೋತವರು ತೀರಾ ನಿರ್ಲಕ್ಷ್ಯಕ್ಕೆ ತುತ್ತಾಗಿ ಬಿಡುತ್ತಾರೆ. ಗೆದ್ದವನು ಸೋತ, ಸೋತವನು ಸತ್ತ ಅನ್ನುವ ಮಾತಿನ ಹಾಗೆ ಅಥವಾ ಹೊಂಡಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು ಅನ್ನುವ ಮನೋಸ್ಥಿತಿ ನಮ್ಮೆಲ್ಲರಲ್ಲಿ ಮನೆಮಾಡಿರುವ ಕಾರಣ, ಗೆಲುವನ್ನು ಅತಿಯಾಗಿ ವೈಭವೀಕರಿಸುವ ಪ್ರವೃತ್ತಿ ಬೇರೂರಿಬಿಟ್ಟಿದೆ. ಇಂದಿನ ಫಾಸ್ಟ್ ಫಾರ್ವರ್ಡ್ ಯುಗದಲ್ಲಿ ನಿರಂತರವಾಗಿ ಗೆಲ್ಲುವುದು ಯಾರಿಗೆ ಮಾತ್ರ ಸಾಧ್ಯವೋ ಅವನೇ ನಿಜವಾದ ಹೀರೋ ಅನ್ನಿಸಿಕೊಂಡು ಸರ್ವರಿಂದ ಪ್ರಶಂಸೆ ಮನ್ನಣೆಗೆ ಪಾತ್ರನಾಗುತ್ತಾನೆ. ಇಂದು ಗೆದ್ದವನು ನಾಳೆ ಸೋತನೋ, ಈ ಸೋತ ಉತ್ಸವ ಮೂರ್ತಿಯನ್ನು ಅಲ್ಲೇ ವಿಸರ್ಜಿಸಿ ಗೆದ್ದವನ ಬೆನ್ನು ಹಿಡಿವ ಮನೋಭೂಮಿಕೆ ನಮ್ಮದು. ನಿನ್ನೆ ಗೆದ್ದು ಇಂದು ಸೋತವನು ತನ್ನ ಗೆಲುವು ಸಾಧಿಸಲು ಪಟ್ಟ ಪರಿಶ್ರಮ , ಅವನು ಕ್ರಮಿಸಿ ಬಂದ ಕ್ಲಿಷ್ಟಕರ ಹಾದಿ ಇವೆಲ್ಲಾ ನಗಣ್ಯವಾಗಿಬಿಟ್ಟು, ಇಂದು ಗೆದ್ದವನಿಗೆ ಜೈ ಜೈ ಎನ್ನುವವರೇ ಎಲ್ಲ. ಈ ಮಾತು ಎಲ್ಲ ರಂಗಕ್ಕೂ ಅನ್ವಯಿಸುತ್ತದೆ. ರೇಸಿನಲ್ಲಿ ಯಾವ ಕುದುರೆ ಗೆಲ್ಲುತ್ತದೋ ಅದರ ಬಾಲಕ್ಕೆ ದುಡ್ಡು ಕಟ್ಟುವ ಬಾಜಿಗಳಂತೆ ಗೆದ್ದವರಿಗಷ್ಟೇ ಮಣೆ-ಮನ್ನಣೆ. ಭಾಗವಹಿಸುವಿಕೆ ಮುಖ್ಯ ಗೆಲುವಲ್ಲ ಎಂದು ಸ್ಪರ್ಧಿಗಳನ್ನು ಹುರಿದುಂಬಿಸಲು ಹೇಳುವ ರೂಡಿ ಇದೆಯಾದರೂ, ಅದು ಕೇವಲ ಬಾಯುಪಚಾರದ ಕ್ಲೀಷೆ ಆಗಿ ಉಳಿದಿದೆ. 2 ಸರಣಿ ಸೋತಾಗ ಧೋನಿಯನ್ನು ಹಿಗ್ಗಾ-ಮುಗ್ಗಾ ಉಗಿದ ಮಾಧ್ಯಮಗಳೇ ಮತ್ತೆ ಧೋನಿ ಗೆಲುವಿನ ಹಾದಿ ತುಳಿದದ್ದೇ ತಡ ಹಾಡಿ ಹೊಗಳುತ್ತಿವೆ. ನನ್ನ ಅನುಮಾನ ಯಾ ಪ್ರಶ್ನೆ ಇಷ್ಟೇ. ಎಲ್ಲರೂ ಎಂದಿಗೂ ಗೆಲ್ಲುತ್ತಲೇ ಇರುವುದು ಕಷ್ಟಸಾಧ್ಯವಷ್ಟೇ? ಹಾಗಾಗಿ ಸದಾ ಗೆದ್ದೆತ್ತಿನ ಬಾಲ ಹಿಡಿಯುವ ಧೋರಣೆ ಎಷ್ಟು ಸರಿ? ಉಳಿದೆಲ್ಲ ಮಾತು ಅತ್ಲಾಗಿರಲಿ, ಇನ್ನೂ ಕೇಜಿ ಕ್ಲಾಸಿಗೆ ತೆರಳುವ ಮಕ್ಕಳಲ್ಲೂ ಕೂಡಾ ಪಕ್ಕದ ಮನೆಯ ಮಗುವಿಗಿಂತ ಜಾಸ್ತಿ ಅಂಕ ಪಡೆಯಬೇಕು ಅನ್ನುವ ಒತ್ತಾಯದ ಹೇರಿಕೆ ಮಾಡುವ ಮಟ್ಟಿಗೆ ನಮ್ಮ ಈ ಗೆಲುವಿನ ಹಪಾಹಪಿ ವ್ಯಾಪಿಸಿದೆ ಅಂದರೆ ಇದರ ಸೂಕ್ಷ್ಮದ ಅರ್ಥ ಆಗುತ್ತದೆ.

ರೇಸು ಕುದುರೆಗಳೇನೋ ಇರುವುದೇ ಓಡಲು. ಓಟವೇ ಅದರ ಸರ್ವಸ್ವ. ತೀರಾ ನಾವೂ ಕೂಡಾ ಈ ಪರಿಯ ರೇಸಿನಲ್ಲಿ ಗೆಲ್ಲಲೇಬೇಕೆಂಬ ತುಡಿತದಲ್ಲಿ ನಾವು ಕಳೆದು ಕೊಳ್ಳುವುದು ಜೀವನವನ್ನು ಆಸ್ವಾದಿಸುವ ಮಧುರ ಕ್ಷಣಗಳನ್ನು ಅನ್ನುವ ಪರಿಕಲ್ಪನೆ ನಮಗಿಲ್ಲವಾಗಿದೆ. ಇಂದು ಸೋತರೆ ಏನು? ನಾಳೆ ಎನ್ನುವುದು ಇದೆಯಲ್ಲ. ಗೆಲುವೆಂಬುದು ಯಾರಪ್ಪನ ಮನೆಯ ಗಂಟೂ ಅಲ್ಲವಲ್ಲ. ಇದನ್ನು ಅರ್ಥೈಸಿಕೊಂಡರೆ ವ್ಯರ್ಥವಾಗಿ ಪರಿತಪಿಸುವುದು ತಪ್ಪುತ್ತದೆ. ಗೆಲುವು ನೀಡುವ ಉನ್ಮಾದ, ಮನ್ನಣೆ, ಕೀರ್ತಿ ಇವುಗಳ ಕಲ್ಪನೆಯಲ್ಲಿ ನಮ್ಮ ಯಾನಿಮಿತ್ತ ಕರ್ಮಗಳ ಮರೆತು ನಾವು ಕಳೆದು ಹೋಗಬಾರದಷ್ಟೇ? ನಮ್ಮ ಪರಿಶ್ರಮ-ಪ್ರಯತ್ನದಲ್ಲಿ ನಮಗೆ ನಂಬಿಕೆಯಿದ್ದು, ಅದನ್ನು ನಿರಂತರವಾಗಿ ಕಾಪಿಟ್ಟುಕೊಂಡರೆ ಗೆಲುವು ಎಂದಿಗೂ ಮರೀಚಿಕೆಯಾಗದು.

ನಾನು ಹೋದರೆ ಹೋದೇನು ಅಂತ ಕನಕದಾಸರೇನೋ ಬಹಳ ಸುಲಭವಾಗಿ ಹೇಳಿದರು. ಆದರೆ ಈ ನಾನು ಎಂಬುದೇ ಇಲ್ಲವಾದರೆ ನನ್ನ ಅಸ್ತಿತ್ವವಾದರೂ ಏನು ಉಳಿಯುತ್ತೆ ಸ್ವಾಮಿ? ಮಹಾನ ಸಾಧಕರಿಗೆ, ತಪಸ್ವಿಗಳಿಗೆ, ಜಿತೇಂದ್ರಿಯರಿಗಷ್ಟೆ ಇದು ಸುಲಭಸಾಧ್ಯವೇನೊ. ನನ್ನ-ನಿಮ್ಮಂತ ಹುಲುಮಾನವರಿಗೆ ಕೊನೆಯ ಉಸಿರಿರುವ ತನಕ ಬಹುಶಃ ಈ ನಾನು, ನನ್ನದು ನಮ್ಮವರು ಎಂಬ ಮೋಹ, ಮಮಕಾರ ತಪ್ಪಿದ್ದಲ್ಲ ಅನ್ನಿಸುತ್ತದೆ. ಇದಕ್ಕೆ ನಿದರ್ಶನ ಹುಡುಕುವುದಕ್ಕೆ ತೀರಾ ದೂರವೇನು ಹೋಗಬೇಕಾಗಿಲ್ಲ. ಈಗ ನನ್ನದು ಎರಡು ಬ್ಲಾಗ್‌ಗಳಿವೆ. ಆದರೆ ಯಾರಾದ್ರೂ ಕುಂದಾಪ್ರ ಕನ್ನಡ ಬ್ಲಾಗ್ ನೋಡಿ ಮೆಚ್ಚುಗೆ ಹೇಳಿದ್ರೆ ಜಾಸ್ತಿ ಖುಷಿಯಾಗುತ್ತದೆ. ಯಾಕೆಂದರೆ ಅದು ನನ್ನ ಊರಿನ ಆಡುಭಾಷೆ. ವಿದೇಶಗಳಲ್ಲಿ ನೆಲೆಸಿರುವವರಿಗೆ ತಮ್ಮ ದೇಶದವರು, ರಾಜ್ಯದವರು, ಊರಿನವರು ಸಿಕ್ಕಿದರೆ, ಅವರ ಪರಿಚಯವೇ ಇಲ್ಲದಿದ್ದರೂ ಪರಿಚಯ ಮಾಡಿಕೊಂಡು ಸಂತೋಷದಿಂದ ಆದರಿಸುತ್ತಾರೆ. ಕಾರಣ ಇಷ್ಟೆ, ನಮ್ಮವರು ಅನ್ನುವ ಚುಂಬಕದ ಅಗೋಚರ ಸೆಳೆತ…. ಸ್ವಲ್ಪ ವಿಶಾಲ ಭಾವದಲ್ಲಿ. ನಮ್ಮ ದೇಶ, ನಮ್ಮ ಊರು, ನಮ್ಮ ಬಂಧುಗಳು, ನಮ್ಮ ಸ್ನೇಹಿತರು… ಇವರನ್ನೆಲ್ಲ ಕಂಡರೆ ಆತ್ಮೀಯತೆಯ ಸೆಲೆಯುಕ್ಕುತ್ತದೆ.( ಇವುಗಳ ಜೊತೆಗೆ ಸ್ವಲ್ಪ ಸಂಕುಚಿತ ಅನ್ನಿಸಿದರೂ ನಮ್ಮ ಜಾತಿ ಧರ್ಮ ಅಂತ ಪ್ರೀತಿ ತೋರಿಸೂವವರೂ ಇದ್ದಾರೆ….ಆ ವಿಷಯ ಒತ್ತಟ್ಟಿಗಿರಲಿ ಬಿಡಿ). ವಿಷಯಾಂತರವಾಯ್ತು ಅನ್ನಿಸುತ್ತೆ.

 

ನಾನು ನನ್ನ ಬೆಸ್ಟ್ ಫ್ರೆಂಡ್ ಅಂತ ಹೇಳಿದೆನಾದರೂ, ವಾಸ್ತವದಲ್ಲಿ ಇದು ಪ್ರತಿಯೊಬ್ಬರಿಗೂ ಅನ್ವಯಿಸುವ ತತ್ವ. ನನ್ನ ಇಷ್ಟಾನಿಷ್ಟ, ಗುಣಾವಗುಣ, ನನ್ನ ಮನೋಭಾವ-ಸ್ವಭಾವ, ನನ್ನ ಮೇಲರಿಮೆ-ಕೀಳರಿಮೆ, ನನ್ನ ಬಲಹೀನತೆ-ಸಾಮರ್ಥ್ಯ…ಇವೆಲ್ಲದರ ಬಗ್ಗೆ ನನಗಲ್ಲದೆ ಇನ್ಯಾರಿಗೆ ತಾನೆ ಜಾಸ್ತಿ ಗೊತ್ತಿರಲು ಸಾಧ್ಯ? ತೆರೆದ ಪುಸ್ತಕದಂತೆ ನನ್ನ ಸ್ವಭಾವ ಅಂತ ಯಾರು ಎಷ್ಟೇ ಹೇಳಿದರೂ…ಅದನ್ನು ಓದುವವರು ತಪ್ಪಾಗಿ ಅರ್ಥೈಸಿಕೊಂಡಿರಬಹುದಲ್ಲ. ಅದೂ ಅಲ್ಲದೆ ಕೆಲವಾದರೂ ತೀರಾ ಖಾಸ್‌ಬಾತ್ ಅನ್ನಿಸುವ ವಿಷಯಗಳು ಇದ್ದೇ ಇರುತ್ತವೆ. ನಮ್ಮ ದುಃಖ ಹೇಳಿಕೊಂಡರೆ ಹಗುರಾಗುತ್ತದೆ ಅನ್ನುವ ಮಾತಿದೆಯಾದರೂ ಎಲ್ಲವನ್ನೂ ಹೇಳಿಕೊಳ್ಳಲು ಆಗದು ತಾನೆ? ಅಂತೆಯೆ ತೀರಾ ಖಾಸಗಿ ಅನ್ನಿಸುವ ಕೆಲವು ಖುಷಿಗಳೂ. ಹಾಗಾಗಿಯೇ ನನಗಿಂತ ಚೆನ್ನಾಗಿ ನನ್ನನ್ನು ಅರ್ಥಮಾಡಿಕೊಂಡವರು ಈ ಜಗತ್ತಿನಲ್ಲಿ ಬೇರೆ ಯಾರೂ ಇರಲು ಅಸಾಧ್ಯ.

 

ಎಷ್ಟೋ ಸಂದರ್ಭಗಳಲ್ಲಿ ನಾವು ನಮ್ಮ ಕುರಿತಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸ್ನೇಹಿತರ ಬಳಿ, ಬಂಧುಗಳ ಜೊತೆಗೆ ವಿಚಾರ ವಿನಿಮಯ ನಡೆಸುತ್ತೇವೆ. ಅವರ ಸಲಹೆ ಪಡೆಯುತ್ತೇವೆ. ಬೇರೆಯದೇ ಆದ ಒಂದು ದೃಷ್ಟಿಕೋನದಿಂದ ಯೋಚಿಸಬೇಕಾದ ಅಗತ್ಯವಿರುವ ವೇಳೆ ಈ ರೀತಿ ಮಾಡುವುದು ತಪ್ಪೇನಲ್ಲ. ಅವರ ಸಲಹೆ ಸೂಚನೆ ನಮಗೆ ಕೆಲಸಕ್ಕೆ ಬರಲೂಬಹುದು. ಆದರೆ ಇದು ಬರೀ ಸಲಹೆ ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಿರಲಿ. ಅಂತಿಮ ತೀರ್ಮಾನ ಯಾವತ್ತಿಗಿದ್ದರೂ ನಮ್ಮದೇ ಆಗಿರಬೇಕು. ಮನಸಿನ ಮಾತಿಗೇ ಮೊದಲ ಮರ್ಯಾದೆ-ಪ್ರಾಶಸ್ತ್ಯ ಸಲ್ಲಬೇಕು. ವಿಷಯ ತೀರಾ ವೈಯುಕ್ತಿಕವಾದರೆ ಮನಸಿನ ಮಾತನ್ನಲ್ಲದೆ ಇನ್ಯಾರ ಮಾತೂ ಕೇಳಬೇಡಿ. ಆದರೆ ಸಾಕಷ್ಟು ಯೋಚಿಸಿ ಸರಿ-ತಪ್ಪುಗಳನ್ನು ವಿವೇಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೆ ಮಾಡುವುದರಿಂದ ನಿಮಗೆ ನಿಮ್ಮ ಮೇಲೆ, ನಿಮ್ಮ ಸಾಮರ್ಥ್ಯದ ಮೇಲೆ ಇರುವ ವಿಶ್ವಾಸ-ನಂಬಿಕೆಗಳು ವರ್ಧಿಸುತ್ತವೆ.

 

ಕೆಲವೊಂದು ಸಂದರ್ಭಗಳಿರುತ್ತವೆ. ಯಾವುದೋ ಒಂದು ವಿಷಯದ ಬಗ್ಗೆ ನೀವು ತೆಗೆದುಕೊಳ್ಳುವ ತೀರ್ಮಾನ ಕೇವಲ ನಿಮಗಷ್ಟೇ ಸಂಬಂಧಿಸಿರದೆ, ಅನ್ಯರ ಮೇಲೂ ಪರಿಣಾಮ ಬೀರುವಂತದ್ದಾಗಿರಬಹುದು. ಅಂತಹ ವೇಳೆ ಸ್ನೇಹಿತರ ಹಿತೈಷಿಗಳ ಮಾತು ಕೇಳಿ ಅಭಿಪ್ರಾಯ ತಿಳಿದುಕೊಳ್ಳುವುದು ಅನಿವಾರ್ಯವೆನಿಸುತ್ತದೆ. ಇದಕ್ಕೊಂದು ಸಣ್ಣ ಉದಾಹರಣೆ ಕೊಡುವುದಿದ್ರೆ ಇತೀಚೆಗೆ ನಾನೊಂದು ಲೇಖನ ಬರೆದಿದ್ದೆ. ಅದರಲ್ಲಿ ಅನ್ಯರ ಪ್ರಸ್ತಾಪ ಬರುವ ಕಾರಣ ಸ್ವಲ್ಪ ವಿವಾದ ಹುಟ್ಟುಹಾಕುವ ಸಾಧ್ಯತೆಗಳಿದ್ದವು. ಹಾಗಾಗಿ ಸ್ನೇಹಿತ ವಿಕಾಸನ ಜೊತೆ ಸಮಾಲೋಚಿಸಿ ನಿರ್ಧಾರಕ್ಕೆ ಬಂದೆ. ಇಲ್ಲಿ ಬರೀ ನನ್ನ ಮನಸಿನ ಮಾತು ಕೇಳಿದ್ರೆ ಫಚೀತಿಗಿಟ್ಟುಕೊಳ್ಳುವ ಸಾಧ್ಯತೆಗಳಿದ್ದವು.

 

ಮಿಕ್ಕಂತೆ ನಿಮ್ಮ ಕುರಿತಾದ ಎಲ್ಲ ಪ್ರಮುಖ ನಿರ್ಧಾರಗಳೂ ನಿಮ್ಮದೇ ಆಗಿರಲಿ. ನಿಮಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ಗೆರೆಯೆಳೆದು ನಿರ್ಧರಿಸಲು ನಿಮ್ಮ ಮನಸ್ಸಿಗಿಂತಒಳ್ಳೆಯ ಸ್ನೇಹಿತ ಬೇಕೆ? ಹಾಗಾಗಿಯೇ ಎಷ್ಟೇ ಮಂದಿ ಸ್ನೇಹಿತರು ಇದ್ದರೂ, ಅವರ ಸಲಹೆ ಪಡೆದರೂ ನಿರ್ಧಾರ ಯಾವತ್ತಿಗೂ ನನ್ನದೇ. ನನ್ನ ಬೆಸ್ಟ್ ಫ್ರೆಂಡ್ ನಾನೇ J

ಕೊಚ್ಚಿಗೆ ಅಕ್ಕಿಯ ಗಂಜಿ ( boiled rice), ಮೇಲೊಂದೆರಡು ಚಮಚ ತುಪ್ಪ, ಇದರೊಟ್ಟಿಗೆ ಪರಿಮಳಕ್ಕೇ ನಾಲ್ಕು ತುತ್ತು ಹೆಚ್ಚು ಹೊಟ್ಟೆ ಸೇರುವಂತೆ ಮಾಡುವ ತಾಕತ್ತಿರೋ ಮಿಡಿ ಉಪ್ಪಿನಕಾಯಿ. ವಾಹ್ ! ಕ್ಯಾ ಸ್ವಾದ್ ಹೈ. ಸವಿದವನೇ ಬಲ್ಲ ಅದರ ಸವಿಯ. ಇಂಥಾ ಗಂಜಿಯೂಟವನ್ನು ಯಾವತ್ತಾದ್ರೂ ಮಾಡಿದ್ದೀರಾ? ನೀವು ಕುಂದಾಪ್ರ, ಉಡುಪಿ, ಮಂಗ್ಳೂರು ಕಡೆಯವರಾದ್ರೆ ನಿಮ್ಗೆ ಈ ರುಚಿ ಗೊತ್ತೇ ಇರುತ್ತೆ. ನಾನು ಶಾಲೆಗೆ ಹೋಗೋ ಸಮಯದಲ್ಲಿ ಆಗೆಲ್ಲ ನಮ್ಮ ಕಡೆ ಬಹುತೇಕರ ಮನೆಗಳಲ್ಲಿ ಬೆಳಗಿನ ಉಪಹಾರ ಅಂದ್ರೆ ಇದೇ ಗಂಜಿಯೂಟ. ಬೆಳಗಿನ ಧಾವಂತದಲ್ಲಿ ತಿಂಡಿಯನ್ನೆಲ್ಲಾ ಹಮ್ಮಿಸಿಕೊಂಡು ಕೂತ್ರೆ ಮಾಡಿ ಪೂರೈಸೋದು ಕಷ್ಟವಾದ್ದರಿಂದ ಶಾಲೆ ಇರುವ ದಿನಗಳಲ್ಲಂತೂ ಇದೊಂತರಾ ಡಿಫಾಲ್ಟ್ ಬೆಳಗಿನ ತಿಂಡಿ.

 

ಮೊನ್ನೆ ಊರಿಗೆ ಹೋಗಿದ್ದಾಗ ಬೆಳಗಿನ ತಿಂಡಿಗೆ ಗಂಜಿ ಮಾಡಿದ್ರು. ಬಹುಕಾಲದ ನಂತರ ಗಂಜಿಯೂಟ ಮಾಡೋದು ಅಂತ ಬಟ್ಟಲಿನ ತುಂಬಾ ಗಂಜಿ ಹಾಕಿಸ್ಕೊಂಡು ಕೂತೆ. ಎರಡು-ಮೂರು ತುತ್ತು ತಿನ್ನುವಷ್ಟರಲ್ಲೇ ಗಂಜಿ ಯಾಕೋ ಗಂಟಲಲ್ಲಿಳಿಯಲು ತಕರಾರು ಮಾಡೋಕೆ ಶುರುವಿಟ್ಟುಕೊಂಡಿತು. ಹಿಂದೆಲ್ಲಾ ಚಪ್ಪರಿಸುತ್ತಾ ಕಬಳಿಸುತ್ತಿದ್ದ ಈ ಗಂಜಿಯೂಟ ಯಾಕೋ ಹಿಡಿಸಲೇ ಇಲ್ಲ. ಸುಮಾರು ವರ್ಷಗಳಿಂದ ಬೆಂಗಳೂರಿನ ಬೆಳ್ತಿಗೆ ಅಕ್ಕಿ ಅನ್ನ ಉಂಡ ನಾಲಿಗೆ ಗಂಜಿಯ ರುಚಿ ಮರೆತಿತ್ತಾ..? ಗೊತ್ತಿಲ್ಲ. ಅಷ್ಟು ಇಷ್ಟಪಟ್ಟು ಉಣ್ಣುತ್ತಿದ್ದ ಗಂಜಿಯ ರುಚಿಯೇನೂ ಬದಲಾಗಿರಲಿಕ್ಕಿಲ್ಲ. ಬದಲಾಗಿದ್ದು ಬೇರೆ ರುಚಿಗೆ ಒಗ್ಗಿಹೋದ ನನ್ನ ನಾಲಿಗೆ.

 

ಬದಲಾವಣೆಗಳಿಗೆ ನಾವು ಎಷ್ಟು ಬೇಗ ಹೊಂದಿಕೊಂಡು ಬಿಡುತ್ತೇವೆ ಅಲ್ವಾ? ಬೆಂಗಳೂರಿಗೆ ಬಂದಾಗ ಮೊದಮೊದಲು ಬೆಳ್ತಿಗೆ ಅಕ್ಕಿಯ ಅನ್ನ ನಾಲಿಗೆಯ ಪಾಲಿಗೆ ದೂರದ ನೆಂಟನಂತೆ ಇತ್ತು. ಆಮೇಲಾಮೇಲೆ ಅದು ರೂಢಿಯಾಗುತ್ತಾ ಬಂದು, ಈಗ ಹುಟ್ಟಿನಿಂದಲೇ ಬೆಳ್ತಿಗೆ ಅಕ್ಕಿಯ ಅನ್ನವನ್ನು ತಿನ್ನುತ್ತಿದ್ದೇನೋ ಅನ್ನಿಸುವಷ್ಟು ಸಹಜವಾಗಿ ಸೇರುತ್ತೆ. ಊರುಬಿಟ್ಟು ಬೆಂಗಳೂರಿಗೆ ಬರುವಾಗಲೂ ಕೂಡಾ ಹಾಗೇ ಅನ್ನಿಸಿತ್ತು. ಕಾಡಿನೂರಿನಿಂದ ಬಂದು ಈ ಕಾಂಕ್ರೀಟ್ ಕಾಡಿನಲ್ಲಿ ಇರೋದು ಹೇಗಪ್ಪಾ ಅನ್ನುವ ದಿಗಿಲು ಮನೆಮಾಡಿತ್ತು. ಈಗ ನಿಧಾನವಾಗಿಯಾದರೂ ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರ, ಚಾಮರಾಜಪೇಟೆ, ಗಾಂಧಿಬಜಾರು ಎಲ್ಲಾ ನಮ್ಮೂರೇ ಅನ್ನಿಸತೊಡಗಿರುವುದೂ ಸುಳ್ಳಲ್ಲ. ಇಲ್ಲಿನ ಬೆರಕೆ ಕನ್ನಡ, ಟ್ರಾಫಿಕ್ ಜಾಮು, ಅಕಾಲಿಕ ಮಳೆ, ಸದಾಕಾಲದ ಚಳಿ ಎಲ್ಲಾನೂ ರೂಢಿಯಾಗಿದೆ.

 

ನಮ್ಮ ಬದುಕಿನಲ್ಲಿ ತೀರಾ ಆತ್ಮೀಯರಾಗಿದ್ದವರು ಇಲ್ಲವಾದಾಗ, ಇಲ್ಲವೇ ದೂರಾದಾಗಲೂ ಕೂಡಾ ಶುರುವಿಗೆ ಅವರಿಲ್ಲದೆ ಹೇಗಪ್ಪಾ ಬದುಕೋದು ಅನ್ನಿಸಬಹುದು. ಏನೋ ಕಳಕೊಂಡಂತಾ ಖಾಲಿತನ, ಶೂನ್ಯಭಾವ ಕಾಡತೊಡಗಿ ಬದುಕು ಭಣಭಣ ಅನ್ನಿಸಲೂಬಹುದು. ಕ್ರಮೇಣ ನಿತ್ಯದ ಜಂಜಾಟಗಳಲ್ಲಿ ವ್ಯಸ್ತರಾಗುತ್ತಾ, ಇಲ್ಲಾ ನಮೆ ಖುಷಿ ಕೊಡುವ ಬೇರಿನ್ಯಾವುದೇ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಾ ಬಂದಂತೆಲ್ಲಾ ಮನಸ್ಸು ಬದಲಾವಣೆಗೆ ಒಗ್ಗಿಕೊಳ್ಳಲಾರಂಭಿಸುತ್ತದೆ. ಅವರಿಲ್ಲದೇ ಬದುಕುವುದು ಅಭ್ಯಾಸವಾಗುತ್ತದೆ. ಕೊಚ್ಚಕ್ಕಿ ಗಂಜಿ ರುಚಿಸಿದ ನಾಲಿಗೆಗೆ ಬೆಳ್ತಿಗೆ ಅಕ್ಕಿಯ ಅನ್ನ ಹೇಗೆ ರುಚಿಸುತ್ತೋ ಥೇಟ್ ಹಾಗೆಯೇ.  ಆದರೂ… ಗಂಜಿಯೂಟ ಸೇರದೇ ಇದ್ದದ್ದು ಮಾತ್ರ ಬಾಳ ಬೇಜಾರ್ರೀ.. 🙂 ಯಾಕಂತ ನಿಮ್ಗೇನಾದ್ರೂ ಗೊತ್ತಾ?

ಮೊನ್ನಿನ ಕರಾಳ ಶುಕ್ರವಾರದ ಘಟನೆಯ ಸುದ್ದಿ ಮಧ್ಯಾಹ್ನ ಮೂರು ಗಂಟೆಯ ಸುರುವಿಗೆ ಒಂದೊಂದಾಗಿ ಕಿವಿಯ ಮೇಲೆ ಬಂದು ಬೀಳಲಾರಂಭಿಸಿತ್ತು. ಆರು ಕಡೆ ಬಾಂಬ್ ಸ್ಫೋಟ ಅಂತೆ..ಅಲ್ಲಲ್ಲ ಎಂಟು ಕಡೆ ಅಂತೆ, ಐವತ್ತು ಜನ ಸತ್ತರಂತೆ, ನೂರಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆಯಂತೆ, ಜನರನ್ನು ಮೂಟೆಯಂತೆ ಹೊತ್ತು ಆಸ್ಪತ್ರೆಗೆ ಹಾಕ್ತಾ ಇದ್ದಾರಂತೆ, ಗರುಡಾ ಮಾಲ್‌ನಲ್ಲಿ ಮೊದಲು ಸ್ಫೋಟ ಆಯ್ತಂತೆ, ಶಿವಾಜಿನಗರದಲ್ಲೂ ಬಾಂಬ್ ಅಂತೆ..ಹೀಗೆ ರೆಕ್ಕೆ-ಪುಕ್ಕ ಕೂಡಿಸಿಕೊಂಡ ಸುದ್ದಿಗಳು ಸಾಲುಸಾಲಾಗಿ ಕಿವಿಯ ಮೇಲೆ ಬಂದು ಅಪ್ಪಳಿಸುತ್ತಿತ್ತು. ಎಲ್ಲರಲ್ಲೂ ಆತಂಕದ ಛಾಯೆ ಕವಿಯತೊಡಗಿತ್ತು. ಪುಣ್ಯಕ್ಕೆ ಟೆಲಿಫೋನ್ ನೆಟ್‌ವರ್ಕ್‌ಗಳೆಲ್ಲಾ ಜಾಮ್ ಆಗಿ ಬಿಟ್ವು. ಇಲ್ಲಾಂದ್ರೆ ಈ ಸುದ್ದಿಗಳು ಇನ್ಯಾವ ರೂಪ ತಳೆಯುತ್ತಿದ್ದವೋ ಏನೋ. ಕೊನೆಗೆ ಮನೆಗೆ ಬಂದು ಟಿ.ವಿ. ನೋಡಿದ ಮೇಲಷ್ಟೇ ಘಟನೆಯ ವಾಸ್ತವದ ಚಿತ್ರಣ ಸಿಗಲಾರಂಭಿಸಿದ್ದು.

 

ಆಗ ಅನ್ನಿಸಿದ್ದೆಂದರೆ.. ನಡೆದ ಈ ಬಾಂಬ್ ಸ್ಫೋಟದ ದುರ್ಘಟನೆಗಿಂತಲೂ ಈ ರೀತಿಯ ಸುಳ್ಳು ಸುದ್ದಿ ಅರ್ಥಾತ್ ವದಂತಿಗಳನ್ನು ಹಬ್ಬಿಸುವವರೇ ಹೆಚ್ಚು ಅಪಾಯಕಾರಿ ಅಂತ. ನಡೆದಿದ್ದನ್ನು ಅತಿರಂಜಿತವಾಗಿ, ಉತ್ಪ್ರೇಕ್ಷೆಯಿಂದ ಹೇಳದಿದ್ದರೆ ಕೆಲವರಿಗೆ ತಿಂದ ಅನ್ನ ಜೀರ್ಣವಾಗೊಲ್ಲ. ಇಂತಹ ಚಾಳಿಯ ನಾಲ್ಕು ಮಂದಿಯ ಬಾಯಿ ದಾಟಿ ಬರುವಾಗ ಸುದ್ದಿಯೊಂದು ಅದರ ಹತ್ತು ಪಟ್ಟು ಉತ್ಪ್ರೇಕ್ಷಿತವಾಗಿ ಅನಗತ್ಯ ಗಾಬರಿ ಗೊಂದಲಗಳಿಗೆ ದಾರಿ ಮಾಡಿಕೊಡುತ್ತದೆ. ಈ ಸುದ್ದಿ ಕೇಳಿ ತಳಮಳಕ್ಕೊಳಗಾಗಿ ಚಡಪಡಿಸುವವರ ಮಾನಸಿಕ ಕ್ಷೋಭೆಯ ಅರಿವು ಈ ತಿಳಿಗೇಡಿಗಳಿಗೆಲ್ಲಿಂದ ಬರಬೇಕು…ಸ್ವತಃ ತಮಗೇ ಆ ರೀತಿಯ ಅನುಭವವಾಗುವವರೆಗೆ.

 

ಈ ರೀತಿಯ ಅತಿರಂಜಕತೆಯನ್ನು ಹಬ್ಬಿಸೋದರಲ್ಲಿಯೇ ಖುಷಿಪಡುವ ಮನಸ್ಥಿತಿಯವರು ಎಲ್ಲೆಲ್ಲೂ ತುಂಬಿದ್ದಾರೆ. ಒಂದು ಅಪಘಾತ ಸಂಭವಿಸಿತು ಅಂತಾದ್ರೆ ಇಂತಹವರು ಕೇಳೋ ಮೊದಲನೇ ಪ್ರಶ್ನೆ ಅಂದ್ರೆ ಎಷ್ಟು ಜನ ಸತ್ರು , ಸ್ಪಾಟಾ? ಅಂತೆಲ್ಲಾ ಸುದ್ದಿ ಕೇಳಿ, ಅದಕ್ಕೆ ಮಸಾಲೆ ಬೆರೆಸಿ ಇನ್ನೊಬ್ಬರ ಕಿವಿಗೆ ದಾಟಿಸಿ ತಮ್ಮ ಬಾಯಿ ಚಪಲ ತೀರಿಸಿಕೊಳ್ಲುತ್ತಾರೆ. ಇಂತಹುದೇ ಪ್ರಸಂಗವೊಂದರಲ್ಲಿ ಜನರು ಹೇಗೆಲ್ಲಾ ವರ್ತಿಸುತ್ತಾರೆ, ಅವರ ಮಾತುಕತೆ, ಮನಸ್ಥಿತಿ ಇವೆಲ್ಲವನ್ನು ವೈದೇಹಿಯವರು ತಮ್ಮ ಬರಹವೊಂದರಲ್ಲಿ ಚಿತ್ರಿಸಿದ್ದಾರೆ.

 

ಅದಕ್ಕೇ ಹೇಳಿದ್ದು.. ಸಿಡಿದ ಬಾಂಬಿಗಿಂತಲೂ ಇಂತಹ ವದಂತಿವೀರರು ಹೆಚ್ಚು ಅಪಾಯಕಾರಿ ಅಂತ. ಅವರು ತಮ್ಮ ಕಲ್ಪನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟೆಲ್ಲಾ ಭೀಕರತೆಯನ್ನು ಕಲ್ಪಿಸಿಕೊಂಡು, ಸುದ್ದಿ ಹರಡಿಸಿ ಮಜ ನೋಡುತ್ತಾರೆ. ಇದರಿಂದಾಗಿ ಅನಾವಶ್ಯಕವಾಗಿ ಭೀತಿಯು ಜನರ ಮನಸ್ಸಿನಲ್ಲಿ ಆತಂಕ ಹುಟ್ಟಿಸುತ್ತದೆ. ಅದರಲ್ಲೂ ಮೊನ್ನಿನ ತರಹದ ಘಟನೆಗಳಾದಾಗ ಆತಂಕದಿಂದಾಗಬಹುದಾದ ಅನಾಹುತ, ತೊಂದರೆ, ಗೊಂದಲಗಳು ಇನ್ನೂ ಹೆಚ್ಚು. ಹೆದರಿದವನು ಹಗ್ಗವನ್ನೇ ಹಾವೆಂದು ಭ್ರಮಿಸುವ ತೊಂದರೆಗೀಡಾಗುವ ಸಾಧ್ಯತೆಯನ್ನು ಸೃಷ್ಟಿಸುವ ಇಂತಹ ವದಂತಿಗಳು ನಿಜಕ್ಕೂ ತುಂಬಾ ಅಪಾಯ ತಂದೊಡ್ಡಬಹುದು.

 

ಈ ಪ್ರವೃತ್ತಿಗೆ ಇಂಬು ಕೊಡುವಂತೆ ಇವೆ ನಮ್ಮ ದೃಶ್ಯಮಾಧ್ಯಮಗಳು..ನ್ಯೂಸ್ ಚಾನೆಲ್‌ಗಳು. ಎಲ್ಲರಿಗಿಂತ ಮೊದಲು ಸುದ್ದಿ ನೀಡುವ ಹಪಹಪಿಯಲ್ಲಿ ಒಂದು ಸುದ್ದಿ ಬಂದಾಕ್ಷಣ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೇ ಹೋಗದೆ, ಸು…ಅಂದ್ರೆ ಸುಕ್ಕಿನುಂಡೆ ಅನ್ನೊ ರೀತಿಯಲ್ಲಿ ವ್ಯವಹರಿಸುವ ಇವರ ಫ್ಲಾಶ್ ನ್ಯೂಸ್‌ಗಳು, ಬ್ರೇಕಿಂಗ್ ನ್ಯೂಸ್‌ಗಳು ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಲು ತಮ್ಮ ಪಾಲಿನ ದೇಣಿಗೆ ನೀಡುತ್ತವೆ. ಇದಕ್ಕೆ ಉದಾಹರಣೆಯಾಗಿ ಪದ್ಮಪ್ರಿಯಾ ಪ್ರಕರಣವೇ ನಮ್ಮ ಕಣ್ಣೆದುರು ಇದೆ. ಈ ಘಟನೆಯಿಂದ ಪಾಠ ಕಲಿತದ್ದಕ್ಕೋ ಏನೋ..ಮೊನ್ನೆ ಶುಕ್ರವಾರ ಸುದ್ದಿಯನ್ನು ಅತಿರಂಜಕವಾಗಿಸುವ ಧಾವಂತವನ್ನು ನ್ಯೂಸ್ ಚಾನೆಲ್‌ಗಳು ತೋರಲಿಲ್ಲ ಅನ್ನುವುದೊಂದು ಸಮಾಧಾನ.

 

ವದಂತಿಗಳು ಉಂತುಮಾಡುವ ಮಾನಸಿಕ ಕ್ಷೋಭೆಯನ್ನು ಪಕ್ಕಕ್ಕಿಟ್ಟು ನೋಡಿದರೂ ಕೂಡಾ ಅವುಗಳು ಸೃಷ್ಟಿಸುವ ಗೊಂದಲದ ಪರಿಣಾಮವನ್ನು ಅಲಕ್ಷಿಸಲಾಗದು. ಪೋಲಿಸರಲ್ಲಿ, ಬಾಂಬ್ ನಿಷ್ಕ್ರಿಯ ದಳದವರಲ್ಲಿ ಈ ಸುಳ್ಳು/ಉತ್ಪ್ರೇಕ್ಷಿತ ಸುದ್ದಿ ಅನಗತ್ಯ ಗಲಿಬಿಲಿ ಸೃಷ್ಟಿಸಿ, ಸಮಾಜ ಘಾತುಕರಿಗೆ ಅನುಕೂಲ ಮಾಡಿಕೊಡುತ್ತವೆ, ಹಾಗಾಗಿ ಸುದ್ದಿ ಯಾವುದೇ ಇರಲಿ, ಅದರ ವಿಶ್ವಾಸಾರ್ಹತೆಯನ್ನು ನಾಲ್ಕು ಬಾರಿ ದೃಢಪಡಿಸಿಕೊಳ್ಳದೆ ಅದನ್ನು ಯಾರಿಗೂ ಹೇಳಲು ಹೋಗಬೇಡಿ. ನೀವು ಅದನ್ನು ಉತ್ಪ್ರೇಕ್ಷೆ ಮಾಡದೇ ಇರುವ ಸಭ್ಯರೇ ಇರಬಹುದು..ಆದರೆ ನಿಮಗೆ ಸುದ್ದಿ ಹೇಳಿದವರು..ಇಲ್ಲಾ ಅವರಿಗೆ ಸುದ್ದಿ ತಿಳಿಸಿದವರು ಅಂತವರಲ್ಲ ಅನ್ನೋದಕ್ಕೆ ಏನು ಖಾತ್ರಿ?

 

 

ಇದಕ್ಕೆ ಹೇಗೆ ಪ್ರತಿಕ್ರಿಯೆ ತೋರಬೇಕೋ ಗೊತ್ತಾಗುತ್ತಾ ಇಲ್ಲ. ಅದೂ ಈ ಮಾತು ಬಂದಿದ್ದು ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಕರೆಯಿಸಿಕೊಳ್ಳುವ ವಿಜಯಕರ್ನಾಟಕದಲ್ಲಿ. ಇವತ್ತಿನ ವಿಜಯ ಕರ್ನಾಟಕದ ಜ್ಯೋತಿಷ್ಯ ವಿಜಯದಲ್ಲಿ ಪ್ರಕಟವಾದದ್ದು ಇದು. ಆತ್ಮಹತ್ಯೆಗೆ ಆ ವ್ಯಕ್ತಿಯ ಪೂರ್ವಜನ್ಮಾದಿ ಕರ್ಮಗಳೇ ಕಾರಣ. ಗುರುಹಿರಿಯರ ನಿಂದನೆ, ಮಾತಪಿತೃಗಳನ್ನು ಹಿಂಸಿಸಿರುವುದು, ಪತಿ-ಪತ್ನಿಯಲ್ಲಿ ವಿರಸ ಮೂಡಿಸಿರುವುದು, ಮೂಕಪ್ರಾಣಿಗಳಿಗೆ ಹಿಂಸೆ ನೀಡಿರುವುದು, ಮೋಸಮಾಡಿ ಮಾನಸಿಕ ಹಿಂಸೆ ನೀಡಿದ ದೋಷಗಳು ಈ ಜನ್ಮದಲ್ಲಿ ಆತ್ಮಹತ್ಯೆಗೆ ಪ್ರೇರಕವಾಗುತ್ತವೆ ಅನ್ನುತ್ತೆ ಈ ಲೇಖನ.

 

ಇಂತಹ ಲೇಖನ ಬರೆದವರ ವಿಷಯ ಬಿಟ್ಟುಬಿಡಿ. ಅವರರವರ ಅಭಿಪ್ರಾಯ ಅದು. ಹಾಗಂತ ಅದನ್ನು ಯಥಾವತ್ತಾಗಿ ಪ್ರಕಟಿಸಿದ ನಮ್ಮ ಹೆಮ್ಮೆಯ ಪತ್ರಿಕೆ ಬಗ್ಗೆ ಏನನ್ನೋಣ ಸ್ವಾಮಿ! ಸರ್ಕಾರದವರು ರೈತರ ನೆರವಿಗೆ ಹೋಗೋದು ಕೂಡಾ ಬೇಡ ಅನ್ಸುತ್ತೆ. ಯಾಕಂದ್ರೆ ಸಾಯೋದು ಅವರ ಪೂರ್ವಜನ್ಮದ ಕರ್ಮಫಲ ಅಂತಾದ್ಮೇಲೆ ಕರ್ಮಫಲ ತಪ್ಪಿಸೋಕಾಗುತ್ತಾ!!

 

ಇಂತಹ ಲೇಖನಗಳನ್ನು ಪ್ರಕಟಿಸುವ ಹಕ್ಕು, ಅಧಿಕಾರ ನಿಮ್ಮ ಯಾವುದೋ ಜನ್ಮದ ಸುಕೃತದ ಫಲವೇ ಇರಬಹುದೋ ಏನೋ, ಆದರೆ ಮೌಢ್ಯದ ಪರಮಾವಧಿಯಂತಹ ಇಂತಹ ವಿಚಾರಧಾರೆಯೆ ಲೇಖನ ಓದುವ ಕರ್ಮ ನಮ್ಮ ಯಾವ ಜನ್ಮದ ಪಾಪ ಶೇಷದ ಫಲ ಅಂತ ಹೇಳ್ತೀರಾ?