Posts Tagged ‘ವಿಚಾರ’

 

ನಿಮಗೆಂದಾದರೂ ಈ ರೀತಿಯ ಅನುಭವವಾಗಿದೆಯೇ? ಯಾರನ್ನೋ ಬಹುಕಾಲದ ನಂತರ ಭೇಟಿಯಾಗೋದು ಅಂತ ನಿಶ್ಚಯವಾಗಿರುತ್ತೆ. ಅವರಿನ್ನೇನು ನಾಳೆ ಬರಬಹುದು ಅನ್ನೋ ಹೊತ್ತಿಗಾಗಲೇ ಮನಸ್ಸಿನಲ್ಲಿ ಕಾತುರ, ಸಡಗರ-ಸಂಭ್ರಮ. ಆದರೆ ಆ ನಾಳೆ ಬಂದಾಗ, ಅವರನ್ನು ಭೇಟಿ ಆದಾಗ ಮನಸ್ಸು ಸಂತೋಷದಲ್ಲಿ ಇದ್ದರೂ ಕೂಡಾ ಏನೋ ಅಷ್ಟು ಖುಶಿಯಾಗಲಿಲ್ಲಪ್ಪ ಅಂತ ಒಳಮನಸು ಯಾಕೋ ಪಿಸುಗುಟ್ಟಿದಂತಾಗುತ್ತದೆ. ಬಹು ಆಸೆಯಿಂದ ಕೊಂಡು ತಂದ ವಸ್ತು-ವಡವೆ, ಆಸೆಪಟ್ಟು ಆರ್ಡರ್ ಮಾಡಿದ ಐಸ್‌ಕ್ರೀಂ, ಕಾದು ಬ್ಲ್ಯಾಕ್‌ನಲ್ಲಿ ಟಿಕೇಟ್ ಕೊಂಡು ನೋಡಿದ ಸಿನೆಮಾ… ಹೀಗೆ ಯಾವುದು ಬೇಕಿದ್ರೂ ಆಗಬಹುದು. ನಾವು ಅದರ ನಿರೀಕ್ಷೆಯಲ್ಲಿ ಕಂಡ ಸುಖ, ತೃಪ್ತಿಗಳು, ಅದು ದಕ್ಕಿದಾಗ ಸಿಗದೇ ಹೋಗಬಹುದು. ಒಮ್ಮೊಮ್ಮೆ ನಮ್ಮ ನಿರೀಕ್ಷೆಯಲ್ಲಿ ಇದ್ದ ಕಲ್ಪನೆಗೂ, ವಾಸ್ತವದಲ್ಲಿ ಇರುವುದೋ ಇಲ್ಲಾ ಘಟಿಸುವುದಕ್ಕೋ ವ್ಯತ್ಯಾಸ ಇದ್ದಾಗ ಹೀಗಾಗುತ್ತದೆ. ಆದರೆ ಎಷ್ಟೋ ಸಾರಿ ಯಾವ ಕಾರಣವೂ ಇಲ್ಲದೆ ಈ ಅತೃಪ್ತಿ ಹೆಡೆಯೆತ್ತಬಹುದು. ಇದಕ್ಕೆ ಕಾರಣವೇನಿರಬಹುದು?

 

ಮನಸ್ಸೆನ್ನುವುದು ಅಂಕೆಯಿಲ್ಲದ ಕಪಿಯಂತದ್ದು. ಇದು ಯಾವ ಪ್ರಚೋದನೆಗೋ, ಘಟನೆಗೋ ಸ್ಪಂದಿಸಿ ಕ್ಷಣಕ್ಷಣದಲ್ಲಿ ಬದಲಾಗುತ್ತಾ ಇರುತ್ತದೆ. ಕೆಲವೊಮ್ಮೆ ಹುಚ್ಚು ಕುದುರೆಯಂತೆ ಅತ್ಯುತ್ಸಾಹದಿಂದ ಕೆನೆಯುತ್ತಾ ಮುನ್ನುಗ್ಗಿದರೆ, ಮತ್ತೊಮ್ಮೆ ಬಸವನ ಹುಳುವಿನಂತೆ ನಿಂತಲ್ಲೇ ತೆವಳುತ್ತಿರುತ್ತದೆ. ಹಾಗಾಗಿ ನಿರೀಕ್ಷೆ ಮಾಡುವಾಗಿನ ಮನಸ್ಥಿತಿ ಬದಲಾಗಿ, ವಾಸ್ತವದಲ್ಲಿನ ಘಟನೆ ಯಾ ಅನುಭೂತಿಗೆ ಅದು ಸ್ಪಂದಿಸುವ ರೀತಿಯೇ ಬೇರೆಯಾಗಿ ಬಿಡುವುದರಿಂದ ಹೀಗಾಗುತ್ತಿರಬಹುದೇ? ಅಥವಾ ಅನಿರೀಕ್ಷಿತವಾಗಿ ಸಂಭವಿಸುವ ಅಚ್ಚರಿಯಲ್ಲಿ ಇರುವ ಥ್ರಿಲ್ ನಿರೀಕ್ಷಿತವಾದುದರಲ್ಲಿ ಇಲ್ಲದಿರುವುದೇ ಹೀಗೆ ಅನ್ನಿಸಲು ಹೇತುವಾಗಬಹುದೇ? ಇಲ್ಲಾ ಅಡಿಗರು ಹೇಳಿರುವಂತೆ ಇರುವುದೆಲ್ಲವ ಬಿಟ್ಟು ಇರದಿದರೆಡೆಗೆ ತುಡಿಯೋದೇ ಮನಸಿನ ಈ ಅತೃಪ್ತಿಯ ಮರ್ಮವಾಗಿರಬಹುದೇ? ಇದಕ್ಕೆ ಉತ್ತರ ಹೇಳೋದು ಬಹುಶಃ ಮನಃಶಾಸ್ತ್ರಜ್ಞರಿಗೂ ಕಷ್ಟಸಾಧ್ಯ ಅನ್ನಿಸುತ್ತೆ.

 

ಇದನ್ನೇ ಇನ್ನೂ ಒಂದು ಕೋನದಿಂದ ಕಂಡಾಗ ಅನ್ನಿಸುವುದೇನೆಂದರೆ, ನಮ್ಮ ಸುಪ್ತಪ್ರಜ್ಞೆಯ ಆಳದಲ್ಲೆಲ್ಲೋ ಹಿಂದೆ ಈ ರೀತಿಯ ಘಟನೆಗಳು ನಡೆದಾಗ ಸಿಕ್ಕ ಸಂತೃಪ್ತಿ, ಅನುಭೂತಿ, ಖುಷಿಗಳು ಅಚ್ಚೊತ್ತಿರುತ್ತವೆ. ಪ್ರಸ್ತುತ ಅದೇ ರೀತಿಯ ಘಟನೆ-ಅನುಭೂತಿಗೆ ನಾವು ಒಳಗಾದಾಗ, ಸುಪ್ತ ಮನಸ್ಸಿನ ತಕ್ಕಡಿಯಲ್ಲಿ ನಮಗೆ ಅರಿವಿಲ್ಲದಂತೆ ಹಿಂದಿನ ಅನುಭೂತಿಯೊಂದಿಗೆ ತಾಳೆ ಹಾಕಿ ನೋಡುವ ಪ್ರಕ್ರಿಯೆ ನಡೆಯುತ್ತಿರಬಹುದು. ಈ ತುಲನೆಯ ಫಲಶ್ರುತಿಯಾಗಿಯೇ ಏನೋ ಅಷ್ಟು ಖುಷಿಯಾಗ್ಲಿಲ್ಲಪ್ಪ ಅಂತ ನಮಗನ್ನಿಸುತ್ತಿರಬಹುದೇ? ಒಂದು ಪುಟ್ಟ ಉದಾಹರಣೆ ನೋಡೋದಾದ್ರೆ, ಸಚಿನ್ ತೆಂಡೂಲ್ಕರ್ ಈಗ ಒಂದು ಸೆಂಚುರಿ ಹೊಡೆದ ಅಂತಿಟ್ಟುಕೊಳ್ಳೋಣ. ಅದನ್ನು ಅವನ ಹಿಂದಿನ ಸೆಂಚುರಿಗಳಿಗೆ ಹೋಲಿಸಿ, ಏನೇ ಆದ್ರೂ ಮುಂಚಿನ ಸಚಿನ್ ಅಲ್ಲಪ್ಪ.. ಅದರ ಮಜವೇ ಬೇರೆ ಇತ್ತು.. ಅಂತ ನಾವು ಉದ್ಘರಿಸುತ್ತೇವೆ. ಅವನು ಇವತ್ತೂ ಚೆನ್ನಾಗಿಯೇ ಆಡಿರುತ್ತಾನೆ. ಆದರೆ ಅವನ ಮುಂಚಿನ ಆರ್ಭಟ, ಅಬ್ಬರ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುವುದರಿಂದಾಗಿ, ಸಚಿನ್ ಆಟ ಅಂದ್ರೆ ಆ ಥ್ರಿಲ್ ಅನ್ನೋ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತೇವೆ. ಹಾಗಾಗಿ ಅವನು ಚೆನ್ನಾಗಿಯೇ ಆಡಿದ್ರೂ ಕೂಡಾ, ಹಿಂದಿನ ಸಚಿನ್ ಜೊತೆ ಸದಾ ತಾಳೆ ಹಾಕುವ ಮನಸಿನ ಚಾಳಿಯಿಂದಾಗಿ.. ಮುಂಚಿನ ಹಾಗೆ ಖುಷಿ ಆಗ್ಲಿಲ್ಲ ಅನ್ನುತ್ತೆ ಅತೃಪ್ತ ಮನಸ್ಸು. ಅದೇ ಯಾವ ನಿರೀಕ್ಷೆಯೂ ಇಲ್ಲದಿದ್ದ ಪರಿಸ್ಥಿತಿಯಲ್ಲಿ ಕುಂಬ್ಳೆ, ಶ್ರೀನಾಥ್ ಬೆಂಗಳೂರಿನ ಟೈಟಾನ್ ಕಪ್ನಲ್ಲಿ ಆಡಿ ಗೆಲ್ಲಿಸಿದ್ದು ನಮಗೆ ತುಂಬಾ ಆಪ್ಯಾಯಮಾನ ಅನುಭೂತಿಯಾಗಿರುತ್ತೆ. ಯಾಕಂದ್ರೆ ಅದು ಅಚ್ಛರಿ ಹಾಗು ಅನಿರೀಕ್ಷಿತ. ಇದು ಹೀಗೆಯೇ ಇರಬಹುದು ಅಂತ ನಾನು ಪ್ರತಿಪಾದಿಸುತ್ತಿಲ್ಲ. ಬಹುಶಃ ಹೀಗೂ ಇರಬಹುದೇನೋ ಅಂತ ಹೇಳುತ್ತಿದ್ದೇನೆ ಅಷ್ಟೇ.

 

ಕಾರಣಗಳು ಏನೇ ಇದ್ದರೂ ಕೂಡಾ, ಮನಸಿನಲ್ಲಿ ತಿನ್ನುವ ಮಂಡಿಗೆ ಹೆಚ್ಚು ರುಚಿ ಅನ್ನೋದು ಸತ್ಯ. ನಿರೀಕ್ಷೆಯಲ್ಲಿರುವ ಸುಖವನ್ನು ಅನುಭವಿಸಲಾದ್ರೂ ನಿರೀಕ್ಷೆಗಳು ಬೇಕಲ್ವೇ?

 

ಕನಸಲ್ಲಿ ಬರುವ ಬೆಡಗಿಯರೇ

ನಿಜದಿ ಎದುರಾಗಬೇಡಿ

ನಿರೀಕ್ಷೆಯಲ್ಲಿರುವ ಸುಖವ

ಹುಸಿಯಾಗಿಸಬೇಡಿ .

 

ಈ ಬರಹ ನಿಮಗೆ ಖುಷಿಕೊಟ್ಟಿತಾ? ಇಲ್ಲವಾದಲ್ಲಿ ಅದಕ್ಕೆ ಕಾರಣ ನಿಮ್ಮ ಮನದಲ್ಲಿ ನಿರೀಕ್ಷೆಯ ಫಲಶ್ರುತಿಯಾಗಿ ಹುಟ್ಟಿದ ಅತೃಪ್ತಿಯೇ ಇರಬೇಕು J

 

ತೊಂಬತ್ತರ ದಶಕದ ಆದಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಈ ಹಾಡು ಇಂದಿಗೂ ನನ್ನ ಅಚ್ಚುಮೆಚ್ಚಿನದು. ರಾಷ್ಟ್ರೀಯ ಭಾವೈಕ್ಯವನ್ನು ಸಾರುವ ಈ ಗೀತೆಯ ಹಿಂದಿರುವ ಭಾವ, ಅದನ್ನು ಮನಮುಟ್ಟುವಂತೆ ನಿರೂಪಿಸಿದ ರೀತಿಯಿಂದಾಗಿ ಅದು ಮನಸ್ಸನ್ನು ತಟ್ಟಿ ಅಲ್ಲೇ ಗಟ್ಟಿಯಾಗಿ ನಿಂತುಬಿಟ್ಟಿದೆ. ಇತ್ತೀಚೆಗೆ ಜಾತಿ, ಭಾಷೆ, ಗಡಿಗಳ ವಿಷಯದಲ್ಲಿ ಜನರಲ್ಲಿ ಮನೆ ಮಾಡುತ್ತಿರುವ ಒಂದು ರೀತಿಯ ಅಸಹನೆಯ ಹಿನ್ನೆಲೆಯಲ್ಲಿ ಈ ಹಾಡು ಮತ್ತೊಮ್ಮೆ ನೆನಪಾಗಿ ನನ್ನಲ್ಲಿ ಪ್ರಶ್ನೆಗಳ ಸರಮಾಲೆಯನ್ನೇ ಹುಟ್ಟುಹಾಕಿದೆ. ಅದರಲ್ಲಿ ಕೆಲವನ್ನು ಮುಂದಿಡುವ ಪ್ರಯತ್ನವೇ ಈ ಲೇಖನ.

 

ಪ್ರೀತಿ ಅಕಾರಣವಾಗಿರಲಿ.. ದ್ವೇಷ ಸಕಾರಣವಾಗಿರಲಿ ಎಂಬುದೊಂದು ಉಕ್ತಿ. ನಾವು ಯಾರನ್ನಾದರೂ ದ್ವೇಷಿಸಲು ಕಾರಣವೇನು? ಕಾರಣವಿಲ್ಲದ ದ್ವೇಷ ಅರ್ಥಹೀನ ( ಕಾರಣವಿರುವ ದ್ವೇಷ ಕೂಡಾ ಸಮರ್ಥನೀಯವೇನಲ್ಲ) ಅಂಥಹುದರಲ್ಲಿ ರಾಜ್ಯ-ರಾಜ್ಯಗಳ ನಡುವಿನ ಭಾಷೆ, ಸಂಸ್ಕೃತಿಯ ನಡುವಿನ ಭಿನ್ನತೆ-ವೈವಿಧ್ಯತೆಗಳ ಕಾರಣಕ್ಕಾಗಿ ಯಾಕಾದರೂ ದ್ವೇಷ ಹುಟ್ಟಬೇಕು? ರಾಜ್ಯ, ಜಿಲ್ಲೆ, ತಾಲ್ಲೂಕು ಇವೆಲ್ಲವೂ ಆಡಳಿತದ ವಿಕೇಂದ್ರೀಕರಣ ಹಾಗು ಭಾಷೆ-ಸಂಸ್ಕೃತಿಯ ವ್ಯತ್ಯಾಸಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸುಗಮ ನಿರ್ವಹಣೆಗಾಗಿ ನಾವೇ ಮಾಡಿಕೊಂಡ ವ್ಯವಸ್ಥೆ. ಇಷ್ಟು ಸರಳ ಸತ್ಯದ ಅರಿವು ಇಲ್ಲದೆ, ನಮ್ಮ-ನಮ್ಮಲ್ಲಿನ ವೈವಿಧ್ಯತೆಗಳನ್ನೇ ಬೊಟ್ಟುಮಾಡಿ ಪರಸ್ಪರ ಕೆಸರೆರಚಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಅನ್ನೋದು ನನ್ನ ದೃಢ ನಂಬಿಕೆ. ವ್ಯಕ್ತಿಯೊಬ್ಬನನ್ನು ಆತನ ಧರ್ಮ, ಜಾತಿ, ಭಾಷೆಯ ಹಿನ್ನೆಲೆಯಲ್ಲಿ ಪ್ರತ್ಯೇಕಿಸಿ ನೋಡುವುದಾದರೆ, ಈ ಭಿನ್ನತೆಯ ಮುಂದೆ ಆತನ ವ್ಯಕ್ತಿತ್ವ, ಸಾಧನೆಗಳನ್ನು ಅಲಕ್ಷಿಸುವುದಾದರೆ, ನಮ್ಮ ದೃಷ್ಟಿಕೋನಕ್ಕೆ ಚಿಕಿತ್ಸೆ ಆಗಬೇಕೇನೋ ಅಲ್ಲವೇ?

 

ಭಾಷೆ ಎಂಬುದು ಒಂದು ಸಂವಹನ ಮಾಧ್ಯಮ. ನಾಗರೀಕತೆಯ ಹುಟ್ಟಿನ ಆದಿಯಲ್ಲಿ ನಮ್ಮ ಪೂರ್ವಜರೆಲ್ಲರೂ ಬಹುಶಃ ಉಪಯೋಗಿಸುತ್ತಿದ್ದ ಭಾಷೆ ಒಂದೇ ಒಂದು. ಅದುವೇ ಸಂಜ್ಞಾಭಾಷೆ. ಕ್ರಮೇಣ ಆಯಾ ಪ್ರದೇಶಗಳಲ್ಲಿ ಬೀಡುಬಿಟ್ಟ ಜನರು ತಮ್ಮ ನಡುವಿನ ಸುಗಮ ಸಂವಹನಕ್ಕಾಗಿ ರೂಪಿಸಿಕೊಂಡ ಮಾಧ್ಯಮ – ಭಾಷೆ. ಇದು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದು, ಇಂದು ನಾವಾಡುವ ಭಾಷೆಯ ಮಟ್ಟಕ್ಕೆ ಬಂದು ಮುಟ್ಟುವ ಹಾದಿಯಲ್ಲಿ ಜನರ ವಲಸೆ, ನಮ್ಮನ್ನು ಆಳಿದವರು, ಇವರೆಲ್ಲರ ಪ್ರಭಾವದಿಂದಾಗಿ ಪರಸ್ಪರ ಕೊಡು-ಕೊಳ್ಳುವಿಕೆಯಿಂದಾಗಿ ಸಂಪದ್ಭರಿತವಾಗುತ್ತಾ ಬಂದಿದೆ. ನಿಖರವಾಗಿ ಅಭ್ಯಸಿಸಿದರೆ ಭಾರತೀಯ ಭಾಷೆಗಳೆಲ್ಲಾ ಬಹುತೇಕ ಒಂದೇ ಮೂಲದಿಂದ ಬಂದಂತೆ ಭಾಸವಾಗುತ್ತದೆ. ಕನ್ನಡ, ತಮಿಳು, ಮಲೆಯಾಳಂ, ತುಳು, ತೆಲುಗು ಭಾಷೆಗಳಲ್ಲಿರುವ ಅನೇಕ ಸಾಮ್ಯತೆಗಳು ಇದಕ್ಕೆ ಸ್ಪಷ್ಟ ನಿದರ್ಶನ. ಅಷ್ಟೇಕೆ ಬೆಂಗಾಲಿ, ಒರಿಯಾ ಭಾಷೆಗಳಲ್ಲೂ ಕೂಡಾ ದಕ್ಷಿಣದ ಭಾಷೆಗಳೊಂದಿಗೆ ಅನೇಕ ಹೋಲಿಕೆಗಳಿವೆ. ಹೀಗಿರುವಾಗ ಭಾಷೆಯನ್ನು ಕಾರಣವಾಗಿರಿಸಿಕೊಂಡು ನಾವೇಕೆ ಪರಸ್ಪರರಲ್ಲಿ ನಮ್ಮದು ಮೇಲು-ನಿಮ್ಮದು ಕೀಳು ಎಂದು ಜಗಳವಾಡಬೇಕು? ನಮ್ಮ ನಮ್ಮ ಭಾಷೆಯನ್ನು ಪ್ರೀತಿಸಿ, ಬೇರೆಯವರದನ್ನು ಗೌರವಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಸಾಕಲ್ಲವೇ?

 

ಜಾತಿ, ಧರ್ಮ, ಭಾಷೆಯ ವಿಷಯವನ್ನೇ ಕೇಂದ್ರವಾಗಿರಿಸಿಕೊಂಡು ದ್ವೇಷಿಸುವುದಾದರೆ, ಶಾಂತಿ, ನೆಮ್ಮದಿಯಿಂದ ಬಾಳುವುದು ಎಂದಿಗಾದರೂ ಸಾಧ್ಯವೇ? ಅಬ್ದುಲ್ ಕಲಾಂ, ತೆಂಡೂಲ್ಕರ್, ಲತಾ ಮಂಗೇಶ್ಕರ್, ಸಾನಿಯಾ ಮಿರ್ಜಾ, ವಾಜಪೇಯಿ, ಶಾರುಕ್ ಖಾನ್, ರಾಹುಲ್ ದ್ರಾವಿಡ್, ಲಿಯಾಂಡರ್ ಪೇಸ್ ಇವರೆಲ್ಲರನ್ನು ಪ್ರೀತಿಸಲು ನಮಗೆ ಅಡ್ಡಿಯಾಗದ ಪ್ರಾದೇಶಿಕತೆ, ಜಾತಿ ಧರ್ಮಗಳ ಭಿನ್ನತೆಯು, ಬೇರೆ ವಿಷಯಗಳಲ್ಲಿ ಏಕೆ ಅಡ್ಡಿಯಾಗಬೇಕು? ತಮ್ಮ ಬೇಳೆ ಬೇಯಿಸಿಕೊಳ್ಳಲು ಸ್ಥಾಪಿತ ಹಿತಾಸಕ್ತಿಗಳ ಪ್ರಚೋದಕ ಕ್ರಿಯೆಗಳಿಗೆ ನಾವ್ಯಾಕೆ ಪ್ರತಿಕ್ರಿಯೆ ನೀಡಬೇಕು? ನಮ್ಮ ಭಿನ್ನತೆಗಳನ್ನು ಪರಸ್ಪರು ಗೌರವಿಸುವಷ್ಟು ವಿವೇಕ ನಮ್ಮಲ್ಲಿದ್ದರೆ ಮಾತ್ರ ಭಾರತ ಒಂದು ಶಕ್ತಿಯಾಗಿ ಮುನ್ನಡೆಯಬಹುದೇನೋ. ಇಲ್ಲವಾದಲ್ಲಿ ಪ್ರಾದೇಶಿಕ ಭಿನ್ನತೆಯ ಕಚ್ಚಾಟಗಳಲ್ಲೇ ದೇಶ ಅಸಹನೆಯ ಗೂಡಾಗಿಹೋಗುತ್ತದೆ. ಹಾಗಾಗದು ಅನ್ನುವುದು ಭರವಸೆ. ನನ್ನ ದನಿಗೆ ನಿನ್ನ ದನಿಯು…ಸೇರಿದರೆ ನಮ್ಮ ದ್ವನಿಯು…

 

ನಾವು ಇರುವುದೇ ಹಾಗೆ. ಕಾರ್ಗಿಲ್ ಯುದ್ಧಕಾಲದಲ್ಲಿ ಜಾಗೃತಗೊಂಡ ದೇಶಪ್ರೇಮದ ಕಾವು ಯುದ್ಧ ಮುಗಿದ ಮರುಕ್ಷಣವೇ ಗೋರ್ಕಲ್ಲ ಮೇಲಿನ ಮಳೆಯ ನೀರಂತೆ ಆವಿಯಾಗಿದೆ.. ಆರಿಹೋಗಿದೆ. ಕಾವೇರಿದ ಕಾವೇರಿ ವಿವಾದದ ಬಿಸಿ ಬೇಸಿಗೆ ಮುಗಿದ ಮೇಲೆ ಯಾರ ನೆನಪಿಗೂ ಬಾರದೆ ತಣ್ಣಗಾಗುತ್ತದೆ. ಇನ್ನು ಕನ್ನಡಾಭಿಮಾನ ಅನ್ನೋದು ಬರೀ ನವೆಂಬರ್ ತಿಂಗಳ ಉತ್ಸವಮೂರ್ತಿ… ಮಿಕ್ಕಂತೆ ಇಂಗ್ಲೀಷ್, ಕಂಗ್ಲೀಷ್, ಹಿಂಗ್ಲೀಷ್, ಎನ್ನಡಾ, ಎಕ್ಕಡಾ ವರ್ಷಪೂರ್ತಿ. ನಮ್ಮ ನಾಡು-ನುಡಿ, ನೆಲ-ಜಲ ಕುರಿತು ಇರುವ ಅಭಿಮಾನ ತೋರಿಸಲೂ ಯಾಕಿಷ್ಟು ಜಿಪುಣತನ? ನಾವು ಹುಟ್ಟಿ-ಬೆಳೆದು ಬದುಕುತ್ತಿರುವ ನಾಡಿನ ಮೇಲೆ ಪ್ರೀತಿ ವಿಶ್ವಾಸ ತೋರಿಸುವ ಕೃತಜ್ಞತೆ ಕೂಡಾ ಇಲ್ಲದ ಸ್ವಾರ್ಥಿಗಳೇ ನಾವು…? ನಾವ್ಯಾಕೆ ಹೀಗೆ… ? 

ಕನ್ನಡಕೆ ಹೋರಾಡು ಕನ್ನಡದ ಕಂದ… ಕನ್ನಡವ ಕಾಪಾಡು ನನ್ನ ಆನಂದ…ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ… ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ… ಎಂಬ ಕವಿವಾಣಿಯಂತೆ ನಮ್ಮ ತಾಯ್ನುಡಿ..ತಾಯಿನಾಡಿಗಾಗಿ ಹೋರಾಡಬೇಕಾದ ಕಾಲ ಬಂದಿದೆಯೆ? ಕನ್ನಡವ ಉಳಿಸಲು ಸಂಘ-ಸಂಸ್ಥೆ, ಕಾವಲು ಸಮಿತಿ ರಚಿಸಿ ಹೊರಾಡುತ್ತಿರುವುದಕ್ಕೆ ಖುಷಿ ಪಡಬೇಕೊ ಇಲ್ಲಾ ಕನ್ನಡಕ್ಕೆ ಬಂದ ಈ ಪರಿಸ್ಥಿತಿಗೆ ಮರುಗಬೇಕೋ ಗೊತ್ತಾಗುತ್ತಿಲ್ಲ. ನಾಡು-ನುಡಿಯ ಈ ದುಸ್ಥಿತಿಗೆ ಕಾರಣರ್‍ಯಾರು? ಪಟ್ಟಿ ಮಾಡಹೊರಟರೆ ಸರ್ಕಾರ, ಪ್ರಾಧಿಕಾರ, ಪರಿಷತ್ ಹೀಗೆ ಹನುಮಂತನ ಬಾಲದಂತೆ ಸಾಲು ಸಾಲು ಕಾರಣಗಳನ್ನು ಹೇಳಬಹುದಾದರೂ ವಾಸ್ತವದಲ್ಲಿ ನಾವು-ನೀವೆಲ್ಲರೂ ಇದಕ್ಕೆ ಕಾರಣರು ಎಂಬುದು ಗೋಡೆಯ ಮೇಲಿನ ಬರಹದಷ್ಟೇ ಸ್ಪಷ್ಟ. ಅನ್ಯಭಾಷಿಗರ ಜೊತೆಗಿರಲಿ, ನಮ್ಮವರ ಜೊತೆ ಸಂಭಾಷಿಸುವಾಗಲೂ ಕೂಡಾ ನಮ್ಮ ತಾಯ್ನುಡಿಯನ್ನು ಬಳಸಲು ಹಿಂಜರಿವ ನಮ್ಮನ್ನು ಹೆತ್ತ ಕನ್ನಡಾಂಬೆ ಧನ್ಯಳು; ಆಕೆಗೆ ಇದಕ್ಕಿಂತಾ ಬೇರೆ ಭಾಗ್ಯ ಬೇಕೆ? ಬೇರೆ ಭಾಷೆ-ಧರ್ಮ-ರೀತಿ-ನೀತಿಗಳನ್ನು ತೆರೆದ ಮಸಸ್ಸಿನಿಂದ ಸ್ವಾಗತಿಸುವ ನಮ್ಮ ಔದಾರ್ಯ, ಸಹಿಷ್ಣುತೆ ಆದರಣೀಯವೇ ಇರಬಹುದು. ಆದರೆ ಅದು ನಮ್ಮತನವನ್ನೇ ಮರೆಸಿಬಿಟ್ಟು ಮನೆಗೇ ಮಾರಿಯಾಗಬಾರದಲ್ವೇ? 

ಹಾಗಾದರೆ ಕನ್ನಡ ನಾಡು-ನುಡಿಯ ರಕ್ಷಣೆಗೆ ನಾವೆಲ್ಲ ಬೀದಿಗಿಳಿದು ಹೋರಾಡಬೇಕಾದ ಪರಿಸ್ಥಿತಿ ಬಂದಿದಿಯೆ? ನನಗಂತೂ ಹಾಗನ್ನಿಸೋಲ್ಲ. ಸರಳವಾಗಿ ಹೇಳಬೇಕೆಂದರೆ ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ, ನಾವು ಸಂದರ್ಶಿಸುವ ಸ್ಥಳಗಳಲ್ಲಿ ಕನ್ನಡದಲ್ಲೇ….ಸಾಧ್ಯವಾದಷ್ಟು ಬೆರಕೆಯಿಲ್ಲದ ಶುದ್ಧ ಕನ್ನಡದಲ್ಲೇ ಮಾತನಾಡಬೇಕಾಗಿರುವುದು ನಾವು ಈ ದಿಶೆಯಲ್ಲಿ ಮಾಡಬಹುದಾದ ಬಹು ಅಮೂಲ್ಯವಾದ ಕಾರ್ಯ. ಮನೆಗಳಲ್ಲಿ, ಕಛೇರಿಗಳಲ್ಲಿ, ಸ್ನೇಹಿತರ ಜೊತೆ ಮಾತಾಡುವಾಗ ಯಾವ ಹಿಂಜರಿಕೆ,ಕೀಳರಿಮೆ ಇಲ್ಲದೆ ಸರಾಗವಾಗಿ-ಸಲೀಸಾಗಿ ಸಿರಿಗನ್ನಡವ ಬಳಸಿದರೆ ಸಾಕಲ್ಲವೆ? ಇಲ್ಲ ಸಾಕಾಗದು. ಕನ್ನಡದ ಉತ್ತಮ ಪುಸ್ತಕಗಳನ್ನು, ಕನ್ನಡ ಪತ್ರಿಕೆಗಳನ್ನು ಕೊಂಡು ಓದುವುದರ ಜೊತೆಗೆ ಉತ್ತಮ ಕನ್ನಡ ಸಿನೆಮಾ, ನಾಟಕಗಳನ್ನು ಪ್ರೋತ್ಸಾಹಿಸಬೇಕು. ಈ ರೀತಿ ಮಾಡುವಂತೆ ನಿಮ್ಮ ಸ್ನೇಹಿತರು, ಬಂಧುಗಳನ್ನು ಪ್ರೇರೇಪಿಸಿದರೆ ದಿನಬೆಳಗಾಗೋದ್ರೊಳಗೆ ಕ್ರಾಂತಿಯಾಗದಿದ್ರೂ ಕೂಡಾ ನಿಧಾನವಾಗಿಯಾದರೂ ಪರಿಸ್ಥಿತಿ ಬದಲಾಯಿಸುವುದರಲ್ಲಿ ಯಾವುದೆ ಶಂಕೆ ಬೇಡ. ಕನ್ನಡದಲ್ಲಿ ವ್ಯವಹರಿಸದ, ಕನ್ನಡದಲ್ಲಿ ಸೂಚನಾಫಲಕಗಳನ್ನು ಪ್ರದರ್ಶಿಸದ ಮಳಿಗೆಗಳಲ್ಲಿ, ಉಪಹಾರ ಗೃಹಗಳಲ್ಲಿ ಜಗಳಕ್ಕೇನು ಇಳಿಯಬೇಕಾಗಿಲ್ಲ. ಅವರಿಗೆ ಚುರುಕು ಮುಟ್ಟಿಸುವಂತೆ ಇನ್ನು ಮುಂದೆ ಕನ್ನಡದಲ್ಲಿ ವ್ಯವಹರಿಸದಿದ್ದಲ್ಲಿ ನಾವು ನಿಮ್ಮ ಅಂಗಡಿ ಮಳಿಗೆಗಳಿಗೆ ಭೇಟಿ ಕೊಡೋಲ್ಲ…ನಮ್ಮ ಸ್ನೇಹಿತರೂ ಬರೋಲ್ಲ ಎಂದು ಸ್ಪಷ್ಟವಾಗಿ ಹೇಳಿ, ಅಂತೆಯೇ ನಡೆದುಕೊಂಡರೆ ಅವರೂ ದಾರಿಗೆ ಬಂದಾರು. ನಾನೊಬ್ಬ ಮಾತ್ರ ಹೀಗೆ ಮಾಡಿದರೆ ಏನು ಬಂತು ಅಂತ ಯೋಚಿಸದೆ, ಎಲ್ಲರೂ ಇದೇ ನೀತಿ ಅನುಸರಿಸಿದರೆ ಖಂಡಿತವಾಗಿಯೂ ಈ ನಿಧಾನಕ್ರಾಂತಿ ಸಾಧ್ಯ.ಇದೆಲ್ಲದರ ಜೊತೆಗೆ ಕನ್ನಡಿಗರಿಗೆ ಕನ್ನಡನಾಡಿಗೆ ಮಲತಾಯಿ ಧೋರಣೇ ತೋರುವ ಕೇಂದ್ರ ಸರ್ಕಾರ, ಸರ್ಕಾರೇತರ ಸಂಸ್ಥೆಗಳ ವಿರುದ್ಧ ಅಸಹಕಾರದ ಮೂಲಕ ಶಾಂತರೀತಿಯಿಂದ ಪ್ರತಿಭಟನೆ ಮಾಡಬೇಕು. ಇದು ನನಗೆ ಸಂಬಂಧಿಸಿದ್ದಲ್ಲ… ಇನ್ಯಾರಿಗೋ ತೊಂದರೆಯಾದರೆ ನನಗೇನು ಎನ್ನುವ ಉದಾಸೀನ ಮನೋಭಾವ ಬಿಟ್ಟು ಇಂದು ಅವನಿಗಾದುದು ನಾಳೆ ನನಗಾಗಲಿಕ್ಕಿಲ್ಲವೇ ಎಂಬ ಎಚ್ಚರ ನಮ್ಮಲ್ಲಿ ಮೂಡಬೇಕು. ಒಗ್ಗಟ್ಟಿನಿಂದ ಪ್ರತಿಭಟಿಸಬೇಕು. ಒಗ್ಗಟ್ಟಿನಿಂದ ಹೋರಾಡಿ ನೂರಾರು ವರ್ಷ ನಮ್ಮನ್ನು ಮೆಟ್ಟೀ ನಿಂತ ಆಂಗ್ಲರೇ ಹಿಮ್ಮೆಟ್ಟುವಂತೆ ಮಾಡಿರುವಾಗ ಹತ್ತಾರು ವರ್ಷಗಳ ಈ ಮಲತಾಯಿ ಧೋರಣೆಯವರನ್ನು ಸೋಲಿಸುವುದೇನು ಕಷ್ಟವಾಗಲಿಕ್ಕಿಲ್ಲ ಬಿಡಿ. ಮುಖ್ಯವಾಗಿ ನಮ್ಮಲ್ಲಿ ದೃಢ ನಿಶ್ಚಯ- ಛಲ ಇರಬೇಕಷ್ಟೆ.ಇಷ್ಟನ್ನು ಸಾಧಿಸಲು ಸಾಧ್ಯವಾದರೆ ಮುಂದಿನದೆಲ್ಲ ಸಹಜವಾಗಿಯೇ ನಡೆಯುತ್ತದೆ.ಇದಕ್ಕಾಗಿ ಯಾವ ಪ್ರಾಧಿಕಾರ-ಪರಿಷತ್‌ಗಳ ಮರ್ಜಿ ಕಾಯಬೇಕಾಗಿಲ್ಲ. ಯಾವ ಉಗ್ರ ಹೋರಾಟವೂ ಬೇಕಾಗಿಲ್ಲ. ನಮ್ಮ ದೈನಂದಿನ ಬಳಕೆಯಲ್ಲಿ ನಮ್ಮ ಆಡುಮಾತನ್ನು ಬಳಸುವಷ್ಟು ಪ್ರೀತಿ-ಅಭಿಮಾನ ನಮಗಿದ್ದರಷ್ಟೇ ಸಾಕು. ಸಾಧ್ಯವಾದರೆ ಆಸಕ್ತಿ ಇರುವ ನಿಮ್ಮ ಅನ್ಯಭಾಷಿಗ ಸ್ನೇಹಿತರಿಗೂ ಸರಳವಾಗಿ ಕನ್ನಡ ಕಲಿಸಿದರೆ ಮತ್ತೂ ಉತ್ತಮ.

ಕಡೆಯದಾಗಿ ಒಂದು ಮಾತು. ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಬಳಸುವ ಬಗ್ಗೆ ಇರುವ ಪರ-ವಿರೋಧದ ಕುರಿತು. ಪ್ರಸ್ತುತ ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಮಾಡುವುದೋ ಬಿಡುವುದೋ ಎಂಬ ಕುರಿತು ಇರುವ ಸಾಧ್ಯತೆ, ಅದರ ಸಾಧಕ – ಬಾಧಕಗಳ ಬಗ್ಗೆ ಇರುವ ರಗಳೆ ತಲೆನೋವು ಶಿಕ್ಷಣ ತಜ್ಞರಿಗೆ- ಸರ್ಕಾರಕ್ಕೇ ಇರಲಿ. ಮನೆಯಲ್ಲಿ ನಿಮ್ಮ ಮಕ್ಕಳಿಗೆ ಮಮ್ಮಿ-ಡ್ಯಾಡಿ ಸಂಸ್ಕೃತಿ ಕಲಿಸದೆ, ಸ್ವಚ್ಛ ಕನ್ನಡದಲ್ಲಿ ಮಾತನಾಡುವುದನ್ನು ಕಲಿಸಿ. ಕನ್ನಡ ಪುಸ್ತಕ-ಹಾಡುಗಳ ಬಗ್ಗೆ ಪ್ರೀತಿ ಹುಟ್ಟಿಸಿ; ಕನ್ನಡದ ಅಭಿರುಚಿಯ ಬೀಜ ಬಿತ್ತಿ ಸಾಕು. ಮುಂದಿನ ತಲೆಮಾರಿನಲ್ಲಿ ಕನ್ನಡ ಪ್ರೇಮ ಹೆಮ್ಮರವಾಗಲು ಇಂದು ನೀವು ಮಾಡಬಹುದಾದ ಅಳಿಲಸೇವೆಯೆಂದರೆ ಇದೇ. ಇಷ್ಟಾದರೆ ಕನ್ನಡದ ಅಳಿವಿನ ಬಗ್ಗೆ ನಾವು-ನೀವೆಲ್ಲ ಕಳವಳ ಪಡಬೇಕಾದುದೇ ಇಲ್ಲ. ಇಷ್ಟಾಗುವುದೇ? ಮರೆತು ಹೋಗುತ್ತಿರುವ ಮರೆಯಾಗುತ್ತಿರುವ ನಾಡು-ನುಡಿಯ ಅಭಿಮಾನ ಮತ್ತೆ ಚಿಗುರುವುದೇ? ಇದು ನಮ್ಮನಿಮ್ಮೆಲ್ಲರ ಕೈಲಿದೆ… ನನಗಂತೂ ಈ ಬಗ್ಗೆ ಭರವಸೆಯಿದೆ…ನಿಮಗೆ?                                                        

                                                                                       – ವಿಜಯ್‌ರಾಜ್ ಕನ್ನಂತ್

ಕನಸು ಕಾಣೋಣ ಬನ್ನಿ…

Posted: ಮಾರ್ಚ್ 26, 2008 in ವಿಚಾರ
ಟ್ಯಾಗ್ ಗಳು:,

ಕನಸುಗಳನ್ನು ಕಾಣದವರು ಯಾರಾದರು ಈ ಭೂಮಿಯ ಮೇಲೆ ಇದ್ದಾರೆಯೇ? ಅರಿವು ಮೂಡಿದಂದಿನಿಂದ ಅರಿವಿಲ್ಲದ ಲೋಕಕ್ಕೆ ತೆರಳುವ ತನಕ ಕನಸುಗಳ ಕಟ್ಟಿ, ಕಟ್ಟಿದ ಕನಸುಗಳ ಬೆನ್ನಟ್ಟಿ -ಬೇಟೆಯಾಡುತ, ಕೈಗೂಡಿದರೆ ಹಿಗ್ಗುತ, ಕೈ ಜಾರಿದರೂ ಮುನ್ನುಗ್ಗುತ ಸಾಗುವುದೀ ಸ್ವಪ್ನಲೋಕದ ಪಯಣ. ಕನಸುಗಳು ಕೈಗೂಡದೆ ಬದುಕಲ್ಲಿ ಬೇಸರ ಮೂಡಿ ಆಶಾವಾದದ ಸೆಲೆ ಇಂಗಿ ಹೋದಾಗ, ಹೊಸ ಹೊಸ ಕನಸುಗಳು ನವ ಚೈತನ್ಯವ ಮೂಡಿಸಿ ಜೀವನೋತ್ಸಾಹದ ಚಿಲುಮೆಯನ್ನು ಚಿಮ್ಮಿಸುತ್ತವೆ. ಬದುಕೆಂಬ ಕ್ಯಾನ್‌ವಾಸ್ ಮೇಲೆ ಬಣ್ಣಬಣ್ಣದ ಕನಸುಗಳು ಮೂಡಿಸುವ ಚಿತ್ತಾರಗಳು ಭವಿಷ್ಯದ ಬಗೆಗೆ ಉತ್ಸಾಹ ಮೂಡಿಸಿ, ತನ್ಮೂಲಕ ಬಾಳಿಗೆ ಒಂದು ಹೊಸ ಆಯಾಮ ಒದಗಿಸುವ ಟಾನಿಕ್ ಅಂದ್ರೂ ತಪ್ಪೇನಿಲ್ಲ.

ಕನಸುಗಳನ್ನು ನಾವು ನೀವೆಲ್ಲರೂ ಕಂಡಿರುತ್ತೇವೆ. ನಮ್ಮ ಸ್ಥಿತಿ- ಗತಿ, ಮನೋಗತಿ, ರುಚಿ-ಅಭಿರುಚಿ, ಆಸೆ-ಆಕಾಂಕ್ಷೆಗಳ ತಳಪಾಯದ ಮೇಲೆ ವಿವಿಧ ವಿನ್ಯಾಸಗಳ ಸ್ವಪ್ನ ಸೌಧದ ನಕಾಶೆ ಮನಸಲ್ಲಿ ಮೂಡಿರುತ್ತದೆ. ಹೀಗೆ ಕಂಡ ಕನಸಿನ ಸಾರ್ಥಕತೆ – ಔಚಿತ್ಯ ಅಡಗಿರುವುದು- ಕನಸನ್ನು ಕೈಗೂಡಿಸಿಕೊಳ್ಳುವಲ್ಲಿ ನಾವು ಎಷ್ಟು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ ಎನ್ನುವುದರಲ್ಲಿ. ಬರೇ ಕನಸು ಕಂಡರಷ್ಟೇ ಸಾಲದು; ಅದು ನಮ್ಮ ಇತಿಮಿತಿಯ ಪರಿಧಿಯೊಳಗೆ ನಮ್ಮ ಪ್ರಯತ್ನದ ವ್ಯಾಪ್ತಿಯೊಳಗೆ ಫಲ ಕೊಡುವುದೇ ಎಂದು ಯೋಚಿಸಬೇಕಾದದ್ದು ತೀರಾ ಅಗತ್ಯ. ಒಂದೊಮ್ಮೆ ಅದು ನಮ್ಮ ನಿಲುಕಿಗೆ ಹೊರತಾದುದಾದರೂ..ನಮ್ಮ ಸಾಮರ್ಥ್ಯದ ಮೇರೆಗಳನ್ನು ಹಿಗ್ಗಿಸಿಕೊಂಡಾದರೂ ಕನಸನ್ನು ಕೈವಶ ಮಾಡಿಕೊಳ್ಳುವ ಹುಮ್ಮಸ್ಸು-ಛಲ ನಮ್ಮದಾಗಬೇಕು. ಆಗ ಮಾತ್ರ ಆಶಾಭಂಗವಾಗುವುದು ತಪ್ಪಿ, ಕನಸು ಮರೀಚಿಕೆಯಾಗದೆ ನಮ್ಮ ಜೀವನದ ಯಶಸ್ಸಿಗೆ ಮುನ್ನುಡಿ ಬರೆಯಬಲ್ಲುದು.

ಕನಸುಗಳಿಲ್ಲದ ಜೀವನ ರಸಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಂತೆ ಎನ್ನುವ ಮಾತಿದ್ದರೂ ಕೂಡಾ, ಸ್ವಪ್ನಸಾಮ್ರಾಜ್ಯದಲ್ಲೇ ವಿಹರಿಸುತ್ತಾ, ಜೀವನ ನಿಮಿತ್ತ ಕರ್ತವ್ಯಗಳನ್ನು ಕೂಡಾ ಮರೆತು, ಹಗಲುಗನಸುಗಳಲ್ಲಿ ಮೈಮರೆಯುವುದು ಸರಿಯಲ್ಲ. ಕನಸು ಸಾಕಾರಗೊಂಡಾಗ ದೊರಕುವ ಅಮಿತಾನಂದದ ನಿರೀಕ್ಷೆಯಲ್ಲೇ ನಮ್ಮ ಕರ್ತವ್ಯ ಪ್ರಜ್ಞೆ ಮರೆತು ಕುಳಿತರೆ ಬದುಕು ಹಳಿ ತಪ್ಪುವುದು ಖಂಡಿತ. ನಮ್ಮ ಕನಸುಗಳ ಬಗ್ಗೆ, ಸಾಧಿಸಬೇಕೆಂದುಕೊಂಡಿರುವುದರ ಬಗ್ಗೆ ಇಲ್ಲದ ಬಡಾಯಿಕೊಚ್ಚುವ ಬದಲು, ಎಲೆ ಮರೆಯ ಕಾಯಿಯಂತೆ ಇದ್ದು ನಮ್ಮ ಕನಸಿನ ಜೈತ ಯಾತ್ರೆ ಮುನ್ನಡೆಸಿದರೆ, ನಾವು ಬಯಸುವ ಮನ್ನಣೆ, ಪ್ರಸಿದ್ಧಿಗಳನ್ನೆಲ್ಲ ನಮ್ಮ ಸಾಧನೆಗಳ ಮೂಲಕ ಪಡೆದರೇನೆ ಸಮಂಜಸ ಅಲ್ಲವೇ?

ಕನಸುಗಳು ನಮ್ಮ ಸುಂದರ ಭವಿತವ್ಯದ ತಳಹದಿಗಳೇ ಆದರೂ, ನಮ್ಮ ಆಸೆ ಕೈಗೂಡದಾದಾಗ ಆಕಾಶವೇ ತಲೆಯ ಮೇಲೆ ಬಿದ್ದಂತೆ, ಎಲ್ಲಾ ಮುಗಿದೇಹೋಯಿತು ಎಂಬಂತಾಡುವುದು ಕೂಡ ಸರಿಯೆನಿಸಲಾರದು. ಸ್ವಪ್ನವು ವಾಸ್ತವವಾಗುವಲ್ಲಿ ನಮ್ಮ ಪ್ರಯತ್ನಗಳೆಷ್ಟೇ ಪರಿಪೂರ್ಣವಾಗಿದ್ದರೂ ಸಹಾ ಕೆಲವೊಮ್ಮೆ ಪ್ರತಿಕೂಲ ಸನ್ನಿವೇಶಗಳೋ ಅಥವಾ ಅದೃಷ್ಟವು ನಮ್ಮ ಪರವಾಗಿ ಇಲ್ಲದಿರುವುದರಿಂದಲೋ ಕನಸು ಮುರಿದುಬೀಳಬಹುದು; ತತ್‌ಪರಿಣಾಮವಾಗಿ ಕೀಳರಿಮೆ , ಹಿಂಜರಿಕೆ ಮನಸಲ್ಲಿ ಉದ್ಭವಿಸಿ ಖಿನ್ನತೆ ಆವರಿಸಲೂಬಹುದು. ಹೀಗಾಗದಂತೆ ಮನಸಿನ ಮೇಲೆ ಹತೋಟಿ ಸಾಧಿಸಿ ಕಡಿವಾಣ ಹಾಕಬೇಕಾದುದು ತೀರಾ ಅವಶ್ಯ. ಕನಸ್ಸಿನ ಸೌಧವೊಂದು ಕುಸಿದಾಗ ಅದಕ್ಕಾಗಿ ಪರಿತಪಿಸದೆ, ನಮ್ಮ ಪ್ರಯತ್ನ ಎಡವಿದ್ದೆಲ್ಲಿ ಎಂದು ಪರಾಮರ್ಶಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ನಮ್ಮ ಕನಸಿನ ಪಯಣದ ದಾರಿ ಸಾಗಬೇಕು. ಕನಸು ಕಾಣುವುದು, ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುವುದು ಮಾತ್ರ ನಮ್ಮ ಕೆಲಸ; ಮಿಕ್ಕಿದ್ದೆಲ್ಲಾ ನಮ್ಮ ಅದೃಷ್ಟಕ್ಕೆ ಬಿಟ್ಟಿದ್ದು ಎಂಬ ನಿರಾತಂಕ- ನಿರ್ಲಿಪ್ತ ಮನಸ್ಥಿತಿ ನಮ್ಮದಾಗಿದ್ದಲ್ಲಿ ಖಿನ್ನತೆಯಿಂದ ವೃಥಾ ಬಳಲುವುದು ತಪ್ಪುತ್ತದೆ. ಅಲ್ಲದೆ ಹೊಸ ಕನಸು ಕಾಣಲು ಹುಮ್ಮಸ್ಸು ಮೂಡುತ್ತದೆ.

ಸುಮ್ಮನೆ ಅರ್ಥಹೀನ ಕನಸುಗಳನ್ನು ಕಟ್ಟಿ, ವ್ಯರ್ಥ ಆಸೆಗಳನ್ನುಇಟ್ಟುಕೊಂಡು ಗಗನ ಕುಸುಮವನ್ನು ಬಯಸುವುದಕ್ಕಿಂತ, ಕೈಗೆಟುಕುವ ಸ್ವಪ್ನಗಳನ್ನು ಕಟ್ಟಿ, ಬದುಕಿಗೆ ಸ್ಪಷ್ಟ ರೂಪು ಕೊಟ್ಟು, ಹಂತ ಹಂತವಾಗಿ ಮುನ್ನೆಡೆಯುವ ಹಾದಿ ಒಳಿತು. ಕನಸುಗಾರರಾಗುವ ಜೊತೆಗೇ, ಆ ಕನಸುಗಳನ್ನು ನನಸಾಗಿಸಿಕೊಳ್ಳಲು ಬೇಕಾದ ತಾಳ್ಮೆ, ಪ್ರಯತ್ನಶೀಲತೆ,ದೃಢನಿಶ್ಚಯ, ಪ್ರಸಂಗಾವಧಾನತೆ ನಮ್ಮಲ್ಲಿರಬೇಕು. ನಮ್ಮ ಮಿತಿಗಳನ್ನೇ ನಮ್ಮ ಅವಕಾಶಗಳನ್ನಾಗಿಸಿಕೊಳ್ಳುವ ಚಾತುರ್ಯ, ಆಡಿಕೊಳ್ಳುವವರೇ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ನಮ್ಮ ಪರಿಮಿತಿಯೊಳಗೇ ಸಾಧಿಸಿ ತೋರಿಸಿದರೆ..ಗಗನ ಕುಸುಮವೂ ಧರೆಗಿಳಿದೀತು. ಜೀವನೋತ್ಸಾಹವ ತೊರೆದು ವಿರಾಗಿಯಂತೆ ಬಾಳುವುದರ ಬದಲು ಕನಸುಗಳ ರಂಗು ತುಂಬಿ ಜೀವನ ಸಾರ್ಥಕತೆಯತ್ತ ಮುಂದಡಿಯಿಡುವ ಧನಾತ್ಮಕ ಚಿಂತನೆ ಮತ್ತು ಆಶಾವಾದಿ ಮನಸ್ಸು ನಮ್ಮ-ನಿಮ್ಮೆಲ್ಲರದ್ದೂ ಆಗಲಿ ಎಂದು ಹಾರೈಸೋಣವೇ?