Posts Tagged ‘ವಿಮರ್ಶೆ’

ನಿರ್ದೇಶಕ ಶಶಾಂಕ್ ಸೂಕ್ಷ್ಮವಿಷಯವನ್ನು ನಿರೂಪಿಸುವಲ್ಲಿ ಗೆದ್ದಿದ್ದಾರೆ; ರಾಧಿಕಾ ಪಂಡಿತ್ ತಮ್ಮ ಅಭಿನಯದಿಂದ ಚಿತ್ರಪ್ರೇಮಿಗಳ ಹೃದಯ ಕದ್ದಿದ್ದಾರೆ; ಮನೋಮೂರ್ತಿ ಸಂಗೀತದ ಇಂಪಿನ ಮೂಲಕ ಮನ ತಟ್ಟಿದ್ದಾರೆ; ಆದ್ರೆ ತಾಲ್‌ನ್ ಟ್ಯೂನ್ ಕಾಪಿ ಮಾಡಿ ಸಿಕ್ಕಿ ಬಿದ್ದಿದ್ದಾರೆ….ಇದು ಮೊಗ್ಗಿನ ಮನಸ್ಸು ಸಿನಿಮಾದ ಒನ್ ಲೈನ್ ವಿಮರ್ಶೆ. ಮೊಟ್ಟ ಮೊದಲನೆಯದಾಗಿ ನಿರ್ದೇಶಕ ಶಶಾಂಕ್‌ಗೆ ಭೇಷ್ ಅನ್ನಲೇ ಬೇಕು. ಹಿಂದೆ ಸಿಕ್ಸರ್ ಬಾರಿಸಲು ಹೋಗಿ ಬೌಲ್ಡ್‌ ಔಟಾಗಿದ್ದ ಅವರು ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಸೆಂಚುರಿ ಬಾರಿಸುವಂತಹ ಚಿತ್ರವೊಂದನ್ನು ಕೊಟ್ಟಿದ್ದಾರೆ. ಅರೆಬಿರಿದ ಮೊಗ್ಗಿನಂಥ ಹದಿವಯಸ್ಸಿನ ಮನಸಿನ ಕುದಿಗಳನ್ನೆಲ್ಲಾ ಸೆರೆಹಿಡಿದು, ಮೊಗ್ಗರಳಿ ಹೂವಾಗುವ ಮುಂಚಿನ ತಲ್ಲಣಗಳನ್ನು ನವಿರಾಗಿ ಕಟ್ಟಿಕೊಟ್ಟಿದ್ದಾರೆ. ಸೂಕ್ಷ್ಮ ವಿಷಯವೊಂದನ್ನು ನಿರೂಪಿಸುವಾಗ ಸ್ವಲ್ಪ ತಾರುಮಾರಾದರೂ ಎಲ್ಲೋ ಹೋಗಿಬಿಡಬಹುದಾದ ಅಪಾಯವಿದೆ. ಅದೆಲ್ಲವನ್ನು ಮೆಟ್ಟಿನಿಂತು, ಒಂದು ಸುಂದರ ಕುಸುರಿಯ ಕಲಾಕೃತಿಯನ್ನು ಚಿತ್ರರಸಿಕರ ಮುಂದಿಟ್ಟಿದ್ದಾರೆ.

 

ಚಂಚಲ, ರೇಣುಕಾ, ದೀಕ್ಷಾ, ಸಂಜನಾ ಅನ್ನೋ ನಾಲ್ವರು ಹದಿವಯಸ್ಸಿನ ಹುಡುಗಿಯರ ಬಾಳಿನ ಸುತ್ತ ಹೆಣೆದ ಕಥೆಯಿದು. ಮಂಗಳೂರಿನ ಕ್ವೀನ್ಸ್ ಕಾಲೇಜಿನಲ್ಲಿ ಪಿಯೂಸಿ ಓದಲು ಬಂದ ನವತರುಣಿಯರಿವರು. ಚಂಚಲಾ ಹೆಸರೇ ಹೇಳುವಂತೆ ನಿಜಕ್ಕೂ ಚಂಚಲೆ; ಆದರೆ ಅಷ್ಟೇ ಸೂಕ್ಷ್ಮ ಮನಸ್ಸಿನ ಭಾವಜೀವಿ. ಹದಿವಯಸ್ಸಿನ ತಲ್ಲಣಗಳನ್ನು ಅರಿತು ಅವಳನ್ನು ಸ್ನೇಹಿತೆಯಂತೆ ಕಾಣುವ ವಿಶಾಲ ಮನಸ್ಸಿನ ಅಪ್ಪ, ತನ್ನ ಮಗಳ ಭಾವಪ್ರಪಂಚದಲ್ಲಿನ ಬದಲಾವಣೆಗಳನ್ನು ಕಂಡು ಅವಳು ಹಾದಿತಪ್ಪಿದರೇನು ಗತಿ ಅಂತ ಚಿಂತಿಸುವ ಅಮ್ಮನ ಮುದ್ದಿನ ಮಗಳೀಕೆ. ಗುರುವಿನೆಡೆಗಿನ ಮೆಚ್ಚುಗೆಯನ್ನೇ ಪ್ರೀತಿ ಎಂದು ಭ್ರಮಿಸಿ, ತನ್ನ ತಪ್ಪಿನ ಅರಿವಾದಾಗ ಗುರುವಿನ ಗ್ರೇಟ್‌ನೆಸ್‌ಗೆ ಬೆರಗಾಗಿ ತಲೆಬಾಗುವ ಈಕೆ, ತನ್ನ ಸುತ್ತ ಸುತ್ತುವ ಹುಚ್ಚುಪ್ರೇಮಿಯ ಪ್ರೀತಿಗೆ ಶರಣಾಗುವಳು. ಅವನ ಸ್ವಾರ್ಥತುಂಬಿದ ಪ್ರೀತಿಯ ಬಂಧ ಬಂಧನ ಅನ್ನಿಸತೊಡಗಿದಾಗ ಅವನಿಂದ ದೂರಾಗುವಳು. ಪ್ರೀತಿಗಾಗಿ ಹಂಬಲಿಸಿ ಹಾತೊರೆಯುವಳು…ಅವಳು ಬಯಸುವ ಪ್ರೀತಿ ಅವಳಿಗೆ ರಾಹುಲ್‌ನಲ್ಲಿ ಸಿಕ್ಕಿದಾಗ ಅವನ ಸಾನ್ನಿಧ್ಯದಲ್ಲಿ ಅರಳುವ ಪ್ರೀತಿಯನ್ನು ತಾನೇ ಚಿವುಟಿ ಹಾಕುತ್ತೆ ಅವಳ ಚಂಚಲ ಮನಸ್ಸು.

 

ಹಳ್ಳಿಯಿಂದ ಡಾಕ್ಟರ್ ಆಗುವ ಕನಸು ಹೊತ್ತ ರೇಣಾಕಾದೇವಿ ಮುಗ್ಧತೆಯೇ ಮೈವೆತ್ತಂತವಳು. ಹೊಸಪರಿಸರದ ರಂಗುರಂಗಿಗೆ ಮರುಳಾಗಿ, ಮಾತಿನ ಮೋಡಿಗಾರನ ಪ್ರೇಮದ ಉರುಳಿಗೆ ಕೊರಳಾಗಿ…ಮೈಮರೆತು ಗೆಳೆಯನ ತೆಕ್ಕೆಯಲ್ಲಿ ಹೊರಳಾಡುವಳು. ತನ್ನ ತಪ್ಪಿನ ಅರಿವಾಗುವ ಹೊತ್ತಿನಲ್ಲಿ ಕನಸು ಮುರಿದು ಬದುಕೇ ಇರುಳಾಗುವುದು.

 

ತನ್ನಕ್ಕನಿಗೆ ಮೋಸ ಮಾಡಿದ ಈ ಗಂಡು ಸಮಾಜಕ್ಕೆ ಬುದ್ದಿ ಕಲಿಸಲು ಅವರನ್ನು ಬೇಕಾದಂತೆ ಕುಣಿಸಿ ಮಜ ನೋಡುವ ಸಂಜನಾಳು ಒಂದು ಕಡೆಯಾದರೆ, ತನ್ನ ಅಪ್ಪನ ಉಸಿರುಗಟ್ಟಿಸುವಂಥ ಶಿಸ್ತಿಗಿಂತ, ತನ್ನ ಗೆಳೆಯನ ಬೆಚ್ಚನೆಯ ತೋಳಿನಾಸರೆ ಲೇಸೆಂದು ಭ್ರಮಿಸಿ ಮದುವೆ ಇಲ್ಲದೆ ಗೆಳೆಯನ ಮನೆ ಸೇರುವ ದೀಕ್ಷಾ ಇನ್ನೊಂದು ಕಡೆ. ಹೀಗೆ ಈ ನಾಲ್ಕು ಜನ ಗೆಳತಿಯರ ಅಪ್ರಬುದ್ಧ ಮನಸಿನ ತಲ್ಲಣ ತಳಮಳಗಳ ಸುತ್ತಲೇ ಸಾಗುವ ಕಥಾನಕ ಹದಿವಯಸ್ಸಿನ ಗುಸುಗುಸು ಪಿಸುಮಾತುಗಳನ್ನು ತೆರೆದಿಡುತ್ತದೆ. ಮುಂದೆ ಮೊಗ್ಗರಳಿ ಹೂವಾದೀತೇ ಇಲ್ಲಾ ಅರಳುವ ಮೊದಲೆ ಸುಮ ಬಾಡೀತೆ ಅನ್ನೋದನ್ನು ತೆರೆಯ ಮೇಲೆ ನೋಡಿ.

 

ನಾಲ್ವರು ಗೆಳತಿಯರಲ್ಲಿ ಚಂಚಲಳ ಪಾತ್ರಕ್ಕೆ ಜೀವತುಂಬಿದ ರಾಧಿಕಾ ಪಂಡಿತ್ ಅಭಿನಯ ಪಾಂಡಿತ್ಯಕ್ಕೆ ಮೆಚ್ಚಿ ತಲೆದೂಗಲೇ ಬೇಕು. ಶುಭಾಪೂಂಜಾ ಕುರಿತು ಎನೂ ಹೇಳದೆ ಇದ್ರೆ ಒಳಿತು ಅನ್ಸುತ್ತೆ. ಈಕೆ ನಗುವುದೊಂದೇ ಅಭಿನಯ ಅಲ್ಲ ಅಂತ ಎಷ್ಟು ಬೇಗ ತಿಳಿದ್ರೆ ಆಕೆಗೆ ಅಷ್ಟು ಒಳ್ಳೆಯದು ಅಂತ ನನ್ನ ಅನಿಸಿಕೆ. ಮಾನಸಿ ಹಾಗೂ ಸಂಗೀತಾ ಶೆಟ್ಟಿ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಮಿಕ್ಕಂತೆ ಹೀರೋಗಳಲ್ಲಿ ರಾಹುಲ್ ಪಾತ್ರ ಮಾಡಿದ ಹುಡುಗ ( ಇವನ ನಿಜ ಹೆಸರು ಗೊತ್ತಿಲ್ಲ ಕ್ಷಮಿಸಿ) ಮಾತ್ರ ಅವನು ಕಾಣಿಸೋವಷ್ಟೇ ಮುದ್ದಾಗಿ ಅಭಿನಯಿಸಿದ್ದಾನೆ. ನೃತ್ಯ, ಭಾವಾಭಿವ್ಯಕ್ತಿ, ಅಭಿನಯ ಎಲ್ಲಾನೂ ಸಲೀಸಾಗಿ ಮಾಡೋ ಇವನ ಚಾಕಲೇಟ್ ಹೀರೋ ಲುಕ್ ಬೋನಸ್ಸಿನಂತಿದೆ. ಮಿಕ್ಕ ಹೀರೋಗಳು (ಅದ್ರಲ್ಲೂ ಚಂಚಲಾಳ ಹುಚ್ಚು ಪ್ರೇಮಿಯ ಪಾತ್ರ ಮಾಡಿದವನು) ಡೈಲಾಗ್ ಹೇಳೋವಾಗ ಬಾಯಿಪಾಠ ಮಾಡಿದಂತೆ ಒಪ್ಪಿಸುವುದು, ಯಾರದ್ದೋ ಶೈಲಿಯಲ್ಲಿ ಡೈಲಾಗ್ ಹೊಡೆಯೋಕೆ ಹೋಗಿ..ಒಟ್ನಲ್ಲಿ ನೋಡೋರಿಗೆ ಫುಲ್ ಕಾಮಿಡಿ.

 

ಚಿತ್ರ ನಂಗಿಷ್ಟವಾದದ್ದು ಯಾಕಂದ್ರೆ…

           ಮೊಗ್ಗಿನಂತ ಮನಸ್ಸಿನ ಒಳಗೆ ನಡೆಯುವ ತುಮಲ, ಹೊಯ್ದಾಟಗಳನ್ನು ಸಮರ್ಥವಾಗಿ ನಿರ್ದೇಶಿಸಿರುವುದರಿಂದ

           ಮನಸಿನ ಏರಿಳಿತಗಳಿಗೆ ಅನುಗುಣವಾಗಿ ಬೆಳಕು ಸಂಯೋಜಿಸಿ, ಕಣ್ಣಿಗೆ ಹಬ್ಬವಾಗುವಂತೆ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ, ಹಾಡುಗಳಲ್ಲಿನ ದೃಶ್ಯವೈಭವ, ಜಲಪಾತ, ಸಮುದ್ರ, ಬೇಕಲ್ ಕೋಟೆ, ಯಾಣದ ಸೌಂದರ್ಯ ಕಣ್ಣಿಗೆ ಹಬ್ಬವಾಗುವಂತೆ ಮೂಡಿದ ದೃಶ್ಯಕಾವ್ಯದಂತಹ ಛಾಯಗ್ರಹಣ ಇರುವುದರಿಂದ. ಬೇಕಲ್‌ಕೋಟೆಯ ಸೀನ್ ಅಂತೂ ಬೊಂಬಾಟ್.

           ರಾಧಿಕಾ ಪಂಡಿತ್ ಅಭಿನಯ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂತಿರುವುದರಿಂದ

           ಕಿವಿಗೆ ಇಂಪಾಗುವ ಮನೋಮೂರ್ತಿ ಸಂಗೀತದ ಮಾಧುರ್ಯವು ಹಾಡಾಗಿ ಹರಿಯುವುದರಿಂದ

           ಶಾಟ್‌ನಿಂದ ಶಾಟ್‌ಗೆ ದೃಶ್ಯ ಬದಲಾಗುವಾಗ ಒಂದರೊಳಗೊಂದು ದೃಶ್ಯ ಬೆರೆತು ಹೋಗುವಂತೆ ಮಾಡಿದ ತಂತ್ರ ತನ್ನ ವಿಭಿನ್ನತೆಯಿಂದ ಮನಸೆಳೆಯೋದ್ರಿಂದ

           ಹಾಸ್ಯದೃಶ್ಯಗನ್ನು ವಿಭಿನ್ನವಾಗಿ ಸಂಯೋಜಿಸಿ, ಮಾಮೂ ಅನ್ನೋ ಕ್ಯಾರೆಕ್ಟರ್ ಮೂಲಕ ಪುಟ್ಟಪುಟ್ಟ ಹಾಸ್ಯತುಣುಕುಗಳಲ್ಲಿ ಮಿಂಚುವ ಶರಣ್ ಕಾಮಿಡಿಯಿಂದ

           ವಿಭಿನ್ನ ವಿಷಯವೊಂದನ್ನು ಕೈಗೆತ್ತಿಕೊಂಡು, ಅದನ್ನು ಮನಮುಟ್ಟುವಂತೆ ನಿರೂಪಿಸುವ ಪ್ರಯತ್ನದಲ್ಲಿ ಎಲ್ಲೂ ಬೋರಾಗದಂತೆ, ಕಥೆ ಹೇಳಿದ ರೀತಿಗೆ

 

ಓರೆಕೋರೆಗಳು ಏನಂದ್ರೆ..

           ನಂಗೂ ಒಬ್ಬ ಗೆಳೆಯ ಬೇಕು ಹಾಡಿನಲ್ಲಿ ತಾಲ್ ಸೆ ತಾಲ್ ಮಿಲಾ ಹಾಡಿನ ಛಾಯೆ ಇರೋದು ಯಾರು ಬೇಕಾದ್ರೂ ಹೇಳೋವಷ್ಟು ಸ್ಪಷ್ಟ. ಹಾಡು ಚೆನ್ನಾಗೆ ಇದೆ. ಅದರ ದೃಷ್ಯಗಳು ಸೂಪರ್ ಆಗಿವೆ. ಆದ್ರೆ ಮನೋಮೂರ್ತಿ ಹೀಗೆ ಒರಿಜಿನಲ್ ಟ್ಯೂನ್ ಹಾಕಿದ್ರೆ ಇನ್ನೂ ಚೆನ್ನಾಗಿರ್ತಿತ್ತು.

           ಸಂಭಾಷಣೆ ಕಡೆ ಗಮನ ಸ್ವಲ್ಪ ಜಾಸ್ತಿ ಕೊಡ್ಬೇಕಿತ್ತು ಅನ್ಸುತ್ತೆ. ಕೆಲವೊಮ್ಮೆ ತೀರಾ ಹಳೆಯ ಸವಕಲಾದ ಅದದೇ ಡೈಲಾಗ್ ಬಳಸೋಬದಲು ಇನ್ನೂ ಸ್ವಲ್ಪ ಗರಿಗರಿ ಮಾತುಗಳಿದ್ರೆ ಚೆನ್ನಾಗಿರ್ತಿತ್ತು.( ಉದಾ.. ಚಂಚಲಳ ಪ್ರೇಮಿ ಸುನಿಲ್ ಮಾತುಗಳು)

           ರೇಣುಕಾ ಮಾತನಾಡುವ ಧಾರವಾಡ ಕಡೆಯ ಕನ್ನಡ, ಒಮ್ಮಿಂದೊಮ್ಮೆ ತೀರಾ ಬೆಂಗಳೂರು ಕಡೆಯ ಕನ್ನಡವಾಗಿ ಬದಲಾದದ್ದು ಆಶ್ಚರ್ಯವಾಗಿತ್ತು. ಅದೂ ಆಲ್ಲದೆ ಆಕೆ ದುಃಖದ ಸನ್ನಿವೇಶಗಳಲ್ಲಿ ಮಾತನಾಡುವಾಗ ತೀರಾ ಮತ್ತಿನಲ್ಲಿದ್ದಂತೆ ಕೇಳಿ ಬರುತ್ತಿದ್ದ ಆಕೆಯ ದನಿ ತುಂಬಾ ವಿಚಿತ್ರವಾಗಿ ಕೇಳಿಸಿ, ರೇಜಿಗೆ ಹುಟ್ಟಿಸುವಂತಿತ್ತು.

           ಕೊನೆಯದಾಗಿ ಕಥೆಯನ್ನು ಇನ್ನೂ ನೇರವಾಗಿ ಸರಳವಾಗಿ ಹೇಳಿದ್ರೆ ಇನ್ನೂ ಹೆಚ್ಚು ಪರಿಣಾಮಕಾರಿ ಆಗ್ತಿತ್ತೇನೋ.

 

ಈ ಓರೆಕೋರೆಗಳನ್ನೆಲ್ಲ ಪಕ್ಕಕ್ಕಿಟ್ಟು ನೋಡಿದರೆ, ಮೊಗ್ಗಿನ ಮನಸು ನೋಡುವ ಮನಸನ್ನು ಅರಳಿಸುವುದು ಖಂಡಿತ. ಮೊಗ್ಗರಳಿ ಹೂವಾಗುವವರೆಗೆ ಕಾಯುವ ತಾಳ್ಮೆ ಇರಬೇಕು ಅನ್ನುವ ಸಂದೇಶದ ಜೊತೆಗೆ ಚಿತ್ರ ನಿಮಗೆ ಎಲ್ಲೂ ಬೋರ್ ಹೊಡೆಸದಂತೆ ಒಂದು ಮಧುರ ಅನುಭವ ಕಟ್ಟಿಕೊಡಲಿದೆ. ಸುಮಧುರ ಸಂಗೀತ, ರಮ್ಯ ದೃಶ್ಯಾವಳಿಗಳ ಜೊತೆಗೆ ಹದಿಹರೆಯದ ತಲ್ಲಣಗಳನ್ನು ಮನಸಿಗೆ ತಟ್ಟುವಂತೆ ಮಾಡೊದ್ರಲ್ಲಿ ಯಾವ ಅನುಮಾನವೂ ಇಲ್ಲ. ಕೊನೆಯಲ್ಲಿ ನೀಡಿದ ಸಂದೇಶ ಕೂಡಾ ಅಷ್ಟೇ ಚೆನ್ನಾಗಿದೆ. ಪ್ರೀತಿಯನ್ನು ಬೆನ್ನಟ್ಟಲು ಹೋಗಬೇಡಿ, ಅದಾಗಿ ಸಂಭವಿಸುವ ಗಳಿಗೆಯವರೆಗೆ ಕಾಯುವ ತಾಳ್ಮೆ,, ಸಹನೆ ಇರಲಿ

 

ಪ್ರಕೃತಿ ಸೌಂದರ್ಯದ ಮಡಿಲಲ್ಲಿ ತಣ್ಣಗೆ ಮಲಗಿರುವ ಮಹಾರಾಷ್ಟ್ರದ ಒಂದು ಹಳ್ಳಿ. ಬೆಟ್ಟದ ಮೇಲೊಂದು ಗುಬ್ಬಚ್ಚಿ ಗೂಡಿನಂತಹ ಬೆಚ್ಚನೆಯ ಮನೆ. ವೆಚ್ಚಕ್ಕೆ ಹೊನ್ನಿನಂಗಡಿಯ ಕೆಲಸ. ಇಚ್ಛೆಯನರಿತು ನಡೆವ ನೆಚ್ಚಿನ ಹೆಂಡತಿ ರಾಧಾ. ಇವಳು ಅಪ್ಪಟ ಮದರಾಸಿ ಬ್ರಾಹ್ಮಣ ಗೃಹಿಣಿ. ಇದು ಸ್ವಾಮಿ ಅನ್ನೋ ಮಹಾರಾಷ್ಟ್ರಿಯನ್ ಬ್ರಾಹ್ಮಣನ ಬಯೋಡೇಟಾ. ಅಪ್ಪಟ ಮಧ್ಯಮ ವರ್ಗೀಯ ದಂಪತಿಗಳ ಬದುಕಿನ ನೋಟ. ಮುದ್ದು ಕುವರನೊಬ್ಬ ಜನಿಸಿ ಬದುಕಾಯ್ತು ಸುಂದರ ಹೂದೋಟ. ಮಗುವಿನ ಭವಿಷ್ಯದ ಸುತ್ತ ದಂಪತಿಗಳ ಕನಸಿನ ಓಟ.

 

ಸ್ವಾಮಿಯ ಬಡತನದ ಬಾಲ್ಯದಲ್ಲಿ ಆತನಿಗೊಂದು ಕನಸಿದ್ದಿತ್ತು. ಒಂದು ತೂಗು ಕುರ್ಚಿಯಲ್ಲಿ ಸುಖಾಸೀನನಾಗುವ ಬಯಕೆ ಮನಸಲ್ಲಿ ಅಚ್ಚೊತ್ತಿರುತ್ತೆ. ಅಂತಹ ಕುರ್ಚಿಯನ್ನು ಕಂಡಾಗಲೆಲ್ಲ ಮಗು ಮನಸಿನ ಸ್ವಾಮಿಯನ್ನು ಆ ಕುರ್ಚಿಯ ಕನಸು ಕಚ್ಚುತ್ತಿರುತ್ತೆ. ಅದರ ಬೆಲೆ ಮಾತ್ರ ಇವನ ಸೀಮಿತ ಆದಾಯದ ಪರಿಧಿಯೊಳಗೆ ಬರದೆ ಕನಸಿನ ಬಲೂನಿಗೆ ಸೂಜಿ ಚುಚ್ಚುತ್ತಿರುತ್ತೆ. ಹೀಗೆ ಸಾಗುತ್ತೆ ಸ್ವಾಮಿ-ರಾಧಾರ ಬದುಕಿನ ಪಯಣ.

 

ಟಿ.ವಿ.ಯಲ್ಲಿ ಬಂದ ವರದಿಯನ್ನು ನೋಡಿ ಮಗುವಿನ ಶಿಕ್ಷಣ ಹಳ್ಳಿಯ ಶಾಲೆಯಲ್ಲಾದರೆ ಸರಿಯಾಗಿ ನಡೆಯದೇನೋ ಅನ್ನೋ ದಿಗಿಲು ರಾಧೆಯ ಮನಸ್ಸಿನಲ್ಲಿ ಮೂಡಿ, ಈ ಕುರಿತು ಆಕೆ ಸ್ವಾಮಿಯನ್ನು ಕಾಡಿ ಬೇಡಿ, ಗೂಡು ಬಿಟ್ಟು ದೂರದ ಮುಂಬೈಗೆ ಹಾರಿ ಹೋಯ್ತು ಈ ಹಕ್ಕಿ ಜೋಡಿ. ತನ್ನ ಚೂಟಿತನದ ಮಾತುಗಳು, ಮುಗ್ಧ ತೊದಲ್ನುಡಿಯ ಮೋಡಿ ಮಾಡಿ ಪ್ರಿನ್ಸಿಪಾಲರ ಮನ ಗೆಲ್ಲುವ ಮಗ ಪ್ರತಿಷ್ಟಿತ ಶಾಲೆಗೆ ಸೇರಿದಾಗ ಸ್ವಾಮಿ ದಂಪತಿಗಳ ಪಾಲಿಗೆ ಎವೆರೆಸ್ಟ್ ಶಿಖರ ಹತ್ತಿದ್ದಕ್ಕಿಂತಲೂ ಒಂದು ಕೈ ಮೇಲಿನ ಸಾಧನೆ ಮಾಡಿದಷ್ಟೇ ಖುಶಿ. ಟಿ.ವಿ.ಯಲ್ಲಿ ಅಮೇರಿಕಾವನ್ನು ಕಂಡ ಮಗ ತಾನೂ ಅಲ್ಲಿಗೆ ಹೋಗ್ತೀನಿ , ನಿನ್ನನ್ನ ಹೆಗಲ ಮೇಲೆ ಕೂರಿಸ್ಕೊಂಡು ಕರ್ಕೊಂಡೋಗ್ತೀನಿ ಅಂತಾ ನುಡಿದದ್ದನ್ನು ಕೇಳಿ ರಾಧಾಳ ಕನಸಿನ ರೆಕ್ಕೆಗೆ ಗರಿ ಮೂಡಲಾರಂಭಿಸುತ್ತೆ.

 

ಈ ನಡುವೆ ಕುರ್ಚಿಯ ಕನಸಿನ ಗೀಳು ಸ್ವಾಮಿಯನ್ನು ಆವರಿಸಿಕೊಳ್ಳುತ್ತೆ. ಆದರೆ ತನ್ನ ಸಾಮರ್ಥ್ಯದ ಎಟುಕಿಗೆ ನಿಲುಕದ ಕಾರಣ ಸುಮ್ಮನಿರುತ್ತಾನೆ. ಹೀಗೆ ನಿರುದ್ವಿಗ್ನನಾಗಿ ಸಾಗುತ್ತಿದ್ದ ಸ್ವಪ್ನ ವಿಹಾರಕ್ಕೆ ಬ್ರೇಕ್ ಬೀಳೋದು ರಾಧಾಳ ಖಾಯಿಲೆಯಿಂದಾಗಿ. ಸ್ವಾಮಿ ಆಸೆಯಿಂದ ಗೋಲಕಕ್ಕೆ ಹಾಕಿಟ್ಟ ೫ ರೂಪಾಯಿಯ ನಾಣ್ಯಗಳ ಮೊತ್ತ ಕೂಡಾ ರಾಧಾಳ ಚಿಕಿತ್ಸೆಗೆ ಸಾಲದೆಂದು ಗೊತ್ತಾದಾಗ ಸ್ವಾಮಿ ಓವರ್‌ಟೈಮ್ ಕೆಲಸ ಮಾಡಿ ದುಡ್ಡು ಜೋಡಿಸುತ್ತಾನೆ. ಇನ್ನೇನು ನಾಳೆ ಆಪರೇಷನ್ ಅಂತನ್ನುವಾಗ ಸ್ವಾಮಿಯ ಹಣದ ಪೆಟ್ಟಿಗೆಯ ಹಣ ಮಂಗಮಾಯ. ಎಲ್ಲಿ ಹೋಯ್ತು ಆ ಹಣ, ರಾಧಾಳ ಸ್ಥಿತಿ ಏನಾಯ್ತು, ಮಗನ ಅಮೇರಿಕಾ ಯಾತ್ರೆಯ ಅವಳ ಕನಸು ಕೊನೆಗೂ ಇಡೇರಿತೆ, ಹಾಗಾದ್ರೆ ಸ್ವಾಮಿಯ ಕುರ್ಚಿಯ ಕಥೆ ಏನು…ಈ ಚಿತ್ರವನ್ನು ಇನ್ನೂ ನೋಡಿಲ್ಲವಾದರೆ ಈಗ ಮೋಸರ್ ಬೇರ್ಸಿ.ಡಿ ಯಲ್ಲಿ ನೋಡಬಹುದು. ಅಂದ ಹಾಗೆ ಚಿತ್ರದ ಹೆಸರು ಸ್ವಾಮಿ.

 

ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಪ್ರಥಮ ಬಾರಿಗೆ ನಿರ್ದೇಶಕರಾಗಿ ಕಳೆದ ವರ್ಷ ಬಿಡುಗಡೆಯಾದ ಈ ಚಿತ್ರ ತನ್ನ ವಸ್ತು ಮತ್ತು ಅದರ ಮನಮುಟ್ಟುವ ನಿರೂಪಣೆಯ ದೆಸೆಯಿಂದ ಮನಸ್ಸಿನ ಮೂಲೆಯ ಯಾವುದೋ ತಂತುವನ್ನು ಮೀಟುವಲ್ಲಿ ಸಫಲವಾಗುತ್ತದೆ. ಮಧ್ಯಮ ವರ್ಗೀಯ ಜನರ ಕನಸು, ಅದು ನನಸಾಗುವತ್ತ ಸಾಗುವ ಬದುಕಿನ ಪಯಣದ ತಿರುವುಗಳು, ಕುಟುಂಬವೊಂದರ ಸುತ್ತ ಗಿರಕಿ ಹೊಡೆಯುವ ಈ ಸರಳ ಕಥಾವಸ್ತು ಕಿವಿಗೆ ಹಿತವೆನಿಸುವ ಹಾಡು, ಕಣ್ಣಿಗೆ ಹಬ್ಬದಂತಾ ದೃಶ್ಯಗಳ ಜೊತೆಗೆ ಭಾವನಾತ್ಮಕ ಆಯಮವನ್ನು ಹೊಂದಿರುವ ಕಾರಣ ಇಷ್ಟವಾಗುತ್ತೆ. ಇಲ್ಲಿ ಸ್ವಾಮಿಯ ಕುರ್ಚಿಯ ಕನಸನ್ನು ಜನಸಾಮಾನ್ಯನ ಮಹದಾಶೆಯೊಂದರ ಪ್ರತಿಮೆಯನ್ನಾಗಿಸಿಕೊಂಡು, ಸೂಚ್ಯವಾಗಿ ಕನಸಿನ ಸುತ್ತ ಸಾಗುವ ನಮ್ಮದೇ ಬದುಕಿನ ಚಿತ್ರವೊಂದನ್ನು ಬಿಡಿಸಿಡಲಾಗಿದೆ. ಇಲ್ಲಿ ಸ್ವಾಮಿ ನಮ್ಮ ಪ್ರತೀಕವಾದರೆ, ಆತನ ಕುರ್ಚಿಯ ಆಸೆ ನಮ್ಮ ಕನಸು ಆಸೆಗಳಿಗೆ ಸಮೀಕರಿಸಿಕೊಂಡು ನೋಡಿದರೆ ಚಿತ್ರಕ್ಕೆ ಬೇರೆಯದೆ ಆದ ಹೊಸ ರೂಪ ಆಯಾಮ ಸಿಗುತ್ತೆ. ಈ ಪಯಣದ ಏರು-ಪೇರು, ಹಾದಿಯ ತಿರುವುಗಳು….ನಿಮ್ಮನ್ನು ಕಾಡಿಸುತ್ತವೆ.

 

ಸಿದ್ಧ ಸೂತ್ರಕ್ಕೆ ಬಲಿಯಾಗದ ಒಂದು ಸರಳ ಸುಂದರ ಚಿತ್ರ ನೋಡುವ ಆಸೆ ಇದ್ದರೆ ಸ್ವಾಮಿಯನ್ನು ನೋಡಬಹುದು. ವಿಭಿನ್ನ ಪಾತ್ರದಲ್ಲಿ ಸ್ವಾಮಿಯಾಗಿ ಮನಸೂರೆಗೊಳ್ಳುವ ಮನೋಜ್ ಬಾಜ್‌ಪೇಯಿ ಖಂಡಿತ ನಿಮಗಿಷ್ಟವಾಗುತ್ತಾರೆ. ಅಪ್ಪಡಿಯಾ ಅನ್ನುವ ಅಪ್ಪಟ ಮದ್ರಾಸಿ ಗೃಹಿಣಿ ಜೂಹಿಯ ಅಭಿನಯ ಕೂಡಾ ಆಹ್ಲಾದ ತರುತ್ತದೆ. ಒಮ್ಮೆ ಸ್ವಾಮಿ ನೋಡಿ… ಆಮೇಲೆ ಹೇಗಿದೆ ಹೇಳಿ.

ಶಂಕರನಾಗ್‌ರ ಹಳೆಯ ಚಿತ್ರದ ಶೀರ್ಷಿಕೆ, ಜೊತೆಗೆ ರಮೇಶ್ ನಿರ್ದೇಶನ ಕಮ್ ಅಭಿನಯದ ಚಿತ್ರ ಹಾಗು ಸಿನೆಮಾದ ಕುರಿತು ಕೇಳಿ ಬರುತ್ತಿದ್ದ ಮೆಚ್ಚುಗೆಯ ಮಾತುಗಳ ಹಿನ್ನೆಲೆಯಲ್ಲಿ ಅಪಾರ ನಿರೀಕ್ಷೆ ಇಟ್ಟುಕೊಂಡು ನೋಡಲು ಹೊರಟ ಚಿತ್ರವೇ.. ಆಕ್ಸಿಡೆಂಟ್. ಚಿತ್ರ ನೋಡಿ ಹೊರಬಂದ ಮೇಲೆ ಭರವಸೆ ಹುಸಿಯಾಗಲಿಲ್ಲ ಎಂಬ ಸಮಾಧಾನ; ಒಂದು ವಿಭಿನ್ನ ಚಿತ್ರವನ್ನು ನೋಡಿ ಆನಂದಿಸಿದ ಖುಷಿ. ಮಾಮೂಲಿ ಸಿದ್ಧಸೂತ್ರಗಳಿಂದ ತುಂಬಿರುವ ಮಸಾಲ ಚಿತ್ರಗಳಂತಿರದೆ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಿದ್ದಕ್ಕಾಗಿ ರಮೇಶ್ ಅವರನ್ನು ಶ್ಲಾಘಿಸಬೇಕು.. ಅಭಿನಂದಿಸಬೇಕು.

 

ಚಿತ್ರದ ಕಥೆಯತ್ತ ಬಂದ್ರೆ…ಹೀರೋ ಸಾವಂತ್(ರಮೇಶ್) ಒಬ್ಬ ರೇಡಿಯೋ ಜಾಕಿ. ಹೆಂಡತಿ ಅಂದ್ರೆ ಪಂಚಪ್ರಾಣ. ಅವನ ಪತ್ನಿಪ್ರೀತಿ ಕಂಡು ಅವನೊಂದಿಗೆ ವಿದೇಶಯಾತ್ರೆಗೆ ತೆರಳಿದ್ದ ಕಲೀಗ್ (ಪೂಜಾ ಗಾಂಧಿ) ಅಸೂಯೆಯಿಂದ ಅವನ ಕಾಲೆಳಿತಾ ಇರ್ತಾಳೆ. ಅವರು ಬೆಂಗಳೂರು ಮುಟ್ಟುವಷ್ಟರಲ್ಲಿ ಅವನ ಪತ್ನಿ ವಸುಂಧರ (ರೇಖಾ) ಆಕ್ಸಿಡೆಂಟ್‌ನಲ್ಲಿ ಇಲ್ಲವಾಗುತ್ತಾಳೆ. ಅವಳ ಸಾವಿನ ಸುತ್ತ ಅನುಮಾನಗಳ ಪೊದರು. ಶಿಕ್ಷಕಿಯಾಗಿದ್ದು ಸಮಾಜದ ಅನ್ಯಾಯದ ವಿರುದ್ಧ ಸೊಲ್ಲೆತ್ತಿ ಹೋರಾಡುವ ದಿಟ್ಟೆ ವಸು ಈ ಹೋರಾಟದಿಂದಾಗಿ ಯಾರ್‍ಯಾರದೋ ವಿರೋಧ ಕಟ್ಟಿಕೊಂಡಿರೋದ್ರಿಂದ ಇದು ಖಂಡಿತಾ ಅ ಆಕ್ಸಿಡೆಂಟ್ ಅಲ್ಲ ಕೊಲೆ ಅಂತ ಅನ್ನಿಸೊಕೆ ಶುರುವಾಗುತ್ತೆ. ಈ ಜಾಡನ್ನು ಹಿಡಿದು ಹೊರಡುವ ನಾಯಕನ ಸತ್ಯ ಶೋಧನೆಯ ಹಾದಿಯ ಸುತ್ತ ಹೆಣೆದ…ಕ್ಷಣ ಕ್ಷಣಕ್ಕೂ ರೋಚಕ ತಿರುವುಗಳನ್ನು ಪಡೆಯುತ್ತಾ ಸಾಗುವ ಚಿತ್ರದ ಕಥೆ ನಿಜಕ್ಕೂ ಥ್ರಿಲ್ಲಿಂಗ್. ಪ್ರಥಮಾರ್ಧದ ತುಂಬೆಲ್ಲಾ ಪ್ರತೀ ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಮೂಡಿಸುತ್ತಾ ಸಾಗುವ ಚಿತ್ರದಲ್ಲಿ ಅಲ್ಲಲ್ಲಿ ನಾಯಕನ ನೆನಪಿನಾಳದಲ್ಲಿ ಮೂಡಿ ಮರೆಯಾಗುವ ನಾಯಕಿಯೊಂದಿಗಿನ ಕ್ಷಣಗಳ ಮೆಲುಕು. ಸಿಕ್ಕಿದ ಸುಳಿವುಗಳ ಒಳಸುಳಿಗಳ ಆಳಕ್ಕಿಳಿದು ನಾಯಕಿಯ ಸಾವಿಗೆ ಕಾರಣ ಹುಡುಕುವ ನಾಯಕನ ಹುಡುಕಾಟವೇ ಆಕ್ಸಿಡೆಂಟ್. ಈ ಹುಡುಕಾಟದಲ್ಲಿ ನಾಯಕ ಯಶಸ್ವಿಯಾಗ್ತಾನಾ? ಅದು ಕೊಲೆಯೋ ಅಥವಾ ಆಕ್ಸಿಡೆಂಟೋ? ಆಕೆಯ ನಿಗೂಡ ಸಾವಿಗೆ ಕಾರಣ ಏನು…ಇದನ್ನೆಲ್ಲಾ ಈಗಲೇ ಹೇಳಿ ಬಿಟ್ರೆ ಏನು ಸ್ವಾರಸ್ಯವಿದೆ ಅಲ್ವೆ?

 

ಮಧ್ಯಂತರದವರೆಗೆ ಚಿತ್ರದ ನಿರೂಪಣೆಯಲ್ಲಿ ಎಲ್ಲೂ ಬಿಗುವನ್ನು ಬಿಟ್ಟುಕೊಡದ ರಮೇಶ್ ದ್ವಿತೀಯಾರ್ಧದಲ್ಲಿ ಸ್ವಲ ಹಿಡಿತ ಸಡಿಲಿಸಿದಂತೆ ಭಾಸವಾದರೂ ಕೂಡಾ, ಚಿತ್ರದ ಆಶಯಕ್ಕೆ ಇದರಿಂದ ಒಂದಿನಿತೂ ಧಕ್ಕೆಯಾಗಿಲ್ಲ ಅನ್ನೋದು ನಿಜ. ಹಾಗಂತ ಚಿತ್ರದ ಬಗ್ಗೆ ಒಂದೂ ದೂರು ಇಲ್ಲ ಅಂತ ತಿಳಿಬೇಡಿ. ಮೊತ್ತ ಮೊದಲನೆಯದು ಚಿತ್ರದ ಹಾಡುಗಳ ಕುರಿತು. ಇರುವ ಹಾಡುಗಳಲ್ಲಿ ಮನಸ್ಸಿನಲ್ಲುಳಿಯುವುದು ಸೋನು ನಿಗಮ್ ಹಾಡಿರುವ ಬಿ.ಆರ್.ಲಕ್ಷ್ಮಣರಾವ್ ಬರೆದಿರುವ ಬಾ ಮಳೆಯೆ ಬಾ.. ಹಾಡು ಮಾತ್ರ. ಉಳಿದಂತೆ ಜಿಗಿದು ಬಂತು ಪರವಾಗಿಲ್ಲ. ಮಿಕ್ಕೆಲ್ಲ ಹಾಡುಗಳು ಅಷ್ಟಾಗಿ ಮನ ಸೆಳೆಯುವಲ್ಲಿ ವಿಫಲವಾಗಿವೆ. ಜೊತೆಗೆ ಹಾಡಿನ ಅಬ್ಬರ ಮತ್ತು ಕಿವಿಯ ಮೇಲೆ ಅಪ್ಪಳಿಸುವ ಡ್ರಮ್‌ಬೀಟ್ಸ್‌ನಿಂದಾಗಿ ಸ್ವಲ್ಪ ಹಾರ್ಷ್ ಅನ್ನಿಸಿ ಹಾಡಿನ ಸಾಹಿತ್ಯವೇ ಮಸುಕಾಗಿತ್ತು. ಜೊತೆಗೆ ಇಂತಹಾ ಕಥಾಹಂದರದ ಚಿತ್ರಕ್ಕೆ ಈ ಹಾಡುಗಳನ್ನು ತುರುಕುವ ಔಚಿತ್ಯ ಕೂಡಾ ಪ್ರಶ್ನಾರ್ಹ.

ಇನ್ನು ಪಾತ್ರಗಳ ಕುರಿತು ಹೇಳಬೇಕೆಂದರೆ ದತ್ತಣ್ಣನ ಪಾತ್ರ ಚಿತ್ರಕ್ಕೆ ಯಾವ ರೀತಿ ಅಗತ್ಯವಾಗಿತ್ತು ಅನ್ನೋದನ್ನು ಚಿತ್ರ ನೋಡಿ ನೀವೇ ನಿರ್ಧರಿಸಿ. ಅಂತೆಯೇ ಪೂಜ ಗಾಂಧಿ ಎಂಬ ಗ್ಲಾಮರ್ ಬೊಂಬೆಯ ಪಾತ್ರ. ರಮೇಶ್ ಜೊತೆ ರೇಡಿಯೋ ಜಾಕಿಯಾಗಿರೋ ಪೂಜಾ, ದಾಂಡಿಯಾ ನೃತ್ಯವೊಂದರಲ್ಲಿ ಪ್ರೇಕ್ಷಕರ ಕಣ್ಣುಕುಕ್ಕುವುದಕ್ಕಷ್ಟೇ ಸೀಮಿತವಾಗಿಬಿಟ್ಟಿದ್ದಾರೆ.

 

ಇನ್ನು ರಮೇಶ್ ವಿಷಯಕ್ಕೆ ಬಂದ್ರೆ..ನಿರ್ದೇಶನ ಹಾಗು ಅಭಿನಯ ಎರಡರಲ್ಲೂ ಪೂರ್‍ಣಾಂಕದ ಜೊತೆಗೆ ಬೋನಸ್ ಅಂಕ ಕೊಟ್ರೂ ತಪ್ಪಿಲ್ಲ. ಇಡೀ ಚಿತ್ರಕ್ಕೆ-ಚಿತ್ರಕಥೆಗೆ ರಮೇಶ್ ಜೀವಾಳ. ರೇಖಾ ಚಿತ್ರದ ಆರಂಭಕ್ಕೇ ಇಲ್ಲವಾಗುವುದರಿಂದ ಆಮೇಲೆ ರಮೆಶ್ ನೆನಪಿಸಿಕೊಳ್ಳುವ ದೃಶ್ಯ ಹಾಗು ಹಾಡುಗಳಲ್ಲಷ್ಟೇ ಮಿಂಚುತ್ತಾರೆ. ನಾಟಕರಂಗದ ದೈತ್ಯ ಪ್ರತಿಭೆ ರಾಜೇಂದ್ರ ಕಾರಂತ್ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಾಗಿ ಗಮನ ಸೆಳೇಯುತ್ತಾರೆ. ತಮ್ಮ ಡೈಲಾಗ್‌ಗಳಿಂದ ಬಿಗಿಯಾಗಿರುವ ಮುಖದಲ್ಲಿ ಮೆಲುನಗು ಅರಳಿಸುತ್ತಾರೆ. ಮಿಕ್ಕಂತೆ ಸುಧಾರಾಣಿ ಚಿಕ್ಕರೋಲ್‌ನಲ್ಲಿ ಚೊಕ್ಕದಾಗಿ ಅಬಿನಯಿಸಿದ್ದಾರೆ. ಮೋಹನ್, ವಿಶಾಲ್, ದಿನೇಶ್‌ಬಾಬು ಕೂಡಾ ಸಹಜವಾಗಿ ಅಭಿನಯಿಸಿದ್ದಾರೆ. ಜೊತೆಗೆ ಅನೇಕ ಹೊಸ-ಹಳೇ ಮುಖಗಳು ಕಾಣಿಸಿಕೊಂಡರೂ ಕೂಡಾ, ಚಿತ್ರದ ವಸ್ತುವಿನಿಂದಾಗಿ ಯಾವ ಪಾತ್ರಕ್ಕೂ ಅಷ್ಟೇನು ಸ್ಕೋಪ್ ಇರಲಿಲ್ಲವಾದ್ದರಿಂದ ಅಷ್ಟಾಗಿ ಮಿಂಚಲು ಯಾರಿಗೂ ಅವಕಾಶವಿಲ್ಲ. ಆದ್ರೂ ಅಭಿನಯದ ವಿಷಯದಲ್ಲಿ ಯಾರೂ ಪಾತ್ರಕ್ಕೆ ಮೋಸ ಮಾಡಿಲ್ಲ.(ದತ್ತಣ್ಣ ಅವರ ವಿಷಯದಲ್ಲಿ ಪಾತ್ರವೇ ಅವರ ಅಭಿನಯ ಪ್ರತಿಭೆಗೆ ಮೋಸ ಮಾಡಿತು ಅಂದ್ರೂ ತಪ್ಪಿಲ್ಲ) 

 

ಒಟ್ಟಾರೆಯಾಗಿ ಹೇಳಬೇಕೆಂದ್ರೆ ವಿಶಿಷ್ಟ ಪ್ರೊಡಕ್ಷನ್‌ನವರು ಕನ್ನಡಕ್ಕೆ ಅಪರೂಪವೆನ್ನಿಸುವ ಒಂದು ಉತ್ತಮ, ವಿಭಿನ್ನ ಚಿತ್ರವನ್ನು ನಮ್ಮ ಮುಂದೆ ಇರಿಸಿದ್ದಾರೆ. ಸಧ್ಯದ ಟ್ರೆಂಡ್ ಆದ ಹದಿಹರೆಯದ ಪ್ರೀತಿ, ರೌಡಿಸಂ ನೆರಳಲ್ಲಿ ಅರಳುವ ಪ್ರೀತಿ ಇವುಗಳಿಗಿಂತ ಭಿನ್ನವಾಗುಳಿವ ಅಪರೂಪದ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ನೀಡಿದ್ದಾರೆ. ಈ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ಕೂಡಾ ಕಂಡಿದ್ದಾರೆ. ಆ ಪ್ರಯತ್ನವನ್ನು ಮೆಚ್ಚಿ ಪ್ರೋತ್ಸಾಹಿಸಲು, ಸವಿದು ಆನಂದಿಸಲು ಮನೆಮಂದಿಯೆಲ್ಲಾ ಒಮ್ಮೆ ನೋಡ ಬಹುದಾದ ಅತ್ಯುತ್ತಮ ಚಿತ್ರ ಆಕ್ಸಿಡೆಂಟ್. ಬರೇ ಪ್ರಚಾರ ಗಿಮಿಕ್‌ಗಳಿಂದಲೇ ಚಿತ್ರಕ್ಕೆ ಜನರನ್ನು ಸೆಳೆಯುವ ಮಂದಿಯ ನಡುವೆ, ರಮೇಶ್ ನಿಜಕ್ಕೂ ಒಂದು ಉತ್ತಮ ಚಿತ್ರ ನೀಡಿ ಅದಕ್ಕೆ ಭರ್ಜರಿ ಪ್ರಚಾರ ಮಾಡಿದ್ದಾರೆ. ಈ ಪ್ರಚಾರ ಪ್ರಯತ್ನ ಖಂಡಿತವಾಗಿಯೂ ಹುಸಿಹೋಗೋಲ್ಲ ಅನ್ನೋದು ಚಿತ್ರ ನೋಡಿದ ಎಲ್ಲರ ಅನಿಸಿಕೆ ಮತ್ತು ಆಶಯ.