Posts Tagged ‘ವೈಯೆನ್ಕೆ’

ವೈಯೆನ್ಕೆಯವರ ಪನ್ನು, ಫನ್ನುಗಳ ಬಗ್ಗೆ ಬರೀಬೇಕು ಅಂತ ತುಂಬಾ ದಿನದಿಂದ ಅಂದುಕೊಳ್ಳುತ್ತಿದ್ದೆ. ಇವತ್ತು ಕಾಲ ಕೂಡಿ ಬಂದಿದೆ. ಅವರ ಬೆರಗುಗಣ್ಣಿನ ನೋಟಕ್ಕೆ ದಕ್ಕುತ್ತಿದ್ದ ಸ್ವಾರಸ್ಯವನ್ನು ಅಷ್ಟೇ ರಸವತ್ತಾಗಿ ಓದಿಸಿಕೊಂಡು ಹೋಗುವಂತೆ ಬರೆಯುವ ಒಂದು ವಿಶಿಷ್ಟ ಶೈಲಿ ವೈಯೆನ್ಕೆಯವರಿಗೆ ಸಿದ್ಧಿಸಿತ್ತು. ವಂಡರ್‌ಕಣ್ಣಿನ ವಿಷಯ ವೈವಿಧ್ಯತೆ, ಪದಗಳೊಂದಿಗೆ ಸರಸವಾಡುತ್ತಾ ವಿಶೇಷ ಅರ್ಥಗಳನ್ನು ಹೊರಡಿಸುವ ಅದರ ಪಂಚುಗಳು, ಲಘುಧಾಟಿಯಲ್ಲೇ ಬರೆದರೂ ಕೂಡಾ ಸೂಕ್ಷ್ಮವಾಗಿ ಚುರುಕುಮುಟ್ಟಿಸಬೇಕಾದವರಿಗೆ ಚಾವಟಿಯೇಟಿನಂತಿದ್ದ ಅದರ ಮೊನಚು…ಹೀಗೆ ಅಂಕಣ ಬರಹದ ಯಾವ ನಿರ್ದಿಷ್ಟ ಕಟ್ಟುಪಾಡಿಗೂ ಸಿಲುಕದೇ…ತನ್ನದೇ ಒಂದು ವಿಶಿಷ್ಟ ಹಾದಿ ನಿರ್ಮಿಸಿಕೊಂಡಿತ್ತು. ಆ ಕಾರಣಕ್ಕೇ ಅದು ಓದುಗರಿಗೂ ಇಷ್ಟವಾಗಿತ್ತು.

 

ನೋಟದಿ ಹುಡುಕಿ ಸ್ವಾರಸ್ಯವನ್ನು,

ಅದಕೆ ಸೇರಿಸಿದರೆ ಹದವಾಗಿ ಫನ್ನು,

ಮೇಲೊಂದಿಷ್ಟು ಶಬ್ದಗಳಾಟದ ಪನ್ನು,

ಇಂಥ ಲೇಖನವ ಬರೆಯುವ ಪೆನ್ನು,

ಓದುಗರತ್ತ ನಗೆಬಾಣವ ತೂರುವ ವೆಪನ್ನು,

ಹಾಗಾಗಿ ಜನಪ್ರಿಯವಾಗಿತ್ತು ವಂಡರ್‌ಕಣ್ಣು

 

ವೈಯೆನ್ಕೆ ಪಂಚುಗಳಲ್ಲೇ ನನಗೆ ಅತ್ಯಂತ ಖುಷಿಕೊಟ್ಟಿದ್ದು ಇರಾನ್-ಇರಾಕ್ ಯುದ್ಧದ ಸಂದರ್ಭದಲ್ಲಿ ಆ ಯುದ್ಧವನ್ನು ಒಂದೇ ಸಾಲಿನಲ್ಲಿ ಬಣ್ಣಿಸಿದ ಅವರ ಚಾಟೂಕ್ತಿ

 

ಸುಮ್ನೆ ಇರಾಣ ಅಂದ್ರೆ ಇರಾಕ್ ಬಿಡಾಕಿಲ್ಲ !!

 

ಈ ಚತುರೋಕ್ತಿಗೆ ಬೇರೆ ವಿವರಣೆಯೇ ಬೇಕಾಗಿಲ್ಲ. ಪನ್ನು, ಫನ್ನು, ವಿಟ್ಟು, ಸುದ್ದಿಗೆ ಗುದ್ದು ಎಲ್ಲಾ ಇದೊಂದರಲ್ಲೇ ಮಿಳಿತವಾಗಿದೆ.

 

ವೈಯೆನ್ಕೆಯವರು ಪದ್ಯ ಇಷ್ಟು ಲೈಟ್ ಆದ್ರೆ ಹೇಗೆ ಸ್ವಾಮಿ ಅನ್ನುವ ಲಘುಧಾಟಿಯ ಪದ್ಯಗಳ ಸಂಕಲನವೊಂದನ್ನು ಹೊರತಂದಿದ್ದರು. ಅದರಲ್ಲಿನ ಒಂದೆರಡು ಪಂಚ್ ನಿಮಗಾಗಿ…

 

ಕಪಿಲವಸ್ತುವಿನ ರಾಜ

            ಶುದ್ಧೋದನ

ಅವನ ಮಗ ರಾತ್ರೋರಾತ್ರಿ

            ಎದ್ಹೋದನ

ಹೆಂಡತಿ ಮಗೂನ ಬಿಟ್ಟು

            ಒಬ್ಬನೇ ಪರಾರಿ

ನಿದ್ರೆ ಬರದವರಿಗೆಲ್ಲ

            ಇದೇ ಸರಿಯಾದ ದಾರಿ

ಹಿಂತಿರುಗಿ ಬರುವಾಗ

            ಪೂರ್ತಿ ಬದಲಾಯಿಸಿದ್ದ

ಹೆಸರೂ ಕೂಡ; ಸಿದ್ಧಾರ್ಥ

            ಆಗಿದ್ದ ಬುದ್ಧ

 

ಇನ್ನೊಂದು ಕ್ರಾಂತಿಕಾರಿ ಅನ್ನೋ ಪದ್ಯದ ಕೊನೆಯಲ್ಲಿರುವ ಪಂಚು ನೋಡಿ

 

ಎಡಗೈಲಿ ಕುಡುಗೋಲು

            ಬಲಗೈಲಿ ಸುತ್ತಿಗೆ

ಮನೇಗ್ ಬೇಗ ಹೋಗದಿದ್ರೆ

            ಬೈತಾಳೆ ಅತ್ತಿಗೆ

 

ಗಾಳಿಪಟ ಚಿತ್ರದಲ್ಲಿ ಕೇಳಿದ ಕವಿತೆ, ಕವಿತೆ..ನೀನೇಕೆ ಪದಗಳಲಿ ಕುಳಿತೆ ಅನ್ನೋ ಸಾಲು ನೆನಪಿದ್ಯಾ…?

ಅದನ್ನು ಹೋಲುವ ಸಾಲುಗಳನ್ನು ವೈಯೆನ್ಕೆ ಮುಂಚೇನೆ ಬರ್ದಿದ್ದಾರೆ…!

 

ಕವಿತೆ

ನೀನೇಕೆ

ಪದಗಳಲ್ಲಿ

ಅವಿತೆ?

 

ಹೀಗೆ ಅವರ ಪನ್ನು, ಪನ್-ಚುಗಳ ಬಗ್ಗೆ ಎಷ್ಟು ಬೇಕಾದ್ರೂ ಬರೀಬಹುದು. ಅವರ ಪನ್ನುಗಳ ಕೆಲವು ಸ್ಯಾಂಪಲ್ ಇಲ್ಲಿದೆ…

 

ಚರಣೇ-shoe

ಆಟೋ-ಬಯ್ಯಾಗ್ರಫಿ – ಏರುವ ಆಟೋ ದರಗಳಿಗೆ ಜನರ ಪ್ರತಿಕ್ರಿಯೆ !!

ಉಪನಯನ ಕನ್ನಡಕ

Phd – precious hours of drinking

He whispered in the right ear which was the wrong ear. ( ಬಲಗಿವಿ ಕಿವುಡಾದವನ ಕಿವಿಯಲ್ಲಿ ಉಸುರಿದ ಕುರಿತು)

 

ಅವರ ಬರಹದ ಕೊನೆಯಲ್ಲಿ ಕೊನೆಸಿಡಿ ಅಂತ ಇರ್ತಾ ಇತ್ತು. ಅವರ ಕೊನೆಸಿಡಿಯೊಂದನ್ನು ಸಿಡಿಸುತ್ತಾ ಈ ಬರಹವನ್ನು ಮುಗಿಸುತ್ತೇನೆ

 

ಗೆಳೆಯರಿಬ್ಬರಲ್ಲಿ ಸಿನಿಮಾಗೆ ಹೋಗುವ ಬಗ್ಗೆ ಮಾತುಕತೆ ನಡೀತಿರುತ್ತೆ.

ರಾಮು ಏ ಸೋಮು, ಇಂಗ್ಲೀಷ್ ಪಿಕ್ಚರ್‌ಗೆ ಹೋಗೋಣ್ವಾ?

ಸೋಮು – ಬೇಡ ಕಣೋ. ನಂಗೆ ಇಂಗ್ಲೀಷ್ ಅರ್ಥ ಆಗೊಲ್ಲ. ಸುಮ್ನೆ ದುಡ್ ವೇಷ್ಟು.

ರಾಮು – ಹಾಂಗಿದ್ರೆ ಬಾ ನಡಿ ಕನ್ನಡ ಸಿನಿಮಾಗೆ ಹೋಗೋಣ. ಅದ್ರಲ್ಲಿ ಡಬ್ಬಲ್ ಮೀನಿಂಗ್ ಇರೋ ಡೈಲಾಗ್‌ಗಳು ಇರುತ್ತೆ. ಕೊಟ್ಟ ದುಡ್ಡಿಗೆ ಡಬ್ಬಲ್ ಬೆನಿಫಿಟ್ !!