Posts Tagged ‘ಸಾಲಿಗ್ರಾಮ’

ಕಂಚಿನ ಕಂಠ ಅಂದಾಗಲೆಲ್ಲ ನಮ್ಮ ಕಣ್ಮುಂದೆ ಬರುವುದು ದಿ| ಗುಂಡ್ಮಿ ಕಾಳಿಂಗ ನಾವುಡರ ಚಿತ್ರ. ಅವರಿದ್ದಷ್ಟು ಕಾಲ ಭಾಗವತಿಕೆಗೆ ಪರ್ಯಾಯ ಪದವೇ ಕಾಳಿಂಗ ನಾವುಡ ಅನ್ನುವಷ್ಟರ ಮಟ್ಟಿಗೆ ಯಕ್ಷರಂಗದಲ್ಲಿ ಏಕಮೇವಾದ್ವಿತೀಯರಾಗಿ ಮೆರೆದವರವರು. ಇಂದಿಗೂ ಅವರ ಹಾಡುಗಾರಿಕೆಯ ಧ್ವನಿಮುದ್ರಿಕೆಯನ್ನು ಕೇಳಿದಾಗ ಆ ಸ್ವರಾನುಭೂತಿಯ ಮೋಡಿಯಲ್ಲಿ ಮೈಮರೆಯುವ ಲಕ್ಷಾಂತರ ಯಕ್ಷಪ್ರೇಮಿಗಳ ಮನಸ್ಸಿನಲ್ಲಿ ಅವರ ಕಂಚಿನ ಕಂಠದ ನೆನಪು ಸದಾ ಹಸಿರು. ಅಂತಹ ಕಾಳಿಂಗ ನಾವುಡರು ನಿರ್ಮಿಸಿಹೋದ ಪರಂಪರೆಯ ಜಾಡಿನಲ್ಲಿ ಹೆಜ್ಜೆಹಾಕುತ್ತಾ ಪ್ರವರ್ಧಮಾನಕ್ಕೆ ಬರುತ್ತಿರುವ ಭಾಗವತರೊಬ್ಬರು ಕಾಳಿಂಗ ನಾವುಡರ ಸ್ವರದ ಛಾಪನ್ನು ಮೈಗೂಡಿಸಿಕೊಂಡು ಯಕ್ಷಗಾನ ರಸಿಕರ ಮನರಂಜಿಸುತ್ತಿದ್ದಾರೆ. ಅವರೇ ಹೊಸಂಗಡಿಯ ರವೀಂದ್ರ ಶೆಟ್ಟಿಯವರು. ಇಂತಹ ಹಾಡಿನ ಮೋಡಿಗಾರನೊಂದಿಗೆ ಕೆಲಹೊತ್ತು ಕಳೆಯುವ ಸೌಭಾಗ್ಯ ನನ್ನ ಪಾಲಿಗೆ ಒದಗಿ ಬಂದಿತ್ತು. ಅವರೊಂದಿಗೆ ನಡೆಸಿದ ಪುಟ್ಟ ಸಂವಾದದ ಬಳಿಕ ಅವರ ಸ್ವರಮಾಧುರ್ಯದಷ್ಟೇ ಶ್ರೀಮಂತವಾದ ಅವರ ಸಂಸ್ಕಾರವನ್ನು ಕಂಡು ಹಾಗೂ ವಿನಯವಂತಿಕೆಯ ಪ್ರತಿಮೂರ್ತಿಯಂತಿದ್ದ ಅವರ ಮಾತುಗಳನ್ನು ಕೇಳಿ ತುಂಬಿದ ಕೊಡ ತುಳುಕದು ಅನ್ನುವ ಮಾತಿಗೆ ಪ್ರತ್ಯಕ್ಷ ನಿದರ್ಶನ ಸಿಕ್ಕಂತಾಗಿತ್ತು. ಅವರೊಂದಿಗೆ ನಡೆಸಿದ ಮಾತುಕತೆಯ ಸಂಕ್ಷಿಪ್ತ ವಿವರ ನಿಮಗಾಗಿ-

 

ಪ್ರಶ್ನೆ ಯಕ್ಷಗಾನ ಕ್ಷೇತ್ರದತ್ತ ನೀವು ಆಕರ್ಷಿತರಾಗಿದ್ದು ಹೇಗೆ?

ರವೀಂದ್ರ ಶೆಟ್ಟಿ- ಯಕ್ಷಗಾನ ಕ್ಷೇತ್ರದಲ್ಲಿ ನನ್ನ ಅಣ್ಣ ಕರುಣಾಕರ ಶೆಟ್ಟಿಯವರು ಹೆಸರುವಾಸಿಯಾಗಿದ್ದರು. ಹಾಗಾಗಿ ತೀರಾ ಎಳೇ ಪ್ರಾಯದಲ್ಲೇ ಯಕ್ಷರಂಗವು ನನ್ನನ್ನು ಚುಂಬಕದಂತೆ ಸೆಳೆಯುತ್ತಿತ್ತು. ಕಾಳಿಂಗ ನಾವುಡರ ಹಾಡುಗಾರಿಕೆಯು ನನ್ನ ಮನಸ್ಸಿನ ಮೇಲೆ ತನ್ನ ಮಾಯಜಾಲವನ್ನು ಬೀಸಿತ್ತು. ಆಗ ಮನಸ್ಸಿನಲ್ಲಿ ಮೊಳೆತ ಭಾಗವತನಾಗುವ ಬಯಕೆ ನನ್ನನ್ನು ಈ ರಂಗದತ್ತ ಎಳೆದು ತಂದಿತು.

 

ಪ್ರಶ್ನೆ ಯಕ್ಷರಂಗದಲ್ಲಿ ಎಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೀರಿ? ನಿಮ್ಮ ಕಲಿಕೆ, ಗುರುಗಳ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?

ರ.ಶೆ ಕಳೆದ 23 ವರ್ಷಗಳಿಂದ ಯಕ್ಷಗಾನ ಮಾತೆಯ ಸೇವಾಕೈಂಕರ್ಯದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ನನ್ನ ಕಲಿಕೆ ಆರ್ಗೋಡು ಗೋವಿಂದರಾಯ ಶೆಣೈಯವರ ಸಮರ್ಥ ಮಾರ್ಗದರ್ಶನದಲ್ಲಿ ಮೊದಲ್ಗೊಂಡು, ಆ ಬಳಿಕ ಕೋಟದ ಕಲಿಕಾ ಕೇಂದ್ರದಲ್ಲಿ ಮುಂದುವರಿಯಿತು. ಕೆ.ಪಿ. ಹೆಗಡೆಯವರ ಗರಡಿಯಲ್ಲಿ ನನ್ನ ಕಲಿಕೆಗೊಂದು ಸ್ಪಷ್ಟ ರೂಪು ಬಂದಿತ್ತು. ತದನಂತರ ಹಾಲಾಡಿ ರಾಘವೇಂದ್ರ ಮಯ್ಯರ ಒಡನಾಟದಲ್ಲಿ ಅವರಿಂದ ಭಾಗವತಿಕೆಯ ಪಟ್ಟುಗಳನ್ನು ಹಂತ ಹಂತವಾಗಿ ತಿಳಿಯುತ್ತಾ ಬಂದೆ. ನಾನಿಂದು ಏನಾದರೂ ಕಿಂಚಿತ್ ಯಶಸ್ಸು ಕಂಡಿದ್ದೇನೆ ಅನ್ನುವುದಾದರೆ ಅದರ ಬಹುಪಾಲು ಶ್ರೇಯ ಮಯ್ಯರ ಸಮರ್ಥ ಮಾರ್ಗದರ್ಶನಕ್ಕೆ ಸಲ್ಲಬೇಕು.

 

ಪ್ರಶ್ನೆ ನಿಮ್ಮ ಇಲ್ಲಿಯವರೆಗಿನ ತಿರುಗಾಟದ ಕುರಿತು ಹೇಳ್ತೀರಾ?

ರ.ಶೆ ನನ್ನ 23 ವರ್ಷಗಳ ಈ ಸುದೀರ್ಘ ತಿರುಗಾಟದಲ್ಲಿ ಅನೇಕ ಮೇಳಗಳಲ್ಲಿ ಕಲಾಸೇವೆ ಗೈಯುವ ಅವಕಾಶ ನನಗೆ ಲಭಿಸಿದೆ. ಕಮಲಶಿಲೆ ಮೇಳದಲ್ಲಿ ಒಂದು ವರ್ಷ, ಮಾರಣಕಟ್ಟೆ ಮೇಳದಲ್ಲಿ ನಾಲ್ಕು ವರ್ಷ, ಶಿರಸಿ ಮೇಳದಲ್ಲಿ ಎರಡು ವರ್ಷ, ಸಾಲಿಗ್ರಾಮ ಮೇಳದಲ್ಲಿ ನಾಲ್ಕು ವರ್ಷ ಅಲ್ಲದೇ ಸ್ವ-ಆಸಕ್ತಿಯಿಂದ ತುಳು ಕಲಿತು, ತೆಂಕಿನ ಮೇಳಗಳಾದ ಪುತ್ತೂರು, ಮಂಗಳಾದೇವಿ ಹಾಗೂ ಕುಂಟಾರು ಮೇಳಗಳಲ್ಲಿ ಒಟ್ಟಾಗಿ ಆರು ವರ್ಷ ತಿರುಗಾಟ ಮಾಡಿದ್ದೇನೆ.

 

ಪ್ರಶ್ನೆ ನಿಮ್ಮ ವೃತ್ತಿಬದುಕಿನಲ್ಲಿ ತಿರುವು ನೀಡಿದ ಘಟನೆಯನ್ನು ಹಂಚಿಕೊಳ್ತೀರಾ? ಹಾಗೆಯೇ ನಿಮ್ಮ ತಿರುಗಾಟದ ಅವಧಿಯಲ್ಲಿ ಘಟಿಸಿದ ಯಾವುದಾದರೂ ಸ್ವಾರಸ್ಯಕರ-ಅವಿಸ್ಮರಣೀಯ ಘಟನೆಗಳಿದ್ರೆ ಅದನ್ನು ತಿಳಿಸುವಿರಾ?

ರ.ಶೆ ಯಕ್ಷಗಾನ ಕ್ಷೇತ್ರದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸ್ವಾರಸ್ಯಕರ ಘಟನೆ ನಡೆಯುತ್ತಲೇ ಇರುತ್ತದೆ. ಹೇಳಹೊರಟರೆ ಅಂತಹ ಸಾವಿರಾರು ಘಟನೆಗಳಿವೆ. ಪ್ರತೀ ಪ್ರದರ್ಶನದಲ್ಲೂ ಏನಾದರೊಂದು ಸ್ವಾರಸ್ಯ, ಹೊಸ ಅನುಭವ, ವಿನೂತನವಾದುದೇನನ್ನಾದರೂ ಕಂಡು-ಕೇಳಿ ಕಲಿಯುವ ಅವಕಾಶ ಇದ್ದೇ ಇದೆ.

ನನ್ನ ವೃತ್ತಿ ಬದುಕಿಗೆ ಹೊಸ ಮೆರುಗನ್ನು ತಂದಿತ್ತಿದ್ದು ನಾನು ಸಾಲಿಗ್ರಾಮ ಮೇಳಕ್ಕೆ ಭಾಗವತನಾಗಿ ಬಂದಂತಹ ಸಂದರ್ಭ. ಇದಕ್ಕಾಗಿ ಕಿಶನ್ ಹೆಗ್ಡೆಯವರಿಗೆ ನಾನು ಸದಾ ಆಭಾರಿ. ನನ್ನನ್ನು ಒಬ್ಬ ಭಾಗವತ ಅಂತ ಜನರು ಗುರುತಿಸುವಂತಾದದ್ದು ಆಗಲೇ. ಅಪಾರ ಜನಪ್ರಿಯತೆ ತಂದುಕೊಟ್ಟ ಮೇಘ-ಮಾರ್ತಾಂಡ ಪ್ರಸಂಗ ನನ್ನ ಬದುಕಿನಲ್ಲಿ ಸದಾ ನೆನಪಲ್ಲಿ ಉಳಿಯುವಂತಹ ಪ್ರಸಂಗ. ತದನಂತರ ಬಂದ ಸಪ್ತಪದಿ ಪ್ರಸಂಗ ಕೂಡಾ ನನ್ನ ಭಾಗವತಿಕೆಯ ಹಾದಿಯಲ್ಲೊಂದು ಮೈಲಿಗಲ್ಲು. ಆ ಬೆಳಕೇ ನನ್ನ ವೃತ್ತಿ ಬದುಕಿನ ಹಾದಿಯಲ್ಲಿ ದಾರಿದೀಪದಂತಾಗಿದೆ.

 

ಪ್ರಶ್ನೆ ನೀವು ನಿಮ್ಮ ಹಾಡುಗಾರಿಕೆಗೆ ಯಾರನ್ನಾದರೂ ಸ್ಫೂರ್ತಿ-ಆದರ್ಶ ಎಂದು ನಂಬಿಕೊಂಡಿದ್ದೀರಾ? ಗುರು ಸಮಾನರೆಂದು ನೀವು ಆದರಿಸುವ ವ್ಯಕ್ತಿ ಯಾರು?

ರ.ಶೆ – ನನಗೆ ಗುಂಡ್ಮಿ ಕಾಳಿಂಗ ನಾವುಡರೇ ಸದಾ ಸ್ಫೂರ್ತಿಯ ಸೆಲೆ. ಅವರ ಸ್ವರಕ್ಕಿದ್ದ ಗತ್ತು-ಗಾಂಭೀರ್ಯ, ಲಯ, ಗಡಸುತನ, ಮಾಧುರ್ಯ ಇವೆಲ್ಲವುಗಳಿಂದಾಗಿ ಸದಾ ನನಗೆ ಆದರ್ಶಪ್ರಾಯರಾಗಿದ್ದರು. ನನ್ನದೇನಿದ್ದರೂ ಅವರು ರಚಿಸಿಟ್ಟುಹೋದ ಸಮರ್ಥ ಪರಂಪರೆಯ ಹೆಜ್ಜೆಜಾಡಿನಲ್ಲಿ ಕಿಂಚಿತ್ತು ದೂರವನ್ನಾದರೂ ಕ್ರಮಿಸಬೇಕೆನ್ನುವ ನಮ್ರ ಪ್ರಯತ್ನ.

 

ನನ್ನ ಗುರುವೆಂಬ ಅಭಿದಾನಕ್ಕೆ ಪಾತ್ರರಾಗುವಂತವರು ಯಾರಾದರೂ ಇದ್ದರೆ ಅದು ಹಾಲಾಡಿ ರಾಘವೇಂದ್ರ ಮಯ್ಯರು. ಅವರ ಸಹಕಾರ, ಮಾರ್ಗದರ್ಶನವನ್ನು ನಾನು ಎಷ್ಟು ನೆನೆದರೂ ಅದು ಕಡಿಮೆಯೇ ಸರಿ. ಅವರ ಒಡನಾಟದಲ್ಲಿ ನನ್ನ ವೃತ್ತಿ ಬದುಕಿಗೆ ಹೊಸ ಭಾಷ್ಯ ಬರೆಯಲ್ಪಟ್ಟಿತು ಅಂತ ಹೇಳಿದರೂ ಅದು ಅತಿಶಯೋಕ್ತಿಯಲ್ಲ.

 

ಪ್ರಶ್ನೆ ಹೊಸ ಪ್ರಸಂಗಗಳು ಹಾಗೂ ಪೌರಾಣಿಕ ಪ್ರಸಂಗಗಳ ಹಾಡುಗಾರಿಕೆಯ ತುಲನೆಯಲ್ಲಿ ನೀವು ಮೆಚ್ಚುವುದು ಯಾವುದು?

ರ.ಶೆ – ಸತ್ಯ ಹೇಳಬೇಕೆಂದರೆ ಯಾವತ್ತಿಗೂ ಪೌರಾಣಿಕ ಪ್ರಸಂಗಗಳೇ ನನ್ನ ಮೊದಲ ಆದ್ಯತೆ. ಪೌರಾಣಿಕ ಪ್ರಸಂಗಗಳಿಗಿರುವ ಪಾರಂಪರಿಕ ಚೌಕಟ್ಟಿನ ಸೊಗಸು ಹೊಸಪ್ರಸಂಗಗಳಲ್ಲಿ ತೀರಾ ದುರ್ಲಭ. ಹಾಗಾಗಿಯೇ ಎಲ್ಲಾ ರಸ-ಭಾವಗಳ ಪೋಷಣೆಯಿರುವ ಪೌರಾಣಿಕ ಪ್ರಸಂಗಗಳಲ್ಲಿ ಹಾಡುವುದು ಅತ್ಯಂತ ತೃಪ್ತಿ ನೀಡುತ್ತದೆ. ಹಾಗಂತ ಹೊಸ ಪ್ರಸಂಗಗಳಿಗೆ ಹಾಡುವುದು ಕಳಪೆಯೆಂದೇನರ್ಥವಲ್ಲ. ಅದಕ್ಕೂ ಅದರದ್ದೇ ಆದ ಸೊಬಗಿದ್ದೇ ಇರುತ್ತದೆ. ಆದರೆ ಇವೆರಡರ ತುಲನೆಯಲ್ಲಿ ನನ್ನ ಪ್ರಾಶಸ್ತ್ಯ ಮಾತ್ರ ಪೌರಾಣಿಕ ಪ್ರಸಂಗಗಳಿಗೇ.

 

ಪ್ರಶ್ನೆ ಇತ್ತೀಚೆಗೆ ರಂಜನೆಯ ಹೆಸರಿನಲ್ಲಿ ವಿವಿಧ ಜನಾಕರ್ಷಣೆಯ ತಂತ್ರಗಳೊಂದಿಗೆ ಬರುತ್ತಿರುವ ಹೊಸ ಪ್ರಸಂಗಗಳು ಹೆಚ್ಚುತ್ತಿವೆಯಲ್ಲ. ಈ ಬಗ್ಗೆ ನಿಮ್ಮ ನಿಲುವೇನು?

ರ.ಶೆ ಬದಲಾವಣೆ, ಹೊಸತನ ಎಲ್ಲಾ ರಂಗಗಳಲ್ಲಿ ಸಹಜ ಹಾಗೂ ಅನಿವಾರ್ಯ ಕೂಡಾ. ಕಲೆ ಯಾವತ್ತಿಗೂ ನಿಂತ ನೀರಾಗಬಾರದು. ಅದರೆ ಎಲ್ಲವೂ ಹಿತಮಿತವಾಗಿದ್ದರೆ ಮಾತ್ರ ಅದಕ್ಕೊಂದು ಚಂದ-ಘನತೆ. ಪ್ರೇಕ್ಷಕರ ಬದಲಾಗುವ ಅಭಿರುಚಿಗೆ ತಕ್ಕಂತೆ ಒಂದಿಷ್ಟು ರಂಜನೆಗಾಗಿ ಯಕ್ಷಗಾನದ ಪಾರಂಪರಿಕ ಚೌಕಟ್ಟಿಗೆ, ರೀತಿ-ನೀತಿಗೆ ಅಪಚಾರವಾಗದಂತೆ ಆಕರ್ಷಣೆಯ ತಂತ್ರಗಳುಗಳು ಇದ್ದರೆ ಅದು ಪ್ರಸಂಗದ ಯಶಸ್ಸಿಗೆ ಪೂರಕವಾಗುತ್ತದೆ. ಕಾಲಕಾಲಕ್ಕೆ ಹೊಸತನವನ್ನು ಮೈಗೂಡಿಸಿಕೊಳ್ಳದಿದ್ದರೆ ಕಲೆ ನಿಂತ ನೀರಂತಾಗಿಬಿಡುವ ಅಪಾಯವಿದೆ. ಅಲ್ಲದೇ ಯಾವುದೇ ಕಲಾಪ್ರಕಾರ ಉಳಿಯಬೇಕಿದ್ದರೆ ಅದಕ್ಕೆ ಜನಾಕರ್ಷಣೆ, ಬೆಂಬಲ ತೀರಾ ಅವಶ್ಯ. ಹಾಗಾಗಿ ಈ ಬದಲಾವಣೆಗಳೆಲ್ಲವೂ ಕಲೆಕ್ಷನ್ ನಂಬಿಕೊಂಡು ಬದುಕುವ ವೃತ್ತಿ ಮೇಳಗಳ ಉಳಿವಿಗೆ ಅನಿವಾರ್ಯ ಕೂಡಾ. ಆದರೆ ಅತಿಯಾದರೆ ಅಮೃತವೂ ವಿಷ ಅನ್ನುವ ಹಾಗೆ ಬರೀ ಅಗ್ಗದ ತಂತ್ರಗಳನ್ನೇ ತುಂಬಿಸಿಟ್ಟರೆ ಅದು ಕಲೆಗೆ ಮಾಡುವ ಅಪಚಾರ. ಉಪ್ಪಿನಕಾಯಿ ಊಟದ ಒಂದು ಭಾಗವಾಗಿದ್ದರೆ ಊಟ ರುಚಿಸುತ್ತದೆ. ಹಾಗೆಂದ ಮಾತ್ರಕ್ಕೆ ಅದನ್ನೇ ಊಟ ಅಂತ ಕರೆಯಲಾಗದಷ್ಟೇ. ಹಾಗಾಗಿ ಎಲ್ಲವೂ ಹಿತಮಿತವಾಗಿದ್ದರೆ ಸಹ್ಯ. ಆ ಅರಿವು ಕಲಾವಿದರು ಹಾಗೂ ಕಲಾಭಿಮಾನಿಗಳಲ್ಲಿ ಇರಬೇಕಾದುದು ತೀರಾ ಅಗತ್ಯ.

 

ಪ್ರಶ್ನೆ ನೀವು ರಚಿಸಿರುವ ಪ್ರಸಂಗಗಳ ಬಗ್ಗೆ ಸ್ವಲ್ಪ ತಿಳಿಸುತ್ತೀರಾ?

ರ.ಶೆ – ಹಿಂದೆ ಬಯಲಾಟದ ಮೇಳಗಳಲ್ಲಿದ್ದಾಗ ಅನೇಕ ಪ್ರಸಂಗಗಳನ್ನು ರಚಿಸಿದ್ದೇನೆ. ದೈವಲೀಲೆ, ಸ್ವಪ್ನದ ಸಿರಿ, ಸ್ವಪ್ನ ಕನ್ಯೆ..ಇನ್ನೂ ಮುಂತಾದುವುಗಳು. ವೃತ್ತಿ ಮೇಳಕ್ಕೆ ಬಂದ ಮೇಲೆ ನಾನು ರಚಿಸಿದ ಮೊಟ್ಟ ಮೊದಲ ಕೃತಿ ಸ್ವಪ್ನ ಸಾಮ್ರಾಟ. ಎಲ್ಲಿಂದಲೋ ಸ್ಫೂರ್ತಿ ಪಡೆದು ಪ್ರಸಂಗವನ್ನು ರಚಿಸುವುದು ತಪ್ಪೋ ಸರಿಯೋ, ಆದರೆ ನನಗೆ ಮಾತ್ರ ಹಾಗೆ ಮಾಡಬೇಕೆನ್ನಿಸಲಿಲ್ಲ. ಸ್ವಂತ ಕಲ್ಪನೆಯಿಂದಲೇ ನನ್ನ ಅನುಭವದ ಸಾರವನ್ನೆಲ್ಲ ಕ್ರೊಢೀಕರಿಸಿ ಅದನ್ನೊಂದು ಸವಾಲೆಂಬಂತೆ ಸ್ವೀಕರಿಸಿ ರಚಿಸಿದ ಕೃತಿಯೇ ಈ ಸ್ವಪ್ನ ಸಾಮ್ರಾಟ. ಇದರಲ್ಲಿ ಪ್ರೇಕ್ಷಕರ ಕುತೂಹಲ ಕೆರಳಿಸಲು ಅನೇಕ ರಂಜನೀಯ ಅಂಶಗಳು ಸೇರಿವೆಯಾದರೂ, ಗಟ್ಟಿ ಕಥೆಯೊಂದರ ಹಿನ್ನೆಲೆಯಿದೆ. ಮೊನ್ನೆ ಬೆಂಗಳೂರಿನಲ್ಲಿ ಕಿಕ್ಕಿರಿದ ಸಭಾಂಗಣದಲ್ಲಿ ಪ್ರದರ್ಶಿತವಾಗಿ ಎಲ್ಲರ ಮೆಚ್ಚುಗೆಗೂ ಪಾತ್ರವಾಯ್ತು. ಮುಂದಿನ ತಿರುಗಾಟದ ಅವಧಿಯಲ್ಲಿ ಇದು ಜನಮನ ಗೆಲ್ಲಲಿದೆ ಎನ್ನುವ ವಿಶ್ವಾಸ ಕೂಡಾ ಇದೆ.

 

ಪ್ರಶ್ನೆ ಪ್ರಸ್ತುತ ವರ್ಷದಿಂದ ಪೆರ್ಡೂರು ಮೇಳದಲ್ಲಿ ಭಾಗವತರಾಗಿ ನಿಮ್ಮ ತಿರುಗಾಟ ಶುರುವಾಗಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆ, ನಿರೀಕ್ಷೆ ಏನಾದ್ರೂ ಇದೆಯೇ? ಪೆರ್ಡೂರು ಮೇಳವನ್ನು ಆರಿಸಲು ಕಾರಣವೇನು?

ರ.ಶೆ ಮೊಟ್ಟ ಮೊದಲನೆಯದಾಗಿ ಹೆಸರಾಂತ ವೃತ್ತಿಮೇಳವಾದ ಪೆರ್ಡೂರಿನಲ್ಲಿ ನನಗೆ ಅವಕಾಶ ಸಿಕ್ಕಿದ್ದು ನನಗೆ ಬಹಳ ಖುಶಿ ತಂದು ಕೊಟ್ಟ ಸಂಗತಿ. ಅದೂ ಅಲ್ಲದೇ ಕರಾವಳಿಯ ಗಾನಕೋಗಿಲೆ ಎಂದೇ ಹೆಸರಾಗಿರುವ ಧಾರೇಶ್ವರರಂತಹ ಮೇರು ಸದೃಶ ಪ್ರತಿಭೆಯ ಜೊತೆ ಕೆಲಸ ಮಾಡುವ ಸೌಭಾಗ್ಯ. ಇದಕ್ಕಿಂತ ಉತ್ತಮ ಅವಕಾಶ ಸಿಕ್ಕೀತೇ? ಧಾರೇಶ್ವರರ ಸಲಹೆ, ಸಮರ್ಥ ಮಾರ್ಗದರ್ಶನದಲ್ಲಿ ನನ್ನ ಕಲಿಕೆ-ಸಾಧನೆಗಳ ಹಾದಿ ಇನ್ನಷ್ಟು ಸಲೀಸಾಗಲಿದೆ. ನನ್ನ ಹಾಡುಗಾರಿಕೆಯಲ್ಲಿ ಲೋಪ-ದೋಷಗಳು ಕಂಡು ಬಂದಾಗ ಅದನ್ನು ತಿದ್ದಿ ಸರಿಪಡಿಸಲು ಸೂಕ್ತ ಸಲಹೆ ನೀಡುವ ಅವರ ಒಡನಾಟ ನಿಜಕ್ಕೂ ನನ್ನ ಪಾಲಿಗೆ ಸುವರ್ಣಾವಕಾಶ. ಜೊತೆಗೆ ತೀರ್ಥಳ್ಳಿ, ಆರ್ಗೋಡು, ಥಂಡಿಮನೆ ಇಂತಹ ಮಹಾನ್ ಕಲಾವಿದರಿಗೆ ಪದ್ಯ ಹೇಳುವ ಸದವಕಾಶ. ಹಾಗಾಗಿ ಇದು ನನ್ನ ವೃತ್ತಿ ಬದುಕಿನ ಇನ್ನೊಂದು ಮಹತ್ತರ ತಿರುವಾಗಲಿದೆ ಅನ್ನುವ ನಿರೀಕ್ಷೆ, ನಂಬಿಕೆ ನನ್ನದು.

 

ಪ್ರಶ್ನೆ ನಿಮ್ಮ ಕಂಠಸಿರಿ, ನಿಮ್ಮ ಹಾಡುಗಾರಿಕೆಯ ಶೈಲಿ ನಾವುಡರ ಭಾಗವತಿಕೆಯನ್ನು ನೆನಪಿಸುತ್ತದೆ ಅನ್ನುವ ಮಾತು ಕೇಳಿ ಬರುತ್ತಿದೆಯಲ್ಲ?

ರ.ಶೆ ಅದೆಲ್ಲ ಯಕ್ಷಗಾನ ಕಲಾಭಿಮಾನಿಗಳ ಅಭಿಮಾನದ ಮಾತು ಅಷ್ಟೇ. ಅವರಿಂದ ಸ್ಫೂರ್ತಿ ಪಡೆದ ನನ್ನ ಶೈಲಿ, ಧ್ವನಿ ನಾವುಡರನ್ನು ಹೋಲುತ್ತದೆ ಅಂದ ಮಾತ್ರಕ್ಕೇ ಆ ಯೋಗ್ಯತೆ ನನಗೆ ಬರಲಾರದು ಬಿಡಿ. ನನ್ನ ವೃತ್ತಿ ಬದುಕಿನ ಕೊನೆಯೊಳಗೆ ನಾವುಡರ, ಧಾರೇಶ್ವರರ ಯೋಗ್ಯತೆಯಲ್ಲಿ ಹತ್ತರಲ್ಲೊಂದು ಭಾಗದಷ್ಟು ಸಾಧಿಸಲು ನಾನು ಶಕ್ಯನಾದರೆ ನಾನು ಧನ್ಯ. ಹಾಗಾದಲ್ಲಿ ಅದರ ಶ್ರೇಯವೆಲ್ಲಾ ಭಗವಂತನ ದಯೆ, ಯಕ್ಷಗಾನ ಪ್ರೇಮಿಗಳ ಪ್ರೀತ್ಯಾದರದ ಹರಕೆಯ ಫಲ ಹಾಗೂ ಗುರುಸದೃಶರಾದ ಮಯ್ಯ, ಧಾರೇಶ್ವರ್‌ರಂತವರ ಕೃಪಾಶೀರ್ವಾದಕ್ಕೇ ಸಲ್ಲಬೇಕು.

ಪ್ರಶ್ನೆ ಮಾತುಕತೆ ಮುಗಿಸುವ ಮುನ್ನ ಒಂದೇ ಒಂದು ಪ್ರಶ್ನೆ. ಯಕ್ಷಗಾನವೆಂದರೆ ನವರಸ-ಭಾವಗಳ ಅಮೃತಧಾರೆ. ಎಲ್ಲಾ ಭಾವ-ರಸಗಳ ಹಾಡುಗಳೂ ಸಮ್ಮಿಳಿತವಾಗಿರುವ ರಸಾಯನ. ಇದರಲ್ಲಿ ನಿಮ್ಮ ಮೆಚ್ಚಿನ ರಸ/ಭಾವ ಯಾವುದು?

ರ.ಶೆ ಎಲ್ಲಾ ರಸಗಳಿಗೂ ಅದರದ್ದೇ ಆದ ಸೊಗಸಿದೆ. ಆದರೆ ಅದರಲ್ಲಿ ನನಗಿಷ್ಟವಾಗಿದ್ದು ಕರುಣಾರಸ. ಈ ರಸದ ಹಾಡುಗಳಲ್ಲಿ ಸ್ವರದ ಏರಿಳಿತಗಳಲ್ಲೇ ಭಾವಸ್ಫುರಣಕ್ಕೆ ಅವಕಾಶ ಹೆಚ್ಚು. ಹಾಗಾಗಿ ಅದು ನನ್ನ ಅಚ್ಚುಮೆಚ್ಚು.

 

ಸಾಧಕನಾದವನಿಗೆ ಪ್ರತಿದಿನ, ಪ್ರತಿ ಸಂದರ್ಭಗಳೂ ಹೊಸ ಕಲಿಕೆಗೆ ತೆರೆದ ಮುಕ್ತದ್ವಾರಗಳು. ಸದಾ ಹೊಸತನ್ನು ಕಲಿಯುವ ತುಡಿತದ ಜೊತೆಗೆ ತನ್ನ ಪ್ರತಿಭೆಯ ಬಗ್ಗೆ ಗರ್ವವಿಲ್ಲದ ವಿನಯವಂತಿಕೆಯೇ ಮಹಾನ ಸಾಧಕನ ದ್ಯೋತಕ. ಗಿರಿ-ಬೆಟ್ಟದಷ್ಟು ಸಾಧನೆ ಮಾಡಿದರೂ ತಾನು ಸಾಧಿಸಿದ್ದು ಕಿರುಬೆಟ್ಟಿನಷ್ಟು ಅನ್ನುವ ವಿನಯದ ಜೊತೆಗೆ, ತಾನು ಸಾಗಿ ಬಂದ ಹಾದಿಯನ್ನು ಮರೆತಿಲ್ಲ ರವೀಂದ್ರ ಶೆಟ್ಟಿಯವರು. ತನ್ನ ಸಾಧನೆಗೆ ಇಂಬಾದವರನ್ನೆಲ್ಲ ಸ್ಮರಿಸುವ ಕೃತಜ್ಞತೆಯಿರುವ ಇವರು ಇನ್ನಷ್ಟು ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಜೊತೆಗೆ ಧಾರೇಶ್ವರರಂತಹ ದಿಗ್ಗಜರ ಸಹವಾಸದಲ್ಲಿ ರವೀಂದ್ರ ಶೆಟ್ಟರ ಪ್ರತಿಭೆ ಪುಟವಿಟ್ಟ ಬಂಗಾರವಾಗಲಿ ಅನ್ನುವುದು ಯಕ್ಷಾಭಿಮಾನಿಗಳ ಹಾರೈಕೆ ಮಾತ್ರವಲ್ಲ ಆಶಯವೂ ಕೂಡಾ. ಸಾಧನೆಯ ಮೇರುಶಿಖರವನ್ನೇರಿ ಈ ಪ್ರತಿಭೆಯು ಕಲಾಸೌರಭವನ್ನು ಎಲ್ಲೆಡೆಗೂ ಪಸರಿಸಲಿ ಎನ್ನುವ ಹಾರೈಕೆಗಳೊಂದಿಗೆ ರವೀಂದ್ರ ಶೆಟ್ಟಿ ಹೊಸಂಗಡಿಯವರೊಂದಿಗಿನ ಈ ಪುಟ್ಟ ಸಂವಾದಕ್ಕೆ ತೆರೆಯೆಳೆಯುತ್ತೇನೆ.

 

ಯಕ್ಷಗಾನಂ ಗೆಲ್ಗೆ

 

 

 

ಇದೇನು ಮಲೆನಾಡು-ಕರಾವಳಿಗಳ ಹವಾಮಾನ ಮುನ್ಸೂಚನೆಯಂತಿದೆಯಲ್ಲ ಅಂತ ತಲೆ ತುರಿಸಿಕೊಳ್ತಾ ಇದ್ದೀರಾ? ಇದು ಸ್ವಾತಂತ್ರ್ಯೋತ್ಸವದ ಮುನ್ನಾದಿನ ಸೋನೆ ಮಳೆಯಲ್ಲಿ ಮಿಂದು ತಂಪಾದ ಬೆಂಗಳೂರಿನ ಯಕ್ಷಗಾನಪ್ರಿಯರ ಮನಕ್ಕೆ ರಾತ್ರಿ ಪೂರಾ ತಂಪೆರೆದ ಯಕ್ಷರಸ ಧಾರೆಯ ಒಂದೆರಡು ಹುಂಡುಗಳು. ಎರಡು ಪ್ರಚಂಡ ಯಕ್ಷಗಾನ ಮೇಳಗಳ ಸಮ್ಮಿಲನದಲ್ಲಿ ನಡೆದ ಕೂಡಾಟದ ಮಳೆಯಲ್ಲಿ ಮಿಂದ ಮನಸ್ಸಿನಿಂದ ಆಟ ಮುಗಿದ ಮೇಲೂ ನೆನಪಾಗಿ ತೊಟ್ಟಿಕ್ಕಿದ ರಸ ಬಿಂದುಗಳು. ಯಕ್ಷರಂಗದ ಸಿಡಿಲಮರಿ ಎಂದೇ ಖ್ಯಾತಿವೆತ್ತ ತೀರ್ಥಳ್ಳಿ ಗೋಪಾಲಾಚಾರಿಯವರ ಸುಧನ್ವ, ಅಬ್ಬರದ ಪಾತ್ರಗಳಲ್ಲಿ ಆರ್ಭಟಿಸುವ ಮದನಾರಿಯಾಗುವ ಕಾರ್ಕಳ ಶಶಿಕಾಂತ ಶೆಟ್ಟಿಯವರ ಅಂಬೆ, ತಮ್ಮ ಮನಮೋಹಕ ಕುಣಿತದಿಂದ ರಂಗದಲ್ಲಿ ಸುಳಿಮಿಂಚಿನಂತೆ ಪ್ರಜ್ವಲಿಸಿದ ತೊಂಬಟ್ಟು ವಿಶ್ವನಾಥ ಆಚಾರಿ ಹಾಗೂ ಕೊಳಲಿ ಕೃಷ್ಣ ಶೆಟ್ಟಿಯವರ ಕುಶ-ಲವ ಪಾತ್ರ ಇಡೀ ಪ್ರದರ್ಶನದಲ್ಲಿ ಎದ್ದು ತೋರಿದ ಅಂಶಗಳಾಗಿವೆ. ಹಾಗೆಯೇ ರವೀಂದ್ರ ಶೆಟ್ಟಿಯವರ ಸುಶ್ರಾವ್ಯ ಭಾಗವತಿಕೆ ಕೂಡಾ ಇನ್ನೂ ಕಿವಿಯಲ್ಲಿ ಅನುರಣನಗೊಳ್ಳುತ್ತಿದೆ.

 

ಯಕ್ಷಗಾನವೆಂದರೆ ಹಾಡು, ನೃತ್ಯ, ಅರ್ಥಗಾರಿಕೆ, ಗತ್ತು-ಗಾಂಭೀರ್ಯಗಳ ಜೊತೆಗೆ ಕಣ್ಮನ ಸೆಳೆಯುವ ವೇಷ-ಭೂಷಣಗಳ ಮಿಲನ. ಭಾವ-ಭಂಗಿ-ಕುಣಿತ-ಮಾತುಗಾರಿಕೆ-ಹಾಡುಗಳಲ್ಲಿ ನವರಸಗಳೂ ಮೇಳೈಸಿದ ದೃಕ್-ಶ್ರಾವ್ಯ ರಸಾಯನ. ಇಂದು ಇಲ್ಲಿ ನಡೆದಿದ್ದು ಯಕ್ಷರಂಗದ ಎರಡು ದಿಗ್ಗಜ ಮೇಳಗಳಾದ ಪೆರ್ಡೂರು-ಸಾಲಿಗ್ರಾಮಗಳ ಸಮ್ಮಿಲನ. ಸ್ಪರ್ಧೆಯೆಂದಾಕ್ಷಣ ಯಕ್ಷಗಾನದಲ್ಲಿ ವೀರರಸವೇ ಪ್ರಧಾನ. ಅದಕ್ಕೆಂದೇ ಪ್ರದರ್ಶನಕ್ಕೆ ಆರಿಸಲಾಗಿದ್ದು ಸುಧನ್ವಾರ್ಜುನ, ಭೀಷ್ಮ ವಿಜಯ ಮತ್ತು ಕುಶ-ಲವ ಎಂಬ ಮೂರು ಪೌರಾಣಿಕ ಆಖ್ಯಾನ.

 

ಮೊದಲು ರಂಗವೈಭವವನ್ನು ಸಾಕ್ಷಾತ್ಕರಿಸಲು ಬಂದ ಕಥಾನಕ ಪೆರ್ಡೂರು ಮೇಳದವರ ಸುಧನ್ವಾರ್ಜುನ. ರವೀಂದ್ರ ಶೆಟ್ಟಿಯವರ ಅಮೋಘ ಕಂಠಸಿರಿಯನ್ನು ಮೆಚ್ಚಿ, ಇಡೀ ಸಭಾಂಗಣವೇ ನಾದವೈಭವಕ್ಕೆ ತಲೆದೂಗುತ್ತಿತ್ತು. ಅಷ್ಟರಲ್ಲಾಗಲೇ ರಂಗಸ್ಥಳದಲ್ಲಿ ಮಿಂಚಿನ ಸಂಚಾರ. ಸುಧನ್ವನಾಗಿ ರಂಗಕ್ಕಿಳಿದ ತೀರ್ಥಳ್ಳಿ ಗೋಪಾಲಾಚಾರಿಯವರನ್ನು ಸ್ವಾಗತಿಸಿದ್ದು ಕರತಾಡನದ ಜೊತೆಗೆ ಪ್ರೇಕ್ಷಕರ ಹರ್ಷೋದ್ಗಾರ. ತಮ್ಮ ನಯನಮನೋಹರ ನೃತ್ಯ, ವಿದ್ವತ್‌ಪೂರ್ಣ ಮಾತಿನಿಂದ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿದ ತೀರ್ಥಳ್ಳಿ, ಏಕಮೇವಾದ್ವಿತೀಯರಾಗಿ ರಂಗದಲ್ಲಿ ಮೆರೆದರು. ತೀರ್ಥಳ್ಳಿಯವರ ಜೊತೆಗೆ ರಂಗಕ್ಕೆ ಬಂದು ಹಿಮ್ಮೇಳಕ್ಕೆ ಸಾಥಿಯಾದ ಕರಾವಳಿ ಗಾನಕೋಗಿಲೆ ಬಿರುದಾಂಕಿತ ಧಾರೇಶ್ವರರ ಕಂಠಸಿರಿಯಿಂದ ಆಟ ಇನ್ನಷ್ಟು ಕಳೆಕಟ್ಟಿತು. ಇಷ್ಟೆಲ್ಲಾ ಇದ್ದರೂ ಕೂಡಾ ಪೆರ್ಡೂರು ಮೇಳದ ಪ್ರದರ್ಶನದಲ್ಲಿ ಹಲವಾರು ನ್ಯೂನ್ಯತೆಗಳಿದ್ದವು. ಸುಧನ್ವನಿಗೆ ಸರಿಮಿಗಿಲಾಗಿ ಆರ್ಭಟಿಸಬೇಕಿದ್ದ ಥಂಡಿಮನೆಯವರ ಅರ್ಜುನ, ಹೊರೆಗೆ ಸುರಿಯುತ್ತಿದ್ದ ಮಳೆಗೆ ಥಂಡಿಹೊಡೆದವರಂತೆ ಮಂಕಾಗಿದ್ದರು. ಸುಧನ್ವನ ಕುಣಿತ-ಮಾತುಗಳ ಎಡೆಯಲ್ಲಿ ಆಕಳಿಸುತ್ತಿದ್ದ ಸಪ್ಪೆ ಅರ್ಜುನ, ತಮ್ಮ ಸವ್ಯಸಾಚಿ ಬಿರುದಿಗೆ ನ್ಯಾಯಸಲ್ಲಿಸಲಿಲ್ಲ ಅನ್ನುವುದು ಕಣ್ಣೆದುರಿಗೇ ಹೊಡೆದು ಕಾಣಿಸುತ್ತಿತ್ತು. ಇನ್ನು ಶಂಕರ ಹೆಗಡೆಯವರ ಪ್ರಭಾವತಿ ಆರಕ್ಕೇರದಿದ್ದರೂ ಮೂರಕ್ಕಿಳಿಯಲಿಲ್ಲ ಅನ್ನುವುದೇ ಸಮಾಧಾನ. ಪ್ರದರ್ಶನದ ಹೈಲೈಟ್ ಅಂದರೆ ಒಂದು ನರ್ತನದಲ್ಲಿ ಸುಮಾರು ಕಾಲು ಗಂಟೆ ಹೊತ್ತು ಚಿಗರೆಮರಿಯಂತೆ ರಂಗದ ಮೇಲೆಲ್ಲಾ ಸುಳಿದಾಡಿ ಗೋಪಾಲಾಚಾರಿ ವಿಜೃಂಭಿಸಿದ್ದು. ಅವರಿಗೆ ತಕ್ಕ ಜೊತೆ ನೀಡಿದ ರವೀಂದ್ರ ಶೆಟ್ಟಿಯವರ ಭಾಗವತಿಕೆಗೂ ಪೂರ್ಣಾಂಕ ಸಲ್ಲಲೇ ಬೇಕು.

 

ಆರಂಭದಲ್ಲಿ ಕಥಾ ನಿರೂಪಣೆಯಲ್ಲಾದ ವೃಥಾ ಎಳೆತದ ಫಲಶ್ರುತಿಯಾಗಿ, ಕೊನೆಯಲ್ಲಿ ಎಷ್ಟೇ ತ್ವರಿತವಾಗಿ ಓಡಿಸಿದರೂ ಕೃಷ್ಣನ ರಂಗ ಪ್ರವೇಶವಾಗುವಾಗಲೇ ನಿಗದಿ ಪಡಿಸಿದ ಮೂರು ಗಂಟೆಯ ಹೊತ್ತು ಮೀರಿ ಹೋಗಿತ್ತು. ಹಾಗಾಗಿ ಅಂತೂ ಇಂತೂ ಮುಗಿಸಿದರೆ ಸಾಕಪ್ಪಾ ಅನ್ನುವ ಹಾಗೆ ಓಡಿಸಿದ ಪರಿಣಾಮವಾಗಿ ಆಟದ ಒಟ್ಟಂದಕ್ಕೆ ಚ್ಯುತಿ ಬಂದಿದ್ದು ಸುಳ್ಳಲ್ಲ. ಅಲ್ಲದೇ ಹಾಸ್ಯಪಾತ್ರ ಇರದೇ ಇದ್ದುದು ಕೂಡಾ ಪ್ರದರ್ಶನದ ಒಟ್ಟು ಪರಿಣಾಮಕ್ಕೆ ಹಿನ್ನಡೆ ಉಂಟುಮಾಡಿದ್ದು ಸುಳ್ಳಲ್ಲ. ಒಟ್ಟಿನಲ್ಲಿ ತೀರ್ಥಳ್ಳಿ, ರವೀಂದ್ರ ಶೆಟ್ಟಿಯವರ ಅಮೋಘ ಪ್ರದರ್ಶನದಿಂದಾಗಿ ಪೆರ್ಡೂರು ಮೇಳದ ಆಟಕ್ಕೆ ಒಂದು ತೂಕ ಬಂದಿತ್ತು.

 

ಇದಕ್ಕೆ ತದ್ವಿರುದ್ಧವಾಗಿ ಸಾಲಿಗ್ರಾಮ ಮೇಳದವರು ಸಾಕಷ್ಟು ಪೂರ್ವಸಿದ್ಧತೆ ನಡೆಸಿದ್ದು ಅವರ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು. ಅವರಾರಿಸಿದ ಪ್ರಸಂಗ ಕೂಡಾ ಅದಕ್ಕೆ ತಕ್ಕುದಾಗಿತ್ತು. ದೂತನಾಗಿ ರಂಗಸ್ಥಳಕ್ಕೆ ಬಂದ ಮಹಾಬಲೇಶ್ವರ್ ಭಟ್ ಕ್ಯಾದಗಿ ತಮ್ಮ ಚಿನಕುರುಳಿ ಮಾತುಗಳಿಂದ ಪ್ರೇಕ್ಷಕರಲ್ಲಿ ನಗೆಯಲೆಯುಕ್ಕಿಸುವಲ್ಲಿ ಸಫಲರಾದರು. ನಂತರ ಅಭಿಮಾನಿಗಳ ಚಪ್ಪಾಳೆಯ ಸ್ವಾಗತದೊಂದಿಗೆ ಸಾಳ್ವನಾಗಿ ರಂಗಪ್ರವೇಶಿಸಿದ ಕಣ್ಣಿಮನೆ, ತಮ್ಮ ಖ್ಯಾತಿಗೆ ತಕ್ಕ ಪ್ರದರ್ಶನ ನೀಡುವಲ್ಲಿ ಯಶಕಾಣಲಿಲ್ಲ. ಆದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ನ್ಯಾಯ ಒದಗಿಸಿದ್ದಂತೂ ಸತ್ಯ. ನಂತರ ಎಲ್ಲೆಲ್ಲೂ ಸೊಬಗಿದೆ…ಎಲ್ಲೆಲ್ಲೂ ಸೊಗಸಿದೆ… ಮಾಮರವು ಹೂತಿದೆ… ಪದ್ಯಕ್ಕೆ ಹೆಜ್ಜೆ ಹಾಕಿ ಕುಣಿದ ಕಾಶೀರಾಜನ ಕನ್ಯೆಯರ ನೃತ್ಯ, ಬೆಳಕಿನ ಚಿತ್ತಾರದೊಂದಿಗೆ ಕಣ್ಮನ ಸೆಳೆಯಿತು. ರಾಗವೇಂದ್ರ ಮಯ್ಯರ ಭಾಗವತಿಕೆ ಅವರು ತಮ್ಮ ಹಳೇ ವೈಭವವನ್ನು ಕಳೆದುಕೊಂಡಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿ ಮಧ್ಯ ಮಧ್ಯದಲ್ಲಿ ಸ್ವರ ಕರ್ಕಶವಾಗಿ ಕೇಳಿ ಬರುತ್ತಿತ್ತು. ಆದರೆ ಹೆರಂಜಾಲು ಬಂದ ಮೇಲೆ ಹಿಮ್ಮೇಳದ ದನಿ ಕಿವಿಗಿಂಪಾಗಿ ಕೇಳಿಸುತ್ತಿತ್ತು. ಕಾಶೀರಾಜನ ಸುಪುತ್ರಿಯರ ವಿವಾಹಕ್ಕಾಗಿ ಇಟ್ಟ ವಿಕ್ರಮ ಪಣದ ಪ್ರದರ್ಶನದ ವೇಳೆ ಕೋಟ ಶಿವಾನಂದರು ನಾಲ್ಕು ಚಂಡೆವಾದನಗೈದು ಮೆಚ್ಚುಗೆಗೆ ಪಾತ್ರರಾದರು. ಆದರೂ ಚಂಡೆಯ ದನಿಯ ಏರಿಳಿತಗಳಲ್ಲಿ ಒಂದು ರೀತಿ ಅಸಹಜತೆ ಇದ್ದಂತೆ ಭಾಸವಾಗುತ್ತಿತ್ತು.

 

ಆಗ ರಂಗ ಪ್ರವೇಶಿಸಿದ ಭೀಷ್ಮನ ಪಾತ್ರಧಾರಿ ಯಾಜಿಯನ್ನು ಸ್ವಾಗತಿಸುವಾಗ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು. ತಮ್ಮ ಎಂದಿನ ಗತ್ತು, ಗಾಂಭೀರ್ಯಗಳಿಂದ, ತೂಕದ ಮಾತುಗಳಿಂದ ಪಾತ್ರದ ಘನತೆಯನ್ನು ಎತ್ತಿ ಹಿಡಿದು ನಿರೀಕ್ಷೆ ಹುಸಿಹೋಗದಂತೆ ನೋಡಿಕೊಂಡರು. ಅಮೇಲೆ ಇಡೀ ಸಭಾಂಗಣದ ಮೂಲೆ ಮೂಲೆಯನ್ನು ಮುಟ್ಟಿದ್ದು ಕಾರ್ಕಳ ಶಶಿಕಾಂತ ಶೆಟ್ಟಿಯವರ ಅಂಬೆಯ ಅಬ್ಬರ. ಧ್ವನಿಯ ಏರಿಳಿತ, ಮುಖದಲ್ಲೇ ಭಾವದ ಅಭಿವ್ಯಕ್ತಿ ಮತ್ತು ಪಾತ್ರಕ್ಕೆ ತಕ್ಕುದಾದ ಅಬ್ಬರ ಇವೆಲ್ಲದರ ಸಮಪಾಕದೊಂದಿಗೆ ಅಂಬೆಯೇ ಇಳಿದುಬಂದಂತಿದ್ದರು. ಅದರಲ್ಲೂ ಶಿಖಂಡಿಯಾಗಿ ಹುಟ್ಟುವ ಪ್ರತಿಜ್ಞೆಗೈಯುವ ಸಂದರ್ಭದಲ್ಲಿ ಅವರ ಆರ್ಭಟ, ಆಕ್ರೋಶ, ಸಿಡಿಗುಂಡಿನಂತಹ ಮಾತುಗಳು… ನಿಜಕ್ಕೂ ಮೈನವಿರೇಳಿಸುವಂತಿತ್ತು. ಇಂತಹ ಉತ್ಕೃಷ್ಟ ಪ್ರದರ್ಶನದ ನೆರವಿನಿಂದ ಪೆರ್ಡೂರು ಮೇಳದ ಪ್ರದರ್ಶನವನ್ನು ಸಾಲಿಗ್ರಾಮದವರು ಮೀರಿನಿಂತರೆಂಬುದನ್ನು ಪೆರ್ಡೂರು ಮೇಳದ ಕಟ್ಟಾ ಅಭಿಮಾನಿಯಾದ ನಾನೂ ಅನುಮೋದಿಸಲೇಬೇಕು.

 

ಬೆಳಗಿನ ಜಾವದ ಕುಶ-ಲವ ಪ್ರಸಂಗವನ್ನು ಪೆರ್ಡೂರು ಸಾಲಿಗ್ರಾಮ ಮೇಳದ ಕಲಾವಿದರು ಹಿಮ್ಮೇಳ ಮುಮ್ಮೇಳಗಳಲ್ಲಿ ಜೊತೆಯಾಗಿ ಆಡಿದ ಕಾರಣ ಇದು ನಿಜಾರ್ಥದಲ್ಲಿ ಕೂಡಾಟ. ಇಲ್ಲೇನಿದ್ದರೂ ಕುಶ-ಲವರದ್ದೇ ಮೆರೆದಾಟ. ಕುಶ-ಲವ ಜೋಡಿಯಾಗಿ ಚಪ್ಪಾಳೆಯ ಮೇಲೆ ಚಪ್ಪಾಳೆ ಗಿಟ್ಟಿಸಿಕೊಂಡ ತೊಂಬಟ್ಟು ವಿಶ್ವನಾಥ್ ಆಚಾರಿ ಹಾಗೂ ಕೊಳಲಿ ಕೃಷ್ಣ ಶೆಟ್ಟಿ, ಒಬ್ಬರ ಪ್ರದರ್ಶನದಿಂದ ಇನ್ನೊಬ್ಬರು ಸ್ಫೂರ್ತಿ ಪಡೆವವರಂತೆ ಸುಮಾರು ಒಂದು ಗಂಟೆ ಹೊತ್ತು ರಂಗಸ್ಥಳದಲ್ಲಿ ಆಟ ಹುಡಿ ಹಾರಿಸಿ ಕೊಟ್ಟರು. ಇಲ್ಲಿ ತಮ್ಮ ಸುಶ್ರಾವ್ಯ ಹಾಡುಗಳಿಂದ ಪ್ರಸಂಗಕ್ಕೆ ಕಳೆಯೇರಿಸಿದ ಸುರೇಶ್ ಶೆಟ್ಟಿಯವರನ್ನೂ ಕಡೆಗಣಿಸುವಂತಿಲ್ಲ.

 

ಒಟ್ಟಾರೆಯಾಗಿ ಹೇಳುವುದಾದರೆ ಕೂಡಾಟದಲ್ಲಿ ಶ್ರೇಷ್ಟ ಪ್ರದರ್ಶನವಾಗಿ ಸಾಲಿಗ್ರಾಮದವರ ಭೀಷ್ಮ ವಿಜಯ ಹೊರಹೊಮ್ಮಿದರೆ, ಈ ಕೂಡಾಟದ ಸರಣಿ ಶ್ರೇಷ್ಟ ನಿಸ್ಸಂಶಯವಾಗಿ ಶಶಿಕಾಂತ್ ಶೆಟ್ಟಿ. ಇನ್ನು ಆಯಾ ಪ್ರಸಂಗದಲ್ಲಿ ಉತ್ಕೃಷ್ಟ ಅಭಿನಯಕ್ಕೆ ಕ್ರಮವಾಗಿ ಗೋಪಾಲಾಚಾರಿ, ಶಶಿಕಾಂತ ಶೆಟ್ಟಿ ಮತ್ತು ವಿಶ್ವನಾಥ್ ಆಚಾರಿ- ಕೊಳಲಿ ಜೋಡಿಯನ್ನಲ್ಲದೆ ಬೇರೆ ಆಯ್ಕೆಯೇ ಇಲ್ಲ. ಪ್ರಸಂಗ ನೋಡಿ ಹೊರಬಂದ ಬಹುಕಾಲದ ನಂತರವೂ ಇವರೆಲ್ಲರ ಅಭಿನಯ ನೆನಪಾಗಿ ಉಳಿಯುತ್ತದೆ. ಅಂತೆಯೇ ರವೀಂದ್ರ ಶೆಟ್ಟಿ ಹೊಸಂಗಡಿಯವರ ಗಾನ ಮಾಧುರ್ಯ ಕೂಡಾ. ಪೌರಾಣಿಕ ಪ್ರಸಂಗಗಳು ತಮ್ಮ ಜನಪ್ರಿಯತೆಯನ್ನು ಕಳಕೊಂಡಿಲ್ಲ ಅನ್ನುವುದಕ್ಕೆ ಸಾಕ್ಷಿಯಾಗಿತ್ತು ವರುಣನ ಮುನಿಸಿನ ನಡುವೆಯೂ ಅಲ್ಲಿ ಸೇರಿದ್ದ ಯಕ್ಷಾಭಿಮಾನಿಗಳ ಸಂದೋಹ. ಚಲಚಿತ್ರಗಳನ್ನು ಯಕ್ಷಗಾನವನ್ನಾಗಿಸಿ ಇಲ್ಲದ ಗಿಮಿಕ್‌ಗಳ ಮೂಲಕ ತಾವು ಯಕ್ಷಗಾನದ ಕ್ರಾಂತಿಪುರುಷ ಅನ್ನುವ ಭ್ರಮೆಯಲ್ಲಿರುವ ದೇವದಾಸ್ ಈಶ್ವರಮಂಗಲರಂತವರಿಗೆ ಇದು ಅರ್ಥವಾದೀತೇ…? ಸಂದೇಹ !!

 

                        …… ಯಕ್ಷಗಾನಂ ಗೆಲ್ಗೆ……