Posts Tagged ‘ಹಾಡು’

ನಾವು ಬದಲಾಗುತ್ತಿರಬೇಕಂತೆ…

ಇಲ್ಲವಾದರೆ

ಕಾಲದ ಯಾವುದೋ ಘಟ್ಟದಲ್ಲಿ

ನಿಂತಿರುವಲ್ಲೇ ನಿಂತುಹೋಗಿ

ಶಿಲೆಯಂತಾಗಿಬಿಟ್ಟು

ಪಳೆಯುಳಿಕೆಗಳಾಗಿ ಬಿಡುತ್ತೇವಂತೆ

 

ನಿನ್ನೆ ಇಂದು ನಾಳೆಗಳಾಗಿ

ಸೆಕೆಂಡು ನಿಮಿಷ ಘಂಟೆಗಳಾಗಿ

ಉರುಳುವ ಕಾಲಚಕ್ರದೊಡನೆ

ಗುಂಪಿನೊಳಗೆ ಗೋವಿಂದ ಅಂತ

ನಾಲ್ಕ್ ಹೆಜ್ಜೆ ಹಾಕುತ್ತಿರಬೇಕಂತೆ

 

ನಿನ್ನೆಯದು ಇಂದಿಗೆ ರದ್ದಿಯಾಗುವ

ಇಂದು ಅದಾಗಲೇ ಭೂತಕ್ಕೆ ಸಂದಾಯವಾಗುವ

ನಾಳೆಯ ಹೊಸ್ತಿಲಾಚೆ ಕಾಲಿಟ್ಟು ಕಾಯುತ್ತಿರುವ

ಈ ಧಾವಂತದ ಬದುಕಿನಲಿ

ಕಾಲಕ್ಕೆ ತಕ್ಕ ಕೋಲ ಕಟ್ಟುತಿರುವವರು

ಪಿಸುನುಡಿಯುವುದು ಕೇಳಿಸುತ್ತಿಲ್ಲವೇ…

ಸರ್ವೈವಲ್ ಆಫ್ ಫಿಟ್ಟೆಸ್ಟ್ ಯುಗ

ಯಾವತ್ತೋ ಮುಗಿದಿದೆ

ಇನ್ನೇನಿದ್ರೂ ಸರ್ವೈವ್ ಆಗೋರು

ಫಾಸ್ಟೆಸ್ಟ್ ಇರೋರು ಮಾತ್ರವಂತೆ

 

ಒಮ್ಮೊಮ್ಮೆ ನನಗೆ ಅನ್ನಿಸುವುದುಂಟು

ನಾನೊಂದು ಐವತ್ತು ವರ್ಷ ಮುಂಚೇನೇ

ಹುಟ್ಟಬೇಕಿತ್ತಾ ಅಂತ….!

ಅಲ್ಲೂ ನಿಧಾನ ಮಾಡಿದೆನಾ ಏನ್ಕತೆ ಅಂತ !!

 

ಇದನ್ನು ಕವನ ಅಥವ ಪದ್ಯ ಅನ್ನೋ ಎದೆಗಾರಿಕೆ ನನ್ನಲ್ಲಿಲ್ಲ…ಅದ್ರೂ ಮನಸಿನ ಮರ್ಮರಗಳೆಲ್ಲ ಕವಿತೆಗಳಾಗಬೇಕೆಂಬ ನಿಯಮವೇನಿಲ್ಲವಲ್ಲ. ಹಾಗಾಗಿ ಕೆಲವು ಸಾಲುಗಳು ಹಾಗೇ ಸುಮ್ಮನೆ…

 

 

ಸುಮ್ ಸುಮ್ನೆ ನೆನಪಾಗಿ ಕಾಡಬೇಡ್ವೇ..

ಯಾವಾಗ್ಲೂ ಕಣ್ಣಿಗೆ ಕಸ ಬಿತ್ತಂದ್ರೆ

ಯಾರೂ ನಂಬಲ್ವೇ !

 

-.-.-.-.-.-.-.-.-.-.-.-.-.–.-.-.-.-.-.-.-.-

 

ಈ ಜಗತ್ತಲ್ಲಿ ಬದಲಾವಣೆ ನಿರಂತರ ಅನ್ನುತ್ತೆ ವೇದಾಂತ

ಆದರೆ ನೀನೂ ಬದಲಾಗಿ ಬಿಟ್ಟೆ ನೋಡು… ಅದೇ ದುರಂತ

 

-.-.-.-.-.-.-.-.-.-.-.-.-.–.-.-.-.-.-.-.-.-

 

ಬಹಳ ದೂರ ನೀ ಹೋಗಿಬಿಟ್ಟೆ

ಹಿಂದಿರುಗಿ ಬರಲಾಗದಷ್ಟು…

ಬೇಸರವಾಗಿದ್ದು ಅದಕ್ಕಲ್ಲ

ಬದಲಾಗಿ ಬಿಟ್ಟೆಯಲ್ಲ ನೀ

ಹಿಂದಿರುಗಿ ನೋಡಲೂ ಆಗದಷ್ಟು..!

 

-.-.-.-.-.-.-.-.-.-.-.-.-.–.-.-.-.-.-.-.-.-

 

ಚರಿತ್ರೆ ಮರುಕಳಿಸುತ್ತೆ ಅನ್ನೋ ಮಾತನ್ನು ನಂಬಿ

ಖುಶಿಯಿಂದ ಕಾಯುತ್ತ ಕುಳಿತಿದ್ದೆ

ನೀ ಮತ್ತೆ ಸಿಗಬಹುದೆಂದು…

ಆದರೀಗ ಯಾಕೋ ದಿಗಿಲಾಗುತ್ತಿದೆ ನೆನಪಾಗಿ

ನೀ ಕಳೆದು ಹೋಗಿದ್ದು ಕೂಡಾ

ಅದೇ ಚರಿತ್ರೆಯ ಭಾಗವೆಂದು !

 

-.-.-.-.-.-.-.-.-.-.-.-.-.–.-.-.-.-.-.-.-.-

 

ಮೌನದ ನುಡಿ ನಿನಗೆ ಕೇಳಿಸಲೇ ಇಲ್ಲ,

ಮಾತಡೋಕೆ ನಂಗೂ ಧೈರ್ಯ ಇರಲಿಲ್ಲ

ಈಗ ಧೈರ್ಯವೇನೋ ಬಂದಿದೆ…

ಆದ್ರೆ ಮಾತಾಡೋಕೆ ಏನೂ ಉಳಿದೇ ಇಲ್ಲ!

 

-.-.-.-.-.-.-.-.-.-.-.-.-.–.-.-.-.-.-.-.-.-

 

ಸದಾ ನೀ ಜೊತೆಯಾಗಿರು ಅಂತ ಪ್ರಾರ್ಥಿಸಿದ್ದೆ

ಯಾವುದೋ ದೇವತೆ ಅಸ್ತು ಅಂದಿರಬೇಕು

ಈಗ ಮರೆಯಬೇಕೆಂದುಕೊಂಡರೂ ಸದಾ

ನಿನ್ನ ನೆನಪಾಗೋದು ಅದಕ್ಕೇ ಇರಬೇಕು

ಮಳೆಗಾಲದ ಅಂಗಳದ

ದಬ್ಬೆ ಮೇಲಿನ ಪಾಚಿ ಲೋಳೆ ಮೇಲೆ

ಕಾಲಿಟ್ಟು ಜಾರಿ ಬಿದ್ದಿದ್ದು

 

ನಿದ್ದೆಯೆಳೆದರೂ ಕಣ್ತೆರೆದು

ಸೋಣೆಯಾರತಿ ಪಂಚಕಜ್ಜಾಯಕ್ಕೆ

ಕಾಗದದ ಕೊಟ್ಟೆ ಹಿಡಿದಿದ್ದು

 

ಚಾಪೆ ಹಣ್ಣು ಪಿತ್ತವೆಂದು ಎಷ್ಟು ಹೇಳಿದರೂ

ಕೇಳದೆ ಸಮಾ ತಿಂದು

ಹೊಟ್ಟೆನೋವು ಬಂದಿದ್ದು

 

ಹಬ್ಬದಗುಡಿ ಸುತ್ತಿ ಸುತ್ತಿ

ಬತ್ತಿಹೋಗಿ ನೋವಾದ ಪಾದಗಳಿಗೆ

ಅಮ್ಮ ಎಣ್ಣೆ ಬಳಿದಿದ್ದು

 

ಕಾಟು ಮಾವಿನ ಮರಕ್ಕೆ

ಸ್ಪರ್ಧೆಯ ಮೇಲೆ ಕಲ್ಲು ಹೊಡೆದು

ಹುಳಿ-ಸಿಹಿ ಹಣ್ನು ತಿಂದಿದ್ದು

 

ಬಿಂಬಲಕಾಯಿಯ ರುಚಿ

ನಾಲಿಗೆಗೆ ಸೋಕಿದಾಗ ಅದರ ಹುಳಿಗೆ

ಮುಖವ ಕಿವುಚಿದ್ದು

 

ಹುಚ್ಚು ಮಳೆಗೆ ಸೊಕ್ಕಿ ಹರಿವ

ಹೊಳೆಯಲಿ ಬಳಿದು ಬರುವ ಮರಗಳ

ಲೆಕ್ಕ ಇಡಲು ಸೋತಿದ್ದು

 

ಸುಳ್ಳೇ ಹೊಟ್ಟೆನೋವಿನ

ನೆಪ ಹೇಳಿ ಯಾಮಾರಿಸಿ ಶಾಲೆಗೆ

ಚಕ್ಕರ್ ಹಾಕಿದ್ದು

 

ಇವೆಲ್ಲಾ ಮತ್ತೆ ಬರಲಾರದೆಂದೇನೋ

ಮತ್ತೆ ಮತ್ತೆ ನೆನಪಾಗಿ ಕಾಡಿದ್ದು

ನೆನಪಿನ ನವಿರಿಗೆ ಕಣ್ಣಂಚು ಹಸಿಯಾಗಿ

ಹನಿಯೊಂದು ಜಾರಿದ್ದು

 

 

ನನ್ನ ನಿರೀಕ್ಷೆ-ಕನಸುಗಳೆಲ್ಲ

ಕಣ್ಣ ಕಟ್ಟೆಯೊಳಗೆ ಜೋಪಾನವಾಗಿವೆ

ಆದರೂ ಒಮ್ಮೊಮ್ಮೆ ಹನಿಯಾಗಿ ಹೊರಹೊಮ್ಮುತ್ತವೆ

ನೀ ಬಂದೆಯಾ ಎಂದು ಇಣುಕಿ ನೋಡಲು ಅಷ್ಟೆ

J J J J J

 

ಭಾವ ತೀರದೊಳು ನಾ ಏಕಾಂಗಿಯಲ್ಲ

ತೀರದ ನೆನಪುಗಳ ಅಲೆಯ ಸಪ್ಪಳವಿದೆಯಲ್ಲ

ಕಾಡುವ ಕ್ಷಣಗಳ ಮೊರೆತ ಭೋರ್ಗರೆಯುತ್ತಿದೆಯಲ್ಲ

ಒದ್ದೆ ಮರಳಿನ ಮೇಲೆ ನಿನ್ನ ಹೆಜ್ಜೆಗುರುತಿದೆಯಲ್ಲ

ಕಿವಿಯ ತುಂಬಿದ ನಿನ್ನ ಗೆಜ್ಜೆ ದನಿಯಿದೆಯಲ್ಲ

ಅದಕೇ ಹೇಳಿದ್ದು ನಾ ಏಕಾಂಗಿಯಲ್ಲ…

ನಿನ್ನ ಸಹಚರ್ಯದ ಮಧುರಸ್ಮೃತಿಯಿರುವ ತನಕ

J J J J J

 

ಇಂದಲ್ಲ ನಾಳೆ ಮಳೆ ಬರಲೇಬೇಕು

ಧರೆಯ ಧಗೆಯು ತಣಿದು ತಂಪಾಗಲೇಬೇಕು

ನನ್ನ ಚಿಂತೆ ಬಾರದ ಮಳೆಯ ಕುರಿತಲ್ಲ

ಬಂದೇ ಬರುತ್ತಿ ಎನ್ನಲು ನೀನೇನು ಮಳೆಯಲ್ಲವಲ್ಲ!

J J J J J

 

ಮಡದಿಯ ಮುದ್ದಿಸಲು ರವಿ ಬರಲಿಲ್ಲವೆಂದು

ಮ್ಲಾನತೆಯ ಮುಸುಕೊಳಗೆ ಇಳೆ ಮಲಗಿಹಳು ಇಂದು

ಮಳೆ ಸುರಿದರೂ ತಣಿಯಲಿಲ್ಲ ಅವಳ ಕೋಪ

ಕೆನ್ನೀರಾಗಿ ಹರಿಯುತಿದೆ ಅವಳ ಕಣ್ಣೀರು..ಪಾಪ

ಪ್ರತಿಭೆಗೆ ಪ್ರಾದೇಶಿಕತೆ, ಜಾತಿ-ಮತ ಇವ್ಯಾವುದೂ ಅಡ್ಡಗೋಡೆ ಆಗಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಮೆಚ್ಚುವ ಗುಣ ಆದರಣೀಯ. ಆದ್ರೆ ಪಕ್ಕದ್ಮನೆ ಹುಡುಗಿ ಚೆನ್ನಾಗಿದ್ದಾಳೆ ಅಂದ ಮಾತ್ರಕ್ಕೆ ಮನೇಲಿರೋ ಹೆಂಡ್ತಿನ ಕಾಲಕಸ ಮಾಡೋಕಾಗುತ್ತಾ ಹೇಳಿ? ಈ ಮಾತು ಯಾಕೆ ಹೇಳಿದೆ ಅಂದ್ರೆ, ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚುತ್ತಿರುವ ಪರಭಾಷಾ ಗಾಯಕ-ಗಾಯಕಿಯರ ಆಮದು ಯಾವ ಪರಿ ಬೆಳೆದಿದೆ ಅಂದ್ರೆ, ಇದರಿಂದಾಗಿ ಅಪ್ಪಟ ಕನ್ನಡದ ಪ್ರತಿಭೆಗಳು ಅವಕಾಶವೇ ಇಲ್ಲದೆ ಮೂಲೆಗುಂಪಾಗುತ್ತಿದ್ದಾರೆ ಅನ್ನಿಸೋವಷ್ಟು. ಕನ್ನಡದ ಪ್ರತಿಭೆಗಳಾದ ಹೇಮಂತ್, ನಂದಿತಾ, ಎಂ.ಡಿ.ಪಲ್ಲವಿ, ಸುಪ್ರಿಯಾ ಆಚಾರ್ಯ, ರಾಜೇಶ್ ಕೃಷ್ಣನ್, ಚೈತ್ರ ಇವರೆಲ್ಲ ಯಾವ ಗಾಯಕ/ಗಾಯಕಿಯರಿಗೆ ಯಾವುದರಲ್ಲಿ ಕಡಿಮೆ ಅಂತ ಹೊರಗಿನಿಂದ ದುಬಾರಿ ಬೆಲೆಯ ಸೋನು ನಿಗಂ, ಕುನಾಲ್ ಗಂಜಾವಾಲ, ಶ್ರೇಯಾ ಘೋಷಾಲ್‌ರನ್ನು ರತ್ನಗಂಬಳಿ ಹಾಸಿ ಕರೆಸಬೇಕೋ ಅರ್ಥವಾಗುತ್ತಿಲ್ಲ.

 

ಸೋನು ನಿಗಂ ಅಂದ್ರೆ ನನ್ನಂತೆಯೇ ಅನೇಕ ಮಂದಿಗೆ ಪಂಚಪ್ರಾಣ. ಅವನ ಆಲ್ಬಂ ಜಾನ್ ಇವತ್ತಿಗೂ ನನ್ನ ಆಲ್ ಟೈಮ್ ಫೇವರೆಟ್ಗಳಲ್ಲಿ ಒಂದು. ಶ್ರೇಯಾ ಘೋಷಾಲ್ ದನಿಯಲ್ಲಿ ಬಂದ ಜಿಸ್ಮ್ ಚಿತ್ರದ ಚಲೋ..ತುಮ್ಕೋ ಲೇಕರ್ ಚಲೇ ಹಾಡು ಕೂಡ ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದು. ಆದರೆ ಅವರು ಚೆನ್ನಾಗಿ ಹಾಡ್ತಾರೆ ಅಂದ ಮಾತ್ರಕ್ಕೆ ಅವರಷ್ಟೇ ಸೊಗಸಾಗಿ, ಸುಶ್ರಾವ್ಯವಾಗಿ ಹಾಡಬಲ್ಲ ನಮ್ಮ ಗಾಯಕ/ಗಾಯಕಿಯರನ್ನು ಬಿಟ್ಟು, ಎಲ್ಲರೂ ಬಾಲಿವುಡ್ ಗಾಯಕರನ್ನೇ ಕರೆಸೋದು ಎಷ್ಟು ಸರಿ ಅನ್ನೋದು ಪ್ರಶ್ನೆ. ಪರಭಾಷಾ ಹಾಡುಗಾರರು ಕೇಳುವ ಪಂಚತಾರಾ ಸೌಲಭ್ಯ, ಅವರ ವಿಮಾನದ ಖರ್ಚು, ಜೊತೆಗೆ ಸಂಭಾವನೆಯಾಗಿ ಕೊಡುವ ಲಕ್ಷಾಂತರ ರೂಪಾಯಿಗಳನ್ನು ಕಮಕ್-ಕಿಮಕ್ ಅನ್ನದೆ ಸುರಿಯೋ ನಮ್ಮ ನಿರ್ಮಾಪಕರುಗಳು, ನಮ್ಮ ಗಾಯಕರು ಕೇಳುವ ಹತ್ತಿಪ್ಪತ್ತು ಸಾವಿರಕ್ಕೂ ಮೀನ-ಮೇಷ ಎಣಿಸೋದು ಕಂಡಾಗ ನಿಜಕ್ಕೂ ಬೇಸರವಾಗುತ್ತೆ. ಹಿತ್ತಲ ಗಿಡ ಮದ್ದಲ್ಲ ಅನ್ನೋ ಮಾತು ಇವರನ್ನು ಕಂಡ ಮೇಲೆ ಎಷ್ಟು ನಿಜ ಅನ್ನಿಸುತ್ತೆ. ಪ್ರತಿಭೆಗಳು ನಮ್ಮಲ್ಲಿ ಯಾವ ಪರಿಯ ಅವಜ್ಞೆಗೆ ಒಳಗಾಗುತ್ತವೆ ಅನ್ನೋದಕ್ಕೆ ನಮ್ಮ ಪ್ರಕಾಶ್ ರೈ, ಅರ್ಜುನ್ ಸರ್ಜಾ ಇವರೆಲ್ಲರಿಗಿಂತ ಬೇರೆ ಸಾಕ್ಷಿ ಬೇಕೆ?

 

ಅದಕ್ಕೇ ಹೇಳಿದ್ದು.. ಸೋನು, ಶ್ರೇಯಾ ಇವರೆಲ್ಲ ನಮಗಿಷ್ಟದವರೇ ಆಗಿ ಇರಲಿ. ಆದರೆ ಅವರಿಗೆ ಅವರದ್ದೇ ಕ್ಷೇತ್ರವಾದ ಬಾಲಿವುಡ್‌ನಲ್ಲಿ ಕೈತುಂಬಾ ಅವಕಾಶಗಳಿವೆ. ಅವರ ಹಿಂದಿ ಹಾಡುಗಳನ್ನು ಕೇಳಿ ನಾವೂ ಖುಷಿ ಪಡೋಣ. ನಮ್ಮದೇ ನೆಲದ ಕನ್ನಡ ಹಾಡುಗಳಿಗೆ ಇವರಿಗಿಂತಲೂ ಸಮರ್ಥವಾಗಿ ದನಿಯಾಗಲು ನಮ್ಮವರಾದ ಹೇಮಂತ್, ಪಲ್ಲವಿ, ರಾಜೇಶ್, ನಂದಿತಾ…ಇವರೆಲ್ಲ ಇರುವಾಗ ಪರಭಾಷಾ ಗಾಯಕರು ತಪ್ಪುತಪ್ಪಾಗಿ ಹನಿಸುತಿದೆ… ಅನ್ನೋದನ್ನೆಲ್ಲಾ ಕೇಳಿಕೊಂಡು ಇರೋ ಕರ್ಮ ನಮಗ್ಯಾತಕ್ಕೆ ಹೇಳಿ? ಚಿತ್ರರಂಗದಲ್ಲಿರುವವರೆಲ್ಲಾ ಒಗ್ಗಟ್ಟಾಗಿ ಈ ಕುರಿತು ಯೋಚಿಸಿ ತೀರ್ಮಾನಕ್ಕೆ ಬರಬೇಕಾದುದು ತೀರಾ ಅಗತ್ಯ. ಇಲ್ಲದೇ ಹೋದಲ್ಲಿ ವಾಯ್ಸ್ ಆಫ್ ಕರ್ನಾಟಕ, ಎದೆ ತುಂಬಿ ಹಾಡಿದೆ.., ಲಿಟ್ಲ್ ಚಾಂಪ್ಸ್ ಅಂತ ಎಷ್ಟೇ ಪ್ರತಿಭೆಗಳನ್ನು ಬೆಳಕಿಗೆ ತಂದರೂ, ಹಾಡೋಕೆ ಹೊರಗಿನಿಂದ ಪ್ರತಿಭೆ ಆಮದಾಗೋದಾದ್ರೆ ಈ ಟ್ಯಾಲೆಂಟ್ ಹಂಟ್‌ಗಳೆಲ್ಲಾ ಅರ್ಥಹೀನ ಅನ್ನಿಸ್ಸುತ್ತೆ ಅಲ್ವಾ..?