Posts Tagged ‘ಹಾಡು’

ಇನ್ನೆಷ್ಟು ಕಾಲ ಸಹಿಸಿ ತೆಪ್ಪಗಿರಬೇಕು…?

 

ಹೊಡೆದರೂ ಬಡಿದರೂ, ವಾಚಾಮಗೋಚರ ಬೈದರೂ

ತುಟಿಪಿಟಕ್ಕೆನ್ನದಂತೆ ಸುಮ್ಮನಿರಬೇಕಂತೆ

 

ಆಳಿನಂತೆ ದುಡಿದರೂ, ಹಗಲಿರುಳು ಗೇಯ್ದರೂ

ಕೈಕಾಲು ಬತ್ತಿದರೂ ಸುಮ್ಮನಿರಬೇಕಂತೆ

 

ಜೂಜಿನಲಿ ಹಣ ಕಳೆದರೂ, ಮೋಜಿನಲಿ ಮೈ ಮರೆತರೂ

ಮನೆ ಮರ್ಯಾದೆಗಾಗಿ ಸುಮ್ಮನಿರಬೇಕಂತೆ

 

ಹಣ ತರಲಿಲ್ಲವೆಂದು ಜರಿದರೂ, ಉರಿವ ಕೊಳ್ಳಿಯನೇ ನುರಿದರೂ

ಅವುಡುಗಚ್ಚಿ ಸಹಿಸಿಕೊಂಡು ಸುಮ್ಮನಿರಬೇಕಂತೆ

 

ಮನು ಹೇಳಿದ್ದ ನಂಬಿ, ಮನಸಿನ ಮಾತನ್ನೇ ನುಂಗಿ

ನಾಲ್ಕು ಕೊಣೆಯೊಳಗೇ ಬಂಧಿಯಾದರೂ ಸುಮ್ಮನಿರಬೇಕಂತೆ

 

ತಾಳಿಗೆ ಕೊರೊಳೊಡ್ಡಿದ ಮಾತ್ರಕ್ಕೆ, ಕುಣಿಸೋ ಗಂಡಿನ ಸೂತ್ರಕ್ಕೆ

ಕೀಲುಬೊಂಬೆಯಂತೆ ಕುಣಿದು ಸುಮ್ಮನಿರಬೇಕಂತೆ

 

ಗಂಡ ಸತ್ತರೆ ವಿಧವೆ, ಗಂಡಿಗಾದರೆ ಮರುಮದುವೆ,

ಸತಿಯಾಗಿಸಿ ಚಿತೆಯೇರಿಸಿದರೂ ಸುಮ್ಮನಿರಬೇಕಂತೆ

 

ಕಾಲ ಬದಲಾದರೇನಂತೆ, ಶೋಷಣೆಗೆ ಹಲವು ಮುಖಗಳಂತೆ,

ಸಹಿಸುವ ತಾಕತ್ತು ಇದ್ದ ಮಾತ್ರಕೆ ಸಹಿಸುವುದೇಕಂತೆ

 

ಸುಮ್ಮನಿದ್ದಿದ್ದು ಸಾಕಿನ್ನು, ಸಮಾನತೆಯು ಬೇಕಿನ್ನು

ಗಂಡಿಗೆ ಸರಿ ಮಿಗಿಲೆನಿಸಿ ಮುನ್ನುಗ್ಗುವ ಹೆಣ್ಣೇ ನೀ ಯಾಕೆ ಸುಮ್ಮನಿರಬೇಕು?

 

 

ಈ ವಿಜ್ಞಾನಿಗಳು ಎಲ್ಲಾ ಹಾಳು ಮಾಡಿಬಿಟ್ರು…

ಚಂದಮಾಮನ ತೋರಿಸಿ ಮೊಲದ ಕಥೆ ಹೇಳಿದ್ರೆ

ಚಂದ್ರಕಂದಕಗಳ ಬಗ್ಗೆ ಮಗು ಕೇಳುತ್ತೆ,

ಪುಷ್ಪಕವಿಮಾನದ ಸೊಗಸು ಹೇಳೋಕೆ ಹೋದ್ರೆ

ಆಗ ಪೆಟ್ರೋಲ್ ಎಲ್ಲಿತ್ತು ಅಂತ ಕೆಣಕುತ್ತೆ

ರಕ್ತಬೀಜಾಸುರರ ಕಥೆ ಹೇಳೋಣ ಅಂದ್ರೆ

ಆಗ ಕ್ಲೋನಿಂಗ್ ಎಲ್ಲಿತ್ತು ಅಂತ್ ಸವಾಲೆಸೆಯುತ್ತೆ

ಈ ವಿಜ್ಞಾನಿಗಳು ಎಲ್ಲಾ ಕಲ್ಪನೆಗಳ ಕಥೆ ಕೆಡಿಸಿಬಿಟ್ಟಿದ್ದಾರೆ..

ನೂರಿನ್ನೂರು ವರ್ಷಗಳ ಮುಂಚೆ ಹುಟ್ಬೇಕಿತ್ತು ಅಂತ ಒಮ್ಮೊಮ್ಮೆ ಅನ್ಸುತ್ತೆ

ಹಾಡುಗಳೆಂದ್ರೆ ಯಾರಿಗೆ ಇಷ್ಟ ಇರೊಲ್ಲ ಹೇಳಿ? ಭಕ್ತಿಗೀತೆ, ಚಿತ್ರಗೀತೆ, ಜಾನಪದ, ತತ್ವಪದ, ಭಾವಗೀತೆ, ರಾಪ್, ರಾಕ್, ಪಾಪ್… ಹೀಗೆ ಒಬ್ಬೊಬ್ಬರ ಅಭಿರುಚಿಗೆ ತಕ್ಕಂತೆ ಒಂದೊಂದು ಇಷ್ಟ. ಈಗಂತೂ ಎಫ್.ಎಂ.ಗಳ ಭರಾಟೆ ಶುರುವಾದ ಮೇಲೆ ದಿನದ 24 ಗಂಟೆಯೂ ಕಿವಿಗೊಂದು ಇಯರ್‌ಫೋನ್ ಸಿಕ್ಕಿಸಿಕೊಂಡು ಸದಾ ಕಿವಿ ತುಂಬಿಸಿಕೊಳ್ಳುವವರೇ ಎಲ್ಲೆಲ್ಲೂ ಕಾಣಸಿಗುತ್ತಾರೆ. ಅದಿರಲಿ, ನಿಮಗೆ ಯಾವ ಹಾಡು ಇಷ್ಟ ಹೇಳಿ? ನಾನಂತೂ ರಾಪ್, ರಾಕ್, ಪಾಪ್‌ಗಳ ಅಬ್ಬರವನ್ನು ಬಿಟ್ಟು ಮಿಕ್ಕೆಲ್ಲದರ ಇಂಪಿಗೆ ಕಿವಿಯಾಗುತ್ತೇನೆ. ಆದರೆ ಯಾವತ್ತಾದರೂ ಮುಸ್ಸಂಜೆಯ ಹೊತ್ತಲ್ಲಿ ಗಝಲ್‌ಗಳ ಮತ್ತಲ್ಲಿ ಮುಳುಗೆದ್ದಿದ್ದೀರಾ..? ಸೂರ್ಯ ಮುಳುಗಿ ಹಕ್ಕಿಗಳು ಗೂಡು ಸೇರುವ ಹೊತ್ತಿನಲಿ, ದಿವ್ಯ ಏಕಾಂತದಲ್ಲೊಮ್ಮೆ ಗಝಲ್‌ಗಳನ್ನು ಕೇಳಿ ನೋಡಿ. ಎಂಥಾ ಅರಸಿಕನನ್ನೂ ಕವಿಯಾಗಿಸಬಲ್ಲ, ದಿವ್ಯ ಸಾನ್ನಿಧ್ಯವೊಂದರಲ್ಲಿ ಲೀನವಾದಂತಹ ಆ ಮಧುರಾನುಭೂತಿ ಶಬ್ದಗಳ ನಿಲುಕಿಗೆ ಸಿಗುವಂತದ್ದಲ್ಲ. ಅದನ್ನು ಅನುಭವಿಸಿಯೇ ತಿಳಿಯಬೇಕು.

 

ನೂರಾರು ಗಝಲ್ ಗಾಯಕ-ಗಾಯಕಿಯರಿದ್ದಾರದರೂ ಗುಲಾಮ್ ಅಲಿ, ಅಬೀದಾ ಪರ್ವೀನ್, ಜಗಜೀತ್ ಸಿಂಗ್ ಗಝಲ್‌ಗಳೆಂದರೆ ನನಗಂತೂ ಪಂಚಪ್ರಾಣ. ಒಮ್ಮೆ ರವಿ ಬೆಳಗೆರೆ ಹಾಯ್ನಲ್ಲಿ ಗಝಲ್‌ಗಳ ಬಗ್ಗೆ ಬರೆದ ಲೇಖನ ಓದಿ ಹತ್ತಿಸಿಕೊಂಡ ಗುಲಾಮ್ ಅಲಿ ಮತ್ತು ಅಬೀದಾ ಪರ್ವೀನ್‌ಳ ಗಝಲ್ ಹುಚ್ಚು  ಇನ್ನೂ ಬಿಟ್ಟಿಲ್ಲ. ಗುಲಾಮ್ ಅಲಿಯ ಚುಪ್ಕೆ ಚುಪ್ಕೆ ರಾತ್ ದಿನ್.., ಝಕ್ಮ್-ಎ-ತನಹಾಯಿ ಮೆ.., ಹಮ್ಕೊ ಕಿಸ್ಕೆ ಘಮ್ ನೆ ಮಾರಾ.. ಕೇಳುತ್ತಾ ಕಳೆದು ಹೋದರೆ.. ಅಬೀದಾಳ ಮೈಂ ನಾ ರಹಿ ಮಸ್ತಾನ.., ಪ್ರೀತಮ್ ಮತ್ ಪರ್ದೇಸ್ ಸಿಧಾರೋ.., ತೂನೆ ದೀವಾನ ಬನಾಯ..ಮೈ ದೀವಾನಿ ಬನೀ.. ನಿಮ್ಮನ್ನು ಆವರಿಸಿಕೊಂಡು ಕಾಡುತ್ತದೆ. ಜಗಜೀತ್ ಸಿಂಗ್ ಗಝಲ್ ಬಗ್ಗೆ ಬೇರೆ ಹೇಳಲೇಬೇಕಾಗಿಲ್ಲ.

ಮೊದ ಮೊದಲು ಅರ್ಥ ಮಾಡಿಕೊಳ್ಳಲು ಕಷ್ಟ ಅನ್ನಿಸಿದರೂ ಕೂಡಾ ಅದರ ಭಾವ ಅರಿವಾದಂತೆಲ್ಲಾ ಹಾಡಿನ ಅರ್ಥವೂ ಆಗುತ್ತಾ ಹೋಗುತ್ತದೆ. ಅರ್ಥವಾದಂತೆಲ್ಲಾ ಆ ದನಿಯ ಆರ್ದ್ರತೆ, ಹಾಡಿನ ಮಾಧುರ್ಯ, ಭಾವುಕತೆ ಇವೆಲ್ಲಾ ಮೇಳೈಸಿದಾಗ ಸಿಗುವ ಆನಂದ ಮುಸ್ಸಂಜೆಯ ರಂಗಿಗೆ ಇನ್ನಷ್ಟು ಮೆರುಗು ನೀಡುತ್ತದೆ. ನಿಮ್ಮ ಸಾಯಂಕಾಲದ ಸೌಂದರ್ಯವನ್ನು ನೂರ್ಮಡಿಗೊಳಿಸುವ ಗಝಲ್‌ಗಳಿಗೆ ಒಮ್ಮೆ ಕಿವಿಯಾಗಿ ನೋಡಿ…

 

 

ಅವನೊಬ್ಬ ಅನಿವಾಸಿ ಅವಳ್ಹೆಸರು ಅವಿನಾಶಿ

ಭೇಟಿಯಾದರು ಅಂತರ್ಜಾಲದಿ ಚಾಟಿಸಿ

ಅರಳಿದ ಪ್ರೇಮವು ಶುದ್ಧ ಫ್ಯಾಂಟಸಿ

ಅಂತರ್ಜಾಲದ ಅಂತರ್‌ಪಟವ ಸೇರಿಸಿ

ದಂಪತಿ ಅವರೀಗ ನೆಟ್ ಅಲ್ಲೇ ವರಿಸಿ

ಬಂಧುಗಳು ಇವರ ಮೇಲ್ ಅಲ್ಲೇ ಹರಸಿ

ವೆಬಕ್ಯಾಮ್‌ನೊಳಗೆ ಕಣ್ಣೀರು ಸುರಿಸಿ

ಮನೆತುಂಬಿಸಿಕೊಂಡರು ಮೌಸ್ ಕ್ಲಿಕ್ಕಿಸಿ

ತಾಳಿ (ಟ್ಯಾಲಿ) ಇಲ್ಲದ ಇ-ಮದುವೆ ಕತೆ ಆಲಿಸಿ

ನಿಮ್ಮ ಅನಿಸಿಕೆಗಳನು ಬ್ಲಾಗ್ ಅಲ್ಲಿ ಬ್ಲಾಗಿಸಿ

ಸಹ್ಯಾದ್ರಿಯ ಮಳೆಕಾಡಿನ ನಡುವೆ

ಕಳೆದುಹೋಗಬೇಕಿದೆ ಜರೂರು ಈಗ,

ಜನಾರಣ್ಯ ಗೌಜಿ-ಗದ್ದಲಗಳಿಂದ

ದೂರವಾಗಬೇಕು ಆದಷ್ಟು ಬೇಗ

 

ಸದ್ದುಗದ್ದಲದ ಕಲರವಗಳಿಗೆ

          ಹೊಂದಿಕೊಂಡಿರುವ ಕಿವಿಗೆ

          ತೆರೆದುಕೊಳ್ಳುವ ಆಸೆಯಾಗಿದೆ

          ಮೌನರಾಗದ ಸವಿಗೆ

 

ಕೃತ್ರಿಮ ಬಣ್ಣ-ಬೆಡಗಿನ ಥಳುಕಿಗೆ

ಮಾರು ಹೋದ ಕಣ್ಣು

ನೋಡಬೇಕಿದೆ ನೈಜ ವರ್ಣದ

ಗಿಡ-ಮರ ಹಕ್ಕಿ ಹಣ್ಣು

 

          ಸುಗಂಧ ದ್ರವ್ಯದ ಮತ್ತೇರೋ ವಾಸನೆಗೆ

          ಜಡ್ಡುಗಟ್ಟಿರುವ ಮೂಗಿಗೆ

          ಆಘ್ರಾಣಿಸಿ ಅರಳೋದ ಕಲಿಸಬೇಕಿದೆ

          ಕಾನನ ಕುಸುಮ ಸೌರಭಕೆ

 

ಪಿಜ್ಜಾ-ಬರ್ಗರ್ ಪೆಪ್ಸಿ-ಕೋಕಿಗೆ

ಜೊಲ್ಲು ಸುರಿಸೋ ನಾಲಗೆಗೆ

ಹಲಸು-ಮಾವಿನ ಸವಿ ತೋರಿಸಿ

ತಿನ್ನಿಸಬೇಕು ಶ್ಯಾವಿಗೆ

 

          ಹೇಳಬೇಕಿದೆ ಅಂತಿಮ ವಿದಾಯ

          ರಸಹೀನ ಬದುಕಿನ ಬೀಡಿಗೆ

          ಮರಳಬೇಕಿದೆ ಸ್ವಚ್ಛಂದ ಬದುಕಿನ

          ಮಳೆಯ ಕಾಡಿಗೆ – ಮಲೆನಾಡಿಗೆ