Posts Tagged ‘ಹಾಸ್ಯ’

ಹೀಗೊಂದು ಮಾತು ನಮ್ ಕುಂದಾಪ್ರ ಕಡೆ ಇದೆ – ಕಲ್ತ್‌ದ್ ಹೆಚ್ಚಾಯ್ತ್ ಕಾಲ್ ಮೇಲಾಯ್ತ್…ಗಾಳಿ ಬರ್ಕ್ ಮನಿಗ್ ಹೋಯ್ಕ್. ಇದರ ಮೊದಲ ಭಾಗ ನೀವೂ ಕೇಳಿರಬಹುದು. ಆದರೆ ಈ ಮಾತಿಗೂ ಹಿನ್ನೆಲೆಯಾಗಿ ಒಂದು ಕತೆಯೋ ಕಟ್ಟು ಕತೆಯೋ ಇರಬೇಕಲ್ವೇ? ಈ ಮಾತನ್ನು ಯಾವ ಅರ್ಥದಲ್ಲಿ ಉಪಯೋಗಿಸುತ್ತಾರೆ ಅಂತ ಗೊತ್ತಿದ್ದರೂ ಕೂಡಾ ಇದರ ಹಿಂದಿನ ಕತೆ ಗೊತ್ತಿರಲಿಲ್ಲ. ಮೊನ್ನೆ ಒಂದು ಹಾಸ್ಯ ಯಕ್ಷಗಾನ ಪ್ರಸಂಗ ಕೇಳ್ತಾ ಇದ್ದೆ. ಅದರಲ್ಲಿನ ಪಾತ್ರಧಾರಿಯೊಬ್ಬರು ಸಂದರ್ಭೋಚಿತವಾಗಿ ಈ ಮಾತನ್ನು ಬಳಸಿದಾಗ ಅದರ ಹಿನ್ನೆಲೆಯನ್ನು ಕೂಡಾ ವಿವರಿಸಿದರು.

ಕಥೆಯ ಮೂಲ ಹೀಗಿದೆಯಂತೆ

ಒಬ್ಬನಿಗೆ ಒಮ್ಮೆ ಎರಡೂ ಕಾಲಿಗೆ ಏಟು ಬಿದ್ದು ನಡೆಯೋಕೆ ಸಾಧ್ಯ ಆಗ್ತಾ ಇರ್ಲಿಲ್ಲವಂತೆ. ಎರಡು ಕೋಲುಗಳ ಸಹಾಯದಿಂದ ಅವನು ನಡೆಯುತ್ತಿದ್ದನಂತೆ. ಹೀಗೆ ಒಮ್ಮೆ ಸುತ್ತಾಡೋಕೆ ಅಂತ ಅವನು ಕೋಲಿನ ಆಸರೆಯಲ್ಲಿ ನಡೆದು ಹೋಗ್ತಾ ಇದ್ನಂತೆ. ದಾರೀಲಿ ಅವನೊಂದು ಮಾವಿನ ಮರ ನೋಡಿದ. ಮಾವಿನ ಹಣ್ಣಿನ ಸೀಸನ್. ನೋಡ್ತಾನೆ ಒಳ್ಳೇ ರಸಭರಿತ ಹಣ್ಣುಗಳು. ಹಣ್ಣು ತಿನ್ನೋಕೆ ಆಸೆಯಾಯ್ತು. ಆದ್ರೆ ಏನು ಮಾಡೋದು ಸುತ್ತಮುತ್ತ ಯಾವ ಕಲ್ಲೂ, ಕೋಲೂ ಇರಲಿಲ್ಲ. ಸರಿ ಇನ್ನೇನು ಮಾಡೋದು ಅಂತ ತನ್ನ ಆಸರೆಗಿಟ್ಟುಕೊಂಡಿದ್ದ ಕೋಲನ್ನೇ ಹಣ್ಣಿಗೆ ಗುರಿಯಿಟ್ಟು ಹೊಡೆದನಂತೆ. ಅವನ ದುರಾದೃಷ್ಟಕ್ಕೆ ಅದು ಮರದಲ್ಲೇ ಸಿಕ್ಕಿಹಾಕಿಕೊಂದಿತು. ಇಲ್ಲೇ ಅವನ ಅತೀ ಬುದ್ಧಿವಂತಿಕೆ ಕೆಲಸ ಮಾಡೋದು.(ಕಲ್ತದ್ ಹೆಚ್ಚಾದದ್). ಹೋಗ್ಲಿ ಅಂತ ಒಂದು ಕೋಲೂರಿಕೊಂಡು ಸುಮ್ನೆ ಮನೆಗೆ ಹೋಗ್ಬೇಕಾ ಬೇಡ್ವಾ. ಅವ್ನು ಅದನ್ನು ಬಿಟ್ಟು, ಸಿಕ್ಕಿಕೊಂಡ ಕೋಲು ಉದುರಿಸಲು ತನ್ನ ಕೈಲಿದ್ದ ಇನ್ನೊಂದು ಕೋಲು ಎಸೆದನಂತೆ. ಅವನ ಗ್ರಾಚಾರಕ್ಕೆ ಅದೂ ಮರದ ಮೇಲೆ ಸಿಕ್ಕಿ ಬೀಳಬೇಕೆ. ಹಾಗಾಗಿ ಅವನ ಎರಡೂ ಕಾಲು ಮರದ ಮೇಲೆ ಸಿಕ್ಕಿ ಬದ್ದ ಹಾಗಾಯ್ತು ( ಕಾಲ್ ಮೇಲಾಯ್ತ್) .ಈಗ ಅವನಿಗೆ ಉಳಿದದ್ದು ಒಂದೇ ದಾರಿ, ಜೋರಾಗಿ ಗಾಳಿ ಬೀಸಿ ಕೋಲು ಉದುರುತ್ತಾ ಅಂತ ಕಾಯೋದು. ಗಾಳಿ ಬಂದು ಕೋಲು ಬಿದ್ದರಷ್ಟೇ ಅವನು ಕೋಲೂರಿಕೊಂಡು ಮನೆಗೆ ಹೋಗೋಕೆ ಸಾಧ್ಯ. ( ಗಾಳಿ ಬರ್ಕ್ ಮನಿಗ್ ಹೋಯ್ಕ್). ಅದಕ್ಕೇ ಬಂದಿದ್ದಂತೆ ಈ ಮಾತು…

ಇದು ಯಕ್ಷಗಾನ ಪಾತ್ರಧಾರಿಯು ಮಾತಿನ ಚಾಲಾಕಿತನದಲ್ಲಿ ಹೆಣೆದ ಕಥೆಯೋ ಅಥವಾ ಇದೇ ಇದರ ನಿಜವಾದ ಹಿನ್ನೆಲೆಯೋ ನಂಗೂ ಗೊತ್ತಿಲ್ಲ. ಆದರೆ ಕಥೆಯಂತು ಈ ಮಾತಿನ ಹಿಂದಿರುವ ಅರ್ಥಕ್ಕೆ ಸಮನಾಗಿಯೇ ಇದೆ.

ಇದು ಗಾಂಪರ ಕಥೆ ಹೌದೋ ಅಲ್ವೋ ಗೊತ್ತಿಲ್ಲ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಕೇಳಿದ್ದು. ನೀವೂ ಈ ಕಥೆ ಕೇಳಿರಬಹುದು. ಅಳಿದುಳಿದ ನೆನಪಿನೊಂದಿಗೆ ಕಥೆ ಹೀಗಿದೆ…

 

ಒಮ್ಮೆ ಗಾಂಪರ ಗುರುವಿಗೆ ಕುದುರೆ ಮೇಲೆ ತಿರುಗಬೇಕು ಅಂತ ಆಸೆಯಾಗುತ್ತೆ. ಆದ್ರೇನು ಮಾಡೋದು? ಕುದುರೆಯ ಬೆಲೆ ಭಾರಿ ದುಬಾರಿ. ಜೊತೆಗೆ ಈಗಿನ ತರಕಾರಿ. ತೈಲದ ಬೆಲೆಯೆ ತರಹವೇ ದಿನದಿನಕ್ಕೂ ಬೆಲೆ ಹೆಚ್ಚಾಗ್ತಾ ಇದೆ. ಹಾಗಾಗಿ ತಮ್ಮ ಆಸೆಯನ್ನು ಗುರುಗಳು ಅದುಮಿಟ್ಟುಕೊಂಡಿದ್ರು. ಅವರ ಶಿಷ್ಯರಿಗೆ ಗುರುಗಳ ಈ ಆಸೆಯ ಬಗ್ಗೆ ಹ್ಯಾಗೋ ಗೊತ್ತಾಯ್ತು. ಸರಿ, ಹೇಗಾದ್ರೂ ಮಾಡಿ ಗುರುಗಳ ಆಸೆ ತೀರಿಸಲೇಬೇಕು ಅಂತ ನಿರ್ಧರಿಸಿದ್ರು. ಆದ್ರೆ ಅಷ್ಟು ಹಣ ಹೊಂದಿಸೊ ಶಕ್ತಿ ಇಲ್ಲದ ಕಾರಣ ಸುಮ್ಮನಿದ್ದರು.

 

ಹೀಗಿರುತ್ತಾ ಒಂದು ದಿನ ತಿರುಗಾಡೋಕೆ ಹೋಗಿದ್ದ ಶಿಷ್ಯರು ಕುದುರೆಗಳು ಮೇಯುತ್ತಾ ಇದ್ದ ಜಾಗವೊಂದಕ್ಕೆ ಬಂದ್ರು. ಅಲ್ಲೆಲ್ಲಾ ಕುಂಬಳಕಾಯಿ ಬಳ್ಳಿ ಹುಲುಸಾಗಿ ಬೆಳೆದು ದೊಡ್ಡ ದೊಡ್ಡ ಕಾಯಿಗಳು ಬಿಟ್ಟಿದ್ವು. ಶಿಷ್ಯರೆಲ್ಲಾ ಸಂತೋಷದಿಂದ ಕುದುರೆಮೊಟ್ಟೆ… ಕುದುರೆಮೊಟ್ಟೆ ಅಂತ ಒಕ್ಕೊರಲಿನಿಂದ ಕೂಗಿ, ಕುಣಿದು ಕುಪ್ಪಳಿಸಿದ್ರು. ಕುದುರೆ ಬೆಲೆ ಜಾಸ್ತಿಯಾದ್ರೇನಂತೆ, ಕುದುರೆ ಮೊಟ್ಟೆ ಕೊಂಡೊಯ್ದು ಮರಿ ಮಾಡಿ ಅದರ ಮೇಲೆ ಗುರುಗಳ ಸವಾರಿ ಮಾಡಿಸೋದು ಅಂತ ಸರ್ವಾನುಮತದ ನಿರ್ಣಯವಾಯ್ತು. ಅಲ್ಲೇ ಕುದುರೆ ಮೇಯಿಸ್ತಾ ಇದ್ದ ಹುಡುಗನ ಕರೆದು ಕೇಳಿದ್ರು..ಎಷ್ಟಪ್ಪಾ ಕುದುರೆ ಮೊಟ್ಟೆ ಬೆಲೆ? ಆ ಹುಡುಗ ಬಲು ಚಾಲಾಕಿ. ಇದ್ಯಾವುದೋ ಕುರಿ ಸಿಕ್ತು ಅಂದ್ಕೊಂಡು ೨೦೦ ರೂಪಾಯಿ ಅಂತಂದ. ಸಾಕಷ್ಟು ಹೊತ್ತು ಚೌಕಾಸಿ ನಡೆಸಿ, ಕೊನೆಗೂ ೧೦೦ ರೂಪಾಯಿಗೆ ಕುದುರೆ ಮೊಟ್ಟೆಯ ವಿಕ್ರಯ ಮಾಡಿ ಜಗತ್ತನ್ನೇ ಗೆದ್ದ ಖುಷಿಯಲ್ಲಿ ಶಿಷ್ಯರ ಗುಂಪಿನ ಸವಾರಿ ಗುರುಮಠದತ್ತ ಹೊರಟಿತು.

 

ಮಾರ್ಗ ಮಧ್ಯದಲ್ಲಿ ಒಂದು ಪುಟ್ಟ ಕಾಡನ್ನು ಹಾದು ಸಾಗುತ್ತಿರುವಾಗ ಅವರ ದುರಾದೃಷ್ಟಕ್ಕೆ ಕುದುರೆ ಮೊಟ್ಟೆ ಹಿಡಿದವನ ಕಾಲಿಗೆ ಬಳ್ಳಿಯೊಂದು ತೊಡರಿ ಅವನು ಬಿದ್ದೇಬಿಟ್ಟ. ಕುದುರೆಮೊಟ್ಟೆ ನಾಮಾಂಕಿತ ಕುಂಬಳಕಾಯಿ ಒಡೆದು ಇಬ್ಬಾಗವಾಯ್ತು. ಆ ಸದ್ದಿಗೆ ಅಲ್ಲೇ ಪೊಕ್ಕದ ಪೊದೆಯೊಂದರಲ್ಲಿದ್ದ ಮೊಲವೊಂದು ಬೆಚ್ಚಿಬಿದ್ದು ಸರಸರನೆ ಓಡಲು ಶುರುವಿಟ್ಟುಕೊಂಡಿತು. ಹೋ..ಕುದುರೆಮೊಟ್ಟೆ ಒಡೆದು ಕುದುರೆ ಮರಿ ಹೊರಬಂದು ಓಡಿ ಹೋಗ್ತಾ ಇದೆ ಅಂತ ಲೆಕ್ಕ ಹಾಕಿದ ಶಿಷ್ಯರು ಅದರ ಬೆನ್ನಟ್ಟಿ ಓಡಿದರು. ಆದ್ರೆ ಮೊಲದ ಚುರುಕಿನ ಎದುರು ಇವರದ್ದು ಯಾವ ಲೆಕ್ಕ ಬಿಡಿ. ಆದರೂ ಛಲ ಬಿಡದೆ ಶಿಷ್ಯರೆಲ್ಲಾ ಸೇರಿ ಅದನ್ನು ಹಿಂಬಾಲಿಸಿ ಓಡುತ್ತಲೇ ಇದ್ರು. ಅಷ್ಟರಲ್ಲಿ ದಾರಿಯಲ್ಲಿ ಬರುತ್ತಿದ್ದ ಗುರುಗಳನ್ನು ಕಂಡು, ನಡೆದ ವೃತ್ತಾಂತವನ್ನೆಲ್ಲಾ ಅವರಿಗೆ ಚುಟುಕಾಗಿ ವಿವರಿಸಿದರು. ಸರಿ, ಶುರುವಾಯ್ರು ಗುರು-ಶಿಷ್ಯರ ಹುಡುಕಾಟ. ಗುರುಗಳಿಗೆ ವಯಸ್ಸಾದ ಕಾರಣ ಸ್ವಲ್ಪ ದೂರ ಓಡುವಷ್ಟರಲ್ಲೇ ಸುಸ್ತಾಗಿ ದಣಿವಿಂದ ಬಿದ್ದು ಮೂರ್ಛೆ ಹೋಗಿಬಿಟ್ರು. ಶಿಷ್ಯರೆಲ್ಲಾ ಓಡಿದ ಕುದುರೆ ಮರಿಯನ್ನು ಶಪಿಸುತ್ತಾ ಒಲ್ಲದ ಮನಸ್ಸಿಂದ ಗುರುಗಳನ್ನು ಹೊತ್ತು ವೈದ್ಯರ ಬಳಿ ಕರೆತಂದ್ರು.

 

ಅವರನ್ನು ಪರೀಕ್ಷಿಸಿದ ವೈದ್ಯರು ಶಿಷ್ಯರಲ್ಲಿ ಹೇಳಿದ್ದಿಷ್ಟು..ಗುರುಗಳು ಪ್ರಾಣ ಅಪಾಯದಲ್ಲಿದೆ. ಔಷಧಿಗೆ ಬೇಕಾದ ನಾರು-ಬೇರು ಮುಗಿದು ಹೋಗಿದೆ. ನಾನು ಬೇಗ ಕಾಡಿಗೆ ಹೋಗಿ ಹುಡುಕಿ ತರುತ್ತೇನೆ. ಗುರುಗಳ ಗಾಳಿ ಒಂದು ಮೇಲೆ ಹೋಗದ ಹಾಗೆ ನೋಡ್ಕೊಳ್ಳಿ ( ಅಂದ್ರೆ ಪ್ರಾಣ ಹೋಗದ ಹಾಗೆ ನೋಡ್ಕೊಳ್ಳಿ). ಈಗ ಬಂದೆ... ಸರಿ ಶಿಷ್ಯರೆಲ್ಲಾ ತಮ್ಮ ತಮ್ಮಲ್ಲೇ ಸಮಾಲೋಚನೆ ಮಾಡಿ, ವೈದ್ಯರು ಹೇಳಿದ್ದನ್ನು ಶಿರಸಾವಹಿಸಲು ಕಂಕಣಬದ್ಧರಾದ್ರು. ಗುರುಗಳ ಮೂಗು ಒಬ್ಬ ಹಿಡಿದ. ಗುರುಗಳು ಮಿಸುಕಾಡಿ ಬಾಯಿ ಕಳೆದರು. ಇಬ್ಬರು ಸೇರಿ ಅವರ ಬಾಯಿಗೆ ಬಟ್ಟೆ ಕಟ್ಟಿದ್ರು. ಗುರುಗಳು ಒದ್ದಾಡೋದು ನೋಡಿ..ಗಾಳಿ ಹೊರ ಹೋಗುತ್ತಲ್ಲಾ ಅಂತ ಇನ್ನಷ್ಟು ಬಿಗಿಯಾಗಿ ಒತ್ತಿ ಹಿಡಿದರು. ಅಂತೂ ಕಷ್ಟ ಪಟ್ಟು ಗುರುಗಳ ಗಾಳಿ ಹೊರಗೆ ಹೋಗದಂತೆ ತಡೆದ ಫಲವಾಗಿ ವೈದ್ಯರು ಗಡಿಬಿಡಿಯಿಂದ ಬರುವಷ್ಟರಲ್ಲಿ ಗುರುಗಳ ಗಾಳಿ ಬಂದ್ ಆಗಿಯಾಗಿತ್ತು.

 

ಇತೀ ಕುದುರೆ ಮೊಟ್ಟೆ ಪುರಾಣಂ ಪರಿಸಮಾಪ್ತಿ

ಈ ಪ್ರಸಂಗ ಹೇಳಿದವರು ನನಗೆ ಹೈಸ್ಕೂಲಿನಲ್ಲಿ ಮೇಷ್ಟ್ರಾಗಿದ್ದ ಎಂ.ವಿ.ಹೆಗಡೆ. ಅವರು ಮೂಲತಃ ಉತ್ತರಕನ್ನಡದವರು. ಆರಂಭದಲ್ಲಿ ಪ್ರಾಥಮಿಕ ಶಾಲೆಗೆ ಮೇಷ್ಟ್ರಾಗಿ ಬಂದ ಅವರಿಗೆ ಕುಂದಾಪುರ ಕನ್ನಡದ ಪರಿಚಯವೇ ಇರಲಿಲ್ಲ. ಸಿದ್ದಾಪುರ(ಉಡುಪಿ ಜಿಲ್ಲೆ)ದಲ್ಲಿ ಅವರ ಪ್ರಾಥಮಿಕ ಶಾಲಾ ಶಿಕ್ಷಕ ವೃತ್ತಿಯ ಆರಂಭದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ನಮಗೊಮ್ಮೆ ಕ್ಲಾಸಿನಲ್ಲಿ ಅವರು ಹೇಳಿದ್ರು. ಅದನ್ನೇ ಯಥಾವತ್ತಾಗಿ ನಿಮ್ಮ ಮುಂದಿಡುತ್ತಿದ್ದೇನೆ.

 

ಸಿದ್ದಾಪುರದ ಶಾಲೆಗೆ ಮೇಷ್ಟ್ರಾಗಿ ಬಂದ ಹೊಸದು. ಯಾವುದೋ ತರಗತಿಯೊಂದರಲ್ಲಿ ಪಾಠ ಮಾಡುತ್ತಾ ಇದ್ರು. ಪಾಠ ಮುಗಿಯುವುದಕ್ಕೊ ಶಾಲೆಯ ಲಾಂಗ್ ಬೆಲ್ ಹೊಡೆಯುವುದಕ್ಕೊ ಸರಿಹೋಗಿತ್ತು. ಈಗಷ್ಟೇ ಮಾಡಿದ ಪಾಠ ಮಕ್ಕಳ ತಲೆಗೆ ಎಷ್ಟು ಹೋಗಿದೆ ನೋಡೋಣ ಅಂತ ಅವ್ರು ಮಕ್ಕಳಿಗೆ ಪಾಠದ ಕೊನೆಯಲ್ಲಿರುವ ಪ್ರಶ್ನೆಗೆ ನಾಳೆ ಉತ್ತರ ಹೇಳಬೇಕು ಅಂತ ಮಕ್ಕಳಿಗೆ ಹೇಳಿದ್ರು. ಆಗ ತರಗತಿಯಲ್ಲಿದ್ದ ಅಷ್ಟೂ ಮಕ್ಕಳೂ ಕೋರಸ್ನಲ್ಲಿ ಬರ್ಕ ಬರ್ಕಾ ಸಾರ್… ಅಂತ ರಾಗವಾಗಿ ಉಲಿದಾಗ ಕಕ್ಕಾಬಿಕ್ಕಿಯಾಗುವ ಸರದಿ ಹೆಗಡೆ ಮಾಷ್ಟ್ರದಾಗಿತ್ತು. ಏನು ಅಂತ ಆ ಮಕ್ಕಳನ್ನು ಕೇಳಿದ್ರೆ..ಮತ್ತೊಂದು ಸಾರಿ ಏಕಕಂಠದಿಂದ ಹೊರಬಂದಿತ್ತು ಅಮೃತವಾಣಿ…. ಬರ್ಕ ಬರ್ಕಾ ಸಾರ್..

 

ಇದೊಳ್ಳೆ ಪೀಕಲಾಟಕ್ಕೆ ಬಂತಲ್ಲ… ಯಾವುದೀ ದ್ವಿರುಕ್ತಿ…ಬರ್ಕ ಬರ್ಕ ಅಂತ ಯೋಚಿಸುತ್ತಾ ಏನೂ ಹೇಳದೇನೆ ತರಗತಿಯಿಂದ ಹೊರಬಂದ ಹೆಗಡೆ ಮೇಷ್ಟ್ರು ತಲೆಯಲ್ಲಿ ಅದೇ ಪ್ರಶ್ನೆ -ಏನಿರಬಹುದು ಈ ಬರ್ಕ ಬರ್ಕಾ..? ಕುತೂಹಲ ತಡೆಯಲಾಗದೆ ತಮ್ಮ ಸಹೋದ್ಯೋಗಿ ಮೇಷ್ಟ್ರ ಬಳಿ ಅದೇ ಪ್ರಶ್ನೆ ಹಾಕಿದರು.

 

ಕುಂದಾಪುರ ತಾಲೂಕಿನವರೇ ಆದ ಆ ಮೇಷ್ಟು ನಸುನಗುತ್ತಾ ಹೇಳಿದ್ದು ಇಷ್ಟು… ಅದ್ರಲ್ಲಿ ವಿಶೇಷ ಎಂತಾ ಇಲ್ಲಾ ಮರಾಯ್ರೆ.. ಮಕ್ಕಳು ನಿಮ್ ಹತ್ರ ಕೇಳ್ತಾ ಇದ್ದಾವೆ, ಪ್ರಶ್ನೆಗಳಿಗೆ ಉತ್ರಾ ಬರೆದುಕೊಂಡು ಬರಬೇಕಾ ಸಾರ್. ಅದನ್ನೇ ಶಾರ್ಟ್ ಆಂಡ್ ಸ್ವೀಟ್ ಆಗಿ ಕುಂದಾಪ್ರ ಕನ್ನಡದಲ್ಲಿ ಬರ್ಕ ಬರ್ಕಾ ಸಾರ್ ಅಂತ ಕೇಳಿದಾರೆ ಅಂದಾಗ ಒಗಟು ಬಿಡಿಸಿದ ಸಂಭ್ರಮದಲ್ಲಿ ಹೆಗಡೆ ಮಾಷ್ಟ್ರ ಮುಖದಲ್ಲಿ ನಗುವೊಂದು ಮೂಡಿತ್ತು. ಹೀಗಿದೆ ನೋಡಿ ಸ್ವಾಮಿ ಬರ್ಕ ಬರ್ಕಾ ಮಹಾತ್ಮೆ.

 

ನಾವೆಲ್ಲ ಚಿಕ್ಕವರಾಗಿದ್ದಾಗ ಅನೇಕ ಕಥೆ, ಗಾದೆ ಒಗಟು ಇವನ್ನೆಲ್ಲಾ ಕೇಳಿಯೇ ಇರುತ್ತೇವೆ. ಅವುಗಳಲ್ಲಿ ಕೆಲವು ಎಷ್ಟು ಕಾಲವಾದರೂ ಹಸಿ ಗೋಡೆಯಲ್ಲಿ ನೆಟ್ಟ ಹರಳಿನಂತೆ ಗಟ್ಟಿಯಾಗಿ ಮನಸ್ಸಿನಲ್ಲಿ ಅಂಟಿಕೊಂಡಿರುತ್ತವೆ. ಅಂಥಾ ಒಂದು ನೆನಪು ಈ ಸುಕ್ರನ ಕಥೆ. ನೀವು ಕುಂದಾಪ್ರ ಕಡೆಯವರಾಗಿದ್ರೆ ಕಂಡಿತಾ ಈ ಕಥೆ ಕೇಳೇ ಇರುತ್ತೀರಿ. ಇಲ್ಲವಾದಲ್ಲಿ ಕೂಡಾ ನಿಮ್ಮ ಕಡೆಯದೇ ಆದ ಇದಕ್ಕೆ ಹತ್ತಿರವಾದ ಕಥೆಯನ್ನಾದ್ರೂ ಕೇಳಿರಬಹುದು.

 

ಕಥೆ ಏನಪ್ಪಾ ಅಂದ್ರೆ …

 

ಸುಳ್ ಹೇಳೋ ಸುಕ್ರಾ ಅಂದ್ರೆ.. ವಾಟಿ ಅಂಡಿಯೊಳ್ಗೆ ಒಂಬತ್ ಆನಿ ಹೋಯಿ, ಮರಿಯಾನಿ ಬಾಲ ಸಿಕ್ಕಂಡ್ ಬಿದ್ದಿತ್ತ್ ಅಂದ ಅಂಬ್ರ್

 

ಇದು ಸುಳ್ಳು ಹೇಳುವುದರ ಪರಮಾವಧಿಯನ್ನು ಸೂಚಿಸುವ ಒಂದು ನುಡಿಕಟ್ಟು ಅಥವಾ ಕಟ್ಟು ಕಥೆ ಅನ್ನಬಹುದು. ಇದರ ಅರ್ಥ ಇಷ್ಟೇ.. ಸುಕ್ರ ಅನ್ನುವ ಒಬ್ಬ ಮಹಾ ಸುಳ್ಳುಗಾರನ ಹತ್ರ ಹೋಗಿ ಸುಳ್ಳು ಹೇಳಪ್ಪಾ ಅಂತ ಅಂದ್ರೆ.. ವಾಟೆ ಅಂಡೆಯ ( ಒಲೆ ಊದಲು ಬಳಸುವ ಬಿದಿರಿನ ಕೊಳವೆ… ಲೋಹದ ಕೊಳವೆ ಅಂತ ಬೇಕಾದ್ರೂ ಇಟ್ಟುಕೊಳ್ಳಬಹುದು) ಒಳಗೆ ಒಂಬತ್ತು ಆನೆಗಳು ತೂರಿ ಹೋಗಿ, ಮರಿಯಾನೆ ತೂರಿ ಹೋಗುವಾಗ ಅದರ ಬಾಲ ಸಿಕ್ಕಿ ಹಾಕಿಕೊಂಡಿತ್ತು ಅಂತಾ ಹೇಳಿದನಂತೆ. ಇಲ್ಲಿ ಸುಕ್ರನ ಸುಳ್ಳಿನ ಪವರ್ ಎಷ್ಟಿದೆ ಅಂದ್ರೆ.. ವಾಟೆ ಅಂಡೆಯ ಒಳಗೆ ಆನೆ ತೂರಿ ಹೋಗುವುದೇ ಅಸಾಧ್ಯ ಪರಿಕಲ್ಪನೆ. ಅಂಥಾದ್ರಲ್ಲಿ ಒಂಬತ್ತು ಆನೆ ಸಲೀಸಾಗಿ ತೂರಿ ಹೋಗಿ, ಗಾತ್ರದಲ್ಲಿ ಚಿಕ್ಕದಾದ ಮರಿ ಆನೆ ತೂರಿ ಹೋಗೋವಾಗ ಅದರ ಬಾಲ ಸಿಕ್ಕಿಹಾಕಿಕೋಡಿತು… ಅಂತ ಬುರುಡೆ ಬಿಡ್ತಾನೆ.

ಗುರು ಕಿರಣ್ ಅವರ ಬಂಡಲ್ ಬಡಾಯಿ ಮಾದೇವ…ನೂ ಸುಕ್ರನಿಂದ ಸ್ಫೂರ್ತಿ ಪಡೆದಿದ್ದಾನೆ ಅನ್ನೋದು ಶುದ್ದ ಶುಂಠಿ.

ನಿಮ್ಮಲ್ಲೂ ಇಂಥಹ ಕಥೆಗಳಿವೆಯೆ…ಇದ್ರೆ ಹಂಚಿಕೊಳ್ಳಿ. ಎಲ್ಲಾರು ಓದಿ ಖುಷಿ ಪಡೋಣ.

 

ಇದೇನಪ್ಪಾ… ಒಂದಕ್ಕೊಂದು ಅರ್ಥಾರ್ಥ ಸಂಬಂಧವಿಲ್ಲದ ತಲೆಬರಹ; ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನಯ್ಯಾ ಸಂಬಂಧ ಅಂದ್ಕೋತಿದ್ದೀರಾ? ಈಗ ಟಿ.ವಿ. ಸೀರಿಯಲ್ಲುಗಳು ಒಂದೊಂದಾಗಿ ದೇವರಿಗೆ ಇರುವ ಬಿರುದು, ಬಾವಲಿ, ಮಾನ್ಯತೆಗಳನ್ನೆಲ್ಲಾ ಕಿತ್ತುಕೊಂಡು ದೇವರ ಸ್ಥಾನಕ್ಕೇ ಸಂಚಕಾರ ತಂದಿರುವ ವಿಷಯ ನಿಮಗೆ ಗೊತ್ತಿಲ್ವಾ? ಹಾಗಿದ್ರೆ ಓದಿ ನೋಡಿ.

 

ಮೊಟ್ಟ ಮೊದಲನೆಯದಾಗಿ ದೇವನೊಬ್ಬ ನಾಮ ಹಲವು ಅನ್ನುವ ಮಾತಿದೆಯಷ್ಟೇ? ಈಗಿನ ಧಾರಾವಾಹಿಗಳನ್ನು ಗಮನಿಸಿ ನೋಡಿ. ಇರುವ ಹತ್ತಾರು-ನೂರಾರು ವಾಹಿನಿಗಳು ತಮ್ಮ ಪ್ರೈಮ್ ಟೈಮ್‌ನಲ್ಲಿ ವಿವಿಧ ಆಕರ್ಷಕ ಹೆಸರುಗಳ ಧಾರಾವಾಹಿಗಳನ್ನು ಬಿತ್ತರಿಸುತ್ತಿದ್ದರೂ ಕೂಡಾ, ಅದೇ ಮಧ್ಯಮ ವರ್ಗದ ಕನಸು-ಆಸೆ-ನಿರಾಸೆಗಳು, ಅತ್ತೆ-ಸೊಸೆ ಜಗಳಗಳು, ವಿವಾಹೇತರ ಸಂಬಂಧಗಳ ಸುಳಿಯಲ್ಲಿ ಮಿಂದು ಮುಳುಗಿ ಹೋಗಿರುವಾಗ ಕಥೆ ಒಂದು, ಶೀರ್ಷಿಕೆಚ್ಯಾನೆಲ್ ಹಲವು ಅಂತನ್ನುವುದರಲ್ಲಿ ಯಾವ ತಪ್ಪೂ ಇಲ್ಲ ಅಲ್ಲವೇ? ಅದೂ ಅಲ್ಲದೆ ಆ ಧಾರಾವಾಹಿಯಲ್ಲಿ ಗೀತಾ ಆದವಳು ಇಲ್ಲಿ ಸೀತಾ; ಅಲ್ಲಿ ಶ್ಯಾಮನಾದವನು ಇಲ್ಲಿ ರಾಮನಾಗಿ ಅವತಾರವೆತ್ತಿರುವಾಗ, ಅದೇ ಅದೇ ಮುಖಗಳು ಕಾಣಿಸಿಕೊಂಡು ಪಾತ್ರಧಾರಿ ಒಬ್ಬನೇ ಪಾತ್ರ ಬೇರೆ ಅನ್ನೋದು ಕೂಡಾ ಸರಿ ಅಂದ ಹಾಗಾಯ್ತು.

 

ಅದೂ ಅಲ್ಲದೆ ದೇವರು ಎಷ್ಟೇ ಕಷ್ಟ ಕೊಟ್ಟರೂ ಸಮಚಿತ್ತದಿಂದ ನಗುನಗುತ್ತಾ ಸ್ವೀಕರಿಸುವ ಹೆಣ್ಣು ಮಕ್ಕಳನ್ನೆಲ್ಲಾ ಸಾಮೂಹಿಕವಾಗಿ ಕಣ್ಣೀರು ಸುರಿಸುವಂತೆ ಮಾಡುವ ಧಾರಾವಾಹಿಯ ನಿರ್ದೇಶಕ ಅನ್ನುವ ಸೂತ್ರಧಾರನಿಗೆ ಆ ಪಟ್ಟವನ್ನು ದೇವರೇ ಹತಾಶೆಯಿಂದ ನೀಡಿದ್ದಾನೆ ಅನ್ನುವುದು ಒಂದು ವದಂತಿ. ಜೊತೆಗೆ ಟಿ.ಆರ್.ಪಿ.ಗೆ ಅನುಗುಣವಾಗಿ ಪಾತ್ರಗಳ ಬದುಕಿನ ಆಟಗಳನ್ನು ಹಿಗ್ಗಿಸುವ ಕುಗ್ಗಿಸುವ ಶಕ್ತಿ, ಕಿರಿಕ್ ಪಾರ್ಟಿಗಳನ್ನು ತಟಕ್ಕನೆ ಸಾಯಿಸಿ ಹೂಹಾರ ಹಾಕಿ ಕೈತೊಳೆದುಕೊಳ್ಳುವ ನಿರ್ದೇಶಕನ ಸಾಮರ್ಥ್ಯದಿಂದ ದೇವರು ತನ್ನ ಸರ್ವಶಕ್ತ ಪದ ತ್ಯಾಗ ಮಾಡಿರುವುದು ಇದೀಗ ಬಂದ ಫ್ಲಾಶ್ ನ್ಯೂಸ್.

 

ಇಷ್ಟೇ ಆಗಿದ್ರೆ ಪರ್ವಾಗಿರ್ಲಿಲ್ಲವೇನೋ. ಆದ್ರೆ ನೀವೆ ನೋಡಿರುವಂತೆ ಬೆಂಗಳೂರಿನ ಚಾಮರಾಜ ಪೇಟೆಯಿಂದ ಮಡಿಕೇರಿಯ ವಿರಾಜಪೇಟೆಯವರೆಗೆ, ಶಿವಮೊಗ್ಗದ ಶಿಕಾರಿಪುರದಿಂದ ಹಿಡಿದು ಗುಲ್ಬರ್ಗದ ಅಫ್ಜಲ್‌ಪುರದವರೆಗೂ ಸಂಜೆ 6ರಿಂದ ರಾತ್ರಿ 1೦ರವರೆಗೆ ನೀವು ಯಾರ ಮನೆ ಹೊಗ್ಗಿ ಹೊರಟರೂ ಎಲ್ಲೆಲ್ಲೂ ಮಿಂಚು, ಮುಗಿಲು, ಮಾಂಗಲ್ಯಗಳೇ. ಇದನ್ನು ಕಂಡ ಮೇಲೆ ಧಾರಾವಾಹಿ ಸರ್ವಾಂತರ್ಯಾಮಿ ಅನ್ನೋದನ್ನು ಒಪ್ಕೋತೀರ? ಇಷ್ಟೆಲ್ಲಾ ಆದ ಮೇಲೆ ದೇವರಿಗೆ ತನ್ನ ಪಟ್ಟದ ಬಗ್ಗೆ ಹೆದರಿಕೆ ಹುಟ್ಟುವುದು ಸಹಜ ತಾನೆ?

 

ಅಸಲಿ ಟ್ರಬಲ್ಲು ಇರುವುದು ಬೇರೆಯದೇ ಆದ ಒಂದು ಕಾರಣಕ್ಕೆ. ಹಿಂದೆಲ್ಲಾ ವಯಸ್ಸಾದವರು ನೇರವಾಗಿ ಸ್ವರ್ಗಕ್ಕೆ ಹೋಗೋ ಆಸೆಯಿಂದ ಉತ್ತರಾಯಣ ಕಾಲದವರೆಗೆ ನನ್ನನ್ನು ಬದುಕಿಸಪ್ಪಾ, ಆಮೇಲೆ ಬೇಕಾದ್ರೆ ಕೊಂಡುಹೋಗುವಿಯಂತೆ ಅಂತ ಬೇಡ್ಕೊಳ್ತಾ ಇದ್ದದ್ದು ನಿಜವಷ್ಟೇ? ದೇವ್ರೂ ಕೂಡಾ ಹೋಗ್ಲಿ ಬಿಡಿ ಪಾಪ ಅಂತ ಆಗೀಗ ಅಸ್ತು ಅಂದಿರಲೂ ಸಾಕು. ಆದ್ರೆ ಈಗ ಏನಾಗಿದೆ ನೋಡಿ. ಈ ಧಾರಾವಾಹಿ ಮುಗಿಯೋವರೆಗಾದ್ರೂ ನನ್ನನ್ನು ಕರ್ಕೋಬೇಡಪ್ಪಾ ಅಂತ ಬೇಡ್ಕೊಳ್ಳೋರು ಜಾಸ್ತಿ ಆಗಿದಾರೆ. ದೇವರೂ ಕರಗಿ ತಥಾಸ್ತು ಅಂದಿದ್ದೇ ಈಗ ಫಚೀತಿಗಿಟ್ಟುಕೊಂಡಿದೆ. ಅತ್ಲಾಗೆ ಧಾರಾವಾಹಿ ಮುಗ್ಯೋದೂ ಇಲ್ಲಾ, ಇತ್ಲಾಗೆ ಡೆಡ್‌ಲೈನ್ ಮೀರಿದ್ರೂ ಟಾರ್ಗೆಟ್ ಮುಟ್ಲಿಲ್ಲ ಅಂತ ಅವನ ಬಾಸ್ ಬೇರೆ ರಗಳೆ ಮಾಡ್ತಾ ಇದ್ದಾನೆ. ಒಟ್ರಾಶಿಯಾಗಿ ದೇವರ ಸ್ಥಿತಿ ಅವನ ಶತ್ರುವಿಗೂ ಬೇಡ ಅನ್ನೋಹಾಗಾಗಿ ಬಿಟ್ಟಿದೆ. ಅದನ್ನು ಅವ್ನು ಕಳ್ಳಬಟ್ಟಿ, ಅಪಘಾತಗಳ ಲೆಕ್ಕದಲ್ಲಿ ಹೇಗೋ ಸರಿದೂಗಿಸಿ ಅಯ್ಯಬ್ಬಾ ಅಂತ ಉಸಿರುಬಿಡ್ತಾ ಇದ್ದಾನಂತೆ.

 

ಇದೆಲ್ಲದರಿಂದ ಬೇಸತ್ತು ಹೋಗಿ ದೇವ್ರು ಈಗ ನಂಗೆ ಈ ಕೆಲ್ಸಾನೇ ಬೇಡ. ಈ ಪಟ್ಟ, ಬಿರುದು, ಬಾವಲಿಗಳೆಲ್ಲಾ ಧಾರಾವಾಹಿಗೇ ಇರಲಿ ಅಂದ್ಕೊಂಡು, ರಾಜೀನಾಮೆ ಕೊಟ್ಟು ನೋಟೀಸ್ ಪಿರಿಯಡ್ನಲ್ಲಿ ಇದ್ದಾನಂತೆ. ಈಗ ಅವನದ್ದು ಒಂದೇ ಹಾಡು… ಎಂದು ಆದೇನು ನಾನು….. ಮುಕ್ತ…ಮುಕ್ತ…ಮುಕ್ತ

 

( ಎಲ್ಲಾ ಆಸ್ತಿಕ ಮಹಾಶಯರ ಕ್ಷಮೆ ಕೋರಿ )

ವಿಜಯ್‌ರಾಜ್ ಕನ್ನಂತ್