Posts Tagged ‘Add new tag’

ನೀರೋ ನೀರೋ ನೀರೋ ನೀರೋ…..!!

Posted: ಸೆಪ್ಟೆಂಬರ್ 8, 2008 in aNaka
ಟ್ಯಾಗ್ ಗಳು:, , ,

 

ಕಾವೇರಿ ವಿವಾದದ ಮಧ್ಯಂತರ ತೀರ್ಪು ಬಂದ ಸಂದರ್ಭದಲ್ಲಿ ಬರೆದ ಅಣಕ ಪದ್ಯ ಇದು. ವಿಜಯಕರ್ನಾಟಕದ ಸಿಂಪ್ಲಿಸಿಟಿ ಪೇಜ್‌ನಲ್ಲಿ ಕೂಡಾ ಈ ಪದ್ಯ ಪ್ರಕಟವಾಗಿತ್ತು. ಅಜೇಯ ಚಿತ್ರದ ಹೀರೋ ಹೀರೋ..ಹಾಡಿದೆಯಲ್ಲ ಅದೇ ಧಾಟಿಯಲ್ಲಿ ಹಾಡಿ ನೋಡಿ

 

ನೀರೋ ನೀರೋ ನೀರೋ ನೀರೋ   

ನಮ್ದೆ ನಮ್ದೆ ನಮ್ದೆ ನಮ್ದೇ…

 

ಕೊಡಗಿನ ನಮ್ಮ ಕಣ್ಮಣಿ

ರೈತರ ಬಾಳ ದಿನಮಣಿ

ಕೇಳೋ ನಮ್ಮಾ ಪ್ರಿಯ ತಮ್ಮಾ

ಕಾವೇರೀನೇ ನಮ್ಮಮ್ಮಾ

ಮಣ್ಣಿನಾ ಮಕ್ಕಳನ್ನು ಕೊಲ್ಲಬೇಡಿರೋ

ಕಣ್ಣೀರಿನ ಕಥೆಯನ್ನು ಸ್ವಲ್ಪ ಕೇಳಿರೋ

 

ಮಳೆಯೊಂದು ಬಂದರೆ

ನಮಗಿಲ್ಲ ತೊಂದರೆ

ಎಷ್ಟು ಬೇಕು ನೀರು ಕೊಡುವೆವು

ಮಳೆ ಬೀಳದೆ ಹೋದರೆ

ಬರಗಾಲ ಬಂದರೆ

ಎಲ್ಲಿಂದಣ್ಣ ನೀರ ತಂದೇವು?

 

ಹೊಡೆದಾಟ ಏತಕೆ,

ಬರಲಾರದೆ ಏಕತೆ,

ಈ ಜಗಳ ಕಾದಾಟವೇತಕೆ,

ನದಿ ನೀರಿನ ಹಂಚಿಕೆ,

ತೀರ್ಮಾನ ಹೇಳೋಕೆ,

ಕಾನೂನಿನ ಗೊಡವೆ ಏತಕೆ

 

ವ್ಯತ್ಯಾಸ ಹೇಳ್ವೆವು, ನ್ಯಾಯವನು ಬೇಡ್ವೆವು

ನ್ಯಾಯ ಸಿಗದಿರೆ, ಅನ್ಯಾಯ ಸಹಿಸೆವು

ಸದಾ ನಮ್ಮ ಕೊರಳು ಕೊಯ್ದು

ನರಳುವಂತೆ ಮಾಡಿಬೇಡಿರೋ…

 

|| ನೀರೋ ನೀರೋ ||

 

ನಿಮ್ಮೂರ ರೈತರು,

ನಮ್ಮೂರ ಕೃಷಿಕರು,

ಹೇಗೆ ತಾನೆ ಬೇರೆ ಹೇಳಿರಿ,

ಈ ನಮ್ಮ ಜಗಳವು,

ಮುಗಿಸೋದು ಸುಲಭವು,

ಹಂಚಿಕೊಂಡು ಬಾಳುವ ನಾವು

 

ನದಿ ಹುಟ್ಟೋದ್ ಇಲ್ಲಿಯೇ

ಅಣೆಕಟ್ಟು ನಮ್ಮದೇ

ಸಿಂಹಪಾಲು ನಿಮಗೆ ಕೊಟ್ಟರೆ,

ಯಾಕಿಂಥ ಶೋಷಣೆ

ಮಲತಾಯಿ ಧೋರಣೆ

ನಮ್ಮ ಜನಕೆ ನೀರು ಬೇಡವೆ?

 

ಪಣವು ತೊಡುವೆವು, ಹೋರಾಟ ಮಾಡ್ವೆವು

ಅನ್ಯಾಯ ಸೋಲಿಸಿ, ನ್ಯಾಯವನು ಪಡೆವೆವು

ಕನ್ನಡಾಂಬೆ ಆಣೆಯಾಗಿ ಜಯವನ್ನು ಪಡೆದೆ ಪಡೆವೆವು…

 

|| ನೀರೋ ನೀರೋ ||

 

ನಿರ್ದೇಶಕ ಶಶಾಂಕ್ ಸೂಕ್ಷ್ಮವಿಷಯವನ್ನು ನಿರೂಪಿಸುವಲ್ಲಿ ಗೆದ್ದಿದ್ದಾರೆ; ರಾಧಿಕಾ ಪಂಡಿತ್ ತಮ್ಮ ಅಭಿನಯದಿಂದ ಚಿತ್ರಪ್ರೇಮಿಗಳ ಹೃದಯ ಕದ್ದಿದ್ದಾರೆ; ಮನೋಮೂರ್ತಿ ಸಂಗೀತದ ಇಂಪಿನ ಮೂಲಕ ಮನ ತಟ್ಟಿದ್ದಾರೆ; ಆದ್ರೆ ತಾಲ್‌ನ್ ಟ್ಯೂನ್ ಕಾಪಿ ಮಾಡಿ ಸಿಕ್ಕಿ ಬಿದ್ದಿದ್ದಾರೆ….ಇದು ಮೊಗ್ಗಿನ ಮನಸ್ಸು ಸಿನಿಮಾದ ಒನ್ ಲೈನ್ ವಿಮರ್ಶೆ. ಮೊಟ್ಟ ಮೊದಲನೆಯದಾಗಿ ನಿರ್ದೇಶಕ ಶಶಾಂಕ್‌ಗೆ ಭೇಷ್ ಅನ್ನಲೇ ಬೇಕು. ಹಿಂದೆ ಸಿಕ್ಸರ್ ಬಾರಿಸಲು ಹೋಗಿ ಬೌಲ್ಡ್‌ ಔಟಾಗಿದ್ದ ಅವರು ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಸೆಂಚುರಿ ಬಾರಿಸುವಂತಹ ಚಿತ್ರವೊಂದನ್ನು ಕೊಟ್ಟಿದ್ದಾರೆ. ಅರೆಬಿರಿದ ಮೊಗ್ಗಿನಂಥ ಹದಿವಯಸ್ಸಿನ ಮನಸಿನ ಕುದಿಗಳನ್ನೆಲ್ಲಾ ಸೆರೆಹಿಡಿದು, ಮೊಗ್ಗರಳಿ ಹೂವಾಗುವ ಮುಂಚಿನ ತಲ್ಲಣಗಳನ್ನು ನವಿರಾಗಿ ಕಟ್ಟಿಕೊಟ್ಟಿದ್ದಾರೆ. ಸೂಕ್ಷ್ಮ ವಿಷಯವೊಂದನ್ನು ನಿರೂಪಿಸುವಾಗ ಸ್ವಲ್ಪ ತಾರುಮಾರಾದರೂ ಎಲ್ಲೋ ಹೋಗಿಬಿಡಬಹುದಾದ ಅಪಾಯವಿದೆ. ಅದೆಲ್ಲವನ್ನು ಮೆಟ್ಟಿನಿಂತು, ಒಂದು ಸುಂದರ ಕುಸುರಿಯ ಕಲಾಕೃತಿಯನ್ನು ಚಿತ್ರರಸಿಕರ ಮುಂದಿಟ್ಟಿದ್ದಾರೆ.

 

ಚಂಚಲ, ರೇಣುಕಾ, ದೀಕ್ಷಾ, ಸಂಜನಾ ಅನ್ನೋ ನಾಲ್ವರು ಹದಿವಯಸ್ಸಿನ ಹುಡುಗಿಯರ ಬಾಳಿನ ಸುತ್ತ ಹೆಣೆದ ಕಥೆಯಿದು. ಮಂಗಳೂರಿನ ಕ್ವೀನ್ಸ್ ಕಾಲೇಜಿನಲ್ಲಿ ಪಿಯೂಸಿ ಓದಲು ಬಂದ ನವತರುಣಿಯರಿವರು. ಚಂಚಲಾ ಹೆಸರೇ ಹೇಳುವಂತೆ ನಿಜಕ್ಕೂ ಚಂಚಲೆ; ಆದರೆ ಅಷ್ಟೇ ಸೂಕ್ಷ್ಮ ಮನಸ್ಸಿನ ಭಾವಜೀವಿ. ಹದಿವಯಸ್ಸಿನ ತಲ್ಲಣಗಳನ್ನು ಅರಿತು ಅವಳನ್ನು ಸ್ನೇಹಿತೆಯಂತೆ ಕಾಣುವ ವಿಶಾಲ ಮನಸ್ಸಿನ ಅಪ್ಪ, ತನ್ನ ಮಗಳ ಭಾವಪ್ರಪಂಚದಲ್ಲಿನ ಬದಲಾವಣೆಗಳನ್ನು ಕಂಡು ಅವಳು ಹಾದಿತಪ್ಪಿದರೇನು ಗತಿ ಅಂತ ಚಿಂತಿಸುವ ಅಮ್ಮನ ಮುದ್ದಿನ ಮಗಳೀಕೆ. ಗುರುವಿನೆಡೆಗಿನ ಮೆಚ್ಚುಗೆಯನ್ನೇ ಪ್ರೀತಿ ಎಂದು ಭ್ರಮಿಸಿ, ತನ್ನ ತಪ್ಪಿನ ಅರಿವಾದಾಗ ಗುರುವಿನ ಗ್ರೇಟ್‌ನೆಸ್‌ಗೆ ಬೆರಗಾಗಿ ತಲೆಬಾಗುವ ಈಕೆ, ತನ್ನ ಸುತ್ತ ಸುತ್ತುವ ಹುಚ್ಚುಪ್ರೇಮಿಯ ಪ್ರೀತಿಗೆ ಶರಣಾಗುವಳು. ಅವನ ಸ್ವಾರ್ಥತುಂಬಿದ ಪ್ರೀತಿಯ ಬಂಧ ಬಂಧನ ಅನ್ನಿಸತೊಡಗಿದಾಗ ಅವನಿಂದ ದೂರಾಗುವಳು. ಪ್ರೀತಿಗಾಗಿ ಹಂಬಲಿಸಿ ಹಾತೊರೆಯುವಳು…ಅವಳು ಬಯಸುವ ಪ್ರೀತಿ ಅವಳಿಗೆ ರಾಹುಲ್‌ನಲ್ಲಿ ಸಿಕ್ಕಿದಾಗ ಅವನ ಸಾನ್ನಿಧ್ಯದಲ್ಲಿ ಅರಳುವ ಪ್ರೀತಿಯನ್ನು ತಾನೇ ಚಿವುಟಿ ಹಾಕುತ್ತೆ ಅವಳ ಚಂಚಲ ಮನಸ್ಸು.

 

ಹಳ್ಳಿಯಿಂದ ಡಾಕ್ಟರ್ ಆಗುವ ಕನಸು ಹೊತ್ತ ರೇಣಾಕಾದೇವಿ ಮುಗ್ಧತೆಯೇ ಮೈವೆತ್ತಂತವಳು. ಹೊಸಪರಿಸರದ ರಂಗುರಂಗಿಗೆ ಮರುಳಾಗಿ, ಮಾತಿನ ಮೋಡಿಗಾರನ ಪ್ರೇಮದ ಉರುಳಿಗೆ ಕೊರಳಾಗಿ…ಮೈಮರೆತು ಗೆಳೆಯನ ತೆಕ್ಕೆಯಲ್ಲಿ ಹೊರಳಾಡುವಳು. ತನ್ನ ತಪ್ಪಿನ ಅರಿವಾಗುವ ಹೊತ್ತಿನಲ್ಲಿ ಕನಸು ಮುರಿದು ಬದುಕೇ ಇರುಳಾಗುವುದು.

 

ತನ್ನಕ್ಕನಿಗೆ ಮೋಸ ಮಾಡಿದ ಈ ಗಂಡು ಸಮಾಜಕ್ಕೆ ಬುದ್ದಿ ಕಲಿಸಲು ಅವರನ್ನು ಬೇಕಾದಂತೆ ಕುಣಿಸಿ ಮಜ ನೋಡುವ ಸಂಜನಾಳು ಒಂದು ಕಡೆಯಾದರೆ, ತನ್ನ ಅಪ್ಪನ ಉಸಿರುಗಟ್ಟಿಸುವಂಥ ಶಿಸ್ತಿಗಿಂತ, ತನ್ನ ಗೆಳೆಯನ ಬೆಚ್ಚನೆಯ ತೋಳಿನಾಸರೆ ಲೇಸೆಂದು ಭ್ರಮಿಸಿ ಮದುವೆ ಇಲ್ಲದೆ ಗೆಳೆಯನ ಮನೆ ಸೇರುವ ದೀಕ್ಷಾ ಇನ್ನೊಂದು ಕಡೆ. ಹೀಗೆ ಈ ನಾಲ್ಕು ಜನ ಗೆಳತಿಯರ ಅಪ್ರಬುದ್ಧ ಮನಸಿನ ತಲ್ಲಣ ತಳಮಳಗಳ ಸುತ್ತಲೇ ಸಾಗುವ ಕಥಾನಕ ಹದಿವಯಸ್ಸಿನ ಗುಸುಗುಸು ಪಿಸುಮಾತುಗಳನ್ನು ತೆರೆದಿಡುತ್ತದೆ. ಮುಂದೆ ಮೊಗ್ಗರಳಿ ಹೂವಾದೀತೇ ಇಲ್ಲಾ ಅರಳುವ ಮೊದಲೆ ಸುಮ ಬಾಡೀತೆ ಅನ್ನೋದನ್ನು ತೆರೆಯ ಮೇಲೆ ನೋಡಿ.

 

ನಾಲ್ವರು ಗೆಳತಿಯರಲ್ಲಿ ಚಂಚಲಳ ಪಾತ್ರಕ್ಕೆ ಜೀವತುಂಬಿದ ರಾಧಿಕಾ ಪಂಡಿತ್ ಅಭಿನಯ ಪಾಂಡಿತ್ಯಕ್ಕೆ ಮೆಚ್ಚಿ ತಲೆದೂಗಲೇ ಬೇಕು. ಶುಭಾಪೂಂಜಾ ಕುರಿತು ಎನೂ ಹೇಳದೆ ಇದ್ರೆ ಒಳಿತು ಅನ್ಸುತ್ತೆ. ಈಕೆ ನಗುವುದೊಂದೇ ಅಭಿನಯ ಅಲ್ಲ ಅಂತ ಎಷ್ಟು ಬೇಗ ತಿಳಿದ್ರೆ ಆಕೆಗೆ ಅಷ್ಟು ಒಳ್ಳೆಯದು ಅಂತ ನನ್ನ ಅನಿಸಿಕೆ. ಮಾನಸಿ ಹಾಗೂ ಸಂಗೀತಾ ಶೆಟ್ಟಿ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಮಿಕ್ಕಂತೆ ಹೀರೋಗಳಲ್ಲಿ ರಾಹುಲ್ ಪಾತ್ರ ಮಾಡಿದ ಹುಡುಗ ( ಇವನ ನಿಜ ಹೆಸರು ಗೊತ್ತಿಲ್ಲ ಕ್ಷಮಿಸಿ) ಮಾತ್ರ ಅವನು ಕಾಣಿಸೋವಷ್ಟೇ ಮುದ್ದಾಗಿ ಅಭಿನಯಿಸಿದ್ದಾನೆ. ನೃತ್ಯ, ಭಾವಾಭಿವ್ಯಕ್ತಿ, ಅಭಿನಯ ಎಲ್ಲಾನೂ ಸಲೀಸಾಗಿ ಮಾಡೋ ಇವನ ಚಾಕಲೇಟ್ ಹೀರೋ ಲುಕ್ ಬೋನಸ್ಸಿನಂತಿದೆ. ಮಿಕ್ಕ ಹೀರೋಗಳು (ಅದ್ರಲ್ಲೂ ಚಂಚಲಾಳ ಹುಚ್ಚು ಪ್ರೇಮಿಯ ಪಾತ್ರ ಮಾಡಿದವನು) ಡೈಲಾಗ್ ಹೇಳೋವಾಗ ಬಾಯಿಪಾಠ ಮಾಡಿದಂತೆ ಒಪ್ಪಿಸುವುದು, ಯಾರದ್ದೋ ಶೈಲಿಯಲ್ಲಿ ಡೈಲಾಗ್ ಹೊಡೆಯೋಕೆ ಹೋಗಿ..ಒಟ್ನಲ್ಲಿ ನೋಡೋರಿಗೆ ಫುಲ್ ಕಾಮಿಡಿ.

 

ಚಿತ್ರ ನಂಗಿಷ್ಟವಾದದ್ದು ಯಾಕಂದ್ರೆ…

           ಮೊಗ್ಗಿನಂತ ಮನಸ್ಸಿನ ಒಳಗೆ ನಡೆಯುವ ತುಮಲ, ಹೊಯ್ದಾಟಗಳನ್ನು ಸಮರ್ಥವಾಗಿ ನಿರ್ದೇಶಿಸಿರುವುದರಿಂದ

           ಮನಸಿನ ಏರಿಳಿತಗಳಿಗೆ ಅನುಗುಣವಾಗಿ ಬೆಳಕು ಸಂಯೋಜಿಸಿ, ಕಣ್ಣಿಗೆ ಹಬ್ಬವಾಗುವಂತೆ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ, ಹಾಡುಗಳಲ್ಲಿನ ದೃಶ್ಯವೈಭವ, ಜಲಪಾತ, ಸಮುದ್ರ, ಬೇಕಲ್ ಕೋಟೆ, ಯಾಣದ ಸೌಂದರ್ಯ ಕಣ್ಣಿಗೆ ಹಬ್ಬವಾಗುವಂತೆ ಮೂಡಿದ ದೃಶ್ಯಕಾವ್ಯದಂತಹ ಛಾಯಗ್ರಹಣ ಇರುವುದರಿಂದ. ಬೇಕಲ್‌ಕೋಟೆಯ ಸೀನ್ ಅಂತೂ ಬೊಂಬಾಟ್.

           ರಾಧಿಕಾ ಪಂಡಿತ್ ಅಭಿನಯ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂತಿರುವುದರಿಂದ

           ಕಿವಿಗೆ ಇಂಪಾಗುವ ಮನೋಮೂರ್ತಿ ಸಂಗೀತದ ಮಾಧುರ್ಯವು ಹಾಡಾಗಿ ಹರಿಯುವುದರಿಂದ

           ಶಾಟ್‌ನಿಂದ ಶಾಟ್‌ಗೆ ದೃಶ್ಯ ಬದಲಾಗುವಾಗ ಒಂದರೊಳಗೊಂದು ದೃಶ್ಯ ಬೆರೆತು ಹೋಗುವಂತೆ ಮಾಡಿದ ತಂತ್ರ ತನ್ನ ವಿಭಿನ್ನತೆಯಿಂದ ಮನಸೆಳೆಯೋದ್ರಿಂದ

           ಹಾಸ್ಯದೃಶ್ಯಗನ್ನು ವಿಭಿನ್ನವಾಗಿ ಸಂಯೋಜಿಸಿ, ಮಾಮೂ ಅನ್ನೋ ಕ್ಯಾರೆಕ್ಟರ್ ಮೂಲಕ ಪುಟ್ಟಪುಟ್ಟ ಹಾಸ್ಯತುಣುಕುಗಳಲ್ಲಿ ಮಿಂಚುವ ಶರಣ್ ಕಾಮಿಡಿಯಿಂದ

           ವಿಭಿನ್ನ ವಿಷಯವೊಂದನ್ನು ಕೈಗೆತ್ತಿಕೊಂಡು, ಅದನ್ನು ಮನಮುಟ್ಟುವಂತೆ ನಿರೂಪಿಸುವ ಪ್ರಯತ್ನದಲ್ಲಿ ಎಲ್ಲೂ ಬೋರಾಗದಂತೆ, ಕಥೆ ಹೇಳಿದ ರೀತಿಗೆ

 

ಓರೆಕೋರೆಗಳು ಏನಂದ್ರೆ..

           ನಂಗೂ ಒಬ್ಬ ಗೆಳೆಯ ಬೇಕು ಹಾಡಿನಲ್ಲಿ ತಾಲ್ ಸೆ ತಾಲ್ ಮಿಲಾ ಹಾಡಿನ ಛಾಯೆ ಇರೋದು ಯಾರು ಬೇಕಾದ್ರೂ ಹೇಳೋವಷ್ಟು ಸ್ಪಷ್ಟ. ಹಾಡು ಚೆನ್ನಾಗೆ ಇದೆ. ಅದರ ದೃಷ್ಯಗಳು ಸೂಪರ್ ಆಗಿವೆ. ಆದ್ರೆ ಮನೋಮೂರ್ತಿ ಹೀಗೆ ಒರಿಜಿನಲ್ ಟ್ಯೂನ್ ಹಾಕಿದ್ರೆ ಇನ್ನೂ ಚೆನ್ನಾಗಿರ್ತಿತ್ತು.

           ಸಂಭಾಷಣೆ ಕಡೆ ಗಮನ ಸ್ವಲ್ಪ ಜಾಸ್ತಿ ಕೊಡ್ಬೇಕಿತ್ತು ಅನ್ಸುತ್ತೆ. ಕೆಲವೊಮ್ಮೆ ತೀರಾ ಹಳೆಯ ಸವಕಲಾದ ಅದದೇ ಡೈಲಾಗ್ ಬಳಸೋಬದಲು ಇನ್ನೂ ಸ್ವಲ್ಪ ಗರಿಗರಿ ಮಾತುಗಳಿದ್ರೆ ಚೆನ್ನಾಗಿರ್ತಿತ್ತು.( ಉದಾ.. ಚಂಚಲಳ ಪ್ರೇಮಿ ಸುನಿಲ್ ಮಾತುಗಳು)

           ರೇಣುಕಾ ಮಾತನಾಡುವ ಧಾರವಾಡ ಕಡೆಯ ಕನ್ನಡ, ಒಮ್ಮಿಂದೊಮ್ಮೆ ತೀರಾ ಬೆಂಗಳೂರು ಕಡೆಯ ಕನ್ನಡವಾಗಿ ಬದಲಾದದ್ದು ಆಶ್ಚರ್ಯವಾಗಿತ್ತು. ಅದೂ ಆಲ್ಲದೆ ಆಕೆ ದುಃಖದ ಸನ್ನಿವೇಶಗಳಲ್ಲಿ ಮಾತನಾಡುವಾಗ ತೀರಾ ಮತ್ತಿನಲ್ಲಿದ್ದಂತೆ ಕೇಳಿ ಬರುತ್ತಿದ್ದ ಆಕೆಯ ದನಿ ತುಂಬಾ ವಿಚಿತ್ರವಾಗಿ ಕೇಳಿಸಿ, ರೇಜಿಗೆ ಹುಟ್ಟಿಸುವಂತಿತ್ತು.

           ಕೊನೆಯದಾಗಿ ಕಥೆಯನ್ನು ಇನ್ನೂ ನೇರವಾಗಿ ಸರಳವಾಗಿ ಹೇಳಿದ್ರೆ ಇನ್ನೂ ಹೆಚ್ಚು ಪರಿಣಾಮಕಾರಿ ಆಗ್ತಿತ್ತೇನೋ.

 

ಈ ಓರೆಕೋರೆಗಳನ್ನೆಲ್ಲ ಪಕ್ಕಕ್ಕಿಟ್ಟು ನೋಡಿದರೆ, ಮೊಗ್ಗಿನ ಮನಸು ನೋಡುವ ಮನಸನ್ನು ಅರಳಿಸುವುದು ಖಂಡಿತ. ಮೊಗ್ಗರಳಿ ಹೂವಾಗುವವರೆಗೆ ಕಾಯುವ ತಾಳ್ಮೆ ಇರಬೇಕು ಅನ್ನುವ ಸಂದೇಶದ ಜೊತೆಗೆ ಚಿತ್ರ ನಿಮಗೆ ಎಲ್ಲೂ ಬೋರ್ ಹೊಡೆಸದಂತೆ ಒಂದು ಮಧುರ ಅನುಭವ ಕಟ್ಟಿಕೊಡಲಿದೆ. ಸುಮಧುರ ಸಂಗೀತ, ರಮ್ಯ ದೃಶ್ಯಾವಳಿಗಳ ಜೊತೆಗೆ ಹದಿಹರೆಯದ ತಲ್ಲಣಗಳನ್ನು ಮನಸಿಗೆ ತಟ್ಟುವಂತೆ ಮಾಡೊದ್ರಲ್ಲಿ ಯಾವ ಅನುಮಾನವೂ ಇಲ್ಲ. ಕೊನೆಯಲ್ಲಿ ನೀಡಿದ ಸಂದೇಶ ಕೂಡಾ ಅಷ್ಟೇ ಚೆನ್ನಾಗಿದೆ. ಪ್ರೀತಿಯನ್ನು ಬೆನ್ನಟ್ಟಲು ಹೋಗಬೇಡಿ, ಅದಾಗಿ ಸಂಭವಿಸುವ ಗಳಿಗೆಯವರೆಗೆ ಕಾಯುವ ತಾಳ್ಮೆ,, ಸಹನೆ ಇರಲಿ