Posts Tagged ‘Chitte hejje jaaDu’

ಮೊದಲಿಗೆ ಕಾಡಿಗೊಂದು ಥ್ಯಾಂಕ್ಸ್ ಹೇಳಲೇಬೇಕು. ಬಾಲ್ಯಕಾಲದಲ್ಲಿ ಭಾವಕೋಶದೊಳಕ್ಕಿಳಿದು… ನೆನಪಿನಾಳದಲ್ಲಿ ಬೆಚ್ಚಗೆ ಕುಳಿತು… ತನ್ನೆಲ್ಲಾ ನಿಗೂಡತೆ, ಬೆರಗು-ಬೆಡಗು-ಸೊಬಗುಗಳ ಬೀಜಗರ್ಭದಿಂದ ಕತೆಯಾಗಿ ಮೊಳೆತು… ಈಗ ನಮ್ಮನ್ನೂ ಆ ನಿಗೂಢ ಜಗತ್ತಿನ ಅಲೆದಾಟಕ್ಕೆ ಕೊಂಡೊಯ್ಯುವಂತೆ ಜೋಗಿಯನ್ನು ಕಾಡಿದ ಕಾಡಿಗೊಂದು ಕೃತಜ್ಞತೆ ಹೇಳದಿದ್ರೆ ಪುಸ್ತಕ ನೀಡಿದ ಸಂತೋಷಕ್ಕೆ ಮೋಸ ಮಾಡಿದ ಹಾಗೆ. ಜೋಗಿ ಬಾಲ್ಯಕಾಲದಲ್ಲಿ ಕಂಡು ಸಂಭ್ರಮಿಸಿದ, ಅಗಾಧತೆಯಿಂದ ಬೆರಗಿಗೀಡಾದ, ನಿಗೂಢತೆಯಿಂದ ದಿಗಿಲುಗೊಂಡ, ಪ್ರಕೃತಿ ಮಾತೆಯ ಮಡಿಲಲ್ಲಿ ಆರಾಮದಿಂದ ವಿಹರಿಸಿದ ವಿರಮಿಸಿದ ಆ ಕಾಡಿನ ಜಾಡಿನಲ್ಲಿ ಹೆಜ್ಜೆ ಹಾಕುತ್ತಾ ಸಾಗಿದಂತೆಲ್ಲ ಕತೆ ಮರೆಯುತ್ತದೆ; ಕಾಡು ನಮ್ಮನ್ನಾವರಿಸುತ್ತದೆ; ಮನಸ್ಸು ಚಿಟ್ಟೆಯಾಗುತ್ತದೆ. ಹಿಂದೆ ದ್ವೀಪ ಚಿತ್ರ ನೋಡುತ್ತಿದ್ದಷ್ಟು ಹೊತ್ತು ಹೊರಗೆ ಮಳೆ ಸುರಿಯುತ್ತಿದೆಯೇನೋ ಎಂಬ ಭ್ರಮೆಗೆ ನಾನು ಈಡಾಗಿದ್ದೆ.. ಇಂದು ಜೋಗಿಯ ಕಾದಂಬರಿ ಓದುತ್ತಿದ್ದಷ್ಟು ಹೊತ್ತೂ; ಓದಿ ಮುಗಿಸಿದ ಮೇಲೂ ಕಾಡಿನ ನೀರವತೆಗೆ ಸವಾಲೊಡ್ಡುವ ಜೀರುಂಡೆಯ ಗಾನ ಕಿವಿಯಲ್ಲಿ ಮೊರೆದಂತಾಗುತ್ತಿತ್ತು.

 ಕಾಡಿನ ಕತೆಗಳು ಅಂದಾಗ ಥಟ್ಟನೆ ನೆನಪಾಗುವವರು ತೇಜಸ್ವಿಯವರು. ಕಾಡಿನ ಕಥೆಗಳನ್ನು ಬರೆಯುವವರಿಗೆ ತೇಜಸ್ವಿಯ ಪ್ರಭಾವದಿಂದ ಹೊರಬಂದು ತಮ್ಮದೇ ಶೈಲಿಯಲ್ಲಿ ಕತೆ ಕಟ್ಟುವುದು ನಿಜಕ್ಕೂ ಸವಾಲೇ ಸೈ. ಅದನ್ನು ಮೀರಿಯೂ ಮೀರದಂತೆ ತಮ್ಮದೇ ಜಾಡಿನಲ್ಲಿ ಹೆಜ್ಜೆ ಹಾಕುವುದು ತುಂಬಾ ಕಷ್ಟ ಅನ್ನುವುದನ್ನು ಜೋಗಿ ಮೊದಲಲ್ಲೇ ಒಪ್ಪಿಕೊಂಡಿದ್ದಾರೆ. ಕಾಲಕಾಲಕ್ಕೆ ಬದಲಾಗುತ್ತಾ ಬರುತ್ತಿರುವ ಕಾಡಿನ ಕತೆ ಹೇಳುತ್ತಾ ಕತೆಯ ನಡುವೆಯೇ ಕಾಡಿನಲ್ಲಿ ಗೊತ್ತು ಗುರಿ ಇಲ್ಲದಂತೆ ಅಲೆಯುವ ಅನುಭವ ಕಟ್ಟಿಕೊಡುವ ಚಿಟ್ಟೆ ಹೆಜ್ಜೆಯ ಜಾಡಿನಲ್ಲಿ ಕಾಡಿನ ನಡುವೆ ಈಗ ಬೀಸುತ್ತಿರುವ ಬದಲಾವಣೆಯ ವಿಷಗಾಳಿಯ ಅನುಭವವೂ ಆಗುತ್ತದೆ. ಕತೆಯ ಹಿಂದಿರುವ ಕಳಕಳಿ ನಮ್ಮನ್ನು ತಟ್ಟುತ್ತದೆ.

 ಕಾಡಿನಲ್ಲಿ ನಿಗೂಢವಾಗಿ ಕಣ್ಮರೆಯಾದ ಮೂವರನ್ನು ಹುಡುಕಿಕೊಂಡು ಬೆಂಗಳೂರಿನ ಗೆಳಯರಿಬ್ಬರು ಕಾಡಿನಲ್ಲಿ ನಡೆಸುವ ಹುಡುಕಾಟದ ಸುತ್ತಲೂ ಸುತ್ತುವ, ಅನೇಕ ಪಾತ್ರಗಳು ಸುಳಿದಾಡುವ ಈ ಕತೆಯಲ್ಲಿ ಕಾಡೇ ಪ್ರಮುಖ ಪಾತ್ರಧಾರಿ. ಕಾಡಿನ ಸಮಸ್ತ ವ್ಯಾಪಾರಗಳೂ ಒಂದರೊಳಗೊಂದು ಹೇಗೆ ತಳುಕು ಹಾಕಿಕೊಂಡಿವೆ ಎನ್ನುವದನ್ನು ಮನದಟ್ಟು ಮಾಡಿಸಲು ಅನೇಕ ಉಪಕತೆಗಳನ್ನು ಸೃಜಿಸುತ್ತಾ ಹೋಗುವ ಜೋಗಿ ಇಲ್ಲೂ ಕೂಡಾ ಕತೆಯೊಳಗೊಂದು ಕತೆ ಕಟ್ಟುವ ತಮ್ಮ ಕುಶಲತೆಯನ್ನು ಮೆರೆಯುತ್ತಾರೆ. ಜೊತೆಗೆ ಯಾಮಿನಿಯಲ್ಲಿ ಮಾಡಿದಂತೆ ಪ್ರತೀ ಅಧ್ಯಾಯಕ್ಕೂ ಮುದ್ದಾದ ಸಾಲುಗಳನ್ನು ಶೀರ್ಷಿಕೆಯಾಗಿ ಕೊಟ್ಟು ಓದುವ ಖುಶಿ ಇನ್ನಷ್ಟು ಹೆಚ್ಚಿಸುತ್ತಾರೆ.

 ಗಾರ್ಡ್ ಕೃಷ್ಣಪ್ಪ ತನ್ನ ರಾಜಕಿಯ ಬೆಂಬಲದಿಂದ ಲಾರ್ಡ್ ಅಂತ ಕರೆಸಿಕೊಂಡು ಕಾಡಿನ ಮೇಲೆ ಎಸಗುವ ದೌರ್ಜನ್ಯ, ಪುಂಡಿ ಗಸಿ ಹೋಟೆಲಿನ ಮಮ್ಮದೆ, ಘಟ್ಟದ ತಪ್ಪಲಲ್ಲಿ ಮಿನಿ ಕೊಟ್ಟಾಯಂ ನಿರ್ಮಿಸಿರುವ ಮಲೆಯಾಳಿಗಳು, ಸಾಂತುವಿನ ಮುಗ್ಧತೆ-ಅವನ ಪ್ರೇಮ ಪ್ರಕರಣ, ಕತೆಗಾರನ ಜೊತೆಗಾರ ಶಿವು, ಮಲೆಯಾಳಿ ಜೀಪ್ ಡ್ರೈವರ್ ಜೊಸೆಫ್, ಮಲೆ ಕುಡಿಯರು ಇವರೆಲ್ಲರ ಜೊತೆಯಲ್ಲೇ ಅನುಮಾನಾಸ್ಪದ ವ್ಯಕ್ತಿ ಭೋಜರಾಜ ಹೀಗೆ ಕಾಡಿನ ಲೋಕದೊಳಗೆ ಒಂದೊಂದು ಹಳ್ಳ ತೋಡುಗಳೂ ಸೇರಿ ಹೊಳೆಯಾಗುವಂತೆ, ಪಾತ್ರಗಳ ಕಾಡಿನ ಕತೆ ಬಿಚ್ಚಿಕೊಳ್ಳುತ್ತಾ, ಬಿಚ್ಚಿಕೊಂಡಷ್ಟೂ ಮತ್ತಷು  ಗೌಪ್ಯವಾಗುತ್ತಾ ಸಾಗುತ್ತದೆ. ಕಾಡಿನ ಕತ್ತಲಲ್ಲಿ ಮೂಡಿ ಮರೆಯಾಗುವ ಬೆಳಕಿನ ರೇಖೆ, ಮನುಷ್ಯರನ್ನೇ ಕಬಳಿಸುವ ಕಂಬಳಿ ಹುಳುಗಳು ಹೀಗೆ ಕಾಡಿನ ಅನೂಹ್ಯ ಲೋಕದ ಬಗ್ಗೆ ಮೂಡುವ ಬೆರಗಿನಲ್ಲಿ ಮೈ ಮರೆಯುವಷ್ಟರಲ್ಲಿ ಕಾಡಿನೊಳಗಿನ ಕ್ಷುದ್ರ ವ್ಯಾಪಾರಗಳ ಒಳಸುಳಿಗಳನ್ನು ಬಿಚ್ಚಿಡುವ ತನ್ವಿ ಭಟ್ ಕಥನದ ಮೂಲಕ ಕಾಡಿನ ಮತ್ತೊಂದು ಮಗ್ಗುಲಿಗೆ ಕತೆ ಹೊರಳುತ್ತದೆ. ಕಾಡಿನ ಜೀವ ವ್ಯಾಪಾರದ ಗೌಪ್ಯತೆಯನ್ನೂ ಮೀರಿ ಅಭಿವೃದ್ಧಿಯ ಹೆಸರಲ್ಲಿ ಕಾಡಿನೊಳಗಿನ ಅಗೋಚರ ವ್ಯಾಪಾರದ ಲೋಕ ಅನಾವರಣಗೊಳ್ಳುತ್ತದೆ. ಹುಡುಕಿಕೊಂಡು ಬಂದವರು ಏನಾದರು, ತನ್ವಿ ಭಟ್ ಕತೆ ಏನಾಯ್ತು ಅನ್ನುವ ಕಥನ ಕುತೂಹಲವನ್ನೂ ಮೀರಿ ಕಾಡು ನಮ್ಮನಾವರಿಸಿಕೊಳ್ಳುತ್ತದೆ, ಬದಲಾಗುತ್ತಿರುವ ಕಾಡಿನ ಅಂತರಂಗ ಬೆತ್ತಲಾದಷ್ಟೂ ಕಾಡು ಮತ್ತಿನ್ನೇನನ್ನೋ ಮುಚ್ಚಿಟ್ಟುಕೊಂಡು ಕತ್ತಲೆಯ ಸೆರಗು ಹೊದ್ದು ತಣ್ಣಗೆ ಮಲಗುತ್ತದೆ… ಒಮ್ಮೆ ಮಾತೆಯ ಮಮತೆಯ ಮಡಿಲಂತೆ ಆಪ್ತವಾಗುತ್ತಾ ಮಗದೊಮ್ಮೆ ಮುನಿದು ಮುಸುಕೆಳುದು ಮಲಗಿದ ಮಾನಿನಿಯ ಮನೋವ್ಯಾಪಾರದಂತೆ ಗುಪ್ತವಾಗುತ್ತಾ…

ಕಾಡಿನ ಕತೆಗಳ ಸರಣಿಯಲ್ಲಿ ಇದು ಕೊನೆಯದು ಅಂತ ಜೋಗಿ ಹೇಳಿಕೊಂಡಿದ್ದಾರೆ. ಆದರೆ ಹಾಗಾಗದಿರಲಿ ಅಂತ ಪುಸ್ತಕ ಓದಿದ ಮೇಲೆ ನಿಮಗನ್ನಿಸದಿದ್ದರೆ ಹೇಳಿ.

ಪುಸ್ತಕ                             – ಚಿಟ್ಟೆ ಹೆಜ್ಜೆ ಜಾಡು

ಲೇಖಕರು                         – ಜೋಗಿ

ಪ್ರಕಾಶಕರು                       – ಅಂಕಿತ ಪುಸ್ತಕ ಗಾಂಧಿಬಜಾರ್

ಪುಟಗಳು                          – 120

ಬೆಲೆ                               – 80 ರೂ.