Posts Tagged ‘kannada book review’

ಆತ್ಮಕತೆಗಳೆಂದರೆ ವ್ಯಕ್ತಿಯೋರ್ವ ತನ್ನೊಂದಿಗೆ ತಾನೇ ನಡೆಸುವ ಮೌನಸಲ್ಲಾಪ-ಆಪ್ತಸಂವಾದ. ತನ್ನ ಬದುಕು ಸಾಗಿಬಂದ ಹಾದಿಯ ಬದುವಿನ ಮೇಲೆ ನಿಂತು ನಡೆಸುವ ಆತ್ಮನಿರೀಕ್ಷಣೆ. ಸರಿ-ತಪ್ಪುಗಳ ತಕ್ಕಡಿಯಲ್ಲಿ ತನ್ನನ್ನು ತಾನೇ ತೂಗಿಕೊಳ್ಳುವ ಸ್ವಯಂವಿಮರ್ಶೆ. ಬರಹದ ಪ್ರಾಮಾಣಿಕತೆ ಗುಲಗುಂಜಿಯಷ್ಟು ಏರುಪೇರಾದರೂ ಸುಲಭವಾಗಿ ಆತ್ಮರತಿಯಂತಾಗಿ ಬಿಡಬಹುದಾದ ಅಪಾಯ ಸದಾ ಇದ್ದೇ ಇರುತ್ತದೆ. ಅಲ್ಲದೆ ವ್ಯಕ್ತಿಯೋರ್ವನ ಬದುಕಿನಲ್ಲಿ ಬರುವ ಅನ್ಯರ ಕುರಿತು ಬರೆಯುವಾಗ ಕೂಡಾ ಸರಿಗೆಯ ಮೇಲಿನ ನಡಿಗೆಯಷ್ಟೇ ಎಚ್ಚರವಿರದೇ ಹೋದರೆ ಅನಗತ್ಯ ವಿವಾದಗಳಿಗೆ ಸಿಲುಕಬೇಕಾದೀತು. ಪ್ರತಿಯೊಬ್ಬನ ಬದುಕಿನಲ್ಲೂ ಇರುವ ಸೋಲು-ಗೆಲುವು, ಸಾಹಸ, ಹೋರಾಟ, ಛಲ, ಅಪಮಾನ, ಕಷ್ಟ-ನಷ್ಟ, ಮುಜುಗರ, ಗೊಂದಲ..ಇವುಗಳಿಗೆ ಸ್ಪಂದಿಸುವ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಹುಟ್ಟಿ ಬೆಳೆದ ಪರಿಸರ, ಓದು-ಅಧ್ಯಯನ, ಜನ್ಮಜಾತಪ್ರತಿಭೆ, ಸಂಸ್ಕಾರ, ಬದುಕುಕಲಿಸಿದಪಾಠಗಳು..ಇವೆಲ್ಲದರ ಒಟ್ಟು ಮೊತ್ತವೇ ವ್ಯಕ್ತಿತ್ವದ ಸ್ವರೂಪವನ್ನು ನಿರ್ಧರಿಸುತ್ತದೆ. ಪ್ರತಿಯೊಬ್ಬನ ಬದುಕೂ ಕೂಡಾ ಒಂದು ಬೇರೆಯದೇ ಆದ ‘ಖಾಸ್‌ಬಾತ್’. ಬಾಳ ಪಯಣದಲ್ಲಿ ಸಂಚಿತವಾಗುವ ಅನುಭವಗಳ ಮೂಟೆಯನ್ನು ಬಿಚ್ಚಿಟ್ಟಾಗ ತೆರೆದುಕೊಳ್ಳುವ ಕತೆಗಳೇ ಆತ್ಮಕತೆಗಳು. ತನ್ನ ಬದುಕಿನ ಹಾದಿಯ ಚಿತ್ರಣವನ್ನು ಇಂತಹ ಪುಸ್ತಕದ ಮೂಲಕ ಸ್ವಾರಸ್ಯಕರವಾಗಿ ಬಿಡಿಸಿಟ್ಟವರು ವಿಠ್ಠಲ ವೆಂಕಟೇಶ್ ಕಾಮತ್. ಪುಸ್ತಕದ ಹೆಸರು ‘ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ’

ಮೂಲ ಮರಾಠಿ ಕೃತಿಯನ್ನು (‘ಇಡ್ಲಿ, ಆರ್ಕಿಡ್ ಆಣಿ ಮಿ’)ಸೊಗಸಾಗಿ ಕನ್ನಡಕೆ ತಂದ ಅಕ್ಷತಾ ದೇಶಪಾಂಡೆಯವರಿಗೊಂದು ಕೃತಜ್ಞತೆ ಹೇಳದಿದ್ರೆ ತಪ್ಪಾಗುತ್ತೆ. ತನ್ನ ರಂಜನೀಯ ಶೈಲಿಯಿಂದಾಗಿ ಬಲು ಸುಲಭವಾಗಿ ಓದಿಸಿಕೊಂಡು ಹೋಗುವ ಈ ಕೃತಿಯ ಉದ್ದಕ್ಕೂ ಕಾಮತ್‌ರ ಹಾಸ್ಯಪ್ರಜ್ಞೆಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇಡ್ಲಿ ಮಾರುತ್ತಿದ್ದ ಹುಡುಗನೊಬ್ಬ ತನ್ನ ಆತ್ಮಬಲ, ಹೋರಾಟ, ವಿಭಿನ್ನ ಚಿಂತನಾಕ್ರಮಗಳಿಂದಾಗಿ ಆರ್ಕಿಡ್‌ನಂತಹ ಪಂಚತಾರಾ ಹೋಟೆಲ್ ಸಮೂಹದ ಮಾಲಿಕನಾಗುವ ಸಾಹಸಗಾಥೆಯಿರುವ ಕೃತಿಯ ಹೆಗ್ಗಳಿಕೆಯೆಂದರೆ, ಕಾಮತ್ ಅವರು ಯಾವ ಹಿಂಜರಿಕೆ ಇಲ್ಲದೆ ತಮ್ಮ ಮನಸ್ಸಿನ ಭಾವನೆಗಳು, ತಪ್ಪು-ಒಪ್ಪು ಎಲ್ಲವನ್ನು ಆಕರ್ಷಕ ಶೈಲಿಯಲ್ಲಿ ವಿಶದೀಕರಿಸಿರುವ ಕ್ರಮ. ಸಾಧನೆಯ ಹಾದಿಯಲ್ಲಿನ ಸವಾಲು, ತೊಂದರೆ ತೊಡಕುಗಳು, ಅದನ್ನು ಧನಾತ್ಮಕವಾಗಿ ಎದುರಿಸಿ ಮೆಟ್ಟಿನಿಂತು ಎದುರಿಸಿದ ರೀತಿ, ಅವುಗಲು ಕಲಿಸಿದ ಬದುಕಿನ ನೀತಿ ಇವೆಲ್ಲವನ್ನೂ ಹಾಸ್ಯಮಿಶ್ರಿತ ಧಾಟಿಯಲ್ಲಿ ಓದುವುದೇ ಒಂದು ಹಿತಾನುಭವ. ಇದರಲ್ಲಿರುವ ಅನುಭವಗಳ ಹಿಂದಿರುವ ನೀತಿ, ಧನಾತ್ಮಕವಾಗಿ ಮತ್ತು ವಿಭಿನ್ನವಾಗಿ ಚಿಂತಿಸಲು ಪ್ರೇರಿಪಿಸುವ ವಿಷಯಗಳಿಂದಾಗಿ ಇದನ್ನು ಒಂದು ವ್ಯಕ್ತಿತ್ವ ವಿಕಸನದ ಕೃತಿಯನ್ನಾಗಿ ಕೂಡಾ ಓದಿ ಆನಂದಿಸಲಡ್ಡಿಯಿಲ್ಲ. ವ್ಯಾಪಾರದಲ್ಲಿ ಇರಬೇಕಾದ ಸೂಕ್ಷ್ಮದೃಷ್ಟಿ ಮತ್ತು ಬೇರೆಯವರಿಗಿಂತ ಭಿನ್ನವಾಗಿ ಯೋಚಿಸಿದಾಗ ಮಾತ್ರ ಬೇರೆಯವರಿಗಿಂತ ಎತ್ತರಕ್ಕೆ ಬೆಳೆಯಲು ಸಾಧ್ಯ ಎನ್ನುವುದನ್ನು, ಲ್ಯಾಟರಲ್ ಥಿಂಕಿಂಗ್‌ನ ಮಹತ್ವವನ್ನು ಅನೇಕ ರಸವತ್ತಾದ ಘಟನೆಗಳ ಮೂಲಕ ವಿವರಿಸುತ್ತಾ ಹೋಗುವ ಕಾಮತ್‌ರ ಶೈಲಿ ಆಪ್ತವೆನಿಸುತ್ತದೆ.

ಹೆದ್ದಾರಿ ಹೋಟೆಲ್ ವಿಶ್ರಾಂತಿ ಕೋಣೆಗಳಿಗೆ ಕನ್ನಡಿ ಅಳವಡಿಸುವ ತಂತ್ರ, ಐಸ್‌ಗೆ ಉಪ್ಪು ಸೇರಿಸಿದರೆ ಕೋಕಾಕೋಲಾ ಬಾಟಲ್ ಬೇಗ ತಣ್ಣಗಾಗುವ ಟ್ರಿಕ್,ಇಡ್ಲಿ-ಚಟ್ನಿಯನ್ನು ರೈಸ್ ಫುಡ್ಡಿಂಗ್ ಮತ್ತು ಕೋಕೋನಟ್ ಸಾಸ್ ಎಂಬ ಹೆಸರಲ್ಲಿ ಲಂಡನ್‌ನವರಿಗೆ ಅದರ ರುಚಿ ಹತ್ತಿಸಿದ ಮಾರ್ಕೇಟಿಂಗ್ ಚಾಣಾಕ್ಷತೆ ಹೀಗೆ… ಭಿನ್ನ ಚಿಂತನೆಗಳು ಬಂದರೆ ಮಾತ್ರ ಬದುಕಲ್ಲಿ ಬೇರೆಯವರಿಗಿಂತ ಮುಂದಿರಬಹುದೆನ್ನುವ ಅವರ ಮಾತಿಗೆ ಪುಷ್ಟಿಕೊಡುವ ಹೇರಳ ಘಟನೆಗಳು ಸಾಕಷ್ಟುಸಿಗುತ್ತವೆ. ತಿಗಣೆ ಕೊಲ್ಲುವ ಯಂತ್ರದ ಹೆಸರಲ್ಲಿ ಮೋಸಹೋದದ್ದು, ಶಾಲೆಯಲ್ಲಿ ಚಡ್ಡಿಯಲ್ಲಿ ಕಕ್ಕಸ್ಸು ಮಾಡಿಕೊಂಡ ಘಟನೆ, ಬಕಾರ್ಡಿಗೋಲ್ಡ್ ಕೇಸರಿಲಾಡು ಮೊದಲಾದ ರಂಜನೀಯ ಘಟನೆಗಳೂ ಸಾಕಷ್ಟಿವೆ. ಹಾಗಾಗಿ ಪುಸ್ತಕ ಎಲ್ಲೂ ಬೋರ್ ಹೊಡೆಸದೆ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ; ಮಾತ್ರವಲ್ಲದೆಗ್ರಾಹಕನಮನಶಾಸ್ತ್ರ, ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಳ್ಳುವುದರ ಮಹತ್ವ, ಸೋತಾಗ ಎದೆಗುಂದದೆ ಪರಿಸ್ಥಿಯನ್ನು ನಿಯಂತ್ರಣಕ್ಕೆ ತಂದುಕೊಳ್ಳುವ ಬಗೆ.. ಹೀಗೆ ಬದುಕಿನ ಅನೇಕ ಪಾಠಗಳನ್ನು ಸರಳವಾಗಿ ಕಲಿಸುತ್ತದೆ. ಎಲ್ಲಿಯೂ ಸ್ವಯಂಪ್ರಶಂಸೆಯ ರೂಪಪಡೆದುಕೊಳ್ಳದೆ ಸಾಧನೆಯ ಹಾದಿಯಲ್ಲಿ ಎಲ್ಲರಿಗೂ ಕೈಮರವಾಗಬಲ್ಲ ವಿಠ್ಠಲ ಕಾಮತರ ಕೃತಿಯ ಕೊನೆಯ 2-3 ಅಧ್ಯಾಯಗಳು ಸುಖದಮೂಲಮಂತ್ರ, ವಿಠ್ಠಲನನೀತಿ, ಆತ್ಮಬಲ ಅನ್ನೋ ಹೆಸರಲ್ಲಿ ಬಹು ಉಪಯುಕ್ತನೀತಿ, ಸೂತ್ರಗಳನ್ನುತಿಳಿಸಿಕೊಡುತ್ತವೆ.

ಇಷ್ಟು ಸುಂದರವಾಗಿ, ಆಕರ್ಷಕವಾಗಿಬರೆದು, ನಡೆಯುವಘಟನಾವಳಿಗಳನ್ನುನಮ್ಮ ಕಣ್ಮುಂದೆ ಕಟ್ಟಿಕೊಡಬಲ್ಲ ಇವರ ಬರಹದ ಕೌಶಲ್ಯವನ್ನುಮೆಚ್ಚದೆಇರಲಾಗದು. ಮುನ್ನುಡಿಯಲ್ಲಿ ‘ಒಂದು ವೇಳೆ ಕಾಮತ್‌ರು ಹೋಟೆಲ್ ಉದ್ಯಮಿಯಾಗಿರದೆ, ಕತೆ-ಕಾದಂಬರಿ ಅಥವ ವ್ಯಕ್ತಿತ್ವ ವಿಕಸನ ಕೃತಿಗಳನ್ನು ಬರೆಯುವವರಾಗಿದ್ದರೆ ವೃತ್ತಿನಿರತ ಬರಹಗಾರರಿಗೆ ಬೆದರಿಕೆಯಾಗಿಬಿಡುತ್ತಿದ್ದರು’ ಅನ್ನುವ ಯಂಡಮೂರಿ ಅವರ ಪ್ರಶಂಸೆಯ ಮಾತೇ ಸಾಕು ಈ ಪುಸ್ತಕದ ಹೂರಣವನ್ನು ತಿಳಿಸುವುದಕ್ಕೆ

ಮಲೆನಾಡು ಅಂದಾಕ್ಷಣ ಮನಸು ಗೊತ್ತಿಲ್ಲದಂತೆ ಅರಳಿ ನಿಲ್ಲುತ್ತೆ. ನಾಸ್ಟಾಲ್ಜಿಯಾನೋ, ಪ್ರಕೃತಿಯ ಮಡಿಲಿನ ಆಹ್ಲಾದದ ನೆನಪೋ, ಇಲ್ಲಾ ಎಲ್ಲರಿಗೂ ಇರುವಂತೆ ನಮ್ಮ ನಮ್ಮ ಊರಿನ ಕುರಿತು ಇರುವ ವಿಚಿತ್ರ ವಿಶಿಷ್ಟ ಎಳೆತ ಸೆಳೆತಗಳೋ…ಒಟ್ಟಿನಲ್ಲಿ ಮಲೆನಾಡು ಶಬ್ದ ಕಿವಿ ತಮ್ಮಟೆಯ ಮೇಲೆ ಜೇನು ಸುರಿದಂತಾ ಅನುಭವ ಕೊಡೋದು ಸುಳ್ಳಲ್ಲ. ನಾ ಏನೇ ವರ್ಣಿಸಿದರೂ ಆ ಅನುಭೂತಿ ಎಲ್ಲ ಉಪಮೆ, ಸಾಮತಿ, ದೃಷ್ಟಾಂತಗಳ ಎಲ್ಲೆ ಮೀರಿದ್ದೆನ್ನುವುದಂತೂ ಸತ್ಯ. ಇಂತಹ ಮನಸಿನ ಕೈಗೇನಾದ್ರೂ ಕುವೆಂಪು ಕಾದಂಬರಿಗಳು ಸಿಕ್ಕಿದ್ರೆ ಹಬ್ಬದ ಹೋಳಿಗೆ-ತುಪ್ಪ ಇದರ ಮುಂದೆ ಯಾವ ಲೆಕ್ಕ? ( ಮತ್ತೆ ಉಪಮೆ ಬಂತು ಕ್ಷಮೆಯಿರಲಿ J)

 

ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು ಎರಡೂ ಕೂಡಾ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. ಇದು ಕಥೆ ಕಾದಂಬರಿ ಅನ್ನುವುದಕ್ಕಿಂತ ಹೆಚ್ಚಾಗಿ ಮಲೆನಾಡಿನ ಸಹಜ ಸುಂದರ ಬದುಕನ್ನು  ಕಣ್ಮುಂದೆ ಬಿಡಿಸಿಡುವ ಸುಂದರ ಚಿತ್ರಗಳ ಅಕ್ಷರರೂಪ ಅಂತ ನನಗನ್ನಿಸಿದೆ. ಕುವೆಂಪುರವರೇ ತಮ್ಮ ಅರಿಕೆಯಲ್ಲಿ ಹೇಳಿಕೊಂಡಂತೆ, ಇದನ್ನು ಬರಿಯ ಕಥೆಯ ಕುತೂಹಲಕ್ಕಾಗಿ ಓದದೆ, ಕಥೆಯ ಮೂಲಕ ತೆರೆದುಕೊಳ್ಳುವ ಮಲೆನಾಡಿನ ಜೀವಂತ ಪರಿಸರದಲ್ಲಿ ಒಮ್ಮೆ ನಡೆದಾಡಿ ಬಂದು ಬಿಡಿ. ಆಗ ಸಿಗುವ ಖುಷಿ ಬರೀ ಕಥೆಯನ್ನು ಕೇಂದ್ರವಾಗಿರಿಸಿಕೊಂಡು ಓದುವ ಓದಿನ ನೂರ್ಮಡಿಯಷ್ಟಾಗುವುದರಲ್ಲಿ ಅನುಮಾನವೇ ಇಲ್ಲ.

 

ಕಾನೂರು ಹೆಗ್ಗಡತಿಯ ಪುಟ ತೆರೆದಂತೆಲ್ಲಾ ಪದರ ಪದರವಾಗಿ ಮಲೆನಾಡಿನ ಬದುಕು ಅನಾವರಣಗೊಳ್ಳುತ್ತಾ ಹೋಗುತ್ತದೆ. ಮೀನುಷಿಕಾರಿ, ದೆಯ್ಯದ ಹರಕೆ, ಕಾಡು ಹಂದಿಯ ಬೇಟೆ, ಜಾತಿ ವ್ಯವಸ್ಥೆ, ಮಂತ್ರಿಸಿದ ತೆಂಗಿನಕಾಯಿಯ ಮಹಿಮೆ, ಕೋಳಿಯಂಕ, ಪಾಲು ಪಂಚಾಯ್ತಿ, ಕಳ್ಳಂಗಡಿ, ಹೋತದ ಬಲಿ… ಹೀಗೆ ಮಲೆನಾಡಿನ ಸಹಜ ಜೀವನದಲ್ಲಿ ಮಿಳಿತವಾಗಿರುವ ಸಂಗತಿಗಳು ಘಟಿಸುತ್ತಾ ಹೋಗುತ್ತದೆ ( ಕುವೆಂಪು ಅವರ ಕಾಲದ ಮಾತು ಬಿಡಿ. ಈಗ ಈ ಚಿತ್ರಣ ಬಹುತೇಕ ನಿಧಾನವಾಗಿ ಮರೆಯಾಗುತ್ತಾ ಬಂದಿದೆ… ಕುವೆಂಪುರವರ ವಿಶ್ವಮಾನವನಾಗು ಅನ್ನೋ ವಿಶ್ ಅನ್ನು ಅನುಸರಿಸುವ ಬದಲು ಜಾಗತೀಕರಣಕ್ಕೆ ಬಲಿಯಾಗಿ, ಅನುಕರಿಸುವ ಹಪಹಪಿಯ ದೆಸೆಯಿಂದ ಎಲ್ಲಾ ವೈವಿಧ್ಯಗಳನ್ನು ನಿಧಾನಕ್ಕೆ ಮರೆಯಾಗುತ್ತಿವೆ. ಮಲೆನಾಡು ಕೂಡಾ ಬದಲಾಗುತ್ತಿದೆ. ಆ ಕುರಿತ ವಾದ-ಪ್ರತಿವಾದದ ಮಾತು ಒತ್ತಟ್ಟಿಗಿರಲಿ)

 

ಹೂವಯ್ಯನ ಭಾವುಕ ಜಗತ್ತಿನ ಉದಾತ್ತ ಭಾವಗಳು, ಅವನ ಚಿಕ್ಕಪ್ಪಯ್ಯ ಚಂದ್ರಯ್ಯ ಗೌಡರ ದರ್ಬಾರು-ದರ್ಪ, ಅವರ ಮಗ ರಾಮಯ್ಯನ ದ್ವಂದ್ವ, ಹೂವಯ್ಯನ ಅಮ್ಮ ನಾಗಮ್ಮನ ವರಾತ, ಸೀತೆಯ ಮುಗ್ಧತೆ, ಓಬಯ್ಯನ ಬೋಳೇತನ, ಅಣ್ಣಯ್ಯ ಗೌಡರ ಅಧ್ವಾನ, ಪುಟ್ಟಣ್ಣ, ಬೇಲರ ಬೈರ, ಅವನ ಮಗ ಗಂಗ ಹುಡುಗ, ಹಳೇಪೈಕದ ತಿಮ್ಮ, ಘಟ್ಟದ ಕೆಳಗಿನ ಸೇರಿಗಾರರ ಕಾರುಬಾರು, ಅವರು ಹಾರಿಸಿಕೊಂಡು ಬಂದ ಗಂಗಿಯ ಹಾದರ…ಹೀಗೆ ಇವೆಲ್ಲದರ ಸುತ್ತ ಹೆಣೆದ ಘಟನಾವಳಿಯಲ್ಲಿ ಚಂದ್ರಯ್ಯಗೌಡರ ಮೂರನೇ ಹೆಂಡತಿಯಾಗಿ ಬರುವವಳೇ ನೆಲ್ಲುಹಳ್ಳಿಯ ಸುಬ್ಬಿ ಯಾನೆ ಸುಬ್ಬಮ್ಮ ಹೆಗ್ಗಡತಿ.

 

ಈ ಕಥೆಯಲ್ಲಿ ಹೂವಯ್ಯನೇ ಕಥಾನಾಯಕನ ಹಾಗೆ ಕಂಡರೂ ಕೂಡಾ ವಾಸ್ತವದಲ್ಲಿ ಇಲ್ಲಿ ಎಲ್ಲಾ ಪಾತ್ರಗಳು ತಮ್ಮದೇ ಆದ ಮಹತ್ತನ್ನು ಹೊಂದಿವೆ. ಕಾದಂಬರಿಯ ಹೆಸರು ಕಾನೂರು ಹೆಗ್ಗಡತಿ ಅಂತ ಇದ್ದರೂ ಕೂಡಾ ಇದು ಬರೀ ಸುಬ್ಬಮ್ಮನ ಕಥೆ ಮಾತ್ರವಷ್ಟೇ ಅಲ್ಲ; ಅಮಾಯಕತೆಗೆ ಕ್ಷುದ್ರತೆಯ ಲೇಪವಿದ್ದುಬಿಟ್ಟರೆ ಅದಕ್ಕೆ ಸರಿಯಾದ ಅಕಾರದ ದರ್ಪ ಸಿಕ್ಕಿಬಿಟ್ಟರೆ ಮಂಗನಿಗೆ ಕಳ್ಳು ಕುಡಿಸಿದಷ್ಟೇ ಅನಾಹುತಕಾರಿಯಾಗಬಲ್ಲುದು ಅನ್ನುವುದರ ದ್ಯೋತಕವಾಗಿ ಕಥೆಯಲ್ಲಿ ಸುಬ್ಬಮ್ಮನ ಪಾತ್ರವಿದೆ.

 

ಸ್ಟೂಲವಾಗಿ ಕಥೆಯ ಹಂದರ ಹೇಳುವುದಾದರೆ , ಸೀತೆ ಹೂವಯ್ಯನ ನಡುವೆ ಅಂಕುರಿಸುವ ನಿಷ್ಕಲ್ಮಷ ಪ್ರೇಮ, ದೊಡ್ಡವರ ಸಣ್ಣತನಗಳಿಂದಾಗಿ ಅದು ಮುದುಡಿಹೋಗಿ ಆಕೆ ಅವನ ತಮ್ಮ ರಾಮಯ್ಯನ ಕೈಹಿಡಿಯಬೇಕಾಗಿ ಬರುತ್ತದೆ. ಚಂದ್ರಯ್ಯ ಗೌಡರ ಮೂರನೆ ಹೆಂಡತಿಯಾಗಿ ಬರುವ ನೆಲ್ಲುಹಳ್ಳಿಯ ಪೆದ್ದೇಗೌಡನ ಮಗಳು ಸುಬ್ಬಿ ಹೂವಯ್ಯನ ಸಮವಯಸ್ಕಳು. ಈ ಕಾರಣಕ್ಕೆ ಹೂವಯ್ಯ ಸುಬ್ಬಮ್ಮರ ನಡುವೆ ಸಂಬಂಧ ಕಲ್ಪಿಸುತ್ತದೆ ಗೌಡರ ಕಾಮಾಲೆ ಕಣ್ಣು. ಈ ಕಾರಣದಿಂದಾಗಿ ಅಲ್ಲದೆ ಅವರ ದರ್ಪ ದಬ್ಬಾಳಿಕೆಗೆ ರೋಸಿಹೋಗಿ ಕಾನೂರು ಮನೆ ತೊರೆಯುವ ಹೂವಯ್ಯ, ಉದಾತ್ತತೆಯ ಮೇಲಿನ ಒಲವು-ಅಪ್ಪಯ್ಯನ ಅಬ್ಬರದ ಮಧ್ಯೆ ಸಿಲುಕಿದಂತಾಗಿ ನಲುಗಿ ಮನೋವಿಕಾರದ ಸ್ಥಿತಿಗೆ ತಲುಪಿ ಆತ್ಮಹತ್ಯೆ ಮಾಡಿಕೊಳ್ಳುವ ರಾಮಯ್ಯ, ಚಂದ್ರೇಗೌಡರ ದೌರ್ಜನ್ಯಕ್ಕೆ ನೆಲ್ಲುಹಳ್ಳಿಗೆ ಒಡವೇ ಗಂಟಿನೊಂದಿಗೆ ಓಡಿಹೋಗುವ ಸುಬ್ಬಮ್ಮ, ಇವೆಲ್ಲದರ ನಡುವೆ ಸಿಕ್ಕಿ ತೊಳಲಾಡುವ ಸೀತೆಯ ಗೋಳು… ಹೀಗೆ ಸಾಗುವ ಕಥೆ ಚಂದ್ರೇಗೌಡರ ಅವಸಾನದೊಂದಿಗೆ ಸುಬ್ಬಮ್ಮನ ದರ್ಬಾರಿಗೆ ನಾಂದಿ ಹಾಡುತ್ತದೆ. ಅಂತ್ಯದಲ್ಲಿ ಸೇರಿಗಾರರೊಂದಿಗೆ ಗುಟ್ಟಾದ ಪ್ರಣಯಲೀಲೆ ನಡೆಸುವ ಸುಬ್ಬಮ್ಮ ಕದ್ದು ಬಸಿರಾಗಿ ಕೊನೆಗೆ ಗರ್ಭಪಾತವಾಗಿ ಸಾಯುವುದರಲ್ಲಿ ಪರ್ಯಾವಸಾನಗೊಳ್ಳುತ್ತದೆ.

 

ಈ ಕಥೆಯಲ್ಲಿ ನಡುನಡುವೆ ಮಲೆನಾಡಿನ ವೈವಿಧ್ಯ, ಸೊಗಡು ಸೊಬಗನ್ನು ತೆರೆದಿಡುವ ಅನೇಕ ಸ್ವಾರಸ್ಯಕರ ಉಪಕಥೆಗಳು ಬರುತ್ತವೆ. ಬಾಡುಗಳ್ಳ ಸೋಮ ಗೊಬ್ಬರದ ಗುಂಡಿಗೆ ಬಿದ್ದ ಕಥೆ, ಅವನ ಬಾಡಿನಾಸೆಯಿಂದಾಗಿ ಉಸಿರು ಕಟ್ಟಿ ಒದ್ದಾಡಿದ ಪ್ರಸಂಗ, ಕಳ್ಳಿನ ಮರಕ್ಕೆ ನಾಮ ಹಾಕುವ ಮಾರ್ಕನಿಗೆ ಬೈರ ಕೈ ಕೊಡುವ ಘಟನೆ, ಕಳ್ಳಂಗಡಿ ಸಾಲಕ್ಕಾಗಿ ಹಳೆಪೈಕದ ತಿಮ್ಮನ ಕೋಳಿಹುಂಜ ಕದ್ದು ಸಿಕ್ಕಿ ಬೀಳುವ ಸೋಮ, ಕಿಲಿಸ್ತರ( ಕ್ರಿಶ್ಚಿಯನ್) ಜಾಕಿ ಮತ್ತು ಟೈಗರ್ ನಾಯಿಯ ಜಟಾಪಟಿ, ಸುಬ್ಬಮ್ಮ ಮತ್ತು ಗಂಗೆಯರ ನಡುವಿನ ಕುಸ್ತಿ, ಕೋಳಿಯಂಕದಲ್ಲಿನ ಕಾಳಗ, ಓಬಯ್ಯನ ಭೂತಚೇಷ್ಟೆ ಮತ್ತು ೧೦೦ ರೂಪಾಯಿಯ ತುಂಡಾದ ನೋಟಿನ ಪ್ರಸಂಗ.. ಹೀಗೆ ಕುವೆಂಪು ಅವರ ಹಾಸ್ಯಪ್ರಜ್ಞೆಯಿಂದಾಗಿ ಅವರು ನೀಡುತ್ತಾ ಹೋಗುವ ಘಟನೆಗಳು ಓದಲು ಬಲು ಮಜವಾಗಿದೆ.

ಹೀಗೆ ಕಥೆಯ ಜಾಡಿನೊಂದಿಗೆ ಮಲೆನಾಡಿನ ನಿತ್ಯವ್ಯಾಪಾರಗಳು, ಪ್ರಕೃತಿ ಸೌಂದರ್ಯದ ಸೊಬಗನ್ನು ಸವಿಯುವ ಇಚ್ಛೆಯಿದ್ದಲ್ಲಿ ಈ ಬೃಹತ್ ಕಾದಂಬರಿ ಕೈಗೆತ್ತಿಕೊಳ್ಳಿಮಲೆನಾಡಿನಲ್ಲಿ ಒಂದು ಸುತ್ತು ತಿರುಗಿ ಬನ್ನಿ. ಮುಂದೆ ಎಂದಾದರೂ ಮಲೆಗಳಲ್ಲಿ ಮದುಮಗಳ ನ್ನು ಮಾತಾಡಿಸೋಣ

 

 

ಮೊನ್ನೆ ಎಂದಿನಂತೆ ನನ್ನ ಅಚ್ಚುಮೆಚ್ಚಿನ ಪುಸ್ತಕ ಮಳಿಗೆಗೆ ಗಾಂಧಿಬಜಾರಿನ ಅಂಕಿತ ಪುಸ್ತಕ ಮಳಿಗೆಗೆ ಹೋಗಿದ್ದೆ – ವಾರಾಂತ್ಯದ ಖರ್ಚಿಗೆ ಏನಾದ್ರೂ ಬೇಕಲ್ಲ ಓದೋಕೆ ಅಂತ. ಹೊಸ- ಹಳೆ ಪುಸ್ತಕಗಳ ಮೇಲೆಲ್ಲ ಒಂದ್ಸಲ ಕಣ್ಣುಹಾಯಿಸಿ ೨-೩ ಪುಸ್ತಕವನ್ನು ಪ್ರೀತಿಯಿಂದ ಕೈಗೆತ್ತಿಕೊಂಡೆ. ಪುಸ್ತಕದ ಹಣ ಕೊಟ್ಟು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವ್ರು ಕೇಳಿದ್ರು… ತೇಜಸ್ವಿಯವರ ಹೊಸ ಪುಸ್ತಕ ಬಂದಿದೆ ನೋಡಲಿಲ್ವ? ಅರೆ ಏನು ಹೇಳ್ತಾ ಇದ್ದಾರೆ ಇವ್ರು ಅಂಬಂತೆ ಇಡೀ ಮುಖವನ್ನೇ ಪ್ರಶ್ನೆ ಮಾಡಿಕೊಂಡು ನಿಂತೆ. ಅವ್ರು ನಗುನಗುತ್ತಾ ಪುಸ್ತಕ ಕೈಗಿಟ್ಟರು. ಹೌದು ಅನುಮಾನವೇ ಇಲ್ಲ. ತನ್ನ ವಿಶಿಷ್ಟ ವಿನ್ಯಾಸದಿಂದಲೇ ಮನ ಸೆಳೆಯುವ ಪುಸ್ತಕ ಪ್ರಕಾಶನದ ಪುಸ್ತಕ. ಹೆಸರು ಪಾಕ ಕ್ರಾಂತಿ ಮತ್ತು ಇತರ ಕತೆಗಳು. ಪುಟ ತೆರೆದಂತೆ ನನ್ನ ಸಂಶಯಗಳೆಲ್ಲ ಮರೆಯಾಯ್ತು. ಅದು ತೇಜಸ್ವಿಯವರ ನೆನಪಿನಲ್ಲಿ ಹೊರಬಂದ ಅವರ ಹಳೆಯ ಬರಹಗಳ ಸಂಗ್ರಹ. (ಅರೆ, ತೇಜಸ್ವಿ ಮರೆಯಾಗಿ ಆಗಲೇ ಒಂದು ವರ್ಷ ಆಯ್ತೆ!) ವಿವಿಧ ಪತ್ರಿಕೆಗಳಲ್ಲಿ ಅಚ್ಚಾದ ಆದರೆ ಪುಸ್ತಕ ರೂಪದಲ್ಲಿ ಬಾರದಿರುವ ಕಥೆ, ಲಲಿತ ಪ್ರಬಂಧ, ಲೇಖನಗಳು ಹೀಗೆ ಯಾವ ಹೆಸರಿಟ್ಟರೂ ಒಪ್ಪಿಕೊಳ್ಳಬಹುದಾದ ಬರಹಗಳ ಸಂಗ್ರಹ.

 

ತೇಜಸ್ವಿಯವರ ಬರಹಗಳು ಅಂದ್ರೆ ಹಾಗೆ. ಹೇಳಬೇಕಾದುದನ್ನು ಆಪ್ತವಾಗುವ ಹಾಗೆ ಹಾಸ್ಯದ ಎಳೆಯೊಂದು ಬರಹದುದ್ದಕ್ಕೂ ಹರಿಸುತ್ತ ಓದುಗರನ್ನು ತಮ್ಮ ಮಾಯಾಲೋಕದೆಳೊಗೆ ಎಳೆದೊಯ್ಯುವ ಪರಿಯೇ ಅವರ ಬರಹ ನಂಗೆ ಇಷ್ಟವಾಗಲು ಕಾರಣ. ಉದಾಹರಣೆ ಬೇಕಿದ್ರೆ ಈ ಪುಸ್ತಕದಲ್ಲಿರುವ ಪಾಕಕ್ರಾಂತಿ ಬರಹವನ್ನು ಓದಿ ನೋಡಿ. ಪಾಕಶಾಸ್ತ್ರದ ಪ್ರಯೋಗಗಳನ್ನು ಮಾಡುವ ಕಥೆ ಹೇಳುತ್ತ, ಇವರ ಪಾಕ ಪ್ರಯೋಗಕ್ಕೆ ಹೆದರಿದ ನಾಯಿ ಅನ್ನದ ತಟ್ಟೆ ಕಂಡ ಕೂಡಲೆ ಭಯೋತ್ಪಾದಕರನ್ನು ಕಂಡಷ್ಟೇ ವೇಗವಾಗಿ ಕಾಲಿಗೆ ಬುದ್ದಿ ಹೇಳುವ ಪ್ರಸಂಗ, ಹೇಗಾದರೂ ಮಾಡಿ ನಾಯಿ ತಿನ್ನುವಂತೆ ಮಾಡುವ ಪ್ರಯತ್ನದಲ್ಲಿ ಒಣಮೀನು ತಂದು ಪಡುವ ಪಚೀ(ಜೀ)ತಿ, ಸ್ನೇಹಿತನ ಸಲಹೆಯಂತೆ ಕುಕ್ಕರ್‌ನಲ್ಲಿ ಅಡುಗೆ ಮಾಡೋದು ನೀರು ಕುಡಿದಷ್ಟೇ ಸುಲಭ ಅಂತ ಹೋಗಿ ಅದು ಒಂದಕ್ಕೆರಡಾಗಿ ಸ್ಫೋಟವಾಗಿ ಪೋಲಿಸರು ಬಾಂಬು ತಯಾರಿ ನಡೀತಿದೆ ಅನ್ನೋ ಅನುಮಾನದಲ್ಲಿ ತಪಾಸಣೆಗೆ ಹೋಗಿ ಅಲ್ಲಿ ಜಾರಿ ಬೀಳುವಲ್ಲಿಗೆ ಪರ್ಯಾವಸಾನಗೊಳ್ಳುವ ಈ ಕಥಾನಕದ ಮಜ ಓದಿಯೇ ತಿಳಿಯಬೇಕು…ತೇಜಸ್ವಿಯವರಿಗೇ ಮೀಸಲಾದ ಅವರದ ಆದ ಬರಹದ ಶೈಲಿಯಲ್ಲಿ. ಇದಲ್ಲದೆ ಇನ್ನು ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ಬರಹಗಳ ಸಂಗ್ರಹವಿದೆ. ಒಮ್ಮೆ ಓದಿ ನೋಡಿ.

 

ತೇಜಸ್ವಿಯವರ ಮಿಕ್ಕ ಪುಸ್ತಕಗಳ ಬಗ್ಗೆ ಇನ್ಯಾವತ್ತಾದ್ರೂ ಬರೆದೇನು.

 

ಪಾಕ ಕ್ರಾಂತಿ ಮತ್ತು ಇತರ ಕತೆಗಳು

ಬೆಲೆ           ೬೦ ರೂಪಾಯಿಗಳು

ಪ್ರಕಾಶನ       – ಪುಸ್ತಕ ಪ್ರಕಾಶನ ಮೂಡಿಗೆರೆ

ಲೇಖಕರು      – ಕೆ.ಪೂಚಂತೆ