Posts Tagged ‘kannada poem’

ಭಾವಗಳ ತೂರಿಬಿಟ್ಟೆ ಸ್ವಚ್ಛಂದವಾಗಿ
ಆಕಾಶದ ಎಲ್ಲೆ ಮೀರಿ ವಿಹರಿಸಲೆಂದು

ತೋರಿಕೆಯ ಬಿಂಕ-ಬಿಗುಮಾನಗಳ
ಹೊಸ್ತಿಲು ದಾಟಿ ಮುನ್ನುಗ್ಗಲೆಂದು

ಚೌಕಟ್ಟಿನ ಪಂಜರಗಳ ಸರಳ ಬಂಧಿಯಾಗದೆ
ಗರಿಬಿಚ್ಚಿ ಹಾರಿ ಹಾಯಾಗಿರಲೆಂದು

ಕಟ್ಟುಪಾಡುಗಳ ಕಬ್ಬಿಣದ ಕೋಟೆಯ
ಕಂದಾಚಾರಗಳ ಶೃಂಖಲೆಯಲಿ ಸಿಲುಕದಿರಲೆಂದು

ಮುಕ್ತವಾಗಿಸಿಬಿಟ್ಟೆ ಸಕಲ ಪಾಶ-ಅಂಕುಶಗಳಿಂದ
ಬರಿದೇ ಇರಿವವರ ಶೂಲಕೆ ಘಾಸಿಯಾಗದಿರಲೆಂದು

ಸ್ವಾತಂತ್ರ್ಯ ಸ್ವೇಚ್ಛೆಯಾಯಿತೋ… ಅನುಮಾನ!
ನನ್ನೇ ಸುತ್ತುವರಿದು ಕಾಡುತಿವೆಯಲ್ಲಾ…

ಗಾಯವೇ ಇಲ್ಲದೆ ನೋಯುವ ಮನಸಿಗೆ
ಯಾತನೆಯು ಮಧುರ ಎಂದ ಕವಿ ಕಲ್ಪನೆ
ನೀಡಬಲ್ಲುದೇ ಸಾಂತ್ವನ… ಹುಸಿಯಾದರೂ ರವಷ್ಟು…?

Advertisements

ಅಂತರಂಗದ ಆಪ್ತಸ್ವರ ಮನಸಿನಲಿ ಮರ್ಮರಿಸಿದಾಗ

ನನ್ನ ಬ್ಲಾಗ್ ಮತ್ತು ಕವನ ಸಂಕಲನದ ನನ್ನಿಷ್ಟದ ಹನಿಗಳನ್ನು ಆರಿಸಿ ಈ ಕೆಳಗಿನ PDFನಲ್ಲಿ ಪೋಣಿಸಿದ್ದೇನೆ

ಕವನ ಸಂಕಲನ-‘ಅಂತರಂಗದ ಆಪ್ತಸ್ವರ’
ಬ್ಲಾಗ್ ‘ಮನಸಿನ ಮರ್ಮರ’ದ some-ಕವನಗಳು… ಸಂಚಲನಗಳು 😛

ಬೇಕೆನಿಸಿದಾಗ ಓದಲು PDF ಡೌನ್ಲೋಡ್ ಮಾಡಲು ಕೆಳಗಿನ ಕೊಂಡಿ ಕ್ಲಿಕ್ಕಿಸಿ 🙂

ಕವಿತೆ ಎಂದು ಹೆಸರಿಟ್ಟೆ… ನಿಟ್ಟುಸಿರಿಟ್ಟೆ 

ಮನಸಿನ_ಮರ್ಮರ

 

ಕಳೆದು ಹೋಗಿದೆ ಕನಸೊಂದು ಹುಡುಕಿಕೊಡುವೆಯಾ

          ಹಳೆಯ ನೆನಪುಗಳ ಹಾಳೆಯ ನಡುವೆಲ್ಲೋ..

 

ಮರೆತು ಹೋಗಿದೆ ರಾಗವೊಂದು ನುಡಿಸುವೆಯಾ

          ಅನುರಾಗ ಪಲ್ಲವಿಯ ಚರಣಗಳ ನಡುವೆಲ್ಲೋ…

 

ಮೂಕವಾಗಿದೆ ಮಾತು ದನಿಗೂಡಿಸುವೆಯಾ

          ಏಕಾಂತ ಮೌನದ ಮುಸುಕಿನ ಅಡಿಯೆಲ್ಲೋ…

 

ಬಾಡಿಹೋಗಿದೆ ವನಸುಮವೊಂದು ಅರಳಿಸುವೆಯಾ

          ನೆನಪುಗಳ ಕಾನನದ ನಟ್ಟ ನಡುವೆಯೆಲ್ಲೋ…

 

ಅಳಿದು ಹೋಗಿದೆ ನಂಬಿಕೆ ಉಳಿಸಿಕೊಡುವೆಯಾ

          ಮುರಿದ ಸಂಬಂಧ ಸಂಕೋಲೆಯ ಕೊಂಡಿಯಲೆಲ್ಲೋ…

 

ಆತ್ಮೀಯತೆಯ ಅರ್ಥ ಕಲಿಸಿಕೊಡುವೆಯಾ

          ಕೃತಕ ನಗುವಿನ ಅಲೆಗಳ ನಡುವೆಲ್ಲೋ…!!!

 

ಕಳೆದ ನಿನ್ನೆಯ ರಂಗಿನ್ನೂ ಮಾಸಿಲ್ಲ

ಈವತ್ತಿಗಾಗಲೇ ಹೊಚ್ಚ ಹೊಸ ಬಣ್ಣ

ಮುಂದೆ ಏನಿದೆಯೋ ಯಾರಿಗೂ ಗೊತ್ತಿಲ್ಲ

ನಾಳೆಯ ಕನಸಿನೋಕುಳಿ ತುಂಬಿದೆ ಕಣ್ಣ

 

ಕಾಡುವ ನಿನ್ನೆಯ ಯಾತನೆ ಇಂದಿಲ್ಲ

ವರ್ತಮಾನದ ಬಿಸಿಗೆ ಹಳೆಯದು ರದ್ದಿ

ನಾಳೆಯ ಯೋಚನೆಯು ಈಗಲೆ ಬೇಕಿಲ್ಲ

ಹೇಳಿ ಹೊಸತೇನಿದೆ ಈ ಕ್ಷಣದ ಸುದ್ದಿ

 

ಆದರೂ ಒಮ್ಮೊಮ್ಮೆ ಭೂತದಲಿ ಇಣುಕುತ್ತಾ

ಪಳೆಯುಳಿಕೆಗಳ ನಡುವೆ ಅಂಡಲೆವ ಚಾಳಿ

ಕಲಸಿ ಹೋದ ಬಣ್ಣಗಳ ಬೆದಕುತ್ತಾ

ಕಳೆದ ರಂಗು ಮತ್ತೆ ಸಿಗಬಹುದೇ ಹೇಳಿ

 

ಅವನೊಬ್ಬ ಅನಿವಾಸಿ ಅವಳ್ಹೆಸರು ಅವಿನಾಶಿ

ಭೇಟಿಯಾದರು ಅಂತರ್ಜಾಲದಿ ಚಾಟಿಸಿ

ಅರಳಿದ ಪ್ರೇಮವು ಶುದ್ಧ ಫ್ಯಾಂಟಸಿ

ಅಂತರ್ಜಾಲದ ಅಂತರ್‌ಪಟವ ಸೇರಿಸಿ

ದಂಪತಿ ಅವರೀಗ ನೆಟ್ ಅಲ್ಲೇ ವರಿಸಿ

ಬಂಧುಗಳು ಇವರ ಮೇಲ್ ಅಲ್ಲೇ ಹರಸಿ

ವೆಬಕ್ಯಾಮ್‌ನೊಳಗೆ ಕಣ್ಣೀರು ಸುರಿಸಿ

ಮನೆತುಂಬಿಸಿಕೊಂಡರು ಮೌಸ್ ಕ್ಲಿಕ್ಕಿಸಿ

ತಾಳಿ (ಟ್ಯಾಲಿ) ಇಲ್ಲದ ಇ-ಮದುವೆ ಕತೆ ಆಲಿಸಿ

ನಿಮ್ಮ ಅನಿಸಿಕೆಗಳನು ಬ್ಲಾಗ್ ಅಲ್ಲಿ ಬ್ಲಾಗಿಸಿ