Posts Tagged ‘kannada’

ಲಂಚ್ ಆದ್ಮೇಲೆ ಕ್ಲಾಸಲ್ಲಿ ಕಣ್ಣು ಕೂರೋದು ಬಹುತೇಕ ಎಲ್ಲರ ಅನುಭವ ಅಲ್ವಾ 🙂 ಆ ಅನುಭವದ ಒಂದು ಝಲಕ್ ‘ಗಾಳಿಪಟ’ ಚಿತ್ರದ ‘ಮಿಂಚಾಗಿ ನೀನು ಬರಲು… ನಿಂತಲ್ಲಿಯೇ ಮಳೆಗಾಲ’ ಧಾಟಿಯಲ್ಲಿ ಅಣಕ ‘ಲಂಚಾಗಿ…. ಕ್ಲಾಸಿಗ್ ಬರಲು…ಕುಂತಲ್ಲಿಯೇ ನಿದ್ರಾಜಾಲ’ 🙂

ಲಂಚಾಗಿ ಕ್ಲಾಸಿಗ್ ಬರಲು… ಕುಂತಲ್ಲಿಯೇ ನಿದ್ರಾಜಾಲ
ಲೆಕ್ಚರು ನಾ ಕೇಳುತಿರಲು… ಬೆಂಚಲ್ಲಿಯೇ ಕಣ್ಣುಭಾರ
ನಿದಿರೆಯಾ ಮೋಡಿ ಕಾಡಲು… ಡೆಸ್ಕ್ಮೇಲೆ ತಲೆಯಭಾರ
ಕನ್ಸಲ್ಲೇ ನನಗೆ ಸುವಿಹಾರ

ಲಂಚಾಗಿ ಕ್ಲಾಸಿಗ್ ಬರಲು… ಕುಂತಲ್ಲಿಯೇ ನಿದ್ರಾಜಾಲ
ಲೆಕ್ಚರು ನಾ ಕೇಳುತಿರಲು… ಬೆಂಚಲ್ಲಿಯೇ ಕಣ್ಣುಭಾರ

ನಾ ನಿನ್ನೆ ಕ್ಲಾಸಿನಲೇ
ನಿದ್ದೆ ಮಾಡಿದೆ
ಚಂದ ಮಾಡಿ ಉಂಡಿಹೆ
ನಿದ್ದೆ ಹೊಡೆದೆನು

ನಾನೇನು ಮಾಡಿದರೂ
ನಿದಿರೆಬಂದಿತು
ಬೆಲ್ಲು ಆದ ಕ್ಷಣದಲೇ
ಎದ್ದು ಕುಳಿತೆನು

ಕ್ಷಮಿಸಿದ್ರಿ ಮೇಷ್ಟರೆ
ಏಳಿಸದೆ ನನ್ನನು
ಕೇಳಿ ಕೇಳಿ
ಪಾಠವೇ ಬೋರು
ಸ್ಲೀಪಿ ನಾನು

ಲಂಚಾಗಿ ಕ್ಲಾಸಿಗ್ ಬರಲು… ಕುಂತಲ್ಲಿಯೇ ನಿದ್ರಾಜಾಲ
ಲೆಕ್ಚರು ನಾ ಕೇಳುತಿರಲು… ಬೆಂಚಲ್ಲಿಯೇ ಕಣ್ಣುಭಾರ

ಮೊನ್ನೆ ಮಾಡಿದ
ಗಣಿತ ಪಾಠ
ಕಲಿತೆ ನಾನು ಭಾನುವಾರ

ನಿನ್ನೆ ಓದಿದ
ಸೂತ್ರವಿಂದು
ದೇವರಾಣೆಗೂ ನೆನ್ಪೇಬಾರ

ಇಲ್ಲಿಗೇ ಖೈದೇನೆ
ಮುಂದಕೆ ನಾ ಓದೆನು
ಹೇಳ್ದೆ-ಕೇಳ್ದೆ
ಈಗಲೇ ನೂರು
ನಮಸ್ಕಾರ

ಲಂಚಾಗಿ ಕ್ಲಾಸಿಗ್ ಬರಲು… ಕುಂತಲ್ಲಿಯೇ ನಿದ್ರಾಜಾಲ
ಲೆಕ್ಚರು ನಾ ಕೇಳುತಿರಲು… ಬೆಂಚಲ್ಲಿಯೇ ಕಣ್ಣುಭಾರ
ನಿದಿರೆಯಾ ಮೋಡಿ ಕಾಡಲು… ಡೆಸ್ಕ್ಮೇಲೆ ತಲೆಯಭಾರ
ಕನ್ಸಲ್ಲೇ ನನಗೆ ಸುವಿಹಾರ

ಮೂಲ ಹಾಡು: ‘ಗಾಳಿಪಟ’ ಚಿತ್ರದ ‘ಮಿಂಚಾಗಿ ನೀನು ಬರಲು… ನಿಂತಲ್ಲಿಯೇ ಮಳೆಗಾಲ’

ಕೃಪೆ: kannadalyrics.com

ಮಿಂಚಾಗಿ ನೀನು ಬರಲು… ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು… ಕೂತಲ್ಲಿಯೇ ಚಳಿಗಾಲ
ವಿರಹದಾ ಬೇಗೆ ಸುಡಲು… ಎದೆಯಲ್ಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ

ಮಿಂಚಾಗಿ ನೀನು ಬರಲು… ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು… ಕೂತಲ್ಲಿಯೇ ಚಳಿಗಾಲ

ನಾ ನಿನ್ನ ಕನಸಿಗೆ
ಚಂದಾದಾರನು
ಚಂದಾ ಬಾಕಿ ನೀಡಲು
ಬಂದೇ ಬರುವೆನು

ನಾ ನೇರ ಹೃದಯದಾ
ವರದಿಗಾರನು
ನಿನ್ನಾ ಕಂಡ ಕ್ಷಣದಲೇ
ಮಾತೇ ಮರೆವೆನು

ಕ್ಷಮಿಸು ನೀ ಕಿನ್ನರಿ
ನುಡಿಸಲೇ ನಿನ್ನನು
ಹೇಳಿ ಕೇಳಿ
ಮೊದಲೇ ಚೂರು
ಪಾಪಿ ನಾನು

ಮಿಂಚಾಗಿ ನೀನು ಬರಲು… ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು… ಕೂತಲ್ಲಿಯೇ ಚಳಿಗಾಲ

ನಿನ್ನ ಮನದ
ಕವಿತೆ ಸಾಲ
ಪಡೆದ ನಾನು ಸಾಲಗಾರ

ಕನ್ನ ಕೊರೆದು
ದೋಚಿ ಕೊಂಡ
ನೆನಪುಗಳಿಗೆ ಪಾಲುದಾರ

ನನ್ನದೀ ವೇದನೆ
ನಿನಗೆ ನಾ ನೀಡೆನು
ಹೇಳಿ ಕೇಳಿ
ಮೊದಲೇ ಚೂರು
ಕಳ್ಳ ನಾನು

ಮಿಂಚಾಗಿ ನೀನು ಬರಲು… ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು… ಕೂತಲ್ಲಿಯೇ ಚಳಿಗಾಲ
ವಿರಹದಾ ಬೇಗೆ ಸುಡಲು… ಎದೆಯಲ್ಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ

ಮೊನ್ನೆ ಪತ್ರಿಕೆಯಲ್ಲಿ ಒಂದು ಸುದ್ದಿ ಇತ್ತು. ಯಾರೋ ಕಿಡಿಗೇಡಿಗಳು ರಾಜ್ ಕುಮಾರ್ ಪ್ರತಿಮೆಯನ್ನು ಭಗ್ನಗೊಳಿಸೋಕೆ ಯತ್ನಿಸಿದರು ಅಂತ. ಈ ಕೃತ್ಯದಿಂದ ಅಸಲು ಯಾರಿಗೆ ಏನು ಲಾಭ ಸಿಕ್ಕಿತೋ ಗೊತ್ತಿಲ್ಲ. ಯಾವುದೋ ಅನಾರೋಗ್ಯಕರ ಮನಸ್ಸಿನ ವಿಕೃತಾನಂದಕ್ಕಾಗೇ ನಡೆಸುವ ಇಂತಹ ಕ್ಷುಲ್ಲಕ ಕೆಲಸಗಳಿಂದ ರಾಜ್ ಕುಮಾರ್ ಅವರಂತಹ ಮಹಾನ್ ಚೇತನಕ್ಕೆ , ಅವರ ವ್ಯಕ್ತಿತ್ವದ ಘನತೆಗೆ ಮಸಿಬಳಿಯಲೆತ್ನಿಸುತ್ತೇವೆ ಅನ್ನುವ ಅವರ ಬಾಲಿಶ ತರ್ಕಕ್ಕೆ ಪಕ್ಕೆ ಹಿಡಿದು ನಗುವಂತಾಗುತ್ತದೆ.

 

ಕನ್ನಡದ ಪಾಲಿಗೆ ಡಾ| ರಾಜ್ ಒಂದು ಚೈತನ್ಯದ ಚಿಲುಮೆಯಂತಿದ್ದರು. ಅಪರೂಪದ ಶಕ್ತಿಯಾಗಿದ್ರು. ರಾಜಣ್ಣ, ಅಣ್ಣಾವ್ರು ಎಂದೆಲ್ಲಾ ಅಭಿಮಾನಿಗಳ ಗೌರವಾದರ ಪ್ರೀತಿ ಸಂಪಾದಿಸಿದ ರಾಜ್ ಕುಮಾರ್ ಭಾರತೀಯ ಚಿತ್ರರಂಗ ಕಂಡ ಬಹು ಅಪರೂಪದ ಪ್ರತಿಭೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಅಭಿನಯ , ಹಾಡುಗಳು ಅವರಿಗೆ ಎಷ್ಟು ಅಭಿಮಾನಿಗಳನ್ನು ತಂದು ಕೊಟ್ಟಿದೆಯೋ ಅದಕ್ಕಿಂತ ಒಂದು ಕೈ ಮೇಲು ಅವರ ವಿನಯ, ಸರಳತೆ ಮತ್ತು ಅವರ ಮಗುವಿನಂತಹ ಮುಗ್ಧತೆಯಿಂದ ಅವರ ಅಭಿಮಾನಿಗಳಾದವರ ಸಂಖ್ಯೆ. ಕನ್ನಡ ಜನತೆಯ ಪ್ರೀತಿ, ವಿಶ್ವಾಸಗಳು ಅದಕ್ಕಾಗಿಯೇ ಅವರನ್ನು ಆ ಎತ್ತರದ ಸ್ಥಾನದಲ್ಲಿರಿಸಿದೆ. ನಮ್ಮಿಂದ ಮರೆಯಾಗಿ ಹೋದರೂ ಸದಾ ಜನಮಾನಸದಲ್ಲಿ ರಾಜ್ ನೆನಪಾಗಿ ಬಹುಕಾಲ ಕಾಡಲಿದ್ದಾರೆ ; ಕಾಡುತ್ತಿದ್ದಾರೆ. ಅವರಲ್ಲಿದ್ದ ಶೃದ್ಧೆ, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ನಿಷ್ಪಕ್ಷಪಾತ ನಡೆ-ನುಡಿ, ಸಮಯ ಪಾಲನೆ ಕುರಿತು ಅವರಿಗಿದ್ದ ಕಟ್ಟುನಿಟ್ಟು, ಪಾತ್ರದಲ್ಲಿ ತಲ್ಲೀನವಾಗಿ ಪಾತ್ರವೇ ತಾವಾಗುತ್ತಿದ್ದ ಪರಿ, ಹಾಡಿನ ಮೂಲಕ ಮನಸ್ಸನ್ನು ತಟ್ಟುತ್ತಿದ್ದ ಪರಿ…. ರಾಜಣ್ಣಗೆ ರಾಜಣ್ಣನೇ ಸಾಟಿ. ಮುತ್ತುರಾಜ್ ಎಂಬ ಚಿಕ್ಕ ಬಾಲಕನು ರಾಜಕುಮಾರ್ ಆಗಿ ಬಂದು ಕನ್ನಡ ಜನರ ಹೃದಯ ಸಿಂಹಾಸನದ ಅನಭಿಷಿಕ್ತ ಸಾರ್ವಭೌಮನಾಗಿ ಬೆಳೆದ ಪರಿಯೇ ಅನನ್ಯ. ಕನ್ನಡದ ಬಗೆಗಿದ್ದ ಅವರ ಪ್ರೀತಿ, ಭಾಷಾ ಶುದ್ಧಿಗೆ ಅವರು ನೀಡುತ್ತಿದ್ದ ಮಹತ್ವ, ಭಾವಾಭಿವ್ಯಕ್ತಿಯಲ್ಲಿ ಅವರ ಮುಖದ ಕದಲಿಕೆಗಳು…ಇವೆಲ್ಲವನ್ನು ಯಾವತ್ತಿಗಾದರೂ ಮರೆಯಲಾದೀತೇ? ಇಂತಹ ಅನರ್ಘ್ಯ ರತ್ನ ನಮ್ಮ ಕಾಲದಲ್ಲಿ ನಮಗೆ ಸಿಕ್ಕಿದ್ದೇ ನಮ್ಮ ಅದೃಷ್ಟ. ಇಷ್ಟೆಲ್ಲಾ ಹೇಳಿದರೂ ಅವರ ಮೇರು ಸದೃಶ ವ್ಯಕ್ತಿತ್ವದ ಒಂದು ಕಣವನ್ನಷ್ಟೇ ಹೇಳಿದಂತಾಗುತ್ತದೆ.

 

ಇಂತಹ ವ್ಯಕ್ತಿತ್ವವನ್ನು ಪ್ರತಿಮೆಯೊಂದನ್ನು ಭಗ್ನಗೊಳಿಸುವ ಮೂಲಕ ಅವಮಾನಿಸಲೆತ್ನಿಸುವವರು ಯಾವ ಸೀಮೆಯ ಮೂರ್ಖರೋ ಅರ್ಥವಾಗುತ್ತಿಲ್ಲ. ಈ ರೀತಿಯ ಕ್ರಿಮಿಗಳೇ ಇಂದು ಭಾಷೆ, ಜಾತಿಯ ಮೂಲಕ ಜನರನ್ನು ಒಡೆಯಲು ಯತ್ನಿಸುತ್ತಿರುವುದು. ರಾಜಣ್ಣನ ವ್ಯಕ್ತಿತ್ವದ ಪರಿಧಿ ಇಂತಹ ಎಲ್ಲಾ ಗಡಿಗಳ ಪರಿಧಿಯನ್ನು ಮೀರಿ ಬೆಳೆದಿದೆ. ಆ ಮಹತ್ತನ್ನು ಅವಮಾನಿಸಿದರೆ ನಮ್ಮನ್ನು ನಾವೇ ಅವಮಾನಿಸಿಕೊಂಡಂತೆ ಅನ್ನುವುದು ಇವರಿಗ್ಯಾಕೆ ಅರ್ಥವಾಗೋಲ್ಲವೋ? 

ಇಂಥಾ ನೂರಲ್ಲ ಸಾವಿರ ಪ್ರಯತ್ನ ಮಾಡಿದರೂ ರಾಜ್ ಘನತೆಯ ಕೂದಲು ಕೊಂಕಿಸಲೂ ಇವರಿಗಾಗದು. ಇದಕ್ಕೆ ಪ್ರತಿಕ್ರಿಯೆ ನೀಡುವುದು , ಪ್ರತಿಭಟನೆ ಮಾಡುವುದು ಕೂಡಾ ಇಂತಹ ಅವಿವೇಕಿಗಳಿಗೆ ಮತ್ತೆ ಮತ್ತೆ ಈ ರೀತಿಯ ಕೃತ್ಯಕ್ಕೆ ಪ್ರಚೋದಿಸಬಹುದು. ರಾಜ್ ಎಂಬ ಚೈತನ್ಯದ ನವಿರಾದ ನೆನಪುಗಳು ನಮ್ಮೆಲ್ಲರ ಮನದಲ್ಲಿ ಪುತ್ಠಳಿಯಾಗಿ ಭದ್ರವಾಗಿ ನೆಲೆಯೂರಿರುವಾಗ, ಕಲ್ಲು ಪ್ರತಿಮೆಗೆ ಹಾನಿ ಮಾಡಿ ಅವರಿಗೆ ವಿಕೃತಾನಂದ ಸಿಗೋದಾದ್ರೆ ಹಾಗೇ ಮಾಡಿಕೊಂಡು ಹಾಳಾಗಿಹೋಗಲಿ ಬಿಡಿ. ನಮ್ಮ ಮನಸ್ಸಿನಲ್ಲಿನ ರಾಜ್ ಪ್ರತಿಮೆ … ಅಯ್ಯೋ..ಹುಚ್ಚಪ್ಪಾ.. ನಾನು ಅಲ್ಲಿಲ್ಲ ಕಣೋ.. ಇಲ್ಲಿದಿನಿ.. ಅಭಿಮಾನಿ ದೇವರುಗಳ ಹೃದಯಸಿಂಹಾಸನದಲ್ಲಿ ನೀವೆಂದೂ ಹಾನಿ ಮಾಡದಷ್ಟು ಸುರಕ್ಷಿತವಾಗಿ.. ಎಂದು ಸದಾ ನಗುತ್ತಿರಲಿ.

ಕುಂದಾಪ್ರ ಕನ್ನಡದಗೆ ಒಂದು ಬ್ಲಾಗ್ ಮಾಡ್ಕ್ ಮಾಡ್ಕ್ ಅಂದೇಳಿ ಸುಮಾರ್ ದಿವ್ಸದಿಂದ ಎಣ್ಸಕಂಡಿದ್ದೆ. ಅದನ್ನ್ ಇವತ್ ಶುರು ಮಾಡಿದೆ…ಒಂದ್ಸಲ ಕಾಣಿ ಬನ್ನಿ

http://kundaaprakannada.wordpress.com

ಮಲೆನಾಡು ಅಂದಾಕ್ಷಣ ಮನಸು ಗೊತ್ತಿಲ್ಲದಂತೆ ಅರಳಿ ನಿಲ್ಲುತ್ತೆ. ನಾಸ್ಟಾಲ್ಜಿಯಾನೋ, ಪ್ರಕೃತಿಯ ಮಡಿಲಿನ ಆಹ್ಲಾದದ ನೆನಪೋ, ಇಲ್ಲಾ ಎಲ್ಲರಿಗೂ ಇರುವಂತೆ ನಮ್ಮ ನಮ್ಮ ಊರಿನ ಕುರಿತು ಇರುವ ವಿಚಿತ್ರ ವಿಶಿಷ್ಟ ಎಳೆತ ಸೆಳೆತಗಳೋ…ಒಟ್ಟಿನಲ್ಲಿ ಮಲೆನಾಡು ಶಬ್ದ ಕಿವಿ ತಮ್ಮಟೆಯ ಮೇಲೆ ಜೇನು ಸುರಿದಂತಾ ಅನುಭವ ಕೊಡೋದು ಸುಳ್ಳಲ್ಲ. ನಾ ಏನೇ ವರ್ಣಿಸಿದರೂ ಆ ಅನುಭೂತಿ ಎಲ್ಲ ಉಪಮೆ, ಸಾಮತಿ, ದೃಷ್ಟಾಂತಗಳ ಎಲ್ಲೆ ಮೀರಿದ್ದೆನ್ನುವುದಂತೂ ಸತ್ಯ. ಇಂತಹ ಮನಸಿನ ಕೈಗೇನಾದ್ರೂ ಕುವೆಂಪು ಕಾದಂಬರಿಗಳು ಸಿಕ್ಕಿದ್ರೆ ಹಬ್ಬದ ಹೋಳಿಗೆ-ತುಪ್ಪ ಇದರ ಮುಂದೆ ಯಾವ ಲೆಕ್ಕ? ( ಮತ್ತೆ ಉಪಮೆ ಬಂತು ಕ್ಷಮೆಯಿರಲಿ J)

 

ಕುವೆಂಪುರವರ 2 ಕಾದಂಬರಿಗಳು – ಕಾನೂರು ಹೆಗ್ಗಡತಿ ಹಾಗು ಮಲೆಗಳಲ್ಲಿ ಮದುಮಗಳು ಎರಡೂ ಕೂಡಾ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು. ಇದು ಕಥೆ ಕಾದಂಬರಿ ಅನ್ನುವುದಕ್ಕಿಂತ ಹೆಚ್ಚಾಗಿ ಮಲೆನಾಡಿನ ಸಹಜ ಸುಂದರ ಬದುಕನ್ನು  ಕಣ್ಮುಂದೆ ಬಿಡಿಸಿಡುವ ಸುಂದರ ಚಿತ್ರಗಳ ಅಕ್ಷರರೂಪ ಅಂತ ನನಗನ್ನಿಸಿದೆ. ಕುವೆಂಪುರವರೇ ತಮ್ಮ ಅರಿಕೆಯಲ್ಲಿ ಹೇಳಿಕೊಂಡಂತೆ, ಇದನ್ನು ಬರಿಯ ಕಥೆಯ ಕುತೂಹಲಕ್ಕಾಗಿ ಓದದೆ, ಕಥೆಯ ಮೂಲಕ ತೆರೆದುಕೊಳ್ಳುವ ಮಲೆನಾಡಿನ ಜೀವಂತ ಪರಿಸರದಲ್ಲಿ ಒಮ್ಮೆ ನಡೆದಾಡಿ ಬಂದು ಬಿಡಿ. ಆಗ ಸಿಗುವ ಖುಷಿ ಬರೀ ಕಥೆಯನ್ನು ಕೇಂದ್ರವಾಗಿರಿಸಿಕೊಂಡು ಓದುವ ಓದಿನ ನೂರ್ಮಡಿಯಷ್ಟಾಗುವುದರಲ್ಲಿ ಅನುಮಾನವೇ ಇಲ್ಲ.

 

ಕಾನೂರು ಹೆಗ್ಗಡತಿಯ ಪುಟ ತೆರೆದಂತೆಲ್ಲಾ ಪದರ ಪದರವಾಗಿ ಮಲೆನಾಡಿನ ಬದುಕು ಅನಾವರಣಗೊಳ್ಳುತ್ತಾ ಹೋಗುತ್ತದೆ. ಮೀನುಷಿಕಾರಿ, ದೆಯ್ಯದ ಹರಕೆ, ಕಾಡು ಹಂದಿಯ ಬೇಟೆ, ಜಾತಿ ವ್ಯವಸ್ಥೆ, ಮಂತ್ರಿಸಿದ ತೆಂಗಿನಕಾಯಿಯ ಮಹಿಮೆ, ಕೋಳಿಯಂಕ, ಪಾಲು ಪಂಚಾಯ್ತಿ, ಕಳ್ಳಂಗಡಿ, ಹೋತದ ಬಲಿ… ಹೀಗೆ ಮಲೆನಾಡಿನ ಸಹಜ ಜೀವನದಲ್ಲಿ ಮಿಳಿತವಾಗಿರುವ ಸಂಗತಿಗಳು ಘಟಿಸುತ್ತಾ ಹೋಗುತ್ತದೆ ( ಕುವೆಂಪು ಅವರ ಕಾಲದ ಮಾತು ಬಿಡಿ. ಈಗ ಈ ಚಿತ್ರಣ ಬಹುತೇಕ ನಿಧಾನವಾಗಿ ಮರೆಯಾಗುತ್ತಾ ಬಂದಿದೆ… ಕುವೆಂಪುರವರ ವಿಶ್ವಮಾನವನಾಗು ಅನ್ನೋ ವಿಶ್ ಅನ್ನು ಅನುಸರಿಸುವ ಬದಲು ಜಾಗತೀಕರಣಕ್ಕೆ ಬಲಿಯಾಗಿ, ಅನುಕರಿಸುವ ಹಪಹಪಿಯ ದೆಸೆಯಿಂದ ಎಲ್ಲಾ ವೈವಿಧ್ಯಗಳನ್ನು ನಿಧಾನಕ್ಕೆ ಮರೆಯಾಗುತ್ತಿವೆ. ಮಲೆನಾಡು ಕೂಡಾ ಬದಲಾಗುತ್ತಿದೆ. ಆ ಕುರಿತ ವಾದ-ಪ್ರತಿವಾದದ ಮಾತು ಒತ್ತಟ್ಟಿಗಿರಲಿ)

 

ಹೂವಯ್ಯನ ಭಾವುಕ ಜಗತ್ತಿನ ಉದಾತ್ತ ಭಾವಗಳು, ಅವನ ಚಿಕ್ಕಪ್ಪಯ್ಯ ಚಂದ್ರಯ್ಯ ಗೌಡರ ದರ್ಬಾರು-ದರ್ಪ, ಅವರ ಮಗ ರಾಮಯ್ಯನ ದ್ವಂದ್ವ, ಹೂವಯ್ಯನ ಅಮ್ಮ ನಾಗಮ್ಮನ ವರಾತ, ಸೀತೆಯ ಮುಗ್ಧತೆ, ಓಬಯ್ಯನ ಬೋಳೇತನ, ಅಣ್ಣಯ್ಯ ಗೌಡರ ಅಧ್ವಾನ, ಪುಟ್ಟಣ್ಣ, ಬೇಲರ ಬೈರ, ಅವನ ಮಗ ಗಂಗ ಹುಡುಗ, ಹಳೇಪೈಕದ ತಿಮ್ಮ, ಘಟ್ಟದ ಕೆಳಗಿನ ಸೇರಿಗಾರರ ಕಾರುಬಾರು, ಅವರು ಹಾರಿಸಿಕೊಂಡು ಬಂದ ಗಂಗಿಯ ಹಾದರ…ಹೀಗೆ ಇವೆಲ್ಲದರ ಸುತ್ತ ಹೆಣೆದ ಘಟನಾವಳಿಯಲ್ಲಿ ಚಂದ್ರಯ್ಯಗೌಡರ ಮೂರನೇ ಹೆಂಡತಿಯಾಗಿ ಬರುವವಳೇ ನೆಲ್ಲುಹಳ್ಳಿಯ ಸುಬ್ಬಿ ಯಾನೆ ಸುಬ್ಬಮ್ಮ ಹೆಗ್ಗಡತಿ.

 

ಈ ಕಥೆಯಲ್ಲಿ ಹೂವಯ್ಯನೇ ಕಥಾನಾಯಕನ ಹಾಗೆ ಕಂಡರೂ ಕೂಡಾ ವಾಸ್ತವದಲ್ಲಿ ಇಲ್ಲಿ ಎಲ್ಲಾ ಪಾತ್ರಗಳು ತಮ್ಮದೇ ಆದ ಮಹತ್ತನ್ನು ಹೊಂದಿವೆ. ಕಾದಂಬರಿಯ ಹೆಸರು ಕಾನೂರು ಹೆಗ್ಗಡತಿ ಅಂತ ಇದ್ದರೂ ಕೂಡಾ ಇದು ಬರೀ ಸುಬ್ಬಮ್ಮನ ಕಥೆ ಮಾತ್ರವಷ್ಟೇ ಅಲ್ಲ; ಅಮಾಯಕತೆಗೆ ಕ್ಷುದ್ರತೆಯ ಲೇಪವಿದ್ದುಬಿಟ್ಟರೆ ಅದಕ್ಕೆ ಸರಿಯಾದ ಅಕಾರದ ದರ್ಪ ಸಿಕ್ಕಿಬಿಟ್ಟರೆ ಮಂಗನಿಗೆ ಕಳ್ಳು ಕುಡಿಸಿದಷ್ಟೇ ಅನಾಹುತಕಾರಿಯಾಗಬಲ್ಲುದು ಅನ್ನುವುದರ ದ್ಯೋತಕವಾಗಿ ಕಥೆಯಲ್ಲಿ ಸುಬ್ಬಮ್ಮನ ಪಾತ್ರವಿದೆ.

 

ಸ್ಟೂಲವಾಗಿ ಕಥೆಯ ಹಂದರ ಹೇಳುವುದಾದರೆ , ಸೀತೆ ಹೂವಯ್ಯನ ನಡುವೆ ಅಂಕುರಿಸುವ ನಿಷ್ಕಲ್ಮಷ ಪ್ರೇಮ, ದೊಡ್ಡವರ ಸಣ್ಣತನಗಳಿಂದಾಗಿ ಅದು ಮುದುಡಿಹೋಗಿ ಆಕೆ ಅವನ ತಮ್ಮ ರಾಮಯ್ಯನ ಕೈಹಿಡಿಯಬೇಕಾಗಿ ಬರುತ್ತದೆ. ಚಂದ್ರಯ್ಯ ಗೌಡರ ಮೂರನೆ ಹೆಂಡತಿಯಾಗಿ ಬರುವ ನೆಲ್ಲುಹಳ್ಳಿಯ ಪೆದ್ದೇಗೌಡನ ಮಗಳು ಸುಬ್ಬಿ ಹೂವಯ್ಯನ ಸಮವಯಸ್ಕಳು. ಈ ಕಾರಣಕ್ಕೆ ಹೂವಯ್ಯ ಸುಬ್ಬಮ್ಮರ ನಡುವೆ ಸಂಬಂಧ ಕಲ್ಪಿಸುತ್ತದೆ ಗೌಡರ ಕಾಮಾಲೆ ಕಣ್ಣು. ಈ ಕಾರಣದಿಂದಾಗಿ ಅಲ್ಲದೆ ಅವರ ದರ್ಪ ದಬ್ಬಾಳಿಕೆಗೆ ರೋಸಿಹೋಗಿ ಕಾನೂರು ಮನೆ ತೊರೆಯುವ ಹೂವಯ್ಯ, ಉದಾತ್ತತೆಯ ಮೇಲಿನ ಒಲವು-ಅಪ್ಪಯ್ಯನ ಅಬ್ಬರದ ಮಧ್ಯೆ ಸಿಲುಕಿದಂತಾಗಿ ನಲುಗಿ ಮನೋವಿಕಾರದ ಸ್ಥಿತಿಗೆ ತಲುಪಿ ಆತ್ಮಹತ್ಯೆ ಮಾಡಿಕೊಳ್ಳುವ ರಾಮಯ್ಯ, ಚಂದ್ರೇಗೌಡರ ದೌರ್ಜನ್ಯಕ್ಕೆ ನೆಲ್ಲುಹಳ್ಳಿಗೆ ಒಡವೇ ಗಂಟಿನೊಂದಿಗೆ ಓಡಿಹೋಗುವ ಸುಬ್ಬಮ್ಮ, ಇವೆಲ್ಲದರ ನಡುವೆ ಸಿಕ್ಕಿ ತೊಳಲಾಡುವ ಸೀತೆಯ ಗೋಳು… ಹೀಗೆ ಸಾಗುವ ಕಥೆ ಚಂದ್ರೇಗೌಡರ ಅವಸಾನದೊಂದಿಗೆ ಸುಬ್ಬಮ್ಮನ ದರ್ಬಾರಿಗೆ ನಾಂದಿ ಹಾಡುತ್ತದೆ. ಅಂತ್ಯದಲ್ಲಿ ಸೇರಿಗಾರರೊಂದಿಗೆ ಗುಟ್ಟಾದ ಪ್ರಣಯಲೀಲೆ ನಡೆಸುವ ಸುಬ್ಬಮ್ಮ ಕದ್ದು ಬಸಿರಾಗಿ ಕೊನೆಗೆ ಗರ್ಭಪಾತವಾಗಿ ಸಾಯುವುದರಲ್ಲಿ ಪರ್ಯಾವಸಾನಗೊಳ್ಳುತ್ತದೆ.

 

ಈ ಕಥೆಯಲ್ಲಿ ನಡುನಡುವೆ ಮಲೆನಾಡಿನ ವೈವಿಧ್ಯ, ಸೊಗಡು ಸೊಬಗನ್ನು ತೆರೆದಿಡುವ ಅನೇಕ ಸ್ವಾರಸ್ಯಕರ ಉಪಕಥೆಗಳು ಬರುತ್ತವೆ. ಬಾಡುಗಳ್ಳ ಸೋಮ ಗೊಬ್ಬರದ ಗುಂಡಿಗೆ ಬಿದ್ದ ಕಥೆ, ಅವನ ಬಾಡಿನಾಸೆಯಿಂದಾಗಿ ಉಸಿರು ಕಟ್ಟಿ ಒದ್ದಾಡಿದ ಪ್ರಸಂಗ, ಕಳ್ಳಿನ ಮರಕ್ಕೆ ನಾಮ ಹಾಕುವ ಮಾರ್ಕನಿಗೆ ಬೈರ ಕೈ ಕೊಡುವ ಘಟನೆ, ಕಳ್ಳಂಗಡಿ ಸಾಲಕ್ಕಾಗಿ ಹಳೆಪೈಕದ ತಿಮ್ಮನ ಕೋಳಿಹುಂಜ ಕದ್ದು ಸಿಕ್ಕಿ ಬೀಳುವ ಸೋಮ, ಕಿಲಿಸ್ತರ( ಕ್ರಿಶ್ಚಿಯನ್) ಜಾಕಿ ಮತ್ತು ಟೈಗರ್ ನಾಯಿಯ ಜಟಾಪಟಿ, ಸುಬ್ಬಮ್ಮ ಮತ್ತು ಗಂಗೆಯರ ನಡುವಿನ ಕುಸ್ತಿ, ಕೋಳಿಯಂಕದಲ್ಲಿನ ಕಾಳಗ, ಓಬಯ್ಯನ ಭೂತಚೇಷ್ಟೆ ಮತ್ತು ೧೦೦ ರೂಪಾಯಿಯ ತುಂಡಾದ ನೋಟಿನ ಪ್ರಸಂಗ.. ಹೀಗೆ ಕುವೆಂಪು ಅವರ ಹಾಸ್ಯಪ್ರಜ್ಞೆಯಿಂದಾಗಿ ಅವರು ನೀಡುತ್ತಾ ಹೋಗುವ ಘಟನೆಗಳು ಓದಲು ಬಲು ಮಜವಾಗಿದೆ.

ಹೀಗೆ ಕಥೆಯ ಜಾಡಿನೊಂದಿಗೆ ಮಲೆನಾಡಿನ ನಿತ್ಯವ್ಯಾಪಾರಗಳು, ಪ್ರಕೃತಿ ಸೌಂದರ್ಯದ ಸೊಬಗನ್ನು ಸವಿಯುವ ಇಚ್ಛೆಯಿದ್ದಲ್ಲಿ ಈ ಬೃಹತ್ ಕಾದಂಬರಿ ಕೈಗೆತ್ತಿಕೊಳ್ಳಿಮಲೆನಾಡಿನಲ್ಲಿ ಒಂದು ಸುತ್ತು ತಿರುಗಿ ಬನ್ನಿ. ಮುಂದೆ ಎಂದಾದರೂ ಮಲೆಗಳಲ್ಲಿ ಮದುಮಗಳ ನ್ನು ಮಾತಾಡಿಸೋಣ

 

 

ಮೊನ್ನೆ ಎಂದಿನಂತೆ ನನ್ನ ಅಚ್ಚುಮೆಚ್ಚಿನ ಪುಸ್ತಕ ಮಳಿಗೆಗೆ ಗಾಂಧಿಬಜಾರಿನ ಅಂಕಿತ ಪುಸ್ತಕ ಮಳಿಗೆಗೆ ಹೋಗಿದ್ದೆ – ವಾರಾಂತ್ಯದ ಖರ್ಚಿಗೆ ಏನಾದ್ರೂ ಬೇಕಲ್ಲ ಓದೋಕೆ ಅಂತ. ಹೊಸ- ಹಳೆ ಪುಸ್ತಕಗಳ ಮೇಲೆಲ್ಲ ಒಂದ್ಸಲ ಕಣ್ಣುಹಾಯಿಸಿ ೨-೩ ಪುಸ್ತಕವನ್ನು ಪ್ರೀತಿಯಿಂದ ಕೈಗೆತ್ತಿಕೊಂಡೆ. ಪುಸ್ತಕದ ಹಣ ಕೊಟ್ಟು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವ್ರು ಕೇಳಿದ್ರು… ತೇಜಸ್ವಿಯವರ ಹೊಸ ಪುಸ್ತಕ ಬಂದಿದೆ ನೋಡಲಿಲ್ವ? ಅರೆ ಏನು ಹೇಳ್ತಾ ಇದ್ದಾರೆ ಇವ್ರು ಅಂಬಂತೆ ಇಡೀ ಮುಖವನ್ನೇ ಪ್ರಶ್ನೆ ಮಾಡಿಕೊಂಡು ನಿಂತೆ. ಅವ್ರು ನಗುನಗುತ್ತಾ ಪುಸ್ತಕ ಕೈಗಿಟ್ಟರು. ಹೌದು ಅನುಮಾನವೇ ಇಲ್ಲ. ತನ್ನ ವಿಶಿಷ್ಟ ವಿನ್ಯಾಸದಿಂದಲೇ ಮನ ಸೆಳೆಯುವ ಪುಸ್ತಕ ಪ್ರಕಾಶನದ ಪುಸ್ತಕ. ಹೆಸರು ಪಾಕ ಕ್ರಾಂತಿ ಮತ್ತು ಇತರ ಕತೆಗಳು. ಪುಟ ತೆರೆದಂತೆ ನನ್ನ ಸಂಶಯಗಳೆಲ್ಲ ಮರೆಯಾಯ್ತು. ಅದು ತೇಜಸ್ವಿಯವರ ನೆನಪಿನಲ್ಲಿ ಹೊರಬಂದ ಅವರ ಹಳೆಯ ಬರಹಗಳ ಸಂಗ್ರಹ. (ಅರೆ, ತೇಜಸ್ವಿ ಮರೆಯಾಗಿ ಆಗಲೇ ಒಂದು ವರ್ಷ ಆಯ್ತೆ!) ವಿವಿಧ ಪತ್ರಿಕೆಗಳಲ್ಲಿ ಅಚ್ಚಾದ ಆದರೆ ಪುಸ್ತಕ ರೂಪದಲ್ಲಿ ಬಾರದಿರುವ ಕಥೆ, ಲಲಿತ ಪ್ರಬಂಧ, ಲೇಖನಗಳು ಹೀಗೆ ಯಾವ ಹೆಸರಿಟ್ಟರೂ ಒಪ್ಪಿಕೊಳ್ಳಬಹುದಾದ ಬರಹಗಳ ಸಂಗ್ರಹ.

 

ತೇಜಸ್ವಿಯವರ ಬರಹಗಳು ಅಂದ್ರೆ ಹಾಗೆ. ಹೇಳಬೇಕಾದುದನ್ನು ಆಪ್ತವಾಗುವ ಹಾಗೆ ಹಾಸ್ಯದ ಎಳೆಯೊಂದು ಬರಹದುದ್ದಕ್ಕೂ ಹರಿಸುತ್ತ ಓದುಗರನ್ನು ತಮ್ಮ ಮಾಯಾಲೋಕದೆಳೊಗೆ ಎಳೆದೊಯ್ಯುವ ಪರಿಯೇ ಅವರ ಬರಹ ನಂಗೆ ಇಷ್ಟವಾಗಲು ಕಾರಣ. ಉದಾಹರಣೆ ಬೇಕಿದ್ರೆ ಈ ಪುಸ್ತಕದಲ್ಲಿರುವ ಪಾಕಕ್ರಾಂತಿ ಬರಹವನ್ನು ಓದಿ ನೋಡಿ. ಪಾಕಶಾಸ್ತ್ರದ ಪ್ರಯೋಗಗಳನ್ನು ಮಾಡುವ ಕಥೆ ಹೇಳುತ್ತ, ಇವರ ಪಾಕ ಪ್ರಯೋಗಕ್ಕೆ ಹೆದರಿದ ನಾಯಿ ಅನ್ನದ ತಟ್ಟೆ ಕಂಡ ಕೂಡಲೆ ಭಯೋತ್ಪಾದಕರನ್ನು ಕಂಡಷ್ಟೇ ವೇಗವಾಗಿ ಕಾಲಿಗೆ ಬುದ್ದಿ ಹೇಳುವ ಪ್ರಸಂಗ, ಹೇಗಾದರೂ ಮಾಡಿ ನಾಯಿ ತಿನ್ನುವಂತೆ ಮಾಡುವ ಪ್ರಯತ್ನದಲ್ಲಿ ಒಣಮೀನು ತಂದು ಪಡುವ ಪಚೀ(ಜೀ)ತಿ, ಸ್ನೇಹಿತನ ಸಲಹೆಯಂತೆ ಕುಕ್ಕರ್‌ನಲ್ಲಿ ಅಡುಗೆ ಮಾಡೋದು ನೀರು ಕುಡಿದಷ್ಟೇ ಸುಲಭ ಅಂತ ಹೋಗಿ ಅದು ಒಂದಕ್ಕೆರಡಾಗಿ ಸ್ಫೋಟವಾಗಿ ಪೋಲಿಸರು ಬಾಂಬು ತಯಾರಿ ನಡೀತಿದೆ ಅನ್ನೋ ಅನುಮಾನದಲ್ಲಿ ತಪಾಸಣೆಗೆ ಹೋಗಿ ಅಲ್ಲಿ ಜಾರಿ ಬೀಳುವಲ್ಲಿಗೆ ಪರ್ಯಾವಸಾನಗೊಳ್ಳುವ ಈ ಕಥಾನಕದ ಮಜ ಓದಿಯೇ ತಿಳಿಯಬೇಕು…ತೇಜಸ್ವಿಯವರಿಗೇ ಮೀಸಲಾದ ಅವರದ ಆದ ಬರಹದ ಶೈಲಿಯಲ್ಲಿ. ಇದಲ್ಲದೆ ಇನ್ನು ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ವಿವಿಧ ಬರಹಗಳ ಸಂಗ್ರಹವಿದೆ. ಒಮ್ಮೆ ಓದಿ ನೋಡಿ.

 

ತೇಜಸ್ವಿಯವರ ಮಿಕ್ಕ ಪುಸ್ತಕಗಳ ಬಗ್ಗೆ ಇನ್ಯಾವತ್ತಾದ್ರೂ ಬರೆದೇನು.

 

ಪಾಕ ಕ್ರಾಂತಿ ಮತ್ತು ಇತರ ಕತೆಗಳು

ಬೆಲೆ           ೬೦ ರೂಪಾಯಿಗಳು

ಪ್ರಕಾಶನ       – ಪುಸ್ತಕ ಪ್ರಕಾಶನ ಮೂಡಿಗೆರೆ

ಲೇಖಕರು      – ಕೆ.ಪೂಚಂತೆ