Posts Tagged ‘kavite’

ಕಣಮಾತ್ರವಾಗಿರುವ
ಕನಸಿನ ಕಿಡಿಯೊಂದು
ಕೈಯಿರದ ಕಾಲಿರದ
ಕಲ್ಪನೆಯಲಿ ಕುಡಿಯೊಡೆದು
ಕವಲಾಗುವುದ ಕಂಡು
ಕುಹಕವಾಡಿದವರೇ

ಕತ್ತಲೆ ಕೋಣೆಯ ಕೂಪದಲಿ
ಕಲಾವಿದನ ಕ್ಯಾನ್ವಾಸಿನಲಿ
ಕುಳಿತಿರುವ ಕರಿಚುಕ್ಕಿಯೇ
ಕುಂಚದಲರಳಿ ಕಲಾಕೃತಿಯಾಗಿ
ಕಳೆಗಟ್ಟುವುದ ಕಂಡು
ಕೌತುಕದಿ ಕಣ್ಣರಳಿಸಿದರು !

ಕಲೆಯಿರಲಿ… ಕಲ್ಪನೆಯಿರಲಿ
ಕಸುವಿರುವುದು
ಕಾಣುವ ಕಣ್ಣುಗಳ ಕುತೂಹಲದಲಷ್ಟೇ
ಕಾಪಿಡಬೇಕಿರುವುದು
ಕನಸಿನ ಕುಡಿಯೊಂದನಷ್ಟೇ
ಕವಿದಿರುವ
ಕತ್ತಲಳಿದು ಕಿರಣವಾಗಲು ಕಾಯಬೇಕಷ್ಟೇ !!

ನಿನ್ನಾಗಮನ
ನನಗರಿವಿರದೇ ಆಯ್ತು
ಸುಳಿವು
ಗೊತ್ತೇ ಆಗದಂತೆ

ನನ್ನ ಮನವ
ಸೆಳೆದಿಟ್ಟುಕೊಂಡಿದ್ದೂ ಆಯ್ತು
ಒಲವು
ಗುಪ್ತ ಗಾಮಿಯಂತೆ

ನಿಷ್ಕ್ರಮಣವು
ಮಹಾಪ್ರಸ್ಥಾನವೇ ಆಯ್ತು
ಹರಿವು
ದಿಕ್ಕು ಬದಲಿಸಿದಂತೆ

ನನ್ನ ಬದುಕ
ದಿಕ್ಕೇ-ಬದಲಾಗಿ ಹೋಯ್ತು
ನೆರೆದ
ಆಪ್ತ ನೆನಪ ಸಂತೆ

ಇಂದೂ ನಾನಿರುವೆ
ಇದ್ದೂ ಇರದ ನೆರಳಂತೆ
ಸ್ಮೃತಿಯಲಿ
ಸಂಗತ ಭೂತದ
ಪಳೆಯುಳಿಕೆಯಾಗಿ

ಮುಂದೂ ನೀನಿರುವೆ
ಮಾಯಲಾರದ ಗಾಯದಂತೆ
ವಿಸ್ಮೃತಿಯಲಿ
ಅಸಂಗತ ಭವಿಷ್ಯದ
ಕನವರಿಕೆಯಾಗಿ…ನೆನವರಿಕೆಯಾಗಿ

‘ನ’ ಮತ್ತು ‘ದ’ ಅಕ್ಷರಗಳ ಕಾಗುಣಿತ …. ಹೀಗೊಂದು ಕವನವಲ್ಲದ ಕವಿತಾ…

ನಾ ನಿನ್ನೆ… ನಿನ್ನ ನೆನೆದೆ….
ನೀನಾದೆ ನನ್ನೆದೆ ದನಿ…..
ನನ್ನ ನಾದ….
ದಿನಾ ನಿನ್ನದೇ ನಿನಾದ…

ನೀನೇನಾದೆ…ನನ್ನ ನೆನೆ-ನೆನೆದು…..?
ನಿನ್ನದೂ ನಂದೇ ನಾದ?

ನನ್ನೆದೆ ನಂದನದಿ
ನೀನೊಂದು ನದಿ….
ನದಿ ನೀನಾದೆ….
ನಾನೇನಾದೇ….

ನದಿ ದನಿ…ನಾನಾದೆ…
ನಾನೇ ನಾನಾದೆ…. 🙂

ಮುಗಿವೆ ನಾ ಕೈಯನು 

ಮರುಕಳಿಸದಿರು ಮತ್ತೆ

ಮುಂದಿನ ಜನುಮದಲಿ

ನೆನಪಾಗಿ ಕಾಡಲು

————————

ಕಣ್ಣಂಚಿನ ತೇವ ಆರಿ ಹೋದೀತು

ಇಂದಲ್ಲಾ ನಾಳೆ

ಎದೆಯೊಳಗಿನ ಗಾಯಕ್ಕೆ

ಮದ್ದು ಗೊತ್ತಿದ್ದರೆ ಹೇಳೆ

—————————-

ಮನಸಿನ ಮುನಿಸೊಂದು ಮರಳುಗೂಡು

ಮನ್ನಿಸಿ ಮುನಿಸನ್ನು ಮರೆತುಬಿಡು

ಮನಸಾಗಿದೆ ಮಳೆಯಿಲ್ಲದ ಮರಳುಗಾಡು

ಮುಗುಳ್ನಗೆಯ ಮುಖಹೊತ್ತು ಮರಳಿಬಿಡು

——————————–

ನಿನ್ನ ಪ್ರೇಮ ಯಾಚಿಸಿ ನಾ

ಅದೆಷ್ಟು ಪೋಸ್ಸ್ಟ್ ಮಾಡಿದೆ

ಫೋನ್ ಮಾಡಿದೆ

ನಿನ್ನ ಉತ್ತರವನ್ನೇಕೆ ಗೆಳತಿ

ನೀ ಪೋಸ್ಟ್ ಫೋನ್ ಮಾಡಿದೆ

ನಿನ್ನೆಯ ನವಿರು ನೆನವಿರಿಕೆ
ಕಾಣದ ಕನಸಿನ ಕನವರಿಕೆ
ಬತ್ತದ ಭಾವಗಳ ಬಾಯಾರಿಕೆ
ಮನಸಿನ ಮರದೆಲೆಗಳ ಮರ್ಮರಕೆ

ಕಂಗಳ ಕೊಳದೊಳಗೆ…
ಹನಿಗಳ ಹಳಹಳಿಕೆ…
ಪದಗಳಾಗಿವೆ …ಪಾಪ ಪಳೆಯುಳಿಕೆ… !!

————————————

ನೀ ಬರದೆ ಹೋದ ಹಾದಿಯಲಿ
ನಿನ್ನ ಹೆಜ್ಜೆ ಗುರುತು ಅರಸುತ್ತಾ
ಗೆಜ್ಜೆ ದನಿಗೆ ಕಿವಿಯಾಗುವಾಸೆ

ನೀ ಬರೆಯದೇ ಹೋದ ಸಾಲಿನಲ್ಲಿ
ನಿನ್ನ ಎದೆಯ ಮಿಡಿತ ಹುಡುಕುತ್ತಾ
ಕಣ್ಣ ಹನಿಗೆ ಕವಿಯಾಗುವಾಸೆ !!