Posts Tagged ‘ravi belagere’

ಓ ಮನಸೇ ನೀ ಯಾಕೆ ಮಾತಾಡ್ತಿಲ್ಲ….??

ನೀನು ಮಾತು ನಿಲ್ಲಿಸಿ ಎಷ್ಟು ಕಾಲ ಆಯ್ತು? ತಿಂಗಳುಗಳು ಉರುಳಿ ಹೋಗ್ತಾ ಇವೆ. ನಿನ್ನ ಸದ್ದೂ ಇಲ್ಲ ಸುದ್ದಿಯೂ ಇಲ್ಲ. ಯಾಕೆ ಮೂಕವಾದೆ ಓ ಮನಸೇ.ನೀ ಹೀಗೇಕೆ ಮರೆಯಾದೆ? ಹೀಗೇಕೆ ಮುನಿಸಿಕೊಂಡು ಕುಂತು ಬಿಟ್ಟಿದ್ದೀಯ? ಮೊದಲೆಲ್ಲ ನೀನು ಎರಡು ವಾರಕ್ಕೊಮ್ಮೆ ಮಾತಾಡ್ತಾ ಇದ್ದೆ. ಆಮೇಲಾಮೇಲೆ ತಿಂಗಳಿಗೊಂದ್ಸಲ ಮಾತಾಡ್ತಿದ್ದೆ. ಅದ್ರೂ ನಮ್ಮ ಮನಸು ಅಲ್ವಾ ಪರ್ವಾಗಿಲ್ಲ ಬಿಡಿ ಅಂತ ಸುಮ್ಮನಿದ್ರೆ…ನೀ ಹಿಂಗೆ ಮಾಡಬಹುದಾ? ನಿನ್ನ ಪಿಸುಮಾತುಗಳಿಗೆ ಕಿವಿಯಾಗಲು ನಾವೇನೋ ತುದಿಗಾಲಲ್ಲಿ ನಿಂತಿದ್ದೀವಿ. ಅದ್ರೆ ನಿಂದೇ ತಕರಾರು. ಹಿಂದೊಮ್ಮೆ ನೀ ಹಿಂಗೇ ಮೌನವಾದಾಗ ಹತ್ರತ್ರ ವರ್ಷದವರೆಗೆ ಮಾತೇ ಆಡ್ಲಿಲ್ಲ. ಆಗ ಎಷ್ಟು ಬೇಜಾರು ಆಯ್ತು ಗೊತ್ತಾ? ಎಂದು ನಿನ್ನನ್ನು ಕಂಡೆನೋ ಯಾವಾಗ ನಿನ್ನ ಮಾತು ಕೇಳೋದು ಅಂತ ಕಾದು ಕೂತ್ಕೊಂಡ್ರೆ ನಿನ್ನ ಪತ್ತೇನೆ ಇಲ್ಲ. ಎತ್ಲಾಗ್ ಹೋದೆ ನೀ?

 

ನಿನ್ನ ಕಾಣಬೇಕೆಂದು ನಾ ಸುತ್ತಿದ ಪುಸ್ತಕದ ಅಂಗಡಿಗಳ ಲೆಕ್ಕ ಇಟ್ಟಿದ್ರೆ… ಮನಸೆ ಬಂದಿಲ್ಲ ಕಣ್ರಿ ಅಂತ ಅಂಗಡಿಯಾತ ಇವನದ್ಯಾವ ರಗಳೆ ಇದು ಅನ್ನೋ ತರ ಮುಖ ಮಾಡಿ ಹೇಳಿದಾಗ ಬೇಸರವಾದೂ ನಗುನಗುತ್ತ ನುಂಗಿದ ಮಾತುಗಳ ಲೆಕ್ಕ ಇಟ್ಟಿದ್ರೆ… ಅದೇ ಗಿನ್ನಿಸ್ ರೆಕಾರ್ಡ್ ಆಗ್ತಿತ್ತೇನೋ. ಪಾಪ ಅಂಗಡಿಯಾತ ತಾನೆ ಏನು ಮಾಡ್ತಾನೆ. ನಿನ್ನನ್ನು ಹುಡುಕಿಕೊಂಡು ಬರೋವ್ರೇನು ಒಬ್ರಾ ಇಬ್ರಾ? ಆದ್ರೂ ನೀ ಮಾತಾಡ್ತಿಲ್ಲ. ನಿಂಗೆ ಸತಾಯಿಸೋದು ಅಂದ್ರೆ ಇಷ್ಟಾನ?

 ಹೂಂ…ನಿನ್ನ ಬಗ್ಗೇನೆ ಇಷ್ಟೊತ್ತಿಂದಾ ಹೇಳ್ತಾ ಇರೋದು…ಮನಸು ಮನಸುಗಳ ಪಿಸುಮಾತು ಕೇಳಿಸ್ತಿಲ್ಲ ಅನ್ನೋ ಬೇಸರದಲ್ಲಿ ನನ್ನ ಮನಸಿನ ಮಾತು ಹೇಳಿದ್ದೀನಿ. ಇಷ್ಟರ ಮೇಲೂ ನೀ ಮಾತೇ ಆಡೋಲ್ಲ ಅನ್ನೋದಾದ್ರೆ ನಿನ್ನ ಚಾಳಿ ಟೂ… 🙂

 

ನಿನ್ನ ಮನಸಿನ್ಯಾಗಿನ ಮಾತು..ಹೊಟ್ಟೆಯೊಳಗಿನ ಗುಟ್ಟು, ಸಮಾಧಾನ, ಕಥೆ ಇದನ್ನೆಲ್ಲ ಎಷ್ಟು ಮಿಸ್ಸ್ ಮಾಡ್ಕೋತಿದಿನಿ ಗೊತ್ತಾ? ಸೈನ್ಸ್ ಪೇಜ್, ಆರ್ಟ್ ಪೇಜ್ , ಹೀಗೊಂದು ಕಥೆ…ಜೊತೆಗೆ ಅಲ್ಲಿಷ್ಟು ಇಲ್ಲಿಷ್ಟು ಅಂತ ಸಿಗೋ ನಮಗೆ ತಿಳಿಯದ ವಿಷ್ಯಗಳು..ಜೋಕ್ಸು, ಪದ್ಯ, ಎಲ್ಲದಕ್ಕೂ ಕಳಶವಿಟ್ಟಂತ ಮನಸಿಗೆ, ಪ್ರೀತಿಗೆ ಸಂಬಂದಿಸಿದ ಮುಖ್ಯ ಲೇಖನ… ಎಲ್ಲಾನು ನಾವು ಮಿಸ್ ಮಾಡ್ಕೋತಾ ಇದ್ರೆ ನೀನು ಸೈಡ್‌ವಿಂಗಲ್ಲಿ ನಿಂತ್ಕೊಂಡು ನಗ್ತಿದೀಯಾ?

 

ಒಂದ್ಸಲ ಹೀಗೆ ಮನಸಿನಲ್ಲಿ 2 ಸಾಲುಗಳು ಹೊಳೀತು. ಅದನ್ನು ನನ್ನ ಪತ್ರಕರ್ತ ಮಿತ್ರನ ಜೊತೆ ಹೀಗೆ ಹಂಚಿಕೊಂಡಿದ್ದೆ. ಅದು ಹಾಯ್ ಬೆಂಗಳೂರು ಮತ್ತು ಓ ಮನಸೆ ಪತ್ರಿಕೆಯ ಬಗ್ಗೆ…

 

ಹಾಯ್ ಬೆಂಗಳೂರು ಪ್ರತೀ ವಾರದ ಅಚ್ಚರಿ…!!

ಓ ಮನಸೇ ಎರಡು ತಿಂಗಳಿಗೊಂದು ಬಂದ್ರೆ ಅದೇ ಹೆಚ್ಚೂರೀ…!!

 

ಬೇಜಾರಾಯ್ತಾ? ಹೀಗೆ ಚುಚ್ಚಿದ್ರಾದ್ರೂ ಬೇಗ ಬರ್ತೀಯೇನೋ ಅಂತ ದೂರದ ಆಸೆ!

 

ನಿನ್ನ ಮೌನ ಮುರಿದು ಈಗಲಾದ್ರೂ ಬಾ ಮನಸೆ… ನಿನಗೆ ಪಿಸುಮಾತು ಕಲಿಸಿದನು ಹೇಳುವಂತೆ ತಡೆದ ಮಳಿ ಜಡಿದು ಬರುವ ಹಾಗೆ ಬಂದು ನಮ್ಮ ಮಾನಸಿಗೆ ಮುಂಗಾರಿನ ಮೊದಲೇ ತಂಪು ಹುಟ್ಟಿಸುತ್ತೀಯ ಅಂತ ನಂಬಿದ್ದೇನೆ. ಬರ್ತೀಯಾ ಅಲ್ವಾ?

ಇತಿಹಾಸವೆಂದರೆ ನಮ್ಮ ಪಾಲಿಗೆ ಬರೀ ರಾಜರುಗಳು ಸತ್ತ, ಹುಟ್ಟಿದ ಇಸವಿಗಳನ್ನು, ಯುದ್ಧ ನಡೆದ ದಿನಾಂಕಗಳನ್ನು ಬಾಯಿಪಾಠ ಮಾಡುವ ನೀರಸ ಪ್ರಕ್ರಿಯೆ. ಶಾಲಾ ಕಾಲೇಜುಗಳ ಪಠ್ಯಗಳಲ್ಲಿ ಓದಿರುವುದು ಉರು ಹೊಡೆದು ಪರೀಕ್ಷೆಗಳಲ್ಲಿ ಕಾರಿಕೊಂಡಿದ್ದೂ ಇದನ್ನೇ. ಆದರೆ ಇತಿಹಾಸವೆಂದರೆ ಬರೀ ಇಷ್ಟೇ ಅಲ್ಲ. ಸ್ವಾರಸ್ಯಕರವಾಗಿ, ಯಥಾವತ್ತಾಗಿ ಘಟನೆಗಳನ್ನು ಮಂಡಿಸಿದರೆ ಓದುವವರ ಪಾಲಿಗೆ ರಸಗವಳವಾಗಬಲ್ಲುದು ಅಂತ ರವಿ ಬೆಳಗೆರೆ ನಿರೂಪಿಸಿದ್ದಾರೆ. ಮನೋಹರ್ ಮಳಗಾಂವಕರ್ ಕೃತಿಯನ್ನು ಸೊಗಸಾಗಿ ಅನುವಾದಿಸಿ, ತಮ್ಮದೇ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿ ದಂಗೆಯ ದಿನಗಳು ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

 

ನಾನಾ ಸಾಹೇಬನ ನಿರೂಪಣೆಯ ಮಾತಿನಲ್ಲಿ ೧೮೫೭ರ ಮಹಾದಂಗೆಯ ಕಾಲದ ಘಟನೆಗಳನ್ನು, ಆವತ್ತಿನ ಕ್ಷೋಭೆ, ತಳಮಳ, ವಿದ್ರೋಹ, ಬ್ರಿಟೀಷರ ಅನಾಚಾರ ಇವನ್ನೆಲ್ಲಾ ಎಳೆಎಳೆಯಾಗಿ ಬಿಚ್ಚಿಡುತ್ತಾ ಸಾಗುತ್ತದೆ ಈ ಕೃತಿ. ಎರಡನೆ ಬಾಜೀರಾಯ, ಅವನ ದತ್ತು ಮಗ ನಾನಾ ಸಾಹೇಬ, ತಾಂತ್ಯಾ ಭಟ್ಟ, ಅಜೀಮ, ಚಂಪಾ, ಅಜೀಜಾನ್, ಜಯಾಜಿ ಸಿಂಧಿಯಾ, ಬೇಗಮ್ ಹಜರತ್ ಮಹಲ್, ವೀಲರ್, ಎಲೀಜಾ, ಮೈಕೆಲ್ ಪಾಮರ್.. ಹೀಗೆ ಆ ದಿನಗಳು ಪಾತ್ರಗಳ ರೂಪದಲ್ಲಿ ಒಂದೊಂದಾಗಿ ನಿಮ್ಮ ಕಣ್ಮುಂದೆ ಸುಳಿದಾಡುತ್ತವೆ. ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲು ಮನಸ್ಸೇ ಬಾರದಿರುವಷ್ಟು … ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡುವಷ್ಟು ಸೊಗಸಾಗಿ ಬಂದಿದೆ ದಂಗೆಯ ದಿನಗಳು. ದೇಶಪ್ರೇಮದ ಕುರಿತು, ಇತಿಹಾಸದ ಕುರಿತು ಬರೆಯುವಾಗ ಬೆಳಗೆರೆ ಲೇಖನಿಯಲ್ಲಿ ಮೂಡುವ ಒಂದು ಅದ್ಭುತ ಶೈಲಿ ಪುಸ್ತಕಕ್ಕೆ ಇನ್ನಷ್ಟು ಮೆರುಗು ತಂದಿದೆ.

 

ದಂಗೆಯ ದಿನಗಳನ್ನು ಪ್ರತ್ಯಕ್ಷ ಕಂಡಂತಹ ಅನುಭವದ ಜೊತೆಗೆ, ಅನಾಚಾರಗಳಿಗೆ ಬಲಿಯಾದ ಮುಗ್ಧ-ನಿಷ್ಪಾಪಿಗಳ ಆಕ್ರಂಧನ ಕೇಳಿ ಕಣ್ಣು ಹನಿಗೂಡುತ್ತದೆ; ಕರುಳು ಕತ್ತರಿಸಿದಂತಾಗುತ್ತದೆ. ಮರೆತೇ ಹೋದಂತಾಗಿದ್ದ ಇತಿಹಾಸದ ಮಹಾನ್ ಘಟನೆಯೊಂದನ್ನು ನೆನಪಿಸಿಕೊಟ್ಟು, ದಂಗೆಯ ಸಂದರ್ಭದ ಎಷ್ಟೋ ಅರಿವಿಲ್ಲದ ಸಂಗತಿಗಳು, ಪೇಶ್ವೆಗಳು, ನಾನಾ ಸಾಹೇಬನ ಬದುಕಿನ ಸುತ್ತಮುತ್ತಲಿನ ನಾನಾ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಮನಸ್ಸಿಗೆ ಮುಟ್ಟುವಂತೆ ತಿಳಿಸುತ್ತಾ ಹೋಗುತ್ತದೆ.

 

ಈ ಬೇಸಗೆಯ ಬಿಸಿಯೊಳಗೆ ದಂಗೆಯ ದಿನಗಳ ಕಾವು ನಿಮ್ಮನ್ನು ತಟ್ಟಲಿ. ಆ ಮೂಲಕ ದಂಗೆಯಲ್ಲಿ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಭಾಗಿಯಾದ ಎಲ್ಲಾ ಧೀರ ಚೇತನಗಳ ನೆನಪಾಗಿ ನಮ್ಮ-ನಿಮ್ಮ ಕಣ್ಣಿಂದ ಒಂದು ತೊಟ್ಟು ಜಾರಿದರೆ.. ಅದೇ ನಾವು-ನೀವು ಸಲ್ಲಿಸಬಹುದಾದ ಮಹಾನ್ ಗೌರವ.


ಮೂಲ                                 :         ಮನೋಹರ್ ಮಳಗಾಂವಕರ್

ಕನ್ನಡಕ್ಕೆ                               :         ರವಿ ಬೆಳಗೆರೆ

ಪುಟಗಳು                             :         ೨೯೮ + ೬

ಬೆಲೆ                                   :         ೧೫೦

ಪ್ರಕಾಶನ                             :         ಭಾವನ ಪ್ರಕಾಶನ