Posts Tagged ‘vichaara’

 

ಯಾವ ಸಂಬಂಧವನ್ನೇ ಆಗಲಿ ಸೂಕ್ಷ್ಮವಾಗಿ ನಿರುಕಿಸಿದರೆ ಗೊತ್ತಗುತ್ತೆ ..ಆ ಸಂಬಂಧ ನಂಬಿಕೆ ಅನ್ನೋ ಅಡಿಪಾಯದ ಮೇಲೆ ನಿಂತಿರುತ್ತೆ. ನಂಬಿಕೆ ಕುಸಿಯಿತೋ, ಸಂಬಂಧದ ಮಹಲು ಪತರಗುಟ್ಟಿದಂತಾಗುತ್ತದೆ. ಮನಸ್ಸಿನ ಮನೆ ಮುರಿದು ಬಿದ್ದಿರುತ್ತದೆ. ಆಮೆಲೆ ಉಳಿಯುವುದು ಅನುಮಾನ, ಅಪನಂಬಿಕೆಗಳ ಭಗ್ನಾವಶೇಷದ ನಡುವೆ ತಣ್ಣಗೆ ಮಲಗಿರುವ ಸಂಬಂಧದ ಗೋರಿ. ಅಸಮಾಧಾನದ ನಿಟ್ಟುಸಿರು ಅಲ್ಲಿ ಹೊಗೆಯಾಡುತ್ತಾ ಇರುತ್ತೆ….ಪ್ರೀತಿ, ಸ್ನೇಹ ಸೌಹಾರ್ದಗಳು ನಂಬಿಕೆದ್ರೋಹದ ಚಿತೆಯ ಮೇಲೆ ಜೀವಂತ ದಹಿಸಿಹೋಗುತ್ತಿರುವುದಕ್ಕೆ ಸಾಕ್ಷಿಯೋ ಅನ್ನುವಂತೆ.

 

ಇಂಥಾ ಸಂಬಂಧಗಳೇ ಅಂತೇನಿಲ್ಲ. ತಂದೆ-ತಾಯಿ-ಮಕ್ಕಳು, ಅಣ್ಣ-ತಂಗಿ, ಸ್ನೇಹಿತರು, ಪ್ರೇಮಿಗಳು, ಗಂಡ-ಹೆಂಡತಿ ಪರಸ್ಪರರನ್ನು ಇಷ್ಟ ಪಡುವುದಕ್ಕೆ ಕಾರಣ ಆ ಸಂಬಂಧ ನೀಡುವ ನೆರಳಿನಂತಹ ಕಂಫರ್ಟ್. ಎಷ್ಟೇ ತೊಂದರೆ, ನೋವು, ಕಷ್ಟ ಇದ್ರೂ ಅದನ್ನು ತನ್ನಾಪ್ತರ ಜೊತೆ ಹಂಚಿಕೊಂಡಾಗ ಸಿಗುವ ನಿರಾಳತೆಯಂತ ಭಾವನೆಗೆ. ಅಸಲಿಗೆ ಹೀಗೆ ಆತುಕೊಂಡವರು ಯಾವ ದೊಡ್ಡ ಸಹಾಯ ಮಾಡಲು ಶಕ್ತರಲ್ಲದಿದ್ದರೂ ಕೂಡಾ, ನಾನಿದೀನಿ ಬಿಡು ಎಲ್ಲ ಸರಿಹೋಗುತ್ತೆ ಅನ್ನೋ ಒಂದು ಆಪ್ತ ಮಾತು ನೂರು ಕಷ್ಟಗಳನ್ನು ಗೆಲ್ಲುವ ಶಕ್ತಿ ನೀಡುತ್ತೆ. ಇದೆಲ್ಲದರ ಹಿಂದೆ ನಿಂತು ಕೆಲಸ ಮಾಡುವುದು ನಂಬಿಕೆಯೆನ್ನುವ ಅಗೋಚರ ತಂತು. ಎಂಥಾ ಪರಿಸ್ಥಿತಿ ಬಂದರೂ ನನ್ನ ಜೊತೆಗಿವರು ಇದ್ದೇ ಇರ್ತಾರೆ… ನನ್ನ ಕೈ ಬಿಡಲ್ಲ ಅನ್ನುವ ಒಂದು ಸಮಾಧಾನ.  ಹಾಗೆ ಕೈ ಹಿಡಿದು ನಡೆಸಬಲ್ಲವರು ಇರುವುದೇ ಒಂದು ಅದೃಷ್ಟ.  ಪ್ರೀತಿ, ವಿಶ್ವಾಸ, ಮಮತೆ, ಅಕ್ಕರೆ ಇವೆಲ್ಲಾ ಇರುವ ಕಾರಣದಿಂದಲೇ ವ್ಯಕ್ತಿಯನ್ನು ನಾವು ನಂಬುತ್ತೇವೋ ಅಥವಾ ನಂಬಿಕೆ ಇರುವುದಕ್ಕೇ ಇವೆಲ್ಲಾ ಭಾವಗಳು ಹುಟ್ಟುತ್ತವೆಯೋ ಹೇಳುವುದು ಕಷ್ಟ. ಎಷ್ಟೇ ನಿಸ್ವಾರ್ಥ ಸಂಬಂಧ ಅಂದುಕೊಂಡ್ರೂ ಸಹಾ ಪರಸ್ಪರ ಅವಲಂಬನೆಯ ಈ ಸ್ವಾರ್ಥ ಕೂಡಾ ಇಲ್ಲದೆ ಯಾವ ಬಂಧವಾದ್ರೂ ಬೆಸೆಯುತ್ತದಾ? ನಾನಂತೂ ಕಂಡಿಲ್ಲ.

 

ಬಾಂಧವ್ಯದ ನಡುವೆ ಪರಸ್ಪರರಲ್ಲಿ ಯಾರೇ ಆಗಲಿ ಚೂರು ಅಪನಂಬಿಕೆಗೆ , ಶಂಕೆಗೆ ಆಸ್ಪದ ನೀಡುವಂತೆ ವರ್ತಿಸಿದರೋ, ಬಂಧ ಬಂಧನವಾಗುತ್ತೆ. ಅನುಮಾನದ ಸಂಕೋಲೆಗಳಲ್ಲಿ ಸಂಬಂಧವು ನಲುಗಲಾರಂಭಿಸುತ್ತದೆ. ಒಮ್ಮೆ ಈ ಗುಂಗೀ ಹುಳ ಹೊಕ್ಕಿತೋ…ಮನಸ್ಸು ಒಡೆದ ಕನ್ನಡಿ; ಪ್ರತಿಯೊಂದು ಚೂರಿನಲ್ಲೂ ಭಿನ್ನವಾಗಿ ಕಾಣುವ ಬಾಂಧವ್ಯದ ಮುಖಗಳು. ಪರಸ್ಪರರ ಪ್ರತೀ ಚರ್ಯೆಯನ್ನೂ ಸಂಶಯದ ಭೂತಗಾಜಿನಲ್ಲಿರಿಸಿ ನೋಡುವ ಚಾಳಿ ಉದ್ಭವಿಸಿ, ಚಿಕ್ಕ-ಪುಟ್ಟ ದೋಷಗಳೂ ಭೂತಾಕಾರವಾಗಿ ಕಾಣಲಾರಂಭಿಸುತ್ತವೆ. ಹಿಂದೆ ಸರಿ ಅನ್ನಿಸ್ಸಿದ್ದೆಲ್ಲಾ ತಪ್ಪಾಗಿ ಕಾಣಿಸಿ ಎಲ್ಲಾದಕ್ಕೂ ಕ್ಯಾತೆ ತೆಗೆಯುವ ಹೊತ್ತಿಗಾಗಲೆ ಅಪನಂಬಿಕೆಯ ತೆರೆಯೊಂದು ಎಲ್ಲಾ ಒಳ್ಳೆಯತನದ ಮೇಲೆ ಮುಸುಕಿ ಬಿಡುತ್ತದೆ.

 

ಒಂದು ನಂಬಿಕೆ ದ್ರೋಹದ ಪುಟ್ಟ(?) ಘಟನೆಯಿಂದ ಸಂಬಂಧಿತ ವ್ಯಕ್ತಿಗಳಲ್ಲಿ ಹಠಾತ್ ಬದಲಾವಣೆಯೇನೂ ಸಂಭವಿಸಿರುವ ಸಾಧ್ಯತೆ ಇಲ್ಲದೆ ಹೋದರೂ ಪರಸ್ಪರರನ್ನು ನೋಡುವ ದೃಷ್ಟಿಕೋನವೇ ಬದಲಾಗುವುದರಿಂದ, ನಂಬಿಕೆ ಇದ್ದಾಗ ಕಾಣಸಿಗದ ಓರೆ-ಕೋರೆ, ದೋಷಗಳೆಲ್ಲ ಎದ್ದೆದ್ದು ಕಣ್ಮುಂದೆ ನರ್ತಿಸುತ್ತವೆ. ಅದಕ್ಕೆ ಸರಿಯಾಗಿ ತಾಳಹಾಕುವ ಮನಸ್ಸು ನಂಬಿಕೆದ್ರೋಹಕ್ಕೆ ಒಳಗಾದ ಭಾವನೆಯ ದಾಂಗುಡಿಗೆ ಸಿಕ್ಕಿ ವಿವೇಕವಿಲ್ಲದಂತೆ ವರ್ತಿಸುತ್ತದೆ. ಅಲ್ಲಿಗೆ ಸಂಬಂಧದ ನವಿರು ಭಾವಗಳೆಲ್ಲಾ ಮರೆಯಾಗಿ ಆ ಜಾಗದಲ್ಲಿ ತಿರಸ್ಕಾರ, ಸಿಟ್ಟು, ಸೆಡವು, ಅಸಹನೆ, ಆಕ್ರೋಶ ಮನೆಮಾಡುತ್ತವೆ. ಸರಿ-ತಪ್ಪುಗಳ ವಿವೇಚನೆಯ ಲಂಗು-ಲಗಾಮು ತಪ್ಪಿಹೋಗಿ, ನಾಲಗೆಯು ಆಡಬಾರದ ನುಡಿಗಳನ್ನಾಡಿ, ಸಂಬಂಧದ ಶವಪೆಟ್ಟಿಗೆಗೆ ಕೊನೆಯ ಮೊಳೆ ಜಡಿಯುತ್ತದೆ.

 

ಇಲ್ಲಿ ನಂಬಿಕೆದ್ರೋಹಕ್ಕೆಡೆಮಾಡಿಕೊಟ್ಟ ಘಟನೆಯ ಆಘಾತಕ್ಕಿಂತ, ನಾನು ವಂಚಿಸಲ್ಪಟ್ಟೆ ಅನ್ನುವ ಭಾವವೇ ಪ್ರಧಾನವಾಗಿ ಕಾಡುತ್ತದೆ. ಅಷ್ಟು ನಂಬಿಕೆಯಿರಿಸಿದ ನನಗೇ ವಂಚನೆ ಮಾಡಿದನ(ಳ)ಲ್ಲ ಅನ್ನುವ ಬೇಸರ ಕಿತ್ತು ತಿನ್ನುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಇಬ್ಬರಿಗೂ ತನ್ನದೇ ಆದ ಸಮರ್ಥನೆ , ವಾದ-ಪ್ರತಿವಾದದ ಸಮಜಾಯಿಷಿಗಳಿರುತ್ತವೆ. ಆದರೆ ವಸ್ತುಸ್ಥಿತಿಯನ್ನು ಸರಿಯಾಗಿ ಪರಾಮರ್ಶಿಸಿದರೆ ಬಹುತೇಕ ಸಂದರ್ಭಗಳಲ್ಲಿ ತಪ್ಪು ಇಬ್ಬರಿಂದಲೂ ಆಗಿರುವ ಸಾಧ್ಯತೆಗಳು ಇದ್ದೇ ಇರುತ್ತವೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಸಂಭವಿಸುವ ಯಾವುದೋ ಘಟನೆಯು ಎಷ್ಟೋ ಬಾರಿ ಯಾರ ನಿಯಂತ್ರಣಕ್ಕೂ ಸಿಗದ ಕಾರಣಗಳಿಂದ ಈ ಪರಿಸ್ಥಿತಿಗೆ ಕಾರಣವಾಗಿರಲೂಬಹುದಲ್ಲವೇ? ಆವೇಶಕ್ಕೆ ಬಿದ್ದ ಮನಸ್ಸಿಗೆ ಆದ ಗಾಯದ ದೆಸೆಯಿಂದ ಇದನ್ನು ವಿಮರ್ಶಿಸುವ ತಾಳ್ಮೆ ಕಳೆದುಹೋಗಿ, ಚಿಕ್ಕದೊಂದು ಮುನಿಸಿನೊಂದಿಗೆ ಮುಗಿಯಬಹುದಾದ ವಿಷಯ ಬೃಹದಾಕಾರ ತಾಳಿ ನಂಬಿಕೆಯ ಬುಡವನ್ನು ಅಲಾಡಿಸಿಬಿಡುತ್ತದೆ. ಇಲ್ಲಿ ಒಂದು ಪ್ರಶ್ನೆ ಹುಟ್ಟುತ್ತದೆ. ಅದೇನಂದ್ರೆ ಹಾಗಾದ್ರೆ ಈ ನಂಬಿಕೆ ಅನ್ನೋದು ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಚೋದನೆಗೆ ಸಿಲುಕಿ ಬದಲಾಗುತ್ತಾ ಹೋಗುವ ವಸ್ತುವಾ? ನಂಬಿಕೆಯ ಇನ್ನೊಂದು ಮಗ್ಗುಲಲ್ಲೇ ವಿಶ್ವಾಸದ್ರೋಹ ಕೂಡಾ ಇರುವುದು ವಿಪರ್ಯಾಸವಾದರೂ ನಿಜ. ನಂಬಿಸಿ ಕತ್ತು ಕೊಯ್ದ ಅನ್ನುವ ಮಾತಿದೆಯಾದ್ರೂ, ನಂಬಿಕೆ ಇರುವೆಡೆಯಲ್ಲಿ ಮಾತ್ರ ದ್ರೊಹ ತಲೆಯೆತ್ತಲು ಸಾಧ್ಯವಾಗೋದು ಅನ್ನುವುದು ಸಹಾ ಒಂದು ಚೋದ್ಯ.

 

ನಂಬಿಕೆಟ್ಟವರಿಲ್ಲವೋ ಅಂತ ದಾಸರು ಹಾಡಿರುವುದು ಹೌದಾದರೂ.. ನಂಬುವ ಮೊದಲು ನೂರು ಬಾರಿ ಯೋಚಿಸುವುದು ಒಳ್ಳೆಯದು. ನಂಬಿಕೆ ಮತ್ತು ಕುರುಡಾಗಿ ನಂಬುವುದರ ನಡುವೆ ಇರುವ ತೆಳುಗೆರೆಯನ್ನು ಅರ್ಥೈಸಿಕೊಳ್ಳುವ ಸೂಕ್ಷ್ಮ ನಮಗಿದ್ದರೆ, ಆಮೇಲೆ ನಂಬಿಕೆದ್ರೋಹಕ್ಕೆ ತುತ್ತಾಗಿ ಹಲುಬುವುದು ತಪ್ಪುತ್ತದೇನೋ. ಯಾರನ್ನು ಎಷ್ಟೇ ನಂಬಿದರೂ ಕೂಡಾ ನಮ್ಮ ಎಚ್ಚರಿಕೆಯಲ್ಲಿ ಸದಾ ನಾವಿರುವುದು, ಒಂದು ನಿರ್ದಿಷ್ಟ ಅಂತರವನ್ನು ಯಾವಾಗಲೂ ಕಾಯ್ದುಕೊಳ್ಳುವುದು ಖಂಡಿತಾ ಅಗತ್ಯ. ಅಷ್ಟೂ ಎಚ್ಚರಿಕೆ ಇಲ್ಲದಿದ್ದರೆ ಮಾತ್ರ ಮಿಂಚಿ ಹೋದದ್ದಕ್ಕೆ ಚಿಂತಿಸಿ ಫಲವಿಲ್ಲ ಅನ್ನುವಂತೆ ಆಮೇಲೆ ಎಷ್ಟು ಗೋಳುಗರೆದರೂ ಮನಸ್ಸಿಗಾದ ಗಾಯ ಅಷ್ಟು ಸುಲಭವಾಗಿ ಮಾಯುವುದಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೊ ಸಂಶಯಿಸಬೇಕೆಂದು ಕೂಡಾ ಅಲ್ಲ. ಆದರೆ ಎಲ್ಲವನ್ನೂ ಸುಲಭವಾಗಿ ನಂಬಿ ಆಮೇಲೆ ನಮ್ಮ ಅಮಾಯಕತೆಯ ದುರುಪಯೋಗ ಯಾರೂ ಪದೆಯಲಾರದಷ್ಟು ಹುಶಾರಿಯಲ್ಲಿ ನಾವಿರುವುದು ಒಳ್ಳೆಯದು ಅಲ್ವೇ?