Archive for ಜನವರಿ, 2009

ಕಡಲತೀರ ಬ್ಲಾಗ್‌ನಲ್ಲಿ ಸಹಬ್ಲಾಗಿಗ ಸಂದೀಪ್ ಕಾಮತ್ ಒಂದೊಳ್ಳೆ ಬರಹ ಹಾಕಿದ್ದಾರೆ… ಎಲ್ಲದಕ್ಕೂ ಐ.ಟಿ., ಬಿ.ಟಿ. ಕಾರಣ ಅಂತ ಬೊಬ್ಬೆ ಹೊಡೆಯೋ ಮಂದಿಯ ಕಣ್ತೆರೆಸುವoತಿದೆ ಈ ಲೇಖನ ಪುರ್ಸೊತ್ತಾದ್ರೆ ಓದಿ ನೋಡಿ…

http://kadalateera.blogspot.com/2009/01/blog-post_12.html

ಅಂದ ಹಾಗೆ ಈದಿ ಅಮಿನ್‌ಮುಂದಿನ ಭಾಗ ಬರೋದು ಸ್ವಲ್ಪ ತಡವಾಯ್ತು… ಸಧ್ಯದಲ್ಲೇ ಬರ್ತಾನೆ ಅವನು ವಾಪಸ್.

untitled

ಹಾಗೆ ಶುರುವಾಗಿ ಹೋಗಿತ್ತು ಈದಿ ಅಮಿನ್ ಎಂಬ ವಿಲಕ್ಷಣ ಸರ್ವಾಧಿಕಾರಿಯ ಅಧಿಕಾರ ಪರ್ವ. ಅಧಿಕಾರಕ್ಕೆ ಬಂದವನೇ ಅಮಿನ್ ಪಾದರಸ ಕುಡಿದವನಂತೆ ಚುರುಕಾಗಿಬಿಟ್ಟ. ದೇಶದ ಎಲ್ಲಾ ನಾಗರಿಕ ಕಾಯ್ದೆಗಳನ್ನು ಕಿತ್ತೊಗೆದು ಮಿಲಿಟರಿ ಕಾನೂನುಗಳನ್ನು ಜಾರಿಗೆ ತಂದ. ಅಧ್ಯಕ್ಷನ ಅಧಿಕೃತ ಭವನವೀಗ ಕಮಾಂಡ್ ಪೋಸ್ಟ್ ಅನ್ನಿಸಿಕೊಂಡಿತು. ಎಲ್ಲಾ ಆಯಕಟ್ಟಿನ ಜಾಗಗಳಲ್ಲಿ ಅವನ ಪರಮಾಪ್ತರೇ ಬಂದು ಕುಳಿತುಬಿಟ್ಟರು. ಜನರಲ್ ಸರ್ವಿಸ್ ಯುನಿಟ್ ಅನ್ನೋ ಹೆಸರಿನಗುಪ್ತಚರ ಇಲಾಖೆಯನ್ನು ಬದಲಿಸಿ ಸ್ಟೇಟ್ ರಿಸರ್ಚ್ ಬ್ಯೂರೋವನ್ನು ಹುಟ್ಟುಹಾಕಿದ. ಕಂಪಾಲದಲ್ಲಿದ್ದ ಬ್ಯುರೋದ ಪ್ರಧಾನ ಕಚೇರಿ ಯಾಕೋ ಮೌನ ಹೊದ್ದು ಮಲಗಿಬಿಟ್ಟಿತ್ತು… ಮುಂದೆ ಅಲ್ಲಿ ಕೇಳಲಿರುವ ಸಾವಿನ ಕೇಕೆಗಳಿಗೆ ನೋವಿನ ಆಕ್ರಂಧನಗಳಿಗೆ ತಾನು ಮೂಕಸಾಕ್ಷಿಯಾಗಬೇಕೆಂದು ಮೊದಲೇ ಗೊತ್ತಿದ್ದಂತೆ!!

 

ಈ ನಡುವೆ ಪದಚ್ಯುತ ಅಧ್ಯಕ್ಷ ಒಬೋಟೆ ತಾಂಜಾನಿಯಾದಲ್ಲಿ ಆಶ್ರಯ ಪಡೆದುಕೊಂಡ. ಉಗಾಂಡಾದಿಂದ ಹೊರದಬ್ಬಲ್ಪಟ್ಟ ಇಪ್ಪತ್ತು ಸಾವಿರಕ್ಕೂ ಮಿಕ್ಕಿದ ಜನರನ್ನೆಲ್ಲಾ ತನ್ನ ತೆಕ್ಕೆಗೆಳೆದುಕೊಂಡು ಉಗಾಂಡಾವನ್ನು ವಶಪಡಿಸಿಕೊಳ್ಳಲು ಹೊರಟೇಬಿಟ್ಟ. ಆದರೆ ಸಮರ ತಂತ್ರ ಹಾಗು ಅದಕ್ಕೆ ಬೇಕಾದ ಸಿದ್ಧತೆಯ ಲವಲೇಶವೂ ಇಲ್ಲದ ಅವನ ಬೆಂಬಲಿಗರ ದೆಸೆಯಿಂದಾಗಿ ಅವನು ಹೀನಾಯವಾಗಿ ಸೋತುಹೋದ. ಆದರೆ ಒಬೋಟೆಯ ಈ ಪ್ರಯತ್ನದಿಂದ ಅಮಿನ್ ಕನಲಿ ಕೆಂಡವಾಗಿಬಿಟ್ಟ.. ಮತ್ತು ಒಬೋಟೆ ಬೆಂಬಲಿಗರಾದ ಅಕೋಲಿ ಮತ್ತು ಲಾಂಗೋ ಬುಡಕಟ್ಟಿನವರನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಲಾರಂಭಿಸಿದ. 1972ರ ಆರಂಭದಲ್ಲಿ ಹೀಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ ಹದಿನೈದು ಸಾವಿರವನ್ನು ಮುಟ್ಟಿತ್ತು ಎಂದರೆ ಅವನು ಅದಿನ್ಯಾವಪರಿ ಅವರ ಮೇಲೆ ಮುರಕೊಂಡು ಬಿದ್ದಿದ್ದಾನೋ ನೀವೆ ಲೆಕ್ಕ ಹಾಕಿ. ಮೊದಮೊದಲು ಒಬೋಟೆ ಬೆಂಬಲಿಗ ಸೈನಿಕರ ವಿರುದ್ಧವಷ್ಟೇ ಪ್ರಹಾರ ಮಾಡಿದ ಅಮಿನ್ ಕ್ರಮೇಣ ಧಾರ್ಮಿಕ ನಾಯಕರು, ಪತ್ರಕರ್ತರು, ಹಿಂದಿನ ಸರ್ಕಾರದ ಮಂತ್ರಿಗಳು, ವಕೀಲರು, ನ್ಯಾಯಾಧೀಶರು, ವಿದ್ಯಾರ್ಥಿಗಳು, ವಿದೇಶಿಯರು, ಜನಸಾಮಾನ್ಯರು…ಕೊನೆಗೆ ತನ್ನ ವಿರುದ್ಧ ಇದ್ದಾರೆಂದು ಭಾವಿಸಿದ ಅವನದೇ ಸರ್ಕಾರದ ಮಂತ್ರಿಗಳು… ಹೀಗೆ ತನ್ನ ಕುರಿತು ದನಿಯೆತ್ತಿದವರ ಸದ್ದಡಗಿಸಲು ಮುಂದಾಗಿಬಿಟ್ಟ.

 

ಸ್ವಭಾವತಃ ಸಂಶಯಪಿಶಾಚಿಯಾಗಿದ್ದ ಅಮಿನ್‌ಗೆ ಯಾರ ಮೇಲಾದರೂ ಕೊಂಚ ಅನುಮಾನ ಬಂದರೂ ಅವರು ನಿಗೂಢ ರೀತಿಯಲ್ಲಿ ಕಣ್ಮರೆಯಾಗತೊಡಗಿದರು. ಅವನ ಕ್ರೌರ್ಯ ಎಲ್ಲಿಗೆ ಬಂದು ಮುಟ್ಟಿತೆಂದರೆ… ತನಗೆ ಎದುರಾಡಿದವರು, ತನಗೆ ಗೌರವ ಕೊಡದವರನ್ನೂ ಹಿಡಿದು ಕೊಲ್ಲಲಾರಂಭಿಸಿದ. ಅವನ ಉರಿ ಹಸ್ತದ ಬೆಂಕಿಗೆ ಅನೇಕ ಹಳ್ಳಿಗಳು ನಿರ್ಮಾನುಷ್ಯವಾಗಿ ಹೋದವು. ಪವಿತ್ರ ನೈಲ್ ನದಿ ಅಮಾಯಕರ ರಕ್ತ ಕುಡಿದು ಕೆಂಪಾಗತೊಡಗಿತ್ತು. ಅವನು ಕೊಲ್ಲಿಸಿದ್ದ ವ್ಯಕ್ತಿಗಳ ಶವಗಳನ್ನು ನೈಲ್ ನದಿಯಲ್ಲಿ ತೇಲಿ ಬಿಡಲಾಗುತ್ತಿತ್ತು ಮತ್ತು ಆ ಶವಗಳನ್ನು ಹಿಡಿದು ದಡಕ್ಕೆಸೆಯಲು ಕೆಲಸಗಾರರನ್ನು ನೇಮಿಸಲಾಗಿತ್ತು. ಓವನ್ ಫಾಲ್ಸ್ ಬಳಿಯಿದ್ದ ಜಲವಿದ್ಯುತ್ ಉತ್ಪಾದನೆಗೆ ಕಟ್ಟಲಾಗಿದ್ದ ಅಣೆಕಟ್ಟಿನ ತೂಬುಗಳಲ್ಲಿ ಈ ಶವಗಳು ಸಿಕ್ಕಿಹಾಕಿಕೊಂಡು ಒಮ್ಮೆ ತೊಂದರೆಯಾದ ಬಳಿಕ ಈ ವ್ಯವಸ್ಥೆ ಮಾಡಲಾಗಿತ್ತಂತೆ. ಈತನ ಬರ್ಬರ ಕೃತ್ಯಗಳ ಪರಮಾವಧಿಯೋ ಎಂಬಂತಹ ಈ ಘಟನೆಯ ವಿವರಣೆಯನ್ನು ಓದಿದಾಗ ಅಬ್ಬಾ ಮನುಷ್ಯ ಮೃಗವೇ ಅನ್ನಿಸಿದ್ದು ಸುಳ್ಳಲ್ಲ. ಎಲ್ಲೆಂದರಲ್ಲಿ ತೇಲಿ ಬರುವ ಕೊಳೆತ ಹೆಣಗಳ ವಾಸನೆಗೆ ಇಡೀ ಉಗಾಂಡವೇ ಸ್ಮಶಾನವಾಗಿಬಿಟ್ಟಿತ್ತು… ಹೀಗೆ ನಿರಂತರ ಎಂಟು ವರ್ಷಗಳ ಕಾಲ ಅವ್ಯಾಹತವಾಗಿ ಮುಂದುವರಿದ ಈ ಮಾರಣಹೋಮಕ್ಕೆ ಆಹುತಿಯಾದವರ ನಿರ್ದಿಷ್ಟ ಲೆಕ್ಕ ಸಿಕ್ಕಿಲ್ಲವಾದರೂ, ಈ ಕುರಿತು ಮಾಹಿತಿ ಕಲೆಹಾಕಿ ವಿಚಾರಣೆ ನಡೆಸಿದ ಅಂತರರಾಷ್ಟ್ರೀಯ ಜ್ಯೂರಿಗಳ ಸಮಿತಿ ನೀಡುವ ಮಾಹಿತಿಯ ಪ್ರಕಾರ ಏನಿಲ್ಲವೆಂದರೂ ಮೂರು ಲಕ್ಷ ಜನ ಈ ಅವಧಿಯಲ್ಲಿ ಅಸುನೀಗಿದ್ದರು! ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳುವ ಪ್ರಕಾರ ಕನಿಷ್ಟ ಐದು ಲಕ್ಷ ಜನರು ಈ ಮಾರಣಹೋಮದಲ್ಲಿ ಸಮಿಧೆಯಾಗಿ ಉರಿದು ಹೋಗಿದ್ದರು…!!

 

ಅಮಿನ್‌ಗೆ ಆಗಾಗ್ಗೆ ತನಗೆ ಬೀಳುತ್ತಿದ್ದ ಕನಸುಗಳ ಬಗ್ಗೆ ಹೇಳಿಕೊಳ್ಳುತ್ತಿದ್ದ. ಅವನ ಪ್ರಕಾರ ಕನಸಿನ ಮೂಲಕ ಅವನಿಗೆ ತಾನು ಹೇಗೆ ಸಾಯುತ್ತೇನೆ ಅನ್ನೋದು ತಿಳಿದುಬಿಟ್ಟಿದೆ. ದೇವರೇ ಕನಸಿನಲ್ಲಿ ಬಂದು ಈ ಕುರಿತು ಹೇಳಿರುವುದರಿಂದ ಒಬೋಟೆ ಬೆಂಬಲಿಗರು ಏನೇ ತಿಪ್ಪರಲಾಗ ಹಾಕಿದರೂ ತನ್ನನ್ನೇನೂ ಮಾಡಲಾರರು ಅನ್ನುತ್ತಿದ್ದ. ನಿಜವಾಗಿ ಹಾಗೊಂದು ಕನಸು ಅವನಿಗೆ ಬಿದ್ದಿತ್ತಾ ಅಥವಾ ತನ್ನೊಳಗಿನ ಭೀತಿಯನ್ನು ಮೆಟ್ಟಿನಿಲ್ಲಲು ಅವನು ಕಂಡುಹಿಡಿಕೊಂಡ ಒಂದು ಪರಿಹಾರವೋ ಗೊತ್ತಿಲ್ಲ. ಆದರೆ ಅವನಿಗೆ ಬಿದ್ದ ಇನ್ನೊಂದು ಕನಸು ನೂರಾರು ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದ ಏಷ್ಯನ್ನರ ಪಾಲಿಗೆ ಮರೆಯಲಾಗದಂತಹ ದು:ಸ್ವಪ್ನವಾಗಿದ್ದು ಮಾತ್ರ ದುರಂತ. 1972ರ ಒಂದು ದಿನ ಅಮಿನ್… ತನಗೆ ಕನಸಿನಲ್ಲಿ ದೇವರ ಅಪ್ಪಣೆಯಾಗಿದೆ. ಉಗಾಂಡಾವು ಇನ್ನು ಮುಂದೆ ಕಪ್ಪುಜನರ ರಾಷ್ಟ್ರವಾಗಬೇಕೆಂದು ದೇವರು ಆದೇಶ ಮಾಡಿಬಿಟ್ಟಿದ್ದಾನೆ. ಕಪ್ಪು ಜನರಲ್ಲದವರು ಗಂಟು ಮೂಟೆ ಕಟ್ಟಿ…ಈ ದೇಶ ಕರಿಯರದ್ದು.. ಅಂತ ಹುಕುಂ ಹೊರಡಿಸಿಬಿಟ್ಟ. ಉಗಾಂಡದಲ್ಲಿ ನೆಲೆಗೊಂಡಿದ್ದ ಸುಮಾರು 80,000 ಕ್ಕೂ ಮಿಕ್ಕಿದ ಏಷ್ಯನ್ನರನ್ನು ಉಟ್ಟಬಟ್ಟೆಯಲ್ಲೇ ಹೊರದಬ್ಬುವ ಪರಮ ಅನಾಹುತಕಾರಿ ನಿರ್ಧಾರಕ್ಕೆ ಅವನಾಗಲೇ ಬಂದು ಬಿಟ್ಟಿದ್ದ. ಅವರೆಲ್ಲರೂ ಸುಮಾರು ಮೂರು ತಲೆಮಾರುಗಳ ಹಿಂದೆ ತಮ್ಮ ವಸಾಹತುಗಳಲ್ಲಿ ಕೆಲಸ ಮಾಡಲು ಬ್ರಿಟಿಷರು ಭಾರತ, ಪಾಕಿಸ್ಥಾನಗಳಿಂದ ಕರೆತಂದಿದ್ದ ಕೂಲಿಯಾಳುಗಳ ವಂಶದವರು. ತಮ್ಮ ಸ್ಥಿರ-ಚರಾಸ್ತಿಗಳನ್ನೆಲ್ಲಾ ಬಿಟ್ಟು ತೊಂಬತ್ತು ದಿನಗಳಲ್ಲಿ ಉಗಾಂಡಾ ಬಿಟ್ಟು ತೊಲಗಬೇಕು… ಇಲ್ಲವಾದಲ್ಲಿ ಈ ಭೂಮಿಯ ಮೇಲೆ ನೀವಿರುವುದಿಲ್ಲ ಅಂತ ಧಮಕಿ ಹಾಕಿದ. ಅಲ್ಲೇ ಹುಟ್ಟಿ ಬೆಳೆದು, ಉಗಂಡಾದವರೇ ಆಗಿ ಹೋಗಿದ್ದ ಸಾವಿರಾರು ಜನ ವೈದ್ಯರು, ವಕೀಲರು, ಶಿಕ್ಷಕರು, ಉದ್ಯಮಿಗಳು… ಇವರೆಲ್ಲ ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಭಾರತ, ಸ್ವೀಡನ್‌ಗಳಿಗೆ ಗುಳೇ ಹೊರಟರು. ಅವರ ಆಸ್ತಿ-ಪಾಸ್ತಿ-ನೌಕರಿ ಎಲ್ಲವನ್ನೂ ಈದಿ ಅಮಿನ್ ಬೆಂಬಲಿಗರು ಕಬಳಿಸಿದರು. ಏಷ್ಯನ್ನರ ಕಂದು ಮೈಚರ್ಮದ ಬಣ್ಣವೇ ಅವರ ಬದುಕಿಗೆ ಮುಳುವಾಯ್ತು.

 

ಆದರೆ ಈ ಕೃತ್ಯದಿಂದಾಗಿ ತಾನೆಂತಹ ಅನಾಹುತಕಾರಿ ಪರಿಸ್ಥಿತಿಯೊಂದಕ್ಕೆ ಎಡೆಮಾಡಿಕೊಡುತ್ತಿದ್ದೇನೆ ಅನ್ನೋದು ಅಮಿನ್ ಅನ್ನೋ ಹುಂಬನಿಗೆ ಗೊತ್ತೇ ಇರಲಿಲ್ಲ… ಪಾಪ!! ತಾನು ಕಂಡ ಕನಸಿನ ಆಫ್ರಿಕಾದ ಚಿತ್ರ ಚದುರಿಹೋಗಲಿದೆ ಅನ್ನೋದು ಅವನರಿವಿಗೆ ನಿಧಾನವಾಗಿ ಬರಲಾರಂಭಿಸಿತ್ತು. ಸಸೂತ್ರವಾಗಿದ್ದ ಉದ್ಯಮಗಳು ಸೂತ್ರ ಹರಿದ ಪಟದಂತಾಗಿಬಿಟ್ಟವು. ದೇಶದ ಹಣಕಾಸಿನ ಪರಿಸ್ಥಿತಿ ದೇವರಿಗೇ ಪ್ರೀತಿ ಅನ್ನುವಂತಾಗಿಬಿಟ್ಟಿತು. ಶಾಲೆ, ಆಸ್ಪತ್ರೆಗಳು ಹಾಳುಸುರಿವ ಮುರುಕು ಛತ್ರದಂತಾಗಿಬಿಟ್ಟವು. ಇಡೀ ದೇಶದ ಆರ್ಥಿಕತೆ ಕಡಿದುರುಳಿಸಿದ ಬಾಳೆ ಮರದಂತೆ ಕುಸಿದುಬಿದ್ದಿತ್ತು. ವಾಸ್ತವದಲ್ಲಿ ಅವನ ಉದ್ಧೇಶ ಕಪ್ಪು ಜನರಿಗೆ ಒಳಿತನ್ನು ಮಾಡಬೇಕೆಂಬುದೇ ಆಗಿತ್ತು. ಹೇಗಾದರೂ ಮಾಡಿ ತನ್ನ ದೇಶಕ್ಕೆ-ಜನಕ್ಕೆ ಒಳ್ಳೆಯದು ಮಾಡಬೇಕೆಂದು ಅವನು ಪಣತೊಟ್ಟಿದ್ದನೇ ಹೊರತು… ಅದನ್ನು ಹೇಗೆ ಸಾಧಿಸಬೇಕೆಂಬ ಬಗ್ಗೆ ಅವನಿಗೇ ಸ್ಪಷ್ಟವಿರಲಿಲ್ಲ. ಅವನು ತನ್ನ ಸುತ್ತ ಕಟ್ಟಿಕೊಂಡಿದ್ದ ಆಡಳಿತಗಾರರ- ಆಧಿಕಾರಿಗಳ ಬೆಂಬಲ ಪಡೆಗೆ ಮೊದಲೇ ಏನೂ ಗೊತ್ತಿರಲಿಲ್ಲ. ಏನನ್ನಾದರೂ ಮಾಡುವುದಕ್ಕೆ ನೆರವಾಗಬಲ್ಲ ಸಾಮರ್ಥ್ಯವಿದ್ದ ಏಷ್ಯನ್ನರನ್ನು ತಾನೇ ಖುದ್ದಾಗಿ ನಿಂತು ಹೊರಹಾಕಿಸಿದ್ದ. ಆದರೆ ಅವನ ಈ ಮೂರ್ಖ ತೀರ್ಮಾನಗಳಿಗೆ ಬೆಲೆ ತೆತ್ತಿದ್ದು ಮಾತ್ರ… ಅವನು ಅಧಿಕಾರಕ್ಕೆ ಬಂದಾಗ ಅವನತ್ತ ಆಸೆಕಂಗಳಿಂದ ದಿಟ್ಟಿಸಿದ್ದ ಮುಗ್ಧ ಉಗಾಂಡಾದ ಜನರು… ತಮ್ಮ ಉದ್ಧಾರಕ್ಕೆ ಬಂದ ಅವಧೂತನಂತೆ ಕಂಡಿದ್ದ ಅದೇ ಅಮಿನ್ ಈಗ ಸೈತಾನನಾಗಿ ಗೋಚರಿಸಲಾರಂಭಿಸಿದ್ದ…. ಅವನ ದುರಾಡಳಿತ-ದೌರ್ಜನ್ಯದಿಂದ ಜನತೆ ಎಷ್ಟು ಬೇಸತ್ತಿದ್ದರು ಅನ್ನುವುದಕ್ಕೆ ಸಾಕ್ಷಿ ಬೇಕಿದ್ದರೆ ಅಮಿನ್ 1979ಲ್ಲಿ ಪದಚ್ಯುತನಾದಾಗ ಜನರ ಸಂಭ್ರಮಾಚರಣೆಯ ದೃಶ್ಯಗಳನ್ನು, ಚಿತ್ರಗಳನ್ನು ನೋಡಬೇಕು.

 

ದೇಶದ ಆದಾಯದ ಬೆನ್ನೆಲುಬಿನಂತಿದ್ದ ಏಷಿಯನ್ನರನ್ನು ಹೊರಗಟ್ಟಿದ ಅಮಿನ್, ಕುಸಿದ ಆರ್ಥಿಕತೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಜಡಿಯಲಾರಂಭಿಸಿದ, ತನ್ನ ವಿರೋಧಿಗಳನ್ನು ಹಣಿಯುವ ಸಲುವಾಗಿ ದೇಶದ ಅಳಿದುಳಿದ ಆದಾಯದ ಮೂಲಗಳನ್ನು ಮಿಲಿಟರಿ ವ್ಯವಸ್ಥೆಗೆ ಸುರಿಯಲಾರಂಭಿಸಿದ. ಸುಮಾರು 18,000 ಜನರನ್ನು ಪಬ್ಲಿಕ್ ಸೇಫ್ಟಿ ಯುನಿಟ್, ಸ್ಟೇಟ್ ರೀಸರ್ಚ್ ಬ್ಯೂರೋ ಮತ್ತು ಮಿಲಿಟರಿ ಪೊಲಿಸ್ಗಳಿಗೆ ನೇಮಿಸಿಕೊಂಡು ತನ್ನ ಶತ್ರುನಾಶದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮುಂದುವರಿಸಿದ. ಆರಂಭದಲ್ಲಿ ಅಮಿನ್‌ಗೆ ಬೆಂಬಲವಾಗಿದ್ದ ಇಸ್ರೆಲ್,ಬ್ರಿಟನ್‌ಗಳ ಮೇಲೆ ಕೂಡಾ ಹಗೆ ಕಾರಲಾರಂಭಿಸಿದ. ಇಸ್ರೇಲ್ ಜೊತೆ ಸಂಬಂಧ ಮುರಿದುಕೊಂಡು ಪ್ಯಾಲಸ್ತೀನ್ ವಿಮೋಚನಾ ಚಳುವಳಿಗೆ ಬೆಂಬಲ ಸೂಚಿಸಿದ. ಉಗಾಂಡಾದಲ್ಲಿದ್ದ ಬ್ರಿಟನ್ ಉದ್ಯಮಗಳನ್ನು ರಾಷ್ಟ್ರೀಕರಣ ಮಾಡಿದ. ಹೀಗೆ ತನಗೆ ನೆರವಾದವರನ್ನೇ ಹಣಿಯಲು ಮುಂದಾದ ಅಮಿನ್ ನವ ಭಸ್ಮಾಸುರನೆನಿಸಿಕೊಂಡ…. ತನ್ನ ಉರಿಹಸ್ತದ ದೆಸೆಯಿಂದಾಗಿ ಉಗಾಂಡಾದ ಜನರ ಬದುಕಿಗೇ ಕೊಳ್ಳಿಯಿಟ್ಟುಬಿಟ್ಟ.

 

( ಮುಂದಿನ ಭಾಗಗಳಲ್ಲಿ…

ಭಾಗ ಮೂರು– ನರಹಂತಕನ ನರಭಕ್ಷಣೆಯ ಕಥೆ… ಟಾಂಜಾನಿಯಾ ಯುದ್ಧದಲ್ಲಿ ಮುಗಿಯಿತು ದರ್ಬಾರಿ ದಿನಗಳು…

ಭಾಗ ನಾಲ್ಕು – ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲೆಂಡ್ ಚಿತ್ರದ ಕಥೆ…

ಭಾಗ ಐದು – ದೊರೆತನ ಅಳಿದ ಮೇಲೆ

)