Posts Tagged ‘ನೆನಪು’

ಕವಿತೆ ಬರೆಯಬೇಕೆಂದುಕೊಂಡು ಕುಳಿತರೆ
ಪದಗಳೇ ಸಿಕ್ಕದೇ ತಡವರಿಸುತ್ತಿಹೆ
ಇರಬೇಕೆಂದುಕೊಂಡೆ
ಬರೆದ ಸುಸ್ತಿಗಿರಬೇಕೆಂದು

ಅಲ್ಲವೆಂದಿತು ಒಳಮನಸ್ಸು
ಬರೆಯಲಾಗದಂತ ಅಶಿಸ್ತಿಗಿರಬೇಕು

ಉಹೂಂ…

ಬದುಕಿನ ಹಾಡಿನ ಪದ-ದನಿ-ನಿಸಗೆಳೆಲ್ಲಾ
ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ
ಬಾಳ ಹೆದ್ದಾರಿಯುದ್ದಗಲಕ್ಕೂ

ಹೆಕ್ಕಿ ಹೆಕ್ಕಿ ಸುಸ್ತಾಗಿ ಬರೆದಿದ್ದು
ನನಗೆ ದಕ್ಕಿದ್ದೆಷ್ಟೋ ಅಷ್ಟು

ಮಿಕ್ಕಿದ್ದು….?!
ಅಳಿದುಳಿದ ನನ್ನ ನಿನ್ನ ನೆನಪಿನ ಸಂಚಿಯೊಳಗಿಷ್ಟು!!

ನಿನ್ನಾಗಮನ
ನನಗರಿವಿರದೇ ಆಯ್ತು
ಸುಳಿವು
ಗೊತ್ತೇ ಆಗದಂತೆ

ನನ್ನ ಮನವ
ಸೆಳೆದಿಟ್ಟುಕೊಂಡಿದ್ದೂ ಆಯ್ತು
ಒಲವು
ಗುಪ್ತ ಗಾಮಿಯಂತೆ

ನಿಷ್ಕ್ರಮಣವು
ಮಹಾಪ್ರಸ್ಥಾನವೇ ಆಯ್ತು
ಹರಿವು
ದಿಕ್ಕು ಬದಲಿಸಿದಂತೆ

ನನ್ನ ಬದುಕ
ದಿಕ್ಕೇ-ಬದಲಾಗಿ ಹೋಯ್ತು
ನೆರೆದ
ಆಪ್ತ ನೆನಪ ಸಂತೆ

ಇಂದೂ ನಾನಿರುವೆ
ಇದ್ದೂ ಇರದ ನೆರಳಂತೆ
ಸ್ಮೃತಿಯಲಿ
ಸಂಗತ ಭೂತದ
ಪಳೆಯುಳಿಕೆಯಾಗಿ

ಮುಂದೂ ನೀನಿರುವೆ
ಮಾಯಲಾರದ ಗಾಯದಂತೆ
ವಿಸ್ಮೃತಿಯಲಿ
ಅಸಂಗತ ಭವಿಷ್ಯದ
ಕನವರಿಕೆಯಾಗಿ…ನೆನವರಿಕೆಯಾಗಿ

ಹನಿಗಳು….ಅಷ್ಟೇ…!!

Posted: ಸೆಪ್ಟೆಂಬರ್ 17, 2008 in ಮನಸಿನ ಹಾಡು
ಟ್ಯಾಗ್ ಗಳು:, ,

 

(ನನ್ನ ಅಂತರಂಗದ ಆಪ್ತಸ್ವರ ಪುಸ್ತಕದಿಂದ ಎತ್ತಿಕೊಂಡಿದ್ದು …. )

 

ಕಣ್ಣಿನ ಭಾಷೆ ಕಲಿತುಕೋ ಗೆಳತಿ

ಕೇಳಿಸಿಕೋ ಈ ಮೌನದ ವಿನತಿ

ಹೃದಯ ಸಂವೇದನೆಯ ಮಾತಲಿ ಹೇಳೋದು ಹ್ಯಾಗೆ

ಅರಿವಾಗಬೇಕು ನಿನಗೇ ಗೊತ್ತಾಗದ ಹಾಗೆ

 

<< >><< >><< >><< >><< >><< >><<< >><< >>

 

ನೀನಿಲ್ಲದೇ ಹೋದರೂ

ನೀ ನಿಲ್ಲದೇ ಹೋದರೂ

ನಾ ನಿಲ್ಲದಾದರೂ

ನಾನಿಲ್ಲವಾದರೂ

ಹುಸಿಯಾದೀತೇ ನನ್ನ ನಿನ್ನ ಪ್ರೀತಿ?

 

<< >><< >><< >><< >><< >><< >><<< >><< >>

 

ಕಾಡುವ ಪ್ರಶ್ನೆಗಳೇ ಹೀಗೆ-

ಮನವ ಕೆದಕಿ,

ಯೋಚನೆಯ ಬೆದಕಿ,

ಸುಡುವ ಬಿಸಿಲಿನ ಬೇಗೆ

ಥೇಟ್ ನಿನ್ನ ನೆನಪಿನ ಹಾಗೆ!

 

<< >><< >><< >><< >><< >><< >><<< >><< >>

 

ಕನಸಲ್ಲಿ ಬರುವ ಬೆಡಗಿಯರೇ

ನಿಜದಿ ಎದುರಾಗಬೇಡಿ

ನಿರೀಕ್ಷೆಗಳಲ್ಲಿರುವ ಸುಖವ

ಹುಸಿಯಾಗಿಸಬೇಡಿ

 

<< >><< >><< >><< >><< >><< >><<< >><< >>

 

ಎಲ್ಲೋ ಯಾರೋ ಏಕೋ ಹೇಗೋ ಇಷ್ಟವಾಗಿ

ಕಣ್ಣ ಮಾತು – ಅದುರೋ ಅಧರದಿಂದ ಸ್ಪಷ್ಟವಾಗಿ

ಮನದ ಮುಗಿಲಲಿ ಈಗ ಗಾಳಿಪಟ

ಎದೆಯೊಳಗಿನ ಸಂಕೋಚವೀಗ ಧೂಳಿಪಟ

 

<< >><< >><< >><< >><< >><< >><<< >><< >>

 

ಮಳೆಗಾಲದ ಅಂಗಳದ

ದಬ್ಬೆ ಮೇಲಿನ ಪಾಚಿ ಲೋಳೆ ಮೇಲೆ

ಕಾಲಿಟ್ಟು ಜಾರಿ ಬಿದ್ದಿದ್ದು

 

ನಿದ್ದೆಯೆಳೆದರೂ ಕಣ್ತೆರೆದು

ಸೋಣೆಯಾರತಿ ಪಂಚಕಜ್ಜಾಯಕ್ಕೆ

ಕಾಗದದ ಕೊಟ್ಟೆ ಹಿಡಿದಿದ್ದು

 

ಚಾಪೆ ಹಣ್ಣು ಪಿತ್ತವೆಂದು ಎಷ್ಟು ಹೇಳಿದರೂ

ಕೇಳದೆ ಸಮಾ ತಿಂದು

ಹೊಟ್ಟೆನೋವು ಬಂದಿದ್ದು

 

ಹಬ್ಬದಗುಡಿ ಸುತ್ತಿ ಸುತ್ತಿ

ಬತ್ತಿಹೋಗಿ ನೋವಾದ ಪಾದಗಳಿಗೆ

ಅಮ್ಮ ಎಣ್ಣೆ ಬಳಿದಿದ್ದು

 

ಕಾಟು ಮಾವಿನ ಮರಕ್ಕೆ

ಸ್ಪರ್ಧೆಯ ಮೇಲೆ ಕಲ್ಲು ಹೊಡೆದು

ಹುಳಿ-ಸಿಹಿ ಹಣ್ನು ತಿಂದಿದ್ದು

 

ಬಿಂಬಲಕಾಯಿಯ ರುಚಿ

ನಾಲಿಗೆಗೆ ಸೋಕಿದಾಗ ಅದರ ಹುಳಿಗೆ

ಮುಖವ ಕಿವುಚಿದ್ದು

 

ಹುಚ್ಚು ಮಳೆಗೆ ಸೊಕ್ಕಿ ಹರಿವ

ಹೊಳೆಯಲಿ ಬಳಿದು ಬರುವ ಮರಗಳ

ಲೆಕ್ಕ ಇಡಲು ಸೋತಿದ್ದು

 

ಸುಳ್ಳೇ ಹೊಟ್ಟೆನೋವಿನ

ನೆಪ ಹೇಳಿ ಯಾಮಾರಿಸಿ ಶಾಲೆಗೆ

ಚಕ್ಕರ್ ಹಾಕಿದ್ದು

 

ಇವೆಲ್ಲಾ ಮತ್ತೆ ಬರಲಾರದೆಂದೇನೋ

ಮತ್ತೆ ಮತ್ತೆ ನೆನಪಾಗಿ ಕಾಡಿದ್ದು

ನೆನಪಿನ ನವಿರಿಗೆ ಕಣ್ಣಂಚು ಹಸಿಯಾಗಿ

ಹನಿಯೊಂದು ಜಾರಿದ್ದು

 

 

ನಾನು ಹುಸಾರ್….!!

ನಾನಾಗ ಹಳ್ಳಿಹೊಳೆಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದೆ. ಇರುವ ಬೆರಳೆಣಿಕೆಯ ಹುಡುಗ ಹುಡುಗಿಯರ ಮಧ್ಯೆ ಓದೋದ್ರಲ್ಲಿ ಸ್ವಲ್ಪ ಆಸಕ್ತಿ ನನಗೆ ಹೆಚ್ಚಾಗಿದ್ದ ಕಾರಣ ಎಲ್ಲಾ ಮಾಷ್ಟ್ರುಗಳ ಅಚ್ಚುಮೆಚ್ಚಿನವನಾಗಿದ್ದೆ. ಆಗ ನಮ್ಮ ಕ್ಲಾಸ್ ಮಾಷ್ಟ್ರು ಗಣಪತಿ ಮಂಜರು ಅನ್ನುವವರು. ಅವರೊಂದು ದಿನ 4ನೇ ಕ್ಲಾಸಿನಲ್ಲಿ ಪಾಠ ಓದಿಸ್ತಾ ಇದ್ದ್ರು. ಆಗ ಕ್ಲಾಸಿನಲ್ಲಿರೋರೆಲ್ಲ ತಪ್ಪು ತಪ್ಪಾಗಿ ಓದ್ತಾ ಇದ್ರು. ಹಾಗಾಗಿ ನನ್ನನ್ನು 4 ನೇ ಕ್ಲಾಸಿಗೆ ಕರೆದುಕೊಂಡು ಹೋಗಿ ಸಮಾಜ ಪಾಠದ 2 ಪುಟ ಓದಿಸಿ, ಕ್ಲಾಸಿನ ಮುಂದೆ ನನ್ನನು ಹೊಗಳಿದ್ದು; ಅದರಿಂದ ನನ್ನ ತಲೆಯ ಮೇಲೊಂದು ಕೋಡು ಮೂಡಿದ್ದು…ಯಾಕೋ ಸುಮ್ಮನೆ ನೆನಪಾಗಿ ತುಟಿಯಂಚಿನಲ್ಲಿ ಕಿರುನಗೆ ಮಿನುಗಿತ್ತು.

 

ಕ್ಷಮಿಸಿಬಿಡಿ ಮಾಷ್ಟ್ರೆ….

ಇನ್ನೊಂದು ಘಟನೆ ಹೇಳ್ತಿನಿ ಕೇಳಿ. ಆಗ ನಾನು ಕಮಲಶಿಲೆ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದ್ತಾ ಇದ್ದೆ. ಕ್ಲಾಸಿಗೆ ನಾನೇ ಲೀಡರು ( ಮಾನಿಟರ್ ಅಂತ ಬೇಕಿದ್ರೆ ಓದ್ಕೊಳ್ಳಿ). ಕಥೆ ಪುಸ್ತಕ ಓದುವ ಹುಚ್ಚು ಆಗಲೂ ಜೋರಾಗಿತ್ತು. ನನ್ನ ಓದಿಗೆ ರಾಗಸಂಗಮ, ಹಂಸರಾಗ ಪುಸ್ತಕಗಳನ್ನು ನನ್ನ ಕ್ಲಾಸಿನಲ್ಲೇ ಇದ್ದ ಉಮೇಶ್ ಶೆಟ್ಟಿ ಅನ್ನುವ ಹುಡುಗ ತಂದು ಕೊಡುತ್ತಿದ್ದ. ಕ್ಲಾಸಲ್ಲಿ ಪಾಠ ಇರದೆ, ಕ್ಲಾಸ್ ನೋಡಿಕೊಳ್ಳುವ ಹೊತ್ತಿನಲ್ಲಿ ತೋರಿಕೆಗೆ ಪಾಠ ಪುಸ್ತಕ ಇಟ್ಟುಕೊಂಡು ಅದರ ಮಧ್ಯೆ ರಾಗಸಂಗಮ, ಹಂಸರಾಗದ ಪುಸ್ತಕ ಇಟ್ಟು ಓದಿನಲ್ಲಿ ಮುಳುಗಿ ಹೋಗುತ್ತಿದ್ದೆ. ನನ್ನ ತನ್ಮಯತೆ ನೋಡಿದ ಪಕ್ಕದ ಕ್ಲಾಸಿನಲ್ಲಿದ್ದ ಮೇಷ್ಟ್ರು.. ನೋಡಿ ಅವ್ನು ಎಷ್ಟು ತನ್ಮಯತೆಯಿಂದ ಒದುತ್ತಿದ್ದಾನೆ. ನೀವೂ ಹಾಗೆ ಓದ್ಬಾರ್ದಾ ಅಂತ ಹೇಳಿದ್ರು ಅಂತ ಊಟಕ್ಕೆ ಬಿಟ್ಟಾಗ ಪಕ್ಕದ ಕ್ಲಾಸಿನ ಹುಡುಗನೊಬ್ಬ ಹೇಳ್ತಾ ಇದ್ದ. ಹೊಗಳಿಕೆಗೆ ಆಗ ಖುಶಿ ಆಯ್ತಾದ್ರೂ..ಈಗ ಅನ್ಸುತ್ತೆ… ಇದೂ ಕೂಡಾ ಒಂದು ರೀತಿ ನಂಬಿಕೆದ್ರೋಹಾನೇ ಅಲ್ವಾ ಅಂತ…ಮಾಷ್ಟ್ರೇ…ಕ್ಷಮಿಸ್ತೀರಾ..?

 

ಹೋಳಿಗೆ ಪ್ರಸಂಗ

ಕಮಲಶಿಲೆ ಶಾಲೆಯಲ್ಲಿದ್ದಾಅಗಲೇ ನಡೆದ ಇನ್ನೊಂದು ಪ್ರಸಂಗ ಭಾರಿ ಗಮ್ಮತ್ತಾಗಿದೆ. ಆಗ ನಮ್ಮ ಸಂಬಂಧಿಕರೊಬ್ಬರ ಮದುವೆ ಅಲ್ಲೇ ಕಮಲಶಿಲೆಯ ದೇವಸ್ಥಾನದಲ್ಲಿ ನಡೆದಿತ್ತು. ಮದುವೆಗೆ ಹೋಗೋಕೆ ಅಂತ ಮಂಜಯ್ಯ ಮಾಷ್ಟ್ರ ಹತ್ತಿರ ಅನುಮತಿ ಕೇಳಿಕೊಂಡು ನಾವೊಂದು ನಾಲ್ಕಾರು ಜನ ಹೋಗಿದ್ವಿ. ನಾವು ಕೇಳೋಕೆ ಹೋದಾಗ ಮಾಷ್ಟ್ರು ಸುಮ್ನೆ ಕುಶಾಲಿಗೆ ಅಂತ…ಮದಿಗೆ ಹೋಯಿ ಬರೇ ನೀವ್ ಮಾತ್ರ ಗಡ್ಜಾಗಿ( ಗಡದ್ದಾಗಿ) ಉಂಡ್ಕಂಡ್ ಬಂದ್ರೆ ಸಾಕಾ? ಮಾಷ್ಟ್ರಿಗೆ ಏನಾರೂ ಹೋಳ್ಗಿ ತಕಂಡ್ ಬತ್ರ್ಯಾ ಅಂತ ಕೇಳಿದ್ರು. ಅವ್ರು ತಮಾಷೆಗೆ ಹೇಳಿದ್ದಾದ್ರೂ ನಾವ್ ಮಾತ್ರ ಅದನ್ನೇ ಗಟ್ಟಿಮಾಡಿಕೊಂಡು ಹೋಳಿಗೆ ತಗೊಂಡು ಹೋಗಿಯೇ ಶುದ್ಧ ಅಂತ ನಿರ್ಧಾರ ಮಾಡಿದ್ವಿ. ಅಂತೆಯೇ ಅಲ್ಲಿ ನಮ್ಮ ಗುರುತಿನವರಲ್ಲಿ ಕೇಳಿ ಹೋಳಿಗೆ ಕಟ್ಟಿಸಿಕೊಂಡು ಬಂದದ್ದೂ ಆಯ್ತು. ತಕ್ಕೊಂಡು ಹೋಗಿ ಆಫೀಸ್ ರೂಮ್ನಲ್ಲಿ ಮಾಷ್ಟ್ರಿಗೆ ಕೊಟ್ಟಿದ್ದೂ ಆಯ್ತು. ನಾವು ಬಂದು ನಮ್ಮ ನಮ್ಮ ಕ್ಲಾಸಲ್ಲಿ ಕುಳಿತುಕೊಂಡೆವು. ಆಗ ಬಂತು ನಮಗೆ ಬುಲಾವ್. ಅಲ್ಲಿಯವರೆಗೆ ಯಾವತ್ತೂ ರೌದ್ರಾವತಾರ ತಳೆಯದ ಮಂಜಯ್ಯ ಮಾಷ್ಟ್ರಿಗೆ ಅದೆಲ್ಲಿತ್ತೋ ಸಿಟ್ಟು, ನೆತ್ತಿಗೇರಿಬಿಟ್ಟಿತ್ತು. ಆಲ್ಲಿ ಹೋಗಿ ನಮಗೆ ಅಂತ ಹೇಳಿ ಹೋಳಿಗೆ ತಂದಿದ್ದೀರಲ್ಲ. ಅವ್ರು ಏನಂತ ತಿಳ್ಕೋತಾರೆ ಅನ್ನೋ ಅಕಲು(ಬುದ್ಧಿ) ಬೇಡ್ವಾ ನಿಮ್ಗೆ.. ಅಂತಂದು ಕೈ ಮೇಲೆ ಕಾಸಿ ಕೊಟ್ಟ ನಾಲ್ಕು ನಾಲ್ಕು ಬೆತ್ತದೇಟಿನ ಹೋಳಿಗೆ…ಈಗ ನೆನಪಾದ್ರೆ ಬಿದ್ದು ಬಿದ್ದು ನಗುವಂತಾಗುತ್ತೆ.

 

ನೆನಪುಗಳಿಗೇನು ಬಿಡಿ…ಹೊತ್ತು ಗೊತ್ತಿಲ್ಲದೆ ಅಕಾರಣವಾಗಿ ಆಗೀಗ ಮುಂದೆ ಬಂದು ತದಿಗಿಣತೋಂ ಅಂತ ಕುಣಿಯಲಾರಂಭಿಸುತ್ತವೆ. ಹೀಗೆ ಉಕ್ಕಿದ ನೆನಪುಗಳನ್ನು ಹೆಕ್ಕಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮ್ಮಲ್ಲೂ ಇಂತಹ ಸ್ವಾರಸ್ಯಕರ ಪ್ರಸಂಗ ಇದ್ರೆ ಹಂಚಿಕೊಳ್ಳಿ..ಎಲ್ಲರೂ ಓದಿ ಸಂಭ್ರಮಿಸೋಣ