Archive for the ‘ಇತ್ಯಾದಿ…’ Category

ಚಿತ್ತ ಭಿತ್ತಿಯ ಚುಕ್ಕಿ ಚಿತ್ತಾರಗಳಿಗೆ
ಕನಸು ಕಂಗಳ ಕನ್ನಡಿಯ ಕಲ್ಪನೆಗಳಿಗೆ
ಭಸ್ಮೀಭೂತ ಭಾವಗಳ ಮೆತ್ತಿ ಬಳಿದು
ಅಕ್ಷರಗಳ ರಂಗಿನ ಉಡುಗೆ ತೊಡಿಸಿ

ಹುದುಗಿಸಿಟ್ಟಿರುವೆ ಓ ಕಾವ್ಯ ಕನ್ನಿಕೆಯೇ
ಬೆತ್ತಲಾಗದಂತೆ ನನ್ನ ಮನದೊಳಗೆ
ಅವಿತಿರುವ ನಿನ್ನ ಮೂರ್ತ ಸ್ವರೂಪ

Zero-Energy-Buildings-lg

ಎದೆಯೊಳಗಿನ ಭಾವದ ಪ್ರಜ್ಞೆಗಳನ್ನೆಲ್ಲಾ
ಪ್ರಶ್ನೆ ಹಾಕುತ್ತಾ ಬಗೆಯುತ್ತಾ ಹೋದರೆ
ಸಿಗುವುದೊಂದು ದೊಡ್ಡ ಸೊನ್ನೆ

ಪ್ಲಸ್ಸೊಂದು ಮೈನಸ್ಸೊಂದು ಎರಡೂ
ಸೇರಿ ಹುಟ್ಟುವ ಯಾವುದೂ ಅಲ್ಲದ ಶೂನ್ಯ

ಪ್ರತಿ ಪ್ರಶ್ನೆಗೂ ಉತ್ತರ ಹುಡುಕಲೇ ಬೇಕೆಂಬ
ತವಕವ ಅದುಮಿಟ್ಟು, ತುಡಿತವ ಬದಿಗಿಟ್ಟು
ಹಾಯಾಗಿರೋ ಹಂಬಲ ಏಕೆ ಅನ್ನುವುದೇ ಪ್ರಶ್ನೆಯಾಗಿ ಕಾಡುತಿರೆ

ಉತ್ತರವೇ ಸಿಗದೆ ಚಡಪಡಿಸಿ ಒದ್ದಾಡುತ್ತಿಹೆ
ಥೂ… ಹಾಳಾದ್ದು…ಈ ಮನಸಿನ ಸನ್ನೆಯೂ ಸೊನ್ನೆ

ಈರುಳ್ಳಿ ಬೆಲೆ ಜಾಸ್ತಿ ಆದಾಗಲೆಲ್ಲ ಸಾಂಬರು ಪಲ್ಯಗಳಲ್ಲಿ… ಅಷ್ಟೇ ಯಾಕೆ, ಹೋಟೆಲಿನ ಮಸಾಲೆ ದೋಸೆಯ ‘ಬಾಜಿ’ಯಲ್ಲಿ ಕೂಡಾ ಈರುಳ್ಳಿ ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ ಅಂತ ಬೇಕಿದ್ರೆ ನೀವು ‘ಬಾಜಿ’ ಕಟ್ಟಿ ಗೆಲ್ಲಬಹುದು. ಆದರೆ ಕೆಲವರಿಗೆ ಮಾತ್ರ ಬೆಲೆಯ ಏರಿಳಿತಗಳಿಗೆ ಅತೀತವಾಗಿ ಜೀವಮಾನ ಪರ್ಯಂತ ಈರುಳ್ಳಿ ಜೊತೆಗೆ ಅದರ ತಮ್ಮನಂತಿರುವ ಬೆಳ್ಳುಳ್ಳಿ ಕೂಡಾ ವರ್ಜ್ಯ ಅನ್ನುವುದು ನಿಮಗೆ ಗೊತ್ತಿರಲಿಕ್ಕೂ ಸಾಕು. ಏನಿರಬಹುದು ಇದಕ್ಕೆ ಕಾರಣ? ಕೆಲವರ ಪ್ರಕಾರ ಇವೆರಡೂ ತಾಮಸಿಕ ಗುಣಗಳನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ ಜೊತೆಗೆ ಇವುಗಳನ್ನು ಸೇವಿಸಿದಾಗ ಬಾಯಿಯ ಶ್ವಾಸದ ‘ದುರ್ವಾಸ’ನೆಗೆ ಎದುರಿನವರು ‘ಮುನಿ’ದಾರು ಎಂಬ ಕಾರಣವನ್ನು ನೀಡಿ ಇವೆರಡಕ್ಕೆ ಬಹಿಷ್ಕಾರದ ‘ಶಾಪ’ ಕೊಡಲಾಗಿದೆ.

ಸುಮ್ಮನೇ ಕುತೂಹಲಕ್ಕೆಂದು ನೆಟ್ಟಿನಲ್ಲಿ ನೆಟ್ಟಗೆ ಹುಡುಕಿದಾಗ ಇವೆರಡು ವರ್ಜ್ಯವಾಗಲು ಕಾರಣವೇನು ಎಂಬುದರ ಕುರಿತು ‘ದಂತ’ಕತೆಯೊಂದು ಸಿಕ್ಕಿತು. ಇದು ಯಾವ ಪುರಾಣದಲ್ಲಿ ಉಲ್ಲೇಖವಿದೆ ಅನ್ನುವ ಕುರಿತು ಈ ಕತೆ ಹೇಳಿದವರಿಗೂ ಗೊತ್ತಿಲ್ಲವಾದ ಕಾರಣ ಇದರ ಮೂಲದ ಕುರಿತು ನಾನೂ ಅಷ್ಟೇ ಅಜ್ಞಾನಿ. ಈ ಕತೆ ಅಸಂಬದ್ಧ ಅನ್ನಿಸಿದ್ರೆ ನನ್ನ ಮಾತ್ರ ಬಯ್ಕೋಬೇಡಿ… ಮೂಲದ ಕತೆಗಾರರಿಗೆ ಬಯ್ದು ಬಿಡಿ ಸಾಕು… 🙂 ಕತೆ ಏನಪ್ಪಾ ಅಂದ್ರೆ……

ಈ ಈರುಳ್ಳಿ ಬೆಳ್ಳುಳ್ಳಿ ಎರಡೂ ನಾನ್-ವೆಜಿಟೇರಿಯನ್ ಅಂತೆ ಮಾರಾಯ್ರೆ! ಸತ್ಯಯುಗದಲ್ಲಿ ಋಷಿಗಳು ಲೋಕ ಕಲ್ಯಾಣಾರ್ಥವಾಗಿ ಅಶ್ವಮೇಧ ಹಾಗೂ ಗೋಮೇಧ ಯಜ್ಞಗಳನ್ನು ಮಾಡುತ್ತಿದ್ದರಂತೆ. ಆ ಯಜ್ಞದಲ್ಲಿ ಜೀವಂತ ಕುದುರೆ ಹಾಗೂ ಹಸುಗಳನ್ನು ತುಂಡುಗಳಾಗಿ ಕತ್ತರಿಸಿ, ಯಜ್ಞಕ್ಕೆ ಆಹುತಿ ಕೊಡಲಾಗುತ್ತಿತ್ತಂತೆ. ಆ ಬಳಿಕ ಋಷಿಗಳು ಮಂತ್ರಗಳನ್ನು ಪಠಿಸಿದಾಗ, ಅವು ಜೀವ ತಳೆದು ನವ ತಾರುಣ್ಯದಿಂದ ನಳನಳಿಸುತ್ತಿದ್ದುವಂತೆ. ಎಷ್ಟಾದರೂ ಸತ್ಯಯುಗವಲ್ಲವೇ! ಹೀಗೆ ಒಬ್ಬ ಋಷಿ ಒಮ್ಮೆ ಗೋಮೇಧ ಯಜ್ಞವನ್ನು ಹಮ್ಮಿಕೊಂಡಿದ್ದನಂತೆ. ಆಗವನ ಪತ್ನಿ ತುಂಬು ಗರ್ಭಿಣಿಯಂತೆ. ಅವಳಿಗೆ ಮಾಂಸ ತಿನ್ನಬೇಕೆಂದು ಬಲವಾದ ಆಶೆಯಾಯಿತಂತೆ (ನೆನಪಿಡಿ ಇದು ಬಹು ಹಿಂದಿನ ಕಾಲದ ಪುರಾಣದ ಮಾತು. ಆಗ ಮಾಂಸಾಹಾರ ವರ್ಜ್ಯವಾಗಿರಲಿಲ್ಲ!) ಹೀಗೆ ಆಶೆಪಟ್ಟುದು ನೆರವೇರದೇ ಹೋದರೆ ಹುಟ್ಟುವ ಶಿಶು ಸದಾ ಬಾಯಲ್ಲಿ ಜೊಲ್ಲು ಸುರಿಸಿಕೊಂಡೇ ಇರುವುದು ಎನ್ನುವ ಪ್ರತೀತಿಯಿತ್ತಂತೆ. ಹಾಗಾಗಿ ಆಕೆ ಯಜ್ಞಕ್ಕೆಂದು ಮೀಸಲಾಗಿರಿಸಿದ ಕತ್ತರಿಸಿದ ಮಾಂಸದ ತುಂಡೊಂದನ್ನು ಋಷಿಯ ಗಮನಕ್ಕೆ ಬರದಂತೆ ತೆಗೆದು ಬಚ್ಚಿಟ್ಟಳಂತೆ. ಇದ್ಯಾವುದರ ಅರಿವೇ ಇಲ್ಲದ ಋಷಿ, ತನ್ನ ಯಜ್ಞದ ಕಾರ್ಯವನ್ನು ಸಾಂಗಗೊಳಿಸಿ, ಮಾಂಸವನ್ನು ಅಗ್ನಿಗೆ ಆಹುತಿಯಾಗಿ ಕೊಟ್ಟು, ಮಂತ್ರಗಳನ್ನು ಉಚ್ಚರಿಸಿದನು. ಎಂದಿನಂತೆ ಯವ್ವನದಿಂದ ನಳನಳಿಸುವ ಹಸುವೊಂದು ಯಜ್ಞಕುಂಡದಿಂದ ಜಿಗಿದೆದ್ದು ಹೊರಬಂದಿತು. ಅದನ್ನು ಗಮನಿಸಿ ನೋಡಿದಾಗ ಅದರ ಎಡಪಾರ್ಶ್ವದ ಅಂಗದಲ್ಲಿ ಊನತೆಯೊಂದು ಕಂಡು ಬಂದಿತಂತೆ. ಇದಕ್ಕೆ ಕಾರಣ ಋಷಿಪತ್ನಿ ಎತ್ತಿಟ್ಟಿದ್ದ ಮಾಂಸದ ತುಂಡೇ ಆಗಿತ್ತು. ಋಷಿ ಸ್ವಲ್ಪ ಹೊತ್ತು ಧ್ಯಾನಮಗ್ನನಾಗಿ ಅವಲೋಕಿಸಿದಾಗ ಅವನಿಗೆ ನಡೆದ ವೃತ್ತಾಂತವೆಲ್ಲಾ ಕಣ್ಮುಂದೆ ಚಿತ್ರದಂತೆ ಗೋಚರಿಸಿ ಆದ ಅನರ್ಥದ ಅರಿವಾಯಿತು. ಗಂಡನಿಗೆ ವಿಷಯ ತಿಳಿಯಿತೆನ್ನುವುದನ್ನು ಅವನ ವದನವನ್ನು ನಿರುಕಿಸಿಯೇ ಗ್ರಹಿಸಿದ ಋಷಿಪತ್ನಿ, ಆ ಕೂಡಲೇ ಬಚ್ಚಿಟ್ಟಿದ್ದ ಮಾಂಸದ ತುಂಡನ್ನು ತೆಗೆದು ಹೊರಗೆಸೆದಳಂತೆ. ಋಷಿಯು ಮಂತ್ರಗಳನ್ನು ಪಠಿಸಿದ ಕ್ಷಣಮಾತ್ರದಲ್ಲೇ ಆ ಮಾಂಸದ ತುಂಡಿನಲ್ಲಿ ಜೀವಸಂಚಾರವಾಯಿತಂತೆ. ಆ ತುಂಡಿನಲ್ಲಿದ್ದ ರಕ್ತವೆಲ್ಲ ಕೆಂಪು ವರ್ಣದ ತೊಗರಿಬೇಳೆ(ಹೆಚ್ಚಾಗಿ ಉತ್ತರಭಾರತದ ಕಡೆ ಸಿಗುತ್ತಂತೆ) ಆಯಿತು. ಅದರಲ್ಲಿದ್ದ ಮೂಳೆಯೆಲ್ಲಾ ಬೆಳ್ಳುಳ್ಳಿ ಆಯಿತು. ಅದರ ಮಾಂಸವೆಲ್ಲಾ ಈರುಳ್ಳಿ ಆಯಿತಂತೆ. ಈ ಕಾರಣಕ್ಕೇ ಕೆಲವು ಜನರಿಗೆ ಇದು ವರ್ಜ್ಯ ಅಂತ ಹೇಳುತ್ತೆ ಈ ಕಥೆ!!

ಬೆಳ್ಳುಳ್ಳಿ ಕೆಂಪು ತೊಗರಿಗಳ ಕತೆ ಅತ್ಲಾಗಿರಲಿ… ಈರುಳ್ಳಿ ಬೆಲೆ ನೋಡಿದ್ರೆ ಮಾಂಸವೇ ಈರುಳ್ಳಿ ಆಗಿದ್ದಿರಲೂಬಹುದು ಅಂತ ಈ ಕಲಿಯುಗದಲ್ಲೂ ಅನುಮಾನ ಬರದೇ ಇರುತ್ತಾ ಹೇಳಿ :-)!!

ಸುಮ್ನೆ ಇರ್ಲಿ ಒಂದು ಪ್ರಯೋಗ ಅಂತ….
_/\__/\__/\__/\__/\__/\__/\_
ಅವರಿಗಿವರೆಂದು…ಇವರಿಗವರೆಂದು
ಅರಿವಾಗುವುದರೊಳಗೆ
ಅವರಿವರಿಗೆ-ಅರಿಯಾಗಿ ಇವರವರಿಗೆ-ಅರಿಯಾಗಿ
ವರಿಯಾಗಿ-ವೈರಿಯಾಗಿ
ಅವರಿವರನಿರಿ…ಇವರವರನಿರಿ

ಅರಿವಿಲ್ಲ… ಅವರಿಗೂ ಇವರಿಗೂ
ಅವರೀರ್ವರ ಹೊರೆವನೋರ್ವನೇ ಹರಿ
ಇದನರಿತ ನುರಿತನುಸುರಿದ
‘ಅರಿ’ವೇ ಗುರು
ಅರಿವಾಗುವವರೆಗೂ…ಅರಿಗಳಾಗಿ ಅರಿವೆ ಹರಿ

ಕವಲೊಡೆದ ಹಾದಿಯಲಿ
ಬೇರಾಯಿತು ಹೆಜ್ಜೆ
ಭರಿಸಲಾಗದೇ ಹೋಯ್ತು
ಸಂಬಂಧದ ವಜ್ಜೆ

ಬೇರಾದ ಮೇಲೂ ಹಾಳು
ಮನಸಿಗಿಲ್ಲ ಲಜ್ಜೆ
ಆಲಿಸುತಿದೆ ಕಿವಿಗೊಟ್ಟು
ನಿನ್ನಡಿ ಸಪ್ಪಳದ ಗೆಜ್ಜೆ