Archive for ಜುಲೈ, 2010

ಡೇಟಾಬೇಸ್ ಕ್ಷೇತ್ರದಲ್ಲಿ ಸರಿಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ದಿನಚರಿಯ ಸಹಜ ಭಾಗವಾಗಿರುವ ಡೇಟಾಬೇಸ್ ಕುರಿತು ಒಂದಿಷ್ಟು ಪರಿಚಯ ಮಾಡಿಕೊಡೋಣ ಅನ್ನುವ ನನ್ನ ಬಹುದಿನದ ಬಯಕೆಯನ್ನು ಇವತ್ತು ಬರಹ ರೂಪಕ್ಕಿಳಿಸುತ್ತಿದ್ದೇನೆ. ಸಾಕಷ್ಟು ಉದಾಹರಣೆಗಳೊಂದಿಗೆ ವಿಷಯವನ್ನು ಸಾಧ್ಯವಾದಷ್ಟು ಸರಳವಾಗಿ ವಿವರಿಸಲು ಯತ್ನಿಸುತ್ತೇನೆ. ಆಸಕ್ತಿ ಇರುವವರಿಗೆ ಒಂದಿಷ್ಟು ಮಾಹಿತಿ ಸಿಕ್ಕಿದರೆ ನನ್ನ ಪ್ರಯತ್ನ ಸಾರ್ಥಕ

ಮೊತ್ತ ಮೊದಲನೆಯದಾಗಿ   ’ಡೇಟಾ’ ಅಂದರೆ ಏನೆಂದು ತಿಳಿದುಕೊಳ್ಳೋಣ. ಯಾವುದೇ ವಸ್ತು-ಯಾ ವಿಷಯದ ಕುರಿತು ಲಭ್ಯವಿರುವ ಅಂಕಿ-ಅಂಶ, ವಿವರಣೆ ಅಥವಾ ಮಾಹಿತಿಯನ್ನು ’ಡೇಟಾ’ ಎಂದು ಕರೆಯಬಹುದು. ಕನ್ನಡದಲ್ಲಿ ಇದಕ್ಕೆ ’ದತ್ತಾಂಶ’ ಅನ್ನುವ ಪದವನ್ನು ಕೆಲವರು ಬಳಸುತ್ತಾರಾದರೂ ನಾನಿಲ್ಲಿ ವಿವರಣೆಯ ಅನುಕೂಲಕ್ಕಾಗಿ  ’ಮಾಹಿತಿ’ ಅನ್ನುವ ಪದವನ್ನೇ ಬಳಸುತ್ತೇನೆ. ಹೀಗೆ ಲಭ್ಯವಿರುವ ಮಾಹಿತಿಯನ್ನು ಒಂದು ವ್ಯವಸ್ಥಿತ ಕ್ರಮದಲ್ಲಿ ಸಂಗ್ರಹಿಸಿ, ಅದನ್ನು ಸುಲಭವಾಗಿ ಬಳಸಲು ಅನುಕೂಲವಾಗುವಂತೆ ಶೇಖರಿಸಿಟ್ಟಾಗ ಅದನ್ನು ’ಡೇಟಾಬೇಸ್’ಎಂದು ಕರೆಯಬಹುದು. ಒಂದು ಔಷಧದ ಅಂಗಡಿಯ ಉದಾಹರಣೆಯನ್ನು ಗಮನಿಸೋಣ.ಅವರಲ್ಲಿ ವಿವಿಧ ಖಾಯಿಲೆಗಳಿಗೆ ನೀಡುವ, ಅನೇಕ ಕಂಪೆನಿಗಳು ತಯಾರಿಸಿದ ಬಗೆಬಗೆಯ ಮಾತ್ರೆ, ಟಾನಿಕ್ಕು, ಮುಲಾಮು… ಹೀಗೆ ಔಷಧಿಗಳ ಸಂಗ್ರಹವಿರುತ್ತದೆ. ಈ ಔಷಧಿಗಳ ಕುರಿತಾದ ಮಾಹಿತಿಯನ್ನು ವ್ಯವಸ್ಥಿತವಾಗಿ ಪುಸ್ತಕವೊಂದರಲ್ಲಿ ಬರೆದಿರಿಸಲಾಗಿದೆ ಅಂದುಕೊಳ್ಳೋಣ. ಕಂಪೆನಿಯ ಹೆಸರು, ಔಷಧಿಯ ಬೆಲೆ, ಬ್ಯಾಚ್ ನಂಬರ್, ಎಕ್ಸ್ಪೈರಿ ದಿನಾಂಕ.. ಇವೇ ಮೊದಲಾದ ವಿವರಗಳನ್ನು, ಔಷಧಿಯ ಹೆಸರಿನ ಜೊತೆಗೆ ಅಂತಹ ಎಷ್ಟು ಸಂಖ್ಯೆಯ ಮಾತ್ರೆ/ಔಷಧಿ ಅವರ ಬಳಿ ಇದೆ ಎನ್ನುವ ವಿವರಗಳನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ದಾಖಲಿಸಿಡಲಾಗಿದೆ. ಇದರ ಜೊತೆಗೆ ಅವರ ದಿನನಿತ್ಯದ ಮಾರಾಟದ ವಿವರಗಳನ್ನು ಕೂಡ ಅದೇ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಿಡಲಾಗುತ್ತದೆ ಅಂದುಕೊಳ್ಳಿ. ಇಂತಹ ಮಾಹಿತಿಯ ಪುಸ್ತಕವು ಆ ಔಷಧಿ ಅಂಗಡಿಯ ’ಡೇಟಾಬೇಸ್’ ಎಂದೆನಿಸಿಕೊಳ್ಳುತ್ತದೆ.

ಆದರೆ ಈ ರೀತಿಯಾಗಿ ಸಂಗ್ರಹಿಸಿದ ಮಾಹಿತಿಯು ಎಷ್ಟೇ ವ್ಯವಸ್ಥಿತವಾಗಿದ್ದರೂ, ಮಾಹಿತಿಯನ್ನು ತಿದ್ದುಪಡಿ ಮಾಡಬೇಕಾದರೆ ಇಲ್ಲವೆ ಬೇಕಾದ ಮಾಹಿತಿಯನ್ನು ಹುಡುಕಬೇಕಾದರೆ ಸುಲಭವಾಗಿ ಅದನ್ನು ಮಾಡಲಾಗುವುದಿಲ್ಲ. ಅಂಗಡಿಯ ವಾರ್ಷಿಕ ವಹಿವಾಟಿನ ಲೆಕ್ಕಾಚಾರ ಮಾಡಲು ಅನೇಕ ದಿನಗಳೇ ಬೇಕಾಗಬಹುದು. ಗಣಕಯಂತ್ರ(ಕಂಪ್ಯೂಟರ್)ಗಳ ಆವಿಷ್ಕಾರವಾದ ಬಳಿಕ ಈ ಸಮಸ್ಯೆಗಳಿಗೆಲ್ಲಾ ಪರಿಹಾರ ಲಭ್ಯವಾಯ್ತು. ಮಾಹಿತಿಯ ವ್ಯವಸ್ಥಿತ ಶೇಖರಣೆ,ಸುಲಭ ಬದಲಾವಣೆ, ಶೀಘ್ರ ಶೋಧಿಸುವಿಕೆ ಹಾಗು ಮಾಹಿತಿಯ ಸಾರಾಂಶವನ್ನು ಸಲೀಸಾಗಿ ವರದಿಯ ರೂಪದಲ್ಲಿ ಸಿದ್ಧಪಡಿಸುವ ಅನುಕೂಲಕ್ಕಾಗಿ ಅದನ್ನು ಕಂಪ್ಯೂಟರಿನಲ್ಲಿ ಶೇಖರಿಸಿಡುವ ಕ್ರಮ ಮೊದಲಾಯ್ತು. ಇಂತಹ ಉದ್ಧೇಶಗಳಿಗೆಂದೇ ಬಳಸಲಾಗುವ ವಿಶೇಷ ತಂತ್ರಾಂಶಗಳು(ಸಾಫ್ಟ್ವೇರ್) ಸಿದ್ಧವಾದವು. ಈ ತಂತ್ರಾಂಶಗಳೇ ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್ ಅಥವಾ ಸಂಕ್ಷಿಪ್ತವಾಗಿ DBMS. ಮೈಕ್ರೋಸಾಫ್ಟ್ SQL ಸರ್ವರ್, ಒರಾಕಲ್, DB2, sybase, My SQL ಮೊದಲಾದುವುಗಳನ್ನು ಇಂತಹ ತಂತ್ರಾಂಶಗಳಿಗೆ ಉದಾಹರಣೆಯಾಗಿ ಹೆಸರಿಸಬಹುದು.

ಡೇಟಾಬೇಸ್ ಕುರಿತು ಇನ್ನಷ್ಟು ತಿಳಿದುಕೊಳ್ಳುವ ಸಲುವಾಗಿ ಡೇಟಾಬೇಸಿಗೆ ಸಂಬಂಧಿಸಿದ ಕೆಲವು ಪದಗಳ ಪರಿಚಯ ಮಾಡಿಕೊಳ್ಳೋಣ. ಡೇಟಾಬೇಸಿನಲ್ಲಿ ಮಾಹಿತಿಯ ವ್ಯವಸ್ಥಿತ ಶೇಖರಣೆಯ ಅನುಕೂಲಕ್ಕಾಗಿ ಅದನ್ನು ಟೇಬಲ್, ರೋ, ಕಾಲಮ್ ಹೀಗೆ ವಿವಿಧ ಸಣ್ಣ ಘಟಕಗಳಾಗಿ ವಿಭಜಿಸಿ ಸಂಗ್ರಹಿಸಿಡಲಾಗುತ್ತದೆ.ಇವುಗಳ ಕುರಿತು ವ್ಯಾಖ್ಯೆ ಅಥವಾ ವಿವರಣೆಗಿಂತ ಸಣ್ಣ ಉದಾಹರಣೆಯೊಂದರ ಮೂಲಕ ಅರ್ಥೈಸಿಕೊಳ್ಳಲು ಯತ್ನಿಸೋಣ. ಒಂದು ಕಂಪೆನಿಯಲ್ಲಿ 1000 ಜನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಅಂದುಕೊಳ್ಳೋಣ. ಆ ಕಂಪೆನಿಯು ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಮಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಪ್ರತಿ ಶಾಖೆಯಲ್ಲೂ 4 ವಿಭಾಗಗಳಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಆ ಕಂಪೆನಿಯ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಮಾನವ ಸಂಪನ್ಮೂಲ (ಎಚ್.ಆರ್) ವಿಭಾಗದವರು ಈ ಎಲ್ಲಾ ಮಾಹಿತಿಗಳನ್ನು ಡೇಟಾಬೇಸ್ ಒಂದರಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಡೇಟಾಬೇಸಿನೊಳಗೆ ’ಟೇಬಲ್’ ಅನ್ನುವ ಪುಟ್ಟ ಘಟಕ ಅಥವಾ ರಚನೆ(Structure)ಯನ್ನು ನಿರ್ಮಿಸಲಾಗುತ್ತದೆ. ಅದರೊಳಗೆ ಈ ಎಲ್ಲಾ ಮಾಹಿತಿಯನ್ನು ತುಂಬಿಸಿಡಲಾಗುತ್ತದೆ. ಡೇಟಾಬೇಸನ್ನು ರೈಲು ಬಂಡಿಯೊಂದಕ್ಕೆ ಹೋಲಿಸಿದರೆ ಟೇಬಲ್ಲುಗಳು ಅದಕ್ಕೆ ಜೋಡಿಸಲ್ಪಟ್ಟ ಬೋಗಿಗಳೆನ್ನುವ ಉಪಮೆ ಸೂಕ್ತವಾದೀತು. ಹೇಗೆ ಎಲ್ಲಾ ಜನರನ್ನು ಒಂದೇ ಬೋಗಿಯೊಳಕ್ಕೆ ತುಂಬಿಸಲಾಗದೋ ಹಾಗೆಯೇ ಎಲ್ಲಾ ಮಾಹಿತಿಯನ್ನು ಒಂದೇ ಟೇಬಲ್ಲಿನೊಳಗೆ ತುರುಕಿಸಿದರೆ ಅದು ಸುವ್ಯವಸ್ಥಿತ ಜೋಡಣೆ ಅನ್ನಿಸದು. ಅದಕ್ಕಾಗಿ ಮಾಹಿತಿಯ ಪ್ರಕಾರ, ಲಕ್ಷಣಗಳನ್ನು ಆಧರಿಸಿ, ಅವನ್ನು ಅನೇಕ ಟೇಬಲ್ಲುಗಳಾಗಿ ವರ್ಗೀಕರಿಸಿ ಶೇಖರಿಸಿಡಬೇಕು. ಮೇಲಿನ ಉದಾಹರಣೆಯಲ್ಲಿ ತೀರಾ ಸರಳವಾಗಿ ಮಾಹಿತಿಯನ್ನು 3 ಟೇಬಲ್ಲುಗಳಾಗಿ ವಿಂಗಡಿಸೋಣ. ’ಉದ್ಯೋಗಿ’, ’ಶಾಖೆ’ ಮತ್ತು ’ವಿಭಾಗ’ – ಇವೇ ಆ 3 ಟೇಬಲ್ಲುಗಳು. ’ಉದ್ಯೋಗಿ’ ಟೇಬಲ್ಲಿನಲ್ಲಿ ಉದ್ಯೋಗಿಯ ಹೆಸರು, ವಯಸ್ಸು, ವಿಳಾಸ, ಹುದ್ದೆ, ಲಿಂಗ, ವಿದ್ಯಾರ್ಹತೆ…ಇವೇ ಮೊದಲಾದ ವಿವರಗಳಿದ್ದರೆ, ’ಶಾಖೆ’ ಟೇಬಲ್ಲಿನಲ್ಲಿ ’ಶಾಖೆ ಇರುವ ಸ್ಥಳ,ವಿಳಾಸ, ಮುಖ್ಯಾಧಿಕಾರಿ,ಒಟ್ಟು ಉದ್ಯೋಗಿಗಳ ಸಂಖ್ಯೆ ಮುಂತಾದ ವಿವರಗಳಿರುತ್ತವೆ. ’ವಿಭಾಗ’ ಟೇಬಲ್ಲಿನಲ್ಲಿ ವಿಭಾಗದ ಹೆಸರು, ಮುಖ್ಯಸ್ಥ, ಒಟ್ಟು ಉದ್ಯೋಗಿಗಳು, ವಿಭಾಗದ ಕುರಿತು ವಿವರಣೆಗಳನ್ನು ಸಂಗ್ರಹಿಸಲಾಗುತ್ತದೆ.

ಈಗ ’ಉದ್ಯೋಗಿ’ ಟೇಬಲ್ಲನ್ನು ಗಮನಿಸೋಣ. ಕಂಪೆನಿಯಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಉದ್ಯೋಗಿಯ ಮಾಹಿತಿಯೂ ಈ ಟೇಬಲ್ಲಿನಲ್ಲಿ ಅಡಕವಾಗಿದೆ. ಒಬ್ಬ ಪ್ರತ್ಯೇಕ ವ್ಯಕ್ತಿಯ ವಿವರಗಳನ್ನೊಳಗೊಂಡ ಮಾಹಿತಿಯ ಸಾಲೊಂದನ್ನು ’ರೋ’ ಅಥವಾ ’ಟಪಲ್’ಎಂದು ಕರೆಯಲಾಗುತ್ತದೆ. ಇಂತಹ 1000 ’ರೋ’ಗಳು ಸೇರಿ ’ಉದ್ಯೋಗಿ’ ಟೇಬಲ್ ನಿಮಿತವಾಗಿದೆ. ಈಗ ಸುಹಾಸಿನಿ ಎನ್ನುವ ಉದ್ಯೋಗಿಯ ಕುರಿತು ಮಾಹಿತಿಯಿರುವ ಒಂದು ’ರೋ’ವನ್ನು ಗಮನಿಸಿದರೆ ಅದರಲ್ಲಿ ಉದ್ಯೋಗಿಯ ಹೆಸರು, ಪ್ರಾಯ, ಲಿಂಗ, ವಿದ್ಯಾರ್ಹತೆ, ಹುದ್ದೆ…ಹೀಗೆ ಚಿಕ್ಕ ಚಿಕ್ಕ ಮಾಹಿತಿಯ ಘಟಕಗಳು ಸೇರಿ ಆ ಸಾಲು ನಿರ್ಮಿತವಾಗಿದೆ. ಇಂತಹ ಘಟಕಗಳೇ ’ಕಾಲಂ’ಗಳು ಅಥವಾ ’ಎಟ್ರಿಬ್ಯೂಟ್’ಗಳು. ಟೇಬಲ್ಲೊಂದನ್ನು ರಚಿಸುವಾಗ ಅದರಲ್ಲಿ ಸೇರಿಸಬೇಕಾದ ಮಾಹಿತಿಗೆ ಅನುಗುಣವಾಗಿ ಅದರ ಕಾಲಂಗಳನ್ನು ನಿರ್ಧರಿಸಲಾಗುತ್ತದೆ.ಟೇಬಲ್ ಗೆ ಹೇಗೆ ’ಉದ್ಯೊಗಿ ಎಂದು ಹೆಸರನ್ನು ಸೂಚಿಸಲಾಗುತ್ತದೆಯೋ ಹಾಗೆ ಪ್ರತಿ ಕಾಲಂನಲ್ಲಿ ತುಂಬಿಸುವ ಮಾಹಿತಿಗೆ ಅನುಗುಣವಾಗಿ ಆ ಕಾಲಂಗಳನ್ನು ಹೆಸರಿಸಲಾಗುತ್ತದೆ.

ಮೇಲೆ ಸೂಚಿಸಿದ 3 ಟೇಬಲ್ಲುಗಳಲ್ಲಿ ಕಾಲ್ಪನಿಕ ಮಾಹಿತಿಯನ್ನು ತುಂಬಿಸಿ ಉದಾಹರಣೆಯಾಗಿ ಕೆಳಗೆ ಕೊಡಲಾಗಿದೆ.  ಮುಂದೆ ಟೇಬಲ್ ಕುರಿತು ಅನೇಕ ವಿವರಣೆಯನ್ನು ಈ ಕೆಳಗಿನ ಉದಾಹರಣೆಯ ಮೂಲಕ ವಿವರಿಸುತ್ತೇನೆ.

ಉದ್ಯೋಗಿ

ಐಡಿ ಹೆಸರು ಪ್ರಾಯ ಲಿಂಗ ವಿದ್ಯಾರ್ಹತೆ ಅನುಭವ ಹುದ್ದೆ ಸಂಬಳ ಮೇಲಧಿಕಾರಿ ಶಾಖೆ ವಿಭಾಗ
1 ಸುಹಾಸಿನಿ 32 ಹೆಣ್ಣು ಎಂಬಿಎ 8 ವರ್ಷ ಮುಖ್ಯಸ್ಥ 50000 2 5
2 ಕಿರಣ್ 32 ಗಂಡು ಎಂಬಿಎ 7 ವರ್ಷ ಮುಖ್ಯಸ್ಥ 45000 1 1
3 ವಿಕಾಸ 28 ಗಂಡು ಬಿಇ 4 ವರ್ಷ ಡಿಸೈನರ್ 30000 2 1 2
4 ನಿಹಾರಿಕ 24 ಹೆಣ್ಣು ಬಿಇ 2 ವರ್ಷ ಡೆವಲಪರ್ 20000 1 2 6
5 ಸುನಯನ 25 ಹೆಣ್ಣು ಎಂಕಾಂ 4 ವರ್ಷ ಮುಖ್ಯಸ್ಥ 35000 1 3

ಶಾಖೆ

ಶಾಖೆ ಐಡಿ ಶಾಖೆಯ ಹೆಸರು ಮುಖ್ಯಸ್ಥ ವಿಳಾಸ ಒಟ್ಟು ಉದ್ಯೋಗಿಗಳು
1 ಬೆಂಗಳೂರು ತರುಣ್ 1/15, ಐಟಿಪಿಎಲ್, ಬೆಂಗಳೂರು 500
2 ಚೆನ್ನೈ ಮಾಳವಿಕ 12/2, ನುಂಗಂಬಾಕ್ಕಂ, ಚೆನ್ನೈ 300
3 ಮುಂಬೈ ಕಾವ್ಯ 1/18 ವರ್ಲಿ, ಮುಂಬೈ 100
4 ಮಂಗಳೂರು ಶಿಶಿರ್ 20/20, ಹಂಪನಕಟ್ಟೆ, ಮಂಗಳೂರು 100

ವಿಭಾಗ

ವಿಭಾಗ ಐಡಿ ವಿಭಾಗದ ಹೆಸರು ಮುಖ್ಯಸ್ಥ ಒಟ್ಟು ಉದ್ಯೋಗಿಗಳು ವಿವರಣೆ ಶಾಖೆ
1 ಮಾನವ ಸಂಪನ್ಮೂಲ ಕಿರಣ್ 20 ಮಾನವ ಸಂಪನ್ಮೂಲ ನಿರ್ವಹಣೆ 1
2 ಸರ್ವಿಸಸ್ ತೇಜಸ್ 440 ಸಾಫ್ಟ್ವೇರ್ ನಿರ್ವಹಣಾ ವಿಭಾಗ 1
3 ಹಣಕಾಸು ಸುನಯನ 10 ಹಣಕಾಸು ನಿರ್ವಹಣೆ 1
4 ಕ್ವಾಲಿಟಿ ಪರಿಣಿತಾ 30 ಸಾಫ್ಟ್ವೇರ್ ಕ್ವಾಲಿಟಿ ನಿರ್ವಹಣೆ 1
5 ಮಾನವ ಸಂಪನ್ಮೂಲ ಸುಹಾಸಿನಿ 10 ಮಾನವ ಸಂಪನ್ಮೂಲ ನಿರ್ವಹಣೆ 2
6 ಸರ್ವಿಸಸ್ ಅರ್ಪಿತ 275 ಸಾಫ್ಟ್ವೇರ್ ನಿರ್ವಹಣಾ ವಿಭಾಗ 2
7 ಹಣಕಾಸು ಪ್ರೇರಣಾ 5 ಹಣಕಾಸು ನಿರ್ವಹಣೆ 2
8 ಕ್ವಾಲಿಟಿ ಶಶಾಂಕ್ 10 ಸಾಫ್ಟ್ವೇರ್ ಕ್ವಾಲಿಟಿ ನಿರ್ವಹಣೆ 2

(ಮುಂದಿನ ಭಾಗದಲ್ಲಿ ಡೇಟಾಟೈಪ್,ಪ್ರೈಮರಿ ಕೀ ಕಾಲಂ, ಐಡೆಂಟಿಟಿ ಕಾಲಂ, ಕಾಲಂ ನಲ್ಲೆಬಿಲಿಟಿ, ಯುನಿಕ್ ಕೀ, ಡಿಫಾಲ್ಟ್ ವಾಲ್ಯೂ, ರಿಲೇಶನ್ ಶಿಪ್, ಫಾರಿನ್ ಕೀ ಮತ್ತು ಕಾರ್ಡಿನಾಲಿಟಿ ಕುರಿತು ತಿಳಿದುಕೊಳ್ಳೋಣ)

ನೀಲ ಗಗನದೊಳು… ಮೇಘಗಳ” ಅದೆಷ್ಟನೇ ಬಾರಿ ಕೇಳಿ ಭಾವಪರವಶನಾಗಿದ್ದೇನೋ ನನಗೇ ಗೊತ್ತಿಲ್ಲ. ಕೇಳಿದಷ್ಟೂ ಮತ್ತೂ ಕೇಳಬೇಕೆಂಬ ಆಸೆ ಹುಟ್ಟಿಸುವ, ಪ್ರತಿ ಬಾರಿ ಕೇಳಿದಾಗಲೂ ಧನ್ಯತೆಯ ಭಾವವುಕ್ಕಿಸುವ ಆ ಸ್ವರದ ಗತ್ತು-ತಾಕತ್ತು, ಗಾರುಡಿಗೆ ಮರುಳಾಗಿ ತಲೆದೂಗಿದ್ದೇನೆ. ಇದು ನನ್ನೊಬ್ಬನ ಅನುಭವವಲ್ಲ. ಯಕ್ಷಗಾನದ ಕುರಿತು ಆಸಕ್ತಿಯಿರುವ ಪ್ರತಿಯೊಬ್ಬರದೂ ಇದೇ ಮಾತು. ಎಪ್ಪತ್ತರ ದಶಕದ ಉತ್ತರಾರ್ಧ ಹಾಗು ಎಂಬತ್ತರ ದಶಕದಾದ್ಯಂತ ಕರ್ನಾಟಕ ಕರಾವಳಿಯ ಮೂಲೆಮೂಲೆಯಲ್ಲೊ ಅನುರಣಿಸಿದ ಈ ಕಂಚಿನ ಕಂಠ ಯಕ್ಷಪ್ರೇಮಿಗಳ ಪಾಲಿಗೆ ಕರ್ಣರಸಾಯನವೇ ಆಗಿತ್ತು. ಹೌದು, ನಿಮ್ಮ ಊಹೆ ಸರಿ. ನಾನೀಗ ಹೇಳಹೊರಟಿರುವುದು ಕರಾವಳಿಯ ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವುಡರ ಕುರಿತು.

(ಚಿತ್ರ ಕೃಪೆ – ಆಗ್ನೇಯ ನಾವುಡ)

ಕರಾವಳಿ ಕರ್ನಾಟಕವು ಯಕ್ಷಗಾನದ ತವರೂರು. ಯಕ್ಷಗಾನ ಹುಟ್ಟಿ ಬೆಳೆದು ವಿಜೃಂಭಿಸಿದ-ಮೆರೆಯುತ್ತಿರುವ ಮಣ್ಣಿದು. ಯಕ್ಷಗಾನದ ಹುಟ್ಟಿನಿಂದಾರಂಭಿಸಿ ಇಂದಿನ ತನಕವೂ ಅದೆಷ್ಟೋ ಅಪ್ರತಿಮ ಕಲಾಕುಸುಮಗಳು ಅರಳುವುದನ್ನು, ಅದ್ಭುತ ಕಲಾವಿದರು ಆಗಿ ಹೋದ ವೈಭವವನ್ನು ಕಂಡು ಧನ್ಯರಾದವರು ಕರಾವಳಿಯ ಜನ. ಯಕ್ಷಗಾನ ರಂಗದ ತುಂಬೆಲ್ಲಾ ಅತಿರಥ-ಮಹಾರಥರಂತಹ ಘಟಾನುಘಟಿಗಳು ವಿಜೃಂಭಿಸುತ್ತಿದ್ದ ಉತ್ತುಂಗದ ಕಾಲದಲ್ಲಿ, ಎಳೆಯ ವಯಸ್ಸಿನಲ್ಲಿಯೇ ತನ್ನ ಜನ್ಮಜಾತ ಪ್ರತಿಭೆಯ ಬಲದಿಂದ ಬಹುಬೇಗನೆ ಕೀರ್ತಿಯ ಉತ್ತುಂಗ ಶಿಖರವನ್ನೇರುವ ಸೌಭಾಗ್ಯ ಪಡೆದು ಬಂದವರು ಕಾಳಿಂಗ ನಾವುಡರು. ಯಕ್ಷಗಾನದ ಬಗ್ಗೆ ಆಸಕ್ತಿಕಳೆದುಕೊಂಡು ದೂರಸರಿಯುತ್ತಿದ್ದ ಜನಮಾನಸದ ಚಿತ್ತವನ್ನಾಕರ್ಷಿಸಿ ಮತ್ತೆ ಯಕ್ಷಗಾನದತ್ತ ಎಳೆದು ತರುವ ಶಕ್ತಿ ಇತ್ತು ಆ ಮಾಂತ್ರಿಕ ಕಂಠಕ್ಕೆ. ಒಮ್ಮೆ ಇವರ ಗಾನ ವೈಭವದ ಸವಿಯನ್ನುಂಡವರು ಶಾಶ್ವತವಾಗಿ ಇವರ ಅಭಿಮಾನಿಗಳೇ ಆದರು. ಅವರಿದ್ದ ಮೇಳದ ಆಟ ನಡೆಯುತ್ತಿರುವಲ್ಲಿ ಸೇರುತ್ತಿದ್ದ ಜನರ ಸಮೂಹದಲ್ಲಿ ಅರ್ಧಕ್ಕೂ ಮಿಕ್ಕಿದಷ್ಟು ಮಂದಿ ಅವರ ಗಾನಸುಧೆಯನ್ನು ಸವಿಯಲೆಂದೇ ಬಂದಿರುವರಾಗಿರುತ್ತಿದ್ದರು ಅನ್ನುವುದು ಅತಿಶಯೋಕ್ತಿಯೇನಲ್ಲ. ತಮ್ಮ ವಿಶಿಷ್ಟ ಧ್ವನಿಯ ಛಾಪಿನಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಬಲು ಅಪರೂಪದ ಕಂಠಸಿರಿಯಿಂದಾಗಿ ಕಾಳಿಂಗ ನಾವುಡರು ತಮ್ಮದೇ ಆದ ಹೊಸತೊಂದು ಪರಂಪರೆಯನ್ನು ಹುಟ್ಟುಹಾಕಿದರು. ಒಂದರ್ಥದಲ್ಲಿ ಭಾಗವತಿಕೆ ಅನ್ನುವ ಪದಕ್ಕೆ ಪರ್ಯಾಯ ಅನ್ನುವಂತೆ ಇದ್ದವರು ನಾವುಡರು.

ನಾವುಡರು ಹುಟ್ಟಿದ್ದು ಜೂನ್ 6 1958ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ, ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಕೂಸು. ತಂದೆ ರಾಮಚಂದ್ರ ನಾವುಡರು ಕೂಡಾ ಆ ಕಾಲದ ಹೆಸರಾಂತ ಭಾಗವತರು. ಹಾಗಾಗಿ ಸಹಜವಾಗಿಯೇ ನಾವುಡರಿಗೆ ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಪೂರಕ ರಂಗಸ್ಥಳವು ಅವರ ಮನೆಯಲ್ಲಿಯೇ ಸಿದ್ಧಿಸಿತ್ತು. ತಂದೆ ರಾಮಚಂದ್ರ ನಾವುಡರಿಂದ ಎಳೆಯ ವಯಸ್ಸಿನಲ್ಲಿಯೇ ಭಾಗವತಿಕೆಯ ಪಟ್ಟುಗಳನು ಕರತಲಾಮಲಕ ಮಾಡಿಕೊಂಡ ನಾವುಡರಿಗೆ ಮನೆಯೇ ಮೊದಲ ಪಾಠಶಾಲೆ ತಂದೆಯೇ ಮೊದಲ ಗುರು. ಜನ್ಮಜಾತವಾಗಿ ಬಂದ ಪ್ರತಿಭೆಗೆ ಹಾಗು ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರಾಯಣ ಉಪ್ಪೂರರ ಗರಡಿಯಲ್ಲಿ ಬಿಟ್ಟರು. ಈ ಎಳೆಯ ತರುಣ ತಮ್ಮ ಪರಂಪರಾಗತ ಭಾಗವತಿಕೆಯನ್ನು ಮುಂದುವರಿಸಲು ಸಮರ್ಥನೆಂದು ಬಹುಬೇಗನೆ ಮನಗಂಡ ಉಪ್ಪೂರರು ತಮ್ಮ ಅನುಭವವನ್ನೆಲ್ಲ ಧಾರೆಯೆರೆದು ನಾವುಡರ ಕಲಾಪ್ರೌಢಿಮೆಗೆ ಮೆರುಗನ್ನಿತ್ತರು.ತಮ್ಮ ಹದಿಹರೆಯದಲ್ಲೇ ಉಪ್ಪೂರರ ತಂಡವನ್ನು ಸೇರಿದ ನಾವುಡರು ಸರಿಸುಮಾರು 5-6 ವರ್ಷಗಳ ಕಾಲ ಅವರ ಜೊತೆಯಲ್ಲಿಯೇ ತಿರುಗಾಟವನ್ನು ಮುಂದುವರೆಸಿದರು. 1977ರಲ್ಲಿ ಪೆರ್ಡೂರಿನ ವಿಜಯಶ್ರೀ ಮೇಳಕ್ಕೆ ಭಾಗವತರಾಗಿ ಸೇರ್ಪಡೆಗೊಂಡ ನಾವುಡರು ಬಹುಬೇಗನೆ ಜನಮನವನ್ನು ಸೂರೆಗೊಂಡರು, ನಾವುಡರ ಭಾಗವತಿಕೆ ಜನಜನಿತವಾಯ್ತು. ಅಲ್ಲಿಂದ ಮುಂದೆ ಸಾಲಿಗ್ರಾಮ ಮೇಳಕ್ಕೆ ಪದಾರ್ಪಣೆ ಮಾಡಿದ ನಾವುಡರು ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಹೋದಹೋದೆಡೆಯೆಲ್ಲ ಅಭಿಮಾನಿಗಳು ಸೃಷ್ಟಿಯಾದರು, ಯಕ್ಷಪ್ರೇಮಿಗಳು ಹುಚ್ಚೆದ್ದುಹೋದರು, ನೋಡನೋಡುತ್ತಿರುವಂತೆಯೇ ಕಾಳಿಂಗ ನಾವುಡರ ಕೀರ್ತಿ ಪತಾಕೆ ಎಲ್ಲೆಡೆಯೂ ರಾರಾಜಿಸತೊಡಗಿತು, ಕರಾವಳಿ ಕರ್ನಾಟಕದ ತುಂಬೆಲ್ಲಾ ಕಾಳಿಂಗ ನಾವುಡರ ಕಂಚಿನ ಕಂಠದ ಘಂಟಾನಿನಾದವು ಕೇಳಿಬರತೊಡಗಿತು. ತಮ್ಮ ಸಮಕಾಲೀನ ಭಾಗವತರ್ಯಾರೂ ತಲುಪಲಾಗದ ಎತ್ತರದ ಪೀಠದಲ್ಲಿ ನಾವುಡರು ವಿರಾಜಮಾನರಾದರು.

ನಾವುಡರ ಕಂಠಸಿರಿಯನ್ನು ಕೇಳಿ ಆನಂದಿಸಲು ಕನ್ನಡ ಆಡಿಯೋ.ಕಾಂ ನಲ್ಲಿ ಕೆಲವು ಅಪರೂಪದ ಯಕ್ಷಗಾನ ಪ್ರಸಂಗಗಳಿವೆ ಕೇಳಿ..

http://www.kannadaaudio.com/Songs/Yakshagana/home/

ಭೀಷ್ಮ ವಿಜಯ, ಗದಾಯುದ್ಧ, ಚಂದ್ರಹಾಸ, ಮಾಗದ ವಧೆ, ಕೀಚಕ ವಧೆ, ಬಬ್ರುವಾಹನ, ಶನಿ ಮಹಾತ್ಮೆ, ರಾಣಿ ಶಶಿಪ್ರಭೆ.. ಹೀಗೆ ಅಸಂಖ್ಯಾತ ಪೌರಾಣಿಕ ಪ್ರಸಂಗಗಳ ಪದ್ಯಗಳು ಕಾಳಿಂಗನಾವುಡರ ಕಂಠಸಿರಿಯಲ್ಲಿ ಇನ್ನಷ್ಟು ಮೆರುಗನ್ನು ಪಡೆದುಕೊಂಡಿವೆ. ಸ್ವತಹ ನಾವುಡರೇ ಅನೇಕ ಪ್ರಸಂಗಗಳನ್ನು ಯಕ್ಷಲೋಕದ ಮಡಿಲಿಗೆ ಸಮರ್ಪಿಸಿದ್ದಾರೆ. ಅವರೇ ರಚಿಸಿದ ‘ನಾಗಶ್ರೀ’ ಪ್ರಸಂಗವಂತೂ ಹೋದೆಡೆಯಲ್ಲೆಲ್ಲ ಪ್ರಚಂಡ ದಿಗ್ವಿಜಯವನ್ನು ಸಾಧಿಸಿ, ಅಪಾರ ಜನಮೆಚ್ಚುಗೆ ಗಳಿಸಿತ್ತು. ಈಗಲೂ ಕೂಡಾ ನಾಗಶ್ರೀ ಪ್ರಸಂಗದ ಪ್ರದರ್ಶನವಿದ್ದರೆ ಕಿಕ್ಕಿರಿವ ಪ್ರೇಕ್ಷಕ ಸಂದೋಹವೇ ಆ ಪ್ರಸಂಗದ ಜನಪ್ರಿಯತೆಗೆ ಹಿಡಿದ ಕೈಗನ್ನಡಿ. ಹಳೆಯ ರಾಗಗಳ ಜಾಡಿನಲ್ಲಿ ಹೊಸ ಹೊಸ ಸಂಯೋಜನೆಗಳನ್ನು ಮಾಡಿದ ನಾವುಡರ ಪ್ರಯೋಗಶೀಲತೆಯಿಂದಾಗಿ ತಮ್ಮದೇ ಆದ ವಿಶಿಷ್ಟ ಶೈಲಿಯೊಂದನ್ನು ಹುಟ್ಟುಹಾಕಿ ತಮ್ಮ ರಂಗದಲ್ಲಿ ಏಕಮೇವಾದ್ವಿತೀಯರೆನಿಸಿಕೊಂಡಿದ್ದರು. ನಾವುಡರು ಭಾಗವತರಾಗಿದ್ದ ಸಂದರ್ಭದಲ್ಲಿ ಸಾಲಿಗ್ರಾಮ ಮೇಳ ಯಶಸ್ಸಿನ ಉತ್ತುಂಗದಲ್ಲಿ ವಿರಾಜಮಾನವಾಗಿದ್ದುದೇ ಇದಕ್ಕೆ ಸಾಕ್ಷಿ.

ವೃತ್ತಿ ಬದುಕಿನಲ್ಲಿ ಅಗ್ರಮಾನ್ಯ ಪಟ್ಟವನ್ನಲಂಕರಿಸಿ, ಸಾಂಸಾರಿಕ ಬದುಕಿನಲ್ಲಿ ಅನುರೂಪರಾದ ಪತ್ನಿ ವಿಜಯಶ್ರೀ ನಾವುಡ, ವಂಶದ ಕುಡಿ ಮಗ ಆಗ್ನೇಯ ನಾವುಡರೊಂದಿಗೆ ಸಂತೃಪ್ತರಾಗಿದ್ದರು ಕಾಳಿಂಗ ನಾವುಡರು. ಯಕ್ಷರಂಗದ ಸೇವೆಗೆ ಬದುಕನ್ನು ಮುಡಿಪು ಕಟ್ಟಿ, ಹೊಸ ಎತ್ತರವನ್ನು ಸಾಧಿಸಲು ಕಂಕಣಬದ್ಧರಾಗಿದ್ದರು. ಅವರ ಈ ಸಂತೃಪ್ತ ಬದುಕನ್ನು, ಕೀರ್ತಿಯ ಕಲಶವನ್ನು ಕಂಡು ವಿಧಿಗೇ ಕಣ್ಣುಕುಕ್ಕಿದಂತಾಯಿತೇನೋ. ಅಥವಾ ಈ ಕಂಚಿನ ಕಂಠದ ನಿನಾದಕ್ಕೆ ಜನ ಮೈಮರೆತು ತಲೆದೂಗಿ ಸುಖಿಸುವುದನ್ನು ಕಂಡು ಅಸೂಯೆಯಾಯಿತೇನೋ. ಇಲ್ಲವೇ ಈ ಯಕ್ಷಕಿನ್ನರನು ಸುರಲೋಕದಲ್ಲಿರಲು ಯೋಗ್ಯನಾದ ಅನರ್ಘ್ಯ ರತ್ನ, ನಿತ್ಯವೂ ಈ ಗಾನಾಮೃತವನ್ನು ಕೇಳಿ ಸವಿಯಬಹುದೆಂಬ ಆಸೆ ಹುಟ್ಟಿರಬೇಕು. ಅಂತೂ ವಿಧಿಯು ಈ ಗಾನಗಾರುಡಿಯ ಇಹದ ಬಾಳಿನ ಅಂತ್ಯಕ್ಕೆ ಮುನ್ನುಡಿ ಬರೆದಿತ್ತು. 1990ನೇ ಇಸವಿಯಲ್ಲಿ 32ರ ಹರೆಯದ ತರುಣ ಗಾನ ಕೋಗಿಲೆಯ ಹಾಡು ಸ್ತಬ್ಧವಾಯಿತು. ರಸ್ತೆ ಅಪಘಾತವೊಂದರಲ್ಲಿ ನಾವುಡರು ವಿಧಿವಶರಾದಾಗ ಯಕ್ಷಗಾನಲೋಕದ ಸುವರ್ಣಯುಗವೊಂದು ಅಂತ್ಯವಾಯಿತು. ಯಕ್ಷರಸಿಕರ ಪಾಲಿಗೆ ಬರಸಿಡಿಲೆರಗಿದಂತೆ ಬಂದಪ್ಪಳಿಸಿದ ಈ ದುರಂತವಾರ್ತೆಯನ್ನು ಕೇಳಿ ಕ್ಷಣಾರ್ಧದಲ್ಲಿ ಇಡೀ ಕರಾವಳಿಯ ಕಡಲತೀರವು ಶೋಕಸಾಗರದಲ್ಲಿ ಮುಳುಗಿತು. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿ ತೆರಳಿದ ಆ ಅಪರೂಪದ ಸಾಧಕನಿಗಾಗಿ ಅಭಿಮಾನಿಗಳ ಕಣ್ಣಂಚು ತೇವವಾಗಿತ್ತು. ಕಣ್ಣಿಂದ ಮರೆಯಾದರೇನಂತೆ, ಅವರ ಕಂಠಸಿರಿಯು ಸದಾ ಕಿವಿತುಂಬಿಕೊಂಡಿರುವುದಲ್ಲ ಅನ್ನುವ ಸಮಾಧಾನವೊಂದೇ ಉಳಿದಿತ್ತು. ಅಗಲಿದ ಈ ದಿವ್ಯಚೇತನಕ್ಕೆ ರಾಜ್ಯಸರ್ಕಾರದಿಂದ ಕೂಡಾ ಗೌರವ ಸಂದಿತ್ತು. ಆಗ ಪುಟ್ಟ ಬಾಲಕನಾಗಿದ್ದ ಅವರ ಮಗ ಆಗ್ನೇಯ ನಾವುಡ ಪ್ರಶಸ್ತಿ ಫಲಕ ಸ್ವೀಕರಿಸುವಾಗ ನೆರೆದವರ ಕಣ್ಣು ಅರಿವಿಲ್ಲದಂತೆಯೇ ಒದ್ದೆಯಾಗಿತ್ತು.

ಕಾಲಚಕ್ರ ಉರುಳುತ್ತಿದೆ, ಯಕ್ಷರಂಗವೂ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಹೊಸತನದ ಹೆಸರಲ್ಲಿ ಹೊಲಸೂ ಹುಲುಸಾಗಿ ಬೆಳೆಯುತ್ತಿದೆ. ಇದನ್ನೆಲ್ಲಾ ಕಂಡಾಗ ಒಮ್ಮೊಮ್ಮೆ ಛೆ, ನಾವುಡರಿರಬೇಕಿತ್ತು ಆಗ ಕಥೆಯೇ ಬೇರೆ ಇತ್ತು ಅಂತ ಯಕ್ಷಗಾನದ ಕುರಿತು ಕಳಕಳಿಯಿರುವ ಯಕ್ಷರಸಿಕರಿಗೆ ಅನ್ನಿಸುತ್ತದೆ. ನಾವುಡರೇ, ನಶಿಸುತ್ತಿರುವ ಭವ್ಯಪರಂಪರೆಯೊಂದರ ಉಳಿವಿಗಾಗಿಯಾದರೂ ನೀವು ಮತ್ತೊಮ್ಮೆ ಹುಟ್ಟಿಬರಬಾರದೇ ಅನ್ನುವ ಯಕ್ಷಪ್ರೇಮಿಗಳ ಮೂಕಪ್ರಶ್ನೆಯಲ್ಲೇ ನಾವುಡರಿಲ್ಲದ ಕೊರತೆ ಕಾಣುತ್ತದೆ. ನಾವುಡರು ಮರೆಯಾಗಿ ಹೋಗಿ ಎರಡು ದಶಕಗಳೇ ಉರುಳಿವೆ. ಆದರೆ ಅವರ ಅಭಿಮಾನಿಗಳ ಪಾಲಿಗೆ ಅವರ ನೆನಪೂ ಇಂದಿಗೂ ಜೀವಂತ. ಅವರ ಪದಗಳನ್ನು ಕೇಳುವಾಗ ಅದೇ ಧನ್ಯತೆಯ ಭಾವ, ಅದೇ ಭಾವಪರವಶತೆ. ದಿವ್ಯ ಚೇತನವೊಂದರ ಬದುಕು ಸಾರ್ಥಕವೆನಿಸಲು ಇಷ್ಟು ಸಾಕಲ್ಲವೇ..? ನಾವುಡರೇ ನಮ್ಮ ನೆನಪುಗಳಲ್ಲಿ ನೀವಿದ್ದೀರಿ…

(ವಿಡಿಯೋ ಕೃಪೆ – ಯು ಟ್ಯೂಬ್)