Archive for the ‘kavana’ Category

Zero-Energy-Buildings-lg

ಎದೆಯೊಳಗಿನ ಭಾವದ ಪ್ರಜ್ಞೆಗಳನ್ನೆಲ್ಲಾ
ಪ್ರಶ್ನೆ ಹಾಕುತ್ತಾ ಬಗೆಯುತ್ತಾ ಹೋದರೆ
ಸಿಗುವುದೊಂದು ದೊಡ್ಡ ಸೊನ್ನೆ

ಪ್ಲಸ್ಸೊಂದು ಮೈನಸ್ಸೊಂದು ಎರಡೂ
ಸೇರಿ ಹುಟ್ಟುವ ಯಾವುದೂ ಅಲ್ಲದ ಶೂನ್ಯ

ಪ್ರತಿ ಪ್ರಶ್ನೆಗೂ ಉತ್ತರ ಹುಡುಕಲೇ ಬೇಕೆಂಬ
ತವಕವ ಅದುಮಿಟ್ಟು, ತುಡಿತವ ಬದಿಗಿಟ್ಟು
ಹಾಯಾಗಿರೋ ಹಂಬಲ ಏಕೆ ಅನ್ನುವುದೇ ಪ್ರಶ್ನೆಯಾಗಿ ಕಾಡುತಿರೆ

ಉತ್ತರವೇ ಸಿಗದೆ ಚಡಪಡಿಸಿ ಒದ್ದಾಡುತ್ತಿಹೆ
ಥೂ… ಹಾಳಾದ್ದು…ಈ ಮನಸಿನ ಸನ್ನೆಯೂ ಸೊನ್ನೆ

ಕಣಮಾತ್ರವಾಗಿರುವ
ಕನಸಿನ ಕಿಡಿಯೊಂದು
ಕೈಯಿರದ ಕಾಲಿರದ
ಕಲ್ಪನೆಯಲಿ ಕುಡಿಯೊಡೆದು
ಕವಲಾಗುವುದ ಕಂಡು
ಕುಹಕವಾಡಿದವರೇ

ಕತ್ತಲೆ ಕೋಣೆಯ ಕೂಪದಲಿ
ಕಲಾವಿದನ ಕ್ಯಾನ್ವಾಸಿನಲಿ
ಕುಳಿತಿರುವ ಕರಿಚುಕ್ಕಿಯೇ
ಕುಂಚದಲರಳಿ ಕಲಾಕೃತಿಯಾಗಿ
ಕಳೆಗಟ್ಟುವುದ ಕಂಡು
ಕೌತುಕದಿ ಕಣ್ಣರಳಿಸಿದರು !

ಕಲೆಯಿರಲಿ… ಕಲ್ಪನೆಯಿರಲಿ
ಕಸುವಿರುವುದು
ಕಾಣುವ ಕಣ್ಣುಗಳ ಕುತೂಹಲದಲಷ್ಟೇ
ಕಾಪಿಡಬೇಕಿರುವುದು
ಕನಸಿನ ಕುಡಿಯೊಂದನಷ್ಟೇ
ಕವಿದಿರುವ
ಕತ್ತಲಳಿದು ಕಿರಣವಾಗಲು ಕಾಯಬೇಕಷ್ಟೇ !!

ಎದೆಯ ಶರಧಿಯೊಳಗೆ ನಿರಂತರವಾಗಿ
ಅಲೆ ಅಲೆಯಾಗಿ ಅಪ್ಪಳಿಸುವ
ಭಾವ ತರಂಗಗಳನೆಲ್ಲಾ ಜೋಡಿಸಿ
ಲೆಕ್ಕ ಹಾಕಲು ಹವಣಿಸಿ ಕುಳಿತಿದ್ದೆ ಮೊನ್ನೆ

ಸಂಚಲನಗಳ ಸಂಕಲನ ಮಾಡಿ
ಸುಸ್ತಾದ ನಿರರ್ಥಕ ನಿಟ್ಟುಸಿರು ಸಾರುತ್ತಿತ್ತು
ಮೊದಲಿಗಿದ್ದ ನೀ-“ಒಂದು” ಇರದ ಮೇಲೆ
ಭಾವ ಬರಿದೇ ನೆನಪಿನ ಸಾಲಾಗಿ
ಅಣಕಿಸುವ ಬೆಲೆಯಿರದ ‘ಸೊನ್ನೆ’!!

ಭಾವಗಳ ತೂರಿಬಿಟ್ಟೆ ಸ್ವಚ್ಛಂದವಾಗಿ
ಆಕಾಶದ ಎಲ್ಲೆ ಮೀರಿ ವಿಹರಿಸಲೆಂದು

ತೋರಿಕೆಯ ಬಿಂಕ-ಬಿಗುಮಾನಗಳ
ಹೊಸ್ತಿಲು ದಾಟಿ ಮುನ್ನುಗ್ಗಲೆಂದು

ಚೌಕಟ್ಟಿನ ಪಂಜರಗಳ ಸರಳ ಬಂಧಿಯಾಗದೆ
ಗರಿಬಿಚ್ಚಿ ಹಾರಿ ಹಾಯಾಗಿರಲೆಂದು

ಕಟ್ಟುಪಾಡುಗಳ ಕಬ್ಬಿಣದ ಕೋಟೆಯ
ಕಂದಾಚಾರಗಳ ಶೃಂಖಲೆಯಲಿ ಸಿಲುಕದಿರಲೆಂದು

ಮುಕ್ತವಾಗಿಸಿಬಿಟ್ಟೆ ಸಕಲ ಪಾಶ-ಅಂಕುಶಗಳಿಂದ
ಬರಿದೇ ಇರಿವವರ ಶೂಲಕೆ ಘಾಸಿಯಾಗದಿರಲೆಂದು

ಸ್ವಾತಂತ್ರ್ಯ ಸ್ವೇಚ್ಛೆಯಾಯಿತೋ… ಅನುಮಾನ!
ನನ್ನೇ ಸುತ್ತುವರಿದು ಕಾಡುತಿವೆಯಲ್ಲಾ…

ಗಾಯವೇ ಇಲ್ಲದೆ ನೋಯುವ ಮನಸಿಗೆ
ಯಾತನೆಯು ಮಧುರ ಎಂದ ಕವಿ ಕಲ್ಪನೆ
ನೀಡಬಲ್ಲುದೇ ಸಾಂತ್ವನ… ಹುಸಿಯಾದರೂ ರವಷ್ಟು…?

ನಿನ್ನಾಗಮನ
ನನಗರಿವಿರದೇ ಆಯ್ತು
ಸುಳಿವು
ಗೊತ್ತೇ ಆಗದಂತೆ

ನನ್ನ ಮನವ
ಸೆಳೆದಿಟ್ಟುಕೊಂಡಿದ್ದೂ ಆಯ್ತು
ಒಲವು
ಗುಪ್ತ ಗಾಮಿಯಂತೆ

ನಿಷ್ಕ್ರಮಣವು
ಮಹಾಪ್ರಸ್ಥಾನವೇ ಆಯ್ತು
ಹರಿವು
ದಿಕ್ಕು ಬದಲಿಸಿದಂತೆ

ನನ್ನ ಬದುಕ
ದಿಕ್ಕೇ-ಬದಲಾಗಿ ಹೋಯ್ತು
ನೆರೆದ
ಆಪ್ತ ನೆನಪ ಸಂತೆ

ಇಂದೂ ನಾನಿರುವೆ
ಇದ್ದೂ ಇರದ ನೆರಳಂತೆ
ಸ್ಮೃತಿಯಲಿ
ಸಂಗತ ಭೂತದ
ಪಳೆಯುಳಿಕೆಯಾಗಿ

ಮುಂದೂ ನೀನಿರುವೆ
ಮಾಯಲಾರದ ಗಾಯದಂತೆ
ವಿಸ್ಮೃತಿಯಲಿ
ಅಸಂಗತ ಭವಿಷ್ಯದ
ಕನವರಿಕೆಯಾಗಿ…ನೆನವರಿಕೆಯಾಗಿ