Archive for ಮೇ 16, 2008

ಮೊನ್ನೆ ಪತ್ರಿಕೆಯಲ್ಲಿ ಒಂದು ಸುದ್ದಿ ಇತ್ತು. ಯಾರೋ ಕಿಡಿಗೇಡಿಗಳು ರಾಜ್ ಕುಮಾರ್ ಪ್ರತಿಮೆಯನ್ನು ಭಗ್ನಗೊಳಿಸೋಕೆ ಯತ್ನಿಸಿದರು ಅಂತ. ಈ ಕೃತ್ಯದಿಂದ ಅಸಲು ಯಾರಿಗೆ ಏನು ಲಾಭ ಸಿಕ್ಕಿತೋ ಗೊತ್ತಿಲ್ಲ. ಯಾವುದೋ ಅನಾರೋಗ್ಯಕರ ಮನಸ್ಸಿನ ವಿಕೃತಾನಂದಕ್ಕಾಗೇ ನಡೆಸುವ ಇಂತಹ ಕ್ಷುಲ್ಲಕ ಕೆಲಸಗಳಿಂದ ರಾಜ್ ಕುಮಾರ್ ಅವರಂತಹ ಮಹಾನ್ ಚೇತನಕ್ಕೆ , ಅವರ ವ್ಯಕ್ತಿತ್ವದ ಘನತೆಗೆ ಮಸಿಬಳಿಯಲೆತ್ನಿಸುತ್ತೇವೆ ಅನ್ನುವ ಅವರ ಬಾಲಿಶ ತರ್ಕಕ್ಕೆ ಪಕ್ಕೆ ಹಿಡಿದು ನಗುವಂತಾಗುತ್ತದೆ.

 

ಕನ್ನಡದ ಪಾಲಿಗೆ ಡಾ| ರಾಜ್ ಒಂದು ಚೈತನ್ಯದ ಚಿಲುಮೆಯಂತಿದ್ದರು. ಅಪರೂಪದ ಶಕ್ತಿಯಾಗಿದ್ರು. ರಾಜಣ್ಣ, ಅಣ್ಣಾವ್ರು ಎಂದೆಲ್ಲಾ ಅಭಿಮಾನಿಗಳ ಗೌರವಾದರ ಪ್ರೀತಿ ಸಂಪಾದಿಸಿದ ರಾಜ್ ಕುಮಾರ್ ಭಾರತೀಯ ಚಿತ್ರರಂಗ ಕಂಡ ಬಹು ಅಪರೂಪದ ಪ್ರತಿಭೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಅಭಿನಯ , ಹಾಡುಗಳು ಅವರಿಗೆ ಎಷ್ಟು ಅಭಿಮಾನಿಗಳನ್ನು ತಂದು ಕೊಟ್ಟಿದೆಯೋ ಅದಕ್ಕಿಂತ ಒಂದು ಕೈ ಮೇಲು ಅವರ ವಿನಯ, ಸರಳತೆ ಮತ್ತು ಅವರ ಮಗುವಿನಂತಹ ಮುಗ್ಧತೆಯಿಂದ ಅವರ ಅಭಿಮಾನಿಗಳಾದವರ ಸಂಖ್ಯೆ. ಕನ್ನಡ ಜನತೆಯ ಪ್ರೀತಿ, ವಿಶ್ವಾಸಗಳು ಅದಕ್ಕಾಗಿಯೇ ಅವರನ್ನು ಆ ಎತ್ತರದ ಸ್ಥಾನದಲ್ಲಿರಿಸಿದೆ. ನಮ್ಮಿಂದ ಮರೆಯಾಗಿ ಹೋದರೂ ಸದಾ ಜನಮಾನಸದಲ್ಲಿ ರಾಜ್ ನೆನಪಾಗಿ ಬಹುಕಾಲ ಕಾಡಲಿದ್ದಾರೆ ; ಕಾಡುತ್ತಿದ್ದಾರೆ. ಅವರಲ್ಲಿದ್ದ ಶೃದ್ಧೆ, ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ನಿಷ್ಪಕ್ಷಪಾತ ನಡೆ-ನುಡಿ, ಸಮಯ ಪಾಲನೆ ಕುರಿತು ಅವರಿಗಿದ್ದ ಕಟ್ಟುನಿಟ್ಟು, ಪಾತ್ರದಲ್ಲಿ ತಲ್ಲೀನವಾಗಿ ಪಾತ್ರವೇ ತಾವಾಗುತ್ತಿದ್ದ ಪರಿ, ಹಾಡಿನ ಮೂಲಕ ಮನಸ್ಸನ್ನು ತಟ್ಟುತ್ತಿದ್ದ ಪರಿ…. ರಾಜಣ್ಣಗೆ ರಾಜಣ್ಣನೇ ಸಾಟಿ. ಮುತ್ತುರಾಜ್ ಎಂಬ ಚಿಕ್ಕ ಬಾಲಕನು ರಾಜಕುಮಾರ್ ಆಗಿ ಬಂದು ಕನ್ನಡ ಜನರ ಹೃದಯ ಸಿಂಹಾಸನದ ಅನಭಿಷಿಕ್ತ ಸಾರ್ವಭೌಮನಾಗಿ ಬೆಳೆದ ಪರಿಯೇ ಅನನ್ಯ. ಕನ್ನಡದ ಬಗೆಗಿದ್ದ ಅವರ ಪ್ರೀತಿ, ಭಾಷಾ ಶುದ್ಧಿಗೆ ಅವರು ನೀಡುತ್ತಿದ್ದ ಮಹತ್ವ, ಭಾವಾಭಿವ್ಯಕ್ತಿಯಲ್ಲಿ ಅವರ ಮುಖದ ಕದಲಿಕೆಗಳು…ಇವೆಲ್ಲವನ್ನು ಯಾವತ್ತಿಗಾದರೂ ಮರೆಯಲಾದೀತೇ? ಇಂತಹ ಅನರ್ಘ್ಯ ರತ್ನ ನಮ್ಮ ಕಾಲದಲ್ಲಿ ನಮಗೆ ಸಿಕ್ಕಿದ್ದೇ ನಮ್ಮ ಅದೃಷ್ಟ. ಇಷ್ಟೆಲ್ಲಾ ಹೇಳಿದರೂ ಅವರ ಮೇರು ಸದೃಶ ವ್ಯಕ್ತಿತ್ವದ ಒಂದು ಕಣವನ್ನಷ್ಟೇ ಹೇಳಿದಂತಾಗುತ್ತದೆ.

 

ಇಂತಹ ವ್ಯಕ್ತಿತ್ವವನ್ನು ಪ್ರತಿಮೆಯೊಂದನ್ನು ಭಗ್ನಗೊಳಿಸುವ ಮೂಲಕ ಅವಮಾನಿಸಲೆತ್ನಿಸುವವರು ಯಾವ ಸೀಮೆಯ ಮೂರ್ಖರೋ ಅರ್ಥವಾಗುತ್ತಿಲ್ಲ. ಈ ರೀತಿಯ ಕ್ರಿಮಿಗಳೇ ಇಂದು ಭಾಷೆ, ಜಾತಿಯ ಮೂಲಕ ಜನರನ್ನು ಒಡೆಯಲು ಯತ್ನಿಸುತ್ತಿರುವುದು. ರಾಜಣ್ಣನ ವ್ಯಕ್ತಿತ್ವದ ಪರಿಧಿ ಇಂತಹ ಎಲ್ಲಾ ಗಡಿಗಳ ಪರಿಧಿಯನ್ನು ಮೀರಿ ಬೆಳೆದಿದೆ. ಆ ಮಹತ್ತನ್ನು ಅವಮಾನಿಸಿದರೆ ನಮ್ಮನ್ನು ನಾವೇ ಅವಮಾನಿಸಿಕೊಂಡಂತೆ ಅನ್ನುವುದು ಇವರಿಗ್ಯಾಕೆ ಅರ್ಥವಾಗೋಲ್ಲವೋ? 

ಇಂಥಾ ನೂರಲ್ಲ ಸಾವಿರ ಪ್ರಯತ್ನ ಮಾಡಿದರೂ ರಾಜ್ ಘನತೆಯ ಕೂದಲು ಕೊಂಕಿಸಲೂ ಇವರಿಗಾಗದು. ಇದಕ್ಕೆ ಪ್ರತಿಕ್ರಿಯೆ ನೀಡುವುದು , ಪ್ರತಿಭಟನೆ ಮಾಡುವುದು ಕೂಡಾ ಇಂತಹ ಅವಿವೇಕಿಗಳಿಗೆ ಮತ್ತೆ ಮತ್ತೆ ಈ ರೀತಿಯ ಕೃತ್ಯಕ್ಕೆ ಪ್ರಚೋದಿಸಬಹುದು. ರಾಜ್ ಎಂಬ ಚೈತನ್ಯದ ನವಿರಾದ ನೆನಪುಗಳು ನಮ್ಮೆಲ್ಲರ ಮನದಲ್ಲಿ ಪುತ್ಠಳಿಯಾಗಿ ಭದ್ರವಾಗಿ ನೆಲೆಯೂರಿರುವಾಗ, ಕಲ್ಲು ಪ್ರತಿಮೆಗೆ ಹಾನಿ ಮಾಡಿ ಅವರಿಗೆ ವಿಕೃತಾನಂದ ಸಿಗೋದಾದ್ರೆ ಹಾಗೇ ಮಾಡಿಕೊಂಡು ಹಾಳಾಗಿಹೋಗಲಿ ಬಿಡಿ. ನಮ್ಮ ಮನಸ್ಸಿನಲ್ಲಿನ ರಾಜ್ ಪ್ರತಿಮೆ … ಅಯ್ಯೋ..ಹುಚ್ಚಪ್ಪಾ.. ನಾನು ಅಲ್ಲಿಲ್ಲ ಕಣೋ.. ಇಲ್ಲಿದಿನಿ.. ಅಭಿಮಾನಿ ದೇವರುಗಳ ಹೃದಯಸಿಂಹಾಸನದಲ್ಲಿ ನೀವೆಂದೂ ಹಾನಿ ಮಾಡದಷ್ಟು ಸುರಕ್ಷಿತವಾಗಿ.. ಎಂದು ಸದಾ ನಗುತ್ತಿರಲಿ.